ನಮ್ಮ ಹಿಂದಿನ ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು ಎಂಬ ಮಾತಿದ್ದು, ಹಾಗಾಗಿಯೇ ನಮ್ಮ ಪ್ರಸ್ತುತ ಮತ್ತು ಮುಂದೆ ನೆಮ್ಮದಿಯ ಜೀವನವನ್ನು ನಡೆಸಲು ನಮ್ಮ ಪೂರ್ವಜರ ಇತಿಹಾಸ ಮತ್ತು ಸ್ಥಳ ಪುರಾಣಗಳನ್ನು ತಿಳಿಯುವುದು ಅತ್ಯಂತ ಪ್ರಮುಖವಾಗಿದೆ. ಕರ್ನಾಟಕದ ಕೋಲಾರದ ಕೆಲವು ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳಿವೆ ಎಂಬುದನ್ನು ಅರಿತಿದ್ದ ನಮ್ಮ ಪೂರ್ವಜರು ಕ್ರಿ.ಪೂ 2 ಮತ್ತು 3 ನೇ ಶತಮಾನದಿಂದಲೂ ಸಣ್ಣ ಪುಟ್ಟ ಹೊಂಡಗಳನ್ನು ಅಗೆಯುವ ತಮ್ಮ ಕೈಲಾದ ಮಟ್ಟಿಗಿನ ಚಿನ್ನವನ್ನು ತೆಗೆದುಕೊಳ್ಳುವ ಮೂಲಕ ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆಯನ್ನು ಆರಂಭಿಸಿ ಆ ಪ್ರದೇಶವನ್ನು ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಬಂಗಾರಪೇಟೆ ಎಂದು ಕರೆಯಲಾರಂಭಿಸಿದರು. ಮುಂದೆ ಅಲ್ಲಿಂದ 18ಕಿ.ಮೀ ದೂರದಲ್ಲಿದ್ದ, ಉರಿಗಾಂ ಪೇಟೆ, ಗೋಡಮಾಕನಹಳ್ಳಿ, ಮಾರಿಕುಪ್ಪಂ ಮುಂತಾದ ಪ್ರದೇಶಗಳು ಬ್ರಿಟೀಷರ ಕಾಲದಲ್ಲಿ Kolar Gold Field (KGF) ಅರ್ಥಾತ್ ಚಿನ್ನದ ಗಣಿ ಪ್ರದೇಶ ಎಂದೇ ಹೆಸರಾಯಿತು.
ಕೋಲಾರದ ಇತಿಹಾಸವನ್ನು ಇಣುಕಿ ನೋಡಿದಲ್ಲಿ ಕ್ರಿಶ.ಎರಡನೇ ಶತಮಾನದಲ್ಲಿ ಗಂಗಾ ರಾಜವಂಶದರಿಂದ ಕೋಲಾರ ಸ್ಥಾಪಿಸಲ್ಪಟ್ಟ ಕಾರಣ ಅವರು ತಮ್ಮನ್ನು ಕುವಲಲ-ಪುರವರೇಶ್ವರ (ಕೋಲಾರದ ಅಧಿಪತಿ) ಎಂದೇ ಸಂಭೋಧಿಸಿಕೊಳ್ಳುತ್ತಿದ್ದರು. ಸುಮಾರು 1,000 ವರ್ಷಗಳ ನಂತರ ತಮ್ಮ ರಾಜಧಾನಿಯನ್ನು ತಲಕಾಡಿಗೆ ಸ್ಥಳಾಂತರಿಸಿದ ನಂತರವೂ ಅಲ್ಲಿಂದಲೇ, ಪಶ್ಚಿಮ ಗಂಗರು ಗಂಗವಾಡಿಯನ್ನು ಆಳಿದರು. ನಂತರ ಕೋಲಾರವು ಚೋಳರ ಆಳ್ವಿಕೆಗೆ ಒಳಪಟ್ಟು ಆ ಪ್ರದೇಶವನ್ನು ನಿಕರಿಲಿಚೋಳ-ಮಂಡಲ ಎಂದು ಕರೆದರು. ಚೋಳರ ರಾಜ ಉತ್ತಮ ಚೋಳನು ಅಲ್ಲಿ ರೇಣುಕಾ ದೇವಾಲಯವನ್ನು ನಿರ್ಮಿಸಿದರೆ, ವೀರ ಚೋಳ, ವಿಕ್ರಮ ಚೋಳ ಮತ್ತು ರಾಜಾ ನಾಗೇಂದ್ರ ಚೋಳರು ಅವನಿ, ಮುಳಬಾಗಲು ಮತ್ತು ಸೀತಾ ಬೆಟ್ಟಗಳಲ್ಲಿ ದೇವಾಲಯಗಳನ್ನು ನಿರ್ಮಿಸಿದರು. ರಾಜೇಂದ್ರ ಚೋಳನ ಕಾಲದಲ್ಲಿ ಕೋಲಾರಮ್ಮ ದೇವಾಲಯ ನಿರ್ಮಾಣದ ಜೊತೆ ಕೋಲಾರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಶಿವ ದೇವಾಲಯಗಳನ್ನು ನಿರ್ಮಾಣಗೊಂಡವು. ಅದಕ್ಕೆ ಉದಾಹರಣೆಯಂತೆ ಇಂದಿನ ಕೆ.ಜಿ.ಎಫ್ ನ ಮಾರಿಕುಪ್ಪಂ ಗ್ರಾಮ (ನನ್ನ ಜನ್ಮಸ್ಥಳ)ದಲ್ಲಿ ಸೋಮೇಶ್ವರ ಮತ್ತು ಇಂದಿನ ಛಾಂಪಿಯನ್ ರೈಲ್ವೇ ನಿಲ್ದಾಣದ ಬಳಿ ಇರುವ ಶ್ರೀ ಉದ್ಧಂಡೇಶ್ವರಿ ದೇವಾಲಯಗಳು, ಊರುಗಾಂಪೇಟೆಯ ಈಶ್ವರನ್ ದೇವಾಲಯ ಮತ್ತು ಮಡಿವಾಳ ಗ್ರಾಮದ ಶಿವನ ದೇವಾಲಯಗಳು ಇಂದಿಗೂ ಇದ್ದು ಉಳಿದ ಬಹಳಷ್ಟು ದೇವಾಲಯಗಳು ನಾಶವಾಗಿವೆ.
1336 ರಿಂದ 1664 ರವರೆಗಿನ ವಿಜಯನಗರದ ಆಳ್ವಿಕೆಗೆ ಕೋಲಾರ ಒಳಪಟ್ಟರೆ, ನಂತರ 17 ನೇ ಶತಮಾನದಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಮರಾಠರ ಅಧೀನದಲ್ಲಿದ್ದು, ಶಿವಾಜಿಯ ತಂದೆ ಶಹಾಜಿ ಭೋಂಸ್ಲೆಯ ಅಳ್ವಿಕೆಯಲ್ಲಿತ್ತು. ಆದಾದ ನಂತರ ಸುಮಾರು ಎಪ್ಪತ್ತು ವರ್ಷಗಳ ಕಾಲ ಮುಸ್ಲಿಮರ ಕೈವಶವಾಗಿ, 1720 ರಲ್ಲಿ, ಕೋಲಾರವು ಸಿರಾ ಪ್ರಾಂತ್ಯದ ಭಾಗವಾಗಿ, ಕಡಪಾ ನವಾಬ್, ಹೈದರಾಬಾದ್ ನಿಜಾಮ್ ಮತ್ತು ಹೈದರ್ ಅಲಿ ಆಳಿದರು. 1768 ರಿಂದ 1770 ರವರೆಗೆ ಬ್ರಿಟಿಷರ ಆಳ್ವಿಕೆ ಬಂದು ಮತ್ತೆ ಮರಾಠರಿಗೆ ಮತ್ತು ನಂತರ ಹೈದರ್ ಅಲಿಗೆ ಹಸ್ತಾಂತರಿಸಿತು. 1791 ರಲ್ಲಿ, ಲಾರ್ಡ್ ಕಾರ್ನ್ವಾಲಿಸ್ 1791 ರಲ್ಲಿ ಕೋಲಾರವನ್ನು ವಶಪಡಿಸಿಕೊಂಡನಾದರೂ, ಮರುವರ್ಷ ಶ್ರೀರಂಗಪಟ್ಟಣ ಒಪ್ಪಂದದಲ್ಲಿ ಅದನ್ನು ಮೈಸೂರಿಗೆ ಹಿಂದಿರುಗಿಸಿದರು. ಈ ಪ್ರದೇಶದಲ್ಲಿ ದೊರೆತ ವಿವಿಧ ಶಾಸನಗಳ ಪ್ರಕಾರ, ಈ ಕೋಲಾರ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮಹಾವಾಲಿಗಳು (ಬಾಣರು), ಕದಂಬರು, ಚಾಲುಕ್ಯರು, ಪಲ್ಲವ, ವೈದುಂಬರು, ರಾಷ್ಟ್ರಕೂಟರು, ಚೋಳರು, ಹೊಯ್ಸಳರು ಮತ್ತು ಮೈಸೂರು ರಾಜರ ಆಳ್ವಿಕೆಯಲ್ಲಿತ್ತು ಎಂಬುದನ್ನು ತಿಳಿಸುತ್ತವೆ.
ಹೀಗೆ ಒಬ್ಬರಿಂದ ಮತ್ತೊಬ್ಬ ರಾಜ ಮಹಾರಾಜರುಗಳಿಗೆ ಕೋಲಾರ ಹಸ್ತಾಂತರ ಆಗುತ್ತಿದ್ದ ಸಂಧರ್ಭದಲ್ಲಿ ಜಾನ್ ಟೇಲರ್ III K.G.F ಪ್ರದೇಶದಲ್ಲಿದ್ದ ಚಿನ್ನವನ್ನು ತೆಗೆಯುವ ಸಲುವಾಗಿ ಜಾನ್ ಟೇಲರ್ & ಸನ್ಸ್ ಎಂಬ ಗಣಿಗಾರಿಕೆಯ ಕಂಪನಿಯನ್ನು ಆರಂಭಿಸಿ ಅಧಿಕೃತವಾಗಿ ದೊಡ್ಡ ಮಟ್ಟದಲ್ಲಿ ಹತ್ತು ಹಲವಾರು ಗಣಿಗಳನ್ನು ಆರಂಭಿಸಿದನು. ಈ ಗಣಿಗಳಲ್ಲಿ ಕಠಿಣತರವಾದ ಕೂಲಿ ಕೆಲಸವನ್ನು ಮಾಡಲು ಸ್ಥಳೀಯರು ನಿರಾಸಕ್ತಿ ತೋರಿಸಿದ್ದಲ್ಲದೇ, ಗಣಿಗಾರಿಕೆಗೆ ಅವಶ್ಯಕವಿದ್ದಷ್ಟು ಜನರು ಸ್ಥಳೀಯವಾಗಿ ದೊರೆಯದಿದ್ದ ಕಾರಣ, ಹೆಚ್ಚಿನ ಕಾರ್ಮಿಕರಿಗಾಗಿ ಹತ್ತಿರದಲ್ಲೇ ಇದ್ದ ತಮಿಳುನಾಡಿನ ಧರ್ಮಪುರಿ, ಕೃಷ್ಣಗಿರಿ, ಸೇಲಂ ಮತ್ತು ಉತ್ತರ ಮತ್ತು ದಕ್ಷಿಣ ಆರ್ಕಾಟ್ ಜಿಲ್ಲೆಗಳಿಂದ ಅಲ್ಲದೇ, ಆಂಧ್ರಪ್ರದೇಶದ ಚಿತ್ತೂರು, ಅನ್ನಮಯ ಮತ್ತು ಶ್ರೀ ಸತ್ಯಸಾಯಿ ಜಿಲ್ಲೆಗಳಿಂದ ಜಾತಿ ಧರ್ಮಗಳ ಬೇಧವಿಲ್ಲದೇ ಜನರನ್ನು ಕರೆತಂದು ಅವರವರ ಕೆಲಸಕ್ಕೆ ಅನುಗುಣವಾಗಿ ಗಣಿಪ್ರದೇಶಗಳ ಹತ್ತಿರದಲ್ಲೇ ವಸಾಹತುಗಳನ್ನು ನಿರ್ಮಿಸಿದರು. ಉನ್ನತ ಅಧಿಕಾರಿಗಳು, ಭೂವಿಜ್ಞಾನಿಗಳು ಎಂಜಿನಿಯರ್ಗಳು, ಮತ್ತು ಗಣಿ ಮೇಲ್ವಿಚಾರಕರಾಗಿ ಬ್ರಿಟಿಷರು ಮತ್ತು ರಾಜ್ಯ ಮತ್ತು ಹೊರರಾಜ್ಯಗಳಿಂದ ಕರೆತಂದವರಿಗೆ ಪಟ್ಟಣದ ಮಧ್ಯಭಾಗದಲ್ಲಿ ರಾಬರ್ಟ್ಸನ್ಪೇಟ್ (ಬೀರ್ ಶಾಪ್) ಮತ್ತು ಆಂಡರ್ಸನ್ಪೇಟ್ ಎಂಬ ಎರಡು ಬ್ರಿಟಿಷ್ ಗಣಿ ಅಧಿಕಾರಿಗಳ ಹೆಸರಿರುವ ಟೌನ್ಶಿಪ್ಗಳನ್ನು ನಿರ್ಮಿಸಿ ಅಲ್ಲಿ ಅವರಿಗೆ ಐಶಾರಾಮ್ಯದ ಬಂಗಲೆಗಳನ್ನು ನಿರ್ಮಿಸಿಕೊಡಲಾಗಿತ್ತು.
ಹೀಗೆ 1880ರಲ್ಲಿ ಆರಂಭವಾಗಿ 1956 ರಲ್ಲಿ ಅಧಿಕೃತವಾಗಿ ಮೈಸೂರು ಗೋಲ್ಡ್ ಮೈನಿಂಗ್ ಕಂಪನಿಯು ಅಂಗಸಂಸ್ಥೆಯಾಗುವವರೆಗೂ ಸಾವಿರಾರು ಟನ್ ಚಿನ್ನವನ್ನು ತೆಗೆದು ಸುಭದ್ರವಾಗಿ ಇಂಗ್ಲೇಂಡಿಗೆ ಸಾಗಿಸುವ ಸಲುವಾಗಿ ಬೆಂಗಳೂರು ಮತ್ತು ಕೆಜಿಎಫ್ ನಡುವೆ ಮೀಟರ್ ಗೇಜ್ ರೈಲನ್ನು ಆರಂಭಿಸಿದ್ದಲ್ಲದೇ, 1902ರಲ್ಲಿ ದೇಶದಲ್ಲೇ ಪ್ರಪ್ರಥಮಬಾರಿಗೆ ಆರಂಭವಾದ ಶಿವನಸಮುದ್ರ ಜಲಪಾತದ ಜಲವಿದ್ಯುತ್ ಸ್ಥಾವರದಿಂದ ತಯಾರಾದ ವಿದ್ಯುತ್ತನ್ನು ಸುಮಾರು 140-km ದೂರವಿದ್ದ K.G.Fಗೆ ಕೇಬಲ್ ಮೂಲಕ ತಂದು ಈ ಎಲ್ಲಾ ಗಣಿಗಳನ್ನು ವಿದ್ಯುದ್ದೀಕರಿಸಲಾಯಿತು. ಸ್ವಾತಂತ್ರಾ ನಂತರ ಮೈಸೂರು ಸರ್ಕಾರವು 1956 ರಲ್ಲಿ ಗಣಿಗಳನ್ನು ಸ್ವಾಧೀನಪಡಿಸಿಕೊಳ್ಳುವಷ್ಟರಲ್ಲಿ ಬ್ರಿಟೀಷರು ಸರಿಯಾಗಿ ಊಟದ ರೂಪದಲ್ಲಿ ಸುಮಾರು 8 ಲಕ್ಷ ಕೆಜಿ ಚಿನ್ನವನ್ನು ಬ್ರಿಟನ್ನಿಗೆ ಸಾಗಿಸಿ, ಕೇವಲ ಉಪ್ಪಿನ ಕಾಯಿಯಷ್ಟು ಚಿನ್ನವನ್ನು ಮಾತ್ರವೇ K.G.Fನಲ್ಲಿ ಉಳಿಸಿಹೋಗಿದ್ದರು. ಹಾಗೂ ಹೀಗೂ 1990 ರವರೆಗೂ ಚಿನ್ನದ ಗಣಿಗಾರಿಕೆ ನಡೆದು ನಂತರ ದಿನಗಳಲ್ಲಿ ಸ್ವಯಂ ನಿವೃತ್ತಿಯ ಮೂಲಕ ಕಾರ್ಮಿಕರನ್ನು ಮನೆಗೆ ಕಳುಹಿಸಿ ಅಧಿಕೃತವಾಗಿ 2001ರಲ್ಲಿ ಕೋಲಾರದ ಚಿನ್ನದಗಣಿ ಮುಚ್ಚಲ್ಪಟ್ಟು ಇಂದು ಪಾಳುಬಿದ್ದ ಆ ಗಣಿಗಳನ್ನು ನೋಡುವುದಕ್ಕೇ ಬೇಸರವಾಗುತ್ತದೆ.
ಹೀಗೆ ತಮಿಳು ನಾಡಿನಿಂದ ಕೂಲಿ ಕಾರ್ಮಿಕರಾಗಿ ಕರೆತಂದ ತಮಿಳರು ನಂತರದ ದಿನಗಳಲ್ಲಿ ಪ್ರಾಭಲ್ಯ ಪಡೆದು ಕೆಜಿಎಫ್ ಕರ್ನಾಟಕದ ಅವಿಭಾಜ್ಯ ಅಂಗವಾದರೂ ಅಕ್ಷರಶಃ ತಮಿಳುನಾಡಾಗಿ, ಕನ್ನಡ ಎಂದರೆ, ಎನ್ನಡಾ ಎನ್ನುವ ಪರಿಸ್ಥಿತಿ ಇತ್ತು. ಇನ್ನು ರಾಜಕೀಯವಾಗಿ ಅಂಬೇಡ್ಕರ್ ಅವರು ಉತ್ತರ ಭಾರತದಲ್ಲಿ ಸೋಲಿಸಲ್ಪಟ್ಟರೂ, ಇಡೀ ದೇಶದಲ್ಲೇ ಅವರ ಹೆಸರಿನಲ್ಲಿ ಮೊಟ್ಟ ಮೊದಲಬಾರಿಗೆ ಕೆಜಿಎಫ್ ನಲ್ಲಿ ಜನಪ್ರತಿನಿಧಿಯೊಬ್ಬರು ಆಯ್ಕೆಯಾಗಿದ್ದು ವಿಶೇಷವಾಗಿತ್ತು ನಂತರದ ಚುನಾವಣೆಗಳಲ್ಲಿ ಒಂದು ಸಲಾ ಡಿ. ಎಂ,ಕೆ ಪಕ್ಷದ ಆರ್ಮುಗಂ ವಿಧಾನಸಭೆಗೆ ಆಯ್ಕೆಯಾದರೆ ಅದರ ಪರ್ಯಾಯ ವರ್ಷ ಎಐಡಿಎಂಕೆ ಪಕ್ಷದ ಭಕ್ತವತ್ಸಲ ವಿಧಾನ ಸಭೆಗೆ ಆಯ್ಕೆಯಾಗಿ ಇತ್ತೀಚಿನ ದಿನಗಳಲ್ಲಿ ತಂಗಂ ಎಂಬ ಪುಡಿ ರೌಡಿಯೊಬ್ಬನ ಆಟೋಟೋಪಗಳ ಹೊರತಾಗಿ ಇತ್ತೀಚಿನ ದಿನಗಳಲ್ಲಿ KGFಗೆ ಅಂತಹ ಹೇಳಿಕೊಳ್ಳುವಂತಹ ಇತಿಹಾಸವೇನೂ ಇರಲಿಲ್ಲ.
ಕೆಲ ವರ್ಷಗಳ ಹಿಂದೆ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಯಶ್ ಅಭಿನಯಿಸಿದ KGF ಹೆಸರಿನ ಸರಣಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರದರ್ಶಿತವಾಗಿ ಭಾರೀ ಹಿಟ್ ಆದ ನಂತರ ಆ ಸಿನಿಮಾದಲ್ಲಿ ತೋರಿಸಿದ ವಿಷಯವೇ ನಿಜವಾದ KGF ಇತಿಹಾಸ ಎಂದೇ ಜನರು ನಂಬಿದಾಗ, ಕೇವಲ KGF ಎಂಬ ಹೆಸರಿನ ಹೊರತಾಗಿ ಮಿಕ್ಕೆಲ್ಲವೂ ಕಾಲ್ಪನಿಕ ಕಥೆ ಎಂದು ನಿರ್ದೇಶಕರು ಮತ್ತು ನಿರ್ಮಾಪಕರು ಹೇಳಿದ ನಂತರ ಆ ವಿಷಯ ತಣ್ಣಗಾಗಿತ್ತು.
ಅನಾದಿ ಕಾಲದಿಂದಲೂ ಪ್ರಪಂಚಾದ್ಯಂತ ವಾಸುತ್ತಿದ್ದವರು ತಮ್ಮ ಕಾಲ ಘಟ್ಟದ ವಸ್ತು ನಿಷ್ಠತೆಗಳನ್ನು ಬರೆದಿಡುವುದೋ ಇಲ್ಲವೇ ವಿವಿಧ ರೂಪದಲ್ಲಿ ಕಲ್ಲಿನ ಮೇಲೇ ಕೆತ್ತನೆ ಮಾಡುತ್ತಿದ್ದರು. ದುರಾದೃಷ್ಟವಷಾತ್, ಭಾರತದ ಮೇಲೆ ಪರಕೀಯರ ಸತತವಾದ ಧಾಳಿ ನಡೆದರೂ, ಸಂಪೂರ್ಣ ಭಾರತವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಸಾಧ್ಯವಾಗದೇ ಸೋತು ಸುಣ್ಣವಾದವರು ಬಹಳಷ್ಟು ಮಂದಿಯಾದರೇ, ಅವರೆಲ್ಲರಿಗಿಂತಲೂ ಹೆಚ್ಚಿನ ಕೃತ್ರಿಮರಾದ ಬ್ರಿಟೀಷರು ನಮ್ಮ ಇತಿಹಾಸವನ್ನು ಅದಲು ಬದಲು ಮಾಡಿ ಸುಳ್ಳು ಸುಳ್ಳು ಇತಿಹಾಸವನ್ನು ಬರೆಸಿ, ಸಾವಿರ ಸುಳ್ಳನ್ನು ಹೇಳಿ ಅದನ್ನೇ ನಿಜ ಎನ್ನುವಂತೆ ಮಾಡುವ ಗೂಬೆಲ್ಸ್ ತಂತ್ರವನ್ನೇ ಅನುಸರಿಸಿ ಭಾರತೀಯರಿಗೆ ತಮ್ಮ ತನದ ಬಗ್ಗೆಯೇ ಅಸಹ್ಯವನ್ನು ಮೂಡುವಂತೆ ಮಾಡಿದರೆ, ಅದರ ಮುಂದುವರೆದ ಭಾಗವಾಗಿ ಕಮ್ಯೂನಿಷ್ಟರು ಅದನ್ನೇ ಸದ್ದಿಲ್ಲದೇ ಪಠ್ಯ ಪುಸ್ತಕಗಳು ಮತ್ತು ಚಿತ್ರಗಳ ಮೂಲಕ ಮಾಡಿತೋರಿಸುತ್ತಿದ್ದು ಅದಕ್ಕೆ ಜ್ವಲಂತ ಉದಾಹರಣಿಯಾಗಿ ಪಾ. ರಂಜಿತ್ ನಿರ್ದೇಶನದ ವಿಕ್ರಂ ನಾಯಕತ್ವದ KGF ಸುತ್ತಲಿನ ಸತ್ಯ ಕಥೆ ಎಂಬ ಹೆಗ್ಗಳಿಕೆಯೊಂದಿಗೆ ತಮಿಳಿನಲ್ಲಿ ತಂಗಲಾನ್ ಸಿನಿಮಾ ತೆರೆಗೆ ಬಂದಿದ್ದು ಅದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಐತಿಹಾಸಿಕ ಕಥಾಹಂದರದ ಸಿನಿಮಾ ಎಂಬ ಹೆಗ್ಗಳಿಕೆ ಪಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
ಬಹುಕೋಟಿ ವೆಚ್ಚದಲ್ಲಿ ವಿಕ್ರಂ ನಂತರ ವೈವಿಧ್ಯಮಯ ನಟನೊಂದಿಗೆ 18ನೇ ಶತಮಾನದಲ್ಲಿ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಕೋಲಾರದ ಚಿನ್ನದ ಗಣಿಯ ಸುತ್ತಲಿನ ಅಸಲಿ ಕಥೆ ಎಂದು ಹೇಳಿಕೊಳ್ಳುವ ತಂಗಲಾನ್ ಸಿನಿಮದಲ್ಲಿ ನೈಜ ಇತಿಹಾಸವನ್ನು ಸಂಪೂರ್ಣವಾಗಿ ತಿರುಚಿರುವ ನಿರ್ದೇಶಕರು ತಮ್ಮ ಹಿಂದಿನ ಬಹುತೇಕ ಕಥೆಗಳಲ್ಲಿ ಹೇಳಿರುವಂತೆಯೇ ತಮ್ಮ ಸೈದ್ಧಾಂತಿಕ ನಿಲುವಿಗೇ ಕಟ್ಟು ಬಿದ್ದು,ಅದೇ ದಲಿತರು, ಜಾತಿ, ವರ್ಣಭೇದ, ಜಾತಿ ತಾರತಮ್ಯ ಅಸ್ಪೃಷ್ಯತೆ ಹಿಂದೆಯೇ ಗಿರುಕಿ ಹೊಡೆಯುವ ವಿಚಾರಗಳನ್ನೇ ಇಟ್ಟುಕೊಂಡಿರುವ ತಂಗಲಾನ್ (ಚಿನ್ನದ ಮನುಷ್ಯ?) ಎಂಬ ಅಸಂಬದ್ಧ ಮತ್ತು ಅಪ್ರಬುದ್ಧ ಚಿತ್ರವನ್ನು ನಿರ್ಮಿಸಿ ಮತ್ತೆ ಸಮಾಜದಲ್ಲಿ ಜಾತಿಯ ವಿಷ ಬೀಜದ ಕಂದಕವನ್ನು ಹೆಚ್ಚು ಮಾಡಲು ಮುಂದಾಗಿರುವುದು ನಿಜಕ್ಕೂ ಅಸಹನೀಯವಾಗಿದೆ.
ಯಥಾ ಪ್ರಕಾರ. ಈ ದೇಶದಲ್ಲಿನ ಸ್ವಘೋಷಿತ ಬುದ್ಧಿ ಜೀವಿಗಳು, ಎಡಚರ ಮನಸ್ಥಿತಿಯ ವಿಮರ್ಶಕರು ಈ ಸಿನಿಮಾವನ್ನು ಅಸಮಾನ್ಯ ದೃಶ್ಯ ಕಾವ್ಯ ಎಂದು ಬಣ್ಣಿಸುವ ಮೂಲಕ ಜನರಿಗೆ ಮಂಕು ಬೂದಿಯನ್ನು ಎರೆಚುತ್ತಿರುವುದು ನಿಜಕ್ಕೂ ಖಂಡನಾರ್ಹವಾಗಿದೆ. ನೈಜ ಇತಿಹಾಸವನ್ನು ಓದದೇ, ಈ ರೀತಿಯ ಸಿನಿಮಾಗಳಲ್ಲಿ ತೋರಿಸಿದ್ದೇ ನಿಜ ಎಂದು ನಂಬುವ ಇಂದಿನ ಜನಾಂಗಕ್ಕೆ ಕೋಲಾದದ ಕುರಿತಾಗಿ ಈ ರೀತಿಯ ಹಸೀ ಸುಳ್ಳನ್ನು ತೋರಿಸುವ ಮೂಲಕ ನಮ್ಮ ಮುಂದಿನ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಿರುವ ಇಡೀ ಚಿತ್ರತಂಡ ಮತ್ತು ಅದನ್ನು ಸಮರ್ಥಿಸುವ ಜನರು ಶಿಕ್ಷಾರ್ಹರು ಎನಿಸುತ್ತದೆ.
ಆದಾರೋ ವಿಮರ್ಶಕನೊಬ್ಬ ಕೆಜಿಎಫ್ ಬಗ್ಗೆ ಅರಿವೇ ಇಲ್ಲದೇ, ಚಿನ್ನದ ಗಣಿಯೊಳಗೆ 3 ಲಕ್ಷ ಕಾರ್ಮಿಕರಿದ್ದರು. ಕಾರ್ಮಿಕರೆಲ್ಲರೂ ದಲಿತರು ಮತ್ತು ಬಡವರು ಎಂದು ಷರ ಬರೆಯುತ್ತಾನೆ. ಹಾಗಾದರೆ ತಮಿಳು ನಾಡಿನಿಂದ ಬಂದ ಜನರೆಲ್ಲಾ ದಲಿತರೇ? ತಮಿಳು ನಾಡಿನ ಹೊರತಾಗಿಯೂ ದೇಶ ವಿದೇಶಗಳಿಂದ ಬಂದು ಇಲ್ಲಿ ನೆಲೆಸಿದ್ದವರೆಲ್ಲರೂ ದಲಿತ ಮತ್ತು ಬಡವರಾಗುತ್ತಾರೆಯೇ? ಹಾಸನ ಜಿಲ್ಲೆಯ ಕುಂದೂರಿನಿಂದ ಬಂದಿದ್ದ ನಮ್ಮ ಅಮ್ಮನ ಅಜ್ಜ ಶ್ರೀ ವೆಂಕಟರಾಮಯ್ಯನರು ಇದೇ ಕೆಜಿಎಫ್ ನ ಆಂಡರ್ಸನ್ ಪೇಟೆಯ ಮಾರ್ಕೆಟ್ ಸಾರ್ಜೆಂಟ್ ನಂತಹ ಹುದ್ದೆಯನ್ನು ಏರಿದ್ದಾದರೂ ಹೇಗೇ? ಅದೇ ರೀತಿ ಬೆಳ್ಳೂರಿನ ನಿವಾಸಿಯಾದ ನಮ್ಮಮ್ಮನ ತಂದೆ ನನ್ನ ಅಜ್ಜ ರಾಜಾರಾವ್, ಬೆಳ್ಳೂರಿನಿಂದ ಕಾಶಿಗೆ ಹೋಗಿ ವಿದ್ಯಾಭ್ಯಾಸ ಮಾಡಿ ಅಲ್ಲಿಂದ ಕೆಲಸವನ್ನು ಅರೆಸುತ್ತಾ ಕೆಜಿಎಫ್ ಬಂದು ಅಲ್ಲಿ ಹಿರಿಯ ಅಧಿಕಾರಿ ಆಗಿದ್ದಾದರೂ ಹೇಗೇ? ಇಡೀ ಕೆಜಿಎಫ್ ಗಣಿಕಾರಿಕೆಯನ್ನು ಕಾಯುವ ಸಲುವಾಗಿ ಬಂದಿದ್ದವರೆಲ್ಲರೂ ಉತ್ತರ ಭಾರತೀಯರೇ ಆಗಿದ್ದು, ಎಲ್ಲಾ ರೀತಿಯ securityಗಳನ್ನು ಪಂಜಾಬೀ ಎಂದು ಅಲ್ಲಿ ಕರೆಯುತ್ತಿದ್ದರೆ ಗಣಿಯಲ್ಲಿ ಕೆಲಸ ಮಾಡುವವರೆಲ್ಲರೂ ದಲಿತರೇ ಹೇಗಾಗುತ್ತಾರೆ.
100-200 ವರ್ಷಗಳು ಬಿಡಿ ಇಂದಿಗೂ ದೇಶದ ಅನೇಕ ಹಳ್ಳಿಗಳಲ್ಲಿನ ಹೆಂಗಸರು ಮಕ್ಕಳಿಗೆ ಮನೆಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೇ, ಹೊಲ ಗದ್ದೆಗಳಿಗೆ ಹೋಗುತ್ತಿಲ್ಲವೇ? ಅದಕ್ಕಾಗಿಯೇ ಅಲ್ಲವೇ ಪ್ರಸ್ತುತ ಸರ್ಕಾರ ಸ್ವಚ್ಚ ಭಾರತ ಆಭಿಯಾನದ ಅಡಿಯಲ್ಲಿ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಹಣ ಮೀಸಲಿಟ್ಟಿರುವುದು ಅಲ್ಲವೇ? ವಸ್ತು ಸ್ಥಿತಿ ಹೀಗಿರುವಾಗ ಮೂರು ಲಕ್ಷ ಕಾರ್ಮಿಕರ ಮನೆಗಳಿಗೆ ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆ ಇರಲಿಲ್ಲ, ಎಲ್ಲರೂ ಸಾರ್ವಜನಿಕ ಟಾಯ್ಲೆಟ್ ಬಳಸಬೇಕಿತ್ತು, ಟಾಯ್ಲೆಟ್ ಗುಂಡಿ ತುಂಬಿ ಮಲ ನದಿಯಾಗಿ ಹರಿಯಲಾರಂಭಿಸಿತು ಎಂಬುದು ಕೇವಲ ಕಟ್ಟು ಕತೆಯಾಗಿದ್ದು ನಾನು ಹುಟ್ಟಿ ಬೆಳೆದ ಅದೇ ಕೆಜಿಎಫ್ ನಲ್ಲಿ ಎಂದಿಗೂ ಅಂತಹ ಸಮಸ್ಯೆಯನ್ನೇ ನೋಡಿರಲಿಲ್ಲ. ಪ್ರಜಾಪ್ರಭುತ್ವದ ಆಡಳಿತ ಬಂದು 75+ ವರ್ಷಗಳಾದರೂ ಇನ್ನೂ ಸವಕಲು ಜಮೀನ್ದಾರ, ಶೋಷಣೆ, ಇವೆಲ್ಲವನ್ನೂ ಈಗಿನ ಕಾಲದ ಜನರಿಗೆ ತೋರಿಸಿರುದಲ್ಲದೇ, ಇಡೀ ಪ್ರಪಂಚದಲ್ಲಿ ಒಂದೆರಡು ರಾಷ್ಟ್ತಗಳ ಹೊರತಾಗಿ ಎಲ್ಲಿಯೂ ಇಲ್ಲದ ಕಮ್ಯೂನಿಷ್ಟ್ ಪಕ್ಷವನ್ನು ಈ ಸಿನಿಮಾದಲ್ಲಿ ಎಸ್. ಬಾಲನ್ ಎಂಬ ಪಾತ್ರದಲ್ಲಿ ಕೆಂಬಾವುಟ ಹಿಡಿಸಿ ಅವರನ್ನು ಸಮಾಜ ಸುಧಾರಕ ಎಂಬುದನ್ನು ಈಗಿನ ಕಾಲಕ್ಕೆ ತೋರಿಸುವ ಮೂಲಕ ತಮ್ಮ ಸಿದ್ಧಾಂತವನ್ನು ಬಲವಂತವಾಗಿ ಇಂದಿನ ಪೀಳಿಗೆಯ ಮೇಲೆ ಹೇರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಇಂತಹ ಎಡಚರುಗಳು ತೆಗೆಯುವ ದಲಿತ, ಬಲಿತ, ಜಾತಿ ಧರ್ಮಗಳ ಪರ ತೆಗೆದ ಚಿತ್ರಗಳೆಲ್ಲವೂ ಸತ್ಯ ಮತ್ತು ಶೋಷಿತರ ಪರ. ಅದನ್ನು ಹಾಡಿ ಹೊಗಳಿ ಆಸ್ಕರ್ ಅವಾರ್ಡ್ ಕೊಡಲೇ ಬೇಕಾದ ಚಿತ್ರ ಎಂದು ಹೇಳುದಕ್ಕೆ ನೂರಾರು ಮಂದಿ ಸಿದ್ದರಾಗಿರುತ್ತಾರೆ. ಅದೇ ಕಾಶ್ಮೀರ ಮತ್ತು ಕೇರಳದಲ್ಲಿ ನೂರಾರು ವರ್ಷಗಳಿಂದಲೂ ನಿತ್ಯವೂ ನಡೆಯುತ್ತಿರುವ ನಾನಾ ರೀತಿಯ ಜಿಹಾದ್ ಬಗ್ಗೆ ಎಚ್ಚರಿಸುವಂತಹ ಸಿನಿಮಾಗಳನ್ನು ಸೂಕ್ಶ್ಮ ಸಂವೇದಿಗಳು ಮಾಡಿದರೆ ಅವೆಲ್ಲವೂ ಕಟ್ಟು ಕಥೆ ಎಂದು ಅದನ್ನು ನಿರ್ಬಂಧಿಸಬೇಕು ಎಂದು ಹೋರಾಟಕ್ಕೆ ಇಳಿಯುತ್ತಾರೆ. ಕೆಜಿಎಫ್ ನಲ್ಲೇ ಹುಟ್ಟಿ, ಅದೇ ಗಣಿಕಾರ್ಮಿಕರೊಂದಿಗೆ ಅಕ್ಕ ಪಕ್ಕದ ಮನೆಗಳಲ್ಲಿ ವಾಸಿಸಿ, ಬುದ್ದಿ ತಿಳಿಯುವವರೆಗೂ ಅದೇ ಗಣಿಯಲ್ಲೇ ಆಟವಾಡುತ್ತಾ, ಬೆಳೆದ ನನಗೇ ಗೊತ್ತಿಲ್ಲದ ಈ ದಲಿತ ಬಲಿತ ತಂಗಲಾನ್ ಚಿತ್ರ ಕಥೆ, ಈಗ ಮಹಾ ದೃಶ್ಯ ಕಾವ್ಯ. ಇಲ್ಲಾ ಆ ಸಿನಿಮಾದಲ್ಲಿ ತೋರಿಸಿರುವುದೆಲ್ಲವೂ ಸುಳ್ಳು ಎಂದು ಹೇಳಿದವರು ಕೋಮುವಾದಿಗಳು ಮತ್ತು WhatsApp Universityಯವರು. ವಾರೇ ವಾಹ್!! ಎಂತಹ ಲಾಜಿಕ್ ಇವರದ್ದು?
ಅಂದಿನ ಕೆಜಿಎಫ್ ಬಗ್ಗೆ ಕಪೋಲ ಕಲ್ಪಿತ ಸಿನಿಮಾ ನಿರ್ಮಾಣ ಮಾಡಿ ಕಾಸು ಮಾಡಿಕೊಳ್ಳುವುದಲ್ಲದೇ, ಭಾರತ ದೇಶ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ತೆಗಳುವ ಚಿತ್ರಗಳಿಗೆ ಪ್ರಶಸ್ತಿಯನ್ನು ಕೊಡಲೆಂದೇ ಇರುವ ನೂರಾರು ಸಂಸ್ಥೆಗಳಿಂದ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುವ ಇಂತಹ ಎಡಚರ ಮನಸ್ಥಿತಿಯವರು, ನಿಜವಾದ ಕೆಜಿಎಫ್ ಇತಿಹಾಸವನ್ನು ತೋಸಿಸಬೇಕೆಂದರೆ, ಕ್ರೈಸ್ತ ಮಿಷಿನರಿಗಳು ಕೊಡುವ ಕೇವಲ ಹಾಲಿನ ಪುಡಿ ಮತ್ತು ಪುಡಿಗಾಸಿನ ಆಸೆಗಾಗಿ ಮತಾಂತರಗೊಂಡ ಕಥೆಯನ್ನು ತೋರಿಸಲಿ. ನನ್ನ ಅಕ್ಕ ಪಕ್ಕದ ಮನೆಯಲ್ಲೇ ನಮ್ಮ ಜೊತೆ ಆಡಿ ಬೆಳೆದ ರಾಜು, ರಾಮು, ವೆಂಕಿಯವರ ಮಕ್ಕಳು ಇಂದು ರಾಬರ್ಟ್, ಆಂತೋನಿ, ಕ್ರೈಸ್ತ ರಾಜ್, ಅಚ್ಚು ಕಟ್ಟಾಗಿ ಕೆನ್ನೆ ತುಂಬ ಅರಿಶಿನ ಹಚ್ಚಿಕೊಂಡು ತಲೆ ತುಂಬಾ ಹೂವು ಮುಡಿದುಕೊಂಡು ಕಾಸಿನಷ್ಟಗಲದ ಕುಂಕುಮ ಇಟ್ಟುಕೊಳ್ಳುತ್ತಿದ್ದ ಕೊಲ್ಲಿಯಮ್ಮನ ಮಕ್ಕಳು ಶಾಂತಿ, ಪದ್ಮಾ ಅವರ ಹಣೆಗಳಲ್ಲಿದ್ದ ಮುದ್ದಾದ ಕುಂಕುಮವನ್ನು ನಾಯಿ ನೆಕ್ಕಿಯಾಗಿದೆ. ತಾಳಿಯಿದ್ದ ಕೊರಳಿಗೆ ಕ್ರಿಸ್ತನ ಶಿಲುಬೆ ಏರಿದೆ. ಹೆಜ್ಜೆ ಹೆಜ್ಜೆಗೆ ಇದ್ದ ಮಾರಿಯಮ್ಮನ ಗುಡಿ ಇದ್ದ ಜಾಗದಲ್ಲಿ ಇಂದು ನಾಯಿಕೊಡೆಯಂತೆ ಚರ್ಚುಗಳಾಗಿರುವ ಪರಿಸ್ಥಿತಿಯನ್ನು ಹೊಂದಿರುವ ಇಂದಿನ ಕೆಜಿಎಫ್ ನ ವಸ್ತು ಚಿತ್ರಣವನ್ನು ಜಗತ್ತಿಗೆ ತೋರಿಸಬಲ್ಲರೇ?
ತಮ್ಮ ಸೈದ್ಧಾಂತಿಕ ನಿಲುವು, ಭಾರತ ವಿರೋಧಿ ಮನಸ್ಥಿತಿ ಮತ್ತು ದೇಶ ಹಾಳದೂ ತಾವು ಮಾತ್ರಾ ಕಾಸು ಮಾಡುವ ತೆವಲಿಗಾಗಿ ಇಲ್ಲ ಸಲ್ಲದ ಸುಳ್ಳು ಇತೀಹಾಸವನ್ನೇ ವೈಭವೀಕರಿಸಿ ಮುಂದಿನ ಪೀಳಿಗೆಗೆ ಸುಳ್ಳು ಇತಿಹಾಸವನ್ನೇ ತಮ್ಮ ಚಿತ್ರಗಳ ಮೂಲಕ ಕಲಿಸಲು ಮುಂದಾ ಇಂತಹವರಿಗೆ ಧಿಕ್ಕಾರವಿರಲಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ
👍
LikeLike