ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?

bombe4ದಸರಾ ಹಬ್ಬ ನಮ್ಮ ಕನ್ನಡಿಗರ ನಾಡಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಹಿಡಿದು ದಶಮಿಯವರೆಗೂ ಹತ್ತು ದಿನಗಳವರೆಗೆ ಆಚರಿಸಲ್ಪಡುವ ವಿಶೇಷವಾದ ಹಬ್ಬ.  ಇದೇ ಹಬ್ಬವನ್ನು ದೇಶಾದ್ಯಂತ ದುರ್ಗಾ ಪೂಜೆಯ ಹೆಸರಿನಲ್ಲಿ  ಹತ್ತು ದಿನಗಳ ಆಚರಿಸಿದರೆ ಗುಜರಾತಿನಲ್ಲಿ ಈ ನವರಾತ್ರಿಯ ಹತ್ತೂ ದಿನಗಳು ಉಪವಾಸ ಮಾಡಿ ರಾತ್ರಿ ಫಲಾಹಾರ ಸೇವಿಸಿದ ನಂತರ ದಾಂಡಿಯ ಎಂಬ ಹೆಸರಿನಲ್ಲಿ ವಿವಿಧ ಬಗೆಯ ಕೋಲಾಟದ ಮೂಲಕ ಬಹಳ ವರ್ಣಮಯವಾಗಿ ಆಚರಿಸಲಾಗುತ್ತದೆ. ಹೀಗೆ ಒಂಭತ್ತು ದಿನಗಳ ಕಾಲ ಅದ್ದೂರಿಯಿಂದ ಆಚರಿಸಿದ ನಂತರ ಹತ್ತನೇ ದಿನ ಲಕ್ಷಾಂತರ ಜನರ ಸಮ್ಮುಖದಲ್ಲಿ  ಭಾರೀ ಮೆರವಣಿಗೆಯೊಂದಿಗೆ ಕೆರೆ ಕಟ್ಟೆಗಳಲ್ಲಿ ವಿಸರ್ಜಿಸಲ್ಪಡುವ ಹಬ್ಬ.  ಉತ್ತರ ಭಾರತದಲ್ಲಂತೂ ಬಹುತೇಕ ಜನರು ಉಪವಾಸ ವ್ರತಾಚಣೆಯಲ್ಲಿದ್ದು ಬಾರೀ ಭಕ್ತಿ ಭಾವನೆಗಳಿಂದ ಆಚರಿಸಲ್ಪಡುವ ಹಬ್ಬವಾದರೆ ನಮ್ಮ ದಕ್ಷಿಣ ಭಾರತದಲ್ಲಿ ಅದಕ್ಕೆ ತದ್ವಿರುಧ್ಧವಾಗಿ ಅತ್ಯಂತ ಸರಳ ಮಡಿ ಆದರೆ ಬಾರೀ ವೈಭವದಿಂದ ಆಚರಿಸಲ್ಪಡುತ್ತದೆ. ಅಂದೆಲ್ಲಾ  ರಾಜ ರಾಣಿಯನ್ನು ದೇವರೆಂದೇ ಭಾವಿಸುವ ಕಾಲವಾಗಿದ್ದು,  ರಾಜಾ ಪ್ರತ್ಯಕ್ಷ ದೇವತಾ ಎಂಬ ಭಾವನೆಯಿಂದ, ದಸರಾ ಹಬ್ಬದ ಸಮಯದಲ್ಲಿ   ರಾಜಾರಾಣಿಯರ ಸ್ವರೂಪವಾಗಿ ಪಟ್ಟದ ಬೊಂಬೆಗಳನ್ನು ಮನೆ ಮನೆಗಳಲ್ಲಿ ಕೂರಿಸಿ ಪೂಜಿಸುವುದು ನಡೆದುಕೊಂಡು ಬಂದಿರುವ ಸತ್ಸಂಪ್ರದಾಯ.

bombe2ಸಾಮಾನ್ಯವಾಗಿ ದಸರಾ ಹಬ್ಬ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲೇ ಬರುತ್ತಿದ್ದ ಕಾರಣ  ಅಂದೆಲ್ಲಾ ಶಾಲೆಗಳಲ್ಲಿಯೂ ಸಹಾ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಅರ್ಧವಾರ್ಷಿಕ ಪರೀಕ್ಷೆಗಳನ್ನು ಮುಗಿಸಿ ಅಕ್ಟೋಬರ್ ಒಂದನೇ ತಾರೀಖು ಫಲಿತಾಂಶವನ್ನು ಪ್ರಕಟಿಸಿ  ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಿಂದ ಸುಮಾರು 2-3 ವಾರಗಳ ಕಾಲ ದಸರಾ ರಜೆ  ಇರುತ್ತಿತ್ತು.  ಹೀಗೆ ದಸರಾ ಹಬ್ಬಕ್ಕೆ 2-3 ದಿನಗಳ ಮುಂಚಿತವಾಗಿಯೇ ಕರ್ನಾಟಕದ ಬಹುತೇಕರ ಮನೆಗಳ ಆಟ್ಟದಲ್ಲಿ ಜೋಪಾನವಾಗಿ ಎತ್ತಿಟ್ಟಿರುತ್ತಿದ್ದ ಗೊಂಬೆಗಳನ್ನು ಕೆಳಗಿಳಿಸಿ ಸ್ವಚ್ಚಗೊಳಿಸಿ, ಮದುವೆಯ ಸಂದರ್ಭದಲ್ಲಿ  ತವರು ಮನೆಯಿಂದ ಕೊಡಲ್ಪಟ್ಟಿದ್ದ  ಪಟ್ಟದ  ರಾಜಾ ಮತ್ತು  ರಾಣಿ ಗೊಂಬೆಗಳಿಗೆ ಅಂದ ಚಂದದಿಂದ  ಕಚ್ಚೆ ಪಂಚೆ, ಮೈಸೂರು ಪೇಟ, ಝರಿ ಸೀರೆ ಕುಪ್ಪಸಗಳನ್ನು ತೊಡಿಸಿ ಒಪ್ಪ ಓರಣವಾಗಿ ಅಲಂಕಾರಿಕವಾಗಿ  ಕನ್ನಡಿ ಕಳಸಗಳೊಂದಿಗೆ ಜೋಡಿಸುವುದನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು.  ದಶಾವತಾರದ ಗೊಂಬೆಗಳು ಒಂದು ಸಾಲಾದರೆ, ದೇವಸ್ಥಾನದ ರಾಜಗೋಪುರದ ಜೊತೆಯಲ್ಲಿ  ರಾಮ, ಸೀತೆ ಲಕ್ಷ್ಮಣ ಮತ್ತು ಆಂಜನೇಯರದ್ದು ಮತ್ತೊಂದು ಕಡೆ.  ದೇವಸ್ಥಾನದ ಮುಂದೆ ವಾದ್ಯಮೇಳಗಳ ತಂಡದ ಬೊಂಬೆಗಳಿದ್ದರೆ ಅವುಗಳ ಮುಂದೆ ಕೀಲು ಕುದುರೆ ಚೋಮನ ಕುಣಿತದ ಗೊಂಬೆಗಳು.  ಇವುಗಳ ಬದಿಯಲ್ಲಿ ವಿವಿಧ ದೇವಾನು ದೇವತೆಗಳು ಬೊಂಬೆಗಳೂ, ಆಚಾರ್ಯ ತ್ರಯರಾದ ಶಂಕರ, ಮಧ್ವಾಚಾರ್ಯರು ಮತ್ತು ರಾಮಾನುಜರ ಜೊತೆ ಬುದ್ಡ, ಬಸವ ವಿವೇಕಾನಂದರ ಸಮ್ಮಿಳಿನಗಳ ಬೊಂಬೆ ಮಗದೊಂದಡೆ.   ಡೊಳ್ಳು ಹೊಟ್ಟೆಯ ಶೆಟ್ಟರ ಜೊತೆ  ಆತನ ದಡೂತಿ  ಹೆಂಡತಿ ದಿನಸಿಗಳೊಂದಿಗೆ ವ್ಯಾಪಾರ ಮಾಡುತ್ತಿರುವ ಗೊಂಬೆಗಳು ಮಗದೊಂದೆಡೆ. ಉದ್ಯಾನವನದಲ್ಲಿ ವಿವಿಧ ಗಿಡ ಮರಗಳೊಂದಿಗೆ ಆಟವಾಡುತ್ತಿರುವ ಮಕ್ಕಳ ಗೊಂಬೆಗಳು ಅದರ ಜೊತೆ ಜೊತೆಯಲ್ಲಿಯೇ ಮೃಗಾಲಯವನ್ನು ತೋರಿಸುವಂತೆ ಕಾಡು ಪ್ರಾಣಿಗಳಾದ  ಆನೆ, ಒಂಟೆ, ಹುಲಿ, ಸಿಂಹ, ಜಿಂಕೆ, ನರಿ ಹೀಗೆ ಹಲವಾರು ಗೊಂಬೆಗಳು ಜೊತೆ   ಇತ್ತೀಚೆಗೆ ಕ್ರಿಕೆಟ್, ಫುಟ್ವಾಲ್ ಆಟಗಾರರ ಗೊಂಬೆಗಳನ್ನು ಜೋಡಿಸುವುದೂ ಉಂಟು. ಒಟ್ಟಿನಲ್ಲಿ ಅವರವರ ಕಲ್ಪನೆಗೆ  ತಕ್ಕಂತೆ, ಅಭಿರುಚಿಗೆ ತಕ್ಕಂತೆ ವಿವಿಧ ರೀತಿಯ ಗೊಂಬೆಗಳನ್ನು ಮನೆಯಲ್ಲಿ ಅಲಂಕಾರಿಕವಾಗಿ ಜೋಡಿಸಿ ಪ್ರತಿದಿನವೂ ದುರ್ಗೆಯ ವಿವಿಧ ರೂಪಗಳಾದ ಶೈಲಪುತ್ರಿ,  ಬ್ರಹ್ಮಚಾರಿಣಿ, ಚಂದ್ರಘಂಟಾ, ಖುಷ್ಮಾಂಡ, ಸ್ಕಂದಮಾತ, ಕಾತ್ಯಾಯನಿ, ಕಾಳರಾತ್ರಿ,  ಮಹಾಗೌರಿ  ಮತ್ತು ಸಿದ್ಧಿ ಧಾತ್ರಿ ಹೀಗೆ ನಾನಾ ರೂಪಗಳಿಂದ ಅಲಂಕರಿಸಲ್ಪಟ್ಟು ಪ್ರತೀ ದಿನಕ್ಕೂ ಪ್ರತ್ಯೇಕ ಬಣ್ಣದ, ಹೂವು ಮತ್ತು ಪ್ರಸಾದಗಳ ಮೂಲಕ ಪೂಜಿಸಿ ಸಂಜೆ ಅವುಗಳಿಗೆ ಆರತಿ ಮಾಡಿ ಮನೆಯ  ಸುತ್ತ ಮುತ್ತಲಿರುವ ಮುತ್ತೈದೆಯರು ಮತ್ತು  ಮಕ್ಕಳನ್ನು ಕರೆದು ಪ್ರತಿದಿನವೂ ಬೊಂಬೆ ಬಾಗಿನ ಕೊಡುವುದು ನಡೆದುಕೊಂಡು ಬಂದಿರುವಂತಹ ಸಂಪ್ರದಾಯವಾಗಿತ್ತು.

bombe6ನಮ್ಮ ಬಾಲ್ಯದಲ್ಲಿ ದಸರಾ ಹಬ್ಬ ಬಂದಿತೆಂದರೆ ನಮೆಗೆಲ್ಲಾ ಖುಷಿಯೋ ಖುಷಿ. ಎರಡು ಮೂರು ವಾರಗಳ ಕಾಲ ಶಾಲೆಗಳಿಗೆ ರಜಾ ಕೊಟ್ಟಿದ್ದರೂ ಸಾಕಷ್ಟು ಮನೆಗೆಲಸ (ಹೋಮ್ ವರ್ಕ್) ಕೊಟ್ಟಿದ್ದರೂ ಮಜಾ  ಮಾಡುವುದೇನೂ ಕಡಿಮೆ ಇರ್ತಾ ಇರಲಿಲ್ಲ. ಅಮ್ಮ ಮತ್ತು ಅಕ್ಕ ತಂಗಿಯರೊಂದಿಗೆ ಗೊಂಬೆಗಳನ್ನು ಜೋಡಿಸಲು ಹಂತ ಹಂತದ ಮೆಟ್ಟಿಲುಗಳನ್ನು (ಹಿಂದೆಲ್ಲಾ ಬೊಂಬೆಗಳನ್ನು ಇಡುತ್ತಿದ್ದ   ಡಬ್ಬಗಳನ್ನು ಜೋಡಿಸಿ ಅವುಗಳ ಮೇಲೆ ಹಲಗೆಯನ್ನಿರಿಸುತ್ತಿದ್ದರೆ, ಇಂದು ಅವುಗಳಿಗಾಗಿಯೇ ವಿಶೇಷರೀತಿಯ ಸ್ಟಾಂಡ್ಗಳು ಬಂದಿದ್ದು ಅವುಗಳಿಗೆ ನೆಟ್ ಮತ್ತು ಬೋಳ್ಟ್ಗಳನ್ನು  ಹಾಕಿ ಬಂಧಿಸಬೇಕಷ್ಟೇ) ಜೋಡಿಸುವುದಕ್ಕೆ  ಸಹಕರಿಸುವುದರೊಂದಿಗೆ,  ಗೊಂಬೆಗಳ ಉದ್ಯಾನವನ ಮತ್ತು ಮೃಗಾಲಯಗಳಲ್ಲಿ  ಹದವಾಗಿ ಮರಳನ್ನು ಹರಡಿ ಅದರಲ್ಲಿ  ರಾಗಿ, ಗೋದಿ,  ಹೆಸರುಕಾಳು ಹಾಕಿ ಪ್ರತಿದಿನ ಅವುಗಳಿಗೆ ನೀರುಣಿಸಿ ಅವುಗಳು ಮೆಲ್ಲಗೆ ಮೊಳಕೆಯೊಡೆದು ಪೈರಗಳಾಗುತ್ತಿದ್ದವನ್ನು ಕಾಪಾಡುವುದು ನಮ್ಮ ಜವಾಬ್ಡಾರಿಯಾಗಿತ್ತು.

dasara7ಇನ್ನು ಸಂಜೆಯಾಯಿತಂದರೆ ಕೈಕಾಲು ಮುಖ ಶುಭ್ರವಾಗಿ ತೊಳೆದುಕೊಂಡು ಚೆಂದ ಚೆಂದ ದಿರಿಸುಗಳನ್ನು ಧರಿಸಿ ಬಗೆ ಬಗೆಯ ರೀತಿಯ ಜಡೆಗಳನ್ನು ಹಾಕಿಕೊಂಡು  ಅಲಂಕಾರಗಳನ್ನು ಮಾಡಿಕೊಂಡು ಸಿಧ್ಧವಾಗಿರುತ್ತಿದ್ದ ನಮ್ಮ ಅಕ್ಕ ತಂಗಿಯರೊಂದಿಗೆ ಕೈಯಲ್ಲಿ ಒಂದು ಚೆಂದದ ಚೀಲವೋ ಇಲ್ಲವೇ ಸುಂದರ ಡಬ್ಬಿಯನ್ನು ಹಿಡಿದುಕೊಂಡು  ನಮ್ಮ ಮನೆಯ ರಸ್ತೆ ಮತ್ತು ಅಕ್ಕಪಕ್ಕದ ರಸ್ತೆಯಲ್ಲಿ ಗೊಂಬೆ ಕೂರಿಸಿರುವವರ ಮನೆಗಳ  ಬೊಂಬೆ ನೋಡಲು ಹೋಗುತ್ತಿದ್ದೆವು. ಬೊಂಬೆಗಳನ್ನು ನೋಡುವುದು ಎನ್ನುವುದಕ್ಕಿಂತ ಅವರ ಮನೆಗಳಲ್ಲಿ ಕೊಡುತ್ತಿದ್ದ ಬೊಂಬೆ ಬಾಗಿಣದವೇ ನಮಗೆ ಪ್ರಾಧಾನ್ಯವಾಗಿರುತ್ತಿತ್ತು. ಆವರೂ ಸಹಾ ಬಂದ ತಕ್ಷಣ ಬೊಂಬೆ ಬಾಗಿಣವನ್ನೇನು ಕೊಡುತ್ತಿರಲಿಲ್ಲ. ಎಲ್ಲರ ಮನೆಗಳಲ್ಲೂ ನಾವು ಕಲಿತಿದ್ದ ಹೊಸಾ ಶ್ಲೋಕವನ್ನೋ, ಇಲ್ಲವೇ ಹಾಡುಗಳನ್ನೋ ಹಾಡಿ (ಒಂಭತ್ತೂ ದಿನವವೂ  ಬೇರೆ ಬೇರೆಯದನ್ನೇ ಹಾಡಬೇಕಾಗಿತ್ತು)  ಅವರು ಕೊಟ್ಟ, ಕೊಬ್ಬರಿ ಮೀಠಾಯಿ, ಲಡ್ಡು, ಚಕ್ಕುಲಿ, ಕೋಡುಬಳೆ, ಏನೂ ಮಾಡಲಾಗದಿದ್ದಲ್ಲಿ ಕನಿಷ್ಟ ಪಕ್ಷ ಬಿಸ್ಕೆಟ್ ಇಲ್ಲವೇ ಪೆಪ್ಪರ್ಮೆಂಟ್ ಪಡೆದುಕೊಂಡು ಎಲ್ಲವನ್ನೂ ತಂದಿದ್ದ ಚೀಲದಲ್ಲೋ ಇಲ್ಲವೇ ಡಬ್ಬಿಯಲ್ಲಿ ಜೋಪಾನವಾಗಿ ಇರಿಸಿಕೊಂಡು ಮತ್ತೊಂದು ಮನೆಯತ್ತ ದೌಡಾಯಿ,  ಕಡೆಗೆ ಮನೆಗೆ ಹೋಗಿ ಎಲ್ಲರೂ ಹಂಚಿಕೊಂಡು ತಿನ್ನುತ್ತಿದ್ದದ್ದು ಇನ್ನೂ ಮನದಲ್ಲಿ ಹಚ್ಚ ಹಸಿರಾಗಿಯೇ ಇದೆ.

bombe8ಇನ್ನು ಏಳನೇ ದಿನ ಬರುವ  ಸರಸ್ವತಿ ಪೂಜೆಗೆ ಒಂದು ದಿನ ಮುಂಚೆಯೇ ನಮಗೆಲ್ಲಾ ಕಷ್ಟಕರವಾಗಿದ್ದ ಇಂಗ್ಲೀಷ್, ಗಣಿತ ಮತ್ತು ವಿಜ್ಞಾನಗಳ ಪುಸ್ತಕವನ್ನು ಪೂಜೆಗಿರಿಸಿ ಮುಂದಿನ ನಾಲ್ಕು ದಿನ ಅಪ್ಪಾ ಅಮ್ಮಂದಿರು ಓದು ಎಂದರೆ,  ಹೇ ಹೇ, ವಿದ್ಯೆ ಚೆನ್ನಾಗಿ ನಮ್ಮ ತಲೆಗೆ ಹತ್ತಲಿ ಎಂದು ಸರಸ್ವತಿ ಪೂಜೆಗೆ ಎಲ್ಲಾ ಪುಸ್ತಕಗಳನ್ನು ಇಟ್ಟಿದ್ದೇವೆ ಇನ್ನು ಹೇಗೆ ಓದುವುದು? ಎಂಬ ಸಬೂಬನ್ನು ಹೇಳುತ್ತಿದ್ದನ್ನು  ನೆವೆಸಿಕೊಂಡರೆ ಇಂದಿಗೂ ನಮಗೆ ನಗು ಬರುತ್ತದೆ. ಇನ್ನು ಒಂಭತ್ತನೇ ದಿನ ಆಯುಧ ಪೂಜೆಯಂದು ಮನೆಯಲ್ಲಿರುತ್ತಿದ್ದ ಸೈಕಲ್ ಮತ್ತು ವಿವಿಧ ಆಯುಧಗಳು, ಸಂಗೀತ ಪರಿಕರಗಳನ್ನು ಚನ್ನಾಗಿ ತೊಳೆದು ಒರೆಸಿ ಅದಕ್ಕೆ ವಿಭೂತಿ ಮತ್ತು ಕುಂಕುಮ ಹಚ್ಚಿ ಭಕ್ತಿಯಿಂದ ಪೂಜೆ ಮಾಡಿ ಸಂಜೆ ನಮ್ಮ ಮನೆಯ ಅಕ್ಕ ಪಕ್ಕದಲ್ಲಿರುವ ಎತ್ತಿನ ಗಾಡಿ ಮತ್ತು ಲಾರಿಗಳಿಗೆ ಪೂಜೆ ಮಾಡಿ ಅವರು ಕೊಡುತ್ತಿದ್ದ ಪುರಿ, ಕಾರಾಸೇವೆ ಮತ್ತು ಬತ್ತಾಸುಗಳನ್ನು ಜೋಬಿಗೆ ಹಾಕಿಕೊಂಡು  ಆ ಗಾಡಿಗಳ ಮೇಲೆ ಕುಳಿತುಕೊಂಡು ಅವರು ಹಾಕಿಸುತ್ತಿದ್ದ ಒಂದು ದೊಡ್ಡ ರೌಂಡನ್ನಂತೂ ಮರೆಯುವ ಹಾಗೇ ಇಲ್ಲಾ.

ಇನ್ನು ಹತ್ತನೇ ದಿನ ವಿಜಯದಶಮಿಯಂದು ಮನೆಯಲ್ಲಿ ಅಮ್ಮಾ ಮಾಡಿರುತ್ತಿದ್ದ ವಿಶೇಷವಾದ ಆಡುಗೆಗಳನ್ನು ಸವಿದು ಸಂಜೆ  ಬನ್ನೀ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ, ಬನ್ನೀ ಎಲೆಗಳನ್ನು ಬಂಧು ಬಾಂಧವರೊಂದಿಗೆ ಪರಸ್ಪರ ವಿನಿಮಯ ಮಾಡಿಕೊಂಡು ಹತ್ತಿರದ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ರಾತ್ರಿ ಪಟ್ಟದ ಗೊಂಬೆಗಳನ್ನು ವಿಸರ್ಜಿಸಿ ಮಾರನೆಯ ದಿನ ಪುನಃ ಜೋಪಾನವಾಗಿ ಬೊಂಬೆಗಳನ್ನು ದಬ್ಬಗಳಲ್ಲಿ ಇರಿಸಿ ಆಟ್ಟಕ್ಕೇಸುವುದರೊಂದಿಗೆ  ದಸರಾ ಹಬ್ಬ ಮುಕ್ತಾಯವಾಗುತ್ತಿತ್ತು.

Children play with a man dressed as Santa Claus during a Christm

ಆದರೆ ಆಧುನಿಕತೆ ಮತ್ತು ಅಂಧ ಪಾಶ್ಚಾತ್ಯ ಅನುಕರಣೆಯ ನೆಪದಲ್ಲಿ ಇಂದು ಎಲ್ಲವೂ ಸಂಪೂರ್ಣವಾಗಿ ಬದಲಾಗಿದೆ. ಮಕ್ಕಳಿಗೆ ದಸರಾ ಹಬ್ಬ ಮರೀಚಿಕೆಯಾಗಿದ್ದು ಅದೇ ಸಮಯದಲ್ಲೇ ಪರೀಕ್ಷೆ ನಡೆಸಿ, ಹಿಂದೆ ಕೊಡುತ್ತಿದ್ದ 2-3 ವಾರಗಳ ರಜಾದ ಬದಲಿಗೆ ಇಂದು  ಕಾರ್ಪೋರೇಟ್ ಸಂಸ್ಥೆಯಂತೆ ಕೇವಲ ಆಯುಧ ಪೂಜೆ ಮತ್ತು ವಿಜಯದಶಮಿಗೆ ಮಾತ್ರವೇ ಸೀಮಿತವಾಗಿದ್ದು ಈ ದಸರಾ ರಜೆಗಳನ್ನು ನಮ್ಮ ದೇಶಕ್ಕೆ ಸಂಬಂಧವೇ ಪಡದಿರುವ ಡಿಸೆಂಬರ್ ವರ್ಷಾದ್ಯಂತದಲ್ಲಿ ಬರುವ ಕ್ರಿಸ್ ಮಸ್ ಮತ್ತು ಹೊಸಾ ದಿನಾಚರಣೆಯ ನೆಪದಲ್ಲಿ ಕೊಡುವ ಕೆಟ್ಟ ಸಂಪ್ರದಾಯ ಹುಟ್ಟು ಹಾಕುವ ಮೂಲಕ ನಮ್ಮ ಮಕ್ಕಳಿಗೆ ಪರೋಕ್ಷವಾಗಿ ನಮ್ಮ ದಸರಾ ಹಬ್ಬದ ಪರಂಪರೆ ಮತ್ತು ಸೊಗಡನ್ನು ಸವಿಯುವ ಸುವರ್ಣಾವಕಾಶವನ್ನು ತಪ್ಪಿಸುತ್ತಿರುವುದಲ್ಲದೇ, ಬಲವಂತವಾಗಿ ಹ್ಯಾಲೋವಿನ್ ಡೇ, ಕ್ರಿಸ್ಮಸ್ ಸ್ಯಾಂತಾಕ್ಲಾಸ್ ಮತ್ತು ನ್ಯೂ ಇಯರ್ ಎಂಬ  ನೆಪದಲ್ಲಿ ಮೋಜು ಮಸ್ತಿಗಳನ್ನು ಮಾಡುವುದೇ ನಿಜವಾದ ಹಬ್ಬ ಎಂದು ಚಿಕ್ಕ ವಯಸ್ಸಿನ ಮಕ್ಕಳ ತಲೆಗೆ ತುಂಬುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ.

bombe5ಆಂದೆಲ್ಲಾ ನಮ್ಮ ಬಳಿ ಹಣವಿರಲಿಲ್ಲ ಆದರೆ ಹಬ್ಬವನ್ನು ಆಚರಿಸುವ ಸಂಭ್ರಮವಿತ್ತು ಮತ್ತು ಹಂಬಲವಿತ್ತು. ಹಾಗಾಗಿ ಇದ್ದ ಹಣದಲ್ಲೇ ಅಚ್ಚು ಕಟ್ಟಾಗಿ ಸಂಪ್ರದಾಯಕವಾಗಿ ದಸರಾ ಸಮೇತ ಎಲ್ಲಾ ಹಬ್ಬಗಳನ್ನು ಆಚರಿಸುತ್ತಿದ್ದೆವು. ಇಂದು ಎಲ್ಲರ ಬಳಿಯೂ ಅಗತ್ಯಕ್ಕಿಂತಲೂ ಹೆಚ್ಚಿನ ಹಣವಿದ್ದರೂ ಹಬ್ಬಗಳನ್ನು ಆಚರಿಸುವ ಹಂಬಲವೇ ಇಲ್ಲವಾಗಿದೆ ಎನ್ನುವುದಕ್ಕಿಂತಲೂ ಬಲವಂತವಾಗಿ ನಮ್ಮ ಹಬ್ಬಗಳ ಆಚರಣೆಗೆ ಅಡ್ಡಿಯನ್ನುಂಟು ಮಾಡಲಾಗುತ್ತಿದೆ.  ಅಷ್ಟೇ ಅಲ್ಲದೇ ಎಲ್ಲವೂ ಯಾಂತ್ರೀಕೃತವಾಗಿ ಸಮಯದ ಅಭಾವ ಮತ್ತು ಕೆಲಸದ ಧಾವಂತ ಎಂಬ ನೆಪವೊಡ್ಡಿ ಹಬ್ಬ ಹರಿದಿನಗಳ ಮಡಿ ಹುಡಿ ಎಲ್ಲವೂ ಈಗ ಸಾಂಕೇತಿವಾಗಿ ದೇವರಿಗೆ ಕೈಮುಗಿದು, ಅಡುಗೆ ಮನೆಯೆಲ್ಲಾ ಬಂದ್ ಆಗಿ ಸ್ವಿಗಿ, ಜ್ಯೋಮ್ಯಾಟೋಗಳ ಮೂಲಕ ಶುಚಿಯೂ ಇಲ್ಲದ ಮತ್ತು ಯಾರೋ ಮಾಡಿದ ಅಡುಗೆಯನ್ನು ತಿನ್ನುವ ಕರ್ಮ ಬಂದಿರುವುದು ನಿಜಕ್ಕೂ ದೌರ್ಭಾಗ್ಯ ಎಂದರೂ ತಪ್ಪಾಗದು.

bombe3ಪ್ರತೀ ದಸರಾ ಹಬ್ಬಕ್ಕೆ ಒಂದಷ್ಟಾದರೂ ಹೊಸ ಹೊಸಾ ಬೊಂಬೆಗಳನ್ನು ಖರೀಧಿಸಲೇ ಬೇಕೆಂಬ ಅಲಿಖಿತ ನಿಯಮವಿರುವ ಕಾರಣ, ಹೋದ ಬಂದ ಕಡೆಯೆಲ್ಲೆಲ್ಲಾ ಅಲ್ಲಿನ ಸಂಪ್ರದಾಯದ ಬೊಂಬೆಗಳನ್ನು ಖರೀದಿಸಿ, ದಸರಾ ಹಬ್ಬಕ್ಕೆ ಒಂದೆರಡು ವಾರಗಳ ಮುಂಚೆಯೇ ಬೊಂಬೆಗಳ ಅಲಂಕಾರ ಮಾಡಿ ಮನೆಯವರೆಲ್ಲಾ ಸೇರಿ ಬೊಂಬೆ ಕೂರಿಸಿ ಸಂಭ್ರಮಿಸುತ್ತಿದ್ದ ಕಾಲ ಇಂದು ಬಹುತೇಕರ ಮನೆಗಳಲ್ಲಿ ಮರೆಯಾಗಿ ಕೇವಲ ಶಾಸ್ತ್ರಕ್ಕೆಂದು ದೇವರ ಮನೆಯಲ್ಲಿ ಪಟ್ಟದ ಗೊಂಬೆಗಳಿಗೇ ದಸರಾ ಹಬ್ಬ ಸೀಮೀತವಾಗಿರುವುದು ಶೋಚನೀಯವೇ ಸರಿ. ಇನ್ನು  ಆಯುಧ ಪೂಜೆ ಮತ್ತು ವಿಜಯದಶಮಿಯ ಜೊತೆಗೆ ವಾರಾಂತ್ಯವೂ ಸೇರಿ ಬಂದಿತೆಂದರೆ ಮನೆಗೆ ಬೀಗ ಹಾಕಿಕೊಂಡು ಮಕ್ಕಳು ಮರಿಯೊಂದಿಗೆ ವಿಹಾರ ತಾಣಗಳಿಗೆ ಹೋಗಿ ಮೋಜು ಮಸ್ತು ಮಾಡುವ ಕೆಟ್ಟ ಆಚರಣೆಯೂ ಸಹಾ ನಮ್ಮ ಮುಂದಿನ ಪೀಳಿಗೆಯವರಿಗೆ  ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳಿಗೆ ನಾವೇ ಮಾಡುವ  ಕಗ್ಗೊಲೆಯಲ್ಲವೇ?

ಇನ್ನು ಹಿಂದೂ ಸಂಪ್ರದಾಯದ ಪ್ರಕಾರವೇ ಆಚರಿಸಲ್ಪಡುವ ನಮ್ಮ ನಾಡಹಬ್ಬ ಸದ್ದಿಲ್ಲದೇ ಜಾತ್ಯಾತೀತ ಹಬ್ಬವಾಗಿ ಮಾರ್ಪಡುತ್ತಿರುವುದು ಸಹಾ ಕಳವಳಕಾರಿಯಾಗಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಾಗಲೆಲ್ಲಾ ನಮ್ಮ ದಸರಾ ಆಚರಣೆಗೆ ಒಂದಲ್ಲಾ ಒಂದು ವಿಘ್ನವನ್ನು ತರುತ್ತಲೇ ಇರುತ್ತಾರೆ. ಎಲ್ಲಿಯೂ ಕಂಡೂ ಕೇಳರಿಯದ ಮಹಿಷದಸರಾ ಆಚರಣೆಗೆ ಅನುವು ಮಾಡಿಕೊಡುವ ಮೂಲಕ ಪರೋಕ್ಷವಾಗಿ ನವಬೌದ್ಧರಿಗೆ ಸಹಾಯ ಮಾಡಿದ ಸಿದ್ದರಾಮಯ್ಯನವರ ಸರ್ಕಾರ ಮುಂದೆ ದಸರಾ ಉದ್ಘಾಟನೆಗೆ ದೀಪ ಹುಚ್ಚುವುದು ಕೊಳ್ಳಿ ಇಡುವುದರ ಸಂಕೇತ ಎಂದು ಓತ ಪ್ರೋತವಾಗಿ ಮಾತಮಾಡುವ ಬರಗೂರು ರಾಮಚಂದ್ರಪ್ಪನ್ನಂತಹ ಹಿಂದೂವಿರೋಧಿ ಎಡಬಿಡಂಗಿಯಿಂದ ಉದ್ಭಾಟನೆ ಮಾಡಿಸಿದರೆ, 2025ರ ದಸರ ಹಬ್ಬವಂತೂ ತಾಯಿ ಭುವನೇಶ್ವರಿಯನ್ನು ಮತ್ತು ನಮ್ಮ ತಾಯಂದಿರ ಸೌಭಾಗ್ಯವತಿಯರ ಪ್ರತೀಕವಾದ ಅರಿಶಿನ ಕುಂಕುಮವನ್ನು ಸಾರ್ವಜನಿಕವಾಗಿಯೇ ಟೀಕಿಸಿದ ಅನ್ಯಧರ್ಮೀಯರಾವರಿಂದ ದಸರಾ ಉತ್ಸವವನ್ನು ಉದ್ಭಾಟಿಸುವ ಮೂಲಕ ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪಾ ಸುರಿಯುವ ಮೂಲಕ ಕೇರಳದಲ್ಲಿ ಹಿಂದೂ ಹಬ್ಬವಾದ ಓಣಂ ಹಬ್ಬವನ್ನು ಜಾತ್ಯಾತೀತ ಹಬ್ಬ ಮಾಡಿದ ಹಾಗೆ ನಿಧಾನವಾಗಿ ದಸರಾ ಹಬ್ಬವನ್ನೂ ಅನ್ಯಧರ್ಮೀಯರ ಮೂಲಕ ಉದ್ಭಾಟನೆ ಮಾಡಿಸುವ ಮೂಲಕ ಅಲ್ಲಿನ ಎಲ್ಲಾ ರೀತಿಯ ವ್ಯವಸ್ಥೆಗಳಿಗೂ ಅನ್ಯಧರ್ಮೀಯರಿಗೇ ಪ್ರಾಶಸ್ತ್ಯವನ್ನು ನೀಡುವ ಮೂಲಕ ದಸರಾ ಹಬ್ಬವನ್ನು ಹಿಂದೂ ನಾಡದಿಂದ ಜಾತ್ಯಾತೀತ ಸಾಂಸ್ಕೃತಿಕ ಹಬ್ಬವನ್ನಾಗಿಸಿ ಮೈಸೂರು ಪ್ರವಾಸ, ಹೋಟೆಲ್ಲುಗಳು, ದಸರಾ ಜಂಬೂಸವಾರಿ ಎಲ್ಲದ್ದಕ್ಕೂ ದರವನ್ನು ನಿಗಧಿಪಡಿಸಿ ಟಿಕೆಟ್ ಮೂಲಕ ಹಣವನ್ನು ಗಳಿಸುವ ಕಾರ್ಪೋರೇಟ್ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿರುವುದು ನಿಜಕ್ಕೂ ವಿಷಾಧನೀಯವಾಗಿದೆ.

ಇಷ್ಟೆಲ್ಲಾ ವೈರುಧ್ಯಗಳ ನಡುವೆಯೂ ಇಂದಿಗೂ ಆಷ್ಟೋ ಇಷ್ಟು ಮನೆಗಳಲ್ಲಿ ಒಪ್ಪ ಓರಣದಿಂದ ಇನ್ನೂ ಹತ್ತು ದಿನಗಳ ಕಾಲ ಬೊಂಬೆಗಳನ್ನು ಇಡುತ್ತಿರುವುದು ನಿಜಕ್ಕೂ ಅನುಕರಣೀಯ ಮತ್ತು ಅಭಿನಂದನಾರ್ಹವಾಗಿದ್ದು. ಇರುವುದರಲ್ಲಿಯೇ ಅಲ್ಪ ಸ್ವಲ್ಪ ಸಮಯ ಮಾಡಿಕೊಂಡು ಅಂತಹ ಮನೆಗಳಿಗೆ ಸಕುಟುಂಬ ಸಮೇತರಾಗಿ ಅದರಲ್ಲೂ  ಮಕ್ಕಳೊಂದಿಗೆ  ಹೋಗಿ ನಮ್ಮ ಮಕ್ಕಳಿಗೆ ನಮ್ಮ ಸತ್ಸಂಪ್ರದಾಯವನ್ನು ಪರಿಚಯವನ್ನಾದರೂ ಮಾಡಿಸ ಬಹುದಲ್ಲವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment