ಚಾರಿತ್ರಿಕ ನಾಟಕಗಳ ಪಿತಾಮಹ ಸಂಸ

ಹೇಳೀ ಕೇಳಿ ಕರ್ನಾಟಕ ಸಾಹಿತ್ಯ ಮತ್ತು ಸಂಗೀತಗಳಂತಹ ಲಲಿತಕಲೆಗೆ ಪ್ರಸಿದ್ಧಿ ಪಡೆದಿದೆ. ಅಂದೆಲ್ಲಾ ಪೌರಾಣಿಕವಾಗಲೀ ಐತಿಹಾಸಿಕವಾಗಲೀ ಎಂದೋ ನಡೆದ ಘಟನೆಗಳನ್ನು ಜನರಿಗೆ ತಲುಪಿಸಲು ಬಳೆಸುತ್ತಿದ್ದ ಪ್ರಮುಖ ಮಾರ್ಗವೆಂದರೆ ಲಾವಣಿಗಳು, ಜನಪದ ಗೀತೆಗಳು, ಭಜನೆಗಳು, ಹರಿಕಥೆ ಮತ್ತು ನಾಟಕಗಳು.  ಇವುಗಳ ಮೂಲಕ ನಿರಕ್ಷರಕುಕ್ಷಿಗಳಿಗೂ ಸುಲಭವಾಗಿ ಅರ್ಥವಾಗುತ್ತಿತ್ತು. ಕನ್ನಡ ಸಾಹಿತ್ಯ ಲೋಕದಲ್ಲಿ ಸುಮಾರು 23ಕ್ಕೂ ಅಧಿಕ ಚಾರಿತ್ರಿಕ ಅದರಲ್ಲೂ ಮೈಸೂರು ಮಹಾರಾಜರ ಕುರಿತಾಗಿ  ನಾಟಕಗಳನ್ನು ಬರೆದಿದ್ದಂತಹ ಎ.ಎನ್ ಸ್ವಾಮಿ ವೆಂಕಟಾದ್ರಿ ಅಯ್ಯರ್ ಅರ್ಥಾತ್ ಎಲ್ಲರಿಗೂ ಸಂಸ ಎಂಬ ಹೆಸರಿನಿಂದಲೇ ಚಿರಪರಿಚಿತರಾಗಿದ್ದವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಹೇವಿಳಂಬಿನಾಮ ಸಂವತ್ಸರದ ಪುಷ್ಯ ಬಹುಳ ಪಂಚಮಿ ಗುರುವಾರ ರಾತ್ರಿ ಕನ್ಯಾಲಗ್ನದಲ್ಲಿ ಅಂದರೆ, ಜನವರಿ 13, 1898ರಂದು ಅಂದಿನ ಮೈಸೂರು ಸಂಸ್ಥಾನದ ಯಳಂದೂರು ತಾಲ್ಲೂಕಿಗೆ ಸೇರಿದ್ದ ಅಗರ ಗ್ರಾಮದ ವೇದಾಧ್ಯಾಯಿಗಳೂ ಮತ್ತು ಆಯುರ್ವೇದ ಪಂಡಿತರಾಗಿದ್ದಂತಹ ಬ್ರಹ್ಮಶ್ರೀ  ನರಸಿಂಹ ಪಂಡಿತರು ಮತ್ತು ಗೃಹಿಣಿಯಾಗಿದ್ದ ಶ್ರೀಮತಿ ಗೌರಮ್ಮ ಅವರ ಮೂವರು ಮಕ್ಕಳಲ್ಲಿ ಕಡೆಯವನಾಗಿ ಜನಿಸಿದ ಮಗುವಿಗೆ  ವೆಂಕಟಾದ್ರಿ ಅಯ್ಯರ್ ಎಂದು ನಾಮಕರಣ ಮಾಡಿದರೂ, ಮುದ್ದಿನಿಂದ ಸ್ವಾಮಿ ಎಂದು ಕರೆಯಲಾರಂಭಿಸಿ  ನಂತರ ಅದು ಸಾಮಿಯಾಗಿ ಮಾರ್ಪಟ್ಟಿತ್ತು. ಮನೆಯ ಮಾತೃಭಾಷೆ ತಮಿಳು, ಸಂಪ್ರದಾಯಸ್ಥ ಕುಟುಂಬವಾಗಿದ್ದರಿಂದ ಸಂಸ್ಕೃತ ಮತ್ತು ಹೊರಗಿನ ಪ್ರಪಂಚದಲ್ಲಿ  ಕನ್ನಡ ಹೀಗೆ ಸಣ್ಣ ವಯಸ್ಸಿನಲ್ಲೇ  ಕನ್ನಡ, ತಮಿಳು ಮತ್ತು ಸಂಸ್ಕೃತ ಭಾಷೆಗಳ ಮೇಲೆ ಹಿಡಿತ ಬಾಲಕ ವೆಂಕಟಾದ್ರಿಗೆ ಲಭ್ಯವಾಯಿತು.

samsa1ವೆಂಕಟಾದ್ರಿ ಐಯ್ಯರ್ ಸಣ್ಣವನಿದ್ದಾಗ, ಅವರ ಹುಟ್ಟೂರು ಅಗರದಲ್ಲಿ ಪ್ರಾಥಮಿಕ ಶಾಲೆ ಇಲ್ಲದಿದ್ದ ಕಾರಣ ಸ್ವರ್ಣಾವತೀ ನದಿಯಾಚೆಯ ಕೊಳ್ಳೆಗಾಲದ ಮಿಡ್ಲ್ ಸ್ಕೂಲಿನ ಸಂಸ್ಕೃತ ಪಂಡಿತರಾಗಿದ್ದ ಶ್ರೀ ಪಾಳ್ಯದ ಶ್ರೀಕಂಠ ಶಾಸ್ತ್ರಿಗಳಿಂದ  ಅಕ್ಷರಾಭ್ಯಾಸವಾದರೂ, ಅರಗದಲ್ಲೇ ಪೋಸ್ಟ್ ಮಾಸ್ಟರಾಗಿದ್ದ ಶ್ರೀ ಶ್ರೀನಿವಾಸಾಚಾರ್ಯರ ಬಳಿಯೇ ಬಾಲಕ ವೆಂಕಟಾದ್ರಿ ಓದು ಬರಹ ಕಲಿತು, ಕೊಳ್ಳೆಗಾಲದ ಬೋರ್ಡ್ ಮಿಡ್ಲ್ ಸ್ಕೂಲಲ್ಲಿ ಶಿಕ್ಷಣ ಮುಗಿಸಿದ ನಂತರ ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ  ಅದಾಗಲೇ ಅವರ ಹಿರಿಯ ಅಣ್ಣ ಶ್ರೀ ಎ.ಎನ್.ನರಸಿಂಹಯ್ಯನವರು ಉಪಾಧ್ಯಾಯರಾಗಿದ್ದ ಮೈಸೂರಿನ ಮರಿಮಲ್ಲಪ್ಪನವರ ಹೈಸ್ಕೂಲಿಗೆ ಸೇರಿಕೊಂಡು ತಮ್ಮ ಅಣ್ಣನ ಶಿಷ್ಯರಾಗಿಯೇ ವಿದ್ಯೆ ಕಲಿಯರಾರಂಭಿಸಿದರು. ಅದೇ ಸಮಯದಲ್ಲಿ ಆಲ್ಲಿ ಕನ್ನಡ ಪಂಡಿತರಾಗಿದ್ದ  ಶ್ರೀ ಬಿ.ಎಮ್. ಸಿದ್ಧಲಿಂಗಶಾಸ್ತ್ರಿಗಳ ಪ್ರಭಾವದಿಂದಾಗಿ ಬಾಲಕ ವೆಂಕಟಾದ್ರಿ ಪಠ್ಯ ಪುಸ್ತಕಗಳಿಗಿಂತಲೂ ಕನ್ನಡ ಭಾಷೆ ಮತ್ತು ಸಂವೃದ್ಧ ಸಾಹಿತ್ಯದ ಕಡೆಗೆ ಬಹಳ  ಒತ್ತು ಕೊಟ್ಟು ಉಳಿದ ವಿಷಯಗಳ ಬಗ್ಗೆ ಅಷ್ಟೇನೂ ಗಮನ ಹರಿಸದ ಕಾರಣದಿಂದಾಗಿಯೇ1914ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಪಾಸಾದಾಗ, ತಮ್ಮ ಶಾಲಾ ಶಿಕ್ಷಣಕ್ಕೆ ತಿಲಾಂಜಲಿ ಇತ್ತರು.

sugunaಹೀಗೆ 10ನೇ ತರಗತಿಯನ್ನು ಮುಗಿಸಲಾಗಲಿಲ್ಲಾ ಎಂಬ ಕೀಳರಿಮೆಯನ್ನು ತೊಡೆದುಕೊಳ್ಳುವುದಕ್ಕೋ ಎಂಬಂತೆ ಹಟತೊಟ್ಟು  ಕನ್ನಡದ ಮೇಲಿನ ಅಭಿಮಾನದಿಂದಾಗಿ ಆಗ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರಿ ಕರಿಬಸಪ್ಪ ಶಾಸ್ತ್ರಿಗಳಲ್ಲಿ ಕನ್ನಡ ಪ್ರೌಢಗ್ರಂಥಗಳನ್ನು ವ್ಯಾಸಂಗ ಮಾಡಿ ಕನ್ನಡದಲ್ಲಿ ಪ್ರಖಾಂಡ  ಪಂಡಿತರೆನಿಸಿಕೊಂಡರು. ಕನ್ನಡದಂತೆಯೇ ತಮಿಳು ಮತ್ತು ಇಂಗ್ಲೀಷ್ ಭಾಷೆಯನ್ನೂ ಅಭ್ಯಾಸ ಮಾಡಿದ್ದರು. ಇಷ್ಟೇಲ್ಲಾ  ಪರಿಣಿತಿ ಪಡೆದು ಮೊತ್ತ ಮೊದಲ ಬಾರಿಗೆ ಸುಗುಣ ಗಂಭೀರ ಎಂಬ ನಾಟಕವನ್ನು ಬರೆದು ಅದನ್ನು 1919ರಲ್ಲಿ ಬೆಂಗಳೂರಿನ ಎಡಿಎ ಸಂಸ್ಥೆ ಏರ್ಪಡಿಸಿದ್ದ ಶ್ರೀಕಂಠೀರವ ನರಸರಾಜ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರದರ್ಶನ ಮಾಡಿದ್ದಲ್ಲದೇ, ಶೀ ಬಿ.ಎಂ. ಶ್ರೀಕಂಠಯ್ಯನವರು, ಬೆನಗಲ್ ರಾಮರಾಯರು ಮತ್ತು ನಂಗಪುರಂ ವೆಂಕಟೇಶ ಅಯ್ಯಂಗಾರ್ ಅವರಂತಹ ಮಹಾನ್ ತೀರ್ಪುಗಾರರಿಂದ ಸೈ  ಎನಿಸಿಕೊಂಡು ಎರಡನೆಯ ಬಹುಮಾನ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದಾಗ ಅವರಿನ್ನೂ ಕೇವಲ 21ರ ಪ್ರಾಯದ ತರುಣರಾಗಿದ್ದರು. ಹೀಗೆ ತಮ್ಮ ಚೊಚ್ಚಲು ಕೃತಿಗೆ ಬಹಳಷ್ಟು ಪ್ರಶಂಸೆ ಸಿಕ್ಕಿದ್ದನ್ನು ಗಮನಿಸಿ ತಮ್ಮ ಸಾಹಿತ್ಯ ಕೃಷಿಯನ್ನು ಬಹುಮಟ್ಟಿಗೆ ನಾಟಕ ರಚನೆಗಳಿಗೆಂದೇ ಮೀಸಲಾಗಿರಿಸಿದರು. ಈದಾದ  ನಂತರ 1923ರಲ್ಲಿ ವಿಗಡ ವಿಕ್ರಮರಾಯದಂತಹ ಅಪೂರ್ವವಾದ ಐತಿಹಾಸಿಕ ನಾಟಕಗಳನ್ನು ರಚಿಸುವುದಕ್ಕೆ ಅವಶ್ಯಕವಿದ್ದ ಪ್ರೌಢಿಮೆಯನ್ನು ಪಡೆದು ಪ್ರಬುದ್ಧರಾದರೂ ಆ ನಾಟಕವನ್ನು ಬರೆದ 2 ವರ್ಷಗಳ ಕಾಲ ಆ ಕೃತಿಯನ್ನು ಯಾರಿಗೂ ನೀಡದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದಲ್ಲದೇ, 1925ರಲ್ಲಿ ಪ್ರಬುದ್ಧ ಕರ್ಣಾಟಕ ಪತ್ರಿಕೆಯಲ್ಲಿ ಮೂರು ಕಂತುಗಳಲ್ಲಿ ಪ್ರಕಟವಾಗಿ ಅದರ ವಿಚಿತ್ರ ಕಾವ್ಯನಾಮದಿಂದ ಮತ್ತು ನಾಟಕದ ಸತ್ವದಿಂದಾಗಿ ಸಾಹಿತ್ಯಾಸಕ್ತರ ಗಮನ ಸೆಳೆಯಿತು.

ಇಷ್ಟೆಲ್ಲಾ ಪಾಂಡಿತ್ಯವನ್ನು ಹೊಂದಿದ್ದರೂ ಸಹಾ ಸದಾ ಕಾಲವು ಆಂತರ್ಮುಖಿಗಳಾಗಿರುತ್ತಿದ್ದದ್ದಲ್ಲದೇ ಪದೇ ಪದೇ ಖಿನ್ನತೆಗೆ ಒಳಗಾಗಿ  ಹಲವು ಬಾರಿ ಅತ್ಮ ಹತ್ಯೆಗೂ ಪ್ರಯತ್ನಿಸಿದ  ಉದಾಹರಣೆಯಿದೆ. ಒಂದು ಜಾಗದಲ್ಲಿ ತುಂಬಾ ದಿನಗಳನ್ನು ಕಳೆಯಲು ಇಚ್ಚಿಸದ ವೆಂಕಟಾದ್ರಿಯವರು ಪದೇ ಪದೇ ಊರೂತು ಸುತ್ತುತ್ತಾ ತಮ್ಮ ಕೆಲಸವನ್ನು ಬದಲಿಸುತ್ತಿದ್ದದ್ದರು. ತಮ್ಮ ಕನ್ನಡ ಜ್ಞಾನವನ್ನು ಮುಂದಿನ ಪೀಳಿಗೆ ಹಂಚುವ ಸಲುವಾಗಿ  ಉಚಿತವಾಗಿ  ಕನ್ನಡ ಪಾಠವನ್ನು ಅನೇಕ ವಿದ್ಯಾರ್ಥಿಗಳಿಗೆ  ಹೇಳಿಕೊಟ್ಟಿದ್ದರು. ಕೆಲವು ಕಾಲ ಅವರು ಹಾಸನ ಬಳಿಯ  ಹೆಬ್ಬಾಲೆಯ ಶಾಲೆಯಲ್ಲಿ ಮುಖ್ಯೇಪಾಧ್ಯಾಯರಾಗಿ ಕೆಲಸ ಮಾಡಿದ್ದರೆ, ಮುಂದಿನ ಕೆಲವು ವರುಷ ಮೈಸೂರಿನ ಶಾರದಾ ವಿಲಾಸ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ಮತ್ತೆ ಕೆಲವು ಕಾಲ ಮದರಾಸಿನ ಲಯೊಲಾ ಕಾಲೇಜಿನಲ್ಲಿ ಕನ್ನಡ ಬೋಧಿಸಿದರೆ, ಬಲ್ಲ ಮೂಲಗಳ ಪ್ರಕಾರ  ಮಂಗಳೂರಿನ ಸೆಂಟ್ ಎಲೋಶಿಯಸ್ ಕಾಲೇಜಿನಲ್ಲೂ ಕೆಲವು ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ್ದರು  ಎಂದು ತಿಳಿದು ಬರುತ್ತದೆ.

samsa6ಕನ್ನಡ ನಾಟಕ ಲೋಕದಲ್ಲಿ ವಿಶಿಷ್ಟ ನಾಟಕಕಾರರೆನಿಕೊಂಡಿದ್ದ ವೆಂಕಟಾದ್ರಿಯವರು ತಮ್ಮ ಅಂಕಿತನಾಮ/ಕಾವ್ಯನಾಮವನ್ನು ಪದೇ ಪದೇ ಬದಲಿಸುತ್ತಿದ್ದದ್ದು ಮತ್ತೊಂದು ಕೌತಕವಾದ ವಿಷಯವಾಗಿತ್ತು.  ಎ. ಎನ್. ಸ್ವಾಮಿ, ಸ್ವಾಮಿ, ವೆಂಕಟಾದ್ರಿ ಪಂಡಿತ್, ಎ.ವಿ. ಪಂಡಿತ್, ಸ್ವಾಮಿ ವೆಂಕಟಾದ್ರಿ ಹೀಗೆ ಸುಮಾರು  ಹದಿಮೂರು ಹೆಸರುಗಳಲ್ಲಿ ತಮ್ಮ ಕೃತಿಗಳನ್ನು ಪ್ರಕಟಿಸಿದ್ದವರಿಗೆ ಸಂಸ  ಎಂಬ ಕಾವ್ಯನಾಮ ಬಂದುದರ ಹಿಂದೆ ಒಂದು ರೋಚಕ ಕಥೆ ಇದೆ. ತಮ್ಮ ವಿಗಡ ವಿಕ್ರಮರಾಯ ನಾಟಕವನ್ನು ಕಂಸ (ಶ್ರೀ ಕೃಷ್ಣನ ಸೋದರಮಾವ) ಎಂಬ ರಾಕ್ಷಸನ ಕಾವ್ಯನಾಮದೊಂದಿಗೆ ಪ್ರಕಟಣೆಗೆ ನೀಡಿದರುಅದೃಷ್ಟವೋ, ದುರಾದೃಷ್ಟವೋ  ಎನ್ನುವಂತೆ ಕಂಸ ಎನ್ನುವ ರಾಕ್ಷಸ ಬದಲಾಗಿ ಮುದ್ರಾರಾಕ್ಷಸಸನ  ಹಾವಳಿಯಿಂದಾಗಿ ಅದು ಸಂಸ  ಹೆಸರಿನಲ್ಲಿ ಪ್ರಕಟವಾಗಿ ಸಂಸ ಎನ್ನುವುದು ಅವರ  ಹದಿನಾಲ್ಕನೆಯ ಕಾವ್ಯನಾಮವಾಗಿ ಕಡೆಗೆ ಅದೇ ಶಾಶ್ವತವಾಗಿ ಉಳಿಯಿತು.

samsa5ಸಂಸರು ಹೈಸ್ಕೂಲಿನಲ್ಲಿದ್ದಾಗಲೇ ಕೌಶಲ ಎಂಬ ಬಂಗಾಳಿ ಶೈಲಿಯ ನಾಟಕ ಬರೆದು ಪ್ರಕಟಿಸಿದ್ದಲ್ಲದೇ,ಆನಂತರ ಶ್ರೀಮಂತೊದ್ಯಾನ ವರ್ಣನಂ ಎಂಬ ಚಂಪೂ ಕಾವ್ಯವನ್ನೂ ರಚಿಸಿದ್ದರು.  1919ರಿಂದ 1939ರ ವರೆಗಿನ ಅವಧಿಯಲ್ಲಿ ಮೈಸೂರು ಅರಸರ ಚರಿತ್ರೆಯನ್ನಾಧರಿಸಿ ಒಟ್ಟು 23 ನಾಟಕಗಳನ್ನು ಬರೆದಿದ್ದರೂಈಗ  ಲಭ್ಯವಿರುವುದು ಕೇವಲ ಆರು ನಾಟಕಗಳು ಮಾತ್ರ ಎನ್ನುವುದು ನಿಜಕ್ಕೂ ವಿಪರ್ಯಾಸವಾಗಿದೆ.  ಸುಗುಣ ಗಂಭೀರ, ವಿಗಡ ವಿಕ್ರಮರಾಯ, ವಿಜಯನಾರಸಿಂಹ, ಬಿರುದಂತೆಂಬರ ಗಂಡ, ಬೆಟ್ಟದ ಅರಸು ಮತ್ತು ಮಂತ್ರಶಕ್ತಿ ಮಾತ್ರ ಲಭ್ಯವಿದೆ. ಬಲ್ಲವರ ಪ್ರಕಾರ ಧಾರವಾಡದಲ್ಲಿ ತಮ್ಮ ಕೃತಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಸಂಧರ್ಭ್ದಲ್ಲಿ ಅದು ವಿಪರೀತವಾಗಿ  ಜಗಳಕ್ಕೆ ಬದಲಾಗಿ ಅದೇ ಸಿಟ್ಟಿನಿಂದ ಕೆಲವು ನಾಟಕಗಳನ್ನು ಸುಟ್ಟುಬಿಟ್ಟರಂತೆ. ಅದೇ ರೀತಿ ಮನೆಯಲ್ಲಿ ಚಿಕ್ಕಪ್ಪ, ಅಣ್ಣಂದಿರೊಡನೆ ಆದ ಭಿನ್ನಾಭಿಪ್ರಾಯದಿಂದ ಒಂದು ಕಡೆ ನಿಲ್ಲುವ ವ್ಯವಧಾನವಿಲ್ಲದೇ, ಮನೆ ಬಿಟ್ಟು ಊರೂರು ಅಲೆಯುತ್ತಾ ಇದ್ದಂತಹ ಸಂಧರ್ಭದಲ್ಲಿ ಕ್ರೈಸ್ತ ಪಾದ್ರಿಯೊಬ್ಬರ ಪರಿಚಯವಾಗಿ ಕ್ರೈಸ್ತ ಮತಕ್ಕೆ ಮತಾಂತರ ಆಗಬೇಕೆಂದು ನಿರ್ಧರಿಸಿ ಆ ಪಾದ್ರಿಗೆ ನ್ಯಾಸವಾಗಿ ನೀಡಿದ ಹಸ್ತಪ್ರತಿಗಳ ಪೆಟ್ಟಿಗೆ ಅಲ್ಲೇ ಉಳಿದು ಹೋಯಿದ ಪರಿಣಾಮ ಉಳಿದ 17 ನಾಟಕಗಳು ನಮಗೆ ಲಭ್ಯವಿಲ್ಲದೇ ಹೋದದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಕೇವಲ ಕನ್ನಡಲ್ಲಿ ನಾಟಕವಲ್ಲದೇ, ಇಂಗ್ಲಿಷಿನಲ್ಲಿ ಶೆರ್ಲಾಕ್ ಹೋಮ್ಸ್ ಇನ್ ಜೈಲ್ ಎಂಬ ಕಾದಂಬರಿಯ ಜೊತೆ ಶ್ರೀಮಂತೊಧ್ಯಾನಂ, ಸಂಸ ಪದಂ, ಈಶಪ್ರಕೋಪನ, ನರಕ ದುರ್ಯೋಧನೀಯಂ, ಅಚ್ಚುಂಬ ಶತಕ ಎಂಬ ಕಾವ್ಯಗಳನ್ನೂ ಬರೆದಿದ್ದರು.

samsa2ಬಾಲ್ಯದಿಂದಲೂ ಕುಟುಂಬದೊಂದಿಗೆ ಉತ್ತಮವಾದ ಸಂಬಂಧ ಹೊಂದಿರದಿದ್ದ ಸಂಸರು persecution maniaದಿಂದ ಬಳಲುತ್ತಿದ್ದ ಕಾರಣ. 1916ರಿಂದ 1936ರವರೆಗೆ ಇಪ್ಪತ್ತು ವರ್ಷ ಕೇವಲ ಭಾರತವಲ್ಲದೇ ಫಿಜಿ ದ್ವೀಪಗಳು, ಟಿಬೆಟ್, ಆಫ್ಘಾನಿಸ್ತಾನ, ಬೆಲೂಚಿಸ್ತಾನ, ಬರ್ಮಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳನ್ನೂ ಸುತ್ತಿ ಬಂದಿದ್ದರು. ಅಲ್ಲಿಂದ ಬಂದು ಮೇಲೆ  ಭಾರತಪರ್ಯಟನೆ ಮಾಡಲು ಮುಂದಾಗಿ 1934ರ ವೇಳೆಗೆ ಅಂದಿನ ಅವಿಭಚಿತ ಭಾರತದ ಇಂದಿನ ಪಾಕೀಸ್ಥಾನಕ್ಕೆ ಸೇರಿರುವ ಕ್ವೆಟ್ಟಾ ನಗರಕ್ಕೆ ಹೋಗಿ ಅಲ್ಲಿಯ ಮಿಲಿಟರಿ ಕಚೇರಿಯಲ್ಲಿ ಕೆಲ ಕಾಲ ಕಲಿಸುತ್ತದ್ದಂತಹ ಸಂಧರ್ಭದಲ್ಲಿಯೇ ಅಲ್ಲಿ ಭೂಕಂಪ ಸಂಭವಿಸಿದಾಗ 1936ರಲ್ಲಿ ಮೈಸೂರಿಗೆ ಹಿಂದಿರುಗಿ  ಅಲ್ಲಿಯೇ ಶಾಶ್ವತವಾಗಿ ನೆಲೆಸಿದರು.

sansa3ತಮ್ಮ ಮಾನಸಿಕ ತೊಳಲಾಟಗಳಿಂದಾಗಿ ತಮ್ಮ 22ನೆಯ ವಯಸ್ಸಿನಲ್ಲಿ ಒಮ್ಮೆ, ಹಾಗೂ ತಮ್ಮ37ನೆಯ ವಯಸ್ಸಿನಲ್ಲಿ ಮತ್ತೊಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲಗಿದ್ದ ಸಂಸರ  ಕಡೆಯ ದಿನಗಳಲ್ಲಿ,  ತಾನೊಬ್ಬ ಕ್ರಾಂತಿಕಾರ, ತನ್ನನ್ನು ಬಂಧಿಸಿ ತನ್ನನ್ನು ಸರ್ವನಾಶ ಪಡಿಸಲು ಪೋಲೀಸರು ಮುಂದಾಗಿದ್ದಾರೆ ಎಂಬ ವಿಚಿತ್ರ ಆಲೋಚನೆಗಳು ಅವರ ಮನಸ್ಸಿನ ಮೇಲೆ ಬಿದ್ದ ಪರಿಣಾಮ ಒಂದು ರೀತಿಯ ಭ್ರಮಾ ಲೋಕದಲ್ಲೇ ಸುಮಾರು ಎರಡು ಮೂರು ವರ್ಷಗಳ ಕಳೆಯ ತೊಡಗಿದರು, ಸುಮಾರು ಜನರು ಅವರಿಗೆ ಧ್ಯೆರ್ಯ ತುಂಬಲು ಪ್ರಯತ್ನಿಸಿದರೂ, ಸಫಲವಾಗದೇ ಅದೇ ಕೊರಗಿನಿಂದ ಜೀವನದಲ್ಲಿ ಜುಗುಪ್ಸೆ ಹುಟ್ಟಿ ಅಂತಿಮವಾಗಿ ತಾವೇ ಮಿತಿ ಮೀರಿದ ವಿಷವನ್ನು ಸೇವಿಸಿ ಫೆಬ್ರುವರಿ 14, 1939ರರಂದು ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಕೋಣೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ವಿಚಿತ್ರವಾಗಿ  ಇಹಲೋಕವನ್ನು ತ್ಯಜಿಸಿದ್ದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಯಿತು ಎಂದರೂ ತಪ್ಪಾಗದು.

WhatsApp Image 2024-11-25 at 15.46.54ಸಂಸರು ಭೌತಿಕವಾಗಿ ನಮ್ಮೆಲ್ಲರನ್ನೂ ಅಗಲಿದರೂ ತಮ್ಮ ಕೃತಿಗಳ ಮೂಲಕ ಆಚಂದ್ರಾರ್ಕವಾಗಿ ಕನ್ನಡಿಗರ ಮನಗಳಲ್ಲಿ ಶಾಶ್ವತವಾಗಿ ಇರುವುದು ಸತ್ಯ ಎನ್ನುವುದನ್ನು ನಿರೂಪಿಸಲೋ ಎನ್ನುವಂತೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಬಯಲು ರಂಗಮಂದಿರಕ್ಕೆ ಸಂಸ ಬಯಲು ರಂಗಮಂದಿರ ಎಂಬ ಹೆಸರನ್ನು ಇಟ್ಟಿದ್ದಾರೆ.  ಇಂದಿಗೂ  ಪ್ರತಿ ದಿನವೂ ಆ ಬಯಲು ರಂಗ ಮಂಟಪದಲ್ಲಿ ನೂರಾರು ನಾಟಕಗಳ ರಿಹರ್ಸಲ್  ಕೆಲವೊಂದು ಬಾರಿ ಪ್ರದರ್ಶನವೂ ನಡೆಸುವ ಮೂಲಕ ಚಾರಿತ್ರಿಕ ನಾಟಕಗಳ ಪಿತಾಮಹ ಸಂಸರ ಆತ್ಮಕ್ಕೆ ತೃಪ್ತಿಯನ್ನು ನೀಡುತ್ತಿದ್ದಾರೆ ಎಂದರೂ ಸುಳ್ಳಾಗದು.

ಯಾರನ್ನೂ  ಅನುಕರಿಸದೇ, ಯಾರ ಕೃತಿಯನ್ನೂ ಅನುವಾದಿಸದೇ,  ಗಂಭಿರವಾದ ವಿಷಯವನ್ನು ತೆಗೆದುಕೊಂಡು, ಅನಗತ್ಯ ಹಾಸ್ಯಕ್ಕೆ ಎಡೆಯಿಲ್ಲದೇ, ಕೇವಲ ಪಾತ್ರ ರಚನೆ ಮತ್ತು ಸಂಭಾಷಣಾ ಚಾತುರ್ಯಗಳಿಂದ ನಾಟಕಗಳ ವಸ್ತು ವಿಸ್ತಾರವನ್ನು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ನಿರ್ವಹಿಸಿಸುತ್ತಿದ್ದ  ಸಂಸರನ್ನು ಹೇಗೆ ಮಾಸ್ತಿ ಕನ್ನಡದ ಆಸ್ತಿ, ಕನ್ನಡಕ್ಕೊಬ್ಬನೇ ಕೈಲಾಸಂ  ಎನ್ನುತ್ತಾರೋ ಹಾಗೆಯೇ, ಕನ್ನಡ ಚಾರಿತ್ರಿಕ ನಾಟಕಕ್ಕೊಬ್ಬನೇ ಸಂಸ ಎಂದು ಕರೆದರೂ ತಪ್ಪಾಗದು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment