ಭಾರತದ ಪರ ಅದರಲ್ಲೂ ಹಿಂದೂಗಳ ಪರ ಉತ್ತಮ ಸಂಬಂಧವನ್ನು ಇರಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಅಮೇರಿಕಾ ಅಧ್ಯಕ್ಷರಾಗಿ ಎರಡನೇ ಬಾರಿಗೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆಯೇ ಅನೇಕ ಭಾರತೀಯರಲ್ಲಿ ಒಂದು ರೀತಿಯ ಸಂತೋಷ ಮತ್ತು ಸಂಭ್ರಮಗಳು ಮೂಡಿದ್ದಂತೂ ಸುಳ್ಳಲ್ಲಾ. ತಾನೊಂದು ಬಗೆದರೆ ಟ್ರಂಪ್ ಒಂದು ಬಗೆದರು ಎನ್ನುವಂತೆ, ಎರಡನೇ ಬಾರಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಅಮೇರಿಕಾದ ಆಂತರಿಕ ಭಧ್ರತೆಯ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಿ ಅಕ್ರಮವಾಗಿ ಅಮೇರಿಕಾಕ್ಕೆ ನುಸುಳಿರುವವರನ್ನು ಗಡಿಪಾರು ಮಾಡುತ್ತಿರುವ ಪ್ರಕ್ರಿಯಲ್ಲಿ ಎರಡು ದಿನಗಳ ಹಿಂದೆ ಅಕ್ರಮವಾಗಿ ಅಮೇರಿಕಾದಲ್ಲಿದ್ದ ಸುಮಾರು 205 ಭಾರತೀಯರನ್ನು ಅಮೇರಿಕಾದ ವಿಮಾನದ ಮೂಲಕ ಪಂಜಾಬಿನ ಅಮೃತಸರದ ಶ್ರೀ ಗುರುರಾಮದಾಸ್ ಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ತಂದು ಇಳಿಸಿದ್ದಾರೆ. ಯಥಾ ಪ್ರಕಾರ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಎಳೆದರು ಎನ್ನುವಂತೆ, ಈ ವಿಷಯವನ್ನು ರಾಜಕೀಯಕ್ಕೆ ಎಳೆದ ಕಾಂಗ್ರೇಸ್ ಪಕ್ಷ, ಭಾರತೀಯರನ್ನು ಈ ರೀತಿ ಗಡಿಪಾರು ಮಾಡುವುದಕ್ಕೆ ಭಾರತದ ವಿದೇಶಾಂಗ ನೀತಿ ಸರಿ ಇಲ್ಲದಿರುವುದೇ ಕಾರಣ ಎಂದು ಮೂದಲಿಸಿದ್ದಲ್ಲದೇ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಾಗೆ ಕರೆದುಕೊಂಡು ಬಂದವರ ಕೈ ಕಾಲುಗಳಿಗೆ ಬೇಡಿ ಹಾಕಿಕೊಂಡು ಬರಲಾಗಿತ್ತು ಎಂಬ ಹಸೀ ಸುಳ್ಳನ್ನು ಹೇಳಲು ಹೋಗಿ, ಬೆಣೆ ತೆಗೆಯಲು ಹೋಗಿ ಬಾಲ ಸಿಕ್ಕಿಸಿಕೊಂಡ ಕೋತಿಯಂತೆ ನಕಲಿ ಗಾಂಧಿಗಳ ಪರಿಸ್ಥಿತಿಯುಂಟಾಗಿದ್ದು ಅಮೇರಿಕಾದ ವೀಸಾ ಪಡೆಯಲು ಯಾವ ರೀತಿಯ ಹರಸಾಹಸ ಪಡಬೇಕಾಗುತ್ತದೆೆ ಎಂಬ ವಯಕ್ತಿಕ ರೋಚಕತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ದೇಶದ ಭಧ್ರತೆಯನ್ನೂ ಬದಿಗೊತ್ತಿ, ತಮ್ಮ ರಾಜಕೀಯದ ತೆವಲುಗಳಿಗಾಗಿ ಮತ್ತು ಓಟ್ ಬ್ಯಾಂಕ್ ವೃದ್ಧಿಸಿಕೊಳ್ಳುವ ಸಲುವಾಗಿ ಕಾಂಗ್ರೇಸ್ ಪಕ್ಷದಿಂದಲೇ ಆರಂಭವಾಗಿ, ಪ್ರಸ್ತುತವಾಗಿ ಬಹುತೇಕರಾಜಕೀಯ ಪಕ್ಷಗಳು ನಿರಂತರವಾಗಿ ಶ್ರೀಲಂಕಾ, ಬಾಂಗ್ಲಾ, ಬರ್ಮಾ ದೇಶದಿಂದ ಕೋಟ್ಯಾಂತರ ಅಕ್ರಮ ವಲಸಿಗರನ್ನು ಭಾರತಕ್ಕೆ ಕರೆತಂದು ಅವರಿಗೆ ವ್ಯವಸ್ಥಿತವಾಗಿ ಎಲ್ಲಾ ರೀತಿಯ ಅಧಿಕೃತ ದಾಖಲೆಗನ್ನು ಕೊಡಿಸುವ ಮೂಲಕ ಅಕ್ರಮ ವಲಸಿಗರನ್ನು ಸಕ್ರಮ ಗೊಳಿಸುತ್ತಿರುವ ವಿರೊಧ ಪಕ್ಷಗಳಿಗೆ ಸಹಜವಾಗಿ ಅಮೇರಿಕಾದ ಈ ನಡೆ ಅಚ್ಚರಿ ಮೂಡಿಸಿದೆ ಎಂಡರೂ ತಪ್ಪಾಗದು.
ಸಾಮಾನ್ಯವಾಗಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಯಾವುದೇ ರೀತಿಯಾದರೂ ಪ್ರವೇಶ ಮಾಡಬೇಕೆಂದರೂ ಅದಕ್ಕೆ ಸೂಕ್ತವಾದ ಪರವಾನಗಿ ಇರಲೇ ಬೇಕು. ಅದರಲ್ಲೂ ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರವೇಶಿಸಲು ಬಯಸುವ ವಿದೇಶಿ ದೇಶದ ನಾಗರಿಕರು ಕಡ್ಡಾಯವಾಗಿ ಕಠಿಣ ರೀತಿಯಲ್ಲಿಯೇ ವೀಸಾ ಪಡೆದ ನಂತವೇ, ಅಮೇರಿಕಾ ಪ್ರವೇಶಿಸಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯವಾಗಿದೆ.
ಅಮೇರಿಕಾದ ವೀಸಾದಲ್ಲಿ ಹಲವಾರು ರೀತಿಯಲ್ಲಿದ್ದು ಅವುಗಳಲ್ಲಿ ಪ್ರಮುಖವಾಗಿ B1 & B2, H-1B, F1 ಮತ್ತು Green Cardಗಳಾಗಿವೆ.
- B-1/B2 ವೀಸಾ ಎಂಬುದು ವಲಸೆರಹಿತ ವೀಸಾ ಆಗಿದ್ದು B-1 ಎಂಬುದು ವಿದೇಶಿ ನಾಗರಿಕರು ಕೆಲ ತಿಂಗಳುಗಳ ಮಟ್ಟಿಗೆ ವ್ಯಾಪಾರ ಮತ್ತು ವ್ಯವಹಾರಗಳಿಗೆ ಕೊಡುವಂತಹ ಅನುಮತಿಯಾಗಿದೆ. ಇನ್ನು B-2 ವೀಸಾ ವಿದೇಶಿ ನಾಗರೀಕರು ಅಮೇರಿಕಾದಲ್ಲಿ ನಿರ್ಧಿಷ್ಟವಾಗಿ ಕೆಲ ತಿಂಗಳುಗಳ ಕಾಲ ಪ್ರವಾಸ ಮಾಡಲು ಅನುವು ಮಾಡಿಕೊಡುತ್ತದೆ. ಕೆಲವು ವಿದೇಶಿಗರು ಎರಡೂ ಉದ್ದೇಶಗಳನ್ನು ಹೊಂದಿರಬಹುದಾದ ಕಾರಣ B-1/B2 ಎಂದು ಸಂಯೋಜಿಸಿ ವೀಸಾ ನೀಡಲಾಗುತ್ತದೆ.
- H-1B ವೀಸಾ ಎಂಬುದು ವಲಸೆರಹಿತ ವೀಸಾವಾಗಿದ್ದು ಇದು, ನಿರ್ದಿಷ್ಟ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಹೆಚ್ಚಿನ ಅಗತ್ಯವಿರುವ ವಿಶೇಷ ವಿದೇಶಿ ಉದ್ಯೋಗಿಗಳು ಅಮೇರಿಕಾದಲ್ಲಿ ಸೀಮಿತ ಅವಧಿಯವರೆಗೆ ಅಲ್ಲಿನ ಯಾವುದೇ ಕಂಪನಿಗಳಲ್ಲಿ ಕೆಲಸ ಮಾಡಲು ಆವಕಾಶ ನೀಡುವುದಲ್ಲದೇ ನಿಗಧಿತ ಅವಧಿ ಮುಗಿದ ನಂತರ ಮತ್ತೊಂದು ಬಾರಿ ನವೀಕರಿಸಬಹುದಾಗಿದೆ.
- F1 ವೀಸಾ ಎಂಬುದು ಅಮೇರಿಕಾದಲ್ಲಿರುವ ಕಂಪನಿಯೊಂದರ ಶಾಖೆ ವಿದೇಶದಲ್ಲೂ ಇದ್ದು, ಅವರು ತಮ್ಮ ಕಂಪನಿಯ ಕೆಲಸ ಸಲುವಾಗಿ ನಿರ್ಧಿಷ್ಟ ಅವಧಿಗೆ ಕಳುಹಿಸಿಬಹುದಾದ ಪರವಾನಗಿಯಾಗಿದೆ. ಹೀಗ F1 ವೀಸಾ ಪಡೆದ ವ್ಯಕ್ತಿಯ ಕುಟುಂಬದವರು F2A ಮೂಲಕ ಹೋಗಬಹುದಾಗಿದೆ.
- Green Card ವೀಸಾವನ್ನು ಪರ್ಮನೆಂಟ್ ರೆಸಿಡೆಂಟ್ ಕಾರ್ಡ್ ಎಂದೂ ಕರೆಯಲ್ಪಡುತ್ತದೆ, ಈ ವೀಸಾ ಹೊಂದಿರುವವರು ಅನಿರ್ಧಿಷ್ಟಾವಧಿಗೆ ಅಮೇರಿಕಾದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಯೋಗ್ಯರಾಗಿತ್ತಾರಾದರೂ ಅವರಿಗೆ ಈ ವೀಸಾ ಹೊಂದಿರುವವರು ಅಮೇರಿಕಾದ ಪೌರತ್ವವನ್ನು ಪಡೆದಿರುವುದಿಲ್ಲ. ಕೆಲವು ನಿರ್ದಿಷ್ಟ ವರ್ಷಗಳ ನಂತರ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಿ ಅಲ್ಲಿನ ಎಲ್ಲಾ ಮಾರ್ಗಸೂಚಿಗಳನ್ನೂ ಅನುಸರಿಸಿದ ನಂತರ ಅಮೇರಿಕಾದ ಪ್ರಜೆಗಳಾಗಹುದು.
ಈ ಎಲ್ಲಾ ವೀಸಾಗಳು ಸುಲಭವಾಗಿ ಲಭ್ಯವಿರದೇ ತಿಂಗಳಾನುಗಟ್ಟಲೆ, ಇತ್ತೀಚಿನ ವರ್ಷಗಳಲ್ಲಿ ವರ್ಷಾನಗಟ್ಟಲೇ ಕಾಯುವಂತಹ ಪರಿಸ್ಥಿತಿ ಇದೆ. ಸುಮಾರು ಎರಡು ದಶಕಗಳ ಹಿಂದೆ ನನ್ನ ಮಡದಿಯ ತಮ್ಮ ಮಂಜು ಆಗ ತಾನೆ ಮಂಜು ಬಿಇ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಅಮೇರಿಕಾಕ್ಕೆ ಹೋಗಲು ನಿರ್ಧರಿಸಿ ಅದಕ್ಕೆ ಬೇಕಾದ GRE & Toffel ಪರೀಕ್ಷೆಗಳನ್ನು ಉತ್ತಮವಾದ ಅಂಕಗಳೊಡನೆ ಮುಗಿಸಿ ನಾಲ್ಕಾರು ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಗುಜರಾಯಿಸಿ ಅವರಂದ ಆಫರ್ ಲೆಟರ್ ಗಾಗಿ ಕಾಯುತ್ತಿದ್ದ. ದೇವರ ದಯೆ ಮತ್ತು ಉತ್ತಮ ಅಂಕ ಗಳಿಸಿದ ಪರಿಣಾಮವಾಗಿ ಎಲ್ಲಾ ಕಡೆಯಿಂದಲೂ ಆಫರ್ ಬಂದು ಅಮೇರಿಕಾಕ್ಕೆ ಹೋಗಲು ವೀಸಾ ಪಡೆಯಲು ತನ್ನ ಇಬ್ಬರು ಸಹಪಾಠಿಗಳೊಂದಿಗೆ ಸೇರಿ ಕೊಂಡು ಚೆನ್ನೈನಲ್ಲಿರುವ ಅಮೇರಿಕಾ ಧೂತನಿವಾಸ (ಕಾನ್ಸಲೇಟ್ಗೆ) ಹೋದರು. ವೀಸಾಗೆ ನಿಗಧಿತ ಪಡಿಸಿದ್ದ ಸಮಯಕ್ಕೆ ಅಗತ್ಯವಿದ್ದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಸರದಿಯ ಸಾಲಿನಲ್ಲಿ ನಿಂತು ಮೊದಲು ಆತನ ಸ್ನೇಹಿತ ಸಮೀರ, ಎರಡನೇಯವನಾಗಿ ಮಂಜು ಮತ್ತು ಅವನ ಹಿಂದೆ ಮತ್ತೊಬ್ಬ ಗೆಳೆಯ ರಾಮ್ ಶಿಸ್ತಿನ ಸಿಪಾಯಿಗಳಂತೆ ಕಾಯುತ್ತಿದ್ದರು. ಸಮೀರನ ಮುಂದಿದ್ದ ವ್ಯಕ್ತಿಯ ಕರೆ ಮುಗಿದು ಅಲ್ಲಿಯ ಸಿಬ್ಬಂಧಿ ಸಮೀರನನ್ನು ಕರೆಯುವ ಮುಂಚೆಯೇ ಆತುರಗಾರ ಆಂಜನೇಯಂನಂತೆ ಚಂಗನೆ ಹಾರಿ ಧೂತನಿವಾಸದ ಅಧಿಕಾರಿಯ ಮುಂದೆ ನಿಂತದ್ದು ಆ ಆಧಿಕಾರಿಗೆ ಹಿಡಿಸದೇ, ಕೆಲವೇ ಕೆಲವು ನಿಮಿಷಗಳಲ್ಲಿ ಆತನ ಅರ್ಜಿ ತಿರಸ್ಕರಿಸಲ್ಪಟ್ಟಿತು. ಅವನ ಅರ್ಜಿ ತಿರಸ್ಕಾರವಾದ ಕೂಡಲೇ, ಜೋರಾಗಿ ಓ.. ಶಿಟ್.. ಓ…ಫ… ಓ.. ಎಂದು ಇಲ್ಲಿ ವಿವರಿಸಲಾಗದಂತಹ ಮತ್ತು ವಿವರಿಸಬಾರದಂತಹ ಪದಗಳನ್ನಾಡಿ ತನ್ನ ಬೇಗುದಿಯನ್ನು ಹೊರಹಾಕಿದ್ದ ಸಮೀರ. ಇದನ್ನು ಕಂಡ ಎರಡನೆಯವನಾಗಿ ನಿಂತಿದ್ದ ಮಂಜು ಸ್ವಲ್ಪ ವಿಚಲಿತನಾದರೂ ಅದನ್ನು ತೋರ್ಪಡಿಸದೇ ಅಲ್ಲಿಯೇ ಸಾಲಿನಲ್ಲಿ ನಿಂತಿದ್ದು ಮತ್ತೆ ಅಧಿಕಾರಿ ಅವನನ್ನು ಕರೆದಾಗ ಅವರ ಬಳಿ ಹೋಗಿ ತನ್ನೆಲ್ಲಾ ಧಾಖಲೆಗಳನ್ನು ತೋರಿಸಿ ಅವರು ಕೇಳಿದ್ದಕ್ಕೆಲ್ಲಾ ತಾಳ್ಮೆಯಿಂದ ಉತ್ತರಿಸುತ್ತಾ, ಅಮೇರಿಕಾದಲ್ಲಿ ವ್ಯಾಸಂಗ ಮಾಡಲು ಹಣಕಾಸಿನ ವ್ಯವಸ್ಥೆ ಹೇಗೆ ಮಾಡುತ್ತೀರೀ? ಎಂದು ಕೇಳಿದ್ದಕ್ಕೆ, ತನಗೆ ಬ್ಯಾಂಕ್ ನೀಡಿದ್ದ ಸಾಲವನ್ನು ತೋರಿಸಿದ ನಂತರ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಉಳಿಯುವುದಿಲ್ಲಾ? ಎಂದು ಹೇಗೆ ನಂಬ ಬಹುದು? ಎಂದು ಕೇಳಿದ್ದಕ್ಕೇ ತನ್ನ ಕುಟುಂಬ ಮತ್ತು ತಮಗಿದ್ದ ಆಸ್ತಿ ಎಲ್ಲವನ್ನೂ ವಿವವರಿಸಿ ತಾನು ಕೇವಲ ಹೆಚ್ಚಿನ ಪದವಿ ಪಡೆಯಲು ಮಾತ್ರಾ ಅಮೇರಿಕಾಗೆ ಹೋಗುತ್ತಿರುವುದಾಗಿ ಸಮಾಧಾನಕರವಾಗಿ ನೀಡಿದ ಉತ್ತರದಿಂದ ಸಂತೃಷ್ಟನಾದ ಆ ಆಧಿಕಾರಿ ಮಂಜುವಿನ ವೀಸಾ ಅರ್ಜಿ ಪುರಸ್ಕೃತ ಮಾಡಿದ್ದರು. ನಂತರ ಮೂರನೆದಾಗಿ ಹೋದ ರಾಮ್ ಕೂಡಾ ಸಮಚಿತ್ತದಿಂದ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದನಾದರೂ ಅವನ ಉತ್ತರಗಳಿಂದ ಆ ಅಧಿಕಾರಿಗೆ ಸಮಾಧಾನವಾಗದೇ ಇದ್ದ ಕಾರಣ, Sorry Ram, Better try next time, all the best ಎಂದು ಹೇಳಿ ಅವನ ಎಲ್ಲಾ ದಾಖಲೆಗಳನ್ನು ಹಿಂದುರಿಗಿಸಿ Next ಎಂದು ಕರೆದರು. ಹಗಲು ರಾತ್ರಿ ಅಮೇರಿಕಾದ ವೀಸಾ ಪಡೆಯಲೆಂದೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಷ್ಟ ಪಟ್ಟು ಓದಿ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಆಯ್ಕೆಯಾಗಿದ್ದರೂ, ಇಲ್ಲಿ ವೀಸಾ ದೊರೆಯದಿದ್ದಾಗ ಸಾಧಾರಣವಾಗಿ ಬಹುತೇಕ ವಿದ್ಯಾರ್ಥಿಗಳೂ ಅವಾಚ್ಯ ಶಬ್ಧಗಳನ್ನು ಜೋರಾಗಿ ಆಡುತ್ತಾ ತಮ್ಮ ಅಸಹನೆಯನ್ನು ವ್ಯಕ್ತ ಪಡಿಸುವುದು ಅಲ್ಲಿಯ ಸಹಜ ಪ್ರಕ್ರಿಯೆ.
ಒಂದೆಡು ನಿಮಿಷಗಳ ಹಿಂದೆ ಅವರ ಮತ್ತೊಬ್ಬ ಗೆಳೆಯ ಸಮೀರ ಅದನ್ನೇ ಮಾಡಿ ತೋರಿಸಿದ್ದ. ಅವರೆಲ್ಲರ ತದ್ವಿರುದ್ಧವಾಗಿ ರಾಮ್ ತನ್ನ ಎಲ್ಲಾ ದಾಖಲೆಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಾ ಶಾಂತ ಚಿತ್ತದಿಂದ, Madam, Thank you very much for your wishes. I will try my luck next time ಎಂದು ಮೆಲುಧನಿಯಲ್ಲಿ ವಂದಿಸುತ್ತಾ ಹೊರಡಲು ಅನುವಾದನು. ಸಾಮಾನ್ಯವಾಗಿ ಅರ್ಜಿ ತಿರಸ್ಕೃತರಿಂದ ಆ ರೀತಿಯಾದ ವರ್ತನೆಯನ್ನು ಎಂದೂ ಕಾಣದಿದ್ದ ಅಲ್ಲಿಯ ಸಿಬ್ಬಂಧಿಗೆ ರಾಮ್ ನೀಡಿದ ಪ್ರತಿಕ್ರಿಯೆಯು ಒಮ್ಮಿಂದೊಮ್ಮೆಲೇ ಸಾವಿರ ವ್ಯಾಟ್ ಬಲ್ಬ್ ಹತ್ತಿದಂತಾಗಿ, ಎಲ್ಲರಿಗಿಂತ ವಿಭಿನ್ನವಾಗಿ ವರ್ತಿಸಿದ ಇಂತಹ ವ್ಯಕ್ತಿಯ ಅರ್ಜಿಯನ್ನು ತಿರಸ್ಕರಿಸಬಾರದಿತ್ತು ಎಂದೆಣಿಸಿ, ಕೂಡಲೇ Ram, give back your documents ಎಂದು ಅವನ ಎಲ್ಲಾ ದಾಖಲೆಗಳನ್ನು ಪಡೆದುಕೊಂಡು cancel ಎಂಬುದನ್ನು ಹೊಡೆದು ಹಾಕಿ approved ಎಂದು ಬರೆದು, congratulations you have got the visa. We wish you all the best and do well ಎಂದು ಹಾರೈಸಿ ಕಳುಹಿಸಿದ್ದರು.
ಇದಾದ ಮೂರ್ನಾಲು ವರ್ಷಗಳ ನಂತರ ಕುಟುಂಬದ ಸಮೇತರಾಗಿ ಅಮೇರಿಕಾಗೆ ಹೋಗಲು ನಿರ್ಧರಿಸಿ ಯಥಾ ಪ್ರಕಾರ, ತಾಳ್ಮೆಯಿಂದ ಕಾಯುತ್ತಲೇ, ಚೈನ್ನೈನ ಧೂತವಾಸದ ಸಂದರ್ಶನವನ್ನು ಪಡೆದು ನಾನು, ನನ್ನ ಮಡದಿ ಮತ್ತು ನಮ್ಮ ಪುಟ್ಟ ವಯಸ್ಸಿನ ಮಕ್ಕಳೊಂದಿಗೆ, ಅಮೇರಿಕಾ ಪ್ರವಾಸಕ್ಕೆ ಹೋಗುವ ಸಲುವಾಗಿ ವೀಸಾ ಪಡೆಯಲು ಚೆನ್ನೈಗೆ ಹೋದೆವು. ಮಗಳಿಗೆ ಆಗಷ್ಟೇ 4-5 ವರ್ಷ ಮತ್ತು ಮಗ 1.5-2 ವರ್ಷದವರಾಗಿದ್ದು ನೋಡಲು ಬಹಳ ಸುಂದರವಾಗಿದ್ದು ಸೂಜಿಗಲ್ಲಿನಂತೆ ಎಲ್ಲರನ್ನೂ ಆಕರ್ಷಿಸುವಂತಿದ್ದರು. ನಿಗಧಿತ ಸಮಯಕ್ಕೆ ನಾವೆಲ್ಲರು ಅಮೇರಿಕಾದ ಧೂತವಾಸಕ್ಕೆ ಹೋದಾಗಾ, ಅಲ್ಲಿ ಎಷ್ಟು ಸಮಯವಾಗಬಹುದೋ ಎಂದು ಮಕ್ಕಳಿಗಾಗಿ, ನೀರು, ಬಿಸ್ಕತ್ ಮತ್ತು ಕೆಲವು ಜ್ಯೂಸ್ ತೆಗೆದುಕೊಂಡು ಹೋಗಿದ್ದನ್ನು ಗಮನಿಸಿದ ಅಲ್ಲಿನ security, ಶುದ್ಧ ತಮಿಳು ಭಾರತೀಯನಾದರೂ ಅಮೇರಿಕಾದಿಂದ ಆಮದು ಆದವನಂತೆ ವರ್ತಿಸುತ್ತಾ, ಎಲ್ಲೀ ಈ ನೀರು ಮತ್ತು ಜ್ಯೂಸ್ ಕುಡಿದು ತೋರಿಸಿ, ಬಿಸ್ಕತ್ ತಿನ್ನಿ ಎಂದು ಮಾಡಿದ ಎಲ್ಲಾ ಪರೀಕ್ಷೆಗಳನ್ನೂ ದಾಟಿಕೊಂಡು ಒಳಗೆ ಹೋದಾಗ, ವಯಸ್ಸಾದವರಿಗೆ ಮತ್ತು ಸಣ್ಣ ಮಕ್ಕಳೊಂದಿಗೆ ಬಂದಿರುವವರಿಗಾಗಿ ಪ್ರತ್ಯೇಕ ಸಾಲನ್ನು ಮಾಡಿದ್ದು ಅಲ್ಲಿ ಕೆಲವೇ ಕೆಲವು ನಿಮಿಷಗಳಲ್ಲಿ ನಮ್ಮ ಎಲ್ಲಾ ದಾಖಲೆಗಳ ಪರಿಶೀಲನೆ ಮಾಡಿ ವೀಸಾ ನೀಡಲು ಕೊಡಬೇಕಿದ್ದ ಶುಲ್ಕದ ಡಿಡಿಯನ್ನು ಪಡೆದುಕೊಂದು ವೀಸಾ ನೀಡುವ ಅಧಿಕಾರಿಗಳಿದ್ದ ಮತ್ತೊಂದು ಕಟ್ಟಡಕ್ಕೆ ಕಳುಹಿಸಿ ಕೊಟ್ಟರು.
ನಮ್ಮ ಭಾವಮೈದುನ ಮತ್ತು ಆತನ ಗೆಳೆಯ ರಾಮ್ ಅವರ ಅನುಭವ ಗೊತ್ತಿದ್ದ ಕಾರಣ, ನಮ್ಮ ಮಕ್ಕಳಿಗೆ ಹೋದ ತಕ್ಷಣ Good morning uncle, how are you doing today? ಎಂದೆಲ್ಲಾ ಹೇಳ ಬೇಕೆಂದು ಹೇಳಿಕೊಟ್ಟಿದ್ದೆವು. ನಮ್ಮ ಸರತಿ ಬಂದಾಗ ನಮ್ಮೆಲ್ಲರನ್ನೂ ಒಟ್ಟಾಗಿಯೇ ಕರೆದಾಗ, ನಾವು ಹೇಳಿಕೊಟ್ಟಿದ್ದನ್ನೇ ನಮ್ಮ ಮಕ್ಕಳು ಹೇಳಿದಾಗ, ಆ ಅಧಿಕಾರಿಯೂ ಸಹಾ ಅದಕ್ಕೆ ಸಕಾರಾತ್ಮಕವಾಗಿ ಪ್ರತಿಸ್ಪಂದಿಸಿ, Oh Thank you so much. We are doing good ಎಂದು ಹೇಳಿದ್ದಲ್ಲದೇ, Nice kids ಎಂದು ಹೊಗಳಿದಾಗ, ಓಹೋ! ಲಡ್ಡು ಬಾಯಲ್ಲಿ ಬಿತ್ತು! ಎಂದೇ ಭಾವಿಸಿದ್ದಂತೂ ಸುಳಲ್ಲ. ನಂತರ ನಮ್ಮೆಲ್ಲರ ದಾಖಲೆಗಳನ್ನು ಪರಿಶೀಲಿಸಿ ನೀವು ಅಮೇರಿಕಾಕ್ಕೆ ಏಕೆ ಹೋಗುತ್ತಿದ್ದೀರಿ? ಎಂದು ಕೇಳಿದ ಪ್ರಶ್ನೆಗೆ we wanted to be part of my brother in law’s graduation day (ಅದರ ಆಹ್ವಾನ ಪತ್ರವನ್ನೂ ತೋರಿಸಿದೆ) as well as to touring ಎಂದಿದ್ದಕ್ಕೆ, oh! ok that’s really nice ಎಂದು ಹೇಳಿದಾಗ ಅಮೇರಿಕಾದ ವೀಸಾ ಸಿಕ್ಕಷ್ಟೇ ಖುಷಿಯಾಗಿ ನಾನು ಮತ್ತು ನನ್ನ ಮಡದಿ ಪರಸ್ಪರ ಕಣ್ಣಲ್ಲೇ ಸಂತೋಷವನ್ನು ವ್ಯಕ್ತ ಪಡಿಸಿಕೊಂಡು ಬಕ ಪಕ್ಷಿಗಳಂತೆ ಕಾಯುತ್ತಿದ್ದೆವು.
ತಾನೊಂದು ಬಗೆದರೆ ಅಮೇರಿಕಾದ ಧೂತವಾಸದ ಅಧಿಕಾರಿಯೇ ಮತ್ತೊಂದು ಬಗೆಯುತ್ತಾನೆ ಎಂಬುವಂತೆ, Sorry, i don’t see any reason for providing a visa to your kids to attend the graduation day. Hence I’m rejecting their Visas and approving husband & wife’s Visa ಎಂದಾಗ ಎದೆ ಧಸಕ್ ಎಂದಿದ್ದಂತೂ ಸುಳ್ಳಲ್ಲಾ. ಕೂಡಲೇ ಸಾವರಿಸಿಕೊಂಡು ಇಷ್ಟು ಸಣ್ಣ ಮಕ್ಕಳನ್ನು ಬಿಟ್ಟು ನಾವಿಬ್ಬರೇ ಅಮೇರಿಕಾಕ್ಕೆ ಹೇಗೆ ಹೋಗಲು ಸಾಧ್ಯ?. ದಯವಿಟ್ಟು ಮತ್ತೊಮ್ಮೆ ಪರಿಶೀಲಿಸಿ. ಅಗತ್ಯ ಬಿದ್ದಲ್ಲಿ ನನ್ನ ಬದಲು ನನ್ನ ಮಕ್ಕಳಿಗೆ ವೀಸಾ ಕೊಡಿ. ನಾನು. ಮುಂದೊಮ್ಮೆ ಪ್ರಯತ್ನಿಸುತ್ತೇನೆ ಎಂದು ಪರಿ ಪರಿಯಾಗಿ ಕೇಳಿಕೊಂಡರೂ, Sorry your time is over, ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾ, Next.. ಎಂದಿದ್ದ
ಅದಾಗಲೇೆ ಮೂರ್ನಾಲ್ಕು ತಿಂಗಳುಗಳ ಮೊದಲೇ ಅಮೇರಿಕಾಕ್ಕೆ ಹೋಗಿದ್ದ ನಮ್ಮ ಅತ್ತೆ ಮಾವ ಅಷ್ಟು ತಡ ಹೊತ್ತಿನಲ್ಲೂ ನಮ್ಮ ವೀಸಾದ ಕರೆಗಾಗಿ ಕಾಯುತ್ತಿದ್ದರು. ಇಂದಿನಂತ ಅಂದು ಮೊಬೈಲ್ ಸೇವೆ ಇರಲಿಲ್ಲ. ಹಾಗಾಗಿ ಅಲ್ಲೇ ಹತ್ತಿರದಲ್ಲಿದ್ದ ISD ಬೂತ್ ನಿಂದ ಕರೆ ಮಾಡಿ ಅಪ್ಪಾ, ಮಕ್ಕಳಿಗೆ ವೀಸಾ ಕೊಡಲಿಲ್ಲ ನಮಗೆ ಮಾತ್ರಾ ಕೊಟ್ಟರು ಎಂದು ಮಡದಿ ಬಿಕ್ಕಿ ಬಿಕ್ಕಿ ಅಳುತ್ತಿರುವನ್ನು ಕಂಡು ಮಕ್ಕಳಿಬ್ಬರೂ ಅಮ್ಮಾ ನೋಡು ಹೇಗೆ ಅಳುತ್ತಿದ್ದಾಳೆ ಎಂದು ನಗುತ್ತಿದ್ದದ್ದು ಇನ್ನೂ ಮನಸ್ಸಿನಲ್ಲಿ ಅಚ್ಚೊತ್ತಿದೆ.
ನಂತರ ಮಕ್ಕಳಿಗೆ ವೀಸಾ ಏಕೆ ಕೊಡಲಿಲ್ಲ? ಎಂದು ಬಲ್ಲವರನ್ನು ವಿಚಾರಿಸಿದಾಗ ತಿಳಿದು ಬಂದ ವಿಷಯವೇನೆಂದರೆ, ಶಾಲೆಗೆ ಸೇರಿಸುವ ವಯಸ್ಸಿನ ಮಕ್ಕಳನ್ನು ಅಮೇರಿಕಾಗೆ ಕರೆದುಕೊಂಡು ಹೋದ ಅನೇಕ ಭಾರತೀಯರು ನಂತರ ಹಿಂದಿರುಗುವಾಗ ಆ ಮಕ್ಕಳನ್ನು ಅಲ್ಲಿಯೇ ಬಿಟ್ಟು ಬಂದಿರುವ ಅನೇಕ ಉದಾರಣೆಗಳಿದ್ದು, ಮುಂದೆ ಅದೇ ಮಕ್ಕಳೇ ಅಲ್ಲಿನ ಅಕ್ರಮ ವಲಸಿಗರಾಗುವ ಸಂಭವ ಇರುವ ಕಾರಣ, ಮುಂಜಾಗೃತಾ ಕ್ರಮದಿಂದಾಗಿ ಮಕ್ಕಳಿಗೆ ವೀಸಾ ನಿರಾಕರಿಸಿದ್ದರು. ಮಕ್ಕಳಿಲ್ಲದೇ ಅಮೇರಿಕಾಕ್ಕೆ ಹೋಗುವುದೇ ಬೇಡ ಎಂದು ನಿರ್ಧರಿಸಿದ್ದ ನಮಗೆ ಅಂದು ಅಮ್ಮಾ ಅಪ್ಪಾ, ತಂಗಿಯಂದಿರು, ಮತ್ತು ನಮ್ಮ ಮಡದಿಯ ಸಂಬಂಧಿಗಳು ಮಕ್ಕಳನ್ನು ನಾವು ನೋಡಿಕೊಳ್ಳುತ್ತೇವೆ ನೀವು ಹೋಗಿ ಬನ್ನಿ ಎಂದು ಧೈರ್ಯ ನೀಡಿದ್ದ ಕಾರಣ, 6 ವಾರಗಳ ಬದಲು 4 ವಾರಗಳಿಗೇ ತುಂಡರಿಸಿ ಅಮೇರಿಕಾಕ್ಕೆ ಹೋಗಿ ಬಂದಿದ್ದೆವು.
ಎಲ್ಲಾ ದಾಖಲೆಗಳು ಸರಿಯಾಗಿದ್ದರು ಅಮೇರಿಕಾದವರು ವೀಸಾ ನೀಡಲು ಸಯಾಯಿಸುವಾಗ, ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ಅಮೇರಿಕಾಕ್ಕೆ ಏಕೇ ಯಾವುದೇ ದೇಶಕ್ಕೆ ನುಸುಳುಕೋರರಂತೆ ಹೋಗುವುದು ನಿಜಕ್ಕೂ ಮಹಾಪರಾಧವೇ ಸರಿ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವಂತೆ ಜಗತ್ತಿಗೆ ತಾನು ದೊಡ್ಡಣ್ಣ ಎಂದು ಕರೆದುಕೊಳ್ಳುವ ಅಮೇರಿಕಾ ತೋರಿದ ಧೈರ್ಯವನ್ನು ನಮ್ಮ ದೇಶದಲ್ಲೂ ತೋರಿ ಈಗಾಗಲೇ ದೇಶಾದ್ಯಂತ ಹರಡಿಕೊಂಡಿರುವ ಅಕ್ರಮ ವಲಸೆಗಾರರನ್ನು ಧರ್ಮ, ಜಾತಿ, ಓಟ್ ಬ್ಯಾಂಕ್ ಎಂಬ ಯಾವುದೇ ಮುಖ ಮೂತಿ ನೋಡದೇ, ಯಾವ ಮುಲಾಜಿಲ್ಲದೇ ಹೊರದೋಡಿಸಲು ಇದು ಸಕಾಲವೇ ಸರಿ ಅಲ್ವೇ?
ಏನಂತೀರೀ?
ನಿಮ್ಮವನೇ ಮಂಜುಶ್ರೀ