
80ರ ದಶಕದಲ್ಲಿ ಬೆಂಗಳೂರಿನಲ್ಲಿ ಹುಟ್ಟಿದವರಿಗೆ ನಮ್ಮ ಸನಾತನ ಧರ್ಮದ ಆಚಾರ ವಿಚಾರ, ವೇದ ಸಂಸ್ಕೃತ ಎಂದರೆ ಅಷ್ಟಕ್ಕಷ್ಟೇ. ಅವರದ್ದೇನಿದ್ರೂ, ಚೆನ್ನಾಗಿ ಓದಿ ಪದವಿ ಗಳಿಸಬೇಕು. ಚೆನ್ನಾಗಿ ಬಟ್ಟೆ ಬರೆ ಹಾಕಿಕೊಂಡು, ಯಾವುದಾದರೂ ದೊಡ್ಡ ದೊಡ್ಡ ಕಂಪನಿಗಳಲ್ಲಿ ಐದಾರು ಅಂಕಿಯ ಸಂಬಳ ಗಿಟ್ಟಿಸಿಕೊಂಡು ವಾರಪೂರ್ತಿ ಕಷ್ಟ ಪಟ್ಟು ದುಡಿದು ವಾರಾಂತ್ಯದಲ್ಲಿ ಜಾಲಿಯಾಗಿ ಊರೂರು ಸುತ್ತುತ್ತಾ ಪಾರ್ಟಿ ಮಾಡುವವರೇ ಹೆಚ್ಚಾಗಿರುವಾಗ, ಇವರೆಲ್ಲರಿಗಿಂತಲೂ ಅಪರೂಪವಾಗಿ ಆಧುನಿಕ ಶಿಕ್ಷಣದ ಜೊತೆಗೆ ಸನಾತನ ಧರ್ಮದ ಸಂಸ್ಕಾರ, ಸಂಸ್ಕೃತಿ ಆಚಾರ ವಿಚಾರಗಳನ್ನು ಕಲಿತು ಅದನ್ನೇ ಇನ್ನೂ ಸಾವಿರಾರು ಜನರಿಗೆ ಕಲಿಸಿ ಕೊಡುವ ಸಲುವಾಗಿ ಬೆಂಗಳೂರಿನ ವಿದ್ಯಾರಣ್ಯಪುರದ ಶ್ರೀ ಕಾಳಿಕಾದುರ್ಗಾ ಪರಮೇಶ್ವರಿ ದೇವಾಲಯದ ಆವರಣದಲ್ಲಿ ಶ್ರೀ ಸನಾತನ ವೇದ ಪಾಠಶಾಲೆಯನ್ನು ನಡೆಸುತ್ತಿರುವ ಅಪರೂಪದ ಮತ್ತು ಅನುರೂಪದ ನಮ್ಮ ಗುರುಗಳಾದ ವೇ.ಬ್ರ.ಶ್ರೀ ಹರೀಶ ಶರ್ಮ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಇಂದಿನ ಗುರು ಪೂರ್ಣಿಮೆಯಂದು ಪರಿಚಯಿಸುತ್ತಿದ್ದೇನೆ.

ಚಿಕ್ಕಬಳ್ಳಾಪುರ ಬಳಿಯ ನಕ್ಕನಳ್ಳಿ ಗ್ರಾಮದವರಾದ ಶ್ರೀಮತಿ ಸುಬ್ಬಲಕ್ಷ್ಮಮ್ಮ ಮತ್ತು ವೇ.ಬ್ರ.ಶ್ರೀ ಯೋಗಾನರಸಿಂಹ ಶಾಸ್ತ್ರಿಗಳ ಮಗನಾದ ಶ್ರೀ ರಂಗನಾಥ ಶಾಸ್ತ್ರಿ ಮತ್ತು ಶ್ರೀಮತಿ ವಸಂತಮ್ಮನವರ ಮುದ್ದು ಮಗನಾಗಿ ಜನಿಸಿದ ಹರೀಶ ಶರ್ಮರು, ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿ ತಾತಾ ಅಜ್ಜಿಯರೇ ಮೊದಲ ಗುರು ಎನ್ನುವಂತೆ ಬಾಲ ಪಾಠವನ್ನು ತಮ್ಮ ತಾತನವರಾದ ಶ್ರೀ ಯೋಗಾನರಸಿಂಹ ಶಾಸ್ತ್ರಿಗಳ ಬಳಿಯಲ್ಲೇ ಕಲಿತುಕೊಂಡರು.

ಚಿಕ್ಕವಯಸ್ಸಿನಲ್ಲಿಯೇ ಮನೆಯ ಮಾತೃಭಾಷೆ ತೆಲುಗಿನ ಜೊತೆ ಆಡು ಭಾಷೆ ಕನ್ನಡ, ಸಂಸ್ಕೃತ, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಪ್ರಾವೀಣ್ಯತೆ ಪಡೆದ ಹರೀಶ ಶರ್ಮರು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ರಾಜರಾಜೇಶ್ವರಿ ದೇವಾಲಯದ ಆಶ್ರಯದಲ್ಲಿ ನಡೆಸಲಾಗುತ್ತಿದ್ದ ಶ್ರೀ ರಾಜರಾಜೇಶ್ವರಿ ವಿದ್ಯಾ ಶಾಲೆಯಲ್ಲಿ ಶಿಕ್ಷಕರಾಗಿದ್ದ ತಮ್ಮ ತಂದೆಯವರಿಂದಲೇ ವ್ಯಾಕರಣ ಪಾಠಗಳನ್ನು ಕರಗತ ಮಾಡಿಕೊಂಡ ನಂತರ ನಿಯಮಿತ ಶಾಲಾ ಮತ್ತು ಕಾಲೇಜು ವಿದ್ಯಾಭ್ಯಾಸದ ಜೊತೆ ಜೊತೆಯಲ್ಲೇ ಶೃಂಗೇರಿ ಮಠದ ಮುದ್ರಾಧಿಕಾರಿಗಳಾಗಿದ್ದಂತಹ ವೇ.ಬ್ರ.ಶ್ರೀ ಮುತ್ತೂರು ಶ್ರೀಕಾಂತ್ ಶರ್ಮರ ಬಳಿ ಸುಮಾರು 12 ವರ್ಷಗಳ ಕಾಲ ಯಜುರ್ವೇದದ ಸ್ಮಾರ್ತ ಭಾಗವನ್ನು ಅಧ್ಯಯನ ಮಾಡುವಷ್ಟರಲ್ಲಿ ತಮ್ಮ Bcom ಪದವಿಯನ್ನು ಮುಗಿಸಿ ದೂರ ಶಿಕ್ಷಣ ಪದ್ದತಿಯಲ್ಲಿ MCom ಮಾಡಲು ಮುಂದಾದರು.

ಅಚ್ಚರಿಯ ಮತ್ತು ಸಂತೋಷದ ಸಂಗತಿಯೆಂದರೆ, ಹರೀಶ ಶರ್ಮರು ಪ್ರಖ್ಯಾತ ಸಂಸ್ಕೃತ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರು. ಮೈಸೂರು ಶಿಕ್ಷಣ ಸಂಘದ (MES college) ಸಂಸ್ಥಾಪಕರಲ್ಲಿ ಒಬ್ಬರಾದ ಮತ್ತು ಐದು ಅವಧಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಂತಹ ಪ್ರೊ.ಎಂ.ಪಿ.ಎಲ್.ಶಾಸ್ತ್ರಿ ಅವರ ಸಹೋದರನ ಮೊಮ್ಮಗರಾಗಿದ್ದು ಮೂಲತಃ ಮುತ್ತೂರಿನವರಾಗಿದ್ದಾರೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಿಂದ ದಕ್ಷಿಣಕ್ಕೆ 13 ಕಿ.ಮೀ ದೂರದಲ್ಲಿರುವ ಈ ಮುತ್ತೂರಿನ ಇತಿಹಾಸವೂ ಬಲು ರೋಚಕವಾಗಿದೆ. ನಮಗೆಲ್ಲರಿಗೂ ತಿಳಿಸಿರುವಂತೆ ಬೆಂಗಳೂರಿನ ನಿರ್ಮಾತರಾದ ಶ್ರೀ ಕೆಂಪೇಗೌಡರ ಪೂರ್ವಜರಾದ ರಣಭೈರೇಗೌಡರು ತಮಿಳುನಾಡಿನಿಂದ ನಂದಿ ಬಳಿಯ ಆವತಿ ಎಂಬ ಪ್ರದೇಶಕ್ಕೆ ವಲಸೆ ಬಂದು ಅಲ್ಲಿ ವಿಜಯನಗರದ ಸಾಮಂತಿಕೆಯಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿಕೊಂಡಿದ್ದರು. ಅವರ ವಂಶದ ನಾಡಪ್ರಭು ಎರಡನೇ ಸಣ್ಣ ಭೈರೇಗೌಡರಿಗೆ ತಮ್ಮ ಸಾಮ್ರಾಜ್ಯದಲ್ಲಿ ಒಳ್ಳೆಯ ವಿದ್ವಾಂಸರನ್ನು ಒಂದು ಕಡೆ ಒಗ್ಗೂಡಿಸಿ ಅಗ್ರಹಾರವನ್ನು ಮಾಡಬೇಕು ಎಂದು ನಿರ್ಧರಿಸಿದ ಕಾರಣ, ಅವರು 54 ಏಕಾದಶಿ ವ್ರತವನ್ನು ಬಹಳ ನೇಮ ನಿಷ್ಟೆಗಳಿಂದ ಮಾಡಿ ಪ್ರತೀ ದ್ವಾದಶಿಯಂದು ಒಬ್ಬೊಬ್ಬ ವೇದ ವಿದ್ವಾಂಸರಿಗೆ ಒಂದು ವೃತ್ತಿ ಅರ್ಥಾತ್ 22 ಎಕರೆ ಜಮೀನು, ಒಂದು ಮನೆ ಮತ್ತು 4 ಹಸುಗಳನ್ನು ದಾನವಾಗಿ ನೀಡುವ ಮೂಲಕ ದೇಶಾದ್ಯಂತ ಇರುವ ಸುಮಾರು 54 ವಿದ್ವಾಂಸರನ್ನು ಒಂದೆಡೆಗೆ ಸೇರಿಸಿ ನಿತ್ಯ ಉಪಯೋಗಕ್ಕೆ ಮತ್ತು ವ್ಯವಸಾಯಕ್ಕೆ ಯೋಗ್ಯವಾದಂತಹ ಕೆರೆಯೊಂದಿಗೆ ಅಲ್ಲೊಂದು ಸುಂದರವಾದ ಅಗ್ರಹಾರವನ್ನು ಕಟ್ಟಿಸಿ ಕೊಡುತ್ತಾರೆ.
ಹೀಗೆ ದೇಶದ ವಿವಿಧ ಭಾಗಗಳಿಂದ ಅಲ್ಲಿಗೆ ಬಂದಂತಹ ವಿದ್ವಾಂಸರುಗಳಲ್ಲಿ ಹರೀಶ ಶರ್ಮರ ಪೂರ್ವಜರೂ ಒಬ್ಬರಾಗಿದ್ದು, ಕೆಲ ವರ್ಷಗಳ ಕಾಲ ಎಲ್ಲವೂ ಸುಗಮವಾಗಿ ಸಾಗುತ್ತಿರುವಾಗ ಅದೊಂದು ದಿನ ಬಿದ್ದ ಕುಂಭದ್ರೋಣ ಮಳೆಯಿಂದಾಗಿ ಅವರ ಊರಿನ ಕೆರೆಯ ಕಟ್ಟೆ ಒಡೆದು ಹೋಗಿ ಕೆರೆಯ ನೀರೆಲ್ಲಾ ಊರಿಗೆ ಬಂದು ಅಲ್ಲಿನವರ ಜೀವನ ಅಸ್ತವ್ಯಸ್ತವಾದಾಗ, ವಿಧಿ ಇಲ್ಲದೇ, ಯಥಾಪ್ರಕಾರ ತಮ್ಮ ಅವಸ್ಥೆಯನ್ನು ವಿವರಿಸಿ ಪರಿಹಾರ ಪಡೆಯಲು ಸಣ್ಣ ಭೈರೇಗೌಡರ ಬಳಿ ಹೋದಾಗ, ಗೌಡರು ಅದ್ಯಾವುದೋ ವಿಷಯವಾಗಿ ಪರಸ್ಥಳಕ್ಕೆ ಹೋಗಿದ್ದು ಹಿಂದಿರುಗಿ ಬರುವುದು ತಡವಾಗುವ ವಿಷಯ ತಿಳಿದು ಬೇಸರ ಗೊಳ್ಳುತ್ತಾರೆ. ಈ ರೀತಿಯಾಗಿ ಅಗ್ರಹಾರದ ಹಲವಾರು ವಿದ್ವಾಂಸರು ಏಕ ಕಾಲಕ್ಕೆ ಬಂದಿರುವುದರ ಹಿಂದೆ ಯಾವುದೋ ಗಂಭೀರವಾದ ಸಮಸ್ಯೆ ಇರಬಹುದು ಎಂದೆಣಿಸಿದ ಗೌಡರ ಪತ್ನಿಯವರು ಎಲ್ಲರನ್ನೂ ಒಳಗೆ ಕರೆದು ಅವರಿಗೆ ಯಥಾಶಕ್ತಿ ಉಪಚರಿಸಿ ಬಂದ ವಿಷಯವನ್ನು ಕೇಳಿ ಬಹಳ ಮರುಕ ಪಟ್ಟಿದ್ದಲ್ಲದೇ, ಗೌಡರು ಇಲ್ಲದಿದ್ದ ಕಾಲದಲ್ಲಿ ಆ ಕ್ಷಣದಲ್ಲಿ ತನ್ನಿಂದ ಯಾವ ರೀತಿ ಸಹಾಯ ಮಾಡಬಹುದು ಎಂದು ಕ್ಷಣ ಕಾಲ ಯೋಚಿಸಿ ಕೂಡಲೇ ತನ್ನ ಮೂಗಿನಲ್ಲಿದ್ದ ಅತ್ಯಂತ ಬೆಲೆಬಾಳುವ ಮುತ್ತಿನ ನತ್ತನ್ನು ಬಿಚ್ಚಿ ಆ ವಿದ್ವಾಂಸರ ಕೈಗಿತ್ತು ಇದನ್ನು ಮಾರಿ ಅದರಿಂದ ಬಂದ ಹಣದಿಂದ ಒಡೆದ ಕೆರೆಯನ್ನು ಸರಿಪಡಿಸಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಾಳೆ.
ಆರಂಭದಲ್ಲಿ ಆಕೆಯ ಮುತ್ತಿನ ನತ್ತನ್ನು ತೆಗೆದುಕೊಳ್ಳಲು ಹಿಂಜರಿಯುವ ಅಗ್ರಹಾರದ ವಿದ್ವಾಂಸರುಗಳು, ನಂತರ ಗೌಡತಿಯ ಒತ್ತಾಯ ಮೇರೆಗೆ ಮತ್ತು ಊರಿನ ಅವ್ಯವಸ್ಥೆಯನ್ನು ಸರಿಪಡಿಸುವ ಲೋಕ ಕಲ್ಯಾಣಕ್ಕಾಗಿ ವಿಧಿ ಇಲ್ಲದೇ ಆಕೆಯ ಮುತ್ತಿನ ನತ್ತನ್ನು ಸ್ವೀಕರಿಸಿ ಅದನ್ನು ಮಾರಿ ಅದರಿಂದ ಬಂದ ಹಣದಿಂದ ಊರಿನಲ್ಲಿ ಒಡೆದು ಹೋಗಿದ್ದ ಕೆರೆಯ ಕಟ್ಟೆಯನ್ನು ಸರಿಪಡಿಸಿದ ನಂತರ ಗೌಡತಿ ಕೊಟ್ಟ ಮುತ್ತಿನಿಂದಾಗಿ ಯಥಾಸ್ಥಿತಿಗೆ ಹಿಂದಿರುಗಿದ ಅಗ್ರಹಾರಕ್ಕೆ ಆಕೆಯ ನೆನಪು ಆಚಂದ್ರಾರ್ಕವಾಗಿ ಸದಾಕಾಲವೂ ಉಳಿಯುವಂತಾಗಲು ಆ ಊರಿಗೆ ಮುತ್ತೂರು ಎಂದು ಮರುನಾಮಕರಣ ಮಾಡಿ, ಇಂದಿಗೂ ಅದೇ ಹೆಸರೇ ಮುಂದುವರೆದಿರುವುದು ಅನುಕರಣೀಯವಾಗಿದೆ.
ಇಂತಹ ಐತಿಹಾಸಿಕ ಕೌಟುಂಬಿಕ ಹಿನ್ನಲೆಯನ್ನು ಹೊಂದಿರುವ ಹರೀಶ ಶರ್ಮರು ತಮ್ಮ Bcom ಪದವಿಯನ್ನು ಮುಗಿಸಿ ಕೆಲ ಸಮಯ ಕೆಲವೊಂದು ಬ್ಯಾಂಕ್ ಮತ್ತು IIScಯಲ್ಲಿ ಕೆಲಸ ಮಾಡುತ್ತಿರುವಾಗ ಲೌಕಿಕ ಕಾರ್ಯಗಳಲ್ಲಿ ಬೇಸರಗೊಂಡು, ವಸುದೈವ ಕುಟುಂಬಕಂ ಅರ್ಥಾತ್ ಇಡೀ ಜಗತ್ತೇ ಒಂದು ಕುಟುಂಬದಂತೆ ಒಗ್ಗಟ್ಟಾಗಿ ಬಾಳು ಎನ್ನುವಂತಹ ಸಂಸ್ಕಾರ ಹೊಂದಿರುವ ನಮ್ಮ ಸನಾತನ ಧರ್ಮದ ಶಿಕ್ಷಣವನ್ನು ಪಡೆದಿರುವ ಅವರು, ಲೌಕಿಕ ಕಾರ್ಯಗಳನ್ನು ವಿರೋಧಿಸಿ ಸನಾತದ ಧರ್ಮ ಪ್ರಭೋಧಕ್ಕಾಗಿ ಶೃಂಗೇರಿಯ ಮಠಕ್ಕೆ ಹೋಗಿ ಅಲ್ಲಿ ಸುಮಾರು 3 ವರ್ಷಗಳ ಕಾಲ ಆಗಮ ಮತ್ತು ವೇದಾಧ್ಯಯನವನ್ನು ಮುಂದುವರೆಸಿ, ವೇದ ಪಾಠ ಮತ್ತು ಪೌರೋಹಿತ್ಯವನ್ನೇ ತಮ್ಮ ವೃತ್ತಿ ಮತ್ತು ಪ್ರವೃತ್ತಿಯಾಗಿ ಸ್ವೀಕರಿಸಿದರು.

ನಂತರ ಬೆಂಗಳೂರಿನ ಸಹಕಾರ ನಗರಕ್ಕೆ ಬಂದು ಅಲ್ಲಿ ಪೌರೋಹಿತ್ಯವನ್ನು ಆರಂಭಿಸಿ ಸಣ್ಣದಾಗಿ ಪರವಸ್ತು ಗುರುಕುಲ ಎಂಬ ಶಿಶುವಿಹಾರದಲ್ಲಿ ಸುಮಾರು ಐದಾರು ಶಿಷ್ಯರೊಂದಿಗೆ ವೇದ ಪಾಠವನ್ನು ಹೇಳಿಕೊಡಲು ಆರಂಭಿಸಿದ ಶ್ರೀ ಸನಾತನ ವೇದಪಾಠ ಶಾಲೆ ಇಂದು ಹೆಮ್ಮರವಾಗಿ ವೇದ, ಸಂಸ್ಕೃತ, ಜ್ಯೋತಿಷ, ಯೋಗಾಸನ, ಸಂಗೀತ, ವಿವಿಧ ವಾದ್ಯಸಂಗೀತವನ್ನು ಹೇಳಿಕೊಡುವ ಮೂಲಕ ಸನಾತನ ಪರಂಪರೆಯನ್ನು ಎತ್ತಿ ಹಿಡಿಯುವ ಕಾಯಕದಲ್ಲಿ ನಿರತರಾಗಿರುವುದು ಅಭಿನಂದನಾರ್ಹವಾಗಿದೆ. ಕೇವಲ ಹಳೆಯ ಸಿದ್ದಾಂತಗಳಿಗೇ ತಮ್ಮನ್ನು ತಾವು ಸೀಮಿತಗೊಳಿಸದೇ, ಅಧುನಿಕ ತಂತ್ರಜ್ಞಾನಗಳನ್ನು ಸುಲಲಿತವಾಗಿ ತಮ್ಮ ಪಾಠ ಪ್ರವಚನಗಳಿಗೆ ಬಳಸಿಕೊಳ್ಳುವುದನ್ನು ಕರಗತ ಮಾಡಿಕೊಂಡು Online ಮೂಲಕವೂ ತಮ್ಮ ವೇದ ಪಾಠವನ್ನು ಕಲಿಸಿಕೊಡುವ ಮೂಲಕ Global Guru ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರೂ ಅತಿಶಯವಾಗದು.
ಸನಾತನ ಧರ್ಮದ ವಿಷಯಗಳನ್ನು ಕೇವಲ ಒಂದು ವರ್ಗಕ್ಕಷ್ಟೇ ಸೀಮಿತವಾಗಿಸದೇ, ಸಕಲ ಹಿಂದೂಗಳಿಗೂ ಹೇಳಿ ಕೊಡುವ ಕ್ರಾಂತಿಕಾರಿ ನಿರ್ಧಾರ ಮಾಡಿದ್ದಲ್ಲದೇ, ಅದನ್ನು ಅಕ್ಷರಶಃ ಪಾಲಿಸುತ್ತಿರುವುದು ನಿಜಕ್ಕೂ ಅಭಿನಂದಾನಾರ್ಹವಾಗಿದೆ. ಭಾರತದಲ್ಲಿ ವೇದಾಭ್ಯಾಸ ಮಾಡಿಸಲು ನಾವು ಜಾತಿಯ ತಾರತಮ್ಯ ಮಾಡುತ್ತೇವೆ. ಆದರೆ ಅದೇ ಪಾಶ್ಚಾತ್ಯರು ಅದರಲ್ಲೂ ಜರ್ಮನಿಯವರು ನಮ್ಮ ಸಂಸ್ಕೃತ ಮತ್ತು ವೇದಗಳನ್ನು ಅಧ್ಯಯನ ಮಾಡಿ ಅದರ copy right ಪಡೆದುಕೊಂಡಿರುವಾಗ ನಾವೇಕೆ ಸಮಸ್ತ ಹಿಂದೂಗಳಿಗೆ ಹೇಳಿಕೊಡಬಾರದು? ಎಂಬ ಹರೀಶ ಶರ್ಮ ಅವರ ಆಶಾಭಾವನೆ ನಿಜಕ್ಕೂ ಒಪ್ಪುವಂತಹದ್ದೇ ಆಗಿದೆ. ಹಾಗಾಗಿಯೇ ಇಂದು ಸನಾತನ ವೇದ ಪಾಠಶಾಲೆಯಲ್ಲಿ ಹರೀಶ ಶರ್ಮರಿಂದ ಕಲಿತ ವಿದ್ಯಾರ್ಥಿಗಳು ಸನಾತನ ವೇದ ಪಾಠಶಾಲೆಯಲ್ಲಿ ಮತ್ತು ನಗರದ ವಿವಿಧ ಭಾಗಗಳಲ್ಲಿ ವೇದ ಮತ್ತು ಜ್ಯೋತಿಷವನ್ನು ಹಲವರಿಗೆ ಸ್ವತಂತ್ರವಾಗಿ ಹೇಳಿ ಕೊಡುವ ಮೂಲಕ ಗುರು ಶಿಷ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಹರೀಶ ಶರ್ಮಾ ಅವರಲ್ಲಿರುವ ಮತ್ತೊಂದು ವಿಶೇಷತೆಯೆಂದರೆ, ಅವರ ಅಗಾಧವಾದ ನೆನಪಿನ ಶಕ್ತಿ. ಅವರಿಗೆ ವ್ಯಾಕರಣ, ಸಂಸ್ಕೃತ ಶ್ಲೋಕಗಳು, ಸುಭಾಷಿತಗಳು, ವೇದ ಮಂತ್ರಗಳು ಮತ್ತು ಸೂಕ್ತಗಳು ಕರತಲಾಮಲಕವಾಗಿದೆ. ಯಾವಾಗ ಬೇಕಾದರೂ ಈ ವಿಷಯಗಳಲ್ಲಿ ಏನೇ ಕೇಳಿದರೂ ಥಟ್ ಎಂದು ಹೇಳುವುದಲ್ಲದೇ, ಒಮ್ಮೆ ಅವರಿಗೆ ಒಬ್ಬರು ಪರಿಚಯವಾದರೆ, ಎಷ್ಟು ಸಮಯವಾದರೂ ಅವರ ಹೆಸರು ಮತ್ತು ಅವರ ವಿವರಗಳನ್ನೂ ಸಹಾ ಥಟ್ ಎಂದು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಅಷ್ಟೇ ಅಲ್ಲದೇ ಅವರ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದಲ್ಲದೇ, ಅವರಿಂದ ಹೇಗೆ ಯಾವ ಕೆಲಸವನ್ನು ಮಾಡಿಸಬಹುದು ಎಂಬುದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಅವರಿಂದ ಅಂತಹ ಕೆಲಸವನ್ನು ಸುಸೂತ್ರವಾಗಿ ಮಾಡಿಸಬಲ್ಲರು ಎಂಬುದಕ್ಕೆ ಕಳೆದ ಐದು ವರ್ಷಗಳಿಂದಲೂ ವೇ.ಬ್ರ.ಶ್ರೀ. ಚಳ್ಳಕೆರೆ ಸಹೋದರರ ಪೌರೋಹಿತ್ಯದಲ್ಲಿ ಅತ್ಯಂತ ಅದ್ದೂರಿಯಾಗಿ ಮತ್ತು ಅಷ್ಟೇ ಯಶಸ್ವಿಯಾಗಿ ಅನ್ಯೋನ್ಯ ಸಹಾಯಾರ್ಥವಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಮಾಡಿದ ಮಹಾ ರುದ್ರಯಾಗ, ಲಲಿತಾ ಸಹಸ್ರನಾಮ ಯಾಗ, ಶ್ರೀರಾಮ ತಾರಕ ಯಜ್ಞ, ಲಕ್ಷ ಮೋದಕ ಮಹಾ ಗಣಪತಿ ಯಜ್ಞ ಮತ್ತು ಸದ್ಗುರು ಯಜ್ಞಗಳೇ ಸಾಕ್ಷಿ.
ಅವರು ಪೌರೋಹಿತ್ಯಕ್ಕೆ ಹೋಗಿದ್ದ ಸಂಧರ್ಭದಲ್ಲಿ ಅನೇಕರಿಗೆ ಸರಿಯಾಗಿ ಆಚಮನ ಮಾಡುವುದಕ್ಕೇ ಬಾರದಿರುವುದು ಮತ್ತು ಸರಿಯಾಗಿ ದೇವರ ಪೂಜೆಯನ್ನು ಮಾಡಲು ಬಾರದೇ ಇರುವುದನ್ನು ಗಮನಿಸಿ ಪ್ರತೀ ವರ್ಷವೂ ಬೇಸಿಗೆ ರಜೆಯ ಸಮಯದಲ್ಲಿ ಸಂಧ್ಯಾವಂದನೆ ಮತ್ತು ನಿತ್ಯ ಪೂಜೆಗಳ ಶಿಬಿರಗಳನ್ನು ಆಯೋಜಿಸಿ ನೂರಾರು ಜನರಿಗೆ ಸರಿಯಾಗಿ ಸಂಧ್ಯಾವಂದನೆ ಮತ್ತು ನಿತ್ಯ ಪೂಜೆಗಳನ್ನು ಮಾಡುವುದನ್ನು ಹೇಳಿಕೊಡುತ್ತಿರುವುದಲ್ಲದೇ, ಪ್ರತೀ ರಥ ಸಪ್ತಮಿಯಂದು ಆದಿತ್ಯ ಹೃದಯ ಸ್ತ್ರೋತ್ರ ಹೋಮ ಮತ್ತು ಸೂರ್ಯ ಅಷ್ಟಾಕ್ಷರಿ ಮೂಲ ಮಂತ್ರದ ಜೊತೆಗೆ 108 ಸೂರ್ಯ ನಮಸ್ಕಾರಗಳನ್ನು ಮಾಡಿಸುತ್ತಿರುವುದು ಶ್ಲಾಘನೀಯವಾಗಿದೆ. ಅಷ್ಟೇ ಅಲ್ಲದೇ ಸರಳವಾಗಿ ಬಾಲ ಪಾಠಗಳು ಮತ್ತು ಸೂಕ್ತಗಳೆಲ್ಲವೂ ಸುಲಭವಾಗಿ ಒಂದೆಡೆಯಲ್ಲಿ ಸಿಗುವಂತಹ ಪುಸ್ತಕವನ್ನೂ ಸಿದ್ದಪಡಿಸುತ್ತಿದ್ದಾರೆ.
ಕೇವಲ ಸನಾತನ ಸಂಸ್ಕಾರ, ಸಂಪ್ರದಾಯಗಳು ಮತ್ತು ವೇದಾಧ್ಯಯನಕಷ್ಟೇ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳದೇ, ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರವಾಗಿಯೇ ಹೇಗೆ ಸಂವಿಧಾನ ಇದೆಯೋ ಹಾಗೆಯೇ, ಹಿಂದೂಗಳಿಂದ ಹಿಂದೂಗಳಿಗಾಗಿ ಮತ್ತು ಹಿಂದುಗಳಿಗೋಸ್ಕರವಾಗಿಯೇ ಸಮಾಜ ಸೇವೆಯಾಗಿ, ಒಂದು ಗೋಶಾಲೆ, ಗುರುಕುಲ, ಸಮಸ್ತ ವ್ಯಾಪಾರ ವಹಿವಾಟುಗಳು, ಸಭೆ ಸಮಾರಂಭಗಳು ಅಷ್ಟೇ ಏಕೆ ಎಲ್ಲರೂ ಒಂದೇ ಕಡೆ ವಾಸಿಸುವಂತಹ ಗೃಹ ಸಮುಚ್ಚಯವನ್ನು ನಿರ್ಮಿಸುವ ಆಶಯವನ್ನು ಹೊಂದಿರುವುದಲ್ಲದೇ, ಅದಕ್ಕಾಗಿ ಎಲ್ಲವೂ ಕೈಗೆಟುಕುವ ಹಾಗೆ ಶ್ರೀ ಸನಾತನ ವೇದಪಾಠ ಶಾಲೆಯ ವತಿಯಿಂದ ಮೊಬೈಲ್ ಅಪ್ಲಿಕೇಶನ್ ಕೂಡಾ ಅಭಿವೃದ್ಧಿಪಡಿಸುತ್ತಿದ್ದಾರೆ. ಸನಾತನ ಧರ್ಮ ಪ್ರಭೋಧನೆಯಲ್ಲಿ ಈ ರೀತಿಯಾಗಿ ಸಾಧನೆ ಸಲ್ಲಿಸಿರುವುದಕ್ಕಾಗಿ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಇಷ್ಟೆಲ್ಲಾ ಆಲೋಚನೆಗಳು ನಿಮಗೆ ಹೇಗೆ ಬಂದಿತು? ಎಂದು ಕೇಳಿದ್ದಕ್ಕೆ ಪರೋಪಕಾರಾರ್ಥಂ ಇದಂ ಶರೀರಂ ಎನ್ನುವಂತೆ ಎಲ್ಲವೂ ಆ ಭಗವಂತನ ಅನುಗ್ರಹದ ಜೊತೆಗೆ ತಮ್ಮ ಗುರುಗಳಾದಂತಹ ವೇ.ಬ್ರ.ಶ್ರೀ ಮುತ್ತೂರು ಶ್ರೀಕಾಂತ್ ಶರ್ಮರವರು ಮತ್ತು ತಮ್ಮ ತಂದೆ ತಾಯಿಯರ ಆಶೀರ್ವಾದ ಎಂದು ಬಹಳ ವಿನಮ್ರವಾಗಿ ಹೇಳುವುದು ನಿಜಕ್ಕೂ ಅವರ ಗುರುಭಕ್ತಿ ಮತ್ತು ತಂದೆ ತಾಯಿಯರ ಮೇಲಿರುವ ಗೌರವವನ್ನು ಸೂಚಿಸುತ್ತದೆ. ಇಂದಿನ ಆಧುನಿಕ ಕಾಲದಲ್ಲೂ ಸನಾತನ ಧರ್ಮವನ್ನು ಉಳಿಸುವ ಮತ್ತು ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರತವಾಗಿರುವ ನಮ್ಮ ಗುರುಗಳಾದ ಶ್ರೀ ಹರೀಶ ಶರ್ಮ, ಅವರ ಧರ್ಮಪತ್ನಿ ಶ್ರೀಮತಿ ಸ್ರವಂತಿ ಮತ್ತು ಕುಮಾರ ಸುಮೇಧ ಶರ್ಮ ಅವರಿಗೆ ಈ ಗುರುಪೂರ್ಣಿಮೆಯ ದಿನದಂದು ಆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯದ ಜೊತೆಗೆ ಸಕಲೈಶ್ವರ್ಯವನ್ನು ನೀಡುವ ಮೂಲಕ ಅವರ ಎಲ್ಲಾ ಇಷ್ಟಾರ್ಥಗಳು ನೆರೆವೇರಲೆಂದು ಪ್ರಾರ್ಥಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ವೇ. ಬ್ರ. ಶ್ರೀ ಹರೀಶ ಶರ್ಮಾ ರವರ ವಿಷಯ ಓದಿ ತುಂಬಾ ಸಂತೋಷವಾಯಿತು. ಅವರಿಗೆ ನನ್ನ ಅನಂತಾನಂತ ವಂದನೆಗಳು. 🙏🙏
ಅವರ ಉದ್ದೇಶ ಯೋಜನೆಗಳು ತುಂಬಾ ಶ್ಲಾಘನೀಯ ಇದೇ ರೀತಿ ಮೈಸೂರಿನಲ್ಲೂ ಕೂಡ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಉತ್ತನ ಹಳ್ಳಿಯಲ್ಲಿ ವೇ. ಬ್ರ. ಶ್ರೀ. ಶಂಕರನಾರಾಯಣ ಜೋಯಿಸ್ ಎಂಬ ಮಹಾತ್ಮರು “ಭಾರತಿ ಯೋಗ ಧಾಮ ” ಎಂಬ ಒಂದು ಬೃಹತ್ ಸಂಸ್ಥೆಯೊಂದನ್ನು ಶ್ರೀ ಶರ್ಮರ ಉದ್ಧೇಶದಂತೆಯೇ ನಡೆಸುತ್ತಿರುವುದು ಒಂದು ಅವಿಸ್ಮರಣೀಯ ವಾದ ವಿಷಯ 🙏🙏👌👍
LikeLiked by 1 person
ನಮ್ಮ ಪರವಾಗಿ ಭಾರತಿ ಯೋಗ ಧಾಮದ ವೇ.ಬ್ರ.ಶ್ರೀ.ಶಂಕರನಾರಾಯಣ ಜೋಯಿಸ್ ಅವರಿಗೆ ಅಭಿನಂದನೆ ತಿಳಿಸಿಬಿಡಿ. ಸಾಧ್ಯವಾದರೆ ಅವರ ಪೋನ್ ನಂಬರ್ ತಿಳಿಸಿದಲ್ಲಿ ಅವರನ್ನೂ ಸಹಾ ಸಂಪರ್ಕಿಸಲು ಪ್ರಯತ್ನಿಸುತ್ತೇವೆ. ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎನ್ನುವ ಹಾಗೆ ಸಮಾನ ಮನಸ್ಕರು ಒಂದಾಗಿ ಸೇರಿದಲ್ಲಿ ಸನಾತನ ಧರ್ಮ ಪ್ರಬೋಧನೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡಬಹುದಲ್ವೇ?
ಏನಂತೀರೀ?
LikeLike