ದ್ವಾ
ರಕೀಶ್ ಅವರು ನಿರ್ಮಿಸಿದ ವಿಷ್ಣುವರ್ಧನ್ ಮತ್ತು ಮಂಜುಳ ಅವರು ನಟಿಸಿದ ಕನ್ನಡದ ಅತ್ಯಂತ ಜನಪ್ರಿಯ ಸಿನಿಮಾ ಗುರು ಶಿಷ್ಯರು ಚಿತ್ರದ ಹಾಡಿನೊಂದರಲ್ಲಿ ದೊಡ್ಡವರೆಲ್ಲಾ ಜಾಣರಲ್ಲ ಚಿಕ್ಕವರೆಲ್ಲಾ ಕೋಣರಲ್ಲಾ, ಗುರುಗಳು ಹೇಳಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ! ಎಂಬ ಸಾಲು ಬರುತ್ತದೆ. ಪ್ರಸ್ತುತವಾಗಿ ಈ ದೇಶದ ಅತ್ಯಂತ ಹಳೆಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೇಸ್ ಪಕ್ಷದ ನಾಯಕರುಗಳು ಮತ್ತು ವಕ್ತಾರರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೇಸ್ ನಾಯಕರುಗಳೆಲ್ಲಾ ಜಾಣರಲ್ಲ, ಅವರ್ಯಾರೂ ಸತ್ಯಸಂಧರಲ್ಲಾ, ಕಾಂಗ್ರೇಸ್ ವಕ್ತಾರರು ಅಡಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ ಗೆಳೆಯಾ ಎಂದೂ ನಿಜವಲ್ಲಾ ಎಂದು ಬದಲಿಸಿದರೂ ತಪ್ಪಾಗದು
2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ vs ನ್ಯೂಜಿಲೆಂಡ್ ನಡುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ವಕ್ತಾರೆ ಶಮಾ ಮೊಹಮ್ಮದ್ ಎನ್ನುವವರು ಅನಗತ್ಯವಾಗಿ ರೋಹಿತ್ ಶರ್ಮಾ ಒಬ್ಬ ದಡೂತಿ ಆಟಗಾರನಾಗಿದ್ದು, ಆತ ಖಂಡಿತವಾಗಿಯೂ ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂಬ ಹೇಳಿಕೆಯನ್ನಿತ್ತು ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಅವರ ಈ ಹೇಳಿಕೆಯ ಪ್ರತಿಯಾಗಿ ಪಾಕಿಸ್ತಾನ ಮೂಲದ ಕ್ರೀಡಾ ಪತ್ರಕರ್ತೆ, ರೋಹಿತ್ ಶರ್ಮಾ ಪ್ರಬಲ ಪರಿಣಾಮಕಾರಿ ಮತ್ತು ವಿಶ್ವ ದರ್ಜೆಯ ಪ್ರದರ್ಶನಕಾರ ಅಲ್ವೇ? ಎಂದು ಹೇಳಿದಾಗ, ಅದಕ್ಕೆ ಉತ್ತರಿಸಿದ ಶಮಾ, ಗಂಗೂಲಿ, ತೆಂಡೂಲ್ಕರ್, ದ್ರಾವಿಡ್, ಧೋನಿ, ಕೊಹ್ಲಿ, ಕಪಿಲ್ ದೇವ್, ಶಾಸ್ತ್ರಿ ಮತ್ತು ಇತರರಂತಹ ಮಾಜೀ ವಿಶ್ವದರ್ಜೆಯ ಪ್ರಭಾವಿ ಆಟಗಾರರಿಗೆ ಹೋಲಿಸಿದರೆ ರೋಹಿತ್ ಶರ್ಮಾನಲ್ಲಿ ಅಂತಹ ವಿಶ್ವ ದರ್ಜೆಯೇನಿದೆ? ಅವರು ಸಾಧಾರಣ ನಾಯಕ ಮತ್ತು ಭಾರತದ ನಾಯಕನಾಗುವ ಅದೃಷ್ಟ ಪಡೆದ ಸಾಧಾರಣ ಆಟಗಾರ ಎಂದು ಉತ್ತರಿಸಿದರು.
ಇಂತಹ ವಿವಾದಾತ್ಮಕ ಹೇಳಿಕೆಗಳಿಗೆ ಬಕಪಕ್ಷಿಗಳಂತೆಯೇ ಕಾಯ್ದು ಕುಳಿತಿರುವ ಬಿಜೆಪಿ ಪಕ್ಷದವರು ಮಾತಿಗೆ ಪ್ರತೀ ಮಾತು ಎನ್ನುವಂತೆ, ಹಾಗಾದರೆ ಕಾಂಗ್ರೇಸ್ ಪಕ್ಷವನ್ನು ಮುನ್ನಡೆಸಿ 99 ಚುನಾವಣೆಗಳಲ್ಲಿ ಪಕ್ಷಕ್ಕೆ ಸೋಲುವಂತೆ ಮಾಡಿರುವ ರಾಹುಲ್ ಗಾಂಧಿಯ ಬಗ್ಗೆ ನಿಮ್ಮ ಆಭಿಪ್ರಾಯವೇನು? ಎಂಬ ಪ್ರಶ್ನೆಯನ್ನು ಕೇಳಿರುವುದಕ್ಕೆ ಇದುವರೆವಿಗೂ ಶಮಾ ಮತ್ತು ಯಾವುದೇ ಕಾಂಗ್ರೇಸ್ ಪಕ್ಷದ ನಾಯಕರುಗಳೂ ಉತ್ತರಿಸಿಲ್ಲವಾದ ಕಾರಣ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಬಿಜೆಪಿಯವರು ಕೇಳಿರುವ ಪ್ರಶ್ನೆ ಸರಿಯಾಗಿದೆ ಎಂಬ ಅರ್ಥ ಬರುತ್ತದೆ.
ಇನ್ನು ಅದೇ ಶಮಾ ಮೊಹಮ್ಮದ್, ಜಗತ್ತಿಗೆ ಮೊದಲು ಗಣಿತವನ್ನೇ ಪರಿಚಯಿಸಿದ್ದೇ ಇಸ್ಲಾಂ ಧರ್ಮ. ಗಣಿತವು ಇಸ್ಲಾಂ ಮೂಲಕ ಬಂದಿದೆ ANI ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರೆಅಲ್ಲಿ ತಿಳಿಸಿದ್ದು, ಇಸ್ಲಾಂ ಭವಿಷ್ಯದ ಬಗ್ಗೆ ಯೋಚಿಸುವ ಪ್ರಗತಿಪರ ಮತ್ತು ವೈಜ್ಞಾನಿಕ ಧರ್ಮ ಎನ್ನುವ ವಿವಾದಾತ್ಮಕ ಹೇಳಿಕೆಯ ಮೂಲಕ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಪ್ರಪಂಚದಲ್ಲಿ ಇಸ್ಲಾಂ ಧರ್ಮ ಹುಟ್ಟುವ ಎಷ್ಟೋ ವರ್ಷಗಳ ಮುಂಚೆಯೇ, ಪ್ರಾಚೀನ ಭಾರತದ ಆರ್ಯಭಟ ಮತ್ತು ಬ್ರಹ್ಮಗುಪ್ತ ಸೇರಿದಂತೆ ಅನೇಕ ಗಣಿತಜ್ಞರು ಇದ್ದರು ಮತ್ತು ಇಡೀ ಪ್ರಪಂಚಕ್ಕೆ ಶೂನ್ಯವನ್ನು (0) ಒಂದು ಸಂಖ್ಯೆಯನ್ನಾಗಿ ಕಲ್ಪಿಸಿಕೊಟ್ಟವರು ಎಂಬ ವಿಷಯ ತಿಳಿದಿರುವಾಗ ಶಮಾ ಮೊಹಮ್ಮದ್ ಅವರ ಹೇಳಿಕೆ ಎಷ್ಟು ಹಾಸ್ಯಾಸ್ಪದ ಎನಿಸಿದೆ.
ಶಮಾ ಮೊಹಮ್ಮದ್, ಅವರ ಈ ವಿವಾದಾತ್ಮಕ ಹೇಳಿಕೆಗೆ ಭಾರತೀಯ ಜನತಾ ಪಕ್ಷವೂ ಸಹಾ ಮುಗಿಬಿದ್ದಿದ್ದು, ಅಕೆಯದ್ದು ಅಸಂಬದ್ಧ ಹೇಳಿಕೆಗಳಾಗಿದ್ದು, ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಒಬ್ಬರೇ ಎಲ್ಲಾ ಮೂರ್ಖ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಭಾವಿಸಿ ಆಕೆಯೂ ಸಹಾ ಅದೇ ರೀತಿಯ ಮೂರ್ಖ ಹೇಳಿಕೆಗಳನ್ನು ನೀಡುವ ಮೂಲಕ ಯಥಾ ಗುರು ತಥಾ ಶಿಷ್ಯೆ ಎಂದು ನಿರ್ಧರಿಸಿರುವಂತಿದೆ ಎಂದಿದೆ.
ಹೀಗೆ ಸದಾಕಾಲವೂ ಮೂರ್ಖ ಹೇಳಿಕೆಗಳ ಮೂಲಕ ಮತ್ತು ಸತತ ಸೋಲುಗಳ ಮೂಲಕ ದೇಶ ಮತ್ತು ಪಕ್ಷಕ್ಕೆ ಮುಜುಗರ ತರಿಸುತ್ತಿದ್ದರೂ ರಾಹುಲ್ ಗಾಂಧಿಯವರಿಗಿನ್ನೂ ಪ್ರಧಾನಿ ಆಗುವ ಅಸೆ ಕಡಿಮೆಯೇ ಆಗಿಲ್ಲವಲ್ಲಾ! ಈ ರೀತಿಯ ಬುದ್ದಿ ಅವರಿಗೆ ಎಲ್ಲಿಂದ ಬಂತು ಎಂದು ಯೋಚಿಸುತ್ತಿರುವವರಿಗೆ ಉತ್ತರ ಎನ್ನುವಂತೆ ಕಾಂಗ್ರೇಸ್ ಪಕ್ಷದ ವಿವಾದಾತ್ಮಕ ನಾಯಕರುಗಳಲ್ಲಿ ಅಗ್ರೇಸರ ಎನಿಸಿಕೊಳ್ಳುವ ಮಣಿ ಶಂಕರ್ ಐಯ್ಯರ್, ಇತ್ತೀಚೆಗೆ ರಾಹುಲ್ ಗಾಂಧಿಯವರ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಲಂಡನ್‌ನ ಕೇಂಬ್ರಿಡ್ಜ್ ಮತ್ತು ಇಂಪೀರಿಯಲ್ ಕಾಲೇಜಿನಲ್ಲಿ ಸತವಾಗಿ ಫೇಲ್ ಆಗಿದ್ದರು ಎಂಬ ವಿಷಯವನ್ನು ಸಾರ್ವಜನಿಕಗೊಳಿಸುವ ಮೂಲಕ ರಾಹುಲ್ ಅವರ ಸತತ ಸೋಲಿಗೆ ಮೂಲ ಕಾರಣವನ್ನು ತಿಳಿಸಿಕೊಟ್ಟಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಚಾಯ್ ವಾಲಾ ಎಂದಿದ್ದ, ಅದಕ್ಕೂ ಮೊದಲು ಅಂಡಮಾನ್ ಸೆಲ್ಯೂಲಾರ್ ಜೈಲಿಗೆ ಭೇಟಿ ನೀಡಿ ಸಾವರ್ಕರ್ ಅವರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ, ಮೋದಿಯವರನ್ನು ಸೋಲಿಸುವುದಕ್ಕೆ ಶತ್ರು ರಾಷ್ಟ್ರ ಪಾಪಿಸ್ಥಾನದ ಸಹಾಯ ಕೋರಿದ್ದ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಹಪಾಠಿ ಮಣಿಶಂಕರ್ ಅಯ್ಯರ್ ಆವರ ಈ ಹೇಳಿಕೆ ಬಿಜೆಪಿಯವರ ತುಪ್ಪಕ್ಕೆ ರೊಟ್ಟಿ ಜಾರಿ ಬಿದ್ದಂತಾಗಿದ್ದರೆ, ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎನ್ನುವಂತೆ ಕಾಂಗ್ರೇಸ್ ಪಕ್ಷದ ಅನೇಕ ನಾಯಕರುಗಳು ಅಯ್ಯರ್ ಅವರ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೇಸ್ ಪಕ್ಷದಲ್ಲಿ ಮಣಿಶಂಕರ್ ಅಯ್ಯರ್ ಅಪ್ರಸ್ತುತ ಮತ್ತು ಹತಾಶೆಗೊಂಡಿದ್ದಾರೆ ಎಂದರೆ ಮತ್ತೊಬ್ಬ ವಕ್ತಾರರು ಅವರನ್ನು ಬಿಜೆಪಿಯ ಸ್ಲೀಪರ್ ಸೆಲ್ ಎಂದು ಕರೆಯುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಕಾಂಗ್ರೇಸ್ ನಾಯಕರುಗಳ ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ಸೊಪ್ಪು ಹಾಕದ ಮಣಿಶಂಕರ್ ಅಯ್ಯರ್,ಪೋರ್ಟಲ್ ದಿ ಎವರ್ (ಚಿಲ್-ಪಿಲ್) ಎಂಬ ಯೂಟ್ಯೂಬ್ ಛಾನೆಲ್ಲಿನ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಸಿರುವ ಸಂದರ್ಶನದಲ್ಲಿ, ರಾಜೀವ್ ಕೇವಲ ಪೈಲಟ್ ಆಗಿ ಯಶಸ್ಸು ಕಂಡರೇ ಹೊರತು, ಶೈಕ್ಷಣಿಕವಾಗಿ ಆತ ಎಂದೂ ಯಶಸ್ಸು ಕಂಡಿರಲಿಲ್ಲ. ತನ್ನ ಡೂನ್ ಶಾಲೆಯ ನಂತರ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಐಯ್ಯರ್ ಅವರ ಸಹಪಾಠಿಯಾಗಿ ಪದವಿಗಾಗಿ ಸೇರಿದ್ದಾಗ ಅಲ್ಲಿ ಫೇಲ್ ಆಗಿದ್ದರು. ಕೇಂಬ್ರಿಡ್ಜ್‌ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವುದು ಬಹಳ ಸುಲಭ. ಅದರೇ, ಫೇಲ್ ಆಗುವುದು ತುಂಬಾ ಕಷ್ಟ. ಏಕೆಂದರೆ ವಿಶ್ವವಿದ್ಯಾನಿಲಯವು ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಸಲುವಾಗಿ ಯಾರನ್ನೂ ಅನುತ್ತೀರ್ಣಗೊಳಿಸದೇ, ಕನಿಷ್ಠ ಪಕ್ಷ ಎಲ್ಲಾ ವಿದ್ಯಾರ್ಥಿಗಳನ್ನೂ ಉತ್ತೀರ್ಣರಾಗುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತದೆ. ಕೇಂಬ್ರಿಡ್ಜ್ ನಲ್ಲಿ ಅಂತಹ ಪರಿಸ್ಥಿತಿ ಇರುವಾಗಲೂ ರಾಜೀವ್ ಅನುತ್ತೀರ್ಣರಾಗುತ್ತಾರೆ ಎಂದರೆ ಅವರ ಬೌದ್ಧಿಕ ಮಟ್ಟದ ಅರಿವಾಗುತ್ತದೆ. ನಂತರ ರಾಜೀವ್ ಲಂಡನ್ನಿನ ಮತ್ತೊಂದು ಪ್ರತಿಷ್ಠಿತ ಇಂಪೀರಿಯಲ್ ಕಾಲೇಜಿಗೆ ಸೇರಿಕೊಂಡು ಅಲ್ಲೂ ಸಹಾ ಮತ್ತೆ ಫೇಲ್ ಆಗಿದ್ದರು. ಹೀಗೆ ಸತತವಾಗಿ ಫೇಲ್ ಆಗಿದ್ದರೂ ಮುಂದೆ ಕೇವಲ ಮಾಜೀ ಪ್ರಧಾನ ಮಂತ್ರಿಗಳ ಮೊಮ್ಮಗ ಮತ್ತು ಅಗಷ್ಟೇ ಸಿಖ್ ಉಗ್ರಗಾಮಿಗಳಿಂದ ಹತ್ಯೆಗೊಳಗಾಗಿದ್ದ ಪ್ರಧಾನಿ ಇಂದಿರಾಗಾಂಧಿಯವರ ಮಗ ಎಂಬ ಏಕೈಕ ಕಾರಣಕ್ಕೆ 1984 ರಿಂದ 1989 ರವರೆಗೆ ಈ ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಎಂಬ ಖ್ಯಾತಿಯನ್ನು ಪಡೆದಿದ್ದು, 1991 ರಲ್ಲಿ ಶ್ರೀಲಂಕನ್ ಎಲ್.ಟಿ.ಟಿ.ಇ ಉಗ್ರಗಾಮಿಗಳಿಂದ ಹತ್ಯೆಯಾಗುವವರೆಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.
ಇದೇ ಕಾರಣದಿಂದಾಗಿಯೇ ಹಿರಿಯ ರಾಜಕಾರಣಿ ಮತ್ತು ಮಾಜೀ ಕೇಂದ್ರ ಮಂತ್ರಿಗಳಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಗಳು ಇಂದಿರಾಗಾಂಧಿ ಮತ್ತು ಆಕೆಯ ಕುಟುಂಬದವರೇನೂ ಬುದ್ಧಿವಂತರಲ್ಲಾ. ತಮ್ಮ ಕೌಟುಂಬಿಕ ಹಿನ್ನಲೆ ಇಲ್ಲದಿದ್ದಲ್ಲಿ ಬಸ್ ಸ್ಟಾಂಡಿನಲ್ಲಿ ಬಟಾಣಿ ಮಾರುವುದಕ್ಕೂ ಲಾಯಕ್ಕಿಲ್ಲ ಎಂದು ಪದೇ ಪದೇ ಹೇಳುತ್ತಿರುವುದನ್ನು ಮಣಿ ಶಂಕರ್ ಐಯ್ಯರ್ ಪುನರಾವರ್ತಿಸುತ್ತಿದ್ದಾರೆ. ಇನ್ನು ರಾಜೀವ್ ಗಾಂಧಿಯವರ ಮಗ ಕಾಂಗ್ರೇಸ್ ಪಕ್ಷದ ಯುವರಾಜನೂ ಸಹಾ ತನ್ನ ಅಜ್ಜಿಯ ಮರಣಾನಂತರ ಶಾಲೆಗೂ ಹೋಗದೇ ಮನೆಯಲ್ಲಿ ವಿದ್ಯಾಭ್ಯಾಸ ನಡೆಸಿ ನಂತರ ರೋಲಿನ್ಸ್ ಕಾಲೇಜು (ಬಿ.ಎ.) ಟ್ರಿನಿಟಿ ಕಾಲೇಜು, ಕೇಂಬ್ರಿಡ್ಜ್ (ಎಂ. ಫಿಲ್. ಅಭಿವೃದ್ಧಿ ಅಧ್ಯಯನಗಳು) ಓದಿದ್ದಾರೆ ಎಂದು Google search ತಿಳಿಸುತ್ತದಾದರೂ, ಅವರ ಇದುವರೆವಿಗಿನ ರಾಜಕೀಯ ಜೀವನ ಮತ್ತು ಅವರ ಮಾತುಗಳನ್ನು ಗಮನಿಸಿದರೆ, ಈ ದೇಶದ ಪ್ರಧಾನಿ ಬಿಡಿ ಒಂದು ಗ್ರಾಮ ಪಂಚಾಯಿತಿಯ ಸದಸ್ಯನಾಗಲು ಸಹಾ ಅರ್ಹತೆ ಇಲ್ಲ ಎನ್ನುವುದು ಅರಿವಾಗುತ್ತದೆ.
ಕಾಂಗ್ರೇಸ್ ನಾಯಕರುಗಳ ಬೌದ್ಧಿಕತೆಯ ಬಗ್ಗೆ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನಿಸುತ್ತಿದ್ದಂತೆಯೇ, ಮೋದಿ ಏನು ಓದಿದ್ದಾರೆ? ಅವರ ಪದವಿ ಪ್ರಮಾಣ ಪತ್ರವೇಕೆ ಸಾರ್ವಜನಿಕವಾಗಿ ಲಭ್ಯವಿಲ್ಲಾ? ಎಂದು ಮುಗಿ ಬೀಳುವವರ ಸಂಖ್ಯೆಗೇನೂ ಕಡಿಮೆ ಇಲ್ಲಾ. ಹೌದು ನಿಜ. ಅಧಿಕಾರ ನಡೆಸಬೇಕಾದರೆ ವಿದ್ಯಾರ್ಹತೆ ಇರಬೇಕು ಅಂತೇನೂ ಇಲ್ಲಾ. ಅದರ ಕುರಿತಾಗಿ ನಮ್ಮ ಸಂವಿಧಾನದಲ್ಲಿ ಯಾವುದೇ ರೀತಿಯ ನೀತಿ ನಿಯಮಗಳೀನು ಇಲ್ಲಾ. ಇದುವರೆವಿಗೂ ನೂರಾರು ಅನಕ್ಷರಸ್ಥ ಶಾಸಕರು, ಸಾಂಸದರು ಆಯ್ಕೆಯಾಗಿದ್ದಾರೆ. ಬಿಹಾರದ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಮಗ ತೇಜಸ್ವೀ ಯಾದವ್ ಕೇವಲ 9ನೇ ತರಗತಿ. ಕರ್ನಾಟಕದ Super CM ಎಂದೇ ಪ್ರ(ಕು)ಖ್ಯಾತಿ ಪಡೆದಿರುವ ಪ್ರಿಯಾಂಗ್ ಖರ್ಗೆ ಮತ್ತು ಕನ್ನಡ ಸರಿಯಾಗಿ ಬರೆಯುವುದು ಬಿಡಿ, ಸರಿಯಾಗಿ ಓದಲೂ ಬಾರದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪಾ ಕೂಡಾ ಓದಿರುವುದು ಕೇವಲ ಪಿಯೂಸಿ. ಇವರೆಲ್ಲರೂ ತಮ್ಮ ಅಪ್ಪಂದಿರ ರಾಜಕೀಯ ಹಿನ್ನಲೆ ಇಲ್ಲದಿದ್ದಲ್ಲಿ ರಾಜಕೀಯದಲ್ಲಿ ಈ ಪರಿಯಾಗಿ ಬೆಳೆಯಲು ಸಾಧ್ಯವಿರುತ್ತಿರಲಿಲ್ಲ ಬಿಡಿ.
ಆಷ್ಟೆಲ್ಲಾ ಶೈಕ್ಷಣಿಕ ವೈಫಲ್ಯಗಳ ಹೊರತಾಗಿಯೂ ಪ್ರಧಾನ ಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದ ರಾಜೀವ್ ಗಾಂಧಿಗೆ ಇದ್ದ ಒಂದೇ ಒಂದು ಉತ್ತಮ ಗುಣವೆಂದರೆ, ಬೇರೆಯವರು ಹೇಳಿದ ಒಳ್ಳೆಯ ಮಾತುಗಳಲ್ಲಿ ಕೆಲವನ್ನಾದರೂ ಅರ್ಥ ಮಾಡಿಕೊಂಡು ಅವುಗಳನ್ನು ಅಳವಡಿಸಿಕೊಳ್ಳುವ ಮನಸ್ಥಿತಿಯನ್ನು ಹೊಂದಿದ್ದರು. ಆದರೇ ರಾಹುಲ್ ಗಾಂಧಿ, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪಾ, ತೇಜಸ್ವಿ ಯಾದವ್ ಆವರುಗಳಿಗೆ ಆಲೋಚಿಸಿ ಮಾತನಾಡಲು ಬರುವುದಿಲ್ಲಾ, ಮತ್ತೊಬ್ಬರು ಹೇಳಿದ್ದನ್ನು ಅಳವಡಿಸಿಕೊಳ್ಳುವ ಮನಸ್ಥಿತಿ ಇಲ್ಲದಿದ್ದ ಕಾರಣದಿಂದಾಗಿಯೇ ರಾಜ್ಯ ಸರ್ಕಾರ ಈ ಪರಿಸ್ಥಿತಿಯನ್ನು ಅನುಭವಿಸಬೇಕಾಗಿದೆ.
ವಿಫಲರಾಗುವುದು ದೊಡ್ಡ ವಿಷಯವಲ್ಲ. ಅನೇಕ ಬಾರಿ ಅತ್ಯುತ್ತಮ ಬುದ್ಧಿವಂತರೂ ಸಹಾ ವಿಫಲರಾಗಿದ್ದನ್ನು ಕಂಡಿದ್ದೇವೆ. ಆದರೆ ತಾವು ತಪ್ಪೇ ಮಾಡಿಲ್ಲಾ ಎಂದು ತಮ್ಮ ಸುತ್ತಮುತ್ತಲಿನ ಹೊಗಳು ಭಟ್ಟರಿಂದ ಹೊಗಳಿಸಿಕೊಳ್ಳುವಂತಹ ಹಿತ್ತಾಳೆ ಕಿವಿಯವರೇ ಇಂದು ಹೆಚ್ಚಾಗಿರುವಾಗ, ಮಾಡಿದ ತಪ್ಪನ್ನೇ ಬಾರಿ ಬಾರಿ ಮಾಡುವ ಮೂಲಕ ರಾಜಕೀಯದಲ್ಲಿ ಮೇಲೆ ಏರಲು ವಿಫಲರಾಗುತ್ತಿದ್ದಾರೆ. ಇದರ ಕುರಿತಾಗಿಯೇ ಮಣಿ ಶಂಕರ್ ಅಯ್ಯರ್ ಹೇಳುವಂತೆ ರಾಹುಲ್ ಗಾಂಧಿಯವರಿಗೆ ಮಾರ್ಗದರ್ಶನ ನೀಡಲು ಅವರು ಕಳೆದ 20 ವರ್ಷಗಳಿಂದ ಪ್ರಯತ್ನಿಸುತಲೇ ಇದ್ದಾರಂತೆ. ಆದರೆ ಯಾರ ಮಾತನ್ನೂ ಕೇಳದ ಹುಂಬ ಮನಸ್ಸಿನ ರಾಹುಲ್, ಮಣಿಶಂಕರ್ ಅವರಿಂದ ಏನನ್ನೂ ಕೇಳಲು ಬಯಸುವುದಿಲ್ಲ ಅಷ್ಟೇ ಅಲ್ಲದೇ, ಕಳೆದ 5-6 ವರ್ಷಗಳಿಂದಲೂ ಪರಸ್ಪರ ಭೇಟಿಯಾಗಿಲ್ಲದಿರುವ ಕಾರಣ, ರಾಹುಲ್ ಆರಕ್ಕೇಳದೇ ಮೂರಕ್ಕಿಳಿಯದೇ ಮೇಲಿಂದ ಮೇಲೆ ಚುನಾವಣೆಗಳಲ್ಲಿ ಸೋಲನ್ನು ಅನುಭವಿಸುತ್ತಲೇ ಇದ್ದಾರಂತೆ. ಹೇಗೆ ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲವೋ, ಅದೇ ರೀತಿಯಲ್ಲಿ ಪರಿಶ್ರಮವಿಲ್ಲದೇ ಫಲ ಸಿಗದು. ಹಾಗೆ ಪರಿಶ್ರಮ ಪಡುವುದಕ್ಕೂ ಕನಿಷ್ಠ ಮಟ್ಟದ ಬೌದ್ಧಿಕತೆಯನ್ನು ಹೊಂದಿರಬೇಕು. ದುರಾದೃಷ್ಟವಷಾತ್ ಸೋನಿಯಾ, ರಾಹುಲ್, ಪ್ರಿಯಾಂಕಾ ಆದಿಯಾಗಿ ಬಹುತೇಕ ನಾಯಕರಗಳೂ ಮತ್ತು ವಕ್ತಾರರುಗಳ ಬೌದ್ಧಿಕ ಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಇರದೇ ಇರುವ ಕಾರಣ ಶಾಶ್ವತವಾಗಿ ಅಧಿಕಾರದಿಂದಲೇ ದೂರ ಇರಬೇಕಾದ ಅನಿವಾರ್ಯತೆಯಾಗಿದೆ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ