ದೊರೈ-ಭಗವಾನ್ ಜೋಡಿಯ, ಛಾಯಾಗ್ರಾಹಕ ದೊರೈ

ಕನ್ನಡ ಚಿತ್ರರಂಗದಲ್ಲಿ 70 ರಿಂದ 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಅನೇಕ ನಾಯಕ ನಾಯಕಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಲ್ಲದೇ, ಅದುವರೆವಿಗೂ ಕೇವಲ ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳಲ್ಲಷ್ಟೇ ನಟಿಸುತ್ತಿದ್ದ ರಾಜಕುಮಾರ್ ಅವರನ್ನು ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ಜೇಡರ ಬಲೆಯಲ್ಲಿ ಜೇಮ್ಸ್ ಬಾಂಡ್ ರೀತಿಯಲ್ಲಿ ತೋರಿಸುವ ಮೂಲಕ ಕನ್ನಡ ಚಿತ್ರಪ್ರೇಮಿಗಳನ್ನು ಕುಣಿಸಿದ ಜೋಡಿ ನಿರ್ದೇಶಕರಾಗಿದ್ದ ದೊರೈ-ಭಗವಾನ್ ಜೋಡಿಯಲ್ಲಿ ಬಿ. ದೊರೈರಾಜು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ  ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

 

WhatsApp Image 2024-11-17 at 00.45.46ಸಾಮಾನ್ಯವಾಗಿ ದೊರೈರಾಜ್ ಎಂಬ ಹೆಸರನ್ನು ಕೇಳಿದ ತಕ್ಷಣ  ಅವರು ತಮಿಳಿನವರೋ ಇಲ್ಲವೇ ಮಲೆಯಾಳಾದವರೋ ಎನ್ನುವ ಭಾವನೆ ಥಟ್ ಎಂದು ಮೂಡುತ್ತದಾದರೂ, ಶ್ರೀ ಬಿ.ದೊರೈರಾಜ್ ಅವರು ಅಪ್ಪಟ ಕನ್ನಡಿಗರಾಗಿದ್ದು, ಮೈಸೂರಿನ ಮೂಲದವರಾಗಿದ್ದು, ಚಿಕ್ಕಂದಿನಿಂದಲೂ ಸಂಗೀತ ಚಿತ್ರ ಕಲೆ, ಕ್ರೀಡೆಯಲ್ಲಿ ಆಸಕ್ತರಾಗಿ, ಅಂತಿಮವಾಗಿ ಚಲನಚಿತ್ರಗಳ ಬಗ್ಗೆ ಆಸಕ್ತಿ ಹೊಂದಿ ಮೈಸೂರಿನಲ್ಲಿ ಆರಂಭವಾದ ನವಜ್ಯೋತಿ ಸ್ಟುಡಿಯೋ ದಲ್ಲಿ ಸಹಾಯಕರಾಗಿ ಸೇರಿ ಕೊಂಡು ನಂತರ ಮುಂಬೈನಲ್ಲಿ ಏನ್.ಜಿ.ರಾವ್ ಬಳಿ ಕ್ಯಾಮರಾ ಸಹಾಯಕರಾಗಿ ಕೆಲಸವನ್ನು ಕಲಿತುಕೊಂಡ ನಂತರ ಮಲಯಾಳಂನ ಶಶಿಧರನ್ ಚಿತ್ರದ ಮೂಲಕ ಸ್ವತಂತ್ರವಾಗಿ ಛಾಯಾಗ್ರಾಕರಾದ ನಂತರ, ವರನಟ ರಾಜಕುಮಾರರ ಸೋದರಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡಿದ ನಂತರ ಅನೇಕ ಕನ್ನಡ ಚಿತ್ರಗಳಲ್ಲಿ ಯಶಸ್ವಿ ಛಾಯಾಗ್ರಾಹಕರಾಗಿ ಗುರುತಿಸಿಕೊಳ್ಳುತ್ತಾರೆ. ರಾಜಕುಮಾರರ ಜಗಜ್ಯೋತಿ ಬಸವೇಶ್ವರ ಚಿತ್ರೀಕರಣ ಸಂದರ್ಭದಲ್ಲಿ ಅ ಚಿತ್ರದ ಸಹ ನಿರ್ದೇಶಕರಾಗಿದ್ದ ಎಸ್.ಕೆ.ಭಗವಾನ್ ಅವರ ಪರಿಚಯ ಮೊತ್ತ ಮೊದಲ ಬಾರಿಗೆ ಆಗುತ್ತದೆ.

 

WhatsApp Image 2024-11-17 at 00.48.25ಅಂದೆಲ್ಲಾ ಮದ್ರಾಸ್‌ನ ಪಾಂಡಿ ಬಜಾರ್‌ ಎನ್ನುವ ಸ್ಥಳದಲ್ಲಿ ಹೆಚ್ಚಾಗಿ ಕನ್ನಡ ಸಿನಿಮಾ ರಂಗದವರು ಕೆಲಸ ಮಾಡುತ್ತಿದ್ದು ಅಲ್ಲಿನ ಸಿನಿಮಾ ಪ್ರೊಡಕ್ಷನ್‌ ಯುನಿಟ್‌ನಲ್ಲಿ ಕೆಲಸಗಾರನಾಗಿ ಭಗವಾನ್‌ ಅವರು ಕೆಲಸ ಮಾಡುತ್ತಿದ್ದಾಗ ಆದೊಮ್ಮೆ ಸರಿಯಾಗಿ ಕೆಲಸ ಸಿಗದೆ, ಸಂಬಳವಿಲ್ಲದೆ ಒಪ್ಪತ್ತು ಊಟಕ್ಕಾಗಿ ಪರದಾಡುವ ಸ್ಥಿತಿಯಲ್ಲಿದ್ದು, ಎರಡು ದಿನಗಳ ಊಟವಿಲ್ಲದೇ ಯಾರ ಬಳಿಯಾದರೂ ಸಾಲ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲು ಯೋಚಿಸುತ್ತಿರುವಾಗ,  ಅದೇ ಸಮಯದಲ್ಲೇ ಛಾಯಾಗ್ರಾಹಕ ದೊರೈ ಅವರು ಸಿಕ್ಕಾಗ, ದಯವಿಟ್ಟು  ಒಂದು ರೂಪಾಯಿ  ಇದ್ದರೆ ಕೊಡಿ, ಎರಡು ದಿನ ಊಟ ಮಾಡಿಲ್ಲಾ.. ಸಂಬಳ ಬಂದ್ಮೇಲೆ ಕೊಡುತ್ತೇನೆ ಎಂದು ಕೇಳಿಕೊಂಡಾಗ, ದೊರೈ  ಅವರು ತಮ್ಮ ಜೋಬಿನಿಂದ ಎಂಟಾಣೆ ಕೊಡುತ್ತಾರೆ.  ಭಗವಾನ್‌ ಆ ಹಣದಿಂದ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದು ಬಂದು ನೇರವಾಗಿ ಜಿ.ವಿ. ಅಯ್ಯರ್‌ ಅವರ ಕಚೇರಿಗೆ ಹೋದಾಗ, ಅಯ್ಯರ್‌ ಅವರು ಯಾಕೋ?  ನಾವೆಲ್ಲ ನಿನ್ನ ಪಾಲಿಗೆ ಸತ್ತು ಹೋಗಿದ್ದೀವಾ.. ಎರಡು ದಿನ ಊಟವಿಲ್ಲದೇ ಇದ್ದರೂ ನಮ್ಮ ಮನೆಗೆ ಬಂದಿಲ್ಲಾ! ಅಂತ ಕೂಗಾಡುತ್ತಾರೆ. ಅರೇ!!  ಎಂಟಾಣೆ ಕೊಟ್ಟ ದೊರೈ ಅಯ್ಯರ್‌ ಬಳಿ ಹೀಗೆ  ಚಾಡಿ ಹೇಳುವುದಾ! ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದದ್ದನ್ನು ಗ್ರಹಿಸಿದ ಅಯ್ಯರ್ ಅವರು ದೊರೈ ನಿನಗೆ ಕೊಟ್ಟ ಎಂಟಾಣೆ ನನ್ನ ಬಳಿ ಸಾಲವಾಗಿ ಪಡೆದ ಹಣವಾಗಿತ್ತು! ಎಂದು ಹೇಳಿದಾಗ, ಅರೇ!! ಅವರು ಸಾಲವಾಗಿ ಪಡೆದ ಹಣವನ್ನು ಸದ್ದಿಲ್ಲದೇ ನನಗೆ ಕೊಟ್ಟರಲ್ಲಾ! ಎಂಬ ಒಳ್ಳೆಯ ಆಭಿಪ್ರಾಯ ಮೂಡಿ ಅಂದಿನಿಂದ ಅವರಿಬ್ಬರ ಸ್ನೇಹ ಗಟ್ಟಿಯಾಗಿದ್ದಲ್ಲದೇ, ಹೀಗೆ ಅವರಿಬ್ಬರೂ ಎಂಟಾಣೆಯ ಪಾರ್ಟ್ನರ್ ಎಂದೇ ಪ್ರಖ್ಯಾತರಾಗಿ  ಕನ್ನಡದ ಯಶಸ್ವಿ ನಿರ್ದೇಶಕರ ಜೋಡಿಯಾಗಿ ಹೊರಹೊಮ್ಮಿದ್ದದ್ದು ಈಗ ಇತಿಹಾಸ.

 

ಆರಂಭದಲ್ಲಿ ದೊರೈ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರೆ, ಟಿ.ವಿ.ಸಿಂಗ್ ಠಾಕೂರ್, ಅವರ ಗರಡಿಯಲ್ಲಿ ಪಳಗಿದ ನಂತರ ಎ.ಸಿ.ನರಸಿಂಹಮೂರ್ತಿ ಅವರೊಂದಿಗೆ ಸಂಧ್ಯಾರಾಗ ಹಾಗೂ ರಾಜದುರ್ಗದ ರಹಸ್ಯ ಚಿತ್ರಗಳ ಸಹನಿರ್ದೇಶನ ಮಾಡಿದ್ದ ಭಗವಾನ್ ಅವರಿಬ್ಬರ  ಗೆಳೆತನ ಬಹಳ ಪಕ್ವಗೊಂಡು ಅವರಿಬ್ಬರೂ ಸೇರಿಕೊಂಡು 1968ರಲಿ ದೊರೈ-ಭಗವಾನ್ ಎಂಬ ಹೆಸರಿನಲ್ಲಿ ಚಿತ್ರವನ್ನು ನಿರ್ದೇಶಿಸಲು ನಿರ್ಧರಿಸಿ, ಅದುವರೆವಿಗೂ  ಕೇವಲ ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳನ್ನೇ ಮಾಡುತ್ತಾ ರಸಿಕರ ರಾಜ ಎಂದೇ ಬಿರುದಾಂಕಿತರಾಗಿದ್ದ ರಾಜಕುಮಾರ್ ಅವರನ್ನು ತಮ್ಮ ಚೊಚ್ಚಲ ಜಂಟೀ ನಿರ್ದೇಶನದ ಜೇಡರ ಬಲೆ ಚಿತ್ರದ ಮೂಲಕ ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ  ಚಲನಚಿತ್ರಗಳನ್ನು ಮಾಡುವ ಮೂಲಕ ರಾಜಕುಮಾರ್ ಹೀಗೂ ನಟಿಸಬಲ್ಲದೇ? ಎಂದು ಜನಾ ಮೂಗಿನ ಮೇಲೆ ಬೆರಳಿಡುವಂತೆ ಮಾಡುವುದರಲ್ಲಿ ಅಭೂತಪೂರ್ವವಾಗಿ ಯಶಸ್ವಿಯಾದ ನಂತರ ದೊರೈ-ಭಗವಾನ್ ಜೋಡಿ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

 

ಹೀಗೆ  ಇವರಿಬ್ಬರೂ ಜೋಡಿಯಾಗುವುದಕ್ಕೂ ಮುಂಚೆ  ದೊರೈ ಅವರು ಮದುವೆ ಆದ ಸಂಗತಿ ಬಲು ರೋಚಕವಾಗಿದೆ. 1956ರಲ್ಲಿ ಎಚ್.ಎಲ್.ಎನ್.ಸಿಂಹ ನಿರ್ದೇಶನದ ಅಬ್ಬಾ ಆ ಹುಡುಗಿ ಸಿನಿಮಾ ಮದ್ರಾಸ್‌ನ ವಾಹಿನಿ ಸ್ಟುಡಿಯೋದಲ್ಲಿ  ಚಿತ್ರೀಕರಣ ಆಗುತ್ತಿದ್ದಂತಹ ಸಂಧರ್ಭದಲ್ಲಿ, ಭಗವಾನ್ ಸಹಾಯಕ ನಿರ್ದೇಶಕರಾಗಿದ್ದರೆ, ದೊರೈ ಆ ಸಿನಿಮಾದ ಛಾಯಾಗ್ರಾಹಕರಾಗಿರುತ್ತಾರೆ.  ಆ ಚಿತ್ರದ ಮೂಲಕ ರಾಜಾಶಂಕರ್ ಮತ್ತು ಲೀಲಾಂಜಲಿ ನಾಯಕ – ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿರುತ್ತಾರೆ.  ತಮ್ಮದೇ ಆದ ವಿಶಿಷ್ಟ ಕ್ಯಾಮರಾ ತಂತ್ರಗಳಿಗೆ ಮತ್ತು ಸ್ಪೆಷಲ್ ಲೈಟಿಂಗ್‌ನಲ್ಲಿ ಅವರು ಸೆರೆ ಹಿಡಿಯುತ್ತಿದ್ದ ಕ್ಲೋಸ್‌ ಅಪ್ ಶಾಟ್‌ಗಳಿಗೆ ಹೆಸರುವಾಸಿಯಾಗಿದ್ದ ದೊರೈ  ಅವರಿಗೆ ಚಿತ್ರೀಕರಣ ಆಗುತ್ತಿದ್ದ ಸಮಯದಲ್ಲೇ ನಟಿ ಲೀಲಾಂಜಲಿ ಅವರ ಮೇಲೆ  ವಿಶೇಷ ವ್ಯಾಮೋಹ ಮೂಡಿದ ಪರಿಣಾಮ, ಆ  ನಟಿಯ ಅನೇಕ  ಕ್ಲೋಸ್‌ ಅಪ್ ಶಾಟ್‌ಗಳನ್ನು ತೆಗೆಯುತ್ತಿದ್ದದ್ದಲ್ಲದೇ, ಸಂಜೆ ಶೂಟಿಂಗ್ ಮುಗಿಯುತ್ತಿದ್ದಂತೆಯೇ, ನಟಿ ಲೀಲಾಂಜಲಿ ಅವರ ಮನೆ ಇದ್ದ  ಮದರಾಸಿನ ಪಟೇಲ್ ಸ್ಟ್ರೀಟ್‌ ಕಡೆ ಹೆಜ್ಜೆ ಹಾಕುತ್ತಿದ್ದರು ಹೀಗೆ ಅನೇಕ ದಿನಗಳ ಕಾಲ ನಡೆಯುತ್ತಿದ್ದ ಒನ್‌ವೇ ಪ್ರೀತಿಗೆ ಭಗವಾನ್ ಸ್ಪಲ್ಪ ಧೈರ್ಯ ತುಂಬಿದ ನಂತರ  ಹಾಗೂ ಹೀಗೂ ಧೈರ್ಯ ಮಾಡಿಕೊಂಡ ದೊರೈ  ನೇರವಾಗಿ ಲೀಲಾಂಜಲಿ ಆವರ ಬಳಿ ತಮ್ಮ ಪ್ರೀತಿ ನಿವೇದಿಸಿಕೊಳ್ಳುತ್ತಾರೆ.

 

ಮೈಸೂರಿನ ಸಂಪ್ರದಾಯಸ್ಥ ಕುಟುಂಬದ ಲೀಲಾಂಜಲಿಯವರಿಗೂ ಸಿನಿಮಾದಲ್ಲಿ ಮುಂದುವರೆಯುವ ಆಸೆ ಇಲ್ಲದಿದ್ದ ಕಾರಣ,  ಅದಾಗಲೇ ತಮ್ಮ ಬುದ್ದಿವಂತಿಕೆ, ಸನ್ನಡತೆ, ಕೆಲಸದ ವಿಷಯದಲ್ಲಿ  ಒಳ್ಳೆಯ ಹೆಸರನ್ನು ಪಡೆದಿದ್ದ  ದೊರೈ ಅವರ ಪ್ರೀತಿಯ ನಿವೇದನೆಯನ್ನು ಲೀಲಾಂಜಲಿ ಒಪ್ಪಿಕೊಂಡರಾದರೂ, ಮದುವೆ ಮಾಡಿಕೊಳ್ಳುವಷ್ಟು ಆರ್ಥಿಕ ಸಬಲರಾಗಿಲ್ಲದಿದ್ದ ಕಾರಣ, ಮತ್ತೇ ಭಗವಾನ್ ಅವರೇ ಈ ವಿಷಯವನ್ನು ಅವರಿಗೆಲ್ಲಾ ಮಾರ್ಗದರ್ಶಕರಾಗಿದ್ದ ನಿರ್ದೇಶಕ ಜಿ.ವಿ.ಅಯ್ಯರ್ ಅವರಿಗೆ ತಿಳಿಸಿದಾಗ, ಅಯ್ಯರ್  ಅವರ ನೇತೃತ್ವದಲ್ಲಿ ತಿರುಪತಿಯಲ್ಲಿ ಮದುವೆ ಮಾಡಿಸುತ್ತಾರೆ. ಹೀಗೆ ಅಬ್ಬಾ ಆ ಹುಡುಗಿ ಚಿತ್ರ ನಟಿ ಲೀಲಾಂಜಲಿ ಅವರ ಮೊದಲ ಮತ್ತು ಕಡೆಯ ಚಿತ್ರವಾದರೂ, ದೊರೈ ಅವರಿಗೆ  ಮಾತ್ರಾ ಅಬ್ಬಬ್ಬಾ ಎನ್ನುವಂತಹ ಹುಡುಗಿ ಸಿಕ್ಕಿ ಅವರ ಪ್ರೇಮ ಕಥೆ ಸುಖಾಂತ್ಯವಾಗಿ ದೊರೈ ಮತ್ತು ಲೀಲಾಂಜಲಿ ಆದರ್ಶ ದಂಪತಿಯಾಗಿ ಸುಖ ಬಾಳ್ವೆ ನಡೆಸುವಂತಾಯಿತು.

 

WhatsApp Image 2024-11-17 at 00.45.53ಆರಂಭದಲ್ಲಿ ದೊರೈ ಅವರು  ರಾಯರಮಗಳು, ಜಗಜ್ಯೋತಿ ಬಸವೇಶ್ವರ, ಬಂಗಾರಿ, ತಾಯಿಕರುಳು, ಕವಲೆರಡು ಕುಲವೊಂದು, ಅಬ್ಬಾ ಆ ಹುಡುಗಿ ಮುಂತಾದ ಸಿನಿಮಾಗಳಿಗೆ  ಛಾಯಾಗ್ರಾಹಕರಾಗಿ  ಕಾರ್ಯನಿರ್ವಹಿಸಿದ ನಂತರ ಭಗವಾನ್ ಆವರ ಜೊತೆ ಸೇರಿಕೊಂಡು ದೊರೈ-ಭಗವಾನ್ ಜೋಡಿ ನಿರ್ದೇಶನದ 1968ರಲ್ಲಿ ಕನ್ನಡದ ಪ್ರಥಮ ಬಾಂಡ್ ಸಿನಿಮಾ ಜೇಡರ ಬಲೆ ನಿರ್ದೇಶಿಸಿದದ ಚಿತ್ರ ಅಭೂತ ಪೂರ್ವವಾದ ಯಶಸ್ಸುಗಳಿಸಿದ ನಂತರ ಮುಂದೆ ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕ್‌ಪಾಟ್, ಕಸ್ತೂರಿ ನಿವಾಸ, ಪ್ರತಿಧ್ವನಿ, ಎರಡು ಕನಸು, ಗಿರಿಕನ್ಯೆ, ಆಪರೇಷನ್ ಡೈಮಂಡ್ ರಾಕೆಟ್, ಚಂದನದ ಗೊಂಬೆ, ನಾನೊಬ್ಬ ಕಳ್ಳ, ವಸಂತ ಗೀತಾ, ಹೊಸಬೆಳಕು,  ಯಾರಿವನು, ಚಂದನದ ಗೊಂಬೆ, ಜೀವನ ಚೈತ್ರ ಹೀಗೆ ಸುಮಾರು 23ಕ್ಕೂ ಹೆಚ್ಚು ಚಿತ್ರಗಳನ್ನು ರಾಜ ಕುಮಾರ್ ಅವರಿಗೆ ನಿರ್ದೇಶನ/ನಿರ್ಮಾಣ ಮಾಡಿದರೆ,  ಅನಂತ್ ನಾಗ್ ಮತ್ತು ಜೂಲಿ ಲಕ್ಮ್ಮೀ ಅವರೊಂದಿಗೆ ಬಯಲು ದಾರಿ, ಬೆಂಕಿಯ ಬಲೆ, ಚಂದನದ ಗೊಂಬೆ, ಸೇಡಿನ ಹಕ್ಕಿ, ಬಿಡುಗಡೆಯ ಬೇಡಿ, ಗಾಳಿ ಮಾತು ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡುವ ಮೂಲಕ 80ರ ದಶಕದಲ್ಲಿ ಲಕ್ಷ್ಮೀ ಮತ್ತು ಅನಂತ್ ನಾಗ್ ಯಶಸ್ವಿ ಜೋಡಿ ಕರ್ನಾಟಕಾದ್ಯಂತ ಮಧ್ಯಮವರ್ಗದವರ ಮನೆ ಮಾತಾಗುವಂತೆ ಮಾಡುತ್ತಾರೆ, ಇದಲ್ಲದೇ ಅಲ್ಲೊಂದು ಇಲ್ಲೊಂದು ಚಿತ್ರಗಳನ್ನು ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್ ಅವರಿಗೂ  ನಿರ್ದೇಶನ ಮಾಡಿದ್ದಲ್ಲದೇ, ಅನೇಕ ಹೊಸಾ ಹೊಸ ನಟ/ನಟಿಯರು, ಸಂಗೀತ ನಿರ್ದೇಶಕರು ಮತ್ತು ತಂತ್ರಜ್ಞರಿಗೂ ಅವಕಾಶ ಮಾಡಿಕೊಟ್ಟ ಕೀರ್ತಿ ದೊರೈ-ಭಗವಾನ್ ಜೋಡಿಗೆ ಸಲ್ಲುತ್ತದೆ. ಈ ಇಬ್ಬರ  ಜೋಡಿ ನಿರ್ದೇಶಿಸಿದ್ದ ಮುನಿಯನ ಮಾದರಿ ಮತ್ತು ಜೀವನ ಚೈತ್ರ ಚಿತ್ರಗಳಿಗೆ ರಾಜ್ಯ ಪ್ರಶಸ್ತಿಯೂ ದೊರೆಯುತ್ತದೆ.

 

ಎರಡು ದೇಹ ಒಂದೇ ಆತ್ಮ ಎಂಬಂತೆ ಕಥೆ, ಚಿತ್ರಕಥೆ, ಸಂಗೀತ, ಸಂಭಾಷಣೆ, ನಿರ್ಮಾಣ ಮತ್ತು ನಿರ್ದೇಶನ ಹೀಗೆ ಚಿತ್ರ ನಿರ್ಮಾಣದ ಎಲ್ಲಾ ವಿಚಾರಗಳಲ್ಲಿಯೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದ ದೊರೈ ಮತ್ತು ಭಗವಾನ್ ನಡುವೆ ಅದಾವುದೋ ವಿಚಾರವಾಗಿ ಭಿನ್ನಾಭಿಪ್ರಾಯದಿಂದಾಗಿ ಅವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿದ ಕಾರಣದಿಂದಾಗಿ ಭಗವಾನ್ ತಾವೊಬ್ಬರೇ ಸಿನಿಮಾ ನಿರ್ದೇಶನ ಮಾಡಿದರಾದರೂ, ಆ ಚಿತ್ರ ಯಶಸ್ವಿಯಾಗದೇ ಮತ್ತೆ ಹಳೇ ಗಂಡನ ಪಾದವೇ ಗತಿ ಎಂದು ದೊರೈ ಅವರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಮತ್ತೆ ಜೋಡಿಯಾಗಿಯೇ  ನಿರ್ದೇಶನ ಮಾಡಬೇಕು ಎಂದು ಯೋಚಿಸಿದ್ದ ಸಮಯದಲ್ಲೇ,  2000ರ ಫೆಬ್ರವರಿ 20ರಂದು ಅಕಾಲಿಕವಾಗಿ ದೊರೈ ಅವರು ನಿಧನರಾಗುವ ಮೂಲಕ ದೊರೈ-ಭಗವಾನ್ ಜೋಡಿ ಶಾಶ್ವತವಾಗಿ ಬೇರ್ಪಡುವಂತಾದರೂ, ದೊರೈ ಅವರ ಗೆಳೆತನದ ಕುರುಹಾಗಿ ಭಗವಾನ್ ಅವರು ತಮ್ಮನ್ನು ದೊರೈ ಭಗವಾನ್ ಎಂದೆ ಸಂಭೋದಿಸಿಕೊಳ್ಳುವ ಮೂಲಕ ಅವರ ಗೆಳೆತನವನ್ನು ಶಾಶ್ವತ ಗೊಳಿಸುತ್ತಾರೆ.

 

WhatsApp Image 2024-11-17 at 00.48.252000 ರಲ್ಲಿ ದೊರೈ ಅವರ ನಿಧನದ ನಂತರ 2019 ರಲ್ಲಿ ಭಗವಾನ್ ತಮ್ಮ ಕೊನೆಯ ಚಿತ್ರವನ್ನು ನಿರ್ದೇಶಿಸಿದ ನಂತರ ಚಿತ್ರರಂಗದಿಂದ ದೂರ ಉಳಿದ ಭಗವಾನ್ ಕಾಕತಾಳೀಯವೆಂದರೆ  2023ರ ಫೆಬ್ರವರಿ 20ರಂದು ನಿಧನರಾಗುವ ಮೂಲಕ ತಮ್ಮ ಪ್ರಾಣ ಸ್ನೇಹಿತ ದೊರೈ ಅವರು ನಿಧನರಾದ ಫೆಬ್ರವರಿ 20ರಂದೇ ಈ ಲೋಕವನ್ನು ತ್ಯಜಿಸುವ ಮೂಲಕ ಸಾವಿನಲ್ಲೂ ಜೋಡಿಯಾಗಿಯೇ ಮೆರೆದದ್ದು ಅಚ್ಚರಿ ಎನಿಸಿದರೂ ವಿಶೇಷವಾಗಿದೆ.

 

ಹೀಗೆ ಛಾಯಾಗ್ರಾಹಕರಾಗಿ ಚಿತ್ರರಂಗವನ್ನು ಪ್ರವೇಶಿಸಿ, ಭಗವಾನ್ ಅವರೊಂದಿಗೆ ಜೋಡಿಯಾಗಿ ಕನ್ನಡದ ಬಹುತೇಕ ಲೇಖಕರ ಒಳ್ಳೊಳ್ಳೆಯ ಕಾದಂಬರಿಗಳನ್ನು ಚಿತ್ರವನ್ನಾಗಿಸಿ, ಕನ್ನಡಿಗರ ಮನಸ್ಸಿನ ಶಾಶ್ವತವಾಗಿ ಮನೆ ಮಾಡಿರುವ ಬಿ ದೊರೈರಾಜ್ ಎಲ್ಲರ ಪ್ರೀತಿಯ ದೊರೈ, ದೊರೈ-ಭಗವಾನ್ ಖಂಡಿತವಾಗಿಯೂ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment