ಅದು 70ರ ದಶಕ. ಆಗಿನ್ನೂ ಶಾಲೆಗೆ ಹೋಗಿ ಅಕ್ಷರಾಭ್ಯಾಸ ಕಲಿಯುತ್ತಿದ್ದಂತಹ ಸಂಧರ್ಭ. ನಮ್ಮೂರು ಬಾಳಗಂಚಿಯಲ್ಲಿ ಇರುತ್ತಿದ್ದ ನಮ್ಮ ಅಜ್ಜಿ, ತಾತನಿಗೆ (ತಂದೆಯವರ ತಾಯಿ/ತಂದೆ)ಯವರಿಗೆ ಪ್ರತಿ ಹದಿನೈದು ದಿನ ಇಲ್ಲವೇ ತಿಂಗಳಿಗೊಮ್ಮೆ ಪತ್ರ ಮುಖೇನ ಇಲ್ಲಿಯ ಎಲ್ಲಾ ವಿಷಯಗಳನ್ನು ತಿಳಿಸುವ ಸಂಪ್ರದಾಯವನ್ನು ನಮ್ಮ ತಾಯಿಯವರು ರೂಢಿಯಲ್ಲಿ ಇಟ್ಟುಕೊಂಡಿದ್ದರು. ಅದೇ ರೀತಿ ತಮ್ಮ ತಾಯಿಯ ತವರೂರು ಕೆಜಿಎಫ್ ನಲ್ಲಿದ್ದ ಅಜ್ಜಿ, ಸೋದರ ಮಾವ ಮತ್ತು ಚಿಕ್ಕಂಮ್ಮಂದಿರಿಗೂ ಹಾಗೆಯೇ ಪತ್ರ ಬರೆಯುತ್ತಿದ್ದರು. ಹೀಗೆ ಪ್ರತೀ ಬಾರಿಯೂ ಪತ್ರ ಬರೆಯುವಾಗ Inland coverನ ಕೊನೆಯ ಪುಟ ಖಡ್ಡಾಯವಾಗಿ ನನಗಾಗಿಯೇ ಮೀಸಲಿದ್ದು ಅದರಲ್ಲಿ ನಾನು ಕಲಿತ ಅಕ್ಷರಗಳು, ಮಗ್ಗಿ, ಪದ್ಯ ಇಲ್ಲವೇ ಚಿತ್ರ ವಿಚಿತ್ರಗಳನ್ನು ಬರೆದು ಕಳುಹಿಸಲೇ ಬೇಕೆಂಬ ಅಲಿಖಿತ ನಿಯಮ ನಮ್ಮ ಮನೆಯಲ್ಲಿತ್ತು. ನಮ್ಮ ಪತ್ರಕ್ಕಾಗಿಯೇ ಎರಡೂ ಕಡೆಯ ಅಜ್ಜಿ ತಾತಂದಿರು ಕಾಯುತ್ತಿದ್ದು, ನನ್ನ ಪ್ರತೀ ಬೆಳವಣಿಗೆಯನ್ನೂ ಊರಿನ ಅಕ್ಕ ಪಕ್ಕದವರಿಗೆ ತೋರಿಸಿ ಮೊಮ್ಮಗನ ಬಗ್ಗೆ ಹೆಮ್ಮೆ ಪಡುತ್ತಿದ್ದರು.
ಸ್ವಲ್ಪ ದೊಡ್ಡವನಾಗಿ ಬುದ್ಧಿ ಬಂದ ನಂತರ ಈ ರೂಢಿಯನ್ನು ನಿಲ್ಲಿಸಿದರೂ, ಪ್ರತೀ ವರ್ಷ ಗೌರೀ ಹಬ್ಬದ ಸಮಯದಲ್ಲಿ ದೂರ ದೂರದ ಊರಿನಲ್ಲಿದ್ದ ನಮ್ಮ ಅತ್ತೆಯಂದಿರಿಗೆ ಮನಿ ಆರ್ಡರ್ ಕಳುಹಿಸುವ ಜವಾಬ್ಧಾರಿ ನನ್ನದಾಗಿತ್ತು, ನನ್ನ ಶಾಲೆ ಮಧ್ಯಾಹ್ನದ ಪಾಳಿಯಾಗಿದ್ದ ಕಾರಣ ಸ್ವಲ್ಪ ಮುಂಚೆಯೇ ಮನೆಯಿಂದ ಹೊರಟು ಶಾಲೆಯ ಹತ್ತಿರದಲ್ಲೇ ಇದ್ದ ಅಂಚೆ ಕಛೇರಿಯಲ್ಲಿ ಎಲ್ಲರಿಗೂ ಮನಿ ಆರ್ಡರ್ ಮಾಡಿ ಆ ಹಣ ತಲುಪಿದ್ದಕ್ಕೆ ಅವರಿಂದ acknowlegement ಬಂದರೆ ಅದೇನೋ ಖುಷಿ. ಅದೇ ರೀತಿ 90ರ ದಶಕದವರೆಗೂ ಪ್ರತೀ ವರ್ಷವೂ ನಮ್ಮ ಮನೆಯ ರೇಡಿಯೋಗಳಿಗೆ ಲೈಸನ್ಸ್ ಪಡೆಯಲು ಅಂಚೆ ಕಛೇರಿಗೆ ಎಡತಾಕುತ್ತಿದ್ದೆ.
ಇನ್ನು ದೊಡ್ಡವನಾದ ಮೇಲೆ ಅಂಚೆಯ ಮುಖೇನ ಬರುತ್ತಿದ್ದ ವಿವಿಧ ಮಾಸ ಪತ್ರಿಕೆಗಳಿಗಾಗಿ (ಸೋವಿಯಟ್ ಲ್ಯಾಂಡ್, ಬಾಲ ವಿಜ್ಞಾನ ಮುಂತಾದವುಗಳು) ಮತ್ತು ಮೇಲೆ ದೇಶ ವಿದೇಶಗಳಲ್ಲಿ ಇದ್ದ Pen Friendಗಳಿಂದ ಬರುತ್ತಿದ್ದ/ ಬರೆಯುತ್ತಿದ್ದ ಪತ್ರಗಳಿಗಾಗಿ ಬಕ ಪಕ್ಷಿಯಂತೆ ಕಾಯುತ್ತಿದ್ದ ನೆನಪು ಇನ್ನೂ ಹಚ್ಚ ಹಸುರಾಗಿಯೇ ಇದೆ. ಅರೇ ಅಂಚೆ ಕಛೇರಿಯನ್ನು ಈ ಪರಿಯಾಗಿ ಇವತ್ತು ಏಕೆ ನೆನಪಿಸಿಕೊಳ್ಳುತ್ತಿದ್ದೇನೆ ಎಂದರೆ, ಪ್ರತಿ ವರ್ಷದ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನಾಗಿ ಪ್ರಪಂಚಾದ್ಯಂತ ಆಚರಿಸಲಾಗುತ್ತದೆ.
1874ರಲ್ಲಿ ಸ್ವಿಟ್ಜರ್‌ಲ್ಯಾಂಡ್ ನ ಬರ್ನ್‌ನಲ್ಲಿ ಯುನಿವರ್ಸಲ್ ಫೋಸ್ಟಲ್ ಯೂನಿಯನ್ ಸ್ಥಾಪನೆಯ ನೆನಪಿನಾರ್ಥವಾಗಿ ವಿಶ್ವ ಅಂಚೆ ದಿನಾಚರಣೆಯನ್ನು ಆಚರಿಸುವ ಪ್ರಸ್ತಾಪವನ್ನು 1969 ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಯುಪಿಯು ಕಾಂಗ್ರೆಸ್‌ನಲ್ಲಿ, ಭಾರತೀಯ ನಿಯೋಗದ ಸದಸ್ಯರಾದ ಶ್ರೀ ಆನಂದ್ ಮೋಹನ್ ನರುಲಾ ಅವರು ಸಲ್ಲಿಸಿ, ಈ ಪ್ರಸ್ತಾಪನೆಯನ್ನು ಅಲ್ಲಿನ ಎಲ್ಲಾ ಸದಸ್ಯರೂ ಒಕ್ಕೊರಿಲಿನಿಂದ ಒಪ್ಪಿ ಕೊಂಡ ಪರಿಣಾಮ ಆ ವರ್ಷದ ಅಕ್ಟೋಬರ್ 9 ಅನ್ನು ಮೊದಲು ವಿಶ್ವ ಅಂಚೆ ದಿನವೆಂದು ಘೋಷಿಸಲಾಯಿತು ಈ ಮೂಲಕ ಮಳೆ, ಚಳಿ, ಗಾಳಿ, ಎನ್ನದೇ ತಮ್ಮ ವಯಕ್ತಿಯ ಸುಖಃ ದುಃಖಗಳನ್ನು ಬದಿಗಿಟ್ಟು ಮತ್ತೊಬ್ಬರ ಸುಃಖ ದುಃಖಗಳ ವಿಚಾರವನ್ನು ದೇಶ ವಿದೇಶಾದ್ಯಂತ ತಲುಪಿಸುವ ಅಂಚೆ ಕಛೇರಿಯ ಸಿಬ್ಬಂಧಿ ಮತ್ತು ಅವರ ಸೇವೆಗಳ ಮಹತ್ವವನ್ನು ಎತ್ತಿ ತೋರಿಸುವ ಮತ್ತು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಸಲುವಾಗಿ ಪ್ರಪಂಚದಾದ್ಯಂತ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ.
ಹೀಗೆ UPU ಜಾಗತಿಕ ಸಂವಹನ ಕ್ರಾಂತಿಯ ಆರಂಭವಾಗಿ ಪ್ರಪಂಚದಾದ್ಯಂತ ಒಬ್ಬರಿಂದ ಮತ್ತೊಬ್ಬರಿಗೆ ಪತ್ರ ಬರೆಯುವ ಸಾಮರ್ಥ್ಯವನ್ನು ಪರಿಚಯಿಸಿದ ನಂತರ ಪ್ರಪಂಚದಾದ್ಯಂತದ ಇರುವ ದೇಶಗಳು ತಮ್ಮಲ್ಲಿನ ಅಂಚೆ ಸೇವೆಯ ಮಹತ್ವವನ್ನು ಎತ್ತಿ ತೋರಿಸುವ ಆಚರಣೆಗಳಲ್ಲಿ ಭಾಗವಹಿಸುವುದಲ್ಲದೇ. ಕೆಲವು ದೇಶಗಳಲ್ಲಿ ಅಂಚೆ ಕಚೇರಿಗಳು ವಿಶೇಷ ಅಂಚೆ ಚೀಟಿ ಸಂಗ್ರಹ ಪ್ರದರ್ಶನಗಳನ್ನು ನಡೆಸುತ್ತವೆ. ಇನ್ನೂ ಕೆಲವೆಡೆ, ಅಂಚೆ ಇತಿಹಾಸದ ಕುರಿತು ಕಾರ್ಯಾಗಾರಗಳನ್ನು ನಡೆಸಿದರೆ, UPU ವತಿಯಿಂದ ಯುವಜನರಿಗಾಗಿ ಅಂತರರಾಷ್ಟ್ರೀಯ ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸುತ್ತದೆ. ಇಷ್ಟೇ ಅಲ್ಲದೇ, ಇದೇ ಅಕ್ಟೋಬರ್ 9 ರಂದು , UPU ವರ್ಷದ ಅತ್ಯುತ್ತಮ ಅಂಚೆ ಸೇವೆಗಳನ್ನು ಘೋಷಿಸುತ್ತದೆ.
ಪರಸ್ಪರ ಪತ್ರಗಳನ್ನು ತಲುಪಿಸುವ ಅಂಚೆ ವ್ಯವಸ್ಥೆಗಳು ಹಲವು ಶತಮಾನಗಳಿಂದಲೂ ರೂಡಿಯಲ್ಲಿದ್ದು ಬಹಳ ಹಿಂದಿನ ಕಾಲದಲ್ಲಿ ವಿಶೇಷವಾಗಿ ಪಳಗಿಸಿದ ಪಾರಿವಾಳಗಳ ಕಾಲಿಗೆ ಪತ್ರಗಳನ್ನು ಕಟ್ಟಿ ಪಾರಿವಾಳಗಳ ಮೂಲಕ ಪತ್ರವನ್ನು ತಲುಪಿಸುವ ವ್ಯವಸ್ಥೆ ರೂಢಿಯಲ್ಲಿತ್ತು. ಅದೇ ರೀತಿಯಾಗಿ ರಾಜ ಮಹಾರಾಜರು ಇತಿಹಾಸದ ಕಾಲದಿಂದಲೂ ಪರಸ್ಪರ ಪತ್ರ ವ್ಯವಹಾರಕ್ಕೆಂದೇ, ವಿಶೇಷ ಸಂದೇಶ ವಾಹಕರುಗಳನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ತಲುಪಿಸುವ ವ್ಯವಸ್ಥೆಯನ್ನು ರೂಡಿಸಿಕೊಂಡಿದ್ದರು. 1600 ರ ದಶಕದಿಂದ ಮೊದಲ ರಾಷ್ಟ್ರೀಯ ಅಂಚೆ ವ್ಯವಸ್ಥೆಗಳು ಅನೇಕ ದೇಶಗಳಲ್ಲಿ ಸಂಘಟಿತವಾಗಿ ಆರಂಭವಾಗಿ ಪತ್ರವನ್ನು ಒಂದೂರಿನಿಂದ ಮತ್ತೊಂದು ಊರಿಗೆ ತಲುಪಿಸುವ ವ್ಯಕ್ತಿಗೆ ರನ್ನರ್ ಎಂದು ಕರೆಯಲಾಗುತ್ತಿತ್ತು. (ಫಣಿಯಮ್ಮ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಅವರು ರನ್ನರ್ ಪಾತ್ರವನ್ನು ನಿಭಾಯಿಸಿದ್ದನ್ನು ಇಲ್ಲಿ ಸ್ಮರಿಸಿ ಕೊಳ್ಳಬಹುದಾಗಿದೆ)
ಹೀಗೆ ಯಶಸ್ವಿಯಾಗಿ ಮತ್ತು ವ್ಯವಸ್ಥಿತವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪತ್ರಗಳು ತಲುಪುತ್ತಿದ್ದದ್ದನ್ನು ಮೆಚ್ಚಿಕೊಂಡ ಜನರು ನಿಧಾನವಾಗಿ ಸ್ಥಳೀಯವಾಗಿ ಸುವ್ಯವಸ್ಥಿತವಾದ ಅಂಚೆ ಕಛೇರಿಗಳನ್ನು ದೇಶಾದ್ಯಂತ ಆರಂಭಿಸಿ ಅಂಚೆ ಕಛೇರಿಯ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಿಗೆ ಯಶಸ್ವಿಯಾಗಿ ಪತ್ರಗಳನ್ನು ತಲುಪಿಸುವ ವ್ಯವಸ್ಥೆ ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದದ್ದನ್ನು ಮನಗಂಡ ಜನರು ನಿಧಾನವಾಗಿ ಕೇವಲ ರಾಜ್ಯಕಷ್ಟೇ ಸೀಮಿತ ಗೊಳಿಸದೇ, ದೇಶಾದ್ಯಂತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪತ್ರ ವಿನಿಮಯ ಮಾಡಿಕೊಳ್ಳುವ ಸಲುವಾಗಿ ಸಮುದ್ರ ಮುಖೇನ (ಹಡಗುಗಳ ಸಹಾಯದಿಂದ) ಮತ್ತು ತುರ್ತು ಪರಿಸ್ಥಿತಿಯನ್ನು ಪರಿಗಣಿಸಿ ವಿಮಾನದ ಮೂಲಕವು ತ್ವರಿತ ಗತಿಯಲ್ಲಿ ಅಂಚೆಗಳನ್ನು ತಲುಪಿಸುವ ವ್ಯವಸ್ಥೆ ಆರಂಭವಾಗಿ ದೂರ ದೂರದ ಜನರನ್ನೂ ಹತ್ತಿರ ಸೇರಿಸುವ (connecting the people) ವ್ಯವಸ್ಥೆಯು ಬಹಳ ಬೇಗನೆ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕಾರಣ 1948ರಲ್ಲಿ, ಯುಪಿಯು ವಿಶ್ವಸಂಸ್ಥೆಯ ಏಜೆನ್ಸಿಯಾಯಿತು.
ಇದ್ದಕ್ಕೂ ಮುನ್ನಾ ಒಂದು ಊರಿನಿಂದ ಮತ್ತೊಂದು ಊರಿಗೆ ಪತ್ರವನ್ನು ತಲುಪಿಸಲು ನಿರ್ಧಿಷ್ಟವಾದ ಮೊತ್ತವಿರದೇ ಜನರಿಗೆ ಗಲಿಬಿಲಿ ಉಂಟಾಗುತ್ತಿದ್ದದ್ದನ್ನು ಗಮನಿಸಿದ ಇಂಗ್ಲೆಂಡ್‌ನ ಸರ್ ರೋಲ್ಯಾಂಡ್ ಹಿಲ್ ಅವರು 1840ರಲ್ಲಿ ದೇಶೀಯ ಸೇವೆಯಲ್ಲಿ ಒಂದು ನಿರ್ದಿಷ್ಟ ಶ್ರೇಣಿಯ ತೂಕವನ್ನು ಹೊಂದಿರುವ ಎಲ್ಲಾ ಪತ್ರಗಳಿಗೂ ಒಂದೇ ದರವನ್ನು ವಿಧಿಸಲಾಗುವುದು ಎಂಬ ಹೊಸಾ ಯೋಜನೆಯನ್ನು ತಂದು ಆ ನಿರ್ಧಿಷ್ಟ ಮೊತ್ತ ಪಾವತಿ ಮಾಡಿದ ಗುರುತಿಗಾಗಿ ಒಂದು ವಿಶಿಷ್ಠ ರೀತಿಯ ಚೀಟಿಯನ್ನು ಜಾರಿಗೆ ಗೊಳಿಸಿದ್ದೇ ವಿಶ್ವದ ಮೊತ್ತ ಮೊದಲ ಅಂಚೆ ಚೀಟಿಯಾಗಿ ಚಿರಪರಿಚಿತವಾಯಿತು. ಮುಂದೆ ಈ ರೀತಿಯ ಅಂಚೆ ಚೀಟಿಗಳು ಆಯಾಯಾ ದೇಶದ ಸಂಸ್ಕೃತಿ ಮತ್ತು ಸಂಸ್ಕಾರಗಳ ರಾಯಭಾರಿಯ ರೂಪದಲ್ಲಿ ಮಾರ್ಪಾಟಾಗಿ ಆಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವೂ ಪ್ರಪಂಚಾದ್ಯಂತ ರೂಢಿಗೆ ಬಂದಿತು. 1874 ರಲ್ಲಿ ಬರ್ನ್‌ನಲ್ಲಿ, ಉತ್ತರ ಜರ್ಮನ್ ಒಕ್ಕೂಟದ ಹಿರಿಯ ಅಂಚೆ ಅಧಿಕಾರಿ ಹೆನ್ರಿಕ್ ವಾನ್ ಸ್ಪೀಫನ್ ಅವರು ಅಂತರರಾಷ್ಟ್ರೀಯ ಅಂಚೆ ಒಕ್ಕೂಟಕ್ಕಾಗಿ ಯೋಜನೆಯೊಂದನ್ನು ರೂಪಿಸಿ, ಅವರ ಸಲಹೆಯಂತೆ ಸ್ವಿಸ್ ಸರ್ಕಾರವು 1874ರ ಸೆಪ್ಟೆಂಬರ್ 15 ರಂದು ಬರ್ನ್‌ನಲ್ಲಿ ಅಂತರರಾಷ್ಟ್ರೀಯ ಸಮ್ಮೇಳನವನ್ನು ನಡೆಸಿದಾಗ ಅದರಲ್ಲಿ 22 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿ ಅಲ್ಲಿ ಮಾಡಿದ ಒಪ್ಪಂದದ ಆಧಾರಿತವಾಗಿ ಅಂತರ ರಾಷ್ಟ್ರೀಯ ಅಂಚೆ ಸೇವೆಗಳು ಮತ್ತು ನಿಬಂಧನೆಗಳನ್ನು ವಹಿವಾಟು ಮತ್ತು ಪತ್ರಗಳ ವಿನಿಮಯಕ್ಕಾಗಿ ಒಂದೇ ಅಂಚೆ ಪ್ರದೇಶವಾಗಿ ಸುವ್ಯವಸ್ಥಿತಗೊಳಿಸುವಲ್ಲಿ ಯಶಸ್ವಿಯಾಯಿತು.
ಇನ್ನು ಭಾರತದಲ್ಲಿ ಅಂಚೆ ವ್ಯವಸ್ಥೆಯು ಈಸ್ಟ್ ಇಂಡಿಯಾ ಕಂಪನಿಯ ಅಡಿಯಲ್ಲಿ 1766 ರಲ್ಲಿ ವಾರೆನ್ ಹೇಸ್ಟಿಂಗ್ಸ್ ಕಂಪನಿ ಮೇಲ್ ಎಂಬ ಹೆಸರಿನಲ್ಲಿ ಅಂಚೆ ಸೇವೆಯನ್ನು ಪ್ರಾರಂಭಿಸಿದರೆ, ಮುಂದೆ 1854ರ ಅಕ್ಟೋಬರ್ 1 ರಂದು ಲಾರ್ಡ್ ಡಾಲ್ ಹೌಸಿ ನೇತೃತ್ವದಲ್ಲಿ ಅಂಚೆ ಕಚೇರಿ ಕಾಯಿದೆಯಡಿಯಲ್ಲಿ ಅದನ್ನು ಆಧುನೀಕರಿಸಿದ್ದಲ್ಲದೇ, ಏಕರೂಪದ ಅಂಚೆ ದರಗಳು ಮತ್ತು ಅಂಚೆ ಚೀಟಿಗಳನ್ನು ಭಾರತದಲ್ಲಿ ಜಾರಿಗೆ ತರುವ ಮೂಲಕ ಇಡೀ ವ್ಯವಸ್ಥೆಯನ್ನು ಆಧುನೀಕರಿಸಿದರು. ಈ ಕಾಯಿದೆಯು ಜಾರಿಯಾದ ನಂತರ ದೇಶಾದ್ಯಂತ ಅಂಚೆ ಕಚೇರಿಗಳ ತ್ವರಿತ ಬೆಳವಣಿಗೆಗೆ ಕಾರಣವಾಗಿದ್ದಲ್ಲದೇ, ಅಂಚೆ ವಿತರಣೆಯ ದಕ್ಷತೆ ಮತ್ತು ವೇಗವೂ ಸಹಾ ಸುಧಾರಿಸಿತು. ಇಂದು ಭಾರತೀಯ ಅಂಚೆ ಸೇವೆಯು ಭಾರತದ ಅವಿಭಾಜ್ಯ ಅಂಗವಾಗಿದ್ದು, ಭಾರತೀಯ ಅಂಚೆ ಸೇವೆಯು ವಿಶ್ವದಲ್ಲೇ ಅತಿ ದೊಡ್ಡವಾದ ಸಂಪರ್ಕ ಜಾಲವನ್ನು ಹೊಂದಿದೆ. ಭಾರತದಲ್ಲಿ ಸುಮಾರು 1 ಲಕ್ಷ 50 ಸಾವಿರಕ್ಕೂ ಹೆಚ್ಚು ಅಂಚೆ ಕಚೇರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಅತ್ಯಂತ ಹೆಚ್ಚಿನ ಗುಡ್ಡಗಾಡುಗಳನ್ನು ಹೊಂದಿರುವ ಮತ್ತು ಭಾರತದ ಅತ್ಯಂತ ಪುಟ್ಟ ರಾಜ್ಯಗಳಲ್ಲಿ ಒಂದಾದ ಹಿಮಾಚಲ ಪ್ರದೇಶ ರಾಜ್ಯದಲ್ಲಿ ವಿಶ್ವದ ಅತಿ ಹೆಚ್ಚು ಅಂಚೆ ಕಚೇರಿಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅತ್ಯಂತ ಅಚ್ಚರಿ ಮೂಡಿಸುತ್ತದೆ.
ಎಲ್ಲಾ ಆರಂಭಕ್ಕೂ ಒಂದು ಅಂತ್ಯ ಇರುತ್ತದೆ ಎನ್ನುವಂತೆ, 1969: ಅಮೇರಿಕಾದ ರಕ್ಷಣಾ ಇಲಾಖೆಯು ಸಂವಹನಕ್ಕಾಗಿ ಕಂಪ್ಯೂಟರ್‌ಗಳನ್ನು ಸಂಪರ್ಕಿಸುವ ನೆಟ್‌ವರ್ಕ್ ARPANET ಅನ್ನು ಪ್ರಾರಂಭಿಸಿದರೆ, 1971ರಲ್ಲಿ ರೇ ಟಾಮ್ಲಿನ್ಸನ್ ಎರಡು ಕಂಪ್ಯೂಟರ್‌ಗಳ ನಡುವೆ ಮೊದಲ ನೆಟ್‌ವರ್ಕ್ ಮೂಲಕ ಎಲೆಕ್ಟ್ರಾನಿಕ್ ಮೇಲ್ ಸಂದೇಶವನ್ನು ಕಳುಹಿಸಿ, ಈ ಪ್ರಕ್ರಿಯೆಯು 1982 ಈಮೇಲ್ (ಮೀಮಿಂಚೆ) ಎಂದು ಪ್ರಸಿದ್ಧವಾಯಿತು. 1991ರಲ್ಲಿ ಇಂಟರ್ನೆಟ್ ಸೇವೆ ಸಾರ್ವಜನಿಕವಾಗಿ ಲಭ್ಯವಾಗಿ, 1996ರಲ್ಲಿ ಭಾರತೀಯ ಉದ್ಯಮಿ ಸಬೀರ್ ಭಾಟಿಯಾ ಮತ್ತು ಜ್ಯಾಕ್ ಸ್ಮಿತ್ 1996 ರಲ್ಲಿ ಹಾಟ್‌ಮೇಲ್ ಎಂಬ ಉಚಿತ ಈಮೇಲ್ ಸೇವೆಯನ್ನು ಆರಂಭಿಸಿ ಅದು ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ವಿಶ್ವವಿಖ್ಯಾತವಾಗುತ್ತಿದ್ದಂತೆಯೇ, ಮಾಹಿತಿ ತಂತ್ರಜ್ಞಾನದ ದಿಗ್ಗಜರಾದ ಮೈಕ್ರೋಸಾಫ್ಟ್ ಹಾಟ್‌ಮೇಲ್ ಸೇವೆಯನ್ನು $400 ಮಿಲಿಯನ್‌ಗೆ ಖರೀದಿಸಿ ಅದನ್ನು ಮೈಕ್ರೋಸಾಫ್ಟ್ ಔಟ್‌ಲುಕ್ ಆಗಿ ವಿಕಸಿತ ಗೊಳಿದುತ್ತಿದ್ದಂತೆಯೇ, ಯಾಹೂ ಈಮೇಲ್, ಜಿಮೇಲ್ ಗಳಲ್ಲದೇ ಲಕ್ಷಾಂತರ ಉಚಿತ ಈಮೇಲ್ ಸೇವೆಗಳು ಮತ್ತು ಪ್ರತಿಯೊಂದು ಕಂಪನಿಗಳು ತಮ್ಮದೇ ಆದ ಈಮೇಲ್ ಸೇವೆಗಳನ್ನು ಆರಂಭಿಸಿಕೊಂಡು ಕ್ಷಣ ಮಾತ್ರದಲ್ಲೇ ಸಂದೇಶಗಳು ದೇಶ ವಿದೇಶಕ್ಕೆ ತಲುಪುತ್ತಿದ್ದಂತೆಯೇ, ಸಾಂಪ್ರದಾಯಿಕ ಅಂಚೆ ವ್ಯವಸ್ಥೆಗಳು ನಿಧಾನವಾಗಿ ಅವನತಿಯತ್ತ ಸಾಗತೊಡಗಿದ್ದರೂ, ಇಂದಿಗೂ ಆಧುನಿಕ ಇಂಟರ್ ನೆಟ್ ವ್ಯವಸ್ಥೆ ಇಲ್ಲದ ಲಕ್ಷಾಂತರ ಹಳ್ಳಿಗಾಡು ಪ್ರದೇಶದಲ್ಲಿ ಇಂದಿಗೂ ಅಂಚೆ ವ್ಯವಸ್ಥೆಯೇ ಬಹು ಮುಖ್ಯ ಪಾತ್ರವಹಿಸುತ್ತಿರುವುದು ಅಭಿನಂದನಾರ್ಯವಾಗಿದೆ. ಹಾಗಾಗಿ ಭಾರತೀಯ ಅಂಚೆ ವ್ಯವಸ್ಥೆಯನ್ನು ವಿಶ್ವದಲ್ಲೇ ಅತಿ ದೊಡ್ಡದಾಗಿಸಿದ ಎಲ್ಲಾ ಅಂಚೆ ನೌಕರರಿಗೆ ವಿಶ್ವ ಅಂಚೆ ದಿನದಂದು ಹೃತ್ಪೂರ್ವಕ ಶುಭಾಶಯಗಳು.
ಇನ್ನು ಲೇಖನವನ್ನು ಮುಗಿಸುವ ಮುನ್ನಾ, ನಾನು ಹುಟ್ಟಿದ ದಿನ, ನನ್ನ ವಯಕ್ತಿಯ ಜೀವನದಲ್ಲಿ ಅಂಚೆ ಕಛೇರಿಯೊಂದಿಗೆ ಆದ ರೋಚಕತೆಯನ್ನು ಹಂಚಿಕೊಳ್ಳದೇ ಹೋದಲ್ಲಿ ಲೇಖನದ ಸ್ವಾರಸ್ಯವೇ ಕಡಿಮೆ ಆಗುವ ಕಾರಣ, ಆ ಲೇಖನವನ್ನೂ ಪ್ರಕಟಿಸುತ್ತಿದ್ದೇನೆ. ಸ್ವಲ್ಪ ಸಮಯ ಮಾಡಿಕೊಂಡು ಈ ಕೊಂಡಿಯನ್ನು ಒತ್ತುವ ಮೂಲಕ ಆ ಲೇಖನವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ