ವಿದ್ಯುತ್, ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಹಿಂದಿನ ಕರಾಳ ಸತ್ಯ

ಜನರಿಂದ, ಜನರಿಗಾಗಿ ಜನರ ಹಿತಕ್ಕಾಗಿಯೇ ಪ್ರಜಾಪ್ರಭುತ್ವ ಸರ್ಕಾರ ಇರಬೇಕು ಎಂದು ಭಾರತಕ್ಕೆ ಸ್ವಾತ್ರಂತ್ರ್ಯ ಬಂದ ನಂತರ ಅಂದಿನ ನಾಯಕರುಗಳು ನಿರ್ಧರಿಸಿದ ಪರಿಣಾಮ ಸ್ವಾತ್ರಂತ್ರ್ಯ ಪೂರ್ವದ ಸುಮಾರು 562 ಸಣ್ಣ ಸಣ್ಣ ಸಂಸ್ಥಾನಗಳೆಲ್ಲವೂ ಭಾರತ ಎಂಬ ಒಕ್ಕೂಟದ ರಾಷ್ಟ್ರದ ಭಾಗವಾಗಿ ಪ್ರಸ್ತುತ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿದ್ದು ಎಲ್ಲಾ ಕಡೆಯಲ್ಲೂ ಅಯಾಯಾ ಪ್ರದೇಶದ ಜನರುಗಳಿಂದ ಆಯ್ಕೆಯಾದ ಸರ್ಕಾರಗಳು ಅಧಿಕಾರ ನಡೆಸುತ್ತಿವೆ.  2023ರಲ್ಲಿ ಅಂದಿನ ದುರ್ಬಲ ಬಿಜೆಪಿ ಸರ್ಕಾರದ ಕಠಿಣ ಕ್ರಮದ ನಿರ್ಧಾರಗಳಿಂದ ಬೇಸತ್ತಿದ್ದ  ಕರ್ನಾಟಕದ ಜನರಿಗೆ,  ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇ ಬೇಕೆಂದು  ಹಪಾಹಪಿಯಲ್ಲಿದ್ದ ಕಾಂಗ್ರೇಸ್  ಪಕ್ಷದ ನಾಯಕರು, ದಿಕ್ಕು ದೆಸೆಯಿಲ್ಲದ, ಪೂರ್ವ ಯೋಜಿತವಲ್ಲದ, ಕಾರ್ಯಸಾಧುವಲ್ಲದ, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಹೊರೆಯಾಗುವಂತಹ ಬೇಕಾ ಬಿಟ್ಟಿ ಪಂಚ ಬಿಟ್ಟಿ ಭಾಗ್ಯಗಳನ್ನು ತೋರಿಸಿದ್ದೇ ತಡಾ, ಜನರು ತಾಮುಂದು ನಾಮುಂದು ಎಂದು ಮತಗಳನ್ನು ಕಾಂಗ್ರೇಸ್ ಪಕ್ಷದ ಪರವಾಗಿ ಹಾಕಿದ ಪರಿಣಾಮ 136  ಶಾಸಕರು ಆರಿಸಿ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿಯೂ ಮತ್ತು ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾಗಿ ಅಧಿಕಾರಕ್ಕೆ ಬಂದದ್ದು ಈಗ ಇತಿಹಾಸ.

ನುಡಿದಂತೆ ನಡೆದಿದ್ದೇವೆ ಎಂದು ಹೇಳುವ ಭರದಲ್ಲಿ ರಾಜ್ಯದ ಅಭಿವೃದ್ಧಿ ಎಲ್ಲವನ್ನೂ ಮೂಲೆಗುಂಪಾಗಿಸಿ ಕೇವಲ ತಮ್ಮ ಬಿಟ್ಟಿ ಭಾಗ್ಯಗಳಿಗೆ ಹಣ ಹೊಂಚಿಸಲು ಹೆಣಗಾಡಿ ಕಡೆಗೆ ಅವರಿಗೆ ಹೊಳೆದಿದ್ದ ಮಾರ್ಗವೇ ಬೆಲೆ ಏರಿಕೆ. ಅದಕ್ಕಾಗಿ  ಜಾರಿಗೆ ತರುವ ಸಲುವಾಗಿಯೇ ಪದೇ ಪದೇ ಮದ್ಯ, ಪೆಟ್ರೋಲಿಯಂ ಉತ್ಪನ್ನಗಳು,  ವಿದ್ಯುತ್, ಆಸ್ತಿ ನೊಂದಾವಣಿ ಶುಲ್ಕ,  ನೀರು, ಬಸ್‌, ಮೆಟ್ರೋ, ದಿನಪಯೋಗಿ ವಸ್ತುಗಳ ಬೆಲೆಯನ್ನು ಪದೇ ಪದೇ ರಾಜ್ಯದ ಜನರ ಮೇಲೆ ಎದ್ವಾ ತದ್ವಾ ಏರಿಕೆ ಮಾಡಿರುವ ಪ್ರಸ್ತುತ ಈ ಸರ್ಕಾರ, ಹಿಂದೂಗಳ ಹೊಸ ವರ್ಷ ಯುಗಾದಿಯ  ಹಬ್ಬದ ಕೊಡುಗೆಯಾಗಿ 2025ರ ಏಪ್ರಿಲ್ 1ರಿಂದ ಜಾರಿಗೆ ಆಗುವಂತೆ ವಿದ್ಯುತ್ ಮತ್ತು  ಕೆಎಂಎಫ್‌ ನಂದಿನಿ ಹಾಲು ಮತ್ತು ಮೊಸರಿನ ದರವನ್ನು  ಪ್ರತಿ ಲೀಟರಿಗೆ  ಬರೋಬ್ಬರಿ 4 ರೂಪಾಯಿ ಹೆಚ್ಚುವರಿ ಮಾಡಲಾಗಿದೆ. ಕೆಲವೇ ಕೆಲವು ತಿಂಗಳುಗಳ ಹಿಂದೆ  ಅರ್ಧ ಲೀಟರ್ ಹಾಲಿನ ಮೇಲೆ 2 ರೂಪಾಯಿ ಹೆಚ್ಚಿಸಿದ್ದ ಇದೇ ಸರ್ಕಾರ ಈಗ ಮತ್ತೆ 4 ರೂಪಾಯಿ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ.

ಹಾಲು ಮತ್ತು ವಿದ್ಯುತ್ ಎರಡೂ ಸಹಾ  ಜನ ಸಾಮಾನ್ಯರ ಜೀವನಾವಶ್ಯಕ  ವಸ್ತುವಾಗಿದ್ದು, ಇವೆರಡರ ಬೆಲೆ ಹೆಚ್ಚಾಗುತ್ತಿದ್ದಂತೆ ಸಹಜವಾಗಿ  ಉಳಿದ ಎಲ್ಲಾ ಬೆಲೆಗಳು ಅನಿವಾರ್ಯವಾಗಿ ಏರಿಸಲೇ ಬೇಕಾಗುತ್ತದೆ. ಹೊಟೆಲ್ಲುಗಳಲ್ಲಿ ಹತ್ತು ರೂಪಾಯಿಗಳಿಗೆ ಸಿಗುತ್ತಿದ್ದ ಕಾಫೀ, ಟೀ  ಈಗಾಗಲೇ 12-15 ಆಗಿದ್ದು ಇನ್ನು ಹಾಲಿನ ಬೆಲೆ ಏರುತ್ತಿದ್ದಂತೆಯೇ 18-20 ರೂಪಾಯಿಗಳಾದರೂ ಅಚ್ಚರಿ ಪಡಬೇಕಿಲ್ಲ.  ನಾನು ಹೊಡೆದ ಹಾಗೆ ಮಾಡುತ್ತೇನೆ. ನೀನು ಅಳುವಂತೆ ನಟಿಸಿ ಎನ್ನುವಂತೆ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಮತ್ತು ಹಾಲು ಒಕ್ಕೂಟಗಳು  ಹಾಲಿನ ಬೆಲೆ ಐದು ರೂಪಾಯಿ ಏರಿಕೆ ಮಾಡಬೇಕು ಎಂಬ ಬೇಡಿಕೆ ಇಟ್ಟು ನಂತರ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ(?)  ನಡೆಸಿದ ಮುಖ್ಯಮಂತ್ರಿಗಳು ಅಂತಿಮವಾಗಿ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗ ಬಾರದು ಎಂದು ನಿರ್ಧರಿಸಿ ₹5 (₹ ಚಿಹ್ನೆ ಬಳಕೆಯ ಕುರಿತಂತೆ ಜಿಜ್ಞಾಸೆ ಇದೆ)  ₹4 ಏರಿಕೆ ಮಾಡಲು  ಸಂಪುಟ ಒಪ್ಪಿಗೆ ನೀಡಿದರಂತೆ. ಅಬ್ಬಾಬ್ಬಾ  ಇಂತಹ ಜನಪರ ಕಾಳಜಿ ಹೊಂದಿರುವಂತಹ ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟವನ್ನು ಆಯ್ಕೆ ಮಾಡಿಕಳುಹಿಸಿದ ನಾವೇ ಧನ್ಯರು.

ಇದೇ ರೀತಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ ಮುಂದಿನ ಮೂರು ವರ್ಷಗಳ ಕಾಲ ನಿರಂತವಾಗಿ  36 ಪೈಸೆ ಹೆಚ್ಚಳ ಮಾಡುವ ಆದೇಶವನ್ನು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (KERC) ಹೊರಡಿಸಿದ್ದು ನಂತರ ಜನರಿಂದ ಪ್ರತಿರೋಧ ಕಂಡು ಬಂದ ಕಾರಣ, ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ 10 ಪೈಸೆ ಇಳಿಸಿ ಗ್ರಾಹಕರ ಕಣ್ಣೊರೆಸುವ ನಾಟಕವಾಡಿ, ತೆರೆಮರೆಯಲ್ಲಿ ನಿಗದಿತ ಶುಲ್ಕವನ್ನು ಪ್ರತಿ ಕಿ.ವ್ಯಾ.ಗೆ 25 ರೂ. ಏರಿಸಿ ಗ್ರಾಹಕರ ಮೇಲೆ ಅನಗತ್ಯವಾಗಿ  ಬರೆ ಎಳೆದಿದೆ ಈ ಹಿಂದೆ ನಿಗದಿತ ಶುಲ್ಕವು ಕಿ.ವ್ಯಾ.ಗೆ 120 ರೂ. ಇದ್ದದ್ದು ಇನ್ನು ಮುಂದೆ 145 ರೂ.ಗೆ ಹೆಚ್ಚಳವಾಗುತ್ತದೆ. ಸಾಮಾನ್ಯವಾಗಿ ಗೃಹ ಬಳಕೆಗೆ 3 ರಿಂದ 5 ಕಿ.ವ್ಯಾ. ಬಳಕೆ ಮಾಡಲಾಗುತ್ತಿದ್ದು ಈಗ ನಿಗಧಿತ ಶುಲ್ಕವೇ 75-125 ಹೆಚ್ಚಾಗಿದ್ದು ಅದರ ಮೇಲೆ ಪ್ರತೀ ಯೂನಿಟ್ಟಿಗೆ 26ಪೈಸೆ ಹೆಚ್ಚಾಗಿದೆ.

ನಿಜ ಹೇಳಬೇಕೆಂದರೆ ಈ ಹೆಚ್ಚಳಕ್ಕೆ ಮುಖ್ಯ ಕಾರಣ  ಇದುವರೆವಿಗೂ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳ ವಿವೇಚನಾ ರಹಿತ  ಆಡಳಿತಾತ್ಮಕ ನೀತಿ ಮತ್ತು ಅವರ ರಾಜಕೀಯ ಅಸ್ತಿತ್ವ ಮತ್ತು ತೆವಲು ಎಂದರೂ ತಪ್ಪಾಗದು. ಈ ರೀತಿಯಾಗಿ ಗ್ರಾಹಕರಿಂದ ಹೆಚ್ಚಿಗೆ ಪಡೆಯುವ ಹಣದಲ್ಲಿ  ರೈತರು/ಹೈನುಗಾರರಿಗೆ ತಲುಪುವುದು ಕೇವಲ ಮೂಗಿನ ತುದಿಗೆ ಸವರುವ ತುಪ್ಪದಂತೆ ಕೊಟ್ಟು ಉಳಿದ ಹಣವೆಲ್ಲವೂ ಹಾಲು ಮಂಡಳಿಯ ನಿರ್ವಹಣೆಗೇ ಹೋಗುತ್ತಿದೆ ಎಂದು ತಿಳಿದಾಗ, ಗ್ರಾಹಕರ ಹಣ, ಯಾವ ರೀತಿಯಲ್ಲಿ ಪೋಲಾಗುತ್ತಿದೆ ಎಂಬುದರ ಅರಿವಾಗುತ್ತದೆ. ಗುಜರಾತಿನ ಆನಂದ್ ನಲ್ಲಿ ಕುರಿಯನ್ ಆವರು  ಆರಂಭಿಸಿದ ಅಮೂಲ್ ಸಂಸ್ಥೆಯ ಪ್ರತಿರೂಪದಂತೆ ಆರಂಭವಾದ ಕೆಎಂಎಫ್ ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗುವುದರ ಬದಲು ನಿರಾಶ್ರಿತ ರಾಜಾಕೀಯ ವ್ಯಕ್ತಿಗಳ ಆಶ್ರಯ ತಾಣವಾಗಿ  ಹೋಗಿರುವ ಕಾರಣ ಬಂದ  ಲಾಭವೆಲ್ಲಾ  ವಿವಿಧ ನಿಗಮಗಳ ಆಡಳಿತ ಮಂಡಳಿಗಳ ಆಡಳಿತ ವ್ಯಚ್ಚಕ್ಕೆ 65% ಖರ್ಚಾಗುತ್ತಿರುವುದೇ ಈ ಹಾಲಿನ ಏರಿಕೆಗೆ ಕಾರಣವಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

ಇನ್ನೂ ಸ್ಪಷ್ಟವಾಗಿ  ಹೇಳಬೇಕೆಂದರೆ ಕೆಎಂಎಫ್‌ ಪ್ರತಿ ದಿನ 90 ಲಕ್ಷ ಲೀಟರ್ ಹಾಲನ್ನು ರೈತರಿಂದ ಪ್ರತೀ ಲೀಟರಿಗೆ  33 ರೂ. ನಂತೆ ಖರೀದಿಸಿ ಅದರಿಂದ ಸಾಕಷ್ಟು ಪ್ರಮಾಣದ ಕೊಬ್ಬನ್ನೆಲ್ಲಾ ತೆಗೆದುಕೊಂಡು ಮೊಸರು, ಬೆಣ್ಣೆ, ತುಪ್ಪಾ, ಖೋವಾ, ಪನ್ನೀರ್, ಚೀಸ್, ಹಾಲಿನ ಪೌಡರ್ ಎಲ್ಲವನ್ನೂ ಮಾಡಿಕೊಂಡು ಉಳಿದ ಹಾಲನ್ನು  ಜನಸಾಮಾನ್ಯರಿಗೆ 54 ರೂ. ಗಳಿಗೆ ಮಾರಾಟ ಮಾಡುತ್ತದೆ. ಇಷ್ಟಾದರೂ ಕೆಎಂಎಫ್‌ ಎಮ್‌ಡಿ ಜಗದೀಶ್  ಅವರು ಹೇಳುವ ಪ್ರಕಾರ, ಒಂದು ಪ್ಯಾಕೆಟ್ ಹಾಲಿನ ಮೇಲೆ 1-2 ರೂ. ನಷ್ಟವಾಗುತ್ತಿದ್ದು ಅದನ್ನು ಉಳಿದ ಉತ್ಪನ್ನಗಳ ಲಾಭದಿಂದ ಸರಿದೂಗಿಸುತ್ತಿದ್ದೇವೆ ಎನ್ನುತ್ತಾರೆ.  ಅಂದರೆ ರೈತರಿಂದ ಖರೀಧಿಸಿ ಗ್ರಾಹಕರಿಗೆ ಮಾರುವ ನಡುವೆ ಕೆಎಂಎಫ್‌ ₹21 ಲಾಭಗಳಿಸಿದರೂ ನಷ್ಟ ಆಗುತ್ತಿದೆ ಎಂದರೆ, ಅದಕ್ಕೆ ಮುಖ್ಯ ಕಾರಣ 65% ಕೆಎಂಎಫ್‌ನ ಕಾರ್ಯಾಚರಣೆಯ ವೆಚ್ಚ ಎನ್ನುವುದು ಸ್ಪಷ್ಟವಾಗಿದೆ.

ಇಷ್ಟಾದರೂ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಚ್ಚರಿಯ  ಸಂಗತಿಯೆಂದರೆ, 2021 ರಲ್ಲಿ ಕೆಎಂಎಫ್‌ನ ಲಾಭ 5356 ಕೋಟಿ ರೂ. 2022 ರಲ್ಲಿ 6600 ಕೋಟಿ ರೂ, 2023 ರ ಮೊದಲ 9 ತಿಂಗಳಲ್ಲಿ 4800 ಕೋಟಿ ರೂ. ಆದಾಯ ಗಳಿಸಿದ್ದರೂ, ವಿನಾಕಾರಣ ಜನರನ್ನು ತಪ್ಪು ದಾರಿಗೆ ಎಳೆದು ಗಳಿಸುತ್ತಿರುವ ಲಾಭವನ್ನು ರೈತರಿಗೂ ಕೊಡದೇ, ಜನರಿಗೂ  ವರ್ಷಕ್ಕೆರಡು ಬಾರಿ ಹಾಲಿನ ಬೆಲೆಯನ್ನು ಏರಿಸುತ್ತಾ, ಬಂದ ಲಾಭವನ್ನೆಲ್ಲಾ ಕೆಎಂಎಫ್‌ ಆಡಳಿತ ಮಂಡಳಿ ತಿಂದು ತೇಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.  ಪ್ರತಿಯೊಂದರಕ್ಕೂ ಅಮೂಲ್ ನೊಂದಿಗೆ  ಹೋಲಿಸಿಕೊಳ್ಳುವ ಕೆಎಂಎಫ್‌, ರೈತರಿಂದ ಖರೀಧಿಸುವ ಹಾಲಿಗೆ  ಅಮೂಲ್‌ 45 ರೂ. ಕೊಡುವುದಲ್ಲದೇ,  ಮಾರಾಟವಾಗುವ ಉಳಿದ ಉತ್ಪನ್ನಕ್ಕೂ ಒಂದು ರೂ.ಗೆ 80 ಪೈಸೆಯನ್ನು ರೈತರಿಗೆ ಕೊಡುವ ತತ್ವಕ್ಕೆ ಬದ್ಧವಾಗಿದ್ದು  ಹೈನುಗಾರರ ಸ್ನೇಹಿಯಾಗಿರುವುದನ್ನು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಅದೇ ರೀತಿಯಲ್ಲಿ ಪಕ್ಕದ ತಮಿಳುನಾಡು ಮತ್ತು ಅವಿಭಜಿತ ಆಂಧ್ರದಲ್ಲಿಯೂ ಸಹಾ ರೈತರಿಂದ ಹಾಲು ಖರೀದಿ ಮಾಡುವ ದರ ಹೆಚ್ಚಾಗಿದ್ದು, ಸಾರ್ವಜನಿಕವಾಗಿ ಕೆಎಂಎಫ್‌ ನ ದುಂದು ವೆಚ್ಚದ ಬಗ್ಗೆ ಚರ್ಚಿಸ ಬೇಕು ಮತ್ತು  ಕೆಎಂಎಫ್‌ ತನ್ನ ಆಡಳಿತ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕು ಇಲ್ಲವೇ ಅದನ್ನು ಶಾಶ್ವತವಾಗಿ ಮುಚ್ಚಿ ಇತರೇ ಹಾಲು ಒಕ್ಕೂಟ ಸಂಸ್ಥೆಗಳಿಗೆ ರಾಜ್ಯದಲ್ಲಿ ಹಾಲು ಖರೀಧಿಸುವುದಕೆ ಅನುಕೂಲ ಮಾಡಿಕೊಡುವ ಮೂಲಕ ರೈತರಿಗೂ ಮತ್ತು ಗ್ರಾಹಕರಿಗೂ ಲಾಭವನ್ನು ತಂದು ಕೊಡಬೇಕು ಎಂದು ಜನರು ಕೇಳ ಬೇಕಾದಂತಹ ಪರಿಸ್ಥಿತಿ ಎದುರಾಗಿದೆ.

ಇನ್ನು ಇತ್ತೀಚೆಗಷ್ಟೇ ವಿದ್ಯುತ್‌ ದರ ಹೆಚ್ಚಿಸಿದ್ದ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಗೃಹೋಪಯೋಗಿ ಸೇರಿದಂತೆ ಎಲ್ಲಾ ಬಗೆಯ ವಿದ್ಯುತ್‌ ಸಂಪರ್ಕಗಳ ನಿಗದಿತ ಶುಲ್ಕವನ್ನು ಪ್ರತಿ ಕಿಲೋ ವ್ಯಾಟ್‌ಗೆ 25 ರೂ. ಹೆಚ್ಚಳ ಮಾಡಿದ್ದು ಪರಿಷ್ಕೃತ ದರಪಟ್ಟಿಯು ಏ.1ರಿಂದ ಜಾರಿಗೆ ಬರಲಿದೆ. ಇದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ಮತ್ತು ವಿದ್ಯುತ್‌ ವಿತರಣಾ ಕಂಪನಿಗಳ (ಎಸ್ಕಾಂ) ನೌಕರರ ಪಿಂಚಣಿ, ಗ್ರಾಚ್ಯುಟಿಗೆ ಹಣ ಹೊಂದಿಸಲು ಮಾಡಿರುವ ಹುನ್ನಾರವಾಗಿದೆ. ಕರ್ನಾಟಕ ವಿದ್ಯುತ್ ಮಂಡಳಿಯನ್ನು ಮತ್ತೆ ತಮ್ಮ ರಾಜಕೀಯ ಲಾಭಕ್ಕಾಗಿ ಮತ್ತು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಅನುಕೂಲ ಮಾಡಿಕೊಡುವ ಸಲುವಾಗಿ ಮಂಡಳಿಗಳನ್ನು ವಿಭಜಿಸಿದ ಪರಿಣಾಮ ಅಲ್ಲಿಯೂ ಸಹಾ  ಅನಗತ್ಯ ಆಡಳಿತ ವೆಚ್ಚವಾಗಿ ಅಲ್ಲಿನ ನಿವೃತ್ತ ನೌಕರರ ಗ್ರಾಚ್ಯುಟಿ ಮತ್ತು ಪಿಂಚಣಿ ಕೊಡಲು ಸರ್ಕಾರದ ಬಳಿ ಹಣವಿರದೇ, ಈಗ  ಆದಕ್ಕೆ ಸರಿದೂಗಿಸುವ ಸಲುವಾಗಿ ನಿಗದಿತ ಶುಲ್ಕವನ್ನು ಪ್ರತಿ ಕಿಲೋ ವ್ಯಾಟ್‌ಗೆ 25 ರೂ  ಮತ್ತು ಪ್ರತೀ ಯೂನಿಟ್‌ಗೆ 26 ಪೈಸೆಯನ್ನು ಗ್ರಾಹಕರ ಮೇಲೆ ಹಾಕಿದ್ದು,  ಈ ವ್ಯವಸ್ಥೆ ಮುಂದಿನ ಮೂರುವರ್ಷಗಳ ಕಾಲ ಹೀಗೆಯೇ ಬೆಲೆ ಏರಿಕೆಯಾಗಲಿದೆ.

ಜನರಿಂದ, ಜನರಿಗಾಗಿ ಜನರ ಹಿತಕ್ಕಾಗಿಯೇ ಇರಬೇಕಾದ ಸರ್ಕಾರ, ಜನ ಪರವಾಗಿರದೇ, ತನ್ನ ರಾಜಕೀಯ ಲಾಭಕ್ಕಾಗಿ ಮತ್ತು ತನ್ನ ಪಕ್ಷದ ಕಾರ್ಯಕರ್ತರ ಹಿತವನ್ನು ಕಾಪಾಡುವ ಸಲುವಾಗಿ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದರಂತೆ ಎನ್ನುವಂತೆ  ಇವರು  ಜನಸಾಮಾನ್ಯರ ಮೇಲೆ ಈ ರೀತಿಯಾಗಿ ಗಧಾ ಪ್ರಹಾರ ಮಾಡುತ್ತಿರುವುದನ್ನು ಎಲ್ಲರೂ ಒಕ್ಕೊರಲಿನಿಂದ ಪ್ರತಿಭಟಿಸುವ ಸಮಯ ಬಂದಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಮಂಜುಶ್ರೀ

Leave a comment