ಕನ್ನಡ/ಕನ್ನಡಿಗರು ಕೇವಲ ಕರ್ನಾಟಕಕ್ಕಷ್ಟೇ ಸೀಮಿತವೇ?

ಈಗಾಗಲೇ  ಬಹಳಷ್ಟು ಬಾರಿ ಹೇಳಿದಂತೆ ನಮ್ಮ ಕನ್ನಡಿಗರಿಗೆ ಕನ್ನಡ ನೆನಪಾಗೋದೇ ಪ್ರತೀ ವರ್ಷ ಅಕ್ಟೋಬರ್ 31ರ ರಾತ್ರಿಯಿಂದ ನವೆಂಬರ್ 30 ರಾತ್ರಿಯವರೆಗೂ ಅಷ್ಟೇ. ಅದಾದ ನಂತರ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಮಲಗಿಬಿಟ್ಟರೆ ಇನ್ನು ಏಳೋದು ಮುಂದಿನ ವರ್ಷವೇ.  ಇಷ್ಟರ ಮಧ್ಯೆ  ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಏನಾದರೂ ಉಭಾ ಶುಭಾ  ಕೇಳುವವರೇ ಇಲ್ಲದಂತಾಗಿದೆ.  ಇನ್ನು ನಮ್ಮ ಘನವೆತ್ತ ಕರ್ನಾಟಕ ಸರ್ಕಾರಕ್ಕೆ ಕನ್ನಡ ಮತ್ತು ಕನ್ನಡಿಗರೆಂದರೆ ಕೇವಲ ಕರ್ನಾಟಕಕ್ಕೆ ಮಾತ್ರ ‍ಸೀಮಿತ ಎಂದು ಭಾವಿಸಿದಂತಿದೆ.   ನಮ್ಮ ರಾಜಕಾರಣಿಗಳಿಗೆ ಮತ್ತು ಸ್ವಘೋಷಿತ ಬುದ್ದಿಜೀವಿಗಳು ಮತ್ತು ಕನ್ನಡ ರಕ್ಷಕರುಗಳಿಗೆ ಎರಡು ವರ್ಷಕ್ಕೊಮ್ಮೆ ದೂರದ ಅಮೇರಿಕಾದಲ್ಲಿ ನಡೆಯುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿಸಲು ಆಹ್ವಾನ ಬಂದಾಗಲೇ, ಓಹೋ ನಮ್ಮ ಕನ್ನಡ ಮತ್ತು ಕನ್ನಡಿಗರು ಕರ್ನಾಟಕಷ್ಟೆ ಸೀಮಿತವಾಗಿರದೇ, ಹೊರದೇಶದಲ್ಲೂ ಇದ್ದಾರೆ ಎಂದು  ಅಕ್ಕಾ ಆಹ್ವಾನದ ಮೇಲೆ ಒಂದೆರಡು ವಾರಗಳ ಕಾಲ ಅವರ ಖರ್ಚಿನಲ್ಲೇ ಹೋಗಿ ಜಾಲಿಯಾಗಿ ಸುತ್ತಾಡಿಕೊಂಡು ಬರುವುದೇ ಕನ್ನಡದ ರಕ್ಷಣೆ ಎಂದು ಭಾವಿಸಿರುವಂತಿದೆ.

ಇಷ್ಟೆಲ್ಲಾ ಏಕಪ್ಪಾ ಪೀಠಿಕೆ ಎಂದರೆ, ಅವಿಭಜಿತ ದಕ್ಷಿಣ ಕನ್ನಡ ಮದ್ರಾಸ್ ಪ್ರಾಂತಕ್ಕೆ ಸೇರಿದ್ದರೂ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮತ್ತು ಕರ್ನಾಟಕದ ಏಕೀಕರಣದ ಸಮಯದಲ್ಲಿ  ಅದರ ಭಾಗವಾಗಿದ್ದ ಕಾಸರಗೋಡು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿತ್ತು. ದುರದೃಷ್ಟವಶಾತ್, ಸ್ವಾತಂತ್ರ್ಯಾನಂತರ 1956ರಲ್ಲಿ ಭಾಷಾವಾರು ರೂಪದಲ್ಲಿ ರಾಜ್ಯಗಳ ವಿಂಗಡಣೆಯಾದಾಗ, ಕನ್ನಡಿಗರೇ ಬಹುಸಂಖ್ಯಾತರಾಗಿದ್ದರೂ ಕೆಲವು ಕಾಣದ ಕೈಗಳ ಕರಾಮತ್ತಿನಿಂದ ಕಾಸರಗೋಡು ಕರ್ನಾಟಕದ ಭಾಗವಾಗದೇ ಕೇರಳದ ಪಾಲಾದಾಗ, ಅಲ್ಲಿಯ ಬಹುತೇಕ ಮಂದಿ ಬಹಳವಾಗಿ ನೊಂದುಕೊಂಡಿದ್ದಲ್ಲದೇ ಅದರ ವಿರುದ್ಧ ನಡೆಸಿದ  ಉಗ್ರ ಪ್ರತಿಭಟನೆಗಳೆಲ್ಲವೂ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾದರೂಅಂದಿನಿಂದ ಇಂದಿನವರೆಗೂ ಅಲ್ಲಿಯ ಕನ್ನಡಿಗರು ಭೌತಿಕವಾಗಿ ಕೇರಳಕ್ಕೆ ಸೇರಿದ್ದರೂ ಮಾನಸಿಕವಾಗಿ ಕರ್ನಾಟಕ್ಕಕ್ಕೆ ಹತ್ತಿರವಾಗಿದ್ದಾರೆ.

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ ಎಂಬ ಜನಪ್ರಿಯ ಗೀತೆಯ ಲೇಖಕರೂ ಮತ್ತು ಕನ್ನಡದ ಪ್ರಪ್ರಥಮ ರಾಷ್ಟ್ರಕವಿಗಳಾದ ಶ್ರೀ ಪಂಜೇಮಂಜೇಶ್ವರ ಗೋವಿಂದ ಪೈ ಮತ್ತು ಕಾಸಗೋಡು ಕೇರಳದ ಪಾಲಾದಾಗ, ಬಹಳವಾಗಿ ನೊಂದುಕೊಂಡ ಕನ್ನಡದ ಮತ್ತೊಬ್ಬ ಹಿರಿಯ ಕವಿ ಶ್ರೀ ಕಯ್ಯಾರ ಕಿಞ್ಞಣ್ಣ ರೈಗಳು ಬಹಳ ದುಃಖದಿಂದ ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ ಎಲ್ಲರೂ ಎದ್ದೆದ್ದು ಓಡಿ ಬನ್ನಿ, ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ! ಎಂಬ ಕವಿತಿಯನ್ನು ಬರೆದು ಕಾಸರಗೋಡು ಕೇರಳದ ಪಾಲಾಗಿದ್ದರ ವಿರುದ್ಧ  ಕನ್ನಡಿಗರನ್ನು ಹೋರಾಟ ಮಾಡಲು ಎತ್ತಿಕಟ್ಟಿದ್ದರು.

ಹಾಗಾಗಿ ಆಡಳಿತಾತ್ಮಕವಾಗಿ ಕಾಸರಗೋಡು ಕೇರಳ ಪಾಲಾಗಿದ್ದರೂ, ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ಅದು ಅಂದು ಇಂದು ಎಂದೆಂದಿಗೂ ಕರ್ನಾಟಕ ಮತ್ತು ಕನ್ನಡಿಗರ ಅವಿಭಾಜ್ಯ ಆಂಗವಾಗಿದ್ದು, ಕಾಸರಗೋಡು ಹೊರತಾಗಿ ಅಖಂಡ ಕರ್ನಾಟಕವೇ ಆಗುವುದಿಲ್ಲ ಎಂದರೂ ತಪ್ಪಾಗದು. ಹೀಗಿದ್ದೂ ಅಲ್ಲಿನ ಕನ್ನಡಿಗರ ಮೇಲೆ ದಿನೇ ದಿನೇ ದಬ್ಬಾಳಿಕೆ ನಡೆಯುತ್ತಿದ್ದರೂ. ಅಲ್ಲಿ ದಿನದಿಂದ ದಿನಕ್ಕೆ ಕನ್ನಡ ಕಣ್ಮರೆಯಾಗುತ್ತಿದ್ದರೂ, ಅಲ್ಲಿದ್ದ ನೂರಾರು ಕನ್ನಡ  ಶಾಲೆಗಳು  ಅವಸಾನವಾಗುತ್ತಿದ್ದರೂ (ರಿಷಭ್ ಶೆಟ್ಟಿ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದಲ್ಲಿ ತೋರಿಸಿದ್ದಾರೆ) ಅದರ ಬಗ್ಗೆ ಯಾವ ಕನ್ನಡಿಗರಾಗಲೀ, ಕನ್ನಡದ ಹೆಸರಿನಲ್ಲಿ ತಮ್ಮ ಹೊಟ್ಟೆ ಹೊರೆದುಕೊಳ್ಳುವ  ಉಟ್ಟು ಖನ್ನಡ ಓಲಾಟಗಾರೂ ಸಹ ಧ್ವನಿ ಎತ್ತದೇ ಇರುವುದೂ ಸಹಾ ದುಃಖದ ಸಂಗತಿಯಾಗಿದ್ದರೆ, ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ಸರ್ಕಾರ ದಿವ್ಯ ಮೌನ ತಳೆದಿರುವುದು ಹೊರ ನಾಡ ಕನ್ನಡಿಗರ ಬಗ್ಗೆ ಸರ್ಕಾರಕ್ಕಿರುವ ಧೋರಣೆಯನ್ನು ತೋರಿಸುತ್ತದೆ.

WhatsApp Image 2024-12-03 at 18.38.50

ಹೀಗೆ ಕನ್ನಡವನ್ನು ಮತ್ತು ಕನ್ನಡಿಗರನ್ನು ರಕ್ಷಿಸಬೇಕಾದ ಕರ್ನಾಟಕದ ಸರ್ಕಾರವೇ ಕುಂಭಕರ್ಣನಂತೆ ನಿದ್ರಿಸುತ್ತಿರುವರಿಂದಲೇ, ಗಡಿನಾಡಿನಲ್ಲಿ ಕೇರಳ ಸರ್ಕಾರದ ಕನ್ನಡ ವಿರೋಧಿ ನೀತಿ ಮತ್ತೆ ಮುಂದುವರಿದಿದೆ. ಕಾಸರಗೋಡಿನ ಹೊಸದುರ್ಗದ ಉದಿನೂರಿನಲ್ಲಿ ನಡೆದ ಮೂರು ದಿನಗಳ ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕನ್ನಡವನ್ನು ಪೂರ್ಣವಾಗಿ ನಿರ್ಲಕ್ಷಿಸಲಾಗಿರುವ ಸಂಗತಿ ಎದ್ದು ಕಾಣುತ್ತಿದೆ. ಅದು ಕನ್ನಡ ಶಾಲೆಯಾಗಿದ್ದರೂ ಅಲ್ಲಿ ಕನ್ನಡದ ಶಿಕ್ಷಕರ ಬದಲಾಗಿ ಮಲಯಾಳಿ ಶಿಕ್ಷಕರ ನೇಮಕ ಮಾಡಿರುವುದು, ಇನ್ನು ಕನ್ನಡಿಗರೇ ಹೆಚ್ಚಾಗಿರುವ ಪ್ರದೇಶಗಳಲ್ಲಿರುವ ಕಚೇರಿಗಳಲ್ಲಿ ಕನ್ನಡ ಭಾಷೆಯಲ್ಲಿ ಬಳಸುತ್ತಿರುವುದರ ಬದಲಾಗಿ ಬಲವಂತವಾಗಿ  ಮಲಯಾಳಂ ಭಾಷೆಯಲ್ಲಿ ಕಡತ ವಿಲೇವಾರಿ ಮಾಡುತ್ತಿರುವುದನ್ನು ಅಲ್ಲಿನ ಕನ್ನಡಿಗರು ಬಲವಾಗಿ ವಿರೋಧಿಸುತ್ತಿರುವ ನಡುವೆಯೇ ಅಲ್ಲಿ ಕಳೆದ ವಾರ ನಡೆದ ಕಲೋತ್ಸವಗಳಲ್ಲೂ ಸಂಪೂರ್ಣವಾಗಿ ಕನ್ನಡದ ಕಡೆಗಣನೆಯ ಆರೋಪವೂ ಸೇರ್ಪಡೆಯಾಗಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

kalotsavaಕಾಸರಗೋಡು ಜಿಲ್ಲೆಗೆ ಸೇರಿರುವ ಕಾಸರಗೋಡು, ಕುಂಬಳೆ, ಮಂಜೇಶ್ವರ ಮುಂತಾದ  ಕಡೆಗಳಿಂದ ಬಹುಪಾಲು ಕನ್ನಡ ಭಾಷಿಕ ಮಕ್ಕಳೇ ಬಂದಿದ್ದ ಆ ಕಾರ್ಯಕ್ರಮದ 12 ವೇದಿಕೆಗಳಲ್ಲಿ ಯಾವುದೇ ವೇದಿಕೆಯಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ ಸ್ಥಾಪಿಸಿರಲಿಲ್ಲ. ಕೇವಲ ಕಾಟಾಚಾರಕ್ಕೆಂದು ಕನ್ನಡದ ಸ್ಪರ್ಧೆ ನಡೆಯುವ ಕೇವಲ ಒಂದೆಡೆ ಮಾತ್ರ ವೇದಿಕೆ ಸಮೀಪ ಪ್ಲಾಸ್ಟಿಕ್ ಮುಕ್ತ ಆವರಣವೇ ಉದಿನೂರಿಗೆ ಸ್ವರ್ಣಾಭರಣ ಎಂದು ಬರೆದಿರುವುದನ್ನು ಹೊರತುಪಡಿಸಿದರೆ, ಬೇರೆಲ್ಲೂ ಕನ್ನಡ ಭಾಷೆ ಬಳಸಿರುವುದು ನಿಜಕ್ಕ ಅಲ್ಲಿನ ಕನ್ನಡಿಗರಲ್ಲಿ  ಬೇಸರದ ಮೂಡಿಸಿದೆ.

ಈ ರೀತಿಯ ತಪ್ಪುಗಳು  ಇದೇ ಮೊದಲಾಗಿರದೇ, ಎರಡು ವರ್ಷಗಳ ಹಿಂದೆಯೂ ಕನ್ನಡದಲ್ಲಿ ಸಾಂಸ್ಕೃತಿಕ ವೈವಿಧ್ಯಗಳಿಗೆ ಅವಕಾಶ ನೀಡದ ಕಾರಣ ಅಂದು ಕನ್ನಡ ಅಧ್ಯಾಪಕರ ಸಂಘಟನೆಯ ನೇತೃತ್ವದಲ್ಲಿ ಕೇರಳದ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾಗ,  ಆಯೋಗದ ಅಧ್ಯಕ್ಷರು ಜಿಲ್ಲಾ ವಿದ್ಯಾ ಇಲಾಖೆಗೆ ನೋಟಿಸ್‌ ಕೊಟ್ಟು ವಿಚಾರಣೆ ನಡೆಸಿ, ಕೇರಳದಲ್ಲಿ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಕನ್ನಡದಲ್ಲೇ ಕಾರ್ಯಕ್ರಮ ನಡೆಸಲು ಅವಕಾಶ ನೀಡಬೇಕು. ಇದರ ಕುರಿತಾಗಿ ಯಾವುದೇ ಅಡ್ಡಿ ಆತಂಕ ಸಲ್ಲದು  ಎಂದು ಸ್ಪಷವಾಗಿ ಹೇಳಿದ್ದರೂ ಮತ್ತೆ ಕಲೋತ್ಸವದಲ್ಲಿ ಕನ್ನಡಿಗರಿಗೆ ಮತ್ತೆ  ಅವಕಾಶ ನೀಡದಿರುವುದು ಕೇರಳದಲ್ಲಿ ಕನ್ನಡಿಗರನ್ನು ಮತ್ತು ಕನ್ನಡವನ್ನು ಹತ್ತಿಕ್ಕುತ್ತಿರುವುದು ಎಲ್ಲರಿಗೂ ಎದ್ದು ಕಾಣುತ್ತಿದೆ.

rahulಇನ್ನು ಕನ್ನಡ ಪರ ಹೋರಾಟ, ಹಾರಾಟ, ಚೀರಾಟ,  ಕನ್ನಡ ಉಳಿಸುವುದು ಮತ್ತು ಬೆಳಸುವುದು ಎಲ್ಲವೂ  ಕೇವಲ  ಬೆಂಗಳೂರಿಗಷ್ಟೇ  ಸೀಮಿತವಾಗಿದ್ದು, ಭಾಷಾ ಹಿತಾಸಕ್ತಿ ಎನ್ನುವುದು ಕೇವಲ ರಾಜಕೀಯ ದಾಳವಾಗಿದೆ ಎನ್ನುವುದಕ್ಕೆ ಪ್ರಸ್ತುತ ಕಾಂಗ್ರೇಸ್ ಸರ್ಕಾರದ ಇತ್ತೀಚಿನ ನಡೆಗಳೂ ಸಹ ಪೂರಕವಾಗಿದೆ.  ಕಾಂಗ್ರೇಸ್ ಪಕ್ಷದ ಅಧಿನಾಯಕ ರಾಹುಲ್ ಈ ಹಿಂದೆ ವಯನಾಡಿನ ಸಾಂಸದರಾಗಿದ್ದರು ಎಂಬ ಏಕೈಕ ಕಾರಣಕ್ಕಾಗಿ, ಅವರನ್ನು ಓಲೈಸುವ ಸಲುವಾಗಿ ಕೇರಳದಲ್ಲಿ ಆನೆಯ ಧಾಳಿಯಿಂದಾಗಿ ಮಲೆಯಾಳಿ ಸತ್ತರೂ ಅತ ಕೇರಳಿಗ ಆನೆಯಿಂದ ಸತ್ತರೂ ಕನ್ನಡಿಗರ ತೆರಿಗೆ ಹಣದಿಂದ ಅವರಿಗೆ  ಪರಿಹಾರ ಕೊಟ್ಟಾಗಲೇ ಎಲ್ಲಾ ಕನ್ನಡಿಗರ ಹುಬ್ಬೇರಿಸುವಂತೆ ಮಾಡಿತ್ತು.  ಕರ್ನಾಟಕದಲ್ಲೇ ಅತಿವೃಷ್ಟಿ  ಅನಾವೃಷ್ಟಿಯಿಂದ ನರಳುತ್ತಿರುವಾಗ, ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸದೇ ಕೇಂದ್ರದಿಂದ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲಾ ಎಂದು ಬೊಬ್ಬಿಡುವ ಪ್ರಸ್ತುತ ಸರ್ಕಾರ, ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಕೇಂದ್ರ ಸರ್ಕಾರ ನೀಡಿದ್ದ ಜಲಪ್ರಳಯದ ಎಚ್ಚರಿಕೆಯನ್ನೂ ಪರಿಗಣಿಸದೇ ಹೊಣಗೇಡಿ ತನ ತೋರಿದ ಕೇರಳ ಸರ್ಕಾರವೇ ಸುಮ್ಮನಿರುವಾಗ ಮತ್ತೆ ಪ್ರಿಯಾಂಕ ಗಾಂಧಿಯವರ ಓಟ್ ಬ್ಯಾಂಕ್ ಒದಗಿಸುವ ಸಲುವಾಗಿ ನಮ್ಮ ಕರ್ನಾಟಕದ ಸರ್ಕಾರ ವಯನಾಡಿನಲ್ಲಿ ನೂರಾರು ಮನೆ ಕಟ್ಟಿಕೊಡುವ ಅಶ್ವಾಸನೆ ನೀಡಿದ್ದರ ಹಿಂದೆ ಮಾನವೀಯತೆಗಿಂತಲೂ ರಾಜಕಾರಣದ ಹೊಗೆಯಾಡುತ್ತಿದ್ದದ್ದು ಸ್ಪಷ್ಟವಾಗಿತ್ತು.

karnataka_ration_kitಕನ್ನಡಿಗರಿಗೂ ಮತ್ತು ಕನ್ನಡಕ್ಕೆ ಇಷ್ಟೆಲ್ಲಾ ಅವಮಾನ ಮತ್ತು ಅಪಮಾನಗಳನ್ನು ಮಾಡಿದ್ದರೂ, ಕನ್ನಡದ ಮೇಲೆ ಆಗುತ್ತಿರುವ ದಾಳಿಯನ್ನು ಲೆಕ್ಕಿಸದೇ,  ಕೇರಳದಲ್ಲಿ ಅಡ್ಜಸ್ಟ್ಮೆಂಟ್ ಮಾಡಿಕೊಂಡು, ರಾಹುಲ್, ಪ್ರಿಯಾಂಕ ಎಂಬ ಹಿಂದಿವಾಲಾಗಳಿಗೆ ಹೆದರಿಕೊಂಡು ಪ್ರಿಯಾಂಕಾ ಗಾಂಧಿ ವಾದ್ರಾ ಪರವಾಗಿ ವಯನಾಡ್ ಲೋಕಸಭಾ ಚುನಾವಣೆಯಲ್ಲಿ ಅಲ್ಲಿನ ಜನರನ್ನು ಓಲೈಸಿಕೊಳ್ಳುವ ಸಲುವಾಗಿ  ಕರ್ನಾಟಕದ ಆಹಾರದ ಕಿಟ್ ಗಳನ್ನು ಕೊಡಲು ಹೀಗಿ ಇದೇ ಕರ್ನಾಟಕದ ಕಾಂಗ್ರೇಸ್ ನಾಯಕರು ಸಿಕ್ಕಿ ಹಾಕಿಕೊಂಡಿದ್ದು ಈಗ ಗುಟ್ಟಾಗೇನೂ  ಉಳಿದಿಲ್ಲಾ. ಕರ್ನಾಟಕ ಕಾಂಗ್ರೇಸ್ಸಿಗರ ಇಷ್ಟೆಲ್ಲಾ ಕುತಂತ್ರದಿಂದಾಗಿ ವಯನಾಡಿನಲ್ಲಿ ಗೆಲುವು ಸಾಧಿಸಿ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ ಒಂದು ವಾರದೋಳಗೇ, ಪ್ರಿಯಾಂಕ ಕನ್ನಡಿಗರಿಗೆ ಶಾಕ್‌ ಕೊಡುವುದಕ್ಕೆ ಮುಂದಾಗಿದ್ದಾರೆ.

bandipurಕರ್ನಾಟಕ ಮತ್ತು ಕೇರಳದ ನಡುವೆ ಇರುವ ಬಂಡೀಪುರ ಆಭಯಾರಣ್ಯದಲ್ಲಿ ಮಾನವ – ಪ್ರಾಣಿ ಸಂಘರ್ಷ  ಬಹಳವಾಗಿದ್ದು. ರಾತ್ರಿಯ  ವೇಳೆಯಲ್ಲಿ ಇಲ್ಲಿ  ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದರಿಂದ ವನ್ಯ ಜೀವಿಗಳು ಸಾವನ್ನಪ್ಪುತ್ತಿದ್ದದ್ದನ್ನು  ತಪ್ಪಿಸುವ  ಸಲುವಾಗಿ ಈ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ  ರಾತ್ರಿ ಸಂಚಾರವನ್ನು ಬಹಳ ದಿನಗಳಿಂದಲೂ ನಿಷೇಧಿಸಲಾಗಿದ್ದು, ಈ ಭಾಗದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಕೇರಳ ಸರ್ಕಾರ ಹಲವು ವರ್ಷಗಳಿಂದಲೂ ಒತ್ತಡ ಹೇರುತ್ತಲೇ ಇದೆ. ಕರ್ನಾಟಕ ಕಾಂಗ್ರೇಸ್ಸಿಗರ ಕೃಪೆಯಿಂದ  ಸಂಸದೆಯಾಗಿ ಆಯ್ಕೆಯಾಗಿರುವ  ಪ್ರಿಯಾಂಕಾ ಬಂಡೀಪುರದಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕೊಡುವುದೇ ನನ್ನ ಮೊದಲ ಆದ್ಯತೆ ಎಂದಿದ್ದು,ಇಲ್ಲಿ ರಾತ್ರಿ ಸಂಚಾರ ನಿರ್ಬಂಧವಿರುವುದು ನನಗೆ ಗೊತ್ತಿದೆ. ಅಲ್ಲದೇ ಇದರಿಂದ ನೀವು ಯಾವ ರೀತಿ ಸಮಸ್ಯೆ ಎದುರಿಸುತ್ತಿದ್ದೀರಿ ಎಂದೂ ಗೊತ್ತು. ಈ ವಿಷಯವನ್ನು ನನಗೆ ಬಿಟ್ಟು ಬಿಡಿ. ಇಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ನನ್ನ ಜವಾಬ್ದಾರಿ ಎಂದು ಹೇಳಿರುವುದು ವನ್ಯಜೀವಿಗಳನ್ನು ಮತ್ತು ಕನ್ನಡಿಗರ ಆಶಯಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

WhatsApp Image 2024-12-03 at 19.36.50ಹೀಗೆ ಪ್ರಿಯಾಂಕಾ ಗಾಂಧಿಯವರ ರಾಜಕೀಯ ಲಾಭಕ್ಕಾಗಿ ಕನ್ನಡಿಗರ ಒತ್ತಾಸೆಗಳನ್ನು ಬದಿಗೊತ್ತಿ ಪದೇ ಪದೇ ಕೇರಳ ಸರ್ಕಾರದ ಒತ್ತಾಯಕ್ಕೆ ಪ್ರಸ್ತುತ ಕಾಂಗ್ರೇಸ್ ಕರ್ನಾಟಕ ಸರ್ಕಾರ ಮಣಿಯುತ್ತಿದ್ದರೆ,  ಇನ್ನು ಮೆಟ್ರೋದಲ್ಲಿ  ಹಿಂದಿಯಲ್ಲಿ ಬೋರ್ಡ್ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿಯವರು ಹಿಂದಿ ಪೇಜ್ ಆರಂಭಿಸಿದ್ದಾರೆ ಎಂದು ಹೋರಾಟ ಮಾಡುವುದರಲ್ಲೇ ನಿರತರಾಗಿರುವ ತಥಾಗಥಿತ ಕನ್ನಡ ಪರ ಹೋರಾಟಗಾರು ಕಾಲಾಹರಣ ಮಾಡುತ್ತಿರುವುದು  ಕನ್ನಡದ ಕಗ್ಗೊಲೆಯಾಗಿದ್ದು  ಇಂತಹವರಿಂದ  ಕನ್ನಡ ಮತ್ತು ಕನ್ನಡಿಗರಿಗೆ ಯಾವ ರೀತಿಯೂ ಪ್ರಯೋಜನವಾಗದು. ಕರ್ನಾಟಕ ಸರ್ಕಾರ, ಕನ್ನಡ ಹೋರಾಟಗಾರರು ಮತ್ತು ಕನ್ನಡ ಪ್ರೇಮಿಗಳು ಕೇವಲ ಒಂದು ದಿನದ ಕನ್ನಡಿಗರಲ್ಲ ಎನ್ನುವುದು ಸಾರಬೇಕಿದ್ದರೆ ಕೇರಳ ಸರ್ಕಾರದ ಹೆಡೆಮುರಿ ಕಟ್ಟಬೇಕು, ಕಾಸರಗೋಡಿನಲ್ಲಿ ಮತ್ತೆ ಕನ್ನಡದ ದುಂಧುಬಿ ಮೊಳಗುವಂತೆ ಮಾಡಬೇಕು. ಕೇರಳದ ಶಾಲೆಗಳಲ್ಲಿ ಕನ್ನಡಕ್ಕೆ ಪೂರ್ಣ ಪ್ರಾಶಸ್ತ್ಯ ಕೊಡಿಸಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು, ಹೋರಾಟ ಬಿಟ್ಟು ಮನೆಯಲ್ಲಿ ತೆಪ್ಪಗೆ ಕೂರಬೇಕು ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

ವಿಶೇಷ ನಿವೇದನೆ :  ನಮ್ಮ ಭಾರತ  ದೇಶವು ಹಲವು ರಾಜ್ಯಗಳ ಒಕ್ಕೂಟವಾಗಿದ್ದು, ವಿವಿಧತೆಯಲ್ಲೂ ಏಕತೆ ಹೊಂದಿರುವ ರಾಷ್ಟವಾಗಿದೆ. ನಮ್ಮ ಸಂವಿಧಾನದ ಪ್ರಕಾರ ನಮ್ಮ ದೇಶದಲ್ಲಿ ಎಲ್ಲಾ ಭಾಷಿಕರಿಗೂ ಸಮಾನ ಅವಕಾಶವಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಯಕ್ತಿಕ ತೆವಲುಗಳಿಗಾಗಿ ಜಾತಿ, ಧರ್ಮ, ಭಾಷೆಯಗಳ ಮೂಲಕ ಪರಸ್ಪರ ತುಳಿಯಬಾರದು ಎಂಬುದನ್ನು ತೋರಿಸುವುದಷ್ಟೇ ಈ ಲೇಖನದ ಉದ್ದೇಶವಾಗಿದೆ.

Leave a comment