ನಾನು ಮಳೆಯಲ್ಲಿ ನಡೆಯಲು ಇಷ್ಟಪಡುತ್ತೇನೆ ಏಕೆಂದರೆ, ನಾನು ಅಳುವುದನ್ನು ಯಾರೂ ನೋಡುವುದಿಲ್ಲ ಎಂದು ಸಾರ್ವಕಾಲಿಕ ಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಹೇಳಿದ್ದರೆ, ನಾನು ಯಾವಾಗಲೂ ಇಷ್ಟಪಡುವುದು ಕಣ್ಣೀರಿನ ನಂತರದ ನಗುವನ್ನು. ಆದರೆ ಇಷ್ಟಪಡದ್ದು ನಗು ತರುವ ಅಳುವನ್ನು ಎಂದು ಹೀಗೆ ಹೇಳಿದದ, ಜನ್ಮತಃ ಕನ್ನಡಿಗನಾದರೂ, ಬದುಕನ್ನು ಅರಸಿಕೊಂಡು ತಮಿಳುನಾಡಿಗೆ ಹೋಗಿ, ಸುಮಾರು ಐದು ದಶಕಗಳ ಕಾಲ ತಮ್ಮ ನಟನೆಯ ಮೂಲಕ ಇಡೀ ದಕ್ಷಿಣ ಭಾರತವನ್ನೇ ನಗಿಸಿದ ಮಹಾನ್ ಕಲಾವಿದ ತಾಯ್ ನಾಗೇಶ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮಾಡಿಕೊಳ್ಳೋಣ ಬನ್ನಿ.
ಕನ್ನಡ ಮಾತನಾಡುವ ಮಾಧ್ವ ಬ್ರಾಹ್ಮಣರು ತಮಿಳುನಾಡಿನ ಸೇಲಂ, ಈರೋಡ್ ಆಂಬೂರು, ವಾಣಿಯಂಬಾದಿ, ತಿಪಪ್ಪೂರು ಮುಂತಾದ ಕಡೆ ಹೆಚ್ಚಾಗಿದ್ದು, ತಿರುಪ್ಪೂರಿನ ಧಾರಾಪುರದ ಸಂಪ್ರದಾಯಸ್ಥ ಕೆಳ ಮಧ್ಯಮ ಕುಟುಂಬದ ಕೃಷ್ಣರಾವ್ ಮತ್ತು ರುಕ್ಮಣಿಯಮ್ಮ ಎಂಬ ದಂಪತಿಗಳಿಗೆ ವೊಂದರಲ್ಲಿ 1933ರ ಸೆಪ್ಟೆಂಬರ್ 27ರಂದು ಜನಿಸಿದ ನಾಗೇಶ್ ಅವರ ಮೂಲ ಹೆಸರು ಸಿ. ಕೃಷ್ಣರಾವ್ ಗುಂಡೂ ರಾವ್ ಎಂಬುದಾಗಿತ್ತು. ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾಡುತ್ತಿರುವಾಗಲೇ ತಮ್ಮ ತಂದೆಯವರನ್ನು ಕಳೆದು ಕೊಂಡಾಗ, ನಾಗೇಶರಿಗೆ ಶಿಕ್ಷಣ ಕೊಡಿಸುವ ಜವಾಬ್ಧಾರಿ ತಾಯಿಯ ಮೇಲೆ ಬೀಳುತ್ತದೆ. ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ ಅಂದಿನ ಕಾಲದ ಮಹಾಮಾರಿ ರೋಗವಾದ ಸಿಡುಬಿಗೆ ತುತ್ತಾತ ಕಾರಣ ನಾಗೇಶ್ ಅವರು ಸ್ವಲ್ಪಮಟ್ಟಿಗೆ ವಿರೂಪಗೊಳ್ಳುತ್ತಾರೆ. ಇದರಿಂದ ಸ್ವಲ್ಪ ಮಟ್ಟಿಗೆ ವಿಚಲಿತರಾದರೂ, ತಮ್ಮ ಶಿಕ್ಷಣವನ್ನು ಮುಗಿಸಿ ತಮ್ಮ ಮುಂದಿನ ಜೀವನವನ್ನರಸಿಕೊಂಡು ಮದ್ರಾಸ್ ನಗರಕ್ಕೆ ತೆರಳಿದ ನಂತರವೇ ಅವರ ಮತ್ತೊಂದು ಮಜಲು ಆರಂಭವಾಗುತ್ತದೆ.
ಆರಂಭದಲ್ಲಿ ಕೈಯಲ್ಲಿ ಕಾಸಿಲ್ಲದಿದ್ದ ಕಾರಣ ಒಂದು ಕೊಠಡಿಯಲ್ಲಿ ಮೂವರು ಇರಬಹುದಾದಂತಹ ಒಂದು ಕೊಠಡಿಯಲ್ಲಿ ಸೇರಿಕೊಳ್ಳುತ್ತಾರೆ. ಅದೃಷ್ಟವಷಾತ್ ಆವರ ಕೊಠಡಿಯಲ್ಲಿ ಅದಾಗಲೇ ತಮಿಳು ಸಿನಿಮಾ ರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಬರಹಗಾರ ವಾಲಿ ಮತ್ತು ನಿರ್ದೇಶಕ ಶ್ರೀಧರ್ ಅವರು ಇರುತ್ತಾರೆ. ನಾಗೇಶ್ ರವರು ಜೀವನೋಪಾಯಕ್ಕಾಗಿ ಭಾರತೀಯ ರೈಲ್ವೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿಕೊಂಡ ನಂತರ ಅವರ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತದೆ. ಅದೊಮ್ಮೆ ತಮ್ಮ ಸಹೋದ್ಯೋಗಿಗಳು ಅಭಿನಯಿಸಿದ ಕಂಬ ರಾಮಾಯಣಂ ಎಂಬ ತಮಿಳು ನಾಟಕವನ್ನು ನೋಡಿ ಮೆಚ್ಚಿಕೊಂಡ ನಾಗೇಶ್ ಅವರು ಆ ತಂಡದೊಡನೆ ಸೇರಿಕೊಳ್ಳುತ್ತಾರಲ್ಲದೇ, ಮುಂದೆ ಅದೇ ತಂಡ ನಟಿಸುತ್ತಿದ್ದ ನಾಟಕವೊಂದರಲ್ಲಿ ಹೊಟ್ಟೆ ನೋವಿನಿಂದ ನರಳುವ ವ್ಯಕ್ತಿಯ ಪಾತ್ರವನ್ನು ನೀಡುವಂತೆ ರೈಲ್ವೆ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯ ಮನವೊಲಿಸಿ ಪಡೆದುಕೊಂಡು ಅತ್ಯುತ್ತಮವಾಗಿ ನಟಿಸುತ್ತಾರೆ. ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ, ಅಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅದಾಗಲೇ ತಮಿಳು ಚಿತ್ರರಂಗದ ಆರಾಧ್ಯ ದೈವ ಎಂದೇ ಪ್ರಖ್ಯಾತರಾಗಿದ್ದ ಎಂ.ಜಿ. ರಾಮಚಂದ್ರನ್ ಅರ್ಥಾತ್ ಎಂ.ಜಿ.ಆರ್ ಅವರೂ ಸಹಾ ಬಂದಿದ್ದು ಆವರು ಆ ನಾಟಕವನ್ನು ನೋಡಿ ಮೆಚ್ಚಿಕೊಂಡು ತಮ್ಮ ಭಾಷಣದಲ್ಲಿಯೂ ನಾಗೇಶ್ ಅವರ ಅಭಿನಯವನ್ನು ಶ್ಲಾಘಿಸುತ್ತಾರೆ, ಹೀಗೆ ಎಂ.ಜಿ.ಆರ್, ಅವರಿಂದ ಹೊಗಳಿಸಲ್ಪಟ್ಟಿಕೊಂಡ ಕಾರಣ ಅಂದಿನಿಂದ ನಾಗೇಶ್ ಅವರು ರೈಲ್ವೇ ಸಾಂಸ್ಕೃತಿಕ ತಂಡ ಖಾಯಂ ಸದಸ್ಯರಾಗಿ ವಿವಿಧ ನಾಟಕ ತಂಡಗಳಲ್ಲಿ ಪಾತ್ರಗಳನ್ನು ನಿರ್ವಹಿಸುವಂತಾಗುತ್ತದೆ. ತಂದೆಯನ್ನು ಕಳೆದುಕೊಂಡ ನಂತರ ತಾಯಿ ಕಂಡರೆ ಆಪಾರವಾದ ಪ್ರೀತಿಯನ್ನು ಹೊಂದಿದ್ದ ನಾಗೇಶ್ ಅವರು ತಾಯ್ ಎನ್ನುವ ನಾಟಕದಲ್ಲಿ ನಟಿಸಿದ ನಂತರ ಆ ನಾಟಕ ಬಹಳ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತದೆ.
1958 ರಲ್ಲಿ, ತಮಿಳುಮಾಡಿನ ಹೆಸರಾಂತ ನಿರ್ಮಾಪಕರಾಗಿದ್ದ ಬಾಲಾಜಿ ಅವರ ಕಣ್ಣಿಗೆ ಬಿದ್ದ ನಾಗೇಶ್ ಅವರಿಗೆ ತಮ್ಮ ಮನಮುಲ್ಲಾ ಮರುಧರಂ ಎಂಬ ಚಲನಚಿತ್ರದಲ್ಲಿ ಅವರಿಗೆ ಸಣ್ಣ ಪಾತ್ರದಲ್ಲಿ ಅವಕಾಶ ನೀಡಿದರಾದರೂ, ಆ ಚಿತ್ರವು ಅಷ್ಟೇನೂ ಯಶಸ್ಸು ಕಾಣದಾಗುತ್ತದೆ. 1960ರಲ್ಲಿ ನಾಗೇಶ್ ಮಕ್ಕಳ ರಾಜ್ಯ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದರು. ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೆ ತಮಿಳು ಚಿತ್ರರಂಗದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮುಂದಾಗಿ 1961 ರಲ್ಲಿ ತೆರೆಕಂಡ ತಾಯಿಲ್ಲಾ ಪಿಳ್ಳೈ ಚಿತ್ರದಲ್ಲಿನ ಅವರ ಅಭಿನಯಕವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರಲ್ಲದೇ, 1962ರಲ್ಲಿ ಬಿಡುಗಡೆಯಾದ ನೆಂಜಿಲ್ ಒರು ಆಲಯಂ ಚಿತ್ರವೂ ಸಹಾ ಭರ್ಜರಿಯಾಗಿ ಯಶಸ್ವಿಯಾದ ನಂತರ ತಮಿಳು ಚಲನಚಿತ್ರೋದ್ಯಮದಲ್ಲಿ ಶಾಶ್ವತವಾದ ನೆಲೆಯನ್ನು ಕಂಡುಕೊಳ್ಳಲು ಸಹಾಯವಾಗುತ್ತದೆ. ಇದೇ ಸಮಯದಲ್ಲಿ ಅದಾಗಲೇ ತಮಿಳು ಚಿತ್ರರಂಗದಲ್ಲಿ ನಾಗೇಶ್ ಎನ್ನುವವರು ಇದ್ದ ಕಾರಣ, ತಾಯ್ ನಾಟಕದ ಮೂಲಕ ಅದಾಗಲೇ ಪ್ರಖ್ಯಾತರಾಗಿದ್ದ ನಾಗೇಶ್ ಅವರನ್ನು ತಮಿಳು ಚಿತ್ರರಂಗ ತಾಯ್ ನಾಗೇಶ್ ಎಂದೇ ಗುರುತಿಸಿದ ಕಾರಣ ಅಂದಿನಿಂದ ಚಿತ್ರರಂಗದಲ್ಲಿ ತಾಯ್ ನಾಗೇಶ್ ಎಂದೇ ಪ್ರಖ್ಯಾತರಾಗುತ್ತಾರೆ. ಅಚ್ಚರಿಯ ವಿಷಯವೇನೆಂದರೆ, ಹಾಗೆ ನಾಗೇಶ್ ಎಂಬ ಮೊದಲ ವ್ಯಕ್ತಿಯೂ ಸಹಾ ಕನ್ನಡಿಗರೇ ಅಗಿದ್ದು ಅವರನ್ನು ಬೆಂಗಳೂರು ನಾಗೇಶ್ ಎಂದು ಗುರುತಿಸಲಾಗುತ್ತದೆ.
ಇವೆಲ್ಲದರ ನಡುವೆ ದಕ್ಷಿಣ ಭಾರತ ಪ್ರಸಿದ್ಧ ನಿರ್ದೇಶಕರೂ ಮತ್ತು ಅನೇಕ ನಾಯಕ ನಾಯಕಿಯರಿಗೆ ಗಾಡ್ ಫಾದರ್ ಎನಿಸಿಕೊಂಡಿರುವ ಕೆ.ಬಾಲಚಂದರ್ ಅವರು ತಾಯ್ ನಾಗೇಶ್ ಅವರ ಅಭಿನಯ ಕಂಡು ಮೆಚ್ಚಿಕೊಂಡಿದ್ದಲ್ಲದೇ, ನಾಗೇಶ್ ಅವರನ್ನೇ ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು ನಿರ್ದೇಶಿಸಿ ಡಿಸೆಂಬರ್ 11, 1964ರಲ್ಲಿ ಬಿಡುಗಡೆಯಾದ ಸರ್ವರ್ ಸುಂದರಂ ಚಿತ್ರದಲ್ಲಿ ಒಬ್ಬ ಬಡ ಹುಡುಗ ತಲೆತುಂಬ ಕಲೆ ತುಂಬಿಕೊಂಡು ಕಲಾವಿದನಾಗಬೇಕೆಂದು ಕನಸು ಕಾಣುತ್ತಾ, ಆ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ಜೀವನೋಪಾಯಕ್ಕಾಗಿ ಹೋಟೆಲ್ ಸರ್ವರ್ ಆಗಿ, ನಂತರ ಸಿನಿಮಾ ನಟನಾಗಿ, ಜನಪ್ರಿಯ ಸ್ಟಾರ್ ಆಗಿ, ಸಿಕ್ಕಾಪಟ್ಟೆ ಕಾಸು, ಖ್ಯಾತಿ ಗಳಿಸಿ ಹಿಂತಿರುಗಿ ನೋಡಿದಾಗ ಹೆತ್ತ ಅಮ್ಮನೇ ಇಲ್ಲವಾದಾಗ, ಮನಃಶಾಂತಿಗಾಗಿ ಮತ್ತೆ ಸರ್ವರ್ ಕೆಲಸಕ್ಕೆ ಹಿಂದಿರುಗುವ ಮನಃ ಕಲುಕುವಂತಹ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರಿಂದ, ಆ ಚಿತ್ರ ಅವರ ಚಿತ್ರ ಬದುಕಿನಲ್ಲಿ ಬಾರಿ ಯಶಸ್ಸನ್ನು ತಂದುಕೊಟ್ಟಿದ್ದಲ್ಲದೇ, ಅವರ ನಟನೆಯಲ್ಲಿದ್ದ ಪ್ರಬುದ್ಧತೆಯನ್ನು ಹೊರತರಲು ಸಹಾಯ ಮಾಡುತ್ತದಲ್ಲದೇ, ಆ ಪಾತ್ರದ ಮೂಲಕ ತಮಿಳುನಾಡಿನ ಮನೆ ಮಾತಾಗುವುದಲ್ಲದೇ,ಅವರನ್ನು ತಮಿಳಿಗರು ಎಂದೇ ಅಪ್ಪಿ ಒಪ್ಪಿಕೊಳ್ಳುವಂತಾಗುತ್ತದೆ. 1993ರಲ್ಲಿ ಇದೇ ಚಿತ್ರವ ಕನ್ನಡಲ್ಲಿ ಕೆ.ವಾಸು ಅವರ ನಿರ್ಡೇಶನದಲ್ಲಿ ಜಗ್ಗೇಶ್ ನಾಯಕರಾಗಿ ಸರ್ವರ್ ಸೋಮಣ್ಣ ಎಂಬ ಚಿತ್ರವಾಗಿ ಅದು ಸಹಾ ಯಶಸ್ವಿ ಎನಿಸಿಕೊಳ್ಳುತ್ತದೆ.
ಆದೇ ಸಮಯದಲ್ಲಿ ತಮಿಳು ಚಿತ್ರರಂಗವನ್ನಾಳುತ್ತಿದ್ದ ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಅವರ ಚಿತ್ರದಲ್ಲಿ ಕಡ್ಡಾಯವಾಗಿ ತಾಯ್ ನಾಗೇಶ್ ಅವರ ಹಾಸ್ಯ ಪಾತ್ರವಿರಲೇ ಬೇಕೆಂಬ ಅಲಿಖಿತ ನಿಯಮವೂ ತಮಿಳು ಚಿತ್ರರಂತದಲ್ಲಿರುತ್ತದೆ ಎಂದರೆ ತಾಯ್ ನಾಗೇಸ್ ಅವರ ಖ್ಯಾತಿ ಎಷ್ಟಿತ್ತು ಎಂಬುದರ ಅರಿವಾಗುತ್ತದೆ. ತಾಯ್ ನಾಗೇಸ್ ಅವರ ಕಾಲ್‌ಶೀಟ್ ಪಡೆದು ನಂತರ ಹೀರೋಗಳ ಕಾಲ್ ಶೀಟ್ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಬೆಳೆಯುತ್ತಾರೆ. ಆ ಕಾಲದ ಬಹುತೇಕ ಸಿನಿಮಾಗಳಲ್ಲಿ ತಮಿಳು ಚಿತ್ರರಂಗದ ಮತೊಬ್ಬ ಮಹೋನ್ನತ ನಟಿ ಮನೋರಮಾರೊಂದಿಗಗಿ ಜೋಡಿ ಜನಪ್ರಿಯ ಜೋಡಿ ಎನಿಸಿಕೊಳ್ಳುತದೆ. ಕೇವಲ ಹಾಸ್ಯ ಪಾತ್ರಕ್ಕಷ್ಟೇ ಸೀಮಿತವಾಗದ ತಾಯ್ ನಾಗೇಶ್ ಗಂಭೀರ ಪಾತ್ರದಲ್ಲೂ ನಟಿಸಬಲ್ಲೇ ಎಂಬುದನ್ನು ಅರವತ್ತರ ದಶಕದಲ್ಲಿ ಅತ್ಯಂತ ಯಶಸ್ವಿ ಸಿನಿಮಾ ಎನಿಸಿಕೊಂಡ, ಶಿವಾಜಿ ಗಣೇಶನ್ ನಟಿಸಿದ್ದ ಕವಿಯೊಬ್ಬ ಶಿವನನ್ನೊಲಿಸಿಕೊಳ್ಳುವ ತಿರುವಿಳೈಯಾಡಲ್ ಎಂಬ ಚಿತ್ರದಲ್ಲಿ ತೋಸಿದ್ದಾರೆ. ಉತ್ತಮ ಸಂಗೀತ ಮತ್ತು ಸಾಹಿತ್ಯಗಳಿಂದ ಕೂಡಿದ್ದ ಆ ಸಿನಿಮಾದ ಹಾಡುಗಳನ್ನು ಇಂದಿಗೂ ಸಹಾ ತಮಿಳುನಾಡಿನ ಅನೇಕ ದೇವಸ್ಥಾನಗಳಲ್ಲಿ ಭಕ್ತಿಗೀತೆಯಾಗಿ ಪ್ರಸಾರಮಾಡುವುದು ಗಮನಾರ್ಯವಾಗಿದೆ.
ಕಾಲ ಎಂದೂ ಹೀಗೆ ಇರುವುದಿಲ್ಲಾ ಎನ್ನುವಂತೆ ಸಿನಿಮಾದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ ಸಂಪದಾಯಸ್ಥ ಮನೆತನದ ತಾಯ್ ನಾಗೇಶ್ ಪ್ರೀತಿಸಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆ ಆದ ನಂತರ ಅವರ ವಯಕ್ತಿಕ ಜೀವನದ ಮೇಲೆ ಭಾರೀ ದುಶ್ಪರಿಣಾಮವನ್ನುಂಟು ಮಾಡುತ್ತದೆ. ಇದು ಕುಟುಂಬದ ಆಶಯದ ವಿರುದ್ಧವಾಗಿದ್ದ ಕಾರಣ ಅವರ ಸಂಬಂಧಿಕರೊಂದಿಗಿನ ಸಂಬಂಧವನ್ನು ಮುರಿದು ಬಿದ್ದರೇ, ಇದೇ ಕೊರಗಿನಲ್ಲೇ 1973 ರಲ್ಲಿ ಅವರ ತಾಯಿ ನಿಧನರಾದಾಗ, ತಾಯ್ ನಾಗೇಶ್ ಬಹಳ ಕಾಲ ವಿಚಲಿತಗೊಂಡಿದ್ದರಿಂದ ಅವರ ವೃತ್ತಿ ಬದುಕಿನ ಮೇಲೂ ಸಹಾ ಗಂಭೀರವಾದ ಪರಿನಾಮವನ್ನು ಬೀರಿದ್ದಲ್ಲದೇ 70ರ ದಶಕದ ಆರಂಭದಲ್ಲಿ ಅವರು ನಟಿಸಿದ ಸಾಲು ಸಾಲು ಚಿತ್ರಗಳು ಯಶಸ್ವಿಯಾಗುವುದಿಲ್ಲ. ಅದೇ ಸಮಯದಲ್ಲಿ, ಹೆಸರಾಂತ ನಟ ಮತ್ತು ರಾಜಕಾರಣಿಯಾಗಿದ್ದ ಎಂಜಿಆರ್ ಅವರೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯಗಳು ಮೂಡಿದ ಕಾರಣ ಅವರ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶವು ನಾಗೇಶ್ ಅವರ ಕೈ ತಪ್ಪುತ್ತದೆ. ಇವೆಲ್ಲದರ ನಡುವೆ ನಾಗೇಶ್ ಅವರ ಮಾಲೀಕತ್ವದ ನಾಗೇಶ್ ಥಿಯೇಟರ್ ಬಾಕಿ ಪಾವತಿಸದಿದ್ದಕ್ಕಾಗಿ ವಶಪಡಿಸಿಕೊಳ್ಳುವ ಹಂತಕ್ಕೆ ಹೋದಾಗ, ತಮ್ಮೆಲ್ಲಾ ಹಮ್ಮು ಮತ್ತು ಬಿಮ್ಮುಗಳನ್ನು ಬದಿಗೊತ್ತಿ ಮತ್ತೆ ಎಂಜಿಆರ್ ಅವರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡರಾದರೂ, ತಾಯ್ ನಾಗೇಶ್ ಅವರ ಚಿತ್ರ ಬದುಕು ಮುಗಿದೇ ಹೋಯಿತೇನೋ ಎನ್ನುವಂತಾಗುತ್ತದೆ.
ಕರ್ಮಣ್ಯೇವಾಧಿಕಾರಸೇ, ಮಾಫಲೇಷು ಕದಾಚನ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿರುವಂತೆ ಮರಳಿ ಯತ್ನವ ಮಾಡು, ಧೂಳಿನಿಂದ ಎದ್ದು ಬಾ ಎನ್ನುವಂತೆ ಮತ್ತೇ ತಮ್ಮ ಪ್ರಯತ್ನವನ್ನು ಬಿಡದ ತಾಯ್ ನಾಗೇಶ್ ಬದಲಾಗುತ್ತಿರುವ ಸಮಯಕ್ಕೆ ತಕ್ಕಂತೆ ಹೇಗೆ ನಿಭಾಯಿಸಬೇಕು ಎಂಬುದನ್ನು ಅರಿತು ಕೊಂಡು ತಮ್ಮ ನಟನೆಯಲ್ಲಿ ಅಲ್ಪ ಸ್ವಲ್ಪ ಬದಲಾಅಣೆ ಮಾಡಿಕೊಂಡು 1974 ರಲ್ಲಿ ಕಮಲ್ ಹಾಸನ್ ಅಭಿನಯದ ಅಪೂರ್ವ ರಾಗಂಗಲ್ ಸಿನಿಮಾದಲ್ಲಿ ನಿಭಾಯಿಸಿದ ಕುಡುಕನ ಪಾತ್ರವು ಯಾವ ಪರಿಣಾಮ ಬೀರಿತೆಂದರೆ, ಆ ಸಿನಿಮಾದಲ್ಲಿ ತಮ್ಮದೇ ನೆರಳಿನೊಂದಿಗೆ ಮಾತನಾಡುತ್ತಾ ಚೀಯರ್ಸ್ ಎಂದು ಹೇಳುತ್ತಾ ಖಾಲಿ ಲೋಟವನ್ನು ಅದರ ಮೇಲೆ ಎಸೆಯುವ ದೃಶ್ಯವನ್ನು ಚಿತ್ರ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರಲ್ಲಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಸಿತಲ್ಲದೇ, ಸಿನಿಮಾದ ಮಧ್ಯಾಂತರದಲ್ಲಿ ಕಾಫೀ/ಟೀ ಕುಡಿದ ಕಪ್ಪುಗಳನ್ನು ತಾಯ್ ನಾಗೇಶ್ ರಂತೆಯೇ ಎಸೆಯುವುದನ್ನು ಅನುಕರಿಸಲಾರಂಭಿಸುತ್ತಾರೆ. ಮೂಲತಃ ನಾಗೇಶ್ ಹಾಸ್ಯ ನಟನಾಗಿದ್ದರೂ ನಾಗೇಶ್ ಅವರ ಹಾಸ್ಯಾಭಿನಯವು ಬಹುತೇಕ ಹಾಲಿವುಡ್ ಐಕಾನ್ ಜೆರ್ರಿ ಲೂಯಿಸ್ ಅವರಿಂದ ಸ್ಫೂರ್ತಿ ಪಡೆದಿದೆ ಎಂದು ಅವರ ಗೆಳೆಯರೇ ಹೇಳಿದ್ದುಂಟು. ನಾಗೇಶ್ ಮತ್ತು ಜೆರ್ರಿ ಲೂಯಿಸ್ ನಡುವಿನ ಸಾಮ್ಯತೆಗಳಿಂದಾಗಿ ನಾಗೇಶರಿಗೆ ಜೆರ್ರಿ ಲೆವಿಸ್ ಆಫ್ ಇಂಡಿಯಾ ಎಂಬ ಗೌರವವನ್ನು ತಂದುಕೊಟ್ಟ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
1980ರ ದಶಕದ ನಂತರದ ಹಲವಾರು ಚಿತ್ರಗಳಲ್ಲಿ ಹಾಸ್ಯ ಪಾತ್ರಕ್ಕಿಂತಲು ಹೆಚ್ಚಾಗಿ ವಯಸ್ಸಾದ ಪಾತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಖಳನಾಯಕರಾಗಿ ಆಭಿನಯಿಸಲಾಅಂಭಿಸಿದರು. ಕಮಲಾ ಹಾಸನ್ ಕುಜ್ಜ ವ್ಯಕ್ತಿಯಾಗಿ ಆಭಿನಯಿಸಿದ್ದ 1989ರಲ್ಲಿ ಸೂಪರ್ ಹಿಟ್ ಚಿತ್ರ ಎನಿಸಿಕೊಂಡ ಅಪೂರ್ವ ಸಹೋಧರ್‌ಗಳ್ ಚಿತ್ರದ ಖಳನಾಯಕನ ಪಾತ್ರ ನಂತರ, ರಜನಿಕಾಂತ್ ಅವರ ಅತಿಶಯ ಪಿರವಿ ಮತ್ತು ಮೌನಂ ಸಮ್ಮಧಂನಲ್ಲಿನ ಖಳನಾಯಕನ ಪಾತ್ರ ಅಪಾರವಾದ ಜನಮನ್ನಣೆಯನ್ನು ಗಳಿಸಿ, ನಾಗೇಶ್ ಅವರು ನಕಾರಾತ್ಮಕ, ವಿಕೃತ ಹಿಂಸಾತ್ಮಕ ಪಾತ್ರಗಳಲ್ಲೇ ನಟಿಸುತ್ತಿದ್ದಾರೇನೋ ಎನ್ನುವಷ್ಟರಲ್ಲಿ ಕಮಲಾಹಾಸನ್ ಅವರ ಮೈಕೆಲ್ ಮದನ ಕಾಮ ರಾಜನ್ ಎಂಬ ಚಿತ್ರದಲ್ಲಿ ನಾಗೇಶ್ ಅವರು ಅಪ್ರಾಮಾಣಿಕ ಕಾರ್ಯದರ್ಶಿ ಅವಿನಾಶಿಯ ಪಾತ್ರವನ್ನು ನಿರ್ವಹಿಸುವ ಮೂಲಕ ತಾನು ಸಕಲಕಲಾವಲ್ಲಭ ಎಂಬುದನ್ನು ತೋರಿಸಿಕೊಟ್ಟರು.
1994 ರ ನಮ್ಮವರ್ ಚಲನಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟನಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡ ನಾಗೇಶ್,1990 ರಿಂದ 2000ರ ವರೆಗೂ ಸಾಲು ಸಾಲಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದರು. ಕಮಲ್ ಹಾಸನ್ ಅವರೊಂದಿಗೆ ವಯಕ್ತಿಕವಾಗಿ ಉತ್ತಮವಾದ ಸಂಬಂಧವನ್ನು ಹೊಂದಿದ್ದ ಕಾಅಣ, 1970 ರಿಂದ 2000ರ ಆವರ ಬಹುತೇಕ ಚಿತ್ರಗಳಲ್ಲಿ ನಾಗೇಶ್ ಅವರ ಸಹ-ನಟರಾಗಿದ್ದರು. ಇನ್ನು ಕಮಲ್ ಹಾಸನ್ ಅವರ ಸ್ವಂತ ನಿರ್ಮಾಣದ ಬಹುತೇಕ ಚಿತ್ರಗಳಲ್ಲಿ ನಾಗೇಶ್ ಅವರಿಗೇ ವಿಶೇಷ ಪಾತ್ರವನ್ನು ನೀಡಲಾಗುತ್ತಿತ್ತು ಎನ್ನುವುದಕ್ಕೆ ಕಮಲ್ ಅವರ ಅವ್ವೈ ಷಣ್ಮುಗಿ ಚಿತ್ರದ ಮೇಕಪ್ ಕಲಾವಿದ ಜೋಸೆಫ್ ಪಾತ್ರ, ವಸೂಲ್ ರಾಜ ಎಂಬಿಬಿಎಸ್ ನಲ್ಲಿ ಕಮಲ್ ಅವರ ತಂದೆಯ ಪಾತ್ರಗಳೇ ಸಾಕ್ಷಿ. ಕಾಕತಾಳೀಯದಂತೆ 2008ರಲ್ಲಿ ಕಮಲ್ ಅವರ ದಶಾವತಾರಂನಲ್ಲಿ ಕಲೀಫುಲ್ಲಾ ಮುಕ್ತಾರ್ ಅವರ ತಂದೆ ಶೇಖ್ ಪಾತ್ರವೇ ನಾಗೇಶ್ ಅವರ ಕಡೆಯ ಚಿತ್ರವಾಯಿತು,
1958 ರಿಂದ 2008 ರವರೆಗೆ ಸುಮಾರು 1,000 ಚಲನ ಚಿತ್ರಗಳಲ್ಲಿ ಎಂ.ಜಿ.ಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ನಂತರ ಬಂದ ರಜನಿಕಾಂತ್, ಕಮಲಾಹಾಸನ್ ಅಲ್ಲದೇ ಇತ್ತೀಚಿನ ವಿಜಯ್, ಅಜಿತ್‌ಗಳಂತಹ ಹುಡುಗರೊಂದಿಗೂ ಕೇವಲ ತಮಿಳಷ್ಟೇ ಅಲ್ಲದೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲೂ ಹಾಸ್ಯನಟರಾಗಿ, ಖಳನಟರಾಗಿ ನಂತರ ಪೋಷಕ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರೂ ವಯಕ್ತಿಕವಾಗಿ ಶಿಸ್ತಿನ ಜೀವನ ನಡೆಸದೇ ವಿಪರೀತ ಕುಡಿತ ಮತ್ತು ಸರಣಿ ಧೂಮಪಾನ ಮಾಡುತಿದ್ದರಿಂದ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಅವರ ಆರೋಗ್ಯವು ಕ್ಷೀಣಿಸಿದ ಕಾರಣ,2009ರ ಜನವರಿ 31ರಂದು 77 ವರ್ಷದ ಸಂತೃಪ್ತ ಜೀವನವನ್ನು ನಡೆಸಿ ಈ ಲೋಕವನ್ನಗಲಿದರು.
ತಮ್ಮ ವಯಕ್ತಿಯ ವ್ಯತಿರಿಕ್ತ ಜೀವನದ ಹೊರತಾಗಿಯೂ ತಮ್ಮ ಚಿತ್ರಗಳ ಮೂಲಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಅರ್ಥಾತ್ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಇಷ್ಟವಾಗುವ ಸರಳ ಸಂಭಾವಿತರಾಗಿ ಎಲ್ಲರಲ್ಲೂ ನಗೆಯುಕ್ಕಿಸುವ ಪಾತ್ರಗಳ ಮೂಲಕ ರಂಚಿಸುತ್ತಲೇ ಮರೆಯಾಗಿ ಹೋದರೂ, ಒಬ್ಬ ಕನ್ನಡಿಗನಾಗಿ ಕರ್ನಾಟಕದ ಕೀರ್ತಿಯನ್ನು ಅಜರಾಮರವಾಗಿಸಿದ ಕಾರಣ ತಾಯ್ ನಾಗೇಸ್ ಅವರು ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ, ಉಮಾಸುತ