ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಮಾತು ಜನಮಾನಸದಲ್ಲಿ ಪ್ರಚಲಿತದಲ್ಲಿದೆ. ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರಿಲೀ ಕೊಡೆ ಹಿಡಿದರಂತೆ, ಅಲ್ಪ ವಿದ್ಯಾ ಮಹಾಗರ್ವಿ, ತಾನು ಕಳ್ಳ ಪರರ ನಂಬ, ಎತ್ತು ಏರಿಗೆ ಎರದರೆ ಕೋಣ ನೀರಿಗೆ ಎಳೆಯಿತು, ಕುಣಿಯಲಾರದವಳು ನೆಲ ಡೊಂಕು ಎಂದರಂತೆ, ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೇ? ಇಂತಹ ಗಾದೆಗಳ ಜೊತೆ ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ ಎನ್ನುವ ಗಾದೆ ಮಾತುಗಳೆಲ್ಲವೂ ಬಹುಶಃ ಪ್ರಸ್ತುತ ಸಿದ್ದರಾಮಯ್ಯ ಮತ್ತು ಅವರ ಮಂತ್ರಿಮಂಡಳದ ಮಂತ್ರಿಗಳಿಗೆ ಹೇಳಿಮಾಡಿಸಿದೆ ಎಂದರೂ ತಪ್ಪಾಗದು.
ಯಥಾ ರಾಜಾ ತಧಾ ಪ್ರಜಾ ಎನ್ನುವಂತೆ ಯಾರ ಮಾತನ್ನೂ ಕೇಳಿದ, ತಾನು ಹೇಳಿದ್ದೇ ಸರಿ ಎನ್ನುವ ಹುಂಬತನದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ, ಅವರ ಸಚಿವ ಸಂಪುಟ ಇನ್ನು ಹೇಗಿರ ಬಹುದು ಹೇಳಿ. ಕೇವಲ ಜಾತಿ ಮತ್ತು ಧರ್ಮಾಧಾರಿತವಾಗಿ PUC ಸಹಾ Pass ಮಾಡಲು ಆಗದ ಜಮೀರ್, ಪ್ರಿಯಾಂಕ್ ಖರ್ಗೆ ಮತ್ತು ಮಧು ಬಂಗಾರಪ್ಪರಂತಹವರು ಪ್ರಮುಖ ಖಾತೆಯ ಸಚಿವರು. ಹೌದು ನಿಜ ಶಿಕ್ಷಣಕ್ಕೂ ಮಂತ್ರಿ ಆಗುವುದಕ್ಕೂ ಯಾವುದೇ ನಿಬಂಧನೆಗಳನ್ನು ಸಂವಿಧಾನದಲ್ಲಿ ಸೂಚಿಸಿಲ್ಲವಾದರೂ, ಉನ್ನತ ಶಿಕ್ಷಣ ಖಾತೆಯನ್ನು ನಿಭಾಯಿಸುವ ವ್ಯಕ್ತಿಗೆ ಬೇರೆ ಭಾಷೆ ಬಿಡಿ, ತನ್ನ ಮಾತೃಭಾಷೆ ಮತ್ತು ರಾಜ್ಯದ ಆಡಳಿತ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಲು, ಓದಲು ಮತ್ತು ಬರೆಯಲು ಬರಬೇಕು ಎನ್ನುವುದು ಸಾಮಾನ್ಯ ಪ್ರಜ್ಞೆ. ಹೌದು ಎಲ್ಲರೂ ಎಲ್ಲವನ್ನೂ ತಿಳಿಯಲು ಸಾಧ್ಯವಿಲ್ಲ ಎನ್ನುವುದು ಜಗದ ನಿಯಮವೇ ಹೌದಾದರೂ, ಇಡೀ ರಾಜ್ಯದ ಜನತೆಯ ಮುಂದೆ ಮಾದರಿ ನಾಯಕ ಎನಿಸಿಕೊಳ್ಳಲು ಸೌಜನ್ಯದಿಂದ ವರ್ತಿಸುವ ಕಲೆ ರೂಢಿಸಿಕೊಂಡಿರಬೇಕು. ತನಗೆ ಗೊತ್ತಿಲ್ಲದಿರುವ ವಿಷಯವನ್ನು ಅತೀ ಶೀಘ್ರವಾಗಿ ಕಲಿಯುವ ಮನಸ್ಥಿತಿ ಇರಬೇಕು. ದುರಾದೃಷ್ಟವಷಾತ್ ಮೇಲೆ ತಿಳಿಸಿದ ತ್ರಿವಳಿ ಮಂತ್ರಿಗಳಿಗೆ ಅಂತಹ ಕನಿಷ್ಠ ಸೌಜ್ಯನ್ಯದ ಪರಿಜ್ಞಾನವೂ ಇಲ್ಲದೇ, ತಮ್ಮ ಅಸಾನರ್ಥ್ಯವನ್ನು ಎತ್ತಿ ತೋರಿಸುವವರನ್ನೇ ದೂಷಿಸುವ ಮತ್ತು ಅವರ ಮೇಲೆ ಕಾನೂನು ಕ್ರಮ ಜರುಗಿಸುವ ಹೀನ ಕೃತ್ಯಕ್ಕೆ ಇಳಿದಿರುವುದು ನಿಜಕ್ಕೂ ದುರಾದೃಷ್ಟಕರವೇ ಸರಿ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೇಸ್ಸಿನ ಯುವರಾಜ ರಾಹುಲ್ ಗಾಂಧಿ, ಮಲ್ಲೀಕಾರ್ಜುನ ಖರ್ಗೆ ಯಿಂದ ಹಿಡಿದು, ಸಾಮಾನ್ಯ ಕಾರ್ಯಕರ್ತರೂ ಸಹಾ ಕೈಯ್ಯಲ್ಲೊಂದು ಕೆಂಪನೆಯ ಪುಸ್ತಕ ಹಿಡಿದು (ಅದು ಖಾಲಿ ಪುಸ್ತಕ ಎಂದು ನಾಗಪುರದಲ್ಲಿ ಸಾಭೀತಾಗಿದೆ) ಈ ದೇಶದಲ್ಲಿ ಸಂವಿಧಾನವನ್ನು ಹತ್ತಿಕ್ಕಲಾಗುತ್ತಿದೆ. ದೇಶವಾಸಿಗಳ ವಾಕ್ ಸ್ವಾಂತಂತ್ರ ಅಭಿವ್ಯಕ್ತಿ ಸ್ವಾತ್ರಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಬೊಬ್ಬಿಡುವ ಕಾಂಗ್ರೇಸ್ಸಿಗರೇ ಕರ್ನಾಟಕದಲ್ಲಿ ಕನ್ನಡಿಗರ ಆಭಿವ್ಯಕ್ತಿ ಸ್ವಾಂತಂತ್ರವನ್ನು ತಮ್ಮ ವಯಕ್ತಿಯ ತೆವಲುಗಳಿಗಾಗಿ ಸಂವಿಧಾನ ಬಾಹಿರವಾಗಿ ಕಾನೂನಿನ ಮೂಲಕ ಹತ್ತಿಕ್ಕುತಿರುವುದು ನಿಜಕ್ಕೂ ಖಂಡನಾರ್ಹವಾಗಿದೆ.
ನವೆಂಬರ್ 20, 2024ರಂದು ವಿಧಾನಸೌಧದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ NEET, JEE, CET ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿಸಿ, ಅಲ್ಲಿ ಉನ್ನತ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಜೊತೆ ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ ರೂಪೇಶ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಇದ್ದರೆ, ವರ್ಚುವಲ್ ಮೂಲಕ ರಾಜ್ಯಾದ್ಯಂತ ನೂರಾರು ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಚಿವ ಮಧು ಬಂಗಾರಪ್ಪ ವೀಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡು ಬಂದು, ಒಂದೆರಡು ನಿಮಿಷಗಳ ಬಿಡುವಿನ ವೇಳೆಯಲ್ಲಿ ಏ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎನ್ನುವಂತಹ ಮಾತೊಂದನ್ನು ಯಾವುದೋ ವಿದ್ಯಾರ್ಥಿಯೊಬ್ಬನು online ಮೂಲಕ ಹೇಳಿದ್ದದ್ದದ್ದು ಸ್ಪಷ್ಟವಾಗಿ ಎಲ್ಲರಿಗೂ ಕೇಳಿಸಿ, ಗೊಳ್ ಎಂದು ನಕ್ಕಿದಾಗ, ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಮತ್ತೊಮ್ಮೆ ಆ ವಿದ್ಯಾರ್ಥಿ ಏನು ಹೇಳಿದ ಎಂಬುದನ್ನು ಖಚಿತ ಪಡಿಸಿಕೊಂಡ ಸಚಿವರು ಆರಂಭದಲ್ಲಿ ಗಲಿಬಿಲಿಗೊಂಡರೂ ಅದನ್ನು ತೋರಿಸಿಕೊಳ್ಳದೇ, ನಗು ನಗುತ್ತಲೇ, ಹೇ ಯಾರೋ ಅವನು ಹಾಗೆ ಮಾತಾಡೋನು? ನಾನೇನು ಇಷ್ಟು ಹೊತ್ತು ಉರ್ದುವಿನಲ್ಲಾ ಮಾತನಾಡ್ತಾ ಇದೀನಿ? ಇದು ಟಿವಿಯವರಿಗೆ ಗೊತ್ತಾದರೇ ಇಡೀ ದಿನಾ ಅದನ್ನೇ ಹಾಕಿ ಬಿಡ್ತಾರೆ! ಎಂದು ಹೇಳಿ ಸುಮ್ಮನಾಗಿ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗಿದ್ದರೆ ಎಲ್ಲವೂ ಚೆನ್ನಾಗಿಯೇ ಇರುತ್ತಿತ್ತು.
ವಿದ್ಯಾದದಾತಿ ವಿನಯಂ, ವಿನಯಾಧ್ಯಾತಿ ಪಾತ್ರತ್ವಂ, ಪಾತ್ರತ್ವಾ ಧನಮಾಪ್ನೋತಿ, ಧನಾಧರ್ಮ ಮಹತಹ ಸುಖಂ!! ಎನ್ನುವ ಸುಭಾಷಿತದಲ್ಲಿ ವಿದ್ಯೆಯು ವಿನಯವನ್ನು ಕೊಡುತ್ತದೆ, ವಿನಯದಿಂದ ಸ್ಥಾನವು ಸಿಗುತ್ತದೆ, ಸ್ಥಾನದಿಂದ ಧನವು ದೊರಕುತ್ತದೆ, ಆ ಧನದಿಂದ ಮಾಡುವ ಧರ್ಮ ಕಾರ್ಯದಿಂದ ಸುಖವು ದೊರೆಯುತ್ತದೆ ಎನ್ನುವ ಅರ್ಥ ಬರುತ್ತದೆ. ದುರಾದೃಷ್ಟವಷಾತ್ ವಿದ್ಯೆಯ ಜೊತೆಗೆ ವಿನಯವೂ ಇಲ್ಲದ ಮಂತ್ರಿಗಳು, ವಿದ್ಯಾರ್ಥಿಯ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದಲ್ಲದೇ, ಎಲ್ಲರ ಮುಂದೇಯೇ ಕೋಪಗೊಂಡು ಇಂತಹ ಹೇಳಿಕೆಗಳಿಗೆ ನಾನು ಸುಮ್ಮನಿರುವುದಕ್ಕೆ ಆಗುವುದಿಲ್ಲ. ನನಗೆ ಯಾರು ಕನ್ನಡ ಬರಲ್ಲ ಅಂತ ಹೇಳಿದ್ದಾರೋ, ಆ ಹುಡುಗನನ್ನು ಗುರುತಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳಿ. ಸ್ಟುಪಿಡ್ ನಾಚಿಕೆ ಆಗಬೇಕು ಅವನಿಗೆ ಎಂದು ಹೇಳಿದ್ದಕ್ಕೆ ಅವರ ಪಕ್ಕದಲ್ಲಿದ್ದ ಪದವಿ ಪೂರ್ವ ಕಾಲೇಜು ನಿರ್ದೇಶಕಿ ಸಿಂಧೂ ಬಿ ರೂಪೇಶ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ವಿದ್ಯಾರ್ಥಿ ಯಾರೆಂದು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ನಂತರ ಕಾರ್ಯಕ್ರಮ ಮುಂದುವರೆದಿದೆ.
ಶಿಕ್ಷಣ ಸಚಿವರಿಗೆ ಸರಿಯಾಗಿ ಕನ್ನಡ ಬರುವುದಿಲ್ಲ ಎಂಬುದು ಇಡೀ ರಾಜ್ಯಕ್ಕೆ ತಿಳಿದ ವಿಚಾರ. 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ಸಂದರ್ಭದಲ್ಲಿ, ಸ್ವತಃ ಶಿಕ್ಷಣ ಸಚಿವರೇ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಓದಿನಲ್ಲಿ ಅಷ್ಟೊಂದು ಬುದ್ಧಿವಂತನಾಗಿರಲಿಲ್ಲ. ನಾನು ಕೂಡ ಫೇಲ್ ಆಗಿದ್ದೆ. ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ. ಸ್ವಲ್ಪ ಉಚ್ಚಾರಣೆ ತಪ್ಪಾಗುತ್ತದೆ. ಇದೇ ಕುರಿತಂತೆ ನನ್ನ ಅಣ್ಣ ಕುಮಾರ್ ಸಹಾ ಸಾರ್ವಜನಿಕವಾಗಿ ಆಡಿಕೊಳ್ಳುತ್ತಾನೆ. ನನ್ನ ಬಗ್ಗೆ ಕೆಟ್ಟ ಟ್ರೋಲ್ ಮಾಡುವವರು ಎಂದೂ ಉದ್ಧಾರ ಆಗುವುದಿಲ್ಲ ಎಂದು ಶಾಪವನ್ನು ಹಾಕಿದ್ದನ್ನೂ ಸಹಾ ಈ ಸಂಧರ್ಭದಲ್ಲಿ ನೆನಸಿಕೊಳ್ಳಬಹುದಾಗಿದೆ.
ಕನ್ನಡ ಓದಲು ಬಾರದು ಎಂಬುದನ್ನು ಬಿಡಿ. ಬೇರೆಯವರು ಹೇಳಿದ್ದನ್ನು ಅರ್ಥಮಾಡಿಕೊಂಡು ಕನ್ನಡದಲ್ಲಿ ಅದನ್ನು ಅನುವಾದವನ್ನೂ ಸಹಾ ಸರಿಯಾಗಿ ಮಾಡಲು ಬಾರದು ಎಂಬುದನ್ನು ಆವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಯಾಚಿಸಲು ಬಂದಿದ್ದ ರಾಹುಲ್ ಗಾಂಧಿಯ ಹಿಂಗ್ಲೀಷ್ (ಇಂಗ್ಲೀಶ್ ಮಿಶ್ರಿತ ಹಿಂದಿ) ಭಾಷಣವನ್ನು ಅನುವಾದಿಸಲು ಎಲ್ಲರ ಮುಂದೆ ತಡಬಡಾಯಿಸಿದ್ದನ್ನು ಎಲ್ಲರೂ ನೋಡಿದ್ದಾರೆ. ಇನ್ನು 2024ರ ನವೆಂಬರ್ 1ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ, ಯಾರೋ ಬರೆದು ಕೊಟ್ಟಿದ್ದ ಭಾಷಣದಲ್ಲಿ ಸಂಗತಿ ಎನ್ನುವ ಬದಲು ಸಂಗಾತಿ, ದುರಸ್ಥಿ ಎನ್ನುವ ಬದಲು ದುಸ್ಥಿತಿ ಮಾಡಲಾಗಿದೆ ‘ಮನುಜರು’ ಎನ್ನುವ ಬದಲು ‘ಮಜುರ್’, ಮತ್ತು ‘ಸಹಬಾಳ್ವೆ’ ಬದಲಾಗಿ ‘ಸಹಬಾಳ್ಮೆ’ ಈ ರೀತಿಯಾಗಿ ಇನ್ನೂ ಅನೇಕ ಅಸ್ಕಲಿತ ಅಸ್ಪಷ್ಟವಾದ ಕನ್ನಡ ಮಾತನಾಡುವ ಮೂಲಕ ನಗೆ ಪಾಟಲಾಗಿದ್ದದ್ದಲ್ಲದೇ, ತಮ್ಮ ತಪ್ಪು ತಪ್ಪು ಉಚ್ಛಾರಣೆಗಳ ಮೂಲಕ ಮೂಲ ಭಾಷಣದ ಆಶಯವನ್ನೇ ದಿಕ್ಕು ತಪ್ಪಿಸಿದ್ದನ್ನು ಕಂಡು ಅಯ್ಯೋ ದೇವರೇ, ಈ ಕಿವಿಗಳಲ್ಲಿ ಇನ್ನೂ ಏನೇನು ಕೇಳಬೇಕಪ್ಪಾ! ಇಂತಹವರು ಉನ್ನತ ಶಿಕ್ಷಣ ಸಚಿವರಾಗಿರುವುದು ಈ ರಾಜ್ಯದ ದೌರ್ಭಾಗ್ಯವೇ ಸರಿ ಎಂದು ಜನರಿಗೆ ಅನಿಸಿದ್ದು ಸುಳ್ಳಲ್ಲಾ.
ಇದೇ ಸಚಿವರು ಅಧಿಕಾರದ ಪದಗ್ರಹಣ ಮಾಡುತ್ತಿದ್ದಂತೆಯೇ ಹಿಂದಿನ ಸರ್ಕಾರ ದೇಶದ ಹಿರಿಮೆ ಮತ್ತು ಗರಿಮೆಗಳನ್ನು ಎತ್ತಿಹಿಡಿಯುವಂತಹ ದೇಶಭಕ್ತರ ಕುರಿತಾದ ಪಾಠಗಳನ್ನು ಪಠ್ಯದಲ್ಲಿ ಅಳವಡಿಸಿದ್ದನ್ನು, ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಈ ಪಠ್ಯಪುಸ್ತಕವನ್ನು ಕಿತ್ತು ಬಿಸಾಕಿದ್ದೇವೆ! ಎಂದು ಉದ್ಧಟತನದಿಂದ ಮಾತನಾಡಿದದ್ದು ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಬರುವ ಎಲ್ಲಾ ವಸತಿ ಗೃಹಗಳಲ್ಲಿಯೂ ಹತ್ತಾರು ವರ್ಷಗಳಿಂದಲೂ ಇದ್ದ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎಂಬ ಧ್ಯೇಯ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆಯಿಸಿದ್ದದ್ದನ್ನು ಸಮರ್ಥಿಸಿ ಮಾತನಾಡಿದ್ದನ್ನು ಸಹಾ ಇಲ್ಲಿ ಗಮನಿಸಬೇಕಾಗಿದೆ.
ನಿಮ್ಮ ಮೋದಿಗೆ ಕನ್ನಡ ಬರುತ್ತಾ? ಟ್ರೋಲ್ಗಳಿಂದ ಯಾವನ್ ಹೊಟ್ಟೆನೂ ತುಂಬಲ್ಲ ಎಂದು ಟ್ರೋಲರ್ಗಳ ಮೇಲೆ ಹರಿಹಾಯುವ ಮಧು ಬಂಗಾರಪ್ಪನವರು ಯಾರನ್ನು ಬೇಕಾದರೂ ಹೇಗೆ ಬೇಕಾದರೂ ಪ್ರಶ್ನಿಸಬಹುದು ಮತ್ತು ಹೇಗೆ ಬೇಕಾದರೂ ಆಡಿಕೊಳ್ಳಬಹುದು, ಯಾವ ಪರಿಯಲ್ಲಾದರೂ ಬೈಯ್ಯಬಹುದು ಆದರೆ ಬೇರೆಯವರು ಆವರ ವಿರುದ್ಧ ಮಾತನಾಡಿದರೆ ಮಾತ್ರಾ ತಪ್ಪು ಎಂದು ತಮ್ಮ ಅಧಿಕಾರವನ್ನು ಬಳಸಿಕೊಂದು ಒದ್ದು ಒಳಗೆ ಹಾಕಿಸಲು ಮುಂದಾಗುತ್ತಾರೆ, ಮೋದಿಯವರಿಗೆ ತಮ್ಮ ಮಾತೃಭಾಷೆ ಗುಜರಾತಿ ಮತ್ತು ದೇಶದ ಬಹುಸಂಖ್ಯಾತರು ಆಡುವ ಹಿಂದಿ ಭಾಷೆಯ ಮೇಲೆ ಸಂಪೂರ್ಣವಾಗಿ ಹಿಡಿತ ಹೊಂದಿರುವುದು ಗೊತ್ತಿದ್ದರೂ, ಜನರ ದಿಕ್ಕು ತಪ್ಪಿಸುವ ಮಾತನಾಡುವುದು ನಿಜಕ್ಕೂ ಅವರ ಬೌದ್ಧಿಕ ದೀವಾಳಿತನವನ್ನು ತೋರಿಸುತ್ತದೆ.
ಕೈಯಲ್ಲಿ ಆಗದವನು ಮೈಯೆಲ್ಲಾ ಪರಚಿಕೊಂಡ ಎನ್ನುವಂತೆ ಸಚಿವರಿಗೆ ಕನ್ನಡ ಬರುವುದಿಲ್ಲ ಎಂದು ನಿಜವನ್ನೇ ಹೇಳಿದ ವಿದ್ಯಾರ್ಥಿ ಮೇಲೆ ವಯಕ್ತಿಕ ದ್ವೇಷದಿಂದ ಕ್ರಮ ತೆಗೆದುಕೊಳ್ಳುವುದರ ಬದಲು ಅದನ್ನೇ ರಚನಾತ್ಮಕವಾಗಿ ಸವಾಲಾಗಿ ಸ್ವೀಕರಿಸಿ ಶುದ್ಧವಾಗಿ ಕನ್ನಡವನ್ನು ಓದಲು ಬರೆಯಲು ಮತ್ತು ಮಾತನಾಡುವುದನ್ನು ಕಲಿತರೆ ಅವರಿಗೂ ಒಳ್ಳೆಯದು ಮತ್ತು ರಾಜ್ಯಕ್ಕೂ ಒಳ್ಳೆಯದು. ವಿದ್ಯೆ ಕಲಿಯಲು ಯಾವುದೇ ವಯಸ್ಸಿನ ಹಂಗಿಲ್ಲ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ಇದನ್ನು ದಮನಿಸುವುದು ಖಂಡನೀಯ. ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದರೆ ಮಾತ್ರಾ ಸಾಲದು ಆದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಅದರ ಅನ್ವರ್ಥವಾಗಿ ಜೀವಸಬೇಕು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
.
ಉತ್ತಮ ಲೇಖನ
LikeLiked by 1 person
ಧನ್ಯೋಸ್ಮಿ
LikeLike