ಆಡಳಿತಾತ್ಮಕವಾಗಿ ಬೆಂಗಳೂರು ಕರ್ನಾಟಕದ ರಾಜ್ಯದ ರಾಜಧಾನಿಯಾದರೆ, ಇನ್ನು ಅದೇ ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಇಡೀ ದೇಶಕ್ಕೆ ರಾಜಧಾನಿ ಎನ್ನುವ ಕಾರಣದಿಂದಲೇ ಬೆಂಗಳೂರನ್ನು ಭಾರತದ ಸಿಲಿಕಾನ್ ಸಿಟಿ ಎಂದೇ ಕರೆಯಲಾಗುತ್ತದೆ. ಹೀಗೆ ಬೆಂಗಳೂರು ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳಲು ಬೆಂಗಳೂರಿನಲ್ಲಿರುವ ನೂರಾರು ಇಂಜೀನಿಯರಿಂಗ್ ಕಾಲೇಜುಗಳು ಮತ್ತು ಸಾವಿರಾರು ಸ್ಟಾರ್ಟಪ್ಸ್ ಮತ್ತು ಲಕ್ಷಾಂತರ ಕಂಪನಿಗಳು ಕಾರಣವಾದರೇ, ಇದರ ಜೊತೆ, ಬೆಂಗಳೂರಿನ ಅತ್ಯಂತ ಪುರಾತನ ಬಡಾವಣೆಯಾದ ಕೋರಮಂಗಲವೂ (ಈ ಲಿಂಕ್ ಮೂಲಕ ಕೋರಮಂಗಲದ ಇತಿಹಾಸ ತಿಳಿಯಿರಿ) ಸಹಭಾಗಿಯಾಗಿದ್ದು, ಅಂತಹ ಕೋರಮಂಗಲದಲ್ಲಿಯೇ ಇಂತಹ ಟೆಕ್ಕಿಗಳ ಮನೋಭಿಲಾಷೆಯನ್ನು ಈಡೇರಿಸುವ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಅರ್ಥಾತ್ ಟೆಕ್ಕಿ ಗಣೇಶನ ದೇವಾಲಯದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
90ರ ದಶಕದಲ್ಲಿ ಭಾರತ ಜಾಗತೀಕರಣಕ್ಕೆ ತನ್ನನ್ನು ತಾನು ತೆರೆದುಕೊಂಡ ನಂತರ ಬೆಂಗಳೂರಿನಲ್ಲಿ ಐಟಿ ಉದ್ಯಮ ಅತ್ಯಂತ ವೇಗವಾಗಿ ಬೆಳೆದ ಕಾರಣ, ಬೆಂಗಳೂರು ಐಟಿ ರಾಜಧಾನಿಯಾಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಬಹುತೇಕರು ಐದಂಕಿಯ ಸಂಬಳ ಪಡೆದು ಅದನ್ನು ಹೇಗೆ ಖರ್ಚು ಮಾಡುವುದು ಎಂದು ಯೋಚಿಸುತ್ತಿದ್ದವರಿಗೆ ಆವರ ವಾರಾಂತ್ಯಕ್ಕೆ ಅನುಕೂಲವಾಗುವಂತೆ, ನಗರಾದ್ಯಂತ ನಾಯಿ ಕೊಡೆಗಳಂತೆ ವಿವಿಧ ಕೆಫೆಗಳು, ತರತರಹದ ಪಬ್‌ಗಳು, ಹೋಟೆಲ್ಲುಗಳು ಆರಂಭವಾದರೆ ನಗರದ ಸುತ್ತಮುತ್ತಲೂ ರೆಸಾರ್ಟುಗಳು ಆರಂಭವಾದವು. ಇವೆಲ್ಲದರ ಮಧ್ಯೆ ಗೋಕುಲಾಷ್ಠಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ? ಎನ್ನುವಂತೆ ಈ ಐಟಿ ಜನರಿಗೆ ಪ್ರಿಯವಾದ ಗಣೇಶನ ದೇವಸ್ಥಾನವೊಂದು ಬೆಂಗಳೂರಿನ ಕೋರಮಂಗಲದ ಕೆ.ಹೆಚ್.ಬಿ. ಕಾಲೋನಿ 5ನೇ ಬ್ಲಾಕ್ ನಲ್ಲಿ 1979ರಲ್ಲಿ ಅಂದಿನ ಸ್ಥಳೀಯ ಶಾಸಕ ಕೆ.ಆರ್.ಎಸ್. ನಾಯ್ಡು ಮತ್ತು ಶ್ರೀ ಗಣಪತಿ ಸೇವಾ ಸಮಿತಿಯಿಂದ 100×100 ಚದರ ಅಡಿ ಜಾಗದಲ್ಲಿ ಸ್ಥಾಪನೆಗೊಂಡ ಶ್ರೀ ಪ್ರಸನ್ನ ಗಣಪತಿ ಸ್ವಾಮಿ ದೇವಾಲಯವಿದ್ದು, ಈ ದೇವಾಲಯದ ಆವರಣದಲ್ಲಿ ಶ್ರೀ ಪ್ರಸನ್ನ ಮಹೇಶ್ವರ, ಶ್ರೀ ಪ್ರಸನ್ನ ಪಾರ್ವತಿ ದೇವಿ, ಶ್ರೀ ಪ್ರಸನ್ನ ಸುಬ್ರಹ್ಮಣ್ಯ, ಶ್ರೀ ಚಂಡಿಕೇಶ್ವರ ಸ್ವಾಮಿ ಹಾಗೂ ನವಗ್ರಹ ಗುಡಿಗಳಿದ್ದು, ಪ್ರತೀ ತಿಂಗಳ ಸಂಕಷ್ಠಹರ ಚತುರ್ಥಿ, ಪೌರ್ಣಿಮೆಯ ಸತ್ಯನಾರಾಯಣ ಪೂಜೆ ಮತ್ತು ವರ್ಷಕ್ಕೊಮ್ಮೆ ಅತ್ಯಂತ ವೈಭವೋಪೇತವಾಗಿ ನಡೆಸಲಾಗುವ ಶ್ರೀ ಗಣೇಶೋತ್ಸವ, ಶಿವರಾತ್ರಿ ಉತ್ಸವ ಮತ್ತು ಶರನ್ನವರಾತ್ರಿ ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಅಲ್ಲಿಗೆ ಬರುವುದು ಬಹಳ ವಿಶೇಷವಾಗಿದೆ.
ಇವಿಷ್ಟೇ ಆಗಿದ್ದಲ್ಲಿ ಇದೂ ಸಹಾ ನಗರದ ಮತ್ತೊಂದು ದೇವಾಲಯವಾಗಿರುತ್ತಿತ್ತು. ಆದರೆ ಕುತೂಹಲಕಾರಿ ವಿಷಯವೇನೆಂದರೆ, ಇಲ್ಲಿಗೆ ಬರುವ ಬರುವ ಭಕ್ತಾದಿಗಳಲ್ಲಿ ಹೆಚ್ಚಿನವರು ಸದಾ ಕಾಲವೂ ಊಟ ತಿಂಡಿಯ ಪರಿವಿಲ್ಲದೇ ಗಂಟೆ ಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ತಂತ್ರಾಶವನ್ನು ರಚಿಸುವ ಸಾಫ್ಟ್ವೇರ್ ಕಂಪನಿಗಳ ವೃತ್ತಿಪರರ ಟಿಕ್ಕಿಗಳಾಗಿರುವುದು ವಿಶೇಷವೆನಿಸುತ್ತದೆ. ಸಾಮಾನ್ಯವಾಗಿ ಸಾಫ್ಟ್‌ವೇರ್ ಕಂಪನಿಯ ಟೆಕ್ಕಿಗಳು ತಮ್ಮ ವೃತ್ತಿಜೀವನದಲ್ಲಿ ಪ್ರತಿವರ್ಷವೂ ನಡೆಯುವ ಮೌಲ್ಯಮಾಪನಗಳು ಮತ್ತು ಬಡ್ತಿಗಳು, ಇಲ್ಲವೇ ವಿದೇಶೀ ಅವಕಾಶಗಳು ತಮ್ಮ ಇಚ್ಚೆಯಂತೆಯೇ ನಡೆಯಲಿ ಎಂದು ಈ ದೇವರಿಗೆ ಹರಕೆ ಹೊತ್ತು ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ. ಅದೇ ರೀತಿ ವಿಶೇಷವಾಗಿ ಆಗ ತಾನೇ ಇಂಜಿನೀಯರಿಂಗ್ ಮುಗಿಸಿ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಹುಡುಕುತ್ತಿರುವ ಹೊಸಾ ಉದ್ಯೋಗಿಗಳಷ್ಟೇ ಅಲ್ಲದೇ, ಈಗಾಗಲೇ ಕೆಲಸ ಮಾಡುತ್ತಿರುವ ಕಂಪನಿಯಿಂದ ಮತ್ತೊಂದು ಹೊಸ ಕೆಲಸಗಳನ್ನು ಅರಸುತ್ತಿರುವ ಉದ್ಯೋಗಿಗಳು ಸಹಾ ದೈವಿಕ ಕೃಪೆಗಾಗಿ ಈ ದೇವಾಲಯದ ಗಣೇಶನಲ್ಲಿ ಭಕ್ತಿಯಿಂದ ಕೇಳಿಕೊಂಡಲ್ಲಿ ಅವೆಲ್ಲವೂ ನೆರವೇರುತ್ತದೆ ಎಂಬ ನಂಬಿಕೆಯು ಇರುವ ಕಾರಣ ಭಗವಂತನ ಆಶೀರ್ವಾದ ಅಗತ್ಯವಿರುವ ಅನೇಕ ಟೆಕ್ಕಿಗಳು ವಾರಾಂತ್ಯದಲ್ಲಿ ಇಲ್ಲಿಗೆ ಬರುತ್ತಾರೆ.
ಆರಂಭದಲ್ಲಿ ಕೋರಮಂಗಲದ ಸಾಫ್ಟ್‌ವೇರ್ ವೃತ್ತಿಪರರು ಈ ದೇವಾಲಯಕ್ಕೆ ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡ ನಂತರ ಕ್ರಮೇಣ ಅವರ ಅನುಭವಗಳು ಒಬ್ಬರಿಂದ ಮತ್ತೊಬ್ಬರಿಗೆ ಬಾಯಿ ಮಾತಿನಿಂದ ಹರಡಿ ಕೋರಮಂಗಲದ ಅಕ್ಕ ಪಕ್ಕದ ಪ್ರದೇಶಗಳಾದ ಸರ್ಜಾಪುರ, ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಎಚ್‌ಎಸ್‌ಆರ್ ಲೇಔಟ್‌ನ ಟೆಕ್ಕಿಗಳು ತಮ್ಮ ಮೌಲ್ಯಮಾಪನದ ಋತುವಿನಲ್ಲಿ, ಉದ್ಯೋಗದಲ್ಲಿ ಹೆಚ್ಚಿನ ಭಡ್ತಿ ಪಡೆಯವ ಸಲುವಾಗಿಯೂ ಇಲ್ಲವೇ ಹೆಚ್ಚಿನ ಬೋನಸ್ ಅಥಾವ ಸಂಬಳವನ್ನು ಪಡೆಯಲು ಈ ದೇವರಲ್ಲಿ ಮೊರೆ ಹೋಗಿ ಅವರ ಇಷ್ಟಾರ್ಥಗಳು ಈಡೇರಿದ ನಂತರ, ಬೆಂಗಳೂರಿನ ವಿವಿಧ ಬಡಾವಣೆಯ ಟೆಕ್ಕಿಗಳೂ ಸಹಾ ಈ ದೇವಸ್ಥಾನಕ್ಕೆ ಭೇಟಿ ನೀಡಿ ವಿವಿಧ ಸೇವೆಗಳು ಮತ್ತು ವ್ರತಗಳನ್ನು ಆಚರಿಸುವ ಮೂಲಕ ಈ ಪ್ರಸನ್ನ ಗಣಪತಿ, ಟೆಕ್ಕಿ ಗಣಪತಿ ಎಂಬ ಕೀರ್ತಿಗೆ ಪಾತ್ರವಾಯಿತು ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ.
ದೇವಾಲಯದ ಆಡಳಿತ ಮಂಡಳಿಯ ಸದಸ್ಯರೊಬ್ಬರು ಹೇಳುವ ಪ್ರಕಾರ, ಅನೇಕ ಟೆಕ್ಕಿಗಳು ತಮ್ಮ ಆಸೆ ಈಡೇರಿದ ನಂತರ ಅವರ ಇಡೀ ತಿಂಗಳ ಸಂಬಳವನ್ನು ಹುಂಡಿಗೆ ಹಾಕಿದರೆ, ಇನ್ನೂ ಕೆಲವರು ತಮಗೆ ಹೆಚ್ಚಿನ ರೀತಿಯಲ್ಲಿ ಗಳಿಸಿದ ಸಂಬಳ/ಬೋನಸ್ಸಿಗೆ % ಲೆಕ್ಕದಲ್ಲಿ ದೇವಾಲಯದ ವಿವಿಧ ಸೇವೆಗಳಿಗೆ ಕೊಡುತ್ತಾರಂತೆ. ಅದೇ ರೀತಿಯಲ್ಲಿ ಈ ಸ್ವಾಮಿಯ ಕೃಪಾಶೀರ್ವಾದದಿಂದ ಅಮೇರಿಕ, ಇಂಗ್ಲೇಂಡ್ ಅಲ್ಲದೇ ವಿವಿಧ ವಿದೇಶಗಳಿಗೆ ಹೋದ ಅನೇಕ ಟೆಕ್ಕಿಗಳು ಇಂದಿಗೂ ಸಹಾ ಪ್ರತೀ ತಿಂಗಳು ನಿಯಮಿತವಾಗಿ ಈ ದೇವಾಲಯಕ್ಕೆ ದೇಣಿಗೆ ಕಳುಹಿಸುತ್ತಾರಂತೆ.
ಈ ದೇವಾಲಯಕ್ಕೆ ನಿಯಮಿತವಾಗಿ ಬರುವ ಭಕ್ತಾದಿಯೊಬ್ಬರ ಪ್ರಕಾರ, ಈಶಾನ್ಯಕ್ಕೆ ಮುಖ ಮಾಡಿರುವ ಈ ಗಣೇಶ ಬಹಳ ಶಕ್ತಿಶಾಲಿಯಾಗಿದ್ದು, ವೃತ್ತಿಪರ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಆಶಯಗಳನ್ನು ಭಕ್ತಿಯಿಂದ ಕೋರಿಕೊಂಡ ಕೆಲವೇ ದಿನಗಳಲ್ಲಿ ಅವೆಲ್ಲವೂ ಈಡೇರುತ್ತದೆಯಂತೆ. ಅವರೇ ಹೇಳಿದಂತೆ ಸುಮಾರು ಏಳು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದರೂ ಅವರ ಕೆಲಸಕ್ಕೆ ತಕ್ಕಂತೆ ಬಡ್ತಿ ಸಿಗದೆ ಹತಾಶರಾಗಿದ್ದಂತಹ ಸಂಧರ್ಭದಲ್ಲಿ, ಅವರ ಸ್ನೇಹಿತರೊಬ್ಬರ ಮೂಲಕ ಈ ದೇವಸ್ಥಾನದ ಬಗ್ಗೆ ತಿಳಿದು ಇಲ್ಲಿಗೆ ಭೇಟಿ ನೀಡಿ, ಭಕ್ತಿಯಿಂದ ಈ ಗಣೇಶನನ್ನು ಪ್ರಾರ್ಥಿಸಿ, ಈ ಬಾರಿ ತನಗೆ ಭಡ್ತಿ ದೊರೆತಲ್ಲಿ, ತಿಂಗಳು ತಿಂಗಳು ಸಹಾ ನಾನು ಇಂತಿಷ್ಟು ಹಣವನ್ನು ದೇವಾಲಯಕ್ಕೆ ದೇಣಿಗೆ ನೀಡುತ್ತೇನೆ ಎಂದು ಹರಕೆಯನ್ನು ಹೊತ್ತುಕೊಂಡು ಸುಮಾರು ಎರಡು ತಿಂಗಳ ಕಾಲ ವಾರಕ್ಕೆ ಎರಡು ಬಾರಿ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಂತೆಯೇ, ಗಣೇಶನ ಆಶೀರ್ವಾದದಿಂದ ಅವರಿಗೆ ಭಡ್ತಿ ದೊರೆತ ಕಾರಣ ಅವರು ಹರಕೆ ಹೊತ್ತುಕೊಂಡಂತೆ, ಪ್ರತೀ ತಿಂಗಳೂ ಅವರ ಸಂಬಳದ ಶೇ 10ರಷ್ಟನ್ನು ದೇವಾಲಯಕ್ಕೆ ನಿಯಮಿತವಾಗಿ ದೇಣಿಗೆಯಾಗಿ ನೀಡುತ್ತಿದ್ದಾರಂತೆ.
ಹೀಗೆ ಒಬ್ಬರಿಂದ ಒಬ್ಬರಿಗೆ ಬಾಯಿಯಿಂದ ಬಾಯಿಗೆ ಈ ದೇವಾಲಯ ಕೀರ್ತಿ ಹರಡುತ್ತಿರುವ ಕಾರಣ, ವರ್ಷದಿಂದ ವರ್ಷಕ್ಕೆ ಈ ದೇವಾಲಯಕ್ಕೆ ಬೇಡಿಕೊಂಡು ಬರುವ ಟೆಕ್ಕಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವುದಲ್ಲದೇ, ಸಾಮಾನ್ಯವಾಗಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸುಮಾರು 250 ಸಾಮಾನ್ಯ ಭಕ್ತಾದಿಗಳು ಇಲ್ಲಿಗೆ ಬಂದರೆ, ವಾರಾಂತ್ಯದಲ್ಲಿ ಈ ದೇವಾಲಯಕ್ಕೆ ಬರುವ ಟೆಕ್ಕಿಗಳ ಸಂಖ್ಯೆ ಸುಮಾರು 1,000ಕ್ಕೂ ಅಧಿಕವಾಗಿರುತ್ತದೆಯಂತೆ. ಇನ್ನು ಹಬ್ಬ ಹರಿದಿನಗಳು ಮತ್ತು ವಿಶೇಷ ಸಂಧರ್ಭದಲ್ಲಿ ಅಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ 3-5000ರ ಆಸು ಪಾಸಿನಲ್ಲಿ ಇರುತ್ತದೆಯಂತೆ. ಸಾಮಾನ್ಯವಾಗಿ ಸಾಫ್ಟ್ವೇರ್ ಕಂಪನಿಗಳಲ್ಲಿ ಮಾರ್ಚ್, ಏಪ್ರಿಲ್ ಮತ್ತು ಅಕ್ಟೋಬರ್‌ನಲ್ಲಿ ನಡೆಯುವ ವಾರ್ಷಿಕ ಮತ್ತು ಅರ್ಧ-ವಾರ್ಷಿಕ ಮೌಲ್ಯಮಾಪನದ ಸಂಧರ್ಭದಲ್ಲಿ ದೇವಾಲಯಕ್ಕೆ ಗರಿಷ್ಠ ಸಂಖ್ಯೆಯ ಟೆಕ್ಕಿಗಳು ಬರುತ್ತಾರಂತೆ.
ಟೆಕ್ಕಿ ಗಣಪತಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ! ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಕುಟುಂಬ ಸಮೇತ ಕೋರಮಂಗಲದ ಶ್ರೀ ಪ್ರಸನ್ನ ಗಣಪತಿ ಅರ್ಥಾರ್ ಟಿಕ್ಕಿ ಗಣಪತಿಯ ದೇವಾಲಯದ ಸಂಕೀರ್ಣಕ್ಕೆ ಭೇಟಿ ನೀಡಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ಸೃಷ್ಟ್ಕಿಕರ್ತ ಉಮಾಸುತ