ನಮ್ಮ ದೇಶದ ಯಾವುದೇ ಮೂಲೆಯಲ್ಲಿ ಚುನಾವಣೆಗಳು ನಡೆಯುತ್ತದೆ ಎಂದ ಕೂಡಲೇ, ಚುನಾವಣ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಿಸುವ ಮೂಲಕ ಅಲ್ಲಿನ ಮತದಾರರ ಅಭಿಪ್ರಾಯ ಹೇಗಿರುತ್ತದೆ ಎಂಬುದನ್ನು ಮುಂಚಿತವಾಗಿ ತಿಳಿಸಪಡಿಸುತ್ತಿದ್ದವು. ಆರಂಭದಲ್ಲಿ ಕೆಲವು ಖಾಸಗಿ ಛಾನೆಲ್ಲುಗಳಿಂದ ಆರಂಭವಾದ ಸಮೀಕ್ಷೆಗಳು ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಸಮೀಕ್ಷೆಗಳನ್ನು ಮಾಡುವ ನಾಯಿಕೊಡೆಯಂತೆ ನೂರಾರು ಏಜಿನ್ಸಿಗಳು ಹುಟ್ಟಿಕೊಂಡು ತಮ್ಮ ಸಮೀಕ್ಷೆಯೇ ನಿಖರ, ತಮ್ಮದೇ ವೈಜ್ಞಾನಿಕ ಎಂದು ಅಬ್ಬಿರಿದು ಬೊಬ್ಬಿರಿಯುತ್ತಿದ್ದವು.
2024ರ ಲೋಕಸಭಾ ಚುನಾವಣೆಯ ಸಮಯದಲ್ಲಂತೂ ದೇಶದ ಬಹುತೇಕ ಎಲ್ಲಾ ಸಮೀಕ್ಷೆಗಳೂ ಸಹಾ ಬಿಜೆಪಿ ಮೂರನೇ ಭಾರಿಗೆ ಭಾರೀ ಬಹುಮತದೊಂದಿಗೆ ಆರಿಸಿಬರುತ್ತದೆ ಎಂದೇ ಪ್ರಕಟಿಸಿದ್ದವು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಮೊತ್ತ ಮೊದಲ ಬಾರಿಗೆ ಭಾರತೀಯ ಮತದಾರ ಎಲ್ಲಾ ಸಮೀಕ್ಷೆಗಳನ್ನೂ ಮೂಲೆಗೆ ತಳ್ಳಿ ಸಮ್ಮಿಶ್ರ ಸರ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದ. ಆಬ್ ಕೀ ಬಾರ್ ಚಾರ್ ಸೈ ಪಾರ್ ಎನ್ನುತ್ತಿದ್ದ ಬಿಜೆಪಿಗೆ ಬಹುಮತವೂ ಬಾರದೇ ಹೋದರೆ ಕಳೆದ ಎರಡು ಚುನಾವಣೆಗಳಲ್ಲಿ ಅಧಿಕೃತ ವಿರೋಧ ಪಕ್ಷವಾಗುವುದಕ್ಕೂ ಸಾಲದಷ್ಟು ಸಂಖ್ಯೆ ಹೊಂದಿದ್ದ ಕಾಂಗ್ರೇಸ್ ಈ ಬಾರಿ ಅಚ್ಚರಿ ಎನ್ನುವಂತೆ 99 ಸ್ಥಾನಗಳನ್ನು ಗಳಿಸಿ ಚುನಾವಣೆಯನ್ನೇ ಗೆದ್ದ ರೀತಿಯಲ್ಲಿ ಬೀಗಿದ್ದೂ ಸಹಾ ಹಾಸ್ಯಾಸ್ಪದವಾಗಿತ್ತು.
ಈ ಬಾರಿ ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟ ನಂತರ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಹರ್ಯಾಣದಲ್ಲಿ ಚುನಾವಣೆಯು ನಡೆಯಲ್ಪಟ್ಟು 2024ರ ಅಕ್ಟೋಬರ್ 5ರಂದು ಹರ್ಯಾಣ ಚುನಾವಣೆಯು ಪೂರ್ಣಗೊಳ್ಳುತ್ತಿದ್ದಂತೆಯೇ 7 ಎಕ್ಸಿಟ್ ಪೋಲ್‌ಗಳ ಪ್ರಕಾರ ಕಾಂಗ್ರೆಸ್ 55 ಸ್ಥಾನಗಳನ್ನು ಗೆಲ್ಲುವ ಭಾರೀ ಬಹುಮತದೊಂದಿಗೆ ಜಯ ಪಡೆದರೆ, ಸತತ ಹತ್ತು ವರ್ಷಗಳ ಆಡಳಿರೂಢ ಬಿಜೆಪಿ ಕೇವಲ 26 ರಲ್ಲಿ ಮಾತ್ರ ಗೆಲುವು ಸಾಧಿಸುತ್ತದೆ ಎಂದು ಪ್ರಕಟಗೊಳ್ಳುತ್ತಿದ್ದಂತೆಯೇ ಯಥಾ ಪ್ರಕಾರ ಕಾಂಗ್ರೇಸ್ ಯುವರಾಜ ಈ ದೇಶದ ಜನರು ಮೋದಿಯವರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಬೊಬ್ಬಿರಿದಿದ್ದ.
ಈ ಬಾರಿಯ ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೇರಲು ಜಾಟ್ ಮತ್ತು ಜಲೇಬಿಯನ್ನು ಬಾರಿ ಪ್ರಮಾಣದಲ್ಲಿ ನಂಬಿತ್ತು. ಈ ಹಿಂದೇ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಹೊಸಾ ಕೃಷಿ ನೀತಿ ಮತ್ತು ಅಗ್ನಿವೀರ್ ಮತ್ತು ದೆಹಲಿಯಲ್ಲಿ ಹರ್ಯಾಣ ಮಹಿಳಾ ಕುಸ್ತಿ ಪಟುಗಳು ನಡೆಸಿದ್ದ ರಂಪಾಟವನ್ನೇ ದೊಡ್ಡದಾಗಿ ಬಿಂಬಿಸಿತ್ತು. ಚುನಾವಣೆಯ ಪೂರ್ವ ರ್ಯಾಲಿಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಅಪರೂಪಕ್ಕೆ ಸಂವಿಧಾನ ಪುಸ್ತಕದ ಬದಲು ಸ್ಥಳೀಯ ಸಿಹಿ ತಿಂಡಿ ತಯಾರಕರಡ ಮಾಥು ರಾಮ್ ಹಲ್ವಾಯಿಯಿಂದ ಜಿಲೇಬಿಯ ಪೆಟ್ಟಿಗೆಯನ್ನು ಹಿಡಿದುಕೊಂಡು,ಬಂದು ಈ ಜಿಲೇಬಿಯನ್ನು ಪ್ರತೀ ದಿನವೂ 20,000-50,000 ಜನರು ತಮ್ಮ ಕಾರ್ಖಾನೆಯಲ್ಲಿ ತಯಾರಿಸಿ ಹೊರರಾಜ್ಯಗಳಿಗೆ ಮತ್ತು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಕೆಲಸವನ್ನು ಗಳಿಸಿಕೊಳ್ಳಬಹುದು ಎಂದಿದ್ದಲ್ಲದೇ, ಮಾಥುರಾಮ್ ಅವರಂತಹ ವ್ಯಾಪಾರಿಗಳು ಕೇಂದ್ರದ ನೋಟು ಅಮಾನ್ಯೀಕರಣ ಮತ್ತು GST ನಿಂದಾಗಿ ಬಹಳ ಸಂಕಷ್ಟಕ್ಕೀಡಾಗಿದ್ದಾರೆ ಎನ್ನುವ ಮೂಲಕ ಜನರು ಆತನನ್ನು ಪಪ್ಪು ಎಂದು ಏಕೆ ಕರೆಯುತ್ತಾರೆ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಪಡಿಸಿಕೊಂಡಿದ್ದ.
ಇನ್ನು ಮತಗಳ ಎಣಿಕೆಯ ದಿನವಾದ ನೆನ್ನೆ ಬೆಳಿಗ್ಗೆ ಆರಂಭಿಕ ಸುತ್ತುಗಳಲ್ಲಿ ಸಮೀಕ್ಷೆಯಲ್ಲಿ ಹೇಳಿದಂತೆಯೇ ಕಾಂಗ್ರೆಸ್ ಮುನ್ನಡೆಯನ್ನು ಪಡೆದು ಕೊಳ್ಳುತ್ತಿದ್ದಂತೆಯೇ ಆತುರಗಾರನಿಗೆ ಬುದ್ಧಿ ಮಟ್ಟ ಎನ್ನುವಂತೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ತಮ್ಮ ಯುವರಾಜನನ್ನು ಓಲೈಸಿಕೊಳ್ಳಲೋ ಏನೋ, ಸಡಗರದಿಂದ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಅದೇ ಜಿಲೇಬಿಗಳನ್ನು ವಿತರಿಸುತ್ತಾ ಸಂಭ್ರಮ ಪಡುತ್ತಿದ್ದಂತೆಯೇ, ಮುಂದಿನ ಸುತ್ತಿನ ಮತಗಳ ಎಣಿಕೆಯಲ್ಲಿ ಬಿಜೆಪಿಯು ಸ್ಪಷ್ಟವಾಗಿ ಮನ್ನಡೆಯನ್ನು ಪಡೆದು ನಂತರ ಸತತವಾಗಿ ಅದನ್ನೇ ಮುಂದು ವರೆಸಿಕೊಂಡು ಬಹುಮತದತ್ತ ದಾಪುಗಾಲು ಹಾಕುತ್ತಿದ್ದಂತೆಯೇ, ಸಂಭ್ರಮಿಸುವ ಸರದಿ ಬಿಜೆಪಿ ಕೇಂದ್ರ ಕಚೇರಿಯತ್ತ ತಿರುಗಿ, ಅವರೂ ಸಹಾ ಅದ್ಧೂರಿಯ ಆಚರಣೆಗಾಗಿ ಅದೇ ಜಿಲೇಬಿಯನ್ನು ತರಿಸಿ ಹಂಚಿದ್ದು ವಿಶೇಷವಾಗಿತ್ತು.
ಚುನಾವಣೆ ಗೆದ್ದರೆ ಅದು ರಾಹುಲ್ ಗಾಂಧಿ, ಪ್ರಿಯಾಂಕಾಗಾಂಧಿ ಶ್ರೇಯ ಅದೇ ಚುನಾವಣೆ ಸೋತಲ್ಲಿ ಅದಕ್ಕೆ ಹೊಣೆಯನ್ನು ಮತ್ತೊಬ್ಬರರ ಮೇಲೆ ಹೇರುವುದಕ್ಕಾಗಿಯೇ ಒಂದು ಬಕರಾನನ್ನು ಹುಡುಕುವುದು ಕಾಂಗ್ರೇಸ್ ಪಕ್ಷದಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಂತಹ ಪದ್ದತಿ. ಲೋಕಸಭಾ ಚುನಾವಣೆಯ ನಂತರ EVM ಯಂತ್ರಗಳ ಮೇಲೆ ತಪ್ಪು ಹಾಕುವುದನ್ನು ನಿಲ್ಲಿಸಿರುವ ಕಾಂಗ್ರೇಸ್ ಈ ಬಾರಿ ನೇರವಾಗಿ ಚುನಾವಣಾ ಆಯೋಗವನ್ನೇ ನೇರವಾಗಿ ಆಕ್ಷೇಪ ಸಲ್ಲಿಸುವ ಮೂಲಕ ಜನರ ಮುಂದೆ ನಗೆಪಾಟಿಲಿಗೆ ಈಡಾಯಿತು. ಟಿವಿಯಲ್ಲಿ ಬಹುತೇಕ ಮಾಧ್ಯಮಗಳು ಬಿಜೆಪಿಯ ಮುನ್ನಡೆಯನ್ನು ತೋರಿಸುತ್ತಿದ್ದರೆ, ಚುನಾವಣಾ ಇಲಾಖೆಯ ಅಧಿಕೃತ ವೆಬ್ ಸೈಟಿನಲ್ಲಿ ಫಲಿತಾಂಶ ಪ್ರಕಟವಾಗುವುದು ಸ್ವಲ್ಪ ನಿಧಾನವಾಗುತ್ತಿರುವುದನ್ನೇ ನೆಪ ಮಾಡಿಕೊಂಡು, ಕುಣಿಯಲಾರದವಳು ನೆಲ ಡೊಂಕು ಎನ್ನುವಂತೆ, ಸೋಲಿನ ಹತಾಷೆಯನ್ನು ಸೋನಿಯಾ ಗಾಂಧಿಯ ಪರಮಾಪ್ತ ಜೈರಾಮ ರಮೇಶ ಪತ್ರ ಬರೆಯುವ ಮೂಲಕ ತೋರಿಸಿಕೊಂಡರು.
ಇಷ್ಟೇ ಅಲ್ಲದೇ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿದ್ದೇ ತಡಾ ತಮ್ಮ ಸೋಲಿಗೆ ಆಮ್ ಆದ್ಮಿ ಪಾರ್ಟಿಯೇ ಕಾರಣ ಎಂಬ ಆರೋಪವನ್ನೂ ಮಾಡಿದೆ. ಹರ್ಯಾಣದ ಮೂಲದವರಾದ ಆಮ್ ಆದ್ಮಿ ಪಕ್ಷದ ಮಹಾನ್ ನಾಯಕ ಆರವಿಂದ್ ಕೇಜ್ರಿವಾಲ್ ಪಂಜಾಬ್ ನಂತೆಯೇ ಇಲ್ಲಿಯೂ ಸಹಾ ತಮ್ಮದೇ ಗೆಲುವು ಎಂಬ ಅತಿಯಾದ ಆತ್ಮ ವಿಶ್ವಾಸದಲ್ಲಿ ಚುನಾವಣೆಗೂ ಮುನ್ನಾ ಇಂಡಿ ಮೈತ್ರಿ ಕೂಟದ ಕಾಂಗ್ರೇಸ್ ಮತ್ತು ಆಮ್ ಆದ್ಮಿ ಪಕ್ಷ ಚುನಾವಣಾ ಪೂರ್ವ ಮೈತ್ರಿ ಮುರಿದು ಬಿದ್ದು ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಖಂಡಿತವಾಗಿಯೂ ಹೊಡೆತ ಬಿದ್ದಿದೆ ಎನ್ನುವುದು ಮತ ಹಂಚಿಕೆಯು ಸ್ಪಷ್ಟ ಪಡಿಸುತ್ತಿದೆ. ಅಲ್ಪಸಂಖ್ಯಾತರು ಮತ್ತು ಜಾಟ್ ಮತಗಳನ್ನೇ ಅವಲಂಭಿಸಿದ್ದ ಕಾಂಗ್ರೇಸ್ 39.09% ಗಳಿಸಿದರೆ, ಈ ಹಿಂದೆ ಜಾಟ್ ಅಧಿಕಾರದ ದರ್ಪವನ್ನು ಇನ್ನೂ ಮರೆತಿರದ, ಹಿಂದುಳಿದ ವರ್ಗದವರೂ ಸೇರಿದಂತೆ ಉಳಿದ ಸಮುದಾಯದವರು ಒಗ್ಗೂಡಿ ಬಿಜೆಪಿಗೆ 39.94% ಮತ ನೀಡಿದರೆ, INLD 4.14% ಇತರರು 16.83% ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೇಸ್ ನಡುವಿನ ಅಂತರ ಕೇವಲ 0.85% ಇದ್ದರೂ ಬಿಜೆಪಿ 11 ಅಧಿಕ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೇರಿರುವುದು ಇಲ್ಲಿ ಗಮನಾರ್ಹವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹರಿಯಾಣ ರೈತರ ಪ್ರತಿಭಟನೆ, ಅಗ್ನಿವೀರ್ ಸೈನಿಕರ ನೇಮಕಾತಿ ವಿವಾದ, ಕುಸ್ತಿಪಡುಗಳ ಪ್ರತಿಭಟನೆ ಕಾಂಗ್ರೇಸ್ಸಿಗೆ ಪೂರಕವಾಗಿದ್ದ ಕಾರಣ ಈ ಬಾರಿಯೂ ಬಿಜೆಪಿಗೆ ಹರಿಯಾಣದಲ್ಲಿ ಭಾರಿ ಮುಖಭಂಗವಾಗುತ್ತದೆ ಎಂದೇ ಕಾಂಗ್ರೇಸ್ ಹೋದ ಬಂದ ಕಡೆಯಲ್ಲೆಲ್ಲಾ ಆಡಿಕೊಳ್ಳುತ್ತಿದ್ದ ಕಾಂಗ್ರೇಸ್ ಖಟ್ಟರ್ ಬದಲಾಗಿ ಸೈನಿಯವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಂತೆಯೇ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ, ನಯಾಬ್ ಸಿಂಗ್ ಸೈನಿ ಅವರನ್ನು ಡಮ್ಮಿ ಸಿಎಂ ಎಂದು ಟೀಕಿಸಿದ್ದಲ್ಲದೇ, ತಾವೇ ಭಾವೀ ಮುಖ್ಯಮಂತ್ರಿ ಎಂದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿಕೊಂಡು ಓಡಾಡುತ್ತಿದ್ದರೆ, ತಮ್ಮ ಅಧಿಕಾರದ 200 ದಿನಗಳಲ್ಲಿ ಮುಖ್ಯಮಂತ್ರಿಯಾಗಿ ನಯಾಬ್ ಸಿಂಗ್ ಸೈನಿ ಈ ಎಲ್ಲಾ ಅವಮಾನಗಳಿಗೆ ಕೊಂಚವೂ ತಲೆ ಕೆಡಿಸಿಕೊಳ್ಳದೇ ಜನಪರ ಕಾರ್ಯಕ್ರಮ ನೀಡುವತ್ತ ಗಮನ ಹರಿಸಿದ್ದ ಕಾರಣ ಈಗ ಮಾಸ್ ಲೀಡರ್ ಆಗಿ ಹೊರಹೊಮ್ಮಿದ್ದಾರೆ. ಮೊದಲು ಗ್ರಾಮ ಪಂಚಾಯಿತಿಗಳ ವೆಚ್ಚದ ಮಿತಿಯನ್ನು 5 ಲಕ್ಷ ರೂಪಾಯಿಗಳಿಂದ 21 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯಲು ಕಾರಣೀಭೂತರಾದರು. ಇನ್ನು ಉಚಿತ ವಿದ್ಯುತ್ ಬದಲಾಗಿ, ವಿದ್ಯುತ್ ಬಿಲ್‌ನಲ್ಲಿ ಕನಿಷ್ಠ ಶುಲ್ಕಗಳನ್ನು ರದ್ದುಗೊಳಿಸುವ ಮೂಲಕ ವಿದ್ಯುತ್ ಶುಲ್ಕ ಕಡಿಮೆಗೊಳಿಸಿದ್ದು ಸಹಾ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಪ್ರಧಾನಮಂತ್ರಿಗಳ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಅಡಿಯಲ್ಲಿ ರಾಜ್ಯದಿಂದ ಸಬ್ಸಿಡಿ ಕೊಡುವ ಯೋಜನೆಯನ್ನೂ ಶೀಘ್ರವಾಗಿ ಆರಂಭಿಸುವ ಮೂಲಕ ಬಡ ಕುಟುಂಬಗಳಿಗೆ ಅಧಿಕ ಆರ್ಥಿಕ ಹೊರೆ ಇಲ್ಲದೆ ಸೌರ ವಿದ್ಯುತ್ ಸಿಗುವಂತೆ ಮಾಡಿದ್ದೂ ಸಹಾ ಪ್ರಧಾನಿ ನರೇಂದ್ರ ಮೋದಿ ಒಳಗೊಂಡಂತೆ ಎಲ್ಲರ ಗಮನ ಸೆಳೆದಿತ್ತು. ಅಗ್ನಿವೀರರು ಸಶಸ್ತ್ರ ಪಡೆಗಳಲ್ಲಿ ತಮ್ಮ ಅಲ್ಪಾವಧಿ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅವರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ನೀಡಲು ಅಗ್ನಿವೀರ್ ನೀತಿಯನ್ನು ಹರಿಯಾಣ ಸರ್ಕಾರ ಜಾರಿ ಮಾಡಿದ್ದೂ ಸಹಾ ಬಿಜೆಪಿಗೆ ವರದಾನವಾಗಿ ಮೂರನೇ ಬಾರಿ ಅಧಿಕಾರಕ್ಕೆ ಬರಲು ಸಹಕಾರಿಯಾಗಿದೆ.
ಇನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 90 ಸದಸ್ಯರನ್ನು ಆಯ್ಕೆ ಮಾಡಲು 3 ಹಂತಗಳಲ್ಲಿ 2024ರ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1ರ ವರೆಗೆ ನಡೆದ ಚುನಾವಣಾ ನಂತರ ಅಲ್ಲಿನ ಫಲಿತಾಂಶ ಅತಂತ್ರವಾಗಲಿದ್ದು, ಪಿಡಿಪಿ ಕಿಂಗ್ ಮೇಕರ್ ಆಗಿ ಹೊರಹೊಮ್ಮಲಿದೆ ಎಂದೇ ಎಲ್ಲಾ ಸಮೀಕ್ಷೆಗಳೂ ವರದಿ ಮಾಡಿದ್ದವು.
10 ವರ್ಷದ ನಂತರ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಚುನಾವಣಾಪೂರ್ವ ಮೈತ್ರಿಕೂಟವು 49 ಬಿಜೆಪಿ 29ಗಳಿಸಿದರೆ ಪಿಡಿಪಿ ಕೇವಲ 2 ಮತ್ತು ಇತರರು 10 ಸ್ಥಾನಗಳನ್ನು ಪಡೆಯುವ ಮೂಲಕ ಲೋಕಸಭೆಯಲ್ಲಿ ಸೋತು ಸುಣ್ಣವಾಗಿದ್ದ ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರ ಅಧಿಕಾರಕ್ಕೇರುವುದು ಸ್ಪಷ್ಟವಾಗಿದೆ.
2014 ರ ಚುನಾವಣೆಯಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿಯಾಗಿ ಸಮ್ಮಿಶ್ರ ಸರ್ಕಾರ ನಡೆಸಿ ಕೆಲವು ವರ್ಷಗಳ ನಂತರ ಮೈತ್ರಿ ಮುರಿದು ಬಿದ್ದ ನಂತರ ರಾಷ್ಟ್ರಪತಿ ಆಡಳಿಕ್ಕೆ ಒಳಗಾಗಿತ್ತು. ಕಳೆದ ಬಾರಿ 25 ಸ್ಥಾನ ಗಳಿಸಿದ್ದ ಬಿಜೆಪಿ ಬಾರಿ 29 ಸ್ಥಾನಗಳನ್ನು ಗೆಲ್ಲುವ ಮೂಲಕ
4 ಸ್ಥಾನಗಳನ್ನು ಹೆಚ್ಚಾಗಿಸಿಕೊಂಡರೆ, 28 ಸ್ಥಾನ ಗಳಿಸಿದ್ದ ಪಿಡಿಪಿ 25 ಸ್ಥಾನಗಳು ಕಡಿಮೆಯಾಗಿ ಮಕಾಡೆ ಮಲಗಿದರೆ, ಕಾಂಗ್ರೇಸ್ ಪ್ರದರ್ಶನ ಮತ್ತೊಮ್ಮೆ ನಿರಾಶಾದಾಯಕವಾಗಿದ್ದು ಕಳೆದ ಬಾರಿಯ 12 ಸ್ಥಾನಕ್ಕಿಂತ 5 ಕಡಿಮೆಗಳಿಸಿ 7ಕ್ಕೆ ಸೀಮಿತಗೊಂಡರೆ ಕಳೆದ ಬಾರಿ ಕೇವಲ 15 ಸ್ಥಾನಗಳಿಸಿದ್ದ ನ್ಯಾಶನಲ್ ಕಾನ್ಫರೆನ್ಸ್ 42 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅಚ್ಚರಿ ಎನ್ನುವಂತೆ ಆಮ್ ಆದ್ಮಿ ಪಕ್ಷ ಕಾಶ್ಮೀರದಲ್ಲಿ ಒಂದು ಸ್ಥಾನಗಳಿಸುವ ಮೂಲಕ ತನ್ನ ಖಾತೆ ತೆರೆದರೆ, ಪೀಪಲ್ಸ್ ಕಾನ್ಫರೆನ್ಸ್ ನಾಯಕ ಸಜ್ಜದ್ ಲೋನ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಇನ್ನು ಮತ ಹಂಚಿಕೆಯ ವಿಷಯದಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಬಿಜೆಪಿ 25.63% ಮತಗಳನ್ನು ಪಡೆಯುವ ಮೂಲಕ ಕಳೆದ ಬಾರಿಗಿಂತಲು 2.65% ಹೆಚ್ಚು ಮತ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, 2.67 ಶೇಕಡಾ ಹೆಚ್ಚು ಮತಗಳಿಸುವ ಮೂಲಕ ನ್ಯಾಶನಲ್ ಕಾನ್ಫರೆನ್ಸ್ 23.44% ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮತ 6%ರಷ್ಟು ಕುಸಿದಿದ್ದು ಅದು ಕೇವಲ 11.97% ರಷ್ಟು ಮತಗಳನ್ನು ಗಳಿಸಿದರೆ, ಕಳೆದ ಬಾರಿಗಿಂತ 13.8 % ಮತ ಕಡಿಮೆ ಪಡೆದು ಪಿಡಿಪಿ ಈ ಬಾರಿ 8.87% ಮತಗಳನ್ನು ಮಾತ್ರ ಪಡೆದುಕೊಂಡಿದೆ.
ಪರಿಚ್ಚೇದ 370 ಮತ್ತು 35A ತೆಗೆದ ನಂತರ ಮೊದಲ ಬಾರಿಗೆ ಚುನಾವಣೆ ನಡೆದು ಯಾವುದೇ ಪಕ್ಷಕ್ಕೆ ಸ್ವಂತ ಬಲದ ಮೇಲೆ ಬಹುಮತ ದೊರಕದೇ ಹೋದರೂ, ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಬಹಳಷ್ಟು ಪ್ರಯತ್ನಗಳಿಂದಾಗ ಅಲ್ಲಿನ ಪರಿಸ್ಥಿತಿ ಬಹಳವಾಗಿ ಸುಧಾರಿಸಿದ್ದು. ಭಯೋತ್ಪಾದಕರು ಮತ್ತು ಸೈನಿಕರ ವಿರುದ್ಧ ಕಲ್ಲು ತೂರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಾಶ್ಮೀರದ ಬಹುಮುಖ್ಯ ಆದಾಯವಾದ ಪ್ರವಾಸೋದ್ಯಮಕ್ಕೂ ಜನರು ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಹೋಗುತ್ತಿರುವುದು ಉತ್ತಮ ಬೆಳೆವಣಿಯಾಗಿದೆ. ಈ ಹಿಂದಿನಂತೆ ಹಿಂಬಾಗಿಲಿನಿಂದ ಭಯೋತ್ಪಾದಕರಿಗೆ ಬೆಂಬಲವನ್ನು ನೀಡುವ ಚಾಳಿಯನ್ನು ಇನ್ನು ಮುಂದಾದರೂ ಈ ಚುನಾಯಿತ ಸರ್ಕಾರ ನಿಲ್ಲಿಸಿ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ದಿಯನ್ನು ಕಾರ್ಯರೂಪಕ್ಕೆ ತರಲಿ ಎನ್ನುವುದೇ ಸಕಲ ಭಾರತೀಯರ ಆಶಯವಾಗಿದೆ
ಇನ್ನು ತಮ್ಮ ರಾಜಕೀಯ ತೆವಲುಗಳಿಗಾಗಿ ಕೇಂದ್ರ ಸರ್ಕಾರದ ಪ್ರತಿ ಯೋಜನೆಯನ್ನೂ ವಿರೋಧಿಸುತ್ತಾ, ಜನರನ್ನು ಎತ್ತಿ ಕಟ್ಟುತ್ತಾ, ನಾವೇ ಅಧಿಕಾರಕ್ಕೆ ಬಂದು ಬಿಡುತ್ತೇವೆ ಎಂದು ಅಬ್ಬಿರಿದು ಬೊಬ್ಬಿರಿದ ಕಾಂಗ್ರೇಸ್ ಪಕ್ಷವನ್ನು ಎರಡೂ ರಾಜ್ಯಗಳಲ್ಲಿ ಜನ ತಿರಸ್ಕಾರ ಮಾಡಿರುವುದು ಸ್ಪಷ್ಟವಾಗಿದೆ. ಹರ್ಯಾಣದಲ್ಲಿ ಕಳೆದ ಬಾರಿಗಿಂತಲೂ ಅಧಿಕ ಸ್ಥಾನ ಗಳಿಸಿದ್ದರೂ ಬಹುಮತಕ್ಕೆ ಅವಶ್ಯಕರಿವಿದ್ದ ಸ್ಥಾನಗಳನ್ನು ಗಳಿಸಲು ವಿಫಲರಾದರೆ, ಇನ್ನು ಕಾಶ್ಮೀರದಲ್ಲಿ ಕಳೆದ ಬಾರಿಗಿಂತಲೂ ಐದು ಕಡಿಮೆ ಸ್ಥಾನಗಳನ್ನು ಗಳಿಸುವ ಮೂಲಕ ಜನರಿಗೆ ಕಾಂಗ್ರೇಸ್ ಪಕ್ಷದ ಮೇಲಿನ ನಂಬಿಕೆ ಹೊರಟು ಹೋಗಿದೆ. ಎಲ್ಲಾ ರಾಜ್ಯಗಳಲ್ಲಿಯೂ ಅವರ ಖಟಾ ಖಟ್ ಅಥವಾ ಟಕಾ ಟಕಾ ಬಿಟ್ಟಿ ಭಾಗ್ಯಗಳು ನಡೆಯುವುದಿಲ್ಲಾ, ದೇಶ ಪ್ರೇಮ ಮತ್ತು ಅಭಿವೃದ್ಧಿಗಳತ್ತ ಮಾತ್ರವೇ ಗಮನ ಹರಿಸಬೇಕೆಂಬುದ್ದನ್ನು ಸೋನಿಯಾ, ರಾಹುಲ್ ಪ್ರಿಯಾಂಕ ಮತ್ತು ಅವರ ಭಟ್ಟಂಗಿಗಳು ಅರಿತು ಕೊಳ್ಳಬೇಕಾಗಿದೆ. 39 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು ಗೆದ್ದ ಎಲ್ಲಾ ಅಭ್ಯರ್ಥಿಗಳು ಮುಸಲ್ಮಾನರೇ ಆಗಿದ್ದು, ಹಿಂದೂ ಬಾಹುಳ್ಯದ ಜಮ್ಮು ಭಾಗದಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗೆದ್ದಿರುವ ಕಾರಣದಿಂದಾಗಿ ಕಾಂಗ್ರೇಸ್ ಹೇಳಿಕೊಳ್ಳುವಂತೆ ಅದೊಂದು ಜಾತ್ಯಾತೀಪ ಪಕ್ಷವಾಗಿರದೇ, ಹಿಂದೂಗಳಿಂದ ಬಹುದೂರ ಹೋಗಿ, ಮತ್ತೊಂದು ಮುಸ್ಲಿಂ ಲೀಗ್ ಪಕ್ಷವಾಗಿ ಬದಲಾಗುತ್ತಿರುವುದು ದೇಶದ ಹಿತದೃಷ್ಟಿಯಿಂದ ಮಾರಕವಾಗಿದೆ.
ಇನ್ನು ಹರ್ಯಾಣದಲ್ಲಿ ಅಧಿಕಾರ ಹೊರಟೇ ಹೋಯಿತು ಎನ್ನುವ ಪರಿಸ್ಥಿತಿಯಿಂದ ಅಲ್ಪ ಬಹುಮತದಲ್ಲಿ ಅಧಿಕಾರ ಪಡೆದ ಬಿಜೆಪಿಯೂ ಸಹಾ ಫಲಿತಾಂಶದಿಂದ ಗೆದ್ದು ಬೀಗದೇ, ಕಾಂಗ್ರೇಸ್ & ಜೆಪಿಯ ನಡುವಿನ ಮತಗಳ ಅಂತರ 1%ಗಿಂತಲೂ ಕಡಿಮೆ ಇರುವುದನ್ನು ಮನಗಂಡು ಉತ್ತಮ ಆಡಳಿತ ನೀಡುವ ಮೂಲಕ ಎಲ್ಲಾ ಜನರ ವಿಶ್ವಾಸವನ್ನು ಗಳಿಸಬೇಕಾದಂತಹ ಗುರುತರವಾದ ಜವಾಬ್ಧಾರಿಯನ್ನು ಹೊಂದಿದೆ. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಎಲ್ಲಾ ವಿಷಯಕ್ಕೂ ಪ್ರಧಾನಿ ಮೋದಿಯವರ ವರ್ಚಸ್ಸು ಮತ್ತು ಸಾಧನೆಗಳ ಮೇಲೇ ಅವಲಂಭಿತರಾಗದೇ, ಸ್ಥಳೀಯ ನಾಯಕರು ತಮ್ಮ ಅಭಿವೃದ್ಧಿ ಮತ್ತು ಸ್ವಸಾಮರ್ಥ್ಯದಿಂದ ಹೇಗೆ ಅಧಿಕಾರವನ್ನು ಗಳಿಸಬಹುದು ಎನ್ನುವುದಕ್ಕೆ ಈ ಫಲಿತಾಂಶ ಉತ್ತಮ ನಿದರ್ಶನವಾಗಿದ್ದು ಅದನ್ನು ಉಳಿದ ರಾಜ್ಯಗಳಲ್ಲಿಯೂ ಅಳವಡಿಸಿಕೊಳ್ಳಬೇಕಿದೆ.
ಕಾಶ್ಮೀರಿಗರಿಗೆ ಕಳೆದ 10 ವರ್ಷಗಳಲ್ಲಿ ಅಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಟ್ಟರೂ, ಅಧಿಕ ಮತಗಳನ್ನು ಪಡೆದರೂ ಹಿಂದೂ ಬಾಹುಳ್ಯದ ಜಮ್ಮು ಭಾಗದ ಹೊರತಾಗಿ ಮುಸಲ್ಮಾನರೇ ಹೆಚ್ಚಾಗಿರುವ ಉಳಿದ ಭಾಗಗಳಲ್ಲಿ ಅದನ್ನು ಸ್ಥಾನವನ್ನಾಗಿ ಪರಿವರ್ತಿಸಲು ಬಿಜೆಪಿ ವಿಫಲರಾಗಿರುವುದು ಎಚ್ಚರಿಕೆಯ ಗಂಟೆಯಾಗಿದ್ದು. ಸಬ್ ಕೇ ಸಾತ್, ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್, ಎನ್ನುವುದು ಕೇವಲ ಬಾಯಿ ಮಾತಾಗಿರದೇ, ಅದು ನಿಜವಾಗಿಯೂ ಕಾರ್ಯರೂಪಕ್ಕೆ ಬಂದು ಧರ್ಮ, ಜಾತಿ, ಭಾಷೆ, ಲಿಂಗಗಳ ಹೊರತಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಭಾರತವನ್ನು ಮತ್ತಷ್ಟು ಬಲಗೊಳಿಸಬೇಕಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ