ಆಡುಮಾತಿನ ಗಾದೆಗಳು ವೇದಕ್ಕೆ ಸಮಾನ ಎನ್ನುವ ಮಾತಿದೆ. ಅದಕ್ಕೆ ಪೂರಕವಾಗಿಯೇ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತೂ ಸಹಾ ಚಾಲನೆಯಲ್ಲಿದ್ದು ಸಮಾಜದಲ್ಲಿನ ಜನಸಾಮಾನ್ಯರ ಬದುಕನ್ನು ಸರಳವಾಗಿ ಅರ್ಥೈಸಲು ಮತ್ತು ಸರಿ ದಾರಿಗೆ ತರಲು ಗಾದೆ ಮಾತುಗಳು ಮಾರ್ಗದರ್ಶಕಗಳಾಗಿವೆ ಎಂದರೂ ತಪ್ಪಾಗದು. ಇದಕ್ಕೆ ಪೂರಕ ಎನ್ನುವಂತೆ ಅಡಿಕೆಗೆ ಹೋದ ಮಾನ ಆನೆ ಕೋಟ್ಟರೂ ಬಾರದು ಎನ್ನುವ ಗಾದೆಯಲ್ಲಿ ವ್ಯಕ್ತಿ ಸಣ್ಣ ವಿಷಯಕ್ಕೆ ಅವಮಾನಕ್ಕೆ ಒಳಗಾಗಿ ಅದಕ್ಕಾಗಿ ಎಷ್ಟೇ ಶ್ರಮಪಟ್ಟರೂ, ಹಣ ವ್ಯಯಿಸಿದರೂ ಅಪವಾದ ತಪ್ಪದೇ ಹೋಗದು ಎನ್ನುವ ಅರ್ಥ ಬರುತ್ತದೆ.
ಸಮಾಜದಲ್ಲಿ ಜನಸಾಮಾನ್ಯರಿಗೆ ಮರ್ಯಾದೆಯೇ ಎಲ್ಲಕ್ಕಿಂತ ಮಿಗಿಲಾದದ್ದು. ಒಂದು ಕ್ಷುಲ್ಲಕ ಕಾರಣಕ್ಕಾಗಿ ಮರ್ಯಾದೆಯನ್ನು ಕಳೆದುಕೊಂಡರೆ, ಅದು ಇಡೀ ಜೀವನದ ಎಲ್ಲವನ್ನೂ ಕಳೆದುಕೊಂಡಂತೆ ಎಂಬ ಅರ್ಥ ಬರುತ್ತದೆ, ಹಾಗಾಗಿಯೇ ದಾಸ ಶ್ರೇಷ್ಠ ಪುರಂದರದಾಸರು ಪ್ರಾಣ ಹೋದರೂ ಮಾನ ವ್ಯರ್ಥವಾಗದ ಹಾಗೆ ಕಾಯಬೇಕು ಎಂದು ಹೇಳಿದರೆ, ಕಬೀರರು ಮಾನವನು ಮಾನವಂತನಾಗಿರಬೇಕು ಎಂದಿದ್ದಾರೆ. ಇದನ್ನೇ ಮೇಲ್ಪಂಕ್ತಿಯಾಗಿಟ್ಟುಕೊಂಡ ನಮ್ಮ ಪೂರ್ವಜರು ನಾಚಿಕೆ ಮಾನ ಮತ್ತು ಮರ್ಯಾದೆಗೆ ಅಂಜಿ ಬಾಳಿದವರು.
ದುರಾದೃಷ್ಟವಷಾತ್ ಇಂದಿನ ಜನಾಂಗ ನಾಚಿಕೆ ಗೀಚಿಕೆ ಎಲ್ಲಾ ಊರಾಚೆಗೆ ಎಂದು ಹೇಳುತ್ತಲೇ, ಇಂದು ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ಮತ್ತೊಂದು ಜನಪ್ರಿಯ ಗಾದೆ ಮಾತಿನಂತೆ ಜೀವನ ನಡೆಸುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಆಗಿದ್ದು, ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ, ಈ ದೇಶವನ್ನು ಮುನ್ನಡೆಸುವ ರಾಜಕಾರಣಿಗಳೇ ಇದಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತಿರುವುದು ಮತ್ತಷ್ಟೂ ಬೇಸರದ ಸಂಗತಿಯಾಗಿದೆ.
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ, ತಾನೊಬ್ಬ ಸತ್ಯ ಹರಿಶ್ಚಂದ್ರನ ಅಪರಾವತಾರ. ತನ್ನ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲದಂತೆ ರಾಜಕೀಯ ಮಾಡಿಕೊಂಡು ಬಂದಿರುವ ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ತಮ್ಮ ರಾಜಕೀಯ ಇಳೀ ವಯಸ್ಸಿನಲ್ಲಿ ಮೈಸೂರಿನ ಯಾವುದೋ ಮೂಲೆಯಲ್ಲಿರುವ ಕೆಸರೆ ಎಂಬ ಗ್ರಾಮ ಈಗಾಗಲೇ ಮೂಡಾ ಪರಭಾರೆ ಮಾಡಿಕೊಂಡಿದ್ದರೂ, ಕೇವಲ ಸರ್ಕಾರೀ ದಾಖಲೆಗಳಲ್ಲಿ ಜಮೀನನ್ನು ತೋರಿಸಿ ಅದರ ಮೂಲಕ ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ 64 ಕೋಟಿ ಬೆಲೆಯುಳ್ಳ 14 ನಿವೇಶನಗಳನ್ನು ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿ ತಮ್ಮ ಅಧಿಕಾರ ಬಳಸಿಕೊಂಡಿರುವುದು ಪತ್ತೆಯಾದರೂ, ತಮ್ಮ ಹುಂಬ ತನದಿಂದ ಅದರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಆದೇಶ ನೀಡಿದ್ದರ ವಿರುದ್ಧವೇ ಹೈಕೋರ್ಟ್ ಮೊರೆ ಹೋಗಿ, ಕೋಟಿ ಕೋಟಿ ಹಣ ಖರ್ಚು ಮಾಡಿ ದೇಶದ ಅತ್ಯುನ್ನತ ನ್ಯಾಯವಾದಿಗಳಿಂದ ವಾದ ಮಾಡಿಸಿದರೂ, ಫಲಕಾರಿಯಾಗದೇ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿ ಅಂತಿಮ ಗಳಿಕೆಯಲ್ಲಿ ಮಡದಿಯವರಿಂದ ಮನಕುಲುಕುವಂತಹ ಹೇಳಿಕೆಯನ್ನು ಕೊಡಿಸಿ ತಮ್ಮ 14 ನಿವೇಶನಗಳನ್ನು ಹಿಂದಿರುಗಿಸಿದರೂ, ನ್ಯಾಯಾಂಗ ತನಿಖೆ ಮುಂದುವರೆದಿದ್ದು, ಸದ್ಯದ ಪರಿಸ್ಥಿತಿಯಲ್ಲಿ A1 ಸಿದ್ದರಾಮಯ್ಯ ಮತ್ತು A2 ಅವರ ಪತ್ನಿ ಪಾರ್ವತಿಯವರು ಜೈಲು ಪಾಲಾಗುವ ಸಂಧರ್ಭವೇ ಹೆಚ್ಚಾಗಿದ್ದು, ಮುಡಾ ಕೇಸ್‌ನಿಂದಾಗಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರ ಬೂದಿಮುಚ್ಚಿದ ಕೆಂಡದಂತಿದ್ದು, ಯಾವ ಕ್ಷಣದಲ್ಲಾದರೂ ಅವರು ರಾಜೀನಾಮೆ ನೀಡಬೇಕಾದಂತಹ ಪರಿಸ್ಥಿತಿ ಒದಗಿ ಬಂದಿದೆ.
ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರು ಎನ್ನುವಂತೆ ಮುಖ್ಯಮಂತ್ರಿಗಳ ಪಟ್ಟ ಇನ್ನೂ ಅಧಿಕೃತವಾಗಿ ಖಾಲಿಯಾಗದೇ ಹೋದರೂ, ಮುಖ್ಯ ಮಂತ್ರಿಗಳಾಗಲು ವಿವಿಧ ಜಾತಿ, ಒಳಜಾತಿ, ಧರ್ಮದ ಗುರಾಣಿಯನ್ನು ಹಿಡಿದು ಐದಾರು ಜನರು ಸಿದ್ದರಾಗಿರುವಾಗ, ಪಕ್ಷದಲ್ಲಿನ ಹಿರಿತನ ಮತ್ತು ದಲಿತ ಜಾತಿಯನ್ನಾಧರಿಸಿ ಒಮ್ಮೆಯಾದರೂ ಈ ರಾಜ್ಯದ ಮುಖ್ಯಮಂತ್ರಿ ಆಗಲೇ ಬೇಕೆಂದು ಫಣ ತೊಟ್ಟಿರುವ ಕಾಂಗ್ರೇಸ್ಸಿನ ಹಿರಿಯ ನಾಯಕ ಮತ್ತು ಇಂದಿರಾಗಾಂಧಿ ಕುಟುಂಬದ ಪರಮಾಪ್ತ, ಶ್ರೀ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಹುಂಬ ಪ್ರಿಯಾಂಕ್ ಖರ್ಗೆಯೂ ಸಹಾ ಪರೋಕ್ಷವಾಗಿ ಮುಖ್ಯಮಂತ್ರಿ ಪದವಿಯ ಮೇಲೆ ಟವೆಲ್ ಹಾಕಿ, ದಲಿತರು ಎಂಬ ಗುರಾಣಿಯನ್ನು ಹಿಡಿದು ಹೈಕಮಾಂಡ್ ಕೃಪಾಶೀರ್ವಾದದಿಂದ ಇನ್ನೇನು ಮುಖ್ಯ ಮಂತ್ರಿ ಆಗಿಯೇ ತೀರುತ್ತಾರೆ ಎಂದು ಎಲ್ಲರೂ ಹೇಳುತ್ತಿರುವಾಗಲೇ, ಖರ್ಗೆ ಕುಟುಂಬದವರೇ ಇರುವ ಸಿದ್ಧಾರ್ಥ ವಿಹಾರ ಎಂಬ ಖಾಸಗೀ ಟ್ರಸ್ಟಿಗೆ, ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯ ಕೆಐಎಡಿಬಿ ವ್ಯಾಪ್ತಿಯ ಸುಮಾರು ಐದು ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಎಂ.ಬಿ. ಪಾಟೀಲರ ಅಧ್ಯಕ್ಷತೆಯಲ್ಲಿ ಕೇವಲ ಒಂದೆರಡು ದಿನಗಳಲ್ಲಿಯೇ ಮಂಜೂರು ಮಾಡಿಸಿಕೊಳ್ಳುವ ಮೂಲಕ ಮುಡಾ ಹಗರಣದ ನಂತರದ ಮತ್ತೊಂದು ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.
ರಾಜ್ಯದ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿಯ ವಿಧಾನ ಪರಿಷತ್ತಿನ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಮತ್ತು ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್ ಈ ಕುರಿತಾಗಿ ಆರೋಪ ಮಾಡಿದಾಗ, ಆರಂಭದಲ್ಲಿ ಇದೊಂದು ವಯಕ್ತಿಕ ಆಪಾದನೆ ಎಂದು ಹಾರಾಡಿದ ಮರಿ ಖರ್ಗೆ ನಂತರದ ದಿನಗಳಲ್ಲಿ ಸಿದ್ದರಾಮಯ್ಯನವರ ಭೂಕಬಳಿಕೆ ವಿಷಯ ಹರ್ಯಾಣ ಚುನಾವಣೆಯಲ್ಲಿ ಪ್ರತಿಧ್ವನಿಸಿ ಅದರ ಫಲ ಅನುಭವಿಸಿದ ನಂತರ, ಮುಂಬರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಚುನಾವಣೆಯಲ್ಲಿ ಮೋದಿಯವರು ನಿಸ್ಸಂದೇಹವಾಗಿ ಖರ್ಗೆಯವರ ಭೂಹಗರಣದ ಕುರಿತಾಗಿ ಮಾತನಾಡಿ, ಅಲ್ಲಿಯೂ ಫಲಿತಾಂಶ ಅತಂತ್ರವಾದಲ್ಲಿ, ತಮ್ಮ ಕುಟುಂಬದ ಸದಸ್ಯರೊಬ್ಬರು ಮುಖ್ಯಮಂತ್ರಿಯಾಗಲು ಅನರ್ಹರಾಗುತ್ತಾರೆ ಎಂಬ ಭಯದಿಂದ ಸದ್ದಿಲ್ಲದೇ ರಾಹುಲ್ ಖರ್ಗೆಯ (ಇಂದಿರಾ ಗಾಂಧಿ ಕುಟುಂಬದ ಪರ ಭಟ್ಟಂಗಿ ತನಕ್ಕೆ ತಮ್ಮ ಮಕ್ಕಳ ಹೆಸರುಗಳೇ ಸಾಕ್ಷಿ) ಮೂಲಕ ತಮಗೆ ನೀಡಲಾಗಿದ್ದ ಐದು ಎಕರೆ ಜಮೀನನ್ನು ಹಿಂದುರುಗಿಸಿ, ತಮ್ಮದೇನೂ ತಪ್ಪಿಲ್ಲಾ. ವಿರೋಧ ಪಕ್ಷಗಳು ಸುಖಾಸುಮ್ಮನೇ ತಮ್ಮ ಕುಟುಂಬದ ಮೇಲೆ ಆರೋಪ ಮಾಡುತ್ತಿವೆ ಎಂದು ಈಗ ಸತ್ಯ ಹರಿಶ್ಚಂದ್ರನ ಕುಡಿಗಳು ಎನ್ನುವಂತೆ ಮೆರೆಯುತ್ತಿರುವುದು ಹಾಸ್ಯಾಸ್ಪದವಾಗಿದೆ.
ರಾಜ್ಯದ ಕಾಂಗ್ರೇಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದೇಶದ ಕಾಂಗ್ರೇಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರುಗಳು ಅಕ್ರಮವಾಗಿ ಪಡೆದಿದ್ದ ಭೂಮಿಯನ್ನು ಹಿಂದಿರುಗಿಸಿದ ಕೂಡಲೇ ಅವರು ಮಾಡಿದ್ದ ತಪ್ಪುಗಳೆಲ್ಲವೂ ಮನ್ನಾ ಆಗಿದೆ ಎಂದು ಕಾಂಗ್ರೇಸ್ ಗುಲಾಮರು ಹೋದ ಬಂದ ಕಡೆಯಲ್ಲೆಲ್ಲಾ ಹೇಳುತ್ತಿರುವುದನ್ನು ನೋಡಿದರೆ, ಕದ್ದ ಮಾಲನ್ನು ಸಿಕ್ಕಿ ಕೊಳ್ಳುವ ಭಯದಲ್ಲಿ ಹಿಂದುರಿಗಿಸಿದ ತಕ್ಷಣ ಆತನ ಮೇಲಿನ ಅಪರಾಧವೆಲ್ಲವೂ ಮಾಯವಾಗುತ್ತದೆ ಎಂಬ ಭ್ರಮೆಯಲ್ಲಿರುವಂತಿದೆ.
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎನ್ನುವಂತೆ ತಮ್ಮ ಅಧಿಕಾರವನ್ನು ದುರುಪಯೋಗಿಸಿಕೊಂಡು ನಕಲಿ ದಾಖಲೆಯಿಂದಲೋ ಇಲ್ಲವೇ ಕಡಿಮೆ ಹಣದಲ್ಲಿ ಸರ್ಕಾರಿ ಭೂಮಿಯನ್ನು ತಮ್ಮ ಸ್ವಂತಕ್ಕೋ ಇಲ್ಲವೇ ತಮ್ಮ ಕುಟುಂಬದ ಟ್ರಸ್ಟಿಗೆ ಪರಭಾರೆ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ನೈತಿಕ ಹೊಣೆ ಹೊತ್ತು ಸತ್ಯ ಹರಿಶ್ಚಂದ್ರನ ತುಂಡು ಎಂದೇ ಹೋದ ಬಂದ ಕಡೆಯಲೆಲ್ಲಾ ಹೇಳಿ ಕೊಳ್ಳುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಲೇ ಬೇಕಾಗಿದೆ. ಇದಷ್ಟೇ ಅಲ್ಲದೇ, ಹೆಚ್ಚಿನ ಅಧಿಕಾರ ಇಲ್ಲವೇ ಮತ್ತಾವುದೋ ಅಸೆಗಾಗಿ ಸಿದ್ದರಾಮಯ್ಯನವರ ಛೇಲಾ ಎಂದೇ ಗುರುತಿಸಿಕೊಂಡು ಅವರು ಮಾಡಿದ್ದೆಲ್ಲವೂ ಸರಿ ಎಂದು ವಾದಿಸುವ ಮತ್ತು ಕಾಂಗ್ರೇಸ್ ರಾಷ್ಟ್ರಧ್ಯಕ್ಷ ಖರ್ಗೆಯವರ ಕೃಪೆಯೂ ಇರಲಿ ಎಂದು ಎಲ್ಲಾ ನಿಯಗಳನ್ನೂ ಗಾಳಿಗೆ ತೂರಿ ಉಳಿದ ದಲಿತರೆಲ್ಲರನ್ನೂ ಮೀರಿ ಖರ್ಗೆ ಕುಟುಂಬಕ್ಕೆ ತುರಾತುರಿಯಲ್ಲಿ ಜಮೀನು ಮಂಜೂರು ಮಾಡಿದ ಎಂ.ಬಿ.ಪಾಟೀಲ್ ಅವರ ಹೆಸರೂ ಸಹಾ ಅಕ್ರಮ ಭೂಕಬಳಿಕೆಯ ಸಂಧರ್ಭದಲ್ಲಿ ಕೇಳಿ ಬರುತ್ತಿರುವುದರಿಂದ ಅವರೂ ಸಹಾ ಅಧಿಕಾರದಿಂದ ಕೆಳಗೆ ಇಳಿಯುವುದು ಉತ್ತಮ.
ಆರಂಭದಲ್ಲಿ ಸಿದ್ದರಾಮಯ್ಯ ಮತ್ತು ಖರ್ಗೆ ಕುಟುಂಬ ಈ ಭೂಹಗರಣದಲ್ಲಿ ತಮ್ಮ ತಪ್ಪೇನೂ ಇಲ್ಲಾ. ಎಲ್ಲವೂ ನ್ಯಾಯ ಬದ್ಧವಾಗಿಯೇ ಇದೆ ಎಂದು ಹೇಳುತ್ತಲೇ ಈಗ ಸಿದ್ದರಾಮಯ್ಯನವರ ಹೆಂಡತಿ ತಮ್ಮ ಪತಿಯವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆಯಾಗಬಾರದೆಂದು ಮನ ನೊಂದು ತನ್ನ ಪತಿ ಮತ್ತು ಮಗನ ಗಮನಕ್ಕೂ ತಾರದೇ 14 ನಿವೇಶನಗಳನ್ನು ಹಿಂದಿರುಗಿಸುತ್ತಿದ್ದೇನೆ ಎಂಬ ನಾಟಕವನ್ನು ಮಾಡಿದರೆ, ಮರಿ ಖರ್ಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ನಿವೇಶನದ ಕುರಿತಾದ ರಾಜಕೀಯ ಆರೋಪಗಳ ಬಗ್ಗೆ ಟ್ರಸ್ಟ್ ಅಧ್ಯಕ್ಷರಾದ ರಾಹುಲ್ ಖರ್ಗೆ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ. ನಮ್ಮ ಕುಟುಂಬದಲ್ಲಿ ಮೂರು ಮಂದಿಯಷ್ಟೇ ರಾಜಕಾರಣದ್ದು, ಟ್ರಸ್ಟ್ ಅಧ್ಯಕ್ಷರಾಗಿರುವ ಸಹೋದರ ರಾಹುಲ್ ಖರ್ಗೆ ತುಂಬಾ ಮೃದು ಸ್ವಭಾವದವರು. ಹಾಗಾಗಿ ಈ ವಿವಾದದಿಂದಾಗಿ ಕುಟುಂಬಸ್ಥರಿಗೆ ಬೇಸರ ಆಗಿದೆ ಎಂದು ಮನ ನೊಂದು ಐದು ಎಕರೆ ಜಮೀನನ್ನು ಹಿಂಪಡೆಯಲು ಕೆಐಎಡಿಬಿಗೆ ಪತ್ರ ಕೂಡ ಬರೆದಿದ್ದಾರೆ. ಜಮೀನನ್ನು ನಾವು ಕಾನೂನಾತ್ಮಕವಾಗಿಯೇ ವಾಪಸ್ ನೀಡುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಖರ್ಗೆ ಕುಟುಂಬದ ಭೂಮಿ ಹಗರಣದಲ್ಲಿ ಯಾವುದೇ ಸಮಸ್ಯೆಗಳು ಇಲ್ಲವಾಗಿದ್ದು, ಯಾವುದೇ ರೀತಿಯ ಕಾನೂನು ವ್ಯತ್ಯಯಗಳು ಆಗದೇ ಇದ್ದಲ್ಲಿ, ಈಗ ನಿವೇಶನಗಳನ್ನು ಹಿಂದಿರುಗಿಸುವ ಪ್ರಮೇಯವೇನಿತ್ತು? ಗುಳಿಗೆ ಸಿದ್ದ ಒಳಗೊಳಗೇ ಮೆದ್ದ ಎನ್ನುವಂತೆ ಈಗ ಜಮೀನನನ್ನು ಹಿಂದಿರುಗಿಸುವ ಮೂಲಕ ಅಧಿಕಾರದಲ್ಲಿದ್ದು ಕೊಂಡೇ ಅಕ್ರಮವಾಗಿ ಭೂಕಬಳಿಕೆ ಮಾಡಿ, ತಮ್ಮ ಭೂಗಳ್ಳತನ ಜನರಿಗೆ ಗೊತ್ತಾಗಿರುವ ಕಾರಣ, ಸಬೂಬುಗಳನ್ನು ಹೇಳಿ ಹಿಂದಿರುಗಿಸಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿರುವುದರಲ್ಲಿ ಸತ್ಯವಿದೆ ಎಂದೆನಿಸುತ್ತದೆ.
ರಾಜಕಾರಣಿಗಳು ಮಾಡಿದ್ದನ್ನೇ ಜನಸಾಮಾನ್ಯರು ಎಷ್ಟು ಬೇಗ ಅನುಸರಿಸುತ್ತಾರೆ ಎನ್ನುವುದಕ್ಕೆ, ದೂರದ ದೆಹಲಿಯ ಕಾರು ಕಳ್ಳನೊಬ್ಬನ ಪ್ರಸಂಗ ಜ್ವಲಂತ ಉದಾಹರಣೆಯಾಗಿದ್ದು, ಸಿದ್ದರಾಮಯ್ಯ ಮತ್ತು ಖರ್ಗೆ ಕುಟುಂಬ ಅಕ್ರಮವಾಗಿ ಪಡೆದ ಸೈಟ್ ವಾಪಸ್ ನೀಡಿದ ಮಾದರಿಯಲ್ಲಿಯೇ, ಕಳ್ಳತನ ಮಾಡಿದ್ದ ಕಾರನ್ನು ಮಾರ್ಗದ ಮಧ್ಯದಲ್ಲೇ ಬಿಟ್ಟು ಕಾರಿನ ಗಾಜಿನ ಮೇಲೆ ಕ್ಷಮಾಪಣಾ ಪತ್ರ ಅಂಟಿಸಸುವ ಮೂಲಕ ರಾಜ್ಯ ಕಾಂಗ್ರೇಸ್ ನಾಯಕರ ಭೂಗಳತನ ಮತ್ತು ಹಿಂದಿರುಗಿಸುವಿಕೆಯು ಉಳಿದವರಿಗೆ ಮಾದರಿ ಆಗುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಇನ್ನು ಮುಂದೆ ಕದ್ದ ಮಾಲನ್ನು ಕೆಲ ಕಾಲ ಅನುಭವಿಸಿ ನಂತರ ಪ್ರಾಮಾಣಿಕವಾಗಿ ಹಿಂದಿರುಗಿಸುವ ಕಳ್ಳರಿಗೆ ಈ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಕಳ್ಳ ಎಂಬ ರಾಜ್ಯ ಪ್ರಶಸ್ತಿಯನ್ನು ಘೋಷಿಸಿದರೂ ಅಚ್ಚರಿಯಿಲ್ಲ ಎಂದೆನಿಸುತ್ತದೆ. ಏಕೆಂದರೆ, ರಾಜ್ಯದಲ್ಲಿ ಕೋಮು ಗಲಭೆ, ದೊಂಬಿಯನ್ನು ಎಬ್ಬಿಸಿದ್ದಲ್ಲದೇ, ಪೋಲೀಸ್ ಠಾಣೆ ಮತ್ತು ಪೋಲೀಸ್ ಅಧಿಕಾರಿಗಳ ಮೇಲೆ ಧಾಳಿ ನಡೆಸಿದ ದೇಶದ್ರೋಹಿಗಳ ಮೇಲಿದ್ದ ಕೇಸುಗಳನ್ನು ಇದೇ ಸರ್ಕಾರ ಅಮಾಯಕರ ಹೆಸರಿನಡಿಯಲ್ಲಿ ವಜಾ ಮಾಡಿರುವುದು ನಿಜಕ್ಕೂ ಆಘಾತಕಾರಿಯಾಗಿದ್ದು, ಪ್ರತೀ ಬಾರಿ ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ, ತಮ್ಮ ಅಧಿಕಾರದ ತೆವಲಿಗಾಗಿ ಮತ್ತು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇಂತಹ ವಿಛಿದ್ರಕಾರಿ ಕೆಲಸಕ್ಕೆ ಮುಂದಾಗಿರುವುದು ಅಕ್ಷಮ್ಯ ಅಪರಾಧವೇ ಆಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ