ಕಳೆದ ಸಂಚಿಕೆಯಲ್ಲಿ ನಾಡಿನ ಖ್ಯಾತ ರಂಗಕರ್ಮಿ, ನಾಟಕಾರ, ನಿರ್ದೇಶಕ, ಸಂಗೀತ ನಿರ್ದೇಶಕ, ಹತ್ತು ಹಲವು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಬಿ.ವಿ. ಕಾರಾಂತರ ಬಗ್ಗೆ ತಿಳಿದು ಕೊಂಡಿದ್ದೆವು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದಾಳೆ ಎಂಬ ಪ್ರಸಿದ್ಧ ಆಂಗ್ಲ ನಾಣ್ಣುಡಿಯಿದ್ದು, ಆ ಮಹಿಳೆ, ತಾಯಿ, ಸಹೋದರಿ, ಪತ್ನಿ ಇಲ್ಲವೇ ಬೇರೆಯವರು ಸಹಾ ಆಗಿರಬಹುದು. ಈ ಮಾತಿಗೆ ಜ್ವಲಂತ ಉದಾಹರಣೆಯಂತೆ ಶ್ರೀ ಬಿ.ವಿ. ಕಾರಾಂತರ ಧರ್ಮಪತ್ನಿಯಾಗಿ, ಅವರ ಎಲ್ಲಾ ಕಾರ್ಯಗಳ ಹಿಂದೆ ಬಹುದೊಡ್ಡ ಶಕ್ತಿಯಾಗಿ ಸ್ವತಃ ನಟಿ, ರಂಗಕರ್ಮಿ, ವಸ್ತ್ರವಿನ್ಯಾಸಕಿಯಷ್ಟೇ ಅಲ್ಲದೇ, ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಂತಹ ಶ್ರೀಮತಿ ಪ್ರೇಮಾ ಕಾರಂತರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಕಬ್ಬಿಣದ ನಾಡು ಭದ್ರಾವತಿ ಮೂಲದ ಶ್ರೀ ದೇವೋಜಿ ರಾವ್ ಮತ್ತು ಕಮಲಮ್ಮ ದಂಪತಿಗಳ ಸುಪುತ್ರಿಯಾಗಿ 1936ರ ಆಗಸ್ಟ್ 15ರಂದು ಪ್ರೇಮ ಅವರ ಜನನವಾಗುತ್ತದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಜೀವನವನ್ನು ನಡೆಸುವುದೇ ಕಷ್ಟಕರ ಎನಿಸಿದ್ದಂತಹ ಸಮಯದಲ್ಲೇ ಅವರ ತಂದೆಯವರ ದೇಹಾಂತ್ಯವಾಗುತ್ತದೆ. ಇನ್ನು ಅವರ ತಾಯಿ ಕಮಲಮ್ಮನವರು ಕ್ಷಯರೋಗದಿಂದ ಬಳಲುತ್ತಿದ್ದು ಅದರ ಸೋಂಕು ಮತ್ತೊಬ್ಬರಿಗೆ ತಾಗಬಾರದೆಂದು ಆಕೆಯ ಬಳಿ ಯಾರನ್ನೂ ಹೋಗಲು ಬಿಡದೇ ಇದ್ದ ಕಾರಣ ಪ್ರೇಮಾರವರಿಗೆ ಬಾಲ್ಯದಿಂದಲೂ ತಂದೆ ತಾಯಿಯರ ಪ್ರೀತಿ ಪ್ರೇಮಗಳು ಲಭಿಸದೇ ಹೋದರೂ, ಅಂದಿನ ಅವಿಭಜಿತ ಕೋಲಾರದ ಶಿಡ್ಲಘಟ್ಟದಲ್ಲಿದ್ದ ತಮ್ಮ ಅಜ್ಜಿಯ ಮನೆಯಲ್ಲಿ ನೆಲಸಿ ಅಲ್ಲಿ ಅಜ್ಜಿಯ ಆಶ್ರಯದಲ್ಲಿ ಬೆಳೆದದ್ದಲ್ಲದೇ, ಅಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ.
ಅಜ್ಜಿಯ ಮನೆಯಲ್ಲಿ ಅಜ್ಜಿಯಿಂದ ಕಲಿತ ಸಂಸ್ಕಾರ ಮತ್ತು ಸಂಪ್ರದಾಯಗಳ ಜೊತೆ ಸ್ವಾಭಿಮಾನಿಯಾಗಿ ಬದುಬೇಕೆಂಬ ಛಲವನ್ನು ಹೊತ್ತು ಬೆಂಗಳೂಗೆ ಬಂದು ಸೇಂಟ್ ತೆರೇಸಾ ಕಾನ್ವೆಂಟಿನಲ್ಲಿ ಶಿಕ್ಷಕಿಯಾಗಿ ಸೇರಿಕೊಳ್ಳುತ್ತಾರೆ. ಸಹಜವಾಗಿಯೇ ಶಾಲೆಯಲ್ಲಿ ನಡೆಯುತ್ತಿದ್ದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದದ್ದಲ್ಲದೇ, ತಮ್ಮ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದಲೂ ಸಣ್ಣ ಪುಟ್ಟ ನಾಟಕಗಳನ್ನು ಮಾಡಿಸುತ್ತಾ ಬಲು ಬೇಗನೆ ಎಲ್ಲರ ಪ್ರೀತಿಪಾತ್ರರಾಗುತ್ತಾರೆ. ಸಣ್ಣ ವಯಸ್ಸಿನಲ್ಲೇ ತಂದೆ ತಾಯಿಯರ ದಾಂಪತ್ಯ ಜೀವನ ನೋಡಿ ಬೇಸತ್ತಿದ್ದ ಪ್ರೇಮಾರವರು ಮದುವೆಯಾಗಬಾರದೆಂದೇ ನಿರ್ಧರಿಸಿದ್ದರು. ಆದರೆ ತಾವೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ, ಅದೊಮ್ಮೆ ಸ್ನೇಹಿತೆಯೊಬ್ಬರ ಮನೆಯಲ್ಲಿ ಭೇಟಿಯಾದಾಗ ಬಿ.ವಿ.ಕಾರಂತರನ್ನು ಭೇಟಿ ಮಾಡಿದಾಗ, ಅವರಿಬ್ಬರ ಮನಸ್ಥಿತಿಗಳು ಒಂದೇ ಆಗಿದ್ದನ್ನು ಗಮನಿಸಿ ಅವರಲ್ಲಿ ಪ್ರೇಮಾಂಕುರ ಮೂಡಿ, ಆರಂಭದಲ್ಲಿ ಸ್ನೇಹಿತರಾಗಿದ್ದವರು, ಸ್ವಲ್ಪ ಸಮಯದಲ್ಲೇ ಮದುವೆ ಆಗಲು ನಿರ್ಧರಿಸಿ 1958 ರಲ್ಲಿ ಆರ್ಯ ಸಮಾಜದಲ್ಲಿ ಅಲ್ಲಿಯ ವಿಧಿ ವಿಧಾನಗಳ ಪ್ರಕಾರ ವಿವಾಹವಾಗುತ್ತಾರೆ.
ಇದೇ ಸಮಯದಲ್ಲೇ ಬಿ.ವಿ. ಕಾರಾಂತರು ವಾರಣಾಸಿಯಲ್ಲಿದ್ದ ಕಾರಣ, ಪತಿಯವರೊಡನೆ ಪ್ರೇಮಾರವರೂ ಸಹಾ ವಾರಣಾಸಿಗೆ ತೆರಳಿ, ಅಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳುತ್ತಾರೆ, ಮುಂದೆ, ಬಿ.ವಿ.ಕಾರಂತರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಸೇರಿದಾಗ, ಅಷ್ಟರಲ್ಲಾಗಲೇ ತಮ್ಮ ಶಿಕ್ಷಣವನ್ನು ಮುಗಿಸಿದ್ದ ಪ್ರೇಮಾ ಅವರು ದೆಹಲಿಗೆ ಹೋಗಿ ಅಲ್ಲಿನ ಅರಬಿಂದೋ ಆಶ್ರಮದಲ್ಲಿ ಶಿಕ್ಷಕಿಯಾಗಿ ಸೇರಿಕೊಂಡು ಮತ್ತೆ ಅಲ್ಲಿ ವಿವಿಧ ನಾಟಕ ಪ್ರಯೋಗವನ್ನು ಮುಂದುವರೆಸಿ, ನಾಟಕಗಳ ಮೂಲಕ ಮಕ್ಕಳಿಗೆ ಇತಿಹಾಸ ಮತ್ತು ಗಣಿತದಂತಹ ವಿಷಯಗಳನ್ನು ಬಹಲ ಸುಲಭವಾಗಿ ಅರ್ಥವಾಗುವಂತಹ ಕಲ್ಪನೆಯನ್ನು ಸಾಕಾರಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಬಿ.ವಿ. ಕಾರಂತರ ಒತ್ತಾಸೆಯ ಮೇರೆಗೆ ಪ್ರೇಮಾ ಕಾರಂತರೂ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದಾಗ ಖ್ಯಾತ ನಟರಾದ ಓಂ ಪುರಿ, ಸಾಯಿ ಪರಾಂಜಪೆ ಮುಂತಾದವರು ಅವರ ಸಹಪಾಠಿಗಳಾಗಿದ್ದರು. ಅಲ್ಲಿ ಪದವಿಯನ್ನು ಪಡೆದ ನಂತರ ಅಲ್ಲೇ ಎರಡು ವರ್ಷ ನಾಟಕದ ಶಿಕ್ಷಕಿಯಾಗಿ ದುಡಿದದ್ದಲ್ಲದೇ, ರಾಷ್ಟ್ರೀಯ ಪುಸ್ತಕ ಟ್ರಸ್ಟ್ ನ ಭಾಷಾಂತರಕರಾಗಿ, ಕನ್ನಡದಿಂದ ಹಿಂದಿ ಮತ್ತು ಹಿಂದಿಯಿಂದ ಕನ್ನಡಕ್ಕೆ ಸುಮಾರು ೮ ನಾಟಕಗಳನ್ನು ಅನುವಾದಿಸುತ್ತಾರೆ.
70ರ ದಶಕದಲ್ಲಿ ಕಾರಾಂತರೊಂದಿಗೆ ಬೆಂಗಳೂರಿಗೆ ಮರಳಿದ ಪ್ರೇಮರವರು ಪತಿಯೊಂದಿಗೆ ಬೆನಕ ಎಂಬ ಹವ್ಯಾಸಿ ನಾಟಕ ತಂಡವನ್ನು ಕಟ್ಟಿ ಅಲ್ಲಿ ಕಾರಾಂತರು ದೊಡ್ಡವರ ನಾಟಕಗಳತ್ತ ಹರಿಸಿದರೆ ಚಿತ್ತ, ಪ್ರೇಮಾರವರು ಮಕ್ಕಳ ನಾಟಕದ ಕಡೆಗೆ ಕೇಂದ್ರೀಕರಿಸಿ, ಮಕ್ಕಳಿಗಾಗಿಯೇ, ಹೆದ್ದಾಯಣ, ದೈತ್ಯ, ಬಂದ ಬಂದ ಗುಣವಂತ ಮತ್ತು ಜೈಂಟ್ ಮಾಮಾ ಮುಂತಾದ ನಾಟಕಗಳನ್ನು ನಿರ್ದೇಶಿಸಿ ಯಶ್ವಸಿಯಾಗಿ ಪ್ರದರ್ಶಿಸುತ್ತಾರೆ. ಅಂದು ಬಾಲ ಕಲಾವಿದರುಗಳಾಗಿ ಅವರ ಗರಡಿಯಲ್ಲಿ ಪಳಗಿದವರು ಇಂದು ಕನ್ನಡ ಚಿತ್ರರಂಗ ಮತ್ತು ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. ಬೆನಕ ಮಕ್ಕಳ ಕೇಂದ್ರದ ಮೂಲಕ ಅಳಿಲು ರಾಮಾಯಣದಂತಹ ನಾಟಕದ ಜೊತೆಗೆ ಮಕ್ಕಳಿಗೆ ಮೈಮ್ ಕಲೆ, ವೇಷಭೂಷಣ ವಿನ್ಯಾಸ ಮತ್ತು ರಂಗಪರಿಕರಗಳ ಬಳಕೆಯನ್ನು ಕಲಿಸುವಲ್ಲಿ ಯಶಸ್ವಿಯಾಗುತ್ತಾರೆ. 1979ರಲ್ಲಿ ಅಲಿಬಾಬಾ ಶೀರ್ಷಿಕೆಯ ಮಕ್ಕಳ ನಾಟಕ ಅತ್ಯಂತ ಯಶ್ವಸಿಯಾದ ನಂತರ ಮಕ್ಕಳಿಗಾಗಿಯೇ ಸುಮಾರು 20 ನಾಟಕಗಳ ರಚನೆ, 10 ನಾಟಕಗಳ ನಿರ್ದೇಶನದ ಜೊತೆ 120 ನಾಟಕಗಳ ವಸ್ತ್ರ ವಿನ್ಯಾಸವನ್ನು ಮಾಡಿದ್ದ ಹೆಗ್ಗಳಿಕೆ ಪ್ರೇಮಾ ಕಾರಾಂತರದ್ದು.
ಅತ್ಯುತ್ತಮ ವಸ್ತ್ರವಿನ್ಯಾಸಕಿಯಾಗಿದ್ದ ಪ್ರೇಮಾ ಕಾರಂತರು ಹಯವದನ, ಈಡಿಪಸ್, ಒಥೆಲೋ, ಕಿಂಗ್ ಲಿಯರ್, ಜೋಕುಮಾರಸ್ವಾಮಿ, ಸಂಕ್ರಾಂತಿ, ಮ್ಯಾಕ್‍ಬೆತ್ ಮುಂತಾದ ಪ್ರಸಿದ್ಧ ನಾಟಕಗಳನ್ನೂ ಒಳಗೊಂಡಂತೆ 120ಕ್ಕೂ ಹೆಚ್ಚು ನಾಟಕಗಳಲ್ಲಿ ರಂಗವಿನ್ಯಾಸಕರಾಗಿ ಕಾರ್ಯನಿರ್ವಹಿಸಿ ಅತ್ಯಂತ ಪ್ರಖ್ಯಾತವಾಗಿದ್ದರಿಂದ, ಜಿ. ವಿ. ಅಯ್ಯರ್ ನಿರ್ದೇಶಿಸಿದ್ದ ಹಂಸಗೀತೆ ಚಿತ್ರದ ವಸ್ತ್ರ ವಿನ್ಯಾಸಕಿಯಾಗಿ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರೇಮಾ ಕಾರಂತರು ಮುಂದೆ ಬಿ.ವಿ.ಕಾರಾಂತರು, ಶಿವರಾಮ ಕಾರಾಂತರ ಚೋಮನ ದುಡಿ ಕಾದಂಬರಿಯನ್ನು ಚಲನಚಿತ್ರವಾಗಿ ನಿರ್ದೇಶಿಸಿ ಅತ್ಯುತ್ತಮ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದರೆ, ಅದೇ ಚಿತ್ರದ ವಸ್ತ್ರ ವಿನ್ಯಾಸಕ್ಕೆ ಪ್ರೇಮಾರವರಿಗೆ ಪ್ರಶಸ್ತಿ ದೊರೆಯುತ್ತದೆ. ಮುಂದೆ ತಮ್ಮ ಪತಿಯವರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳಲ್ಲಿಯೂ ಪ್ರೇಮಾರವರದ್ದೇ ವಸ್ತ್ರ ವಿನ್ಯಾಸ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕೇವಲ ಕನ್ನಡವಷ್ಟೇ ಅಲ್ಲದೇ, ಪಂಜಾಂಬಿಯ ಧರ್ತಿ ದೇಶ್ ಪಂಜಾಬ್ ದಿ, ಹಿಂದಿಯ ಚಂದ್ರಗುಪ್ತ, ಸ್ಕಂದ ಗುಪ್ತ ಮುಂತಾದ ಅನೇಕ ನಾಟಕಗಳಿಗಳಲ್ಲಿ ತಮ್ಮ ಛಾಪನ್ನು ಮೂಡಿಸಿ ದೇಶವ್ಯಾಪಿ ಹೆಸರುವಾಸಿಯಾಗುತ್ತಾರೆ.
1977ರಲ್ಲಿ ತೆರೆಗೆ ಬಂದ ಕುದುರೆ ಮೊಟ್ಟೆ ಚಿತ್ರದಲ್ಲಿ ಕಲಾ ನಿರ್ದೇಶಕಿಯಾದದ ಪ್ರೇಮಾರವರು ನಂತರ ಅದಾಗಲೇ ಕಾದಂಬರಿಗಾರ್ತಿಯಾಗಿ ಪ್ರಸಿದ್ಧರಾಗಿದ್ದ ಶ್ರೀಮತಿ ಎಂ. ಕೆ. ಇಂದಿರಾ ವಿಧವಾ ಕಥೆಯಾಧಾರಿತ ಫಣಿಯಮ್ಮ ಎಂಬ ಕಥೆಯನ್ನು 1983ರಲ್ಲಿ ಖ್ಯಾತ ನಟಿ ಎಲ್ ವಿ ಶಾರದಾ, ಫಣಿಯಮ್ಮ ಎಂಬ ಮುಖ್ಯಪಾತ್ರವಾದರೆ, ಬೇಬಿ ಪ್ರತಿಮಾ, ಪ್ರತಿಭಾ ಕಾಸರವಳ್ಳಿ, ಪೂರ್ಣಿಮಾ ಗಾಂವ್ಕರ್, ಶ್ರೀಮತಿ ಪ್ರಮೀಳಾ, ಶ್ರೀಮತಿ ಭವಾನಿ ಮುಂತಾದ ತಾರಾಂಗಣದ ಫಣಿಯಮ್ಮ ಸಿನಿಮಾವನ್ನು ನಿರ್ದೇಶಿಸುವ ಮೂಲಕ ರಾಜ್ಯದ ಮೊತ್ತ ಮೊದಲ ಮಹಿಳಾ ನಿರ್ದೇಶಕಿ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ. ಈ ಚಿತ್ರಕ್ಕೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗುತ್ತಾರೆ.
ಪತಿ ಬಿ.ವಿ.ಕಾರಾಂತರ ಚೊಚ್ಚಲು ಚಿತ್ರ ಚೋಮನದುಡಿಗೆ ಅತ್ಯುತ್ತಮ ಚಲನಚಿತ್ರ ಎಂಬ ರಾಷ್ಟ್ರೀಯ ಪ್ರಶಸ್ತಿ ದೊರೆತರೆ ಅವರ ಪತ್ನಿ ಪ್ರೇಮಾ ಕಾರಾಂತರಿಗೂ ಸಹಾ ಅವರ ಮೊಟ್ಟ ಮೊದಲ ನಿರ್ದೇಶನದ ಫಣಿಯಮ್ಮ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆತು, ಹೀಗೆ ಪತಿ-ಪತ್ನಿಯರಿಬ್ಬರೂ ತಮ್ಮ ಚೊಚ್ಚಲು ನಿರ್ದೇಶದ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಮೊದಲ ದಂಪತಿಗಳು ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿರುವುದು ವಿಶೇಷವಾಗಿದೆ. ಮುಂದೆ ಇಂದಿನ ಪ್ರಸಿದ್ಧ ನಟಿ ಮಾಳವಿಕಾ ಬಾಲನಟಿಯಾಗಿ ನಟಿಸಿದ್ದ ನಕ್ಕಳಾ ರಾಜಕುಮಾರಿ, ಲಕ್ಷ್ಮೀ ಕಟಾಕ್ಷ, ಅಬ್ದುಲ್ಲಾ – ಗೋಪಾಲ ಮತ್ತು ಹಿಂದಿಯಲ್ಲಿ ಬಂದ್ ಝರೋಕೆ ಮುಂತಾದ ಚಿತ್ರಗಳನ್ನು ನಿರ್ದೇಶಿಸಿತ್ತಾರೆ. ಮಣಿಪುರ್ – ದಿ ಲ್ಯಾಂಡ್ ಆಫ್ ಜ್ಯೂಯಲ್ಸ್, ಅಪ್ಪಿಕೋ,‘ಸ್ವಪ್ನ ಹೂವಿ ಸಾಕಾರ್, ಚಲೋ ಹಂಭೀ ಸುಖೀ ಬನೇ, ವಿಕ್ರಾಂತ್ ಮೈ ಫ್ರೆಂಡ್, ಅರ್. ನಾಗರತ್ನಮ್ಮ ಮುಂತಾದ ಸಾಕ್ಷ್ಯ ಚಿತ್ರಗಳನ್ನೂ ನಿರ್ದೇಶಿಸುತ್ತಾರೆ.
ಭೂಪಾಲಿನ ರಂಗಮಂಡಲ ನಾಟಕ ಕಲಿಕಾ ಕೇಂದ್ರ ಮುಖ್ಯಸ್ಥರಾಗಿ ಕಾರಾಂತರು ಸೇವೆಸಲ್ಲಿಸುತ್ತಿದ್ದಂತಹ ಸಂಧರ್ಭದಲ್ಲಿ 1986ರ ವಿಭಾ ಎಂಬ ನಟಿ ವಿಭಾ ಆಕಸ್ಮಿಕವಾಗಿ ಸುಟ್ಟು ಕೊಂಡ ಪ್ರಕರಣದಲ್ಲಿ ಕಾರಂತರನ್ನು ಆರೋಪಿಯನ್ನಾಗಿ ಕೆಲ ಕಾಲ ಬಂಧನದಲ್ಲಿದ್ದು ವಿಚಾರಣೆ ನಡೆಯುತ್ತಿದ್ದಾಗ, ಆ ದುರ್ಘಟನೆಯ ಪ್ರಭಾವ ಪ್ರೇಮಾ ಅವರ ಬದುಕಿನ ಮೇಲೆ ಬೀರಿದ ಪರಿಣಾಮ ಭಯಂಕರವಾಗಿದ್ದು, ಅದು ಅವರಿಬ್ಬರ ಜೀವನವನ್ನೇ ಅಲುಗಾಡಿಸಿದಂಥ ಈ ದುರ್ಘಟನೆಯಾಗಿತ್ತು. ಆ ಘಟನೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆದು, ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ರೀತಿಯಾಗಿ ಆಕಾರ ಪಡೆಯುತ್ತಾ, ಸತ್ಯಾಸತ್ಯಗಳಿಗಿಂತ ಕಟ್ಟುಕಥೆಗಳೇ ಜಾಸ್ತಿಯಾಗಿ ಎಲ್ಲವೂ ಕಾರಾಂತರೇ ತಪ್ಪಿತಸ್ಥರು ಎಂದು ಷರಾ ಬರೆಯುವಷ್ಟರ ಮಟ್ಟಿಗಿತ್ತು. ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಇಡೀ ಘಟನೆಯನ್ನು ಅನುಭವಿಸಿದ್ದ ಪ್ರೇಮಾ ಕಾರಂತರು, ಸೋಲಿಸಬೇಡ ಗೆಲಿಸಯ್ಯ ಎಂಬ ಆತ್ಮಚರಿತ್ರೆಯನ್ನು ಬರೆದು ಆ ಕೃತಿಯಲ್ಲಿ ತಾವು ಬದುಕಿನಲ್ಲಿ ಎದುರಿಸಿದ ಸಂಕಷ್ಟ – ಸವಾಲುಗಳನ್ನು ಮತ್ತು ಅವುಗಳನ್ನು ತಾವು ಎದುರಿಸಿದ ಬಗೆಯನ್ನೂ ಅತ್ಯಂತ ಸವಿವರವಾಗಿ ವಿವರಿಸಿದ್ದಾರೆ. ಜೀವನ ನಿಂತ ನೀರಾದಾಗ ಅದು ಬದುಕೇ ಅಲ್ಲ. ಸದಾ ಹರಿಯುತ್ತಲೇ ಇರಬೇಕು. ಈ ಹರಿಯುವ ನದಿಯಲ್ಲಿ ಏರಿಳಿತಗಳು ಅನೇಕ. ಈ ಏರಿಳಿತಗಳಲ್ಲಿ ಮುಳುಗಿ ಎದ್ದು, ದಡ ಸೇರಬೇಕಾಗಿ ಬಂದಂಥ ಒಂದು ಅಗ್ನಿ ಪರೀಕ್ಷೆ ನಮ್ಮ ಜೀವನದಲ್ಲಿ ನಡೆದುಹೋಯಿತು. ದುರ್ಘಟನೆ ನಡೆದದ್ದು ಕಾರಂತರ ಜೀವನದಲ್ಲಿ. ಕಾರಂತರ ಜೀವನ ನನ್ನ ಜೀವನವೇ ಅಲ್ಲವೇ? ಎಂದು ಆ ಕೃತಿಯಲ್ಲಿ ಬರೆದಿರುವ ಮಾತುಗಳು ಆ ಕಹಿ ಘಟನೆ ಪ್ರೇಮಾ ಕಾರಂತರ ಮನಸ್ಸಿನ ಮೇಲೆ ಯಾರ ಪರಿಣಾಮ ಬೀರಿತ್ತು ಎಂಬುದನ್ನು ತೋರಿಸುತ್ತದೆ.
ಪ್ರೇಮಾ ಕಾರಾಂತರ ಕಲಾ ಸೇವೆಗಾಗಿ, ಮ್ಯಾನ್ ಹ್ಯಾಂ ಪ್ರಶಸ್ತಿ , ಪ್ಯಾರಿಸ್ ಚಲನಚಿತ್ರೋತ್ಸವದ ಪ್ರೇಕ್ಷಕರ ಪ್ರಶಸ್ತಿ, ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ, ಉತ್ತಮ ಚಲನಚಿತ್ರ, ಅತ್ಯುತ್ತಮ ಕಥೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಇವರನ್ನರಸಿ ಬಂದಿವೆ.
ಕನ್ನಡ ಚಿತ್ರಕಂಡ ಮತ್ತೊಬ್ಬ ಮಹಾನ್ ಸಾಧನ ಶಂಕರ್ ನಾಗ್ ಅವರನ್ನು ಪ್ರಮುಖರನ್ನಾಗಿಸಿಕೊಂಡು ಜೋಕುಮಾರಸ್ವಾಮಿ ಎಂಬ ಸುಪ್ರಸಿದ್ಧ ನಾಟಕವನ್ನು ಸಿನಿಮಾ ಆಗಿ ನಿರ್ದೇಶಿಸಲು ಮುಂದಾಗಿ ಆ ಚಿತ್ರದ ಚಿತ್ರೀಕರಣಕ್ಕಾಗಿ ಬೆಂಗಳೂರಿನಿಂದ ರಾತ್ರಿ ಹೊರಟು ಹುಬ್ಬಳ್ಳಿಗೆ ಬರುತ್ತಿದ್ದ ಶಂಕರ್ ನಾಗ್ ದಾವಣಗೆರೆಯ ಹೊರವಲಯದ ಆನಗೋಡು ಬಳಿ ಅಪಘಾತಕ್ಕೀಡಾಗಿ 1990ರ ಸೆಪ್ಟೆಂಬರ್ 30ರಂದು ಸಾವನ್ನಪ್ಪಿದ್ದದ್ದು ಪ್ರೇಮಾರವರಿಗೆ ಬಹಳ ದುಃಖವನ್ನು ತರಿಸಿದ ಕಾರಣ ಆ ಸಿನಿಮಾವನ್ನು ಅಲ್ಲಿಗೇ ಕೈ ಬಿಡುತ್ತಾರೆ.
ಪ್ರೇಮಾ ಮತ್ತು ಕಾರಾಂತರಿಬ್ಬರೂ ಬಹಳ ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸಿತ್ತುದ್ದಂತಹ ಸಮಯದಲ್ಲೇ, 2002ರ ಸೆಪ್ಟೆಂಬರ್ 1ರಂದು ನಿಧನರಾದ ನಂತರ ಮಾನಸಿಕವಾಗಿ ಬಹಳಷ್ಟು ಕುಗ್ಗಿ ಹೋದ ಪ್ರೇಮರಾವರು ನಂತರದ ದಿನಗಳಲ್ಲಿ ಅಲ್ಲೊಂದು ಇಲ್ಲೊಂದು ಸಣ್ಣ ಸಣ್ಣ ಕೆಲಸಗಳಲ್ಲಿ ತೊಡಗಿಕೊಂಡರೂ, ಕಾರಾಂತರ ಅಗಲಿಕೆಯ ದುಃಖವನ್ನು ತಡೆಯಲಾಗದೇ, 2007ರ ಅಕ್ಟೋಬರ್ 29ರಂದು ಈ ಲೋಕವನ್ನಗಲಿದರು.
ಸತಿ ಪತಿಗಳಿಬ್ಬರೂ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಭೌತಿಕವಾಗಿ ಅವರಿಬ್ಬರೂ ನಮ್ಮೊಂದಿಗೆ ಇಲ್ಲದೇ ಹೋದರೂ ಅವರ ಸಾಧನೆಗಳ ಮೂಲಕ ಅಚಂದ್ರಾರ್ಕವಾಗಿ ಕನ್ನಡಿಗರೊಂದಿಗೆ ಇದುವ ಕಾರಣ, ನಿಸ್ಸಂದೇಹವಾಗಿ ಪ್ರೇಮಾ ಕಾರಂತರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಅತ್ತ್ಯುತ್ತಮ ಲೇಖನ
LikeLiked by 1 person
ನಿಮ್ಮೀ ನಿರಂತರವಾದ ಪ್ರೋತ್ಸಾಹಕ್ಕೆ ಧನ್ಯವಾದಗಳು
LikeLike