ಸಾಹಿತಿಗಳಲ್ಲಿ ಎರಡು ಬಗೆಯ ಸಾಹಿತಿಗಳು ಇರುತ್ತಾರೆ. ಒಬ್ಬರು ಒಂದು ವಿಷಯದ ಕುರಿತು ಹಿಂದಿನ ಕಾಲದ ಋಷಿಗಳು ಸುಧೀರ್ಘ ಕಾಲ ತಪಸ್ಸು ಮಾಡಿ ಸಿದ್ಧಿಸಿಕೊಳ್ಳುವಂತೆ ಬಹಳ ವರ್ಷಗಳ ಕಾಲ ಅಧ್ಯಯನ ಮಾಡಿ ಆ ವಿಷಯದಲ್ಲಿ ಪ್ರಭುತ್ವವನ್ನು ಸಾಧಿಸಿ, ತಾವು ಅರ್ಥೈಸಿಕೊಂಡಿದ್ದನ್ನು ಮತ್ತೊಬ್ಬರಿಗೆ ತಮ್ಮ ಸಾಹಿತ್ಯದ ಮೂಲಕ ಹಂಚಿಕೊಂಡು ಜನಮೆಚ್ಚುವ ಜನಪ್ರಿಯರಾಗುತ್ತಾರೆ. ಇನ್ನೂ ಕೆಲವರು ಸಂತೆಗೆ ತಕ್ಕಂತೆ ಒಂದು ಮೊಳ ನೇಯ್ದ ಹಾಗೇ ಅಲ್ಲಿ ಇಲ್ಲಿ ಕದ್ದದ್ದೋ ಇಲ್ಲವೇ ಮತ್ತಾರ ಬಳಿಯೋ ಬರೆಸಿಯೋ, ತಮ್ಮ ಗೆಳೆತನ ಇಲ್ಲವೇ ಅಧಿಕಾರವನ್ನು ಬಳಸಿ ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿ ಪ್ರಖ್ಯಾತರು ಎಂಬಂತೆ ತೋರ್ಪಡಿಸಿಕೊಳ್ಳುತ್ತಾರೆ. ಇದರಲ್ಲಿ ಮೊದಲನೇ ಸಾಲಿನ ಸಾಹಿತಿಳ ಪಟ್ಟಿಗೆ ಸೇರುವ ಕನ್ನಡ ಸಾಹಿತ್ಯ ಲೋಕದ ಜನ ಮೆಚ್ಚಿದ ಸಾಹಿತಿ, ಸರಸ್ವತಿ ಪುತ್ರ, ಕನ್ನಡ ಕಾದಂಬರಿಗಳ ಸರದಾರ ಎಂದೇ ವಿಶ್ವವಿಖ್ಯಾತರಾಗಿದ್ದ ಶ್ರೀ ಎಸ್. ಎಲ್. ಭೈರಪ್ಪನವರು ತಮ್ಮ 95ನೇ ವರ್ಷದಲ್ಲಿ ವಯೋಸಹಜ ಕಾಯಿಲೆಯಿಂದಾಗಿ 2025ರ ಸೆಪ್ಟೆಂಬರ್ 24ರಂದು ಮಧ್ಯಾಹ್ನ 2.38ಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಸುನೀಗಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದ ಸಂಪ್ರದಾಯಸ್ಥ ಕುಟುಂಬದ ಶ್ರೀ ಲಿಂಗಣ್ಣಯ್ಯ ಮತ್ತು ಗೌರಮ್ಮ ದಂಪತಿಗಳಿಗೆ 1934ರ ಜುಲೈ 26ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ಸಂತೇಶಿವರ ಎಂಬ ಹಳ್ಳಿಯಲ್ಲಿ ಜನಿಸಿದ ಭೈರಪ್ಪನವರ ಸಂಪೂರ್ಣ ಹೆಸರು ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (ಶಾಲಾ ದಾಖಲೆಗಳ ಪ್ರಕಾರ ಅವರ ಜನ್ಮ ದಿನಾಂಕ 20 ಆಗಸ್ಟ್ 1931) ಅರ್ಥಾತ್ S L ಭೈರಪ್ಪ. ಹೆಸರಿಗಷ್ಟೇ ಜನ್ಮ ಕೊಟ್ಟ ತಂದೆ ಮತ್ತು ಶ್ಯಾನುಭೋಗರ ವಂಶದವರಾದರೂ, ಬಾಲ್ಯದಿಂದಲೇ ಬಡತನದ ಬೇಗೆಯಲ್ಲಿ ಬೆಂದ ಬೈರಪ್ಪನವರಿಗೆ ತಾಯಿಯೇ ಆಸರೆ. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಆ ಕಾಲದಲ್ಲಿ ಇಡೀ ಊರೂರಿಗೇ ಹರಡುತ್ತಿದ್ದ ಪ್ಲೇಗ್ ಮಹಾಮಾರಿಯಿಂದ ಒಡಹುಟ್ಟಿದವರು ಮತ್ತು ತಾಯಿನನ್ನೂ ಕಳೆದುಕೊಂಡು ಸಣ್ಣ ವಯಸ್ಸಿನಲ್ಲೇ ಅವರೆಲ್ಲರ ಅಂತ್ಯಕ್ರಿಯೆಯನ್ನು ಮಾಡಬೇಕಾದ ಸಂಧರ್ಭ ಬಂದರೂ ಎದೆಗುಂದದೆ ತಮ್ಮ ತಾಯಿಯವರಿಂದ ಜನ್ಮಜಾತವಾಗಿ ಬಂದಿದ್ದ ಧೈರ್ಯದಿಂದ ಅಲ್ಲಿಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡೇ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮುಗಿಸಿದರು.
ಬಾಲ್ಯದಿಂದಲೇ ಹಾಸನ ಜಿಲ್ಲೆಯ ಮತ್ತೊಬ್ಬ ಧೀಮಂತ ಸಾಹಿತಿಗಳಾಗಿದ್ದ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬರಹಗಳಿಂದ ಪ್ರಭಾವಿತರಾಗಿದ್ದ ಭೈರಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಒಂದು ವರ್ಷಗಳ ಕಾಲ ಚನ್ನರಾಯಪಟ್ಟಣದ ಚನ್ನರಾಯಪಟ್ಟಣದ ನವೋದಯ ಪ್ರೌಢಶಾಲೆಯಲ್ಲಿ ಊದಿ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿ ಅಲ್ಲಿ ಧರ್ಮ ಛತ್ರ ದಲ್ಲಿನ ದಾಸೋಹ ಮತ್ತು ಕೆಲವು ಮನೆಗಳಲ್ಲಿ ವಾರನ್ನದಿಂದ ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಿದ್ದಾಗಲೇ ತಮ್ಮ ಸೋದರ ಸಂಬಂಧಿಯ ಸಲಹೆಯಂತೆ ಶಾಲೆಯನ್ನು ತೊರೆದು ಕೆಲ ಕಾಲ ಅವರೊಂದಿಗೆ ಮುಂಬೈಗೆ ವಾಸ್ತವ್ಯ ಬದಲಿಸಿ ಅಲ್ಲಿ ರೈಲ್ವೆ ಪೋರ್ಟರ್ ಆಗಿ ಕೆಲಸ ಮಾಡುತ್ತಿರುವಾಗಲೇ ಸಾಧುಗಳ ಪರಿಚಯವಾಗಿ ಅವರ ಬೆನ್ನತ್ತಿ ಆಧ್ಯಾತ್ಮಿಕ ಸಾಂತ್ವನವನ್ನು ಪಡೆಯಲು ಪ್ರಯತ್ನಿಸಿ ಅದರಲ್ಲಿ ವಿಫಲರಾದ ನಂತರ ಮತ್ತೆ ತಮ್ಮ ಶಿಕ್ಷಣವನ್ನು ಪುನರಾರಂಭಿಸಲು ಮೈಸೂರಿಗೆ ಬಂದಾಗ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ದಿ. ನ. ಕೃಷ್ಣಪ್ಪನವರ ಪರಿಚಯವಾಗಿ ಆ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಅವರ ಮನೆಯ ಸದಸ್ಯರೇನೋ ಎನ್ನುವಷ್ಟರ ಮಟ್ಟಿಗಿನ ಗಳಸ್ಯಕಂಠಸ್ಯ ಗೆಳೆತನವಿತ್ತು. ಹಾಗಾಗಿ ನ. ಕೃಷ್ಣಪ್ಪನವರಿಂದ ಪ್ರೇರಿತರಾಗಿ ಬಾಲ್ಯದಿಂದಲೇ ರಾಷ್ಟ್ರೀಯತೆಯ ಬಗ್ಗೆ ವಿಶೇಷ ಒಲವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದ್ದಲ್ಲದೇ, ತಾವು ಬದುಕಿರುವವರೆಗೂ ತಮ್ಮ ನಂಬಿಕೆ ಮತ್ತು ಸಿದ್ಧಾಂತಗಳನ್ನು ಯಾವುದೇ ಆಮಿಷಗಳಿಗೆ ಬಲಿ ಕೊಡದೇ ಬಲವಾಗಿ ಸಮರ್ಥನೆ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಹುದ್ದೆ ಮತ್ತು ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರಕದೇ ಹೋದರೂ, ಅದಾವುದಕ್ಕೂ ತಲೆ ಕೆಡಸಿಕೊಳ್ಳದೇ ಚರೈವೇತಿ ಚರೀವೇತಿ ಯಹೀತೋ ಮಂತ್ರ ಅಪನಾ ಹೈ ಎನ್ನುತ್ತಾ ತಮ್ಮ ಕೆಲಸಗಳನ್ನು ತಾವು ಮಾಡಿಕೊಂಡು ಹೋಗುತ್ತಾ ಫಲಾಫಲಗಳನ್ನು ದೇವರು (ಜನರು) ಮೇಲೇ ಹಾಕಿದ ಕಾರಣ ಅವರು ತಮ್ಮ ಸಾಹಿತ್ಯ ಕೃಷಿಯನ್ನು ಕನ್ನಡ ಭಾಷೆಯಲ್ಲೇ ಮಾಡಿದರಾದರೂ, ಜನ ಮೆಚ್ಚಿದ ವಿಶ್ವಮಾನ್ಯ ಸಾಹಿತಿಗಳಾಗಿ ಸುಮಾರು 14 ಭಾಷೆಗಳಿಗೆ ಅವರ ಸಾಹಿತ್ಯ ಅನುವಾದವಾಗಿತ್ತು. ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಅತ್ಯಂತ ಹೆಚ್ಚಿನ ಪುಸ್ತಕಗಳು ಮಾರಾಟ ಆದ/ಆಗುತ್ತಿರುವ ಪುಸ್ತಕಗಳ ಲೇಖಕರು ಎಂಬ ಕೀರ್ತಿಗೂ ಭಾಜನರಾಗಿದ್ದರು.
ತಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಕೌಟುಂಬಿಕ ಹಿನ್ನಲೆಯಿಂದ ಬಾಲ್ಯದಿಂದಲೂ ಅಂತರ್ಮುಖಿಯಾಯೇ ಇರುತ್ತಿದ್ದ ಭೈರಪ್ಪನವರಿಗೆ ಹೊಸ ಹೊಸಾ ವಿಷಯಗಳನ್ನು ಅಧ್ಯಯನ ಮಾಡುವ ಮತ್ತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಹಂಬಲ ಚಿಕ್ಕವಯಸ್ಸಿನಲ್ಲಿಯೇ ಇತ್ತು. ಅದೊಮ್ಮೆ ದಸರಾ ಉತ್ಸವದಲ್ಲಿ ಜಟ್ಟಿ ಕಾಳಗವನ್ನು ನೋಡಿ, ನರಪೇತಲ ನಾರಾಯಣರಂತಿದ್ದ ಭೈರಪ್ಪನವರಿಗೆ ತಾವೂ ಸಹಾ ಅವರಂತೆಯೇ ಪೈಲ್ವಾನ್ ಆಗಬೇಕೆಂಬ ಉತ್ಕಟ ಬಯಕೆಯಿಂದ ತಮ್ಮ ಸಹಪಾಠಿ ಚಂದ್ರುವಿನೊಂದಿಗೆ ಹನುಮಾನ್ ಲಂಗೋಟಿ ಧರಿಸಿಕೊಂಡು ಗರಡಿ ಮನೆಗೆ ಹೋಗಿದ್ದರಂತೆ. ಆ ಗರಡಿ ಮನೆಯ ಗುರುಗಳು ಅರ್ಥಾತ್ ಉಸ್ತಾದರಿಗೆ ಚಂದ್ರು ತಮ್ಮ ಗೆಳೆಯ ಒಳ್ಳೆಯ ಬುದ್ಧಿವಂತ, ಚರ್ಚಾ ಪಟು ಹಾಗೇ ಹೀಗೆ ಎಂದು ಹಾಡಿ ಹೊಗಳುತ್ತಿದ್ದಾಗ, ಬಾಲಕ ಭೈರಪ್ಪನವರನ್ನು ಅಡಿಯಿಂದ ಮುಡಿಯವರೆಗೂ ನೋಡಿದ ಉಸ್ತಾದರು, ಇವನ ಮನೆ ಎಲ್ಲಿ? ಪ್ರತೀ ದಿನ ಏನು ತಿಂತಾನೇ? ಎಂದು ಕೇಳಿದಾಗ, ಭೈರಪ್ಪನವರು ವಾರನ್ನಾ ಮತ್ತು ಅನಾಥಾಲಯದಲ್ಲಿ ಆಶ್ರಯ ಪಡೆದದ್ದನ್ನು ಕೇಳಿ ಏ ಪುಳ್ಚಾರ್ ತಿಂದ್ರೇ ಮೈ ಬೆಳಸಿಕೊಳ್ಳಲು ಆಗೋದಿಲ್ಲ. ಅದಕ್ಕೆ ಲೀಟರ್ ಗಟ್ಟಲೇ ಹಾಲು, ತುಪ್ಪಾ ಬಾದಾಮಿ ಪಿಸ್ತಾ ತಿನ್ನಬೇಕಾಗುತ್ತದೆ ಎಂದು ಹೇಳುತ್ತಿದ್ದದ್ದನ್ನು ಕೇಳಿಯೇ ಸುಸ್ತಾದ ಭೈರಪ್ಪನವರು ತಾವು ಪೈಲ್ವಾನ್ ಆಗುವ ಆಸೆಯನ್ನು ಕೈ ಬಿಟ್ಟಿದ್ದರಂತೆ.
ಮೈಸೂರಿನ ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಎ (ಆನರ್ಸ್) – ತತ್ವಶಾಸ್ತ್ರ (ಮೇಜರ್) ಪದವಿ ಆನಂತರ ಮೈಸೂರು ವಿಶ್ವವಿದ್ಯಾಲಯದಿಂದಲೇ ಚಿನ್ನದ ಪದಕದೊಂದಿಗೆ ತತ್ವಶಾಸ್ತ್ರದಲ್ಲಿ ಎಂಎ ಪದವಿ ಪಡೆದು ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನಲ್ಲಿ ಬರೆದ ಡಾಕ್ಟರ್ ಆಫ್ ಫಿಲಾಸಫಿ – ಸತ್ಯ ಮತ್ತು ಸೌಂದರ್ಯ (ಸತ್ಯ ಮತ್ತು ಸೌಂದರ್ಯ) ಪದವಿಯನ್ನು ಪಡೆದರು. ಆರಂಭದಲ್ಲಿ ಭೈರಪ್ಪ ನವರು ಹುಬ್ಬಳ್ಳಿಯ ಶ್ರೀ ಕಾಡಸಿದ್ಧೇಶ್ವರ ಕಾಲೇಜು ನಂತರ ಗುಜರಾತ್‌ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ತದನಂತರ ದೆಹಲಿಯ NCERTಯಲ್ಲಿಯೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿ 1991 ರಲ್ಲಿ ನಿವೃತ್ತರಾದ ಮೇಲೆ ಮೈಸೂರಿನ ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ತರ್ಕ ಮತ್ತು ಮನೋವಿಜ್ಞಾನದ ಉಪನ್ಯಾಸಕರಾಗಿದ್ದರು. ಸಾಯುವ 3 ತಿಂಗಳುಗಳ ವರೆಗೂ ಮೈಸೂರನ್ನೇ ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡಿದ್ದರು.
ತಮ್ಮ ಬದುಕಿನಲ್ಲಿ ಆದ ಕಷ್ಟ ನಷ್ಟಗಳು ತಮ್ಮ ಸೋದರಮಾವನ ಮನೆಯಲ್ಲಿ ಅನುಭವಿಸಿದ ಅವಮಾನ, ಅಪಮಾನಗಳೇ ಅವರ ಮುಂದಿನ ವೈಚಾರಿಕ ಸಾಹಿತ್ಯಕ್ಕೆ ಪ್ರೇರಣೆಯಾಯಿತು. ಪ್ರತಿಯೊಂದನ್ನು ವಿಶ್ಲೇಷಣಾತ್ಮಕವಾಗಿ ಪರಿಶೀಲಿಸುವ, ಪರಿಶೋಧಿಸುವ ಹಾಗೂ ಅಂಥ ಪ್ರಯೋಗಗಳಲ್ಲಿ ತಾವು ಕಂಡುಕೊಂಡ ಸತ್ಯಗಳನ್ನು ಅಷ್ಟೇ ಪ್ರಾಮಾಣಿಕವಾಗಿ ಲೇಖನಿಯ ಮೂಲಕ ಹೊರಹಾಕುವಂಥ ನಿಷ್ಠುರತೆಯನ್ನು ಅವರು ಯೌವನದಿಂದಲೇ ಪ್ರಕಟಿಸುವ ದಾಷ್ಟತನವನ್ನು ತೋರಿದರು. ಅವರ ಮೊದಲ ಸಾಹಿತ್ಯ ಭೀಮಕಾಯ 1952 ಪ್ರಕಟವಾದಾಗ ಅವರಿಗೆ ಕೇವಲ 17-18 ವರ್ಷ ವಯಸ್ಸಾಗಿತ್ತು.
ಪ್ರಕಟಗೊಂಡ ಮೊದಲ ಕೃತಿಯಿಂದಲೇ ಜನರ ಮನಸ್ಸನ್ನು ಗೆದ್ದ ನಂತರ ನಿರಂತವಾಗಿ ಎರಡು ಮೂರು ವರ್ಷಗಳ ಅಂತರದಲ್ಲಿ ಒಂದೊಂದು ಕಾದಂಬರಿಗಳನ್ನು ಬರೆಯುತ್ತಲೇ ಹೋದ ಭೈರಪ್ಪನವರು ಬಿಡುವಿಲ್ಲದ ಬರಹಗಾರ ಎನಿಸಿಕೊಂಡರು. ಬೆಳಕು ಮೂಡಿತು(1959), ಧರ್ಮಶ್ರೀ(1961), ದೂರ ಸರಿದರು(1967), ಮತದಾನ (1965), ವಂಶವೃಕ್ಷ(1965), ಜಲಪಾತ (1967), ನಾಯಿ ನೆರಳು (1968), ತಬ್ಬಲಿಯು ನೀನಾದೆ ಮಗನೆ(1968), ಗೃಹಭಂಗ(1970), ನಿರಾಕರಣ-(1971), ಗ್ರಹಣ-(1972), ದಾಟು (1973), ಅನ್ವೇಷಣ(1976), ಪರ್ವ(1979), ನೆಲೆ (1983), ಸಾಕ್ಷಿ (1986) ಅಂಚು-(1990), ತಂತು (1993), ಸಾರ್ಥ(1998), ಮಂದ್ರ(2001), ಆವರಣ(2007), ಕವಲು (2010), ಯಾನ (2014) ಉತ್ತರಕಾಂಡ-(2017) ಹೀಗೆ ಮೇಲಿಂದ ಮೇಲೆ ಕೃತಿಗಳನ್ನು ರಚಿಸುತ್ತಲೇ ಹೋದ ಭೈರಪ್ಪನವರು ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
ಅವರು ಕಾದಂಬರಿಗಳ ಹೊರತಾಗಿ ಸೌಂದರ್ಯ ಮೀಮಾಂಸೆ ಮತ್ತು ತತ್ವಶಾಸ್ತ್ರದ ಕುರಿತಾಗಿಯೂ ಅನೇಕ ಗ್ರಂಥಗಳನ್ನು ರಚಿಸಿದ್ದು, ಭೈರಪ್ಪನವರ ಕೃತಿಗಳನ್ನು ನವೋದಯ, ನವ್ಯ, ಬಂಡಾಯ ಅಥವಾ ದಲಿತ ಸಾಹಿತ್ಯದಂತಹ ಸಮಕಾಲೀನ ಕನ್ನಡ ಸಾಹಿತ್ಯದ ಯಾವುದೇ ನಿರ್ದಿಷ್ಟ ಪ್ರಕಾರ ಎಂದು ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಏಕೆಂದರೆ ಅವರು ಬರೆಯುತ್ತಿದ್ದ ವಿಷಯಗಳ ವ್ಯಾಪ್ತಿ ಮತ್ತು ಅವರು ಯೋಚನಾ ಲಹರಿ ಬಹಳ ವಿಭಿನ್ನವಾಗಿರುತ್ತಿತ್ತು. ಅವರು ಬರೆದ ಪ್ರತಿಯೊಂದು ಕಾದಂಬರಿಗಳೂ ಸಾಮಾಜಿಕ, ಪೌರಾಣಿಕ, ಸಂಗೀತ ವೈಜ್ಞಾನಿಕ, ಆಧುನಿಕ ತಂತ್ರಜ್ಞಾನ, ಇತಿಹಾಸ ಹೀಗೆ ಹತ್ತು ಹಲವಾರು ವಿಭಿನ್ನ ಕಥಾವಸ್ತುವನ್ನು ಹೊಂದಿದ್ದು, ಪ್ರತಿಯೊಂದು ಕಾದಂಬರಿ ಬಿಡುಗಡೆ ಆದಾಗಲೂ ಓದುಗರ ಬುದ್ಧಿಮತ್ತೆಯನ್ನು ಒರೆಗೆ ಹಚ್ಚಿದರೆ ಇನ್ನೂ ಹಲವು ಬಾರಿ ವಿವಾದಗಳ ಕೇಂದ್ರಬಿಂದುವಾಗಿಯೂ ಮೂಡುತ್ತಿತ್ತು. ಹೀಗೆ ಸುಮಾರು 24 ಕಾದಂಬರಿಗಳು ಮತ್ತು ನಾಲ್ಕು ಸಂಪುಟಗಳ ಸಾಹಿತ್ಯ ವಿಮರ್ಶೆ ಮತ್ತು ಸೌಂದರ್ಯಶಾಸ್ತ್ರ, ಸಾಮಾಜಿಕ ಸಮಸ್ಯೆಗಳು ಮತ್ತು ಸಂಸ್ಕೃತಿಯ ಕುರಿತು ಪುಸ್ತಕಗಳನ್ನು ಬರೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಗೌರವಧನ ಪಡೆಯುವ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸ್ವತ್ವಯುತ ಮತ್ತು ಸತ್ವಯುತ ಸಾಹಿತ್ಯದ ಕನ್ನಡ ಪುಸ್ತಕಗಳನ್ನು ಓದುವವರು ಇನ್ನೂ ಇದ್ದಾರೆ ಮತ್ತು ಕನ್ನಡ ಪುಸ್ತಕಗಳ ಮಾರುಕಟ್ಟೆಯ ವ್ಯಾಪ್ತಿಯೂ ದೊಡ್ಡದಾಗಿ ಇದೇ ಎನ್ನುವುದಕ್ಕೆ ಅವರ ಅನೇಕ ಪುಸ್ತಕಗಳು ಬಿಡುಗಡೆಗೂ ಮುಂಚೆಯೇ ಮರು ಮುದ್ರಣವನ್ನು ಕಾಣುತ್ತಿದ್ದರೆ, ಇನ್ನೂ ಹಲವಾರು ಕಾದಂಬರಿಗಳು ಹಲವಾರು ಬಾರಿ ಮರುಮುದ್ರಣಗಳನ್ನು ಕಂಡಿದ್ದು ಅವರ ಕಾದಂಬರಿಗಳ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.
ಸ್ವಾಮಿನಿಷ್ಠೆ, ತಮ್ಮ ಸಿದ್ದಾಂತ ಮತ್ತು ನಂಬಿಕೆಗಳಿಗೆ ಭೈರಪ್ಪನವರು ಯಾವ ರೀತಿಯಲ್ಲಿ ರೂಡಿಸಿಕೊಂಡಿದ್ದರು ಎನ್ನುವುದಕ್ಕೆ ಈ ಪ್ರಸಂಗವೇ ಸಾಕ್ಷಿ. ಮೂಲತಃ ಮಂಗಳೂರು ಗೋವಿಂದರಾಯರು 1934ರಲ್ಲಿ ಹುಬ್ಬಳ್ಳಿಯಲ್ಲಿ ಸಾಹಿತ್ಯ ಭಂಡಾರ ಎಂಬ ಕನ್ನಡ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಆದರ ಮೂಲಕ ಹೆಸರಾಂತ ಕನ್ನಡದ ಸಾಹಿತಿಗಳ ಕೃತಿಗಳನ್ನು ಪ್ರಕಾಶನ ಮಾಡಲು ಆರಂಭಿಸಿ, 1968ರಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡರು. ಎಸ್.ಎಲ್. ಭೈರಪ್ಪನವರ ಅಷ್ಟೂ ಸಾಹಿತ್ಯವು ಇದೇ ಪ್ರಕಾಶನದಿಂದಲೇ ಪ್ರಕಟವಾಗಿರುವುದು ವಿಶಿಷ್ಟವಾಗಿದೆ. ಅವರ ಪುಸ್ತಗಳಿಗೆ ಬೇಡಿಕೆ ಹೆಚ್ಚಾದಾಗ ನೂರಾರು ಪ್ರಕಾಶಕರು ನಮ್ಮ ಸಂಸ್ಥೆಯ ಮೂಲಕ ನಿಮ್ಮ ಪುಸ್ತಕಗಳನ್ನು ಪ್ರಕಾಶ ಮಾಡಿದರೆ ಇನ್ನೂ ಹೆಚ್ಚು ಹಣ ಕೊಡುತ್ತೇವೆ ಎಂದು ಕೇಳಿದಾಗ, ಛೇ!! ಛೇ!! ಎಲ್ಲಾದರೂ ಉಂಟೇ!! ನಾನು ಏನೂ ಅಲ್ಲದೇ ಇದ್ದಾಗ ಗೋವಿಂದರಾಯರು ನನ್ನ ಪುಸ್ತಕಗಳನ್ನು ಪ್ರಕಾಶಿಸಿ ನನಗೊಂದು ದೊಡ್ಡ ಸ್ಥಾನ ಮಾನ ಕೊಡಿಸಿದ್ದಾರೆ. ಈಗ ದೊಡ್ಡ ಸ್ಥಾನ ಮಾನ ಬಂದ ನಂತರ ಬೇರೆ ಪ್ರಕಾಶನ ಸಂಸ್ಥೆಯ ಮೂಲಕ ಪ್ರಕಟಿಸಿದಾಗ, ನಾನೇನು ತಪ್ಪು ಮಾಡಿದೆ? ಎಂದು ಗೋವಿಂದರಾಯರು ಕೇಳಿದರೆ ಏನು ಉತ್ತರ ನೀಡಲಿ? ಎಂದು ಮುಗ್ಧರಾಗಿ ಕೇಳಿದಾಗ ಅವರ ಸ್ವಾಮಿನಿಷ್ಟೆಯ ಯಾರೂ ಸಹಾ ಚಕಾರ ಎಲ್ಲರಾಗದು
ಅವರ ಗೃಹ ಭಂಗ ಕಾದಂಬರಿಯನ್ನು ಈಟಿವಿ ಕನ್ನಡದಲ್ಲಿ ಗಿರೀಶ್ ಕಾಸರವಳ್ಳಿಯವರು ಧಾರಾವಾಹಿಯಾಗಿಸಿದರೆ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಸಿನಿಮಾಗಳಾಗಿ ಪ್ರಖ್ಯಾತಿ ಗಳಿಸಿದ್ದರೆ, ವಂಶವೃಕ್ಷಕ್ಕೆ 1966 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರೆತಿದೆ. ಭೈರಪ್ಪ ಅವರಿಗೆ 2010ರಲ್ಲಿ ಸರಸ್ವತಿ ಸಮ್ಮಾನ್, 2015ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್, 2016ರಲ್ಲಿ ಪದ್ಮಶ್ರೀ ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇದಲ್ಲದೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಗೌರವ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಎನ್. ಟಿ. ಆರ್. ರಾಷ್ಟ್ರೀಯ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಗುಲಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್ ಮುಂತಾದ ಗೌರವಗಳನ್ನು ಅವರು ಪಡೆದಿದ್ದರು.
ಹಾಗೆ ನೋಡಿದರೆ ಭೈರಪ್ಪನವರ ಬಹುತೇಕ ಕಾದಂಬರಿಗಳು ಸಿನಿಮಾ ಆಗಲು ಯೋಗ್ಯವಾಗಿದ್ದರೂ, ಅದನ್ನು ಸೂಕ್ತವಾಗಿ ತೆರೆಯ ಮೇಲೆ ತರುವಂತಹ ಸಮರ್ಥ ನಿರ್ದೇಶಕರು ಅಥವಾ ಅಂತಹ ಮನಸ್ಥಿತಿಯ ನಿರ್ದೇಶಕರು ಇಲ್ಲದೇ ಹೋದ ಕಾರಣ ಬೆರಳೆಣಿಕೆಯ ಕಾದಂಬರಿಗಳು ಮಾತ್ರಾ ಸಿನಿಮಾ ಆಗಿದೆ. ಹಾಗೆ ನಿರ್ಮಿಸಲು ಮುಂದೆ ಬಂದ ನಿರ್ದೇಶಕರನ್ನು ನೋಡಿ (ಜಿ.ವಿ. ಅಯ್ಯರ್ ಸಹಾ) ಅನೇಕ ಬಾರೀ ಭೈರಪ್ಪನವರೇ ನಿರಾಕರಿಸಿದ ಉದಾಹರಣೆಗಳೂ ಇವೆ. 2009ರಲ್ಲಿ ಅನೇಕ ಪ್ರಶಸ್ತಿ ಪುರಸ್ಕೃತ ನಿರ್ದೇಶಕರಾದ ಪಿ. ಶೇಷಾದ್ರಿಯವರು ವಿಷ್ಣುವರ್ಧನ್ ಅವರನ್ನು ಹಾಕಿಕೊಂಡು ಭೈರಪ್ಪನವರ ನಿರಾಕರಣ ಕಾದಂಬರಿ ಸಿನಿಮಾ ಮಾಡಲು ಇಬ್ಬರ ಒಪ್ಪಿಗೆಯನ್ನು ಪಡೆದುಕೊಂಡು ಅದರ ಬಗ್ಗೆ ಕೆಲಸ ಮಾಡುತ್ತಿದ್ದ ಸಂಧರ್ಭದಲ್ಲಿಯೇ ವಿಷ್ಣುವರ್ಧನ್ ನಿಧನರಾಗುವ ಮೂಲಕ ಆ ಸಿನಿಮಾ ನೆನೆಗುದಿಗೆ ಬಿದ್ದದ್ದು ವಿಷಾಧನೀಯ.
ಆಡು ಮುಟ್ಟದ ಸೊಪ್ಪಿಲ್ಲ. ಭೈರಪ್ಪನವರ ಕಾದಂಬರಿಗಳು ಇರದ ಮನೆಗಳು ಮತ್ತು ಅವರ ಕೃತಿಗಳನ್ನು ಓದಿರದ ಮನಗಳು ಇಲ್ಲಾ ಎಂದು ಹೇಳಿದರೂ ಉತ್ಪ್ರೇಕ್ಷೆಯಾಗಲಾರದು. ವಯಕ್ತಿಕವಾಗಿ ಅವರು ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಲಾಬಿ ಮಾಡಿಲ್ಲವಾದರೂ, ಅಂತಹ ಮೇರು ಸಾಹಿತಿಗಳು ಸುಮಾರು 95 ವರ್ಷಗಳ ಕಾಲ ಸಂತೃಪ್ತ ಜೀವಿಸಿ, ಸುಮಾರು 8 ದಶಕಗಳ ಕಾಲ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಲಿಲ್ಲವಲ್ಲಾ! ಎಂಬ ನಿರಾಸೆ ಕನ್ನಡಿಗರಿಗಂತೂ ಇದ್ದೇ ಇರುತ್ತದೆ. ಭೈರಪ್ಪನವರು ಸಾಹಿತ್ಯ ಕೃತಿಗಳನ್ನು ರಚಿಸಲಿಲ್ಲ ಬದಲಾಗಿ ತಮ್ಮ ಕೃತಿಗಳ ಮೂಲಕ ಇಂದಿನ ಯುವ ಪೀಳಿಗೆಗಳನ್ನು ಚಿಂತನೆಗೆ ಹಚ್ಚಿದರು. ತಮ್ಮ ಕೃತಿಗಳ ಮೂಲಕ ನಾಡು ನುಡಿ, ಸಮಾಜ ಮತ್ತು ಜನಜೀವನಗಳ ನಡುವೆ ಕನ್ನಡ ಸಾಹಿತ್ಯ ಲೋಕ ಇರುವವವರೆಗೂ ‘ಸಾಕ್ಷಿ’ ಭೂತರಾಗಿ ಇದ್ದೇ ಇರುತ್ತಾರೆ ಎಂದರೂ ತಪ್ಪಾಗದು.
ಇತ್ತೀಚಿನ ದಿನಗಳಲ್ಲಿ ಮರೆವಿನ ರೋಗಕ್ಕೆ ತುತ್ತಾಗಿದ್ದರೂ, ಈ 95 ವರ್ಷದಲ್ಲೂ ಅವರ ಸಾಮಾಜಿಕ ಕಳಕಳಿ ಕಿಂಚಿತ್ತೂ ಕಡಿಮೆಯಾಗದೇ, ಅವರ ಹುಟ್ಟೂರಿಗೆ ಕುಡಿಯುವ ನೀರಿನ ಯೋಜನೆಯನ್ನು ತರಲು ಅನೇಕ ಮುಖ್ಯಮಂತ್ರಿಗಳು ಮತ್ತು ರಾಜಕಾರಣಿಗಳ ಮನೆಗಳನ್ನು ಎಡತಾಕಿದ್ದಲ್ಲದೇ ತಮ್ಮದೇ ಹೆಸರಿನಲ್ಲಿ ಟ್ತಸ್ಟ್ ಒಂದನ್ನು ಆರಂಭಿಸಿ ಅದರ ಮೂಲಕ ಸಮಾಜಿಕ ಸೇವೆಗೆ ಮುಂದಾಗಿದ್ದರು. ನಮಗೆ ಸಮಾಜ ಏನು ಕೊಟ್ಟಿದೆಯೋ ಅದನ್ನು ನಾವು ಸಮಾಜಕ್ಕೆ ಹಿಂದಿರುಗಿಸಿ ಕೊಟ್ಟಾಗಲೇ ನಮ್ಮ ಬದುಕಿನ ಬ್ಯಾಲೆನ್ಸ್ ಶೀಟ್ ಪೂರ್ಣವಾಗುತ್ತದೆ ಎಂದು ಅವರು ತಮ್ಮ ಹುಟ್ಟೂರಿನಲ್ಲಿ ಬಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಸಂಧರ್ಭದಲ್ಲಿ ಹೇಳಿದ್ದ ಮಾತು ಇನ್ನೂ ನಮ್ಮ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ.
ತಮ್ಮ ನಿವೃತ್ತಿಯ ನಂತರ ಮೈಸೂರಿನಲ್ಲಿಯೇ ವಾಸವಾಗಿದ್ದ ಭೈರಪ್ಪನವರು ತಮ್ಮ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸಿಸುತ್ತಿದ್ದೂ ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ವಿಶ್ವವಾಣಿ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರ ಮನೆಗೆ ತಮ್ಮ ವಾಸ್ತವ್ಯ ಬದಲಿಸಿದ್ದರು. 2025ರ ಸೆಪ್ಟೆಂಬರ್ 24ರಂದು ಮಧ್ಯಾಹ್ನ 2.38ಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟೋತ್ಥಾನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಇಹಲೋಕವನ್ನು ತ್ಯಜಿಸುವ ಮೂಲಕ ತಮ್ಮ ಬದುಕಿನ ‘ಯಾನ’ ವನ್ನು ಮುಗಿಸಿದ ಎಸ್. ಎಲ್. ಭೈರಪ್ಪ ನಮ್ಮಿಂದ ಭೌತಿಕವಾಗಿ ‘ದೂರ ಸರಿದರು’ ಎನ್ನುವ ಬೇಸರವಿದ್ದರೂ, ತಮ್ಮ ಕೃತಿಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮ ನಿಮ್ಮೆಲ್ಲರ ಮಧ್ಯೆಯೇ ಇದ್ದೇ ಇರುತ್ತಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಬೈರಪ್ಪನವರ ಸಹಪಾಠಿಗಳು ಹಾಗೂ ನನ್ನ ಹಿತೈಷಿಗಳಾದ ಮೈಸೂರಿನ ಶ್ರೀಕಂಠಯ್ಯನವರು ತಮ್ಮ ಗೆಳೆಯನ ಕುರಿತಾಗಿ ಬರೆದಿದ್ದ ಅನಿಸಿಕೆ

ಈ ಲೇಖನ 2025ರ ಸೆಪ್ಟಂಬರ್ 25ರಂದು ವರ್ತಮಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ

ಈ ಲೇಖನ 2025ರ ಅಕ್ಟೋಬರ್ ಸಂಚಿಕೆಯ ಸಂಪದ ಸಾಲು ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ
