ಬಿಟ್ಟಿ ಭಾಗ್ಯಗಳಿಗೆ ಶ್ರೀ ಕೃಷ್ಣಾರ್ಜುನರ ಉತ್ತರ

ಇಡೀ ದೇಶಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ವಿಷಯವೇಂದರೆ ಅದುವೇ ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ತೆವಲಿಗಾಗಿ ಮತದಾರರನ್ನು ಸೆಳೆಯುವ ಸಲುವಾಗಿ ನೀಡುತ್ತಿರುವ ಆಮೀಷಗಳು. ಆರಂಭದಲ್ಲಿ ತಮಿಳು ನಾಡಿಗಷ್ಟೇ ಸೀಮಿತವಾಗಿ ಈ ಆಮೀಶಗಳಿಗೆ ಅತ್ಯಂತ ಹೆಚ್ಚಿನ ಪ್ರಖ್ಯಾತಿ ಕೊಟ್ಟಿದ್ದು ಮಾತ್ರಾ ಭ್ರಷ್ಟಾಚಾರ ನಿಗ್ರಹ ಮಾಡ್ತೀವೀ ಅಂತಾನೇ ಮಾಡಬಾರದ ಕೆಲಸ ಮಾಡಿ ಸದ್ಯದಲ್ಲಿ ತಿಹಾರ್ ಜೈಲಿನಲ್ಲಿ ಮುದ್ದೇ ಮುರಿಯುತ್ತಿರುವ ದೆಹಲಿಯ ಆಮ್ ಆದ್ಮೀ ಪಕ್ಷದ ಕೇಜ್ರೀವಾಲ್ ಆದರೆ, ಹೇಗಾದರೂ ಅಧಿಕಾರಕ್ಕೆ ಬರಲೇ ಬೇಕು ಎಂದು ಕರ್ನಾಟಕ, ತೆಲಂಗಾಣವಲ್ಲದೇ, ಖಟಾ ಖಟ್ ಎಂದು ದೇಶಾದ್ಯಂತ ಬಿಟ್ಟಿ ಭಾಗ್ಯಗಳನ್ನು ಹಂಚಲು ಮುಂದಾಗಿರುವುದು ಕಾಂಗ್ರೇಸ್ ಪಕ್ಷ. ರಾಜ್ಮ ಅಥವಾ ದೇಶದ ಆರ್ಥಿಕ ಪರಿಸ್ಥಿತಿ ಏನಾದರೂ ಆಗ್ಲೀ ನಾವು ಮಾತ್ರಾ ಅಧಿಕಾರಕ್ಕೆ ಬರಲೇ ಬೇಕು ಎಂದು ವಿವಿಧ ಬಿಟ್ಟಿ ಭಾಗ್ಯಗಳನ್ನು ರಾಜಕೀಯ ಪಕ್ಷಗಳು ತಾಮುಂದು ನಾಮುಂದು ಎಂದು ಘೋಷಿಸುತ್ತಿರುವ ಸಂಧರ್ಭದಲ್ಲಿ ಮಹಾಭಾರತದಲ್ಲಿ ಕೃಷ್ಣಾರ್ಜುನರ ನದುವೆ ನಡೆದ ಈ ಪ್ರಸಂಗದ ನೆನಪಾಗಿ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಬಯಕೆಯಾಗಿದೆ.

ಆದೊಮ್ಮೆ ಶ್ರೀ ಕೃಷ್ಣಾರ್ಜುನರು ಮಾರುವೇಷದಲ್ಲಿ ಲೋಕ ಸಂಚಾರ ಮಾಡುತ್ತಿದ್ದಾಗ ರಸ್ತೆಯಲ್ಲಿ ಭಿಕ್ಷುಕನೊಬ್ಬನನ್ನು ನೋಡಿದಾಗ, ಅದೇಕೋ ಏನೋ ಅರ್ಜುನನಿಗೆ ಆ ಭಿಕ್ಷುಕನ ಬಗ್ಗೆ ಕರುಣೆ ಹುಟ್ಟಿ, ಅತನ ಬಡತನವನ್ನು ನಿವಾರಿಸುವ ಸಲುವಾಗಿ ಚಿನ್ನದ ನಾಣ್ಯಗಳನ್ನು ತುಂಬಿದ ಒಂದು ಚೀಲವನ್ನು ಕೊಟ್ಟು ಈ ಹಣದಿಂದ ನಿನ್ನೆಲ್ಲಾ ಬಡತನ ನಿವಾರಣೆಯಾಗಿ ನಿನ್ನ ಬದುಕು ಹಸನಾಗಲಿ. ಇನ್ನೆಂದೂ ಭಿಕ್ಷಾಟನೆ ಮಾಡಬೇಡ ಎಂದು ಎಚ್ಚರಿಸುತ್ತಾನೆ,

ಅಚಾನಕ್ಕಾಗಿ ಈ ಪರಿಯ ಹಣ ಸಿಕ್ಕಿದ್ದರಿಂದ ಖುಷಿಯಾದ ಆ ಬಡವ, ಇದರಿಂದ ಹೇಗೇಗೇ ತನ್ನ ಜೀವನವನ್ನು ರೂಪಿಸಿಕೊಳ್ಳಬಹುದು ಎಂಬ ಕನಸನ್ನು ಕಾಣುತ್ತಲೇ ಮನೆಯತ್ತ ಹೋಗುತ್ತಿದ್ದ ಸಂಧರ್ಭದಲ್ಲೇ ಮತ್ತೊಬ್ಬ ಭಿಕ್ಷುಕ ಅವನ ಬಳಿ ಕೈ ಚಾಚಿದಾಗ, ಕೈಯ್ಯಲ್ಲಿ ಚಿನ್ನದ ಚೀಲವನ್ನು ಇಟ್ಟುಕೊಂಡಿದ್ದರೂ, ಅಹಂಕಾರದಿಂದ ಒಂದು ಬಿಡಿಗಾಸನ್ನೂ ಕೊಡದೇ ನಿರ್ಲಕ್ಷ್ಯದಿಂದ ಮುಂದೆ ಹೋಗುತ್ತಾನೆ,

ಹಾಗೆ ದುರಹಂಕಾರದಿಂದ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ಕಳ್ಳನೊಬ್ಬನು ಭಿಕ್ಷುಕ ಕೈಯ್ಯಿಂದ ಚಿನ್ನದ ಚೀಲವನ್ನು ಕಸಿದುಕೊಂಡು ಓದಿ ಹೋಗುತ್ತಾನೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಎಂದು ತನ್ನ ಹಣೆಬರಹವನ್ನು ತಾನೇ ಶಪಿಸಿಕೊಳ್ಳುತ್ತಾ ಮನೆಗೆ ಹೋಗಿ ಮತ್ತೆ ಮಾಋಅನೇ ದಿನ ಎಂದಿನಂತೆ ಅದೇ ಜಾಗದಲ್ಲಿಯೇ ಭಿಕ್ಷೆ ಬೇಡಲಾರಂಭಿಸುತ್ತಾನೆ.

ಹಿಂದಿನ ದಿನ ಅಷ್ಟೊಂದು ಹಣವನ್ನು ಕೊಟ್ಟರೂ, ಮತ್ತೆ ಭಿಕ್ಷೆಯನ್ನು ಬೇಡುತ್ತಿರುವ ಆ ಭಿಕ್ಷುಕನನ್ನು ಕಂಡು ತುಸು ಕೋಪದಿಂದಲೇ, ಅರೇ, ಮತ್ತೇಕೆ ಭಿಕ್ಷೆ ಬೇಡುತ್ತಿರುವೇ? ಎಂದು ವಿಚಾರಿಸಿದಾಗ, ಹಿಂದಿನ ದಿನ ನಡೆದದ್ದೆಲ್ಲವನ್ನೂ ತಿಳಿಸಿ ಕಣ್ಣಿರು ಹಾಕುತ್ತಾನೆ. ಆತನ ಕಣ್ಣೀರಿಗೆ ಸೋತ ಅರ್ಜುನನು ಆತನಿಗೊಂದು ಬಹಳ ಅಪರೂಪವಾದ ಅನರ್ಘ್ಯವಾದ ವಜ್ರವೊಂದನ್ನು ಕೊಟ್ಟು ಇದನ್ನು ಮಾರಿ, ಅದರಿಂದ ಬಂದ ಹಣದಲ್ಲಿ ನಿನ್ನ ಜೀವನವನ್ನು ರೂಪಿಸಿಕೋ! ಆದರೇ, ಈ ಬಾರಿ ಜಾಗ್ರತೇ.. ಎಂದು ಎಚ್ಚರಿಸಿ ಕಳುಹಿಸುತ್ತಾನೆ.

ಮತ್ತೊಮ್ಮೆ ತನ್ನ ಅದೃಷ್ಟ ಖುಲಾಯಿಸಿದ್ದನ್ನು ಕಂಡು ಸಂತೋಷದಿಂದ ಆ ವಜ್ರವನ್ನು ಜೋಬಿನಲ್ಲಿ ಭಧ್ರವಾಗಿ ಹಿಡಿದುಕೊಂಡು ಬರುತ್ತಿರುವಾಗ ಮತ್ತೆ ಅದೇ ಭಿಕ್ಷುಕ ಬಂದು ಅಯ್ಯಾ ಏನಾದರೂ ದಾನ ಕೊಡಿ ಎಂದು ಕೇಳಿದಾಗ, ಈ ಸಲವೂ ಆತನ ಮನಸ್ಸು ಕರಗದೇ, ಅಹಂಕಾರಿಂದ ಮನೆಗೆ ಬಂದು ವಜ್ರವನ್ನು ವಿಶೇಷ ದಿನಗಳಲ್ಲಿ ಮಾತ್ರವೇ ಬಳಸುವ ಅಟ್ಟದ ಮೇಲಿದ್ದ ನೀರಿನ ಬಿಂದಿಗೆಯೊಳಗೆ ಬಚ್ಚಿಟ್ಟು ಆರಾಮವಾಗಿ ನಿದ್ದೆ ಮಾಡುತ್ತಾನೆ.

ಮಾರನೆಯ ದಿನ ಹಬ್ಬವಿದ್ದ ಕಾರಣ, ಹಬ್ಬವನ್ನು ಆಚರಿಸಲು ಮನೆಯಲ್ಲಿ ಯಾವ ವಸ್ತುವೂ ಇಲ್ಲದಿದ್ದರೇನಂತೆ, ಮನೆಯನ್ನು ಶುದ್ಧಮಾಡಿ ಭಕ್ತಿಯಿಂದ ದೇವರ ಪೂಜೆ ಮಾಡೋಣ ಎಂದು ನಿರ್ಧರಿಸಿದ ಆ ಭಿಕ್ಷುಕನ ಹೆಂಡತಿ ಅಟ್ಟದ ಮೇಲಿಟ್ಟಿದ್ದ ಬಿಂದಿಗೆಯನ್ನು ತೆಗೆದುಕೊಂಡು ಹತ್ತಿರದ ನದಿಗೆ ಹೋಗಿ ಆ ಬಿಂದಿಗೆಯನ್ನು ನೀರಿನಿಂದ ಶುದ್ಧ ಮಾಡುವ ಸಂಧರ್ಭದಲ್ಲಿ, ಆ ಬಿಂದಿಗೆಯಲ್ಲಿದ್ದ ವಜ್ರವು ಆಕೆಗೆ ಗೊತ್ತಿಲ್ಲದ ಹಾಗೆ ನೀರಿಗೆ ಬಿದ್ದು ಹೊಳೆಯುತ್ತಿರುವ ಆ ವಜ್ರವು ಯಾವುದೋ ಆಹಾರವೆಂದು ಭಾವಿಸಿದ ಮೀನೊಂದು ಅದನ್ನು ನುಂಗುತ್ತದೆ,

ಬೆಳಿಗ್ಗೆ ನಿದ್ದೆಯಿಂದ ಎದ್ದ ಬಡವ ಮನೆಯೆಲ್ಲಾ ಶುಚಿರ್ಭೂತವಾಗಿದ್ದದ್ದನ್ನು ಕಂಡು ಅಚ್ಚರಿಯಿಂದ ಅಟ್ಟದ ಮೇಲಿದ್ದ ಬಿಂದಿಗೆಯನ್ನು ನೋಡಿದಾಗ ಅದು ಕಾಣದೇ ಇದ್ದದ್ದನ್ನು ಕಂಡು ಭಯಗೊಂಡು ಆ ಬಿಂದಿಗೆಯ ಕುರಿತಾಗಿ ತನ್ನ ಹೆಂಡತಿಯೊಂದಿಗೆ ವಿಚಾರಿಸಿದಾಗ, ಅಕೆ ನದಿಗೆ ಹೋಗಿ ನೀರನ್ನು ತಂದು ಮನೆಯೆಲ್ಲವನ್ನೂ ಶುದ್ದೀಕರಿಸಿದ ವಿಚಾರ ತಿಳಿಸಿದಾಗ, ಮತ್ತೆ ದುರದೃಷ್ಟಕ್ಕೆ ಹಳಿದುಕೊಂಡು ಪುನಃ ಎಂದಿನಂತೆ ಅದೇ ಸ್ಥಳದಲ್ಲೇ ಭಿಕ್ಷೆಗೆ ಬರುತ್ತಾನೆ.

ಅಷ್ಟೆಲ್ಲಾ ಸಹಾಯ ಮಾಡಿದರೂ, ಮೂರನೇ ದಿನವೂ ಸಹಾ ಅದೇ ಸ್ಥಳದಲ್ಲಿ ಭಿಕ್ಷೆಯನ್ನು ಬೇಡಲು ನಿಂತಿದ್ದ ಆ ಭಿಕ್ಷುಕನನ್ನು ಕಂಡ ಅರ್ಜುನನು, ಅರೇ ಎಂತಹ ದುರಾಸೆಯ ಮನುಷ್ಯನಯ್ಯಾ ನೀನು? ಎಂದು ಕೇಳಿದ್ದಲ್ಲದೇ, ಹಣೆ ಬರಹಕ್ಕೆ ಹೊಣೆಗಾರರು ಯಾರು? ಎಂದು ಸುಮ್ಮನಾಗಿ, ಅಲ್ಲಾ ಕೃಷ್ಣಾ, ನಾನು ಅಷ್ಟೆಲ್ಲಾ ಆರ್ಥಿಕವಾಗಿ ಆತನಿಗೆ ಸಹಾಯ ಮಾಡಿದರೂ ಆತ ಮತ್ತೆ ಮತ್ತೆ ಭಿಕ್ಷೆ ಬೇಡುತ್ತಿದ್ದಾನೆ. ಆತನಿಗೆ ಜೀವನದಲ್ಲಿ ಸುಖವಾಗಿರಲು ಸಾಧ್ಯವೇ ಇಲ್ಲವೇ? ಎಂದು ಕೇಳುತ್ತಾನೆ.

ಆಗ ಕೃಷ್ಣನು ಅರ್ಜುನನಿಗೆ ಏನನ್ನೂ ಹೇಳದೇ, ಆ ಭಿಕ್ಷುಕನಿಗೆ ಒಂದು ಚಿನ್ನದ ನಾಣ್ಯ ಕೊಡುತ್ತಾನೆ. ಕೃಷ್ಣನ ಈ ಪ್ರಕ್ರಿಯಿಂದ ಅಚ್ಚರಿಗೊಂಡ ಅರ್ಜುನ ತಾನು ಚಿನ್ನದ ನಾಣ್ಯಗಳ ಚೀಲ ಮತ್ತು ಅನರ್ಘ್ಯವಾದ ವಜ್ರವನ್ನು ಕೊಟ್ಟರೂ ಸುಖವಾಗಿರದ ಆತ, ನೀನು ಕೊಟ್ಟ ಒಂದು ಚಿನ್ನದ ನಾಣ್ಯದಿಂದ ಸುಖವಾಗಿರಬಲ್ಲನೇ? ಎಂದು ಪ್ರಶ್ನಿಸುತ್ತಾನೆ.

ಆಗ ಶ್ರೀ ಕೃಷ್ಣನು ಸುಮ್ಮನೇ ಆ ಬಡವನನ್ನು ಹಿಂಬಾಲಿಸಲು ಹೇಳುತ್ತಾನೆ. ಶ್ರೀಕೃಷ್ಣನ ಆಜ್ಞಾಪಾಲಕನಾದ ಅರ್ಜುನನು ಸುಮ್ಮನೇ ಆ ಭಿಕ್ಷುಕನಿಗೆ ತಿಳಿಯದಂತೆ ಹಿಂಬಾಲಿಸುತ್ತಾನೆ, ಈ ಬಾರಿ ಆ ಭಿಕ್ಷುಕನು ದಾರಿಯಲ್ಲಿ ಹೋಗುತ್ತಿದ್ದಾಗ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರನ ಬಲೆಯಲ್ಲಿ ಮೀನೊಂದು ಸಿಕ್ಕಿಕೊಂಡು ಒದ್ದಾಡುತ್ತಿರುವುದನ್ನು ಕಂಡು, ಆತನ ಮನಸ್ಸು ಕರಗಿ, ಹೇಗಿದ್ದರೂ ತನ್ನ ಕೈಯಲ್ಲೊಂದು ಮರುಗಿ, ತನ್ನ ಬಳಿ ಇರುವ ಒಂದು ನಾಣ್ಯದಿಂದ ತನ್ನ ಜೀವನವೇನೂ ಬದಲಾಗದು. ಆದರೆ ಆ ಮೀನನ್ನು ಮೀನುಗಾರನ ಕೈಯಿಂದ ಬಿಡಿಸಿ ಮತ್ತೆ ನೀರಿಗೆ ಬಿಟ್ಟಲ್ಲಿ ಸ್ವಲ್ಪ ಪುಣ್ಯವಾದರೂ ಬರಬಹುದು ಎಂದು ನಿರ್ಧರಿಸಿ, ತನ್ನ ಬಳಿ ಇದ್ದ, ಆ ಒಂದು ಚಿನ್ನದ ನಾಣ್ಯ ಆ ಮೀನುಗಾರನಿಗೆ ಕೊಟ್ಟು ಒದ್ದಾಡುತ್ತಿದ್ದ ಮೀನನ್ನು ಬಿಡಿಸಿಕೊಂಡು ಅದನ್ನೊಂದು ನೀರಿನ ಪಾತ್ರೆಯಲ್ಲಿ ಹಾಕುತ್ತಿದ್ದಂತೆಯೇ ಆ ಮೀನು ತನ್ನ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದ್ದ ವಜ್ರವನ್ನು ಕಕ್ಕಿ ನೀರಿನಲ್ಲಿ ಸಂತೋಷದಿಂದ ನಲಿದಾಡಿತು.

ತಾನು ಕಳೆದುಕೊಂಡಿದ್ದ ವಜ್ರ ತನಗೆ ಈ ರೀತಿಯಾಗಿ ಮತ್ತೆ ಸಿಕ್ಕಿದ್ದರಿಂದ ಸಂತೋಷಗೊಂಡ ಆ ಭಿಕ್ಷುಕ ಜೋರಾಗಿ ಆ ಸಿಕ್ತು ಸಿಕ್ತು ಎಂದು ಜೋರಾಗಿ ಕೂಗುತ್ತಾನೆ. ಅದೇ ಸಮಯಕ್ಕೆ ಅದೇ ದಾರಿಯಲ್ಲಿ ಹೋಗುತ್ತಿದ್ದ ಕಳ್ಳ ಅಯ್ಯೋ ಆ ವ್ಯಕ್ತಿ ತನ್ನ ಗುರುತು ಹಿಡಿಡು ಬಿಟ್ಟನಲ್ಲಾ ಎಂದು ಭಾವಿಸಿ, ಅ ಬಡವನ ಬಳಿ ಬಂದು ತನ್ನಿಂದ ತಪ್ಪಾಗಿದೆ. ದಯವಿಶ್ಟು ಕ್ಷಮಿಸಿ ಎಂದು ಹೇಳುತ್ತಾ, ತನ್ನ ಸೊಂಟದಿಂದ ಆತ ಕದ್ದಿದ್ದ ಚಿನ್ನದ ನಾಣ್ಯ ತುಂಬಿದ ಚೀಲವನ್ನು ಕೊಟ್ಟು ಓಡಿ ಹೋಗುತ್ತಾನೆ.

ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅರ್ಜುನ, ಅರೇ ಕೃಷ್ಣಾ ಏನಪ್ಪಾ! ನಿನ್ನ ಲೀಲೇ? ಸುಖಾ ಸುಮ್ಮನೇ, ಯಾರಿಗೇ ಆದರೂ ಅಳತೆ ಮೀರಿ ಸಂಪತ್ತು ಸಿಕ್ಕಾಗ ಆವರಿಗೆ ಅಹಂಕಾರ ಮತ್ತು ನಿರ್ಲಕ್ಷ್ಯ ಭಾವ ಬಂದಿದ್ದರಿಂದಲೇ, ಆ ಭಿಕ್ಷುಕ ನಾನು ಕೊಟ್ಟಿದ್ದೆಲ್ಲವನ್ನೂ ಕಳೆದುಕೊಂಡ. ಆದರೆ ನೀನು ನೀಡಿದ ಒಂದೇ ಒಂದು ನಾಣ್ಯದಲ್ಲಿ ವಿಲವಿಲನೇ ಒದ್ದಾಡುತ್ತಿದ್ದ ಜೀವವೊಂದನ್ನು ಉಳಿಸಲು ಹೋಗಿ ತಾನು ಕಳೆದು ಕೊಂಡಿದ್ದೆಲ್ಲವನ್ನೂ ಮತ್ತೆ ಪಡೆದುಕೊಂಡ ಎಂದು ಸಂತೋಷ ಪಟ್ಟುಕೊಳ್ಳುತ್ತಾನೆ.

ಕೊಟ್ಟಿದ್ದು ತನಗೆ ಎಂಬುದು ಶತಃಸಿದ್ಧ. ಹಾಗಾಗಿ ಕೊಟ್ಟು ಕೆಟ್ಟಿ ಎಂದು ಭಾವಿಸದೇ, ತಾನು ಕೊಟ್ಟು ಮತ್ತೊಬ್ಬರ ಜೀವನವನ್ನು ನೆಮ್ಮದಿಯನ್ನಾಗಿಸಬಹುದು. ಹಾಗಾಗಿ ಸುಖಾ ಸುಮ್ಮನೇ ಯಾರಿಗೇ ಆಗಲೀ, ಏನನ್ನಾದರೂ ಕೊಟ್ಟಲ್ಲಿ ಅವರ ಜೀವನ ಹಸನಾಗುವುದಿಲ್ಲ. ಬದಲಾಗಿ ಅವರುಗಳು ಸೋಮಾರಿಗಳಾಗುತ್ತಾರೆ. ಹಾಗಾಗಿ ನಾವುಗಳು ಮೀನನ್ನು ಹಿಡಿದು ಕೊಡುವುದನ್ನು ನಿಲ್ಲಿಸಿ, ಅದರ ಬದಲಾಗಿ ನಾವು ಅವರಿಗೆ ಮೀನನ್ನು ಹಿಡಿಯುವುದನ್ನು ಕಲಿಸಿಕೊಟ್ಟಲ್ಲಿ, ಆತ ಸ್ವಾಭಿಮಾನಿಯಾಗಿ ಮತ್ತು ನೆಮ್ಮದಿಯಾಗಿ ಆತನ ಜೀವನ ನಡೆಸಬಲ್ಲರೂ ಅಲ್ವೇ? ಕೈ ಕೆಸರಾದರೆ ಬಾಯಿ ಮೊಸರು. ಜನರು ಕಷ್ಟ ಪಟ್ಟು ದುಡಿದಲ್ಲಿ ದೇಹ ಮತ್ತು ದೇಶ ಎರಡೂ ಉದ್ದಾರ ಆಗುತ್ತದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment