ಪದ್ಮಶ್ರೀ ಕೆ ಎಸ್ ರಾಜಣ್ಣ 

ಬಹಳಷ್ಟು ಜನರಿಗೆ ಜೀವನದಲ್ಲಿ ಎಲ್ಲವೂ ಇದ್ದರೂ, ಅದರಲ್ಲೇನೋ ಕೊರತೆ ಕಂಡು ಅಯ್ಯೋ ಎಂದು ಪರಿತಪಿಸುವರೇ ಹೆಚ್ಚಾಗಿರುವಾಗ, ತಮ್ಮ ಅಂಕವೈಕುಲ್ಯವನೂ ಮೆಟ್ಟಿ  ಸಾಧಿಸುವ ಛಲವೊಂದಿದ್ದರೆ, ನಮಗಿರುವ ಮಿತಿಗಳು ಎಂದಿಗೂ ಅಡ್ಡಿಯಾಗಲಾರದು. ಗುರಿಯ ಬೆನ್ನಟ್ಟಿ ಆಕಾಶಕ್ಕೂ ಏರಬಹುದು ಎನ್ನುವುದಕ್ಕೆ ಕೈ ಕಾಲು ಎರಡೂ ಸಹಾ ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡರೂ  ಅವರು ಸಾಧಿಸಿರುವ ಪರಿ ಇಡೀ ಜಗತ್ತಿಗೇ ಪ್ರೇರಣಾದಾಯಕವಾಗಿರುವ, ಈ ಬಾರಿಯ ಪದ್ಮಶ್ರೀ ಪುರಸ್ಕೃತರಾದ ಶ್ರೀ ಕೆ. ಎಸ್. ರಾಜಣ್ಣ ಅವರೇ ಜ್ವಲಂತ ಉದಾಹರಣೆಯಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ,

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು, ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು

ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು ಹೀಗೆ ನಗುತಲಿರುವುದು..  ಬಹುಶಃ  ವರನಟ ರಾಜಕುಮಾರ್ ಅಭಿನಯಿಸಿರುವ ಕಂಚಿನ ಕಂಠದ ಪಿ.ಬಿ.ಶ್ರೀನಿವಾಸ್ ಅವರು ಹಾಡಿರುವ ಕಸ್ತೂರಿ ನಿವಾಸದ ಈ ಹಾಡನ್ನು ಕೇಳದಿರುವ ಕನ್ನಡಿಗರೇ ಇಲ್ಲಾ ಎಂದರೂ ತಪ್ಪಾಗದು.  ಕಾಕತಾಳೀಯವೆಂಬಂತೆ  ಈ ಹಾಡಿನ ಪ್ರತಿಯೊಂದು ಸಾಲನ್ನೂ ಸಹಾ ನಮ್ಮ ಇಂದಿನ ಕಥಾನಾಯಕರಾದ ಶ್ರೀ ಕೆ. ಎಸ್. ರಾಜಣ್ಣ ಅವರ ಕುರಿತಾಗಿಯೇ ಬರೆದಿದ್ದಾರೇನೋ ಎನಿಸುವಂತಿದೆ ಎಂದರೂ ತಪ್ಪಾಗದು.

ಡಿಸೆಂಬರ್ 6,  1959ರಲ್ಲಿ ಮಂಡ್ಯ ಜಿಲ್ಲೆಯ ಕೊಪ್ಪ ಗ್ರಾಮದ ಒಕ್ಕಲು ಮನೆತನದ ಕುಟುಂಬವೊಂದರೆಲ್ಲಿ  ಜನಿಸಿದ ಮಗು, ಮುಂದೆ ರಾಜನಾಗಿ ಬೆಳೆದು ನೂರಾರು ಜನರು ಜನರು ಮೆಚ್ಚುವಂತಹ ಸಾಧನೆಗಳನ್ನು ಮಾಡುವ ಮೂಲಕ ಎಲ್ಲರಿಗೂ ಆಶ್ರಯದಾತನಾಗಲಿ ಎಂದು ಮುದ್ದಿನಿಂದ ರಾಜಣ್ಣ ಎಂದು ಹೆಸರಿಡುತ್ತಾರೆ.  ಸುಮಾರು 10-11 ವರ್ಷಗಳ ಕಾಲ ಎಲ್ಲಾ ಮಕ್ಕಳಂತೆಯೇ ಇದ್ದ ರಾಜಣ್ಣರಿಗೆ ಇದ್ದಕ್ಕಿದ್ದಂತೆಯೇ ವಿಪರೀತವಾಗಿ ಅರೋಗ್ಯ ತಪ್ಪಿ, ಸೂಕ್ತ ಚಿಕಿತ್ಸೆ ಸಿಗದ ಕಾರಣ,  ಬಾಲ್ಯದಲ್ಲಿಯೇ ಪೋಲಿಯೋ ರೋಗಕ್ಕೆ ತುತ್ತಾಗಿ ತಮ್ಮ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಳ್ಳುತ್ತಾರೆ.

ಮುದ್ದಾದ ಮಗು ಈ ರೀತಿ ಅಂಗವೈಕುಲ್ಯತೆಗೆ ತುತ್ತಾದದ್ದನ್ನು  ಕಂಡು ಅವರ ಪೋಷಕರಿಗೆ ದುಖಃವಾಗುತ್ತದಾದರೂ, ಕೈಕಾಲುಗಳು ಹೋದರೇನಂತೆ ಒಳ್ಳೆಯ ಬುದ್ಧಿ ಶಕ್ತಿಯನ್ನು ಭಗವಂತ ನೀಡಿದ್ದಾನೆ ಎಂಬ ಧನಾತ್ಮಕ ಚಿಂತನೆಯಿಂದ ಅವರನ್ನು ಎಲ್ಲರಂತೆಯೇ ಶಾಲೆಗೆ ಸೇರಿಸಿ ಚನ್ನಾಗಿ ಓದಲು ಪ್ರೋತ್ಸಾಹಿಸುತ್ತಾರೆ. ತಂದೆ ತಾಯಿಯರ ಆಶಯಕ್ಕೆ ತಣ್ಣಿರೆರೆಚದ ರಾಜಣ್ಣವರು ತಮ್ಮ ಮೊಣಕಾಲುಗಳ ಮೇಲೆಯೇ ನಡೆಯುವುದನ್ನು ಅಭ್ಯಾಸ ಮಾಡಿದ್ದಲ್ಲದೇ ತಮ್ಮ ಎರಡೂ ಪೊರಗೈಗಳಲ್ಲಿ ಲೇಖನಿಯನ್ನು ಹಿಡಿದು ಅಕ್ಷರಗಳನ್ನು ಬರೆಯುವುದನ್ನು ಕಲಿತರು. ವಿದ್ಯಾರ್ಥಿಯಾಗಿ ಬಹಳ ಕಷ್ಟಪಟ್ಟು  ಅಧ್ಯಯನ  ಮಾಡಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾವನ್ನು ಪಡೆಯುತ್ತಾರೆ.

rajanna4ಆರಂಭದಲ್ಲಿ ಕೆಲವು ಕಡೆಗಳಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತಾರಾದರೂ,  ಎಲ್ಲರೂ ಸರಿ ಇರುವವರೇ ಕೆಲಸ ಮಾಡುವುದಿಲ್ಲ. ಇನ್ನೂ ಕೈ ಕಾಲುಗಳೇ ಇಲ್ಲದರು  ಇನ್ನೇನು ಕೆಲಸ ಮಾಡುತ್ತಾರೆ ಎಂದು ತಾತ್ಸಾರ ತೋರಿದವರೇ ಹೆಚ್ಚು, ಇದರಿಂದ ಸ್ವಲ್ಪವೋ ಬೇಸರಿಕೊಳ್ಳದ ರಾಜಣ್ಣನವರು ಸೋಲೇ ಗೆಲುವಿನ ಮೆಟ್ಟಿಲು ಎಂದು ಸವಾಲಾಗಿ ಸ್ವೀಕರಿಸಿ ತಮ್ಮದೇ ಸ್ವಂತ ಉದ್ಯೋಗವನ್ನು  ಆರಂಭಿಸಿ, ನೋಡ ನೋಡುತ್ತಿದ್ದಂತೆಯೇ ದೊಡ್ಡ ಉದ್ಯಮಿಯಾಗಿದ್ದಲ್ಲದೇ, ತಮ್ಮ ಕಂಪನಿಯಲ್ಲಿ ತಮ್ಮಂತೆಯೇ  ಇರುವ ನೂರಾರು ವಿಕಲಾಂಗ ವಿಶೇಷ ಚೇತನರಿಗೆ ಕೆಲಸವನ್ನು ನೀಡಿದ್ದಲ್ಲದೇ, ಅವರ ಈ ಸಾಧನೆಯ ಮೂಲಕ ಸಾವಿರಾರು ಮಂದಿ ವಿಶೇಷಚೇತನರಿಗೆ ಸ್ವಾವಲಂಬಿಗಳಾಗುವಂತೆ ಮಾಡಿರುವುದು ನಿಜಕ್ಕೂ ಅಭಿನಂದನಾರ್ಹ ಮತ್ತು ಅನುಕರಣೀಯವೇ ಸರಿ.

ಕೇವಲ ಸ್ವಾವಲಂಭಿ ಉದ್ಯಮಿಯಾಗಿ ಮತ್ತು ಸಮಾಜ ಸೇವಕರಾಗಿಯಷ್ಟೇ ಅಲ್ಲದೇ, ಒಬ್ಬ ಕ್ರೀಡಾಪಟುವಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡ ರಾಜಣ್ಣನವರು  2002ರ ಮಾರ್ಚ್ 7 ರಿಂದ 16ರ ವರೆಗೂ ಅಮೇರಿಕಾದ  ಸಾಲ್ಟ್ ಲೇಕ್ ಸಿಟಿಯ ಉತಾಹ್ ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ, ಡಿಸ್ಕಸ್ ಥ್ರೋನಲ್ಲಿ ಚಿನ್ನ ಮತ್ತು ಈಜಿನಲ್ಲಿ ಬೆಳ್ಳಿಯನ್ನು ಗಳಿಸುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದರು.

ತಮ್ಮ ವಯಕ್ತಿಕ ಸವಾಲುಗಳ ಹೊರತಾಗಿಯೂ, ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಇತರರನ್ನು ಸಬಲೀಕರಣಗೊಳಿಸಲು ತಮ್ಮ ಜೀವನವನ್ನೇ ಮುಡುಪಾಗಿಡುವ ಮೂಲಕ  ಸಮಾಜದಲ್ಲಿ ಬಾರೀ ಬದಲಾವಣೆ ತರುವ ಸೇವೆಯಲ್ಲಿ ಅವರ ಅವಿರತ ಪ್ರಯತ್ನಗಳನ್ನು ಗುರುತಿಸಿದ ಕರ್ನಾಟಕ ಸರ್ಕಾರ 2013 ರಲ್ಲಿ ಅವರನ್ನು ಕರ್ನಾಟಕ ರಾಜ್ಯ ವಿಕಲಾಂಗ ವ್ಯಕ್ತಿಗಳ ಆಯುಕ್ತರನ್ನಾಗಿ ಮಾಡಿತು. ಈ ರೀತಿಯ ಉನ್ನತ ಹುದ್ದೆಗೇರಿದ ಮೊದಲ ಅಂಗವಿಕಲ ವ್ಯಕ್ತಿ ಎನ್ನುವ ಹೆಗ್ಗಳಿಗೆ ರಾಜಣ್ಣನವರದ್ದಾಗಿತ್ತು.

rajanna5ಹೀಗೆ ವಿಕಲಾಂಗ ವ್ಯಕ್ತಿಗಳ ಆಯುಕ್ತರಾಗಿದ್ದ ಅವಧಿಯಲ್ಲಿ  ವಿಕಲಚೇತನರ ಸಂಕಷ್ಟಗಳನ್ನು ಗಮನಿಸಿ ಅವರಿಗೆ ಎಲ್ಲರಂತೆ ಸಮಾಜದಲ್ಲಿ ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆಯ ಅವಕಾಶವನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ  ಅದನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದ್ದ ಸರಕಾರಿ ಅಧಿಕಾರಿಗಳ ಮನ ಒಲಿಸಿ  ವಿಕಲಚೇತನರಿಗೆ ಅವಶ್ಯಕವಿದ್ದ ಮೂಲಭೂತ ಸೌಕರ್ಯ ಮತ್ತು ಕೆಲವು ವಿಶಿಷ್ಠ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ವಿಕಲಾಂಗರಿಗೆ ವಿಧಾನಸೌಧಕ್ಕೆ ಉಚಿತ ಪ್ರವೇಶ, ಉಚಿತ ಬಸ್ ಪಾಸ್‌ಗಳು, ಪಾರ್ಕಿಂಗ್ ಸೌಲಭ್ಯಗಳು, ಕುಂದುಕೊರತೆ ನಿವಾರಣಾ ಕೋಶಗಳು ಮತ್ತು ವಿಕಲಚೇತನರಿಗೆ ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವಂತಹ ಕ್ರಮಗಳನ್ನು  ಅವರು ಜಾರಿಗೆ ತರಲು ಶಕ್ತಿ ಮೀರಿ ಪ್ರಯತ್ನಿಸಿದ್ದಲ್ಲದೇ,  ಅರೆ ನ್ಯಾಯಾಂಗ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ರಾಜಣ್ಣನವರು ಆಯೋಗದಿಂದ ಅಂಗವಿಕಲರಿಗೆ ಸರ್ವರೀತಿಯಲ್ಲೂ ನ್ಯಾಯ ದೊರಕಿಸಿಕೊಡುವಂತೆ ನೋಡಿಕೊಂಡರು.

rajanna6ಈ ಎಲ್ಲಾ  ಸುಧಾರಣೆಗಳೂ ಕೇವಲ ನಗರಕ್ಕೆ ಮಾತ್ರವೇ ಸೀಮಿತವಾಗಿರದೇ, ರಾಜ್ಯಾದ್ಯಂತ ಇರುವ ಲಕ್ಷಾಂತರ ವಿಕಲಚೇತನರಿಗೆ ಸಿಗುವಂತಾಗಬೇಕು ಎಂದು ರಾಜ್ಯಾಂದ್ಯಂತ ಇರುವಬಹುದಾದ ವಿಕಲಾಂಗರ  ಸಮೀಕ್ಷೆಯನ್ನು ಹೊಸದಾಗಿ ಪ್ರಾರಂಭಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಇಷ್ಟೆಲ್ಲಾ ಸುಧಾರಣೆಗಳನ್ನು ತಂದಿದ್ದರೂ ಸಹಾ, ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದ  ಅವರನ್ನು ಅಂದಿನ ಸಿದ್ದರಾಮಯ್ಯನವರ ಸರ್ಕಾರ ಕೇವಲ 16 ತಿಂಗಳಲ್ಲೇ ಅನಧಿಕೃತವಾಗಿ ಹೊರಹಾಕಿತು. ಆಯುಕ್ತರು ಅದರಲ್ಲೂ ವಿಕಲಚೇತನರಾಗಿರುವ ಶ್ರೀ ರಾಜಣ್ಣನವರನ್ನು  ಯಾವುದೇ ಸೂಚನೆ, ಮತ್ತು ಸೂಕ್ತ ಕಾರಣಗಳು  ಇಲ್ಲವೇ ಸ್ಪಷ್ಟನೆಗಳಿಲ್ಲದೆ ಅವರನ್ನು ವಜಾಗೊಳಿಸಿ ಅವರ ಜಾಗದಲ್ಲಿ ಹೊಸ ಆಯುಕ್ತರನ್ನು ನೇಮಿಸಿದ ರಾಜ್ಯ ಸರ್ಕಾರದ ಕ್ರಮವು ಅನ್ಯಾಯವೆಂದು ಪರಿಗಣಿಸಿದ ವಿಕಲಚೇತನರ ಸಮುದಾಯ,  ರಾಜ್ಯಾದ್ಯಂತದ ಹೋರಾಟವನ್ನು ನಡೆಸಿತಾದರೂ ಅವೆಲ್ಲವೂ ಗೋರ್ಕಲ್ಲ ಮೇಲೆ ಮಳೆ ಸುರಿದಂತಾಗಿ ವ್ಯರ್ಥ ಪ್ರಯತ್ನವಾಯಿತು.

rajanna2ಇಷ್ಟೆಲ್ಲಾ ಸನ್ಮಾನ ಮತ್ತು ಅವಮಾನಗಳನ್ನೂ ಮೆಟ್ಟಿ ನಿಂತ ರಾಜಣ್ಣನರು ತಮ್ಮ ಪಾಡಿಗೆ ತಾವು ಸಮಾಜ ಸೇವೆಯಲ್ಲಿ ನಿರತರಾಗಿದ್ದನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರ ಸಾಧನೆಗಳನ್ನು ಗುರುತಿಸಿ 2024ರ ಸಾಲಿನ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಮಾಡಿತು.  2024ರ ಮೇ ತಿಂಗಳಿನಲ್ಲಿ ರಾಷ್ಟಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉಧ್ಘೋಷಕರು ಅವರ ಹೆಸರನ್ನು ಕರೆದಾಗ ಎಲ್ಲರೂ ತಲೆ ಎತ್ತಿ ಯಾರಿವರು ಯಾರಿವರು ಎಂದು ನೋಡುತ್ತಿದ್ದರೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ತಮ್ಮ ಮೊಣಕಾಲುಗಳಲ್ಲಿ ಪುಟ ಪುಟನೇ ಹೆಜ್ಜೆ ಇಡುತ್ತಾ, ಮೊದಲು ಪ್ರಧಾನಿ ಮೋದಿಯವರ ಬಳಿಗೆ ತೆರಳಿ ಅವರಿಗೆ ಧನ್ಯವಾದಗಳನ್ನು  ಅರ್ಪಿಸಿ, ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಗೌರವ ಸ್ವೀಕರಿಸಿಸುವ ಮುನ್ನಾ ಆ ಮೆಟ್ಟಿಲುಗಳಿಗೆ ಶಿರಾಸಾವಂದಿಸಿ, ಅಂಗವಿಕಲರ ಕಲ್ಯಾಣಕ್ಕೆ ಬದ್ಧರಾಗಿರುವ ವಿಶೇಷಚೇತನ ಸಮಾಜ ಸೇವಕರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸುವಾಗ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಎದ್ದು ನಿಂತು ಮುಗಿಲು ಮುಟ್ಟುವಂತೆ ಕರತಾಡನ ಮಾಡುವ ಮೂಲಕ ಶುಭಾಶಯವನ್ನು ಕೋರುತ್ತಿದ್ದನ್ನು ನೋಡಿ ಅವರ ಕುಟುಂಬದ ಸದಸ್ಯರ ಕಣ್ಗಳಲ್ಲಿ ಆನಂದ ಭಾಷ್ಪ ಹರಿಯುತ್ತಿದ್ದನ್ನು ನೇರ ಪ್ರಸಾರದಲ್ಲಿ ನೋಡಿದ ಕೋಟ್ಯಾಂತರ ಜನರ ಗಂಟಲುಗಳು ಒಂದು ಕ್ಷಣ ಗದ್ಗತವಾಗಿತ್ತು ಎಂಬುದೇ ವಿಶೇಷವಾಗಿತ್ತು. ರಾಷ್ಟ್ರಪತಿಗಳಿಂದ ತಮ್ಮ ಪೋಲೀಯೋ ಕೈಗಳಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲು  ಮುಂದಾದಾಗ, ಅವರಿಗೆ ಸಹಾಯ ಮಾಡಲು ಅಲ್ಲಿಯೇ ನಿಂತಿದ್ದ ರಕ್ಷಣಾ ಸಿಬ್ಬಂಧಿಯವರು ಸಹಾಯ  ಮಾಡಲು ಮುಂದಾದಾಗ, ನಗು ನಗುತ್ತಲೇ, ಪ್ರೀತಿಯಿಂದ ಅವರ ಸಹಾಯವನ್ನು ತೆಗೆದುಕೊಳ್ಳಲು ನಿರಾಕರಿಸಿ, ಅವರ ಸ್ವಾವಲಂಬನೆಯ ಮನೋಭಾವವನ್ನು ಪ್ರದರ್ಶನ ಮಾಡಿದ್ದು ಸಮಾರಂಭದಲ್ಲಿ ನೆರೆದಿದ್ದವರೆಲ್ಲರ ಕಣ್ಮನ ಸೆಳೆಯಿತು.

rajanna72024ರ ಜನವರಿ 26 ರಂದು ಪ್ರಕಟಿಸಲಾದ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ನಿಮಗೆ ಹೇಗನ್ನಿಸುತ್ತಿದೆ? ಎಂದು ಸಂದರ್ಶಕರೊಬ್ಬರು ಕೆ ಎಸ್ ರಾಜಣ್ಣನವರನ್ನು ಕೇಳಿದಾ, ಸಹಜವಾಗಿಯೇ ನನಗೆ ಈ ಪ್ರಶಸ್ತಿ ಸಕ್ಕರೆ ತಿಂದಷ್ಟು ಸಿಹಿಯಾಗಿದೆ. ಇದು ಕೇವಲ ಪ್ರಶಸ್ತಿಯಾಗಿ ಉಳಿಯದೆ ನನ್ನ ಸಮಾಜಮುಖಿ ಕೆಲಸಗಳಿಗೆ ಮತ್ತಷ್ಟು ಸಹಕಾರಿಯಾಗಲಿದೆ. ನಮಗೆ ಸಹಾನುಭೂತಿ ಮಾತ್ರವಲ್ಲ, ನಮ್ಮ ಹಕ್ಕುಗಳನ್ನು ಚಲಾಯಿಸುವ ಅವಕಾಶವೂ ಬೇಕು ಎಂದು ಹೇಳಿದ್ದು ಗಮನಾರ್ಹವಾಗಿದೆ. ತಮ್ಮ ಬಾಲ್ಯದಲ್ಲಿ ಪೋಲಿಯೊದಿಂದ ಕೈ ಕಾಲುಗಳನ್ನು ಕಳೆದುಕೊಂಡರೂ ಛಲ ಬಿಡದ ತ್ರಿವಿಕ್ರಮನಂತೆ ಮೊಣಕಾಲುಗಳ ಮೇಲೆ ನಡೆಯಯುವುದನು ಅಭ್ಯಾಸ ಮಾಡಿಕೊಂಡು ತಮ್ಮ ದೈಹಿಕ ಮಿತಿಗಳನ್ನು ಸ್ಫೂರ್ತಿಯಾಗಿ ಬಳಸಿಕೊಂಡಿದ್ದಲ್ಲದೇ, ತಮ್ಮಂತೆಯೇ ಇರುವ ಸಾವಿರಾರು ದಿವ್ಯಾಂಗರ ಏಳಿಗಾಗಿ ತಮ್ಮ ಜೀವನವನ್ನು ಮೀಸಲಿಡುವ ಮೂಲಕ  ತಾನು ಯಾರಿಗಿಂತ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿದ ಶ್ರೀ ಕೆ. ಎಸ್. ರಾಜಣ್ಣನವರು ನಿಜಕ್ಕೂ ಎಲ್ಲರಿಗೂ ಪ್ರೇರಣಾದಾಯಿಗಳೇ ಸರಿ. ದಿವ್ಯಾಂಗರಿಗೆ ಕೇವಲ ಕರುಣೆ ತೋರದೇ, ಅವರಿಗೆ ಕೆಲಸವನ್ನು ಕೊಟ್ಟಲ್ಲಿ ಖಂಡಿತವಾಗಿಯೂ ನಾಡಿಗೆ ಕೀರ್ತಿ ತರುತ್ತಾರೆ ಎನ್ನುವುದಕ್ಕೆ ನಮ್ಮ  ಕೆ.ಎಸ್. ರಾಜಣ್ಣನವರೇ ಸಾಕ್ಷಿಯಾಗಿದ್ದು ಹಾಗಾಗಿ ಅರು  ನಮ್ಮೆಲ್ಲರ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment