ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

ನಮ್ಮ ಹಿಂದಿನ ಇತಿಹಾಸ ತಿಳಿಯದವರು, ಇತಿಹಾಸ ಸೃಷ್ಟಿಸಲಾರರು ಎಂಬ ಮಾತಿದ್ದರೂ ಸಹಾ, ಇಂದಿನ ಬಹುತೇಕ ಯುವ ಜನಾಂಗ ಡಾಕ್ಟರ್ ಮತ್ತು ಇಂಜೀನಿಯರಿಂಗ್ ಓದುವ ಸಲುವಾಗಿ ಗಣಿತ ಮತ್ತು ವಿಜ್ಞಾನದ ವಿಷಯಗಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡುವುದರಿಂದ ಭಾಷೆ ಮತ್ತು ಸಮಾಜ ಶಾಸ್ತ್ರದ ಬಗ್ಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಆದರೆ, ಕೆಲಸವನ್ನು ಗಿಟ್ಟಿಸುವ ಸಲುವಾಗಿ ಗಣಿತ ಮತ್ತು ವಿಜ್ಞಾನ ಅವಶ್ಯಕತೆ ಇದ್ದರೂ, ದೈನಂದಿನ ಚಟುವಟಿಕೆಗಳಿಗೆ ಭಾಷೆ ಮತ್ತು ಇತಿಹಾಸದ ಅರಿವು ಅತ್ಯಗತ್ಯವಾಗಿದ್ದು,  ನಾನು BEL ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಮೂರು ವರ್ಷಗಳೂ  ನನಗೆ  ಸಮಾಜ ಶಾಸ್ತ್ರದ ಮೂಲಕ ಇತಿಹಾಸ, ಭೂಗೋಳ, ಮತ್ತು ರಾಜ್ಯಶಾಸ್ತ್ರವನ್ನು ಕಲಿಸಿಕೊಟ್ಟು ನನಗೆ ಚರಿತ್ರೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದ ನನ್ನ ನೆಚ್ಚಿನ/ಮೆಚ್ಚಿನ ಗುರುಗಳಾಗಿದ್ದ ಶ್ರೀಮತಿ ನಾಗವೇಣಿ ಭಾಸ್ಕರ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ಶಿಕ್ಷಕರ ದಿನಾಚರಣೆಯಂದು ನಿಮ್ಮೆಲ್ಲರಿಗೂ ಮಾಡಿಕೊಡುತ್ತಿದ್ದೇನೆ.

NB2ಅದು 50ರ ದಶಕ ಮೈಸೂರು ಮೂಲದವರಾದ ಮತ್ತು ಶಿಕ್ಷಣ ಇಲಾಖೆಯಲ್ಲಿ ಉನ್ನತ ಅಧಿಕಾರಿಗಳಾಗಿದ್ದ ಶ್ರೀ ಕೆ.ಎಂ. ಲಕ್ಷ್ಮೀ ನರಸಿಂಹಯ್ಯನವರು ಮತ್ತು ಮೀನಾಕ್ಷಿ ಎಂಬ ಸಂಪ್ರದಾಯಸ್ಥ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗುವಿನ ಜನನವಾಗುತ್ತದೆ. ಚಿಕ್ಕ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳಿಗೆ ಯಾರದ್ದೇ ದೃಷ್ಟಿ ತಾಗದಿರಲೆಂದು ದೊಡ್ಡವಳಾಗುವವರೆಗೂ ದೃಷ್ಟಿ ಬೊಟ್ಟು ಇಡುವುದು ಎಲ್ಲೆಡೆಯ ಸಂಪ್ರದಾಯ ಮತ್ತು ರೂಡಿಯಾದರೆ, ಈ ನವಜಾತ ಶಿಶುವಿಗೆ ಶಾಶ್ವತವಾಗಿ ಯಾರ ಕೆಟ್ಟ ದೃಷ್ಟಿಯೂ ತಾಗದಿರಲೆಂದು ಸಾಕ್ಷಾತ್ ಬ್ರಹ್ಮನೇ, ಯಾ..ರಿಟ್ಟರೀ ಚುಕ್ಕೀ, ಯಾ..ಕಿಟ್ಟರೀ ಚುಕ್ಕೀ..  ಚುಕ್ಕಿ ಗಲ್ಲದ ಚುಕ್ಕೀ, ಚುಕ್ಕೀ ಅಂದದ..ಚುಕ್ಕೀ ಎನ್ನುವಂತೆ ಬಲ ಭಾಗದ ಗಲ್ಲದ ಮೇಲೆ ಚುಕ್ಕಿಯನ್ನಿಟ್ಟು ಕಳುಹಿಸಿರುವುದು ವಿಶೇಷ. . ಮನೆಗೆ ಬಂದ ಮತ್ತು ಬಹಳ ಮುದ್ದಾಗಿ ಕಾಣುತ್ತಿದ್ದ ಆ ಮಹಾಲಕ್ಷ್ಮಿಗೆ ನಾಗವೇಣಿ ಎಂಬ ಹೆಸರನ್ನಿಡುತ್ತಾರೆ.

ನಾಗವೇಣಿ ಮನೆಗೆ ಬಂದ ನಂತರ ನೋಡ ನೋಡುತ್ತಿದ್ದ ಹಾಗೆ ಒಬ್ಬಳು ತಂಗಿ ಮತ್ತು ಇಬ್ಬರು ತಮ್ಮಂದಿರ ಜನನವಾಗಿ  ನಾಗವೇಣಿಗೆ ಅರಿವಿಲ್ಲದಂತೆಯೇ ಹಿರಿಯಕ್ಕನ ಪಟ್ಟ ದೊರೆತದ್ದಲ್ಲದೇ, ಜವಾಬ್ಧಾರಿಯೂ ಹೆಚ್ಚಾಗುತ್ತದೆ. ಚಿಕ್ಕವಯಸ್ಸಿನಿಂದಲೂ ಓದಿನಷ್ಟೇ ಆಟ ಪಾಠಗಳಲ್ಲಿ ಚುರುಕಾಗಿದ್ದಲ್ಲದೇ ಹಾಡು ಮತ್ತು ಹಸೆಗಳಲ್ಲಿಯೂ ಸಹಾ ಮುಂದಿರುತ್ತಾರೆ. ತಂದೆಯವರು ಸರ್ಕಾರೀ ಕೆಲಸದಲ್ಲಿದ್ದ ಕಾರಣ, ಎರಡು ಮೂರು ವರ್ಷಗಳಿಗೊಮ್ಮೆ ಊರಿನಿಂದ ಮತ್ತೊಂದೂರಿಗೆ ವರ್ಗಾವಣೆ ಆಗುತ್ತಿದ್ದರಿಂದ ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವಂತೆ ಸಹಜವಾಗಿ ಕುಟುಂಬವಿಡೀ ಅವರೊಂದಿಗೆ ಪ್ರಯಾಣಿಸ ಬೇಕಾದ ಅನಿವಾರ್ಯ ಸಂಧರ್ಭ ಉಂಟಾಗಿ, ಮೈಸೂರು, ಮಧುಗಿರಿ, ಹುಣಸೂರು, ಕೆ.ಆರ್.ನಗರದಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಾರೆ. ಹತ್ತನೇ ತರಗತಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಮುಗಿಸಿದ ನಂತರ, PUCಯಲ್ಲಿ Science  ಮುಗಿಸಿದ ನಂತರ ಮುಂದೇನು ಮಾಡಬೇಕು ಎಂದು ತಿಳಿಯದೇ, ಬಿಎ ಮಾಡಲು ಮೈಸೂರಿನ ಮಹಾರಾಣಿ ಕಾಲೇಜಿಗೆ ಸೇರಿಕೊಂಡು 1972ರಲ್ಲಿ ಬಿಎ ಪದವಿಯನ್ನು ಪಡೆದ ನಂತರ ಮಾನಸ ಗಂಗೋತ್ರಿಗೆ ಸೇರಿಕೊಂಡು 1974ರಲ್ಲಿ ಸಮಾಜ ಶಾಸ್ತ್ರದಲ್ಲಿ ಎಂಎ ಮುಗಿಸಿದ ನಂತರ  ಒಂದೆರಡು ವರ್ಷಗಳ ಕಾಲ ಹುಣಸೂರಿನ ಕಾಲೇಜಿನಲ್ಲಿ ಅರೆಕಾಲಿಕ ಅಧ್ಯಾಪಕಿಯಾಗಿ ಕೆಲಸ ಮಾಡಿ, ಕೆಲಸಕ್ಕೆ ರಾಜೀನಾಮೆ ಇತ್ತು, ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎಡ್ ಮುಗಿಸಿ ತಾವು ಬಾಲ್ಯದಲ್ಲಿ ಓದಿದ್ದ  ಕೈಸ್ಟ್ ಕಿಂಗ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವಷ್ಟರಲ್ಲಿ ಬೆಂಗಳೂರಿನ NAL ನಲ್ಲಿ ವಿಜ್ಞಾನಿಗಳಾಗಿದ್ದ  ಶ್ರೀ ಭಾಸ್ಕರ್ ಅವರೊಂದಿಗೆ ಮದುವೆಯಾದ ನಂತರ ಅವರ ವಾಸ್ತವ್ಯ  ಬೆಂಗಳೂರಿಗೆ ಬದಲಾಗುತ್ತದೆ.

NB1ಬೆಂಗಳೂರಿನ ಮತ್ತೀಕೆರೆಯಲ್ಲಿ ತಮ್ಮ ದಾಂಪತ್ಯ ಜೀವನವನ್ನಾರಂಭಿಸಿದ ನಾಗವೇಣಿ ಭಾಸ್ಕರ್ ಅವರು 1979ರಲ್ಲಿ  ಬಿಇಎಲ್ ಪ್ರೌಢಶಾಲೆಯಲ್ಲಿ ಇತಿಹಾಸ ಮತ್ತು  ಇಂಗ್ಲೀಷ್ ಶಿಕ್ಷಕಿಯಾಗಿ ಸೇರಿಕೊಂಡು ಅಲ್ಲಿ NB ಎಂಬ initials ನಲ್ಲಿಯೇ ಚಿರಪರಿಚಿತರಾಗುತ್ತಾರೆ.  ಇವೆಲ್ಲದರ ಮಧ್ಯದಲ್ಲಿ ನಾಗವೇಣಿ ಮತ್ತು ಭಾಸ್ಕರ್ ಅವರ ಸುಂದರ ದಾಂಪತ್ಯದ ಕುರುಹಾಗಿ  ಇಬ್ಬರು ಹೆಣ್ಣು ಮಕ್ಕಳ ಜನನವಾಗಿ, ವಿದ್ಯಾರಣ್ಯಪುರದಲ್ಲಿ ಸ್ವಂತಕ್ಕೊಂದು ಮನೆಯನ್ನು ಕಟ್ಟಿಸಿಕೊಂಡು ತಮ್ಮ ವಾಸ್ತವ್ಯವನ್ನು ಮತ್ತೀಕೆರೆಯಿಂದ ವಿದ್ಯಾರಣ್ಯಪುರಕ್ಕೆ ಬದಲಿಸುತ್ತಾರೆ. ಬಿಇಎಲ್ ಶಾಲೆಯಲ್ಲಿ  ಆಂಗ್ಲ ಭಾಷೆಯನ್ನು ಕಲಿಸಿ ಕೊಡಲು ಅನೇಕ ಶಿಕ್ಷಕ/ಶಿಕ್ಷಕಿಯರು ಇದ್ದ ಕಾರಣ,    ಅಂತಿಮವಾಗಿ NB ಅವರು ಕನ್ನಡ ಮತ್ತು ಆಂಗ್ಲ ಮಾಧ್ಯಮ ಎರಡರಲ್ಲೂ  ಸಮಾಜ ಶಾಸ್ತ್ರವನ್ನು ಕಲಿಸಿ ಕೊಡುವ ಸಂಪೂರ್ಣ ಜವಾಬ್ಧಾರಿ ಅವರದ್ದಾಗುತ್ತದೆ. 2001ರಲ್ಲಿ ಬಿಇಎಲ್ ಪ್ರೌಢಶಾಲೆಯಿಂದ  ಮುಂಬಡ್ತಿ ಪಡೆದು ಬಿಇಎಲ್ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತೇ ಸಮಾಜ ಶಾಸ್ತ್ರದ ಅಧ್ಯಾಪಕಿಯಾಗಿ  ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ 2011 ರಲ್ಲಿ ಒಟ್ಟು 32 ವರ್ಷಗಳ ಸುಧೀರ್ಘ ಕಾಲ ಬಿಇಎಲ್ ಶಿಕ್ಷಣ ಸಂಸ್ಥೆಯಲ್ಲಿಯೇ ಸೇವೆ ಸಲ್ಲಿಸಿ ನಿವೃತ್ತರಾದ ನಂತರ, ರಾಮ ಕೃಷ್ಣಾ ಗೋವಿಂದಾ ಎನ್ನುತ್ತಾ ದೇವರು ದಿಂಡರ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ, ಸುಮಾರು ದೇವಾಲಯಗಳಿಗೆ ಭೇಟಿ ನೀಡುತ್ತಾ, ತಮ್ಮ ಮಕ್ಕಳು ಮತ್ತು ಮುದ್ದಾದ ಮೊಮ್ಮಕ್ಕಳೊಂದಿಗೆ ದೇಶ ವಿದೇಶ ಸುತ್ತುತ್ತಾ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

NB4ಅರೇ! ಈ ರೀತಿಯಾಗಿ ಎಲ್ಲರೂ ಜೀವನ ನಡೆಸುತ್ತಲೇ ಇರುತ್ತಾರೆ. ಅದರಲ್ಲೇನು ವಿಶೇಷ? ಎಂದು ಕೇಳುತ್ತಿದ್ದರೆ, ಖಂಡಿತವಾಗಿಯೂ ಶಿಕ್ಷಕ/ಶಿಕ್ಷಕಿಯರ ಜೀವನ ಒಂದು ರೀತಿಯಾದ ವಿಶೇಷವೇ ಆಗಿರುತ್ತದೆ. ಬೇರೆಯವರೆಲ್ಲರಿಗೂ ಒಂದೋ ಎರಡೋ ಮಕ್ಕಳಾದರೆ, ಶಿಕ್ಷಕ ಶಿಕ್ಷಕಿಯರಿಗೆ ತಮ್ಮ ವೃತ್ತಿ ಬದುಕಿನ ಸಾವಿರಾರು ವಿದ್ಯಾರ್ಥಿಗಳೇ ಆವರ ಪಾಲಿನ ಮಕ್ಕಳಾಗಿ ಅವರನ್ನು ತಿದ್ದಿ ತೀಡಿ  ಸಮಾಜದಲ್ಲಿ ಅವರ ಮುಂದಿನ ಭವಿಷ್ಯವನ್ನು ರೂಪಿಸುವ ಗುರುತರವಾದ ಜವಾಬ್ಧಾರಿಯನ್ನು ಹೊಂದಿರುತ್ತಾರೆ. ಶಿಕ್ಷಕರ ಪ್ರಭಾವವು ತರಗತಿಯನ್ನೂ ಮೀರಿದ್ದಾಗಿದ್ದೂ, ವಿದ್ಯಾರ್ಥಿಗಳಲ್ಲಿ ಪ್ರತಿಯೊಂದನ್ನೂ ವಿಮರ್ಶಾತ್ಮಕವಾಗಿ ಮತ್ತು ತುಲನಾತ್ಮಕವಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ. ಶಿಕ್ಷಕರ ಬದುಕು ಸ್ವಂತಕ್ಕೆ ಸ್ವಲ್ಪ ಮತ್ತು ಸಮಾಜಕ್ಕೆ ಸರ್ವಸ್ವ ಎಂಬಂತಿತ್ತು ತಮ್ಮ ಸಂಪೂರ್ಣ ಜ್ಞಾನವನ್ನು ವಿಧ್ಯಾರ್ಥಿಗಳ ಶ್ರೇಷ್ಠತೆಗಾಗಿ ಧಾರೆ ಎರೆದು ಅವರು ಭವಿಷ್ಯದ ಭವ್ಯ ಪ್ರಜ್ಞಾವಂತ ಪ್ರಜೆಗಳಾಗುವಂತೆ ಮಾಡುವುದರಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಾರೆ. ಹಾಗಾಗಿ ಸಣ್ಣ ವಯಸ್ಸಿನಲ್ಲಿ ಶಿಕ್ಷಕರು ಬೀರುವ ಪ್ರಭಾವ, ವಿದ್ಯಾರ್ಥಿಗಳ ಮೇಲೆ ಶಾಶ್ವತವಾಗಿ ಅಚ್ಚೊತ್ತಿ ಮುಂದೊಂದು ದಿನ  ಆ ವಿದ್ಯಾರ್ಥಿಯ ಬದುಕಿನಲ್ಲಿ ಬಾರೀ ಬದಲಾವಣೆ ತರುತ್ತದೆ  ಎಂಬುದಕ್ಕೆ NB ಅವರ ಪ್ರಭಾವ ಮತ್ತು ಪ್ರೇರಣೆ  ವಯಕ್ತಿಕವಾಗಿ ನನ್ನ ಮೇಲೆ ಹೆಚ್ಚಾಗಿಯೇ ಇದೆ.

PUCಯಲ್ಲಿ Science ತೆಗೆದುಕೊಂಡು ನಂತರ  3 ವರ್ಷಗಳ Diploma in Computer Science ಮುಗಿಸಿ ಕೌಟುಂಬಿಕ ಕಾರಣಗಳಿಂದ ಹೆಚ್ಚಿನ ವ್ಯಾಸಂಗ ಮಾಡಲಾಗದೇ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿ ತಕ್ಕ ಮಟ್ಟಿಗೆ ಸಂಪಾದನೆ ಮಾಡುತ್ತಿದ್ದಂತೆಯೇ ಅಪ್ಪಾ ಅಮ್ಮ ತೋರಿಸಿದ ಹುಡುಗಿಯನ್ನು  ಮದುವೆ ಆದ ಸಂಧರ್ಭದಲ್ಲಿ, ಅಲ್ಲಾ ಮಗೂ ನಿನ್ನ ಹೆಂಡತಿ ಪದವಿ ಮುಗಿಸಿದ್ದಾಳೆ ನೀನು ನೋಡು, under graduate ಎಂದು ಹೇಳಿದ್ದನ್ನೇ ಸವಾಲಾಗಿ ಸ್ವೀಕರಿಸಿ ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣದ ಮೂಲಕ ಪದವಿಯನ್ನು ಪಡೆಯಲು ಹೋದಾಗ ಯಾವ ಪದವಿಗೆ ಸೇರಿಕೊಳ್ಳಬೇಕು? ಎಂಬ ಜಿಜ್ಞಾಸೆಯಲ್ಲಿದ್ದಾಗ, ಥಟ್  ಎಂದು ನೆನಪಾದದ್ದೇ ನಮ್ಮ NB ಅವರ ಅನುಭವ. ಕೂಡಲೇ ತಡ ಮಾಡದೇ ಅವರಂತೆಯೇ ಆರಂಭದಲ್ಲಿ PUCಯಲ್ಲಿ Science ಓದಿದ್ದರೂ ನಂತರ ಅವರೇ ಹೇಳಿಕೊಟ್ಟಿದ್ದ Political Science ನಲ್ಲಿ MA ಮುಗಿಸಿ, ಅಪ್ಪಾ Graduation ಮಾಡಿಲ್ಲಾ ಅಂತಿದ್ರೀ. ಈಗ ನೋಡಿ, ನಿಮ್ಮೆಲ್ಲರ ಆಶೀರ್ವಾದದಿಂದ Post Graduaction ಮುಗಿಸಿದ್ದೇನೆ ಎಂದು ಹೇಳಿ ಅಪ್ಪಾ ಅಮ್ಮಂದಿರ ಆಶೀರ್ವಾದ ಪಡೆದದ್ದು ನನ್ನ ಮನಸ್ಸಿನಲ್ಲಿ  ಇನ್ನೂ ಹಚ್ಚ ಹಸಿರಾಗಿಯೇ ಇದೆ.

ಮುಂದೆ ವೃತ್ತಿ ಜೀವನದಲ್ಲಿ  ವಿವಿಧ ಬಹುರಾಷ್ಟೀಯ IT ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೂ, ಬಾಲ್ಯದಲ್ಲಿ NB ಅವರು ಹೇಳಿಕೊಟ್ಟಿದ್ದ  ಇತಿಹಾಸ ಮತ್ತು ಚರಿತ್ರೆಯ ಬಗ್ಗೆ  ಇನ್ನೂ ಹೆಚ್ಚಿನ ಆಸಕ್ತಿ ಮೂಡಿ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಎಲ್ಲರೂ ಅಚ್ಚರಿ ಪಡುವಂತೆ, ಮೈಸೂರು, ಬೆಂಗಳೂರಷ್ಟೇ ಅಲ್ಲದೇ ದೇಶ ವಿದೇಶಗಳ ವಿವಿಧ ಪಟ್ಟಣಗಳ ಆಸಕ್ತಿಕರ ವಿಚಾರಗಳ ಜೊತೆ  ಅದರ ವಿಶೇಷವಾದ ಐತಿಹ್ಯಗಳ ಕುರಿತಾದ ನನ್ನ ಲೇಖನಗಳು ಮತ್ತು ವೀಡಿಯೋಗಳು ವಿವಿಧ ಪತ್ರಿಕೆಗಳು, ಮಾಸಪತ್ರಿಕೆ ಮತ್ತು ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗಿ ಜನಮನ್ನಣೆಯನ್ನು ಗಳಿಸಿ ಎಲ್ಲರೂ ಮೆಚ್ಚುಗೆ ಸೂಚಿಸುವಾಗ ಅದರ ಶ್ರೇಯ ನನಗೆ ಬಾಲ್ಯದಿಂದಲೂ ತಿಳಿಸಿದ ಮತ್ತು ಕಲಿಸಿದ ನಮ್ಮ ತಂದೆಯವರಿಗೂ ಮತ್ತು NB ಅವರಿಗೂ  ಖಂಡಿತವಾಗಿಯೂ ಸೇರುತ್ತದೆ ಎಂದರೆ ಅತಿಶಯವಲ್ಲ.ಹಾಗೆ ಪ್ರಕಟವಾದ ಲೇಖನ/ವೀಡಿಯೂಗಳನ್ನು ಓದಿ/ನೋಡಿ, ಅದಕ್ಕೆ ಮೆಚ್ಚುಗೆ ಸೂಚಿಸಿ ಮತ್ತಷ್ಟು ಬರೆಯಲು ಪ್ರೋತ್ಸಾಹ ನೀಡುತ್ತಿರುವ NB ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

NB3ಸಾಧಾರಣವಾಗಿ ಬಹುತೇಕ ಶಿಕ್ಷಕರು ಶಾಲೆಯಲ್ಲಿ ಕೇವಲ ಪಾಠಕಷ್ಟೇ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡರೆ, NB ಅವರದ್ದು ಮಾತ್ರ ಸ್ವಲ್ಪ ವಿಭಿನ್ನವಾದ ಶೈಲಿ. ಅವರದ್ದು ಕೇವಲ ಶಿಕ್ಷಕಿ ಎನ್ನುವುದಕ್ಕಿಂತಲೂ  ಮಾತೃ ಹೃದಯಿ. ಹೆತ್ತಮ್ಮನಿಗೆ ತಮ್ಮ ಮಕ್ಕಳ ಶಕ್ತಿ ಮತ್ತು ದೌರ್ಬಲ್ಯಗಳ ಪರಿಚವಿರುವಂತೆ, ಇವರಿಗೂ ಸಹಾ ತಮ್ಮ ವಿದ್ಯಾರ್ಥಿಗಳ  ಶಕ್ತಿ ಮತ್ತು ದೌರ್ಬಲ್ಯಗಳನ್ನು ಬಹಳ ಬೇಗ ಅರಿತು ಕೊಳ್ಳುತ್ತಿದ್ದದ್ದಲ್ಲದೇಎಲ್ಲರಿಗೂ ಅರ್ಥವಾಗುವಂತೆ  ಮತ್ತು ಎಂದೋ ನಡೆದ ಚರಿತ್ರೆಯು ನಮ್ಮ ಎದುರಿಗೇ ನಡೆಯುತ್ತಿದೆಯೇನೋ ಎನ್ನುವಂತೆ ಕಣ್ಣಿಗೆ ಕಟ್ಟುವಂತೆ ಹೇಳಿಕೊಡುತ್ತಿದ್ದದ್ದೇ, ಬಹುಶಃ ನನ್ನ ಮನಸ್ಸಿನಲ್ಲಿ ಗಾಢವಾದ ಪರಿಣಾಮ ಬೀರಿದೆ ಎಂದು ಹೇಳಿಕೊಳ್ಳುವುದರಲ್ಲಿ ಹೆಮ್ಮೆಯಿದೆ. ಹಾಗಾಗಿಯೇ  ನಮ್ಮ ತರಗತಿಯಲ್ಲಿ  ಆವರ ವಿಷಯದಲ್ಲಿ ಯಾರೂ ಸಹಾ ನಪಾಸಾಗಿಯೇ ಇರಲಿಲ್ಲಾ ಎನ್ನುವುದು ಸಹಾ ಅವರ ಹೆಗ್ಗಳಿಕೆಯೇ.

ಸುಮಾರು 35ಕ್ಕೂ ಅಧಿಕ ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿದ್ದರೂ ಸಹಾ ನಮ್ಮ NB ಅವರು ತಾವಾಯಿತು ತಮ್ಮದಾಯಿತು, ಎನ್ನುವಂತಹ ಒಂದು ರೀತಿಯ ಎಲೆಮರೆ ಕಾಯಿಯಂತಹ ಅಂತರ್ಮುಖಿ ವ್ಯಕ್ತಿತ್ವದವರು. ಸಾಮಾನ್ಯವಾಗಿ ತರಗತಿ ಮುಗಿದ ನಂತರ ಒಂದೆರಡು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಕೈಯಲ್ಲಿ ತಮ್ಮ ಪುಸ್ತಕ ಕೊಟ್ಟು Staff Room ವರೆಗೂ ತೆಗೆದುಕೊಂಡು ಹೋಗುವುದು ಮತ್ತು ಅದರ  ಕೃತಾರ್ಥತೆಯಿಂದ ಅಂತಹ ವಿದ್ಯಾರ್ಥಿಗಳಿಗೆ ನಾಲ್ಕೈದು ಅಂಕಗಳನ್ನು ಹೆಚ್ಚಿಗೆ ಕೊಡುವುದು ಹೆಚ್ಚಿನ ಶಿಕ್ಷಕರ ವಾಡಿಕೆಯಾದರೆ, NB ಅವರು ತರಗತಿಗೆ ಬರುವುದಾಗಲೀ, ಹೋಗುವುದಾಗಲೀ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಪ್ರತೀ ಪರೀಕ್ಷೆ ನಡೆದು ಉತ್ತರ ಪತ್ರಿಕೆಗಳನ್ನು ಎಲ್ಲರಿಗೂ ಕೊಡುವಾಗಲೂ ಚೆನ್ನಾಗಿ  ಅಂಕಗಳನ್ನು ಪಡೆದವರನ್ನು ಹೇಗೆ ನೋಡುತ್ತಿದ್ದರೋ ಅದೇ ರೀತಿ ಕಡಿಮೆ ಅಂಕಗಳನ್ನು ಪಡೆದವರನ್ನೂ ಸಂತೈಸುತ್ತಾ, ಮುಂದಿನ ಬಾರಿ ಚೆನ್ನಾಗಿ ಓದಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯಬೇಕು ಎಂದು ಪ್ರೋತ್ಸಾಹಿಸುತ್ತಿದ್ದರೇ ಹೊರತು, ಅವರೆಂದೂ ಯಾರಿಗೂ ಗದರಿದ್ದಾಗಲೀ ಏರುಧನಿಯಲ್ಲಿ ಮಾತನಾಡಿದ್ದಾಗಲೀ ನೆನಪೇ ಇಲ್ಲ. ಎಲ್ಲದ್ದಕ್ಕಿಂದಲೂ ಹೆಚ್ಚಾಗಿ ಉಳಿದ ಶಿಕ್ಷಕರಂತೆ ಪಾಠದ ಹೊರತಾಗಿ ತಮ್ಮ ವಯಕ್ತಿಕ ಜೀವನ ಇಲ್ಲವೇ ಸಿದ್ಧಾಂತಗಳನ್ನು ಎಂದಿಗೂ ಯಾರ ಮೇಲೂ ಬಲವಂತವಾಗಿ ಹೇರಲಿಲ್ಲ ಎನ್ನುವುದು ಅವರ ಮತ್ತೊಂದು ವಿಶೇಷ.

ಇದನ್ನೆಲ್ಲಾ ಅರಿತೋ ಏನೋ ನಮ್ಮ ಪೂರ್ವಜರು ಮಾತೃದೇವೋ ಭವ ಪಿತೃದೇವೋ ಭವದ ನಂತರ ಆಚಾರ್ಯದೇವೋ ಭವ ಎಂದು ಗುರುಗಳಿಗೆ ತಂದೆ ತಾಯಿಯರಷ್ಟೇ ಅತ್ಯುನ್ನತವಾದ ಸ್ಥಾನವನ್ನು ಕೊಟ್ಟಿದ್ದಾರೆ. ಅಂತಹ ಗುರುಗಳಿಗೆ ಅನ್ವರ್ಥವೆಂಬಂತೆಯೇ ಇರುವ ನಮ್ಮ ನೆಚ್ಚಿನ ಗುರುಗಳಾದ ಶ್ರೀಮತಿ ನಾಗವೇಣಿ ಭಾಸ್ಕರ್ ಅವರಿಗೆ ಶಯಾಯುಷಿಗಳಾಗಿ ತಮ್ಮ ಮಗನ ಮನೆಯಲ್ಲಿ ಎಲ್ಲರಿಗೂ ಪ್ರೇರಣಾದಾಯಿಗಳಾಗಿರುವ ಅವರ ತಂದೆಯಂತೆಯೇ, ಆ ಭಗವಂತ  ಇನ್ನೂ ಹೆಚ್ಚಿನ ಆಯುರಾರೋಗ್ಯವನ್ನು ಕೊಟ್ಟು ಇನ್ನೂ ನೂರ್ಕಾಲ ನನ್ನಂತಹ ಸಾವಿರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಾರ್ಗದರ್ಶಕರಾಗಿರುವಂತಾಗಲಿ ಎಂದು ಈ ಶಿಕ್ಷಕರ ದಿನಾಚರಣೆಯಂದು ಕೇಳಿಕೊಳ್ಳೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

Leave a comment