ಅಭಿಮಾನ್ ಸ್ಟುಡಿಯೋ ಮತ್ತು ವಿಷ್ಣುವರ್ಧನ್ ಅಭಿಮಾನಿಗಳು

2025ರ ಆಗಸ್ಟ್ 7 ಗುರುವಾರ ರಾತ್ರಿ, ಹೈಕೋರ್ಟ್ ಆದೇಶದ ಮೇರೆಗೆ, ಪೊಲೀಸ್ ರಕ್ಷಣೆಯಲ್ಲಿ 2009ರಲ್ಲಿ ಕನ್ನಡ ಚಿತ್ರರಂಗ ಕಂಡ  ಅತ್ಯಂತ ಸುರದ್ರೂಪಿ ನಟ ಡಾ. ವಿಷ್ಣುವರ್ಧನ್ ಅವರನ್ನು ಅಂತ್ಯಕ್ರಿಯೆ ಮಾಡಿದ್ದ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನು ರಿಯಲ್ ಭೂಗಳ್ಳರ (ರಿಯಲ್ ಎಸ್ಟೇಟ್) ಕುಮ್ಮಕ್ಕಿನಿಂದಾಗಿ  ಬಾಲಕೃಷ್ಣ ಅವರ ಕುಟುಂಬದ ಸದಸ್ಯರೊಬ್ಬರು ಏಕಾಏಕಿ ಕೆಡವಿ ಹಾಕಿದ ನಂತರ ನಾಡಿನಾದ್ಯಂತ ಇದೇ ಕುರಿತಾಗಿ ಪರ ಮತ್ತು ವಿರೋಧಗಳು ನಡೆಯುತ್ತಲೇ ಇದ್ದು, ಇನ್ನೂ  ಅಚ್ಚರಿಯೆಂದರೆ, ಕೇವಲ ವಿಷ್ಣುವರ್ಧನ್ ಅವರ ಸಮಾಧಿಯಲ್ಲದೇ, ಅಭಿಮಾನ್ ಸ್ಟುಡಿಯೋ ಕಟ್ಟಿದ ಬಾಲಕೃಷ್ಣ ಅವರ ಸಮಾಧಿ ಮತ್ತು  ಅದರ ಪಕ್ಕದಲ್ಲೇ ಇದ್ದ ಗಣೇಶನ ಗುಡಿಯನ್ನೂ ಸಹಾ ಕೆಡವಿ ಹಾಕುವ ಮೂಲಕ ಕನ್ನಡ ಚಿತ್ರಾಭಿಮಾನಿಗಳು ಅದರಲ್ಲೂ ವಿಶೇಷವಾಗಿ ವಿಷ್ಣುವರ್ಧನ್ ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ್ದಾರೆ.

ಹಾಗೆ ನೋಡಿದರೆ, ಬಾಲಣ್ಣ ಅವರು ಅಭಿಮಾನ್ ಸ್ಟುಡಿಯೋಸ್ ಕಟ್ಟಿದ್ದೇ ಒಂದು ರೋಚಕವಾಗಿದ್ದು ಮೊದಲು ಆ ಕುರಿತಂತೆ ತಿಳಿದುಕೊಂಡು ಮುಂದಿನ ವಿಚಾರಕ್ಕೆ ಬರೋಣ. ಹಾಸನ ಜಿಲ್ಲೆಯ ಅರಸೀಕೆರೆಯ ಮೂಲದ ಬಾಲಕೃಷ್ಣರವರು ಬಹಳ ಚಿಕ್ಕವಯಸ್ಸಿನಲ್ಲಿಯೇ ತಂದೆ ಮತ್ತು ತಾಯಿಯರನ್ನು ಕಳೆದು ಕೊಂಡು ಅನಾಥ ಮಗುವಾಗಿ ಅವರಿವರ ಮನೆಯಲ್ಲಿ ಬೆಳೆಯುವ ಸಮಯದಲ್ಲೇ ಶ್ರವಣ ಶಕ್ತಿಯನ್ನು ಕಳೆದು ಕೊಂಡು ಎದುರಿಗಿರುವವರು ಮಾತನಾಡುವಾಗ ತೋರುವ ಹಾವ ಭಾವ ಮತ್ತು ಅವರ ತುಟಿಗಳ ಚಲನೆಯಿಂದ ಅರ್ಥಮಾಡಿಕೊಂಡು ಸಂಭಾಷಿಸುವುದನ್ನು ಕರಗತ ಮಾಡಿಕೊಳ್ಳುತ್ತಾರೆ.

ಹೊಟ್ಟೆಯ ಪಾಡಿಗಾಗಿ ತಮ್ಮ ಊರಿಗೆ ಬಂದ ನಾಟಕ ಕಂಪೆನಿಯಲ್ಲಿ ಕಾವಲುಗಾರನಾಗಿ ಸೇರಿಕೊಂಡು ಹಗಲು ಹೊತ್ತಿನಲ್ಲಿ ಬೋರ್ಡು ಬರೆಯುವುದು, ಪೋಸ್ಟರ್ ಅಂಟಿಸುವುದು, ರಂಗಸಜ್ಜಿಕೆ ಹೀಗೆ  ಒಂದೊಂದೇ ರಂಗ ಚಟುವಟಿಕೆಗಳಲ್ಲಿ ತೊಡಸಿಕೊಂಡು ಕೆಲಸವಿಲ್ಲದಿದ್ದಾಗ  ನಾಟಕದ ತಾಲೀಮಿನ್ನು ನೋಡುತ್ತಲೇ ಅಭಿನಯವನ್ನು ಕಲಿತುಕೊಳ್ಳುತ್ತಾರೆ, ಅದೊಮ್ಮೆ  ಅನಿವಾರ್ಯ ಕಾರಣದಿಂದಾಗಿ ನಟರೊಬ್ಬರು ಕೈಕೊಟ್ಟಾಗ, ಆ ನಾಟಕದ ಪ್ರತಿಯೊಂದು ಸಂಭಾಷಣೆಯೂ ಅವರಿಗೇ ಅರಿವಿಲ್ಲದೇ ಮಮನವಾಗಿದ್ದರಿಂದ ಬಾಲಣ್ಣನವರೇ ಕೃಷ್ಣಲೀಲಾ ನಾಟಕದ ಬಣ್ಣ ಹಚ್ಚಿ ನಾಟಕ  ಯಶಸ್ವಿಯಾದ ನಂತರ ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ, ಅದು ಹಾಸ್ಯ ಪಾತ್ರವೇ ಇರಲಿ, ಪೋಷಕ ಪಾತ್ರವೇ ಇರಲಿ ಅಥವಾ ಖಳ ನಟನೆಯೇ ಇರಲಿ, ಕಿವಿ ಕೇಳಿಸಿದಿದ್ದರೂ ಸಹ ನಟರ ತುಟಿ ಚಲನೆ ಮತ್ತು ಆಂಗಿಕ ಅಭಿನಯವನ್ನೇ ಗಮನಿಸುತ್ತಾ ಅದಕ್ಕೆ ತಮ್ಮ ತಕ್ಕಂತೆ ತಮ್ಮದೇ ಮ್ಯಾನರಿಸಂ ನಲ್ಲಿ ತೇಲುವ ಧ್ವನಿಯಲ್ಲಿ ಸಂಭಾಷಣೆ ಹೇಳುತ್ತಾ ಆಭಿನಯಿಸುತ್ತಿದ್ದ ಬಾಲಣ್ಣನವರಿಗೆ ಬಾಲಣ್ಣನವರೇ ಸಾಟಿ.

ನಂತರ ಗುಬ್ಬಿ ಕಂಪನಿ ಸೇರಿಕೊಂಡು ಅಲ್ಲಿ  ರಾಜ್ ಕುಮಾರ್, ನರಸಿಂಹರಾಜು ಮತ್ತು ಜಿ.ವಿ. ಅಯ್ಯರ್ ಮುಂತಾದ ದಿಗ್ಗಜರ ಪರಿಚಯವಾಗಿ 1943ರಲ್ಲಿ ರಾಧಾರಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಾಲಣ್ಣ, ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟ, ಖಳ ನಟ, ಪೋಷಕ ನಟ ಹೀಗೆ ವಿವಿಧ ರೀತಿಯ ಪಾತ್ರಗಳಲ್ಲಿ ಕನ್ನಡಿಗರನ್ನು ರಂಜಿಸಿದ್ದಾರೆ.

60-70ರ ದಶಕಗಳ ವರೆಗೂ ಬಹುತೇಕ ದಕ್ಷಿಣ ಭಾರತದ ಸಿನಿಮಾಗಳೆಲ್ಲವೂ  ದೂರದ ಮದರಾಸಿನಲ್ಲೇ ನಿರ್ಮಾಣವಾಗುತ್ತಿದ್ದ ಕಾರಣ, ಅನಿವಾರ್ಯವಾಗಿ ಕನ್ನಡ ಚಿತ್ರರಂಗದ ನಟ ನಟಿಯರು  ಮದರಾಸಿನಲ್ಲೇ ವಾಸಿಸುತ್ತಿರುತ್ತಾರೆ. ಅಲ್ಲಿನ ಸ್ಟುಡೀಯೋಗಳು ಬೆಳಗಿನ ಹೊತ್ತು ತಮಿಳು ಮತ್ತು ತೆಲುಗು ಚಿತ್ರಗಳಿಗೆ ಮೀಸಲಾಗಿದ್ದು. ಎಲ್ಲರೂ ಮಲಗುವ ರಾತ್ರಿಯ ಹೊತ್ತಿನಲ್ಲಿ ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವಂತ ತಾರತಮ್ಯವಿರುತ್ತದೆ. ಅದೆಷ್ಟೋ ಬಾರಿ  ತಿಂಗಳಾನು ಗಟ್ಟಲೇ ಸ್ಟುಡಿಯೋ ಸಿಗದೇ ಹೋದ ಸಂಧರ್ಭದಲ್ಲಿ  ಅನಿವಾರ್ಯವಾಗಿ ಹೊಟ್ಟೆಯ ಪಾಡಿಗಾಗಿ  ಕನ್ನಡ ಚಿತ್ರರಂಗದ ದಿಗ್ಗಜರುಗಳಾದ  ರಾಜ್ ಕುಮಾರ್, ಜಿ.ವಿ. ಅಯ್ಯರ್,  ನರಸಿಂಹರಾಜು ಬಾಲಣ್ಣನಂತಹವರು ನಾಟಕ ತಂಡವನ್ನು ಕಟ್ಟಿಕೊಂಡು ಉತ್ತರ ಕರ್ನಾಟಕಕ್ಕೆ ಬಂದು ನಾಟಕಗಳನ್ನು ಆಡುತ್ತಾ  ಅಲ್ಪ ಸ್ವಲ್ಖ ಹಣವನ್ನು ಸಂಪಾದಿಸಿ ಕೊಳ್ಳುವಂತಹ ದೌರ್ಭಾಗ್ಯವಿರುತ್ತದೆ. ಹಾಗೆ ನಾಟಕಗಳಲ್ಲಿ ದುಡಿದ ಹಣದಿಂದಲೇ ಈ ಎಲ್ಲಾ ದಿಗ್ಗಜರು ಸೇರಿಕೊಂಡು ರಣಧೀರ ಕಂಠೀರವ ಚಿತ್ರವನ್ನು ನಿರ್ಮಿಸಿ, ನಿರ್ಮಾಪಕರೂ ಆಗಿದ್ದಲ್ಲದೇ ಅದರ ಮೂಲಕ ನೂರಾರು ಕಲಾವಿದರಿಗೆ ಅನ್ನದಾತರೂ ಆದರು ಎಂದರೆ ತಪ್ಪಾಗಲಾರದು.

ಹೀಗೆ ಮದರಾಸಿನ ಸ್ಟುಡಿಯೋದವರು ತಮಿಳು ಮತ್ತು ತೆಲುಗು ಚಿತ್ರಗಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿ ಕನ್ನಡರಂಗವನ್ನು ಎರಡನೇ ದರ್ಜೆಯವರಂತೆ ಕಾಣುತ್ತಿದ್ದದ್ದು ಮತ್ತು  ಹೊಟ್ಟೆಯ ಪಾಡಿಗಾಗಿ ತಮ್ಮ ಸಂಸಾರವನ್ನೆಲ್ಲಾ ಮೆರೆತು ಅನಿವಾರ್ಯವಾಗಿ  ಮದರಾಸಿನಲ್ಲಿಯೇ ಇರಬೇಕಾಗಿದ್ದ ಪರಿಸ್ಥಿತಿಯನ್ನು ಗಮನಿಸಿದ ಕನ್ನಡ ಚಿತ್ರರಂಗದವರು ಅಂದಿನ ಕರ್ನಾಟಕ ಸರ್ಕಾರಕ್ಕೆ ಕರ್ನಾಟಕದಲ್ಲೇ ಸುಸಜ್ಜಿತವಾದ ಸ್ಟುಡಿಯೋ ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡಾಗ, ಅಂದಿನ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪನವರು ಸರ್ಕಾರದ ವತಿಯಿಂದ  ಸ್ಟುಡಿಯೋ ನಿರ್ಮಿಸುವ ಬದಲು  ಚಿತ್ರರಂಗದವರೇ ಸ್ಟುಡಿಯೋ ನಿರ್ಮಿಸಲು ಮುಂದಾದರೆ, ಅವರಿಗೆ ಸಕಲ ಸರ್ಕಾರೀ ಸಹಾಯಗಳನ್ನು ಮಾಡಲಾಗುವುದು ಎಂಬ ಆಶ್ವಾಸನೆಗೆ ಕನ್ನಡದ ಅದೆಷ್ಟೋ ಘಟಾನುಘಟಿ ನಿರ್ಮಾಪಕರೇ ಮುಂದೆ ಬಾರದಿದ್ದಾಗ, ನಮ್ಮ ಬಾಲಣ್ಣನವರು  ಧೈರ್ಯ ಮಾಡಿ, ಸ್ಟುಡಿಯೀ ನಿರ್ಮಿಸಲು ಅಗತ್ಯವಿರುವಷ್ಟು ಜಾಗವನ್ನು ಸರ್ಕಾರ ಕೊಟ್ಟಲ್ಲಿ ತಾವೇ ತಮ್ಮ ಬಳಿ ಇದ್ದ ಬದ್ದ ಹಣದ ಜೊತೆಗೆ ಸಾಲ ಸೋಲ ಮಾಡಿಯೋ ಇಲ್ಲವೇ  ವಿಶಾಲ ಹೃದಯವಂತರಾದ ಕನ್ನಡಿಗರಿಂದ ದೇಣಿಗೆ ಪಡೆದು ಸ್ಟುಡಿಯೋ ನಿರ್ಮಾಣ ಮಾಡುತ್ತೇನೆ ಎಂದು ಮುಂದೆ ಬಂದರು.

ಬಾಲಣ್ಣನವರ ಈ ಮಹದಾಸೆಯನ್ನು ಮೆಚ್ಚಿದ ಅಂದಿನ ಕರ್ನಾಟಕ ಸರ್ಕಾರ ಅವರು 1963ರಲ್ಲಿ ಕೆಂಗೇರಿಯ ಬಳಿ ಸುಮಾರು 20 ಎಕರೆಯಷ್ಟು ಜಾಗವನ್ನು ಕೇವಲ ಮತ್ತು ಕೇವಲ ಸ್ಟುಡಿಯೋ ನಿರ್ಮಾಣಕ್ಕಾಗಿ ಮಾತ್ರವೇ ಜಾಗವನ್ನು ನೀಡಿದಾಗ, ಬಾಲಣ್ಣನವರು ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ಸ್ಟುಡಿಯೋ ನಿರ್ಮಿಸುತ್ತಿರುವ ಕಾರಣ ತಲಾ 100 ರೂ.ಗಳಂತೆ ದೇಣಿಗೆ ಹಣವನ್ನು ನೀಡಬೇಕೆಂದು ಕೊರಿದ್ದಕ್ಕೆ ಸಮಸ್ತ ಕನ್ನಡಿಗರೂ ಸಹೃದಯದಿಂದ ಸಹಾಯ ಮಾಡಿದರೂ ಸಾಲಾದೇ ಹೋದಾಗ ಮತ್ತೇ ನಿಮ್ಮ ಕೈಲಾದಷ್ಟು ಹಣ ನೀಡಿ ಎಂದು ಮತ್ತೆ ಸೆರಗೊಡ್ಡಿದ್ದಕ್ಕೆ ಸ್ಪಂದಿಸಿದ ಕನ್ನಡಿಗರು ಬಾಲಣ್ಣನವರನ್ನು ನಿರಾಸೆ ಗೊಳಿಸದ ಲಕ್ಷಾಂತರ ಜನರು ತಮ್ಮ ಕೈಲಾದ ಮಟ್ಟಿಗೆ ಹಣವನ್ನು ಸಹಾಯ ಮಾಡಿದ್ದನ್ನು ಆ ಚಂದ್ರಾರ್ಕವಾಗಿ ನೆನಪಾಗಿಯೇ ಉಳಿಯಬೇಕೆಂದು ಸರ್ಕಾರ ಮತ್ತು ಕನ್ನಡ ಚಲನಚಿತ್ರದ ಅಭಿಮಾನಿ ದೇವರುಗಳ  ಸಹಾಯದಿಂದ ತಾವು ನಿರ್ಮಿಸಿದ ಸ್ಟುಡಿಯೋಗೆ ಅಭಿಮಾನ್ ಸ್ಟುಡಿಯೋ ಎಂದು ಹೆಸರಿಟ್ಟರು.

ಹೀಗೆ  ಉತ್ತರಹಳ್ಳಿಯ ಬಳಿ ಬಹಳ ಅಭಿಮಾನದಿಂದ 1965ರಲ್ಲಿ ಆರಂಭಗೊಂಡ ಅಭಿಮಾನ್ ಸ್ಟುಡಿಯೋಗೆ ಆರಂಭದಿಂದಲೂ ನೂರೆಂಟು ವಿಘ್ನಗಳು ಮುಂದಾಯಿತು. ನಮ್ಮವರಿಗೆ ನಮ್ಮವರೇ ಶತ್ರುಗಳು ಎನ್ನುವಂತೆ ಆ ಸ್ಟುಡಿಯೋ ನಗರ ಪ್ರದೇಶದಿಂದ ದೂರ ಇದೆ. ಅಲ್ಲಿ ಎಲ್ಲಾ ರೀತಿಯ ಸೌಕರ್ಯ ಇಲ್ಲಾ ಎನ್ನುವ ಕುಂಟು ನೆಪವೊಡ್ಡಿ ನಮ್ಮ ಕನ್ಣಡ ಚಿತ್ರದ ನಿರ್ಮಾಪಕರು ಬಾಲಣ್ಣನವರ ಕೈ ಹಿಡಿಯಲೇ ಇಲ್ಲ. ಬಹುಶಃ ನೇರ ನುಡಿಯ ಬಾಲಣ್ಣನವರಿಗೆ ನಿರ್ಮಾಪಕರನ್ನು ಓಲೈಸಿಕೊಳ್ಳುವ ವ್ಯವಹಾರದ ಚಾಕಚಕ್ಯತೆಯ ಕೊರತೆ ಇದ್ದ ಕಾರಣ ಅವರು ನಿರೀಕ್ಷಿಸಿದ್ದ ಆದಾಯ ಅವರ ಅಭಿಮಾನ್ ಸ್ಟುಡಿಯೋಸ್ ನಿಂದ ಬಾರದೇ ಅದೇ ದುಃಖದಲ್ಲಿಯೇ ತಮ್ಮ ಅಂತಿಮ ದಿನಗಳವರೆಗೂ ಕಣ್ಣೀರಿನ ಕೈ ತೊಳಿಯು ಬೇಕಾದದ್ದೂ ನಿಜಕ್ಕೂ ದೌರ್ಭ್ಯಾಗ್ಯವೇ ಸರಿ.

ಬಾಲಣ್ಣನವರು ಬದುಕಿದ್ದಾಗಲೇ  ಸರ್ಕಾರದಿಂದ ಅನುದಾನವಾಗಿ ಪಡೆದುಕೊಂಡಿದ್ದ 20 ಎಕರೆ ಜಾಗದಲ್ಲಿ 10 ಎಕರೆ ಜಾಗವನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಇನ್ನುಳಿದ 10 ಎಕರೆ ಜಾಗದಲ್ಲಿ ಅಭಿಮಾನ್ ಸ್ಟುಡಿಯೋವನ್ನು ಆಧುನಿಕ ರೀತಿಯಲ್ಲಿ  ಅಭಿವೃದ್ಧಿ ಮಾಡಲು ಮುಂದಾದರೂ ದನದಾಹಿ ಮಕ್ಕಳಿಂದಾಗಿ  ಆ ಹಣವೆಲ್ಲವೂ ನೀರುಪಾಲಾಗಿ ಅಭಿಮಾನ್ ಸ್ಟುಡಿಯೋ ನವೀಕರಣ ನೆನೆಗುದಿಗೆ ಬಿದ್ದು ಅದೇ ನೆನೆಪಿನಲ್ಲಿಯೇ ಬಾಲಕೃಷ್ಣರವರು ಜುಲೈ 19, 1995ರಂದು ನಿಧನರಾದಾಗ ಬಾಲಣ್ಣನವರನ್ನು  ಅದೇ ಅಭಿಮಾನ್ ಸ್ಟುಡಿಯೋದಲ್ಲೇ ಸಮಾಧಿ ಮಾಡಲಾಯಿತು.

ಬಾಲಣ್ಣನವರು ನಿಧನರಾದ ನಂತರ ಬಾಲಕೃಷ್ಣ ಅವರ ಮಗ ಬಿ.ಶ್ರೀನಿವಾಸ್ (ಸುಧಾ ಚಂದ್ರನ್ ಮಾಜಿ ಪತಿ),  ಬಿ. ಗಣೇಶ್ ಮತ್ತು ಮಗಳು ಯೋಗೀತಾ ಬಾಲಿ ನಡುವೆ ಇದೇ ಸ್ಟುಡಿಯೋ ಕುರಿತಾದ ಆಸ್ತಿಯ ಕುರಿತಾಗಿ ವ್ಯಾಜ್ಯಕ್ಕೆ ತಿರುಗಿ ಪರಸ್ಪರ ಒಬ್ಬರ ಮೇಲೊಬ್ಬರು ನ್ಯಾಯಲಯ ಮೆಟ್ಟಿಲು ಹತ್ತಿದ ನಂತರ ಅಭಿಮಾನ್ ಸ್ಟುಡಿಯೋ ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಗಾದರೂ, ಮಗ ಗಣೇಶ್ ಮತ್ತು ಮೊಮ್ಮಗ ಕಾರ್ತಿಕ್ ಅವರ ಆಸ್ಥೆಯ ಮೇರೆಗೆ ಅಲ್ಲೊಂದು ಇಲ್ಲೊಂದು ಸಿನಿಮಾ ಮತ್ತು ಟಿವಿ ಧಾರಾವಾಹಿಗಳು ನಿರ್ಮಾಣಗೊಳ್ಳುತ್ತಿತ್ತು. ಬಾಲಕೃಷ್ಣ ಅವರ ಸಮಾಧಿಯು ಅನಾಥವಾಗಿದ್ದನ್ನು ನೋಡಿದ  ನಟ ಸುದೀಪ್ ಬಹಳ ವರ್ಷಗಳ ಹಿಂದೆಯೇ ಅದಕ್ಕೊಂದು ಮೇಲ್ಚಾವಣಿ ಹಾಕಿಸಿಕೊಟ್ಟಿದ್ದರು.

ಡಿಸೆಂಬರ್ 30, 2009 ರಂದು ನಟ ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಮೃತಪಟ್ಟಾಗ, ಅಭಿಮಾನ್ ಸ್ಟುಡಿಯೋದಲ್ಲಿಯೇ ನಟಿ ಭಾರತಿ ಅವರೊಂದಿಗೆ ಮದುವೆ ಆಗುವ ಬಗ್ಗೆ ವಿಷ್ಣುವರ್ಧನ್ ಪ್ರಸ್ತಾಪಿಸಿದ್ದ ನೆನಪಿನಾರ್ಥ ಅದೇ ಜಾಗದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಅದಕ್ಕೆ ಸಣ್ಣ ಗುಡಿಯೊಂದನ್ನು ಕಟ್ಟಲು ಅಡಿಗಲ್ಲು ಹಾಕಿ, ಅಭಿಮಾನ್ ಸ್ಟುಡಿಯೋಸ್ ನೊಂದಿಗೆ ಇದ್ದ ಅವಿನಾಭಾವ ಸಂಬಂಧವನ್ನು ನೆನೆದು ವಿಷ್ಣುವರ್ಧನ್ ಅವರ ಕುಟುಂಬವನ್ನು ಸಂಪರ್ಕಿಸಿದ್ದ  ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರ ಸ್ವಾಮಿ ಮತ್ತು ವಿಷ್ಣುವರ್ಧನ್ ಅವರ ಪ್ರಾಣ ಸ್ನೇಹಿತ ಅಂಬರೀಷ್ ಅವರಿಬ್ಬರೂ ಸಕಲ ಸರ್ಕಾರಿ ಗೌರವಗಳೊಂದಿಗೆ ಅದೇ  ಅಭಿಮಾನ್ ಗಣೇಶನ ಗುಡಿಯ ಸಮೀಪದಲ್ಲೇ ಅಂತ್ಯಕ್ರಿಯೆಯನ್ನು ನಡೆಸಿ ಅಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಿಸಲು ಸುಮಾರು ಎರಡು ಕೋಟಿ ಹಣವನ್ನು ಬಿಡುಗಡೆ ಮಾಡಲಾಯಿತು.

ಅದೇ ಹಣವನ್ನು ಆ ಜಾಗದ ಮೇಲೆ ಕೇಸು ಹಾಕಿದ್ದ ಗೀತಾ ಬಾಲಿ ಅವರಿಗೆ ಕೊಟ್ಟು ಆಲ್ಲಿನ ಎರಡು ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಅವರ  ಸ್ಮಾಕರ ನಿರ್ಮಾಣ ಮಾಡಲು ನಿರ್ಧರಿಸಿದಾಗ,  ಅದಾಗಲೇ ಆ ಜಾಗಕ್ಕೆ ಚಿನ್ನದಂತಹ ಬೆಲೆ ಬಂದಿದ್ದ ಕಾರಣ, ಈಗ ಎರಡು ಕೋಟಿ ಹಣವನ್ನು ಪಡೆದಲ್ಲಿ ಉಳಿದ ಎಂಟು ಎಕರೆ ಜಮೀನಿನ ಮೇಲೆ ತಮ್ಮ ಹಕ್ಕು ತಪ್ಪಿ ಹೋಗಬಹುದು ಎಂಬ ಯೋಗಿತಾ ಬಾಲಿ ಅವರ ದೂ(ದು)ರಾಲೋಚನೆಯಿಂದಾಗಿ  ಆ ಯೋಜನೆಗಳೆಲ್ಲವೂ ನೆನೆಗುದಿಗೆ ಬಿದ್ದು ಮುಂದು ಸುಮಾರು ವರ್ಷಗಳ ಹೋರಾಟದ ಫಲವಾಗಿ ಮೈಸೂರಿನ  ಹೆಚ್. ಡಿ. ಕೋಟೆ ರಸ್ತೆಯ ಬಳಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗುತ್ತದೆ.

ಇಷ್ಟೆಲ್ಲಾ ಆದರೂ ವಿಷ್ಣುವರ್ಧನ್ ಅಭಿಮಾನಿಗಳು ಮಾತ್ರಾ  ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿದ್ದ ಜಾಗದಲ್ಲಿ ಸಣ್ಣದಾಗಿ ಸ್ಮಾರಕವೊಂದನ್ನು ನಿರ್ಮಿಸಿ ಪ್ರತೀವರ್ಷ  ವಿಷ್ಣುವರ್ಧನ್ ಅವರ ಹುಟ್ಟಿದ ಮತ್ತು ಸತ್ತ ದಿನಗಳಂದು ಅಲ್ಲಿಗೆ ಬಂದು ತಮ್ಮ ಶ್ರದ್ಧಾ ಭಕ್ತಿಯನ್ನು ತೋರಿಸುವ ಮೂಲಕ ತಮ್ಮ ನಾಯಕ ನಟನ ಮೇಲಿನ ಅಭಿಮಾನವನ್ನು ಪ್ರಕಟಪಡಿಸುತ್ತಿದ್ದರು. 

ಹಾಗೆ ನೋಡಿದರೆ ಸ್ಟುಡಿಯೋಗೆಂದು ಸರ್ಕಾರ ಕೊಟ್ಟ ಜಾಗದಲ್ಲಿ ಸ್ಟುಡಿಯೋ ನಿರ್ಮಾಣ ಮಾಡದೇ ಇದ್ದಾಗ, ಉಳಿದಿದ್ದ ಇಡೀ 10 ಎಕರೆ ಜಾಗವನ್ನು ಸರ್ಕಾರಕ್ಕೆ ಬಾಲಣ್ಣ ಅವರ ಕುಟುಂಬ ಹಿಂದುರಿಗಿಸಬೇಕಿತ್ತು. ಅದಿಲ್ಲದೇ ಹೋದಲ್ಲಿ ಸರ್ಕಾರವೇ ಸ್ಟುಡಿಯೋ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸಿ ಆ ಇಡೀ ಹತ್ತು ಎಕರೆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳುವ ಎಲ್ಲಾ ಅಧಿಕಾರ ಇದ್ದರೂ, ಸರ್ಕಾರ ಆದೇಶ ಮಾಡಿದ್ದರೂ ಸಹ ನಿಗದಿತ ಅಧಿಕಾರಿಗಳು ಮತ್ತು ಕೆಲವು ಕಾಣದ ಕೈಗಳ ಹಸ್ತಕ್ಷೇಪದಿಂದಾಗಿ ಬಾಲಣ್ಣ ಅವರ ಕುಟುಂಬದವರಿಂದ ಆ ಜಾಗವನ್ನು ಸರ್ಕಾರ ಪಡೆದುಕೊಳ್ಳಲಿಲ್ಲ. ಈ ಜಪ್ತಿಯ ವಿರುದ್ಧ  2015 ರಲ್ಲಿ ಬಾಲಣ್ಣ ಅವರ ಕುಟುಂಬ ನ್ಯಾಯಾಲಯಕ್ಕೆ ಮೊರೆ ಹೋಗಿ ಜಮೀನು ಜಪ್ತಿ ಆದೇಶಕ್ಕೆ ತಡೆ ತರಲು ಯಶಸ್ವಿ ಆದರು.

ಇವೆಲ್ಲದರ ನಡುವೆ ವಿಷ್ಣುವರ್ಧನ್ ಅವರ ಕೆಲ ಅಭಿಮಾನಿಗಳು  ವಿಷ್ಣುವರ್ಧನ್ ಅವರ ಸಮಾದಿಯ ಸ್ಥಳದ ಕುರಿತಾಗಿ ಬಾಲಣ್ಣ ಕುಟುಂಬದವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದಾಗ, ಈ ಪ್ರಕರಣದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಿಗೆ ಯಾವುದೇ ಹಕ್ಕು ಇಲ್ಲ  ಎಂದು 2023 ರಲ್ಲಿ ತೀರ್ಪು ನೀಡಿದ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದ್ದಲ್ಲದೇ, ಆ ಭೂಮಿ ಹಿರಿಯ ನಟ-ನಿರ್ಮಾಪಕ ಟಿ.ಎನ್. ಬಾಲಕೃಷ್ಣ ಅವರ ಉತ್ತರಾಧಿಕಾರಿಗಳಿಗೆ ಸೇರಿದ್ದು. ವಿಷ್ಣುವರ್ಧನ್ ಕುಟುಂಬ ಹಾಗೂ ಬಾಲಣ್ಣ ಕುಟುಂಬದವರ ಮಾತುಕತೆಯಿಂದ ಬೇಕಾದರೆ ಪ್ರಕರಣ ಇತ್ಯರ್ಥವಾಗಲಿ ಎಂದು ಅಭಿಪ್ರಾಯ ಪಟ್ಟಿತು. ಸರ್ಕಾರದ ಇಬ್ಬಂದಿ ನೀತಿಯಿಂದಾಗಿ ಕಛೇರಿಯಿಂದ ಕಛೇರಿಗೆ ಅದಾಗಲೇ ಅಲೆದೂ ಅಲೆದೂ ಸುಸ್ತಾಗಿದ್ದ ವಿಷ್ಣುವರ್ಧನ್ ಕುಟುಂಬದವರು ಆ ವಿಷಯದಲ್ಲಿ ಆಸಕ್ತಿ ಕಳೆದುಕೊಂಡರು.

ಅಭಿಮಾನ್ ಸ್ಟುಡಿಯೋ ಹತ್ತಿರದಲ್ಲೇ ನೈಸ್ ರಸ್ತೆ ನಿರ್ಮಾಣದ ನಂತರ ಈ ಪ್ರದೇಶದಲ್ಲಿ ಭೂಮಿಯ ಮೌಲ್ಯ ಗಣನೀಯವಾಗಿ ಹೆಚ್ಚಾದ ಪರಿಣಾಮ ಕೆಲವು ಭೂಗಳ್ಳರು ಮತ್ತು ಕೆಲವು ರಾಜಕಾರಣಿಗಳ ಕುಮ್ಮಕ್ಕಿನಿಂದಾಗಿ ಬಾಲಣ್ಣನವರ ಕುಟುಂಬ 2025ರ ಆಗಸ್ಟ್ 7 ಗುರುವಾರ ರಾತ್ರಿ, ಅಭಿಮಾನ್ ಸ್ಟುಡಿಯೋದಲ್ಲಿದ್ದ ಗಣೇಶನ ಗುಡಿ, ವಿಷ್ಣುವರ್ಧನ್ ಅವರ ಸಮಾಧಿ ಮತ್ತು ಎಲ್ಲಕ್ಕಿಂತಲೂ ವಿಷಾಧನೀಯವಾಗಿ  ಬಾಲಣ್ಣ ಅವರ ಸ್ಮಾರಕವನ್ನು ಸೇರಿದಂತೆ ಎಲ್ಲವನ್ನೂ ಏಕಾಏಕಿ ನೆಲಸಮಗೊಳಿಸಿ, ಆ ಜಾಗದಲ್ಲಿ ಬೃಹತ್ ಮಾಲ್ ಮತ್ತು ಬಹುಮಹಡಿ ಕಟ್ಟಡವನ್ನು ಕಟ್ಟಲು ಮುಂದಾಗುವ ಮೂಲಕ ಬಾಲಕೃಷ್ಣ ಕನಸಿನ ಕೂಸು ಅಭಿಮಾನ್ ಸ್ಟುಡಿಯೋಗೆ ಚರಮಗೀತೆ ಹಾಡಿದ್ದಾರೆ.

ಈ ಪ್ರಸಂಗದ ಮೂಲಕ ಈ ದೇಶದಲ್ಲಿ ಹಣವೊಂದಿದ್ದಲ್ಲಿ  ನ್ಯಾಯಾ, ನೀತಿ, ಧರ್ಮ ಎಲ್ಲವನ್ನೂ ಗಾಳಿಗೆ ತೂರಿ ತಮ್ಮ ಅನುಕೂಲಕ್ಕೆ ತಕ್ಕಂತೆ ಫಲಿತಾಂಶವನ್ನು ಪಡೆಯಬಹುದು ಅದರ ಮುಂದೆ ಮಾನವೀಯತೆ ಎಲ್ಲವೂ ನಗಣ್ಯ ಎಂಬುದನ್ನು ತೋರಿಸಿಕೊಟ್ಟಿರುವುದು ನಿಜಕ್ಕೂ ಎಚ್ಚರಿಕೆಯ ಗಂಟೆಯಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment