ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ

ಮೂಕಂ ಕರೋತಿ ವಾಚಾಲಂ,

ಪಂಗುಂ ಲಂಘಯತೇ ಗಿರಿಮ್,

ಯತ್ಕೃಪಾ ತಮಹಂ ವಂದೇ ಪರಮಾನಂದಂ ಮಾಧವಂ||

ಎಂಬ ಶ್ಲೋಕದಲ್ಲಿ ಮಾಧವನ(ಭಗವಂತ) ಅನುಗ್ರಹವಿದ್ದಲ್ಲಿ ಮೂಗನೂ ಸಹಾ ಮಾತಾನಾಡುತ್ತಾನೆ ಮತ್ತು ಹೆಳವನೂ (ಕುಂಟ) ಸಹಾ ಬೆಟ್ಟವನ್ನು ಹಾರುತ್ತಾನೆ ಎಂಬ ಅರ್ಥವಿದೆ. ಈ ಕಲಿಯುಗದಲ್ಲಿ ನಾವೂ ಭಗವಂತನನ್ನು ನೋಡಿಲ್ಲವಾದರೂ, ದೈವಾಂಶ ಸಂಭೂತರ ಬಗ್ಗೆ ಕೇಳಿದ್ದೇವೆ/ನೋಡಿದ್ದೇವೆ. ಅಂತಹ ದೈವಾಂಶ ಸಂಭೂತರಲ್ಲಿ ಒಬ್ಬರಾಗಿದ್ದಂತಹ ಶೃಂಗೇರಿ ಶಾರದಾ ಪೀಠದ 34ನೇ ಜಗದ್ಗುರುಗಳಾಗಿದ್ದವರ ಬಗ್ಗೆ ಅಸೂಯೆ ಪಡುತ್ತಿದ್ದಂತಹ ಮಾಹಾನ್ ಗರ್ವಿ ವಿದ್ವಾಂಸರೊಬ್ಬರು, ಸ್ವಾಮಿಗಳು ಶೃಂಗೇರಿಯಲ್ಲಿ  ಶಾರದಾ ದೇವಿಯನ್ನು ಪೂಜಿಸುತ್ತಿದ್ದ ಸಮಯದಲ್ಲಿ ಅವರನ್ನು ತರ್ಕಶಾಸ್ತ್ರದಲ್ಲಿ ಸೋಲಿಸುವ ಹುನ್ನಾರದಲ್ಲಿ ಬಂದ್ದದ್ದನ್ನು ಗಮನಿಸಿದ ಸ್ವಾಮಿಗಳು ಕೂಡಲೇ, ಮಠದ ಪರಮಭಕ್ತರಾದಿದ್ದಂತಹ ಆದರೆ, ಹುಟ್ಟು ಮೂಗನಾದ ವ್ಯಕ್ತಿಯತ್ತ ತಮ್ಮ ದಿವ್ಯ ದೃಷ್ಟಿಯನ್ನು ಹಾಯಿಸಿದಾಗ, ಮೇಲಿನ ಶ್ಲೋಕದಲ್ಲಿ ತಿಳಿಸಿದಂತೆ ತನ್ನ ಜೀವಮಾನದಲ್ಲೇ ಮಾತನಾಡದೇ ಇದ್ದಂತಹ ವ್ಯಕ್ತಿ ಕೇವಲ ಮಾತನಾಡಿದ್ದಷ್ಟೇ ಅಲ್ಲದೇ ತರ್ಕ ಶಾಸ್ತ್ರದಲ್ಲಿ ಆ ಗರ್ವಿಷ್ಠ ಪಂಡಿತರನ್ನು ಸೋಲಿಸಿದ್ದರಂತೆ. ಹೀಗೆ ದೇವರನ್ನೇ ನಂಬದ ನಾಸ್ತಿಕರನ್ನೂ ಸಹ ಕೇವಲ ತಮ್ಮ ಒಂದು ನೋಟದಿಂದಲೇ ಆಸ್ತಿಕರನ್ನಾಗಿಸುವ ಅಪರೂಪದ ಶಕ್ತಿಯನ್ನು ಹೊಂದಿದ್ದಂತಹವರ ಜಯಂತಿಯಂದು (ಇಂಗ್ಲೀಷ್ ದಿನಚರಿ ಪ್ರಕಾರ)  ಶ್ರೀ ಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಜಿಗಳನ್ನು ಸ್ಮರಿಸಿಕೊಳ್ಳುವ ಸೌಭಾಗ್ಯ ನಮ್ಮದಾಗಿದೆ.

1892ರ ಅಕ್ಟೋಬರ್ 16 ಆಶ್ವಯುಜ ಶುಕ್ಲ ಏಕಾದಶಿಯಂದು ಶೃಂಗೇರಿಯ ಶ್ರದ್ಧಾವಂತ ತೆಲುಗು ಭಾಷಿಕ ಈಶ್ವರಂ (ಕುಟುಂಬದಲ್ಲಿ ಯಾರಿಗೋ ಈಶ್ವರನ ಸಾಕ್ಷಾತ್ಕಾರವಾಗಿತ್ತು) ಮನೆತನದ ದಂಪತಿಗಳಾದ ಶ್ರೀ ಗೋಪಾಲ ಶಾಸ್ತ್ರಿಗಳು ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ ಹದಿಮೂರು ಮಕ್ಕಳ ಅಕಾಲಿಕ ಅಗಲಿಕೆಯ ನಂತರ  ವಿವಿಧ ಪುಣ್ಯಕ್ಷೇತ್ರಗಳ ಯಾತ್ರೆಯ ಫಲದಿಂದ ಜನಿಸಿದ ಮಗುವಿಗೆ  ಪ್ರೀತಿಯಿಂದ ನರಸಿಂಹ ಶಾಸ್ತ್ರಿ ಎಂಬ ಹೆಸರನ್ನಿಡುತ್ತಾರೆ. ತಾತ ವ್ಯಾಕರಣಶಾಸ್ತ್ರದಲ್ಲಿ ಪಾಂಡಿತ್ಯ ಪಡೆದಿದ್ದರೆ, ತಂದೆಯರು ಸಹ ತಕ್ಕ ಮಟ್ಟಿಗಿನ ವಿದ್ವಾಂಸರಾಗಿದ್ದು, ಲೌಕಿಕ ಜೀವನದಲ್ಲಿ ವೈರಾಗ್ಯ ಹೊಂದಿ ಪರಮಾತ್ಮನನ್ನು ಹುಡಿಕಿಕೊಂಡು ಅವಧೂತರಂತೆ ಮನೆಯನ್ನು ತ್ಯಜಿಸಿ ದೇಶಾಂತರ ಹೋದಾಗ, ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದ ಕಾರಣ, ಬಾಲಕ ನರಸಿಂಹ ಶಾಸ್ತ್ರಿಯನ್ನು ಶೃಂಗೇರಿ ಮಠದ ಅಂದಿನ ಆಡಳಿತಾಧಿಕಾರಿಗಳಾಗಿದ್ದ ಶ್ರೀ ಶ್ರೀಕಂಠ ಶಾಸ್ತ್ರಿಗಳ  ಮನೆಯಲ್ಲಿ ಬೆಳೆಯುವಂತಹ ವ್ಯವಸ್ಥೆ ಮಾಡಿ ಸ್ಥಳೀಯ ಶಾಲೆಗೆ ಸೇರಿಸಲಾಗುತ್ತದೆ.

ಎಂಟನೇ ವಯಸ್ಸಿನಲ್ಲಿ ಬ್ರಹ್ಮೋಪದೇಶವನ್ನು ಮಾಡಿಸಿ ಹನ್ನೆರಡನೇಯ ವಯಸ್ಸಿನಲ್ಲಿ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತೀ ಸ್ವಾಮಿಗಳು ಶೃಂಗೇರಿಯ ಸದ್ವಿದ್ಯಾ ಸಂಜೀವಿನಿ ಪಾಠಶಾಲೆಗೆ ನರಸಿಂಹ ಶಾಸ್ತ್ರಿಯನ್ನು ಸೇರಿಸಿದ್ದಲ್ಲದೇ, ಚಿಕ್ಕಂದಿನಿಂದಲೂ ಬಹಳ ಅಂತರ್ಮುಖಿಯಾಗಿದ್ದ ಅವರ ಎಲ್ಲಾ ಆಗುಹೋಗುಗಳು ಮತ್ತು ಕಲಿಕಾ ಪ್ರಗತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತದ್ದದ್ದಲ್ಲದೇ, 1910 ರಲ್ಲಿ ಬೆಂಗಳೂರಿನಲ್ಲಿ ಶೃಂಗೇರಿಯ ಅಂದಿನ ಜಗದ್ಗುರುಗಳು ಸ್ಥಾಪಿಸಿದ ಭಾರತೀಯ ಗೀರ್ವಾಣ ಪ್ರೌಡ ವಿದ್ಯಾ ವರ್ಧಿನಿ ಶಾಲೆಗೆ ಉನ್ನತ ವೇದಾಂತಿಕ ತರಬೇತಿಗಾಗಿ ಸೇರಿಸುತ್ತಾರೆ.  ಆ ಶಾಲೆಯಲ್ಲಿ ಶ್ರೀ ವೆಲ್ಲೂರು ಸುಬ್ರಹ್ಮಣ್ಯ ಶಾಸ್ತ್ರಿಗಳು ಶ್ರೀ ವೈದ್ಯನಾಥ ಶಾಸ್ತ್ರಿಗಳ ಬಳಿ ಭಟ್ಟ ದೀಪಿಕಾ ಮುಂತಾದ ಗ್ರಂಥಗಳಿಂದ ಪೂರ್ವ ಮೀಮಾಂಸೆಯನ್ನು ಕಲಿತರೆ, ವಿರೂಪಾಕ್ಷ ಶಾಸ್ತ್ರಿಗಳ ಬಳಿ ವೇದಾಂತವನ್ನು ಕಲಿಯುತ್ತಾರೆ.

ಹೀಗೆ ನಿರ್ವಿಘ್ನವಾಗಿ ಕಲಿಕೆಯನ್ನು ಮುಂದುವರೆಸುತ್ತಿರುವಾಗಲೇ, 1912 ರಲ್ಲಿ, ಜಗದ್ಗುರು ನೃಸಿಂಹ ಭಾರತೀ ಮಹಾಸ್ವಾಮೀಜಿಗಳು ಮಠದ  ಭಕ್ತರಾದ ಶ್ರೀ ‍‍ರಾಮಾಶಾಸ್ತ್ರಿಗಳ ಮೂಲಕ  ಮೈಸೂರು ಮಹಾರಾಜ ಶ್ರೀ ನಾಲ್ವಡೀ ಕೃಷ್ಣರಾಜ ಒಡೆಯರ್ ಆವರಿಗೆ ನರಸಿಂಹ ಶಾಸ್ತ್ರಿಯೇ ತಮ್ಮ ಉತ್ತರಾಧಿಕಾರಿ ಎಂಬ ಪತ್ರವನ್ನು ತಲುಪಿಸುತ್ತಾರೆ.  ನರಸಿಂಹ ಶಾಸ್ತ್ರಿಗಳು ಶೃಂಗೇರಿಗೆ ಬರುವ ಮುನ್ನವೇ,  ಶಂಕರಾಚಾರ್ಯರು ನಿಧನರಾದ ಕಾರಣ, 1912ರ  ಏಪ್ರಿಲ್ 7ರಂದು ನರಸಿಂಹ ಶಾಸ್ತ್ರಿಯವರು ಸ್ವಾಮಿ ಸತ್ಯಾನಂದ ಸರಸ್ವತಿಯವರಿಂದ  ಸನ್ಯಾಸತ್ವದ ದೀಕ್ಷೆ ಪಡೆದು  ಶ್ರೀ ಚಂದ್ರಶೇಖರ ಭಾರತೀ ಎಂಬ ಹೆಸರಿನಲ್ಲಿ ಪವಿತ್ರವಾದ ಕಾಶಾಯ ವಸ್ತ್ರ, ದಂಡ, ಕಮಂಡಲ ಗಳನ್ನು ಸತ್ಯಾನಂದರಿಂದ ಸ್ವೀಕರಿಸಿ ಆದಿ ಶಂಕರಾಚಾರ್ಯರ ದಶನಾಮಿ ಸಂಪ್ರದಾಯದಲ್ಲಿ ದೀಕ್ಷೆ ಪಡೆಯುತ್ತಾರೆ.

ಹೀಗೆ ತಮ್ಮ 20ನೇ ವಯಸ್ಸಿನಲ್ಲಿಯೇ, ಶೃಂಗೇರಿ ಶಾರದ ಪೀಠವನ್ನು ಅಲಂಕರಿಸಿದರೂ, ಮಠದ ವ್ಯವಹಾರಗಳ ನಿರ್ವಹಣೆಯಲ್ಲಿ ಬಹಳ ದಕ್ಷರಾಗಿದ್ದಲ್ಲದೇ, ಯಾವುದೇ ರೀತಿಯ ಲೌಕಿಕ ಬಯಕೆಗಳಿಲ್ಲದೆ ಸರಳ ಜೀವನ ನಡೆಸುತ್ತಲೇ, 1916 ರಲ್ಲಿ, ಶೃಂಗೇರಿಯ ಶಾರದ ದೇವಸ್ಥಾನದ ಕುಂಭಾಭಿಷೇಕವನ್ನು ಮಾಡುತ್ತಾರೆ. 1924ರಲ್ಲಿ, ತಮ್ಮ ಮೊದಲ ದಿಗ್ವಿಜಯ ಪ್ರವಾಸದಲ್ಲಿ  ಶೃಂಗೇರಿಯಿಂದ ಮೈಸೂರಿಗೆ ಆಹೋಗಿ ಅಲ್ಲಿ ತಮ್ಮ ಗುರುಗಳ ಮನೆಯಲ್ಲಿ ದೇವಸ್ಥಾನವನ್ನು ಪ್ರತಿಷ್ಠಾಪಿಸಿ ಅದಕ್ಕೆ ಅಭಿನವ ಶಂಕರಾಲಯ ಎಂದು ಹೆಸರಿಸುತ್ತಾರೆ. ಆನಂತರ ಮೈಸೂರಿನಿಂದ ನಂಜನಗೂಡು ಮತ್ತು ಚಾಮರಾಜನಗರ ಮೂಲಕ ಸತ್ಯಮಂಗಲಕ್ಕೆ ಬಂದು  ಅಲ್ಲಿಂದ ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ ಸೇರಿದಂತೆ ತಮಿಳುನಾಡಿನ ದಕ್ಷಿಣ ಭಾಗಗಳಲ್ಲಿ ಪ್ರವಾಸ ಮಾಡಿ,  ತಿರುವಾಂಕೂರು, ತಿರುವನಂತಪುರ ಮತ್ತು ಆದಿಗುರು ಶಂಕರಾಚಾರ್ಯರ ಜನ್ಮಸ್ಥಳವಾದ ಕಾಲಡಿಗೆ ಪ್ರವಾಸ ಮಾಡಿ. ಶೃಂಗೇರಿಗೆ ಹಿಂದಿರುಗುತ್ತಾರೆ.

ತಮ್ಮ ಪ್ರವಾಸದಿಂದ ಶೃಂಗೇರಿಗೆ ಮರಳಿದ ಬಳಿಕ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಒಂದು ರೀತಿಯ ಅವಧೂತ ಸ್ಥಿತಿಗೆ ತಲುಪಿದ್ದಲ್ಲದೇ, ಆತ್ಮದ ಅಂತರಂಗದ-ಆನಂದದಲ್ಲಿ ಲೀನನಾಗಿರುತ್ತಿದ್ದದ್ದಲ್ಲದೇ, 1927 ರಲ್ಲಿ ಕಾಲಡಿಯಲ್ಲೇ ವೇದಾಂತದಲ್ಲಿ ಉನ್ನತ ಶಿಕ್ಷಣ ನೀಡುವ  ವೇದಾಂತ-ಪಾಠಶಾಲ ಎಂಬ ಶಿಕ್ಷಣಸಂಸ್ಥೆಯನ್ನು ಸ್ಥಾಪಿಸಿದರು. ಧ್ಯಾನ, ತಪಸ್ಸು ಮತ್ತು ಸ್ವಯಂ ಚಿಂತನೆಯಲ್ಲಿ ಹೆಚ್ಚು ಸಮಯವನ್ನು  ಕಳೆಯುವ ಸಲುವಾಗಿ 1931ರ ಮೇ 22ರಂದು ಶ್ರೀನಿವಾಸ ಶಾಸ್ತ್ರಿ ಎಂಬ ಬಾಲಕನನ್ನು ತಮ್ಮ ಪೀಠದ ಉತ್ತರಾಧಿಕಾರಿಯನ್ನಾಗಿ ಘೋಷಿಸಿ ಅವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಅಭಿನವ ವಿದ್ಯಾತೀರ್ಥ ಎಂಬ ಯೋಗ ಪಟ್ಟವನ್ನು ನೀಡುತ್ತಾರೆ.

1938 ರಲ್ಲಿ, ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ಬೆಂಗಳೂರು, ಮೈಸೂರು ಮತ್ತು ಕಾಲಡಿಗೆ ಮತ್ತೆ ಯಾತ್ರೆ ಕೈಗೊಂಡು ಅಲ್ಲಿಂದ ಹಿಂದಿರುಗಿದ ನಂತರ, ಶೃಂಗೇರಿಯಲ್ಲಿ ವೇದಾಂತದ ಕುರಿತು ತಮ್ಮ ಪಾಠಗಳನ್ನು ಪುನರಾರಂಭಿಸಿದ್ದಲ್ಲದೇ, ಮಠದ ವತಿಯಿಂದ ಪ್ರಕಟವಾಗುತ್ತಿದ್ದ ಅಸ್ಥಿಕಮಠ ಸಂಜೀವಿನಿ ಪತ್ರಿಕೆಯಲ್ಲಿ ತಮ್ಮ ಚಿಂತನಶೀಲ ಮತ್ತು ಪಾಂಡಿತ್ಯಪೂರ್ಣ ಲೇಖನಗಳ ಮೂಲಕ ಪಾಂಡಿತ್ಯವನ್ನು  ಜಗಜ್ಜಾಹೀರು ಪಡಿಸಿದ್ದಲ್ಲದೇ, ತಮ್ಮ ಬಳಿ ಬರುತ್ತಿದ್ದ ಸಾರ್ವಜನಿಕರು/ ಆಸ್ತಿಕರ ಭಕ್ತಾದಿಗಳ ಆಧ್ಯಾತ್ಮಿಕ ಮತ್ತು ಧಾರ್ಮಿಕ ಜಿಜ್ಞಾಸೆಗಳನ್ನು ಬಹಳ ಸರಲವಾಗಿ ಮತ್ತು ವಿನಂಮ್ರತೆಯಿಂದ ವಿವರಿಸುವ ಕಲೆ ಅವರಿಗೆ ಕರಗತವಾಗಿತ್ತು. ಆದಿ ಶಂಕರಾಚಾರ್ಯರ ವಿವೇಕ ಚೂಡಾಮಣಿಯ ಕುರಿತಾದ  ಭಾಷ್ಯವಲ್ಲದೇ, ಅನೇಕ ಗ್ರಂಥಗಳಿಗೆ ವ್ಯಾಖ್ಯಾನವನ್ನು ಬರೆದಿದ್ದಲ್ಲದೇ, ಗುರುರಾಜ ಸೂಕ್ತಿ ಮಾಲಿಕಾ  ಎಂಬ ಸುಮಾರು 400 ಪುಟಗಳ 36 ಸಂಯೋಜನೆಗಳನ್ನು ಒಳಗೊಂಡಿರುವ ಸ್ತೋತ್ರಗಳನ್ನು ಸಂಸ್ಕೃತ ಬರೆದಿದ್ದಾರೆ.

1945 ರ ನಂತರ, ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ತಮ್ಮ ಎಲ್ಲಾ ಚಟುವಟಿಕೆಗಳಿಂದ ವಿಮುಕ್ತರಾಗಿದ್ದರೂ, ಆಗಸ್ಟ್ 24, 1954 ರಂದು, ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ. ರಾಜೇಂದ್ರ ಪ್ರಸಾದ್ ಅವರು ಶೃಂಗೇರಿಗೆ ಭೇಟಿ ನೀಡಿ, ಸ್ವಾಮಿಗಳಿಗೆ ಗೌರವ ಸಲ್ಲಿಸಿದ್ದಲ್ಲದೇ, ಧರ್ಮ, ವಿವಿಧ ಧರ್ಮಗ್ರಂಥಗಳು  ಮತ್ತಿತರ ಆಥ್ಯಾತ್ಮಿಕ/ಧಾರ್ಮಿಕ ಸಂಬಂಧಿತ ವಿಷಯಗಳ ಕುರಿತು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಿದ್ದದ್ದು ಗಮನಾರ್ಹವಾಗಿದೆ.

ಸೆಪ್ಟೆಂಬರ್ 26, 1954 ಮಹಾಲಯ ಅಮಾವಾಸ್ಯೆಯಂದು  ಶೃಂಗೇರಿ ಮಠದ ಪಕ್ಕದಲೇ  ಹರಿಯುವ ತುಂಗಾ ನದಿಯಲ್ಲಿ ಶ್ರೀ  ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿಗಳು ತಮ್ಮ ಸ್ನಾನ ವಿಧಿಯನ್ನು ಮುಗಿಸಿ ಪದ್ಮಾಸನದಲ್ಲಿ ಕುಳಿತು, ನದಿಯ ದಡದಲ್ಲಿ ವಿದೇಹ ಮುಕ್ತಿ ಪಡೆಯುತ್ತಾರೆ. ಅವರ ಭೌತಿಕ-ದೇಹ ನದಿಯಲ್ಲಿ ತೇಲುತ್ತಿರುವುದನ್ನು ಕಂಡ ಕೂಡಲೇ ಅವರ ಸಹಾಯಕರಾದ ರಾಮಸ್ವಾಮಿ ಮತ್ತು ಕೇಶವಾಚಾರಿಯವರು ಸ್ವಾಮಿಗಳ ದೇಹವನ್ನು ದಡಕ್ಕೆ ತಂದು, ಅವರ ಉತ್ತರಾಧಿಕಾರಿಯಾದ ಶ್ರೀ ಅಭಿನವ ವಿದ್ಯಾತೀರ್ಥರ ಸಮ್ಮುಖದಲ್ಲಿ ಅವರ ದೇಹವನ್ನು ಗುರುಗಳ ಸಮಾಧಿ ಪಕ್ಕದಲ್ಲೇ  ಸಮಾಧಿಯನ್ನು ಮಾಡಿ,  ಆ ಸಮಾಧಿಯ ಮೇಲೆಯೇ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅದಕ್ಕೆ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿಗಳ ಲಿಂಗ  ಎಂದು ಕರೆದು ಇಂದಿಗೂ ಸಹಾ ಅಲ್ಲಿ ನಿತ್ಯ ಪೂಜೆ ನಡೆಸಲಾಗುತ್ತದೆ.

20ನೇ ಶತಮಾನದಲ್ಲಿ ಸನಾತನ ಸಂಸ್ಕೃತಿಯ ಅತ್ಯಂತ ಮಹತ್ವದ ಆಧ್ಯಾತ್ಮಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು,  ಭಗವಂತನನ್ನು ಆರಾಧಿಸುವ  ವಿಧಾನಗಳಿಗೆ ಅವರು ಮಾದರಿಯಾಗಿದ್ದರು. ಭಗವಂತನಲ್ಲಿ ಅವರ ಶ್ರದ್ಧೆ ಮತು ಭಕ್ತಿಗಳು ಯಾವ ಪರಿಯಾಗಿತ್ತೆಂದರೆ, ನರಸಿಂಹ ಜಯಂತಿಯಂದು ಬೆಳಗಿನಿಂದಲೇ ಆರಂಭವಾಗುತ್ತಿದ್ದ ಅವರ ಪೂಜೆ ಅನೇಕ ಬಾರಿ ಮಧ್ಯಾಹ್ನದಿಂದ ಸಂಜೆಯವರೆಗೆ ನಿರಂತವಾಗಿ ಇರುತ್ತಿತ್ತು. ಹೀಗೆ ತಮ್ಮ  ಶ್ರದ್ಧೆ ಭಕ್ತಿ ಮತ್ತು ಆದರ್ಶಗಳನ್ನು ಎಲ್ಲರೂ ಅನುಕರಣೆ ಮಾಡುವಂತಹ ಪರಮಹಂಸ ಪ್ರಾತಃಸ್ಮರಣಿಯರನ್ನು ಅವರ ಜಯಂತಿಯಂದು ಸ್ಮರಣೆ ಮಾಡುವುದು ಪ್ರತಿಯೊಬ್ಬ ಸನಾತನಿಯ ಆದ್ಯ ಕರ್ತವೇ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

 

ಈ ಲೇಖನ ತುಮಕೂರು ವಾರ್ತೆ ಪತ್ರಿಕೆಯ 2025ರ ಅಕ್ಟೋಬರ್ 16ರ ಸಂಚಿಕೆಯಲ್ಲಿ ಪ್ರಕಟವಾಗಿದೆ

Leave a comment