ರಾಷ್ಟ್ರಕವಿಗಳಾದ ಶ್ರೀ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎನ್ನುವ ಗೀತೆ ನಮ್ಮ ನಾಡ ಗೀತೆ ಎನ್ನುವುದು ಎಲ್ಲಾ ಕನ್ನಡಿಗರಿಗೂ ತಿಳಿದ ವಿಷಯವಾಗಿದ್ದು, ಇದೇ ನಾಡಗೀತೆಯನ್ನು ಪ್ರತೀ ದಿನವೂ ಶಾಲಾ ಕಾಲೇಜುಗಳಲ್ಲಿ ಹಾಡಲಾಗುತ್ತದೆ. ಆದರೆ ಸ್ವಾತ್ರಂತ್ರ್ಯ ಪೂರ್ವದಲ್ಲಿ ಕುವೆಂಪು ಅವರ ನಾಡಗೀತೆ ರಚನೆ ಆಗುವ ಮುನ್ನಾ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಹಾಡು ಅವಿಭಜಿತ ಕರ್ನಾಟಕದಲ್ಲಿ ಬಹಳ ಪ್ರಖ್ಯಾತವಾಗಿದ್ದು ಅದೇ ಗೀತೆ ನಾಡಗೀತೆಯಾಗಿತ್ತು. ಅಂತಹ ಸುಶ್ರಾವ್ಯವಾದ ಮತ್ತು ಕನ್ನಡಿಗರನ್ನು ಜಾಗೃತಗೊಳಿಸುವ ಗೀತೆಯನ್ನು ರಚಿಸಿದ್ದ ಶ್ರೇಷ್ಠ ಕವಿ, ಶ್ರೇಷ್ಠ ನಾಟಕಕಾರರೂ,ನಟರೂ,ಚಿಂತಕರೂ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಂತಹ ಬಹುಮುಖ ಪ್ರತಿಭೆಯ ಮೇರು ವ್ಯಕ್ತಿ ಶ್ರೀಯುತ ಹುಯಿಲಗೋಳ ನಾರಾಯಣರಾಯರ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಗದಗದ ಹುಯಿಲಗೋಳ ಗ್ರಾಮದಲ್ಲಿ ಶಿಕ್ಷರರಾಗಿದ್ದಂತಹ ಶ್ರೀ ಕೃಷ್ಣ ರಾಯರು ಮತ್ತು ರಾಧಾಬಾಯಿ (ಬಹಿಣಕ್ಕ) ದಂಪತಿಗಳ ಮಗನಾಗಿ 04.10.1884ರಲ್ಲಿ ನಾರಾಯಣ ರಾಯರು ಜನಸಿದರು. ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಬಹಳ ಚುರುಕಾಗಿದ್ದ ನಾರಾಯಣರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟೂರು, ನಂತರ ಗದಗ, ಗೋಕಾಕ, ಧಾರವಾಡಗಳಲ್ಲಿ ಮಾಡುತ್ತಲೇ, ಸೂತ್ರದ ಗೊಂಬೆಯಾಟ (ಚಕ್ಕಳ ಬೊಂಬೆಯಾಟ), ಕಿಳ್ಳಿಕ್ಯೇತರ ಆಟ, ಸಣ್ಣಾಟ, ಬಯಲಾಟ, ದೊಡ್ಡಾಟಗಳನ್ನು ನೋಡ ನೋಡುತ್ತಲೇ ಅವರಿಗೆ ಸನಾತನ ಪರಂಪರೆಯ ಪುರಾಣ ಪುಣ್ಯ ಕಥೆಗಳು ಬಗ್ಗೆ ತಿಳಿಯುವಂತಾದ ಪರಿಣಾಮ, ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಇಂದ್ರಜೀತವಧೆ, ಗರುಡ ಗರ್ವಭಂಗ ಎಂಬ ನಾಟಕಗಳನ್ನು ತಾವೇ ತಮಗೆ ತೋಚಿದಂತೆ ಬರೆದು ಅದನ್ನು ತಮ್ಮ ಗೆಳೆಯರೊಡನೆ ಸೇರಿಕೊಂದು ಎಲ್ಲರ ಮುಂದೆ ಪ್ರಸ್ತುತಪಡಿಸಿ ಸೈ ಎನಿಸಿಕೊಂಡಿದ್ದರು.
1902ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆ ಪೂರ್ಣಗೊಳಿಸಿ, ಉನ್ನತ ಶಿಕ್ಷಣಕ್ಕಾಗಿ ರಾಂಗುಲರ್ ಪರಾಂಜಪೆ ಅವರು ಪ್ರಾಂಶುಪಾಲರಾಗಿದ್ದಂತಹ ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಸೇರಿದಾಗ, ಆ ಕಾಲದಲ್ಲಿ ಗೋಪಾಲಕೃಷ್ಣ ಗೋಖಲೆಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಅನೇಕ ಸ್ವಾತ್ರಂತ್ರ್ಯ ಹೋರಾಟಗಳಿಂದ ಪ್ರಭಾವಿತರಾಗಿ ಗೋಖಲೆಯವರ ಬಹಳಷ್ಟು ಭಾಷಣಗಳಿಂದ ಪ್ರಭಾವಿತರಾದ ಕಾರಣ ತಮ್ಮ ತಾರುಣ್ಯದಲ್ಲೇ ಸ್ವಾತಂತ್ರ್ಯ ಹೋರಾಟದೆಡೆ ಸಹಜವಾಗಿಯೇ ಆಕರ್ಷಿತರಾಗಿದ್ದರು. ಗೋಪಾಲಕೃಷ್ಣ ಗೋಖಲೆಯವರು ತಮ್ಮ ಭಾಷಣವನ್ನು ಮರಾಠಿ ಭಾಷೆಯಲ್ಲಿ ಮಾಡುತ್ತಿದ್ದ ಕಾರಣ ನಾರಾಯಣರಾಯರು ಮರಾಠಿ ಭಾಷೆಯನ್ನು ಕಲಿಸು ಸುಲಲಿತವಾಗಿ ಮರಾಠಿಯನ್ನು ಅರ್ಥ ಮಾಡಿಕೊಳ್ಳುವಂತಾದರೂ, ಅವರಲ್ಲಿದ್ದ ಕನ್ನಡತನ ಜಾಗೃತವಾಗಿದ್ದ ಕಾರಣ, ತಕ್ಕ ಮಟ್ಟಿಗೆ ಕನ್ನಡಿಗರ ಸಂಖ್ಯೆಯೂ ಪುಣೆಯಲ್ಲಿ ಕಾರಣ ಅಲ್ಲಿನ ಗ್ರಂಥಾಲಯದಲ್ಲಿ ಕನ್ನಡಕ್ಕೆ ಮನ್ನಣೆ ಇರದೇ,ಕನ್ನಡದ ಪುಸ್ತಕಗಳು ಇರದೇ ಇದ್ದದ್ದನ್ನು ಗಮನಿಸಿ ಅಲ್ಲಿನ ಪ್ರಾಚಾರ್ಯರಿಗೆ ಮನವಿ ಸಲ್ಲಿಸಿ ಕನ್ನಡ ಪುಸ್ತಕಗಳು ಪುಣೆಯ ಗ್ರಂಥಾಲಯ ಸೇರುವುದಕ್ಕೆ ನಾರಾಯಣ ರಾಯರು ಕಾರಣವಾಗಿದ್ದಲ್ಲದೇ, ಅಂದಿನ ಕಾಲದಲ್ಲಿ ಕನ್ನಡದಲ್ಲಿ ಏನಿದೆ? ಎಂದು ಮರಾಠಿಗರು ಹೀಯಾಳಿಸುತ್ತಿದ್ದಕ್ಕೆ ಪ್ರತಿಯಾಗಿ ಕನ್ನಡಿಗರು ಸುಮ್ಮನಿರದೇ, ಸಾಧ್ಯವಾದಷ್ಟು ಕನ್ನಡ ಚಟುವಟಿಕೆಗಳಲ್ಲಿ ಭಾಗವಹಿಸಿ ಕನ್ನಡಾಭಿಮಾನವನ್ನು ಬೆಳೆಸಿಕೊಳ್ಳುವಂತೆ ಮನವಿ ಮಾಡಿದ್ದರು.
1907ರಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿಜೀವನ ಶುರುಮಾಡಿದಾಗ, ವರಕವಿ ದ. ರಾ. ಬೇಂದ್ರೆಯವರು ಆ ಶಾಲೆಯ ವಿದ್ಯಾರ್ಥಿಯಾಗಿದ್ದರು. ಸುಪ್ರಸಿದ್ದ ಆಂಗ್ಲ ಕವಿ ವಿಲಿಯಂ ಷೇಕ್ಸ್ ಪಿಯರ್ ಅವರ ಮರ್ಚೆಂಟ್ ಆಫ್ ವೆನ್ನಿಸ್ ನಾಟಕವನ್ನು ಅಲ್ಲಿನ ವಿದ್ಯಾರ್ಥಿಗಳಿಂದಲೇ ಆಡಿಸಿ ಎಲ್ಲರ ಮನಸ್ಸನ್ನು ಗೆದ್ದ ನಾರಾಯಣರಾಯರು 1908ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನದ ಭಾಗವಾಗಿದ್ದದ್ದು ಗಮನಾರ್ಹವಾಗಿತ್ತು. 1910ರಲ್ಲಿ ವಜ್ರಮುಕುಟು ಎಂಬ ನಾಟಕ ಬರೆದು ಅದು ರಂಗದಲ್ಲಿ ಪ್ರದರ್ಶನ ಆಗುವಷ್ಟರಲ್ಲೇ ಅವರಿಗೆ ಕಾನೂನು ಅಭ್ಯಾಸ ಮಾಡಬೇಕೆಂಬ ಇಚ್ಚೆಯಾಗಿ ತಮ್ಮ ಶಿಕ್ಷಕ ವೃತ್ತಿಯನ್ನು ಬಿಟ್ಟು, ಮುಂಬಯಿಗೆ ತೆರಳಿ ಅಲ್ಲಿ ಕಾನೂನು ಪದವಿ ಪಡೆದು, ಗದುಗಿನಲ್ಲಿ ತಮ್ಮ ವಕೀಲಿಕೆ ಆರಂಭಿಸಿದರು.
ಶುಭ್ರ ಖಾದಿ ಧೋತರ, ಖಾದಿ ಶರ್ಟು, ಕೊರಳನ್ನು ಬಿಗಿಯಾಗಿ ಸುತ್ತಿಕೊಂಡಂತಿದ್ದ ತುಂಬು ತೋಳಿನ ಖಾದಿ ಜೋಧಪುರಿ ಕೋಟು, ಇನ್ನು ತಲೆ ಮೇಲೆ ಅಂದವಾಗಿ ಸುತ್ತಿದ ಖಾದಿ ರುಮಾಲು, ಹೆಗಲ ಮೇಲೊಂದು ಬಿಳಿ ಶಲ್ಯ ಹೊದ್ದು ಬಹಳ ಸರಳ ಜೀವಿಯಾಗಿದ್ದ ನಾರಾಯಣರಾಜರು ಹೆಸರಿಗಷ್ಟೇ ವಕೀಲರಾದರೂ. ಅವರಲ್ಲಿದ್ದ ದೇಶಾಭಿಮಾನ, ಕನ್ನಡಾಭಿಮಾನ ಸಹಜವಾಗಿ ಆವರನ್ನು ಸ್ವಾತ್ರಂತ್ರ್ಯ ಚಳುವಳಿಯತ್ತ ಕರೆದೊಯ್ಯಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುತ್ತಲೇ, ದೇಶಾಭಿಮಾನ ಹೆಚ್ಚಿಸುವ ಕೆಲಸಕ್ಕಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಸಾಹಿತ್ಯವನ್ನು ಅದ್ಭುತವಾಗಿ ಬಳಸಿಕೊಂಡ ರಾಯರು, ತಮ್ಮ ಲೇಖನಗಳು ಮತ್ತು ನಾಟಕಗಳ ಮೂಲಕ ಜನ ಜಾಗೃತಿಯನ್ನು ಮಾಡಿದ್ದಲ್ಲದೇ, ನಮ್ಮ ನಾಟ್ಯ ವಿಲಾಸಿ ಮಿತ್ರರ ಸಹಕಾರದೊಂದಿಗೆ ಗದುಗಿನ ವಿದ್ಯಾದಾನ ಸಮಿತಿಯ ಪ್ರೌಢಶಾಲೆ ಸ್ಥಾಪನೆ ಮಾಡಿದ್ದಲ್ಲದೇ, ಯಂಗ್ ಮೆನ್ಸ್ ಫುಟ್ಬಾಲ್ ಕ್ಲಬ್ ಸ್ಥಾಪಿಸಿ ಕ್ರೀಡೆಗೂ ಪ್ರೋತ್ಸಾಹ ನೀಡುತ್ತಲೇ ಸಮಾಜಕ್ಕೆ ಹತ್ತಿರವಾಗ ತೊಡಗಿದರು. ಇನ್ನು ಜನರನ್ನು ಒಗ್ಗೂಡಿಸುವ ಸಲುವಾಗಿ ವಸಂತೋತ್ಸವ, ನಾಡಹಬ್ಬ, ಪುಸ್ತಕ ಬಿಡುಗಡೆ, ಕಾವ್ಯ ವಾಚನ, ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದಲ್ಲದೇ, ಗದುಗಿನ ಎರಡು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನಾಯಕತ್ವವಹಿಸುವ ಮೂಲಕ ಆಸ್ತಿಕರನ್ನೂ ಸ್ವಾತ್ರಂತ್ರಯ ಚಳುವಳಿಯತ್ತ ಕರೆತಂದರು.
ಇದೇ ಸಮಯದಲ್ಲೇ ರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಹಾಡು ಮೊತ್ತ ಮೊದಲ ಬಾರಿಗೆ 1924ರಲ್ಲಿ ಬೆಳಗಾವಿಯ ಟಿಳಕವಾಡಿಯಲ್ಲಿ ಮಹಾತ್ಮ ಗಾಂಧಿಯವರ ಸಮ್ನುಖದಲ್ಲಿ ನಡೆದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅವೇಶನದಲ್ಲಿ ಪ್ರಸಿದ್ಧ ಗಾಯಕ ಸುಬ್ಬರಾಯರು ಹಾಡುತ್ತಿದ್ದಂತೆಯೇ ಅದನ್ನು ಆಲಿಸಿದ ಜನರಿಂದ ಹರ್ಷೋದ್ಗಾರವಾದ ನಂತರ ಅದೇ ಹಾಡನ್ನು ಅಂದಿನ ಉದಯೋನ್ಮುಖ ಪ್ರತಿಭೆಯಾಗಿ ಆನಂತರದಲ್ಲಿ ಭಾರತೀಯ ಸಂಗೀತಲೋಕದ ನಕ್ಷತ್ರವಾಗಿ ಮಿನಿಗಿದ ಭಾರತೀ ಕಂಠದ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರು ಹಾಡಿದ ನಂತರ ಮತ್ತಷ್ಟೂ ಪ್ರಸಿದ್ಧವಾಗಿ ಆ ಹಾಡು ಪ್ರತಿಯೊಬ್ಬ ಕನ್ನಡಿಗರ ಬಾಯಲ್ಲಿ ಗುನುಗುವಂತಾಗಿ ಅಂದಿನ ಕಾಲದ ಕರ್ನಾಟಕ ರಾಜ್ಯದ ನಾಡಗೀತೆಯೆಂದೇ ಖ್ಯಾತಿ ಪಡೆಯಿತು. ಅಂದಿಗೂ ಇಂದಿಗೂ ಆ ಹಾಡನ್ನು ಕೇಳಿದ ಕೂಡಲೇ ಕನ್ನಡಿಗರ ಕಿವಿ ನೆಟ್ಟಗಾಗುವುಗಲ್ಲದೇ, ಮನಸ್ಸು ಆ ಹಾಡಿನ ಸಾಲುಗಳನ್ನು ಪುನರುಚ್ಚರಿಸುವಂತೆ ಮಾಡುವ ಪ್ತಭಾವ ಆ ಹಾಡಿಗಿದ್ದು ಅದು ನಮ್ಮ ನಾಡು, ನುಡಿಯ ಪ್ರೀತಿಯ ಪ್ರತೀಕವಾಗಿದೆ ಎಂದರೂ ತಪ್ಪಾಗದು.
ಇವೆಲ್ಲದರ ಮಧ್ಯೆಯೂ ಅವರಲ್ಲಿದ್ದ ಸಾಹಿತಿ ಸದಾಕಾಲವೂ ಜಾಗೃತವಾಗಿಯೇ ಇದ್ದು, ಗದುಗಿನ ವೀರನಾಯಣನ ನೆನಪಿನಲ್ಲಿಯೇ ಅದೇ ಗದುಗಿನ ವೀರನಾರಾಯಣ ಎಂಬ ಅಂಕಿತ ನಾಮದಲ್ಲಿ ನಿರಂತರವಾಗಿ ನಾಟಕಗಳನ್ನು ಬರೆಯುತ್ತಲೇ ಹೋದ ನಾರಾಯಣ ರಾಯರ ಕೆಲವು ಪ್ರಸಿದ್ದ ನಾಟಕಗಳು ಈ ರೀತಿಯಾಗಿವೆ. ವಜ್ರಮುಕುಟ 1910, ಪ್ರಮಾರ್ಜುನ 1911, ಕನಕವಿಲಾಸ 1912, ಮೋಹಲಹರಿ 1913, ಅಜ್ಞಾತವಾಸ 1914, ಪ್ರೇಮವಿಜಯ 1915, ಕುಮಾರರಾಮ 1916, ಭಾರತ ಸಂಧಾನ 1917, ಸ್ತ್ರೀ ಧರ್ಮ ರಹಸ್ಯ 1918, ಶ್ರೀವಿದ್ಯಾರಣ್ಯ 1919, ಶಿಕ್ಷಣ ಸಂಭ್ರಮ 1920, ಉತ್ತರ ಗೋಗ್ರಹಣ 1920, ಪತಿತೋದ್ಧಾರ 1923 ಹೀಗೆ ನಾಟಕಕಾರಾಗಿ. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿದ್ದಲ್ಲದೇ ಅದನ್ನು ಯಶಸ್ವಿಯಾಗಿ ರಂಗಮಂದಿರದಲ್ಲಿ ಪ್ರದರ್ಶಿಸುವ ಮೂಲಕ ಜನಜಾಗೃತಿ ಮೂಡಿಸಿದ್ದರು, ಅವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ, ಪ್ರಭಾತ, ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿದ್ದವು.
ಹುಯಿಲಗೋಳ ನಾರಾಯಣ ರಾಯರು ಪುಣೆಯಲ್ಲಿ ಓದುತ್ತಿರುವಾಗಲೇ ಅವರ ವಿವಾಹ ನಿಶ್ಚಯವಾಗಿದ್ದು, 1905ರಲ್ಲಿ ಹುಬ್ಬಳ್ಳಿಯ ಲಕ್ಷ್ಮೀಬಾಯಿ ಜತೆಗೆ ಮದುವೆ ನಡೆದರೂ, ನಂತರ ತಾಯಿ ರಾಧಾ ಬಾಯಿ ಅವರ ಒತ್ತಾಯದ ಮೇರೆಗೆ ಕಡಕೋಳದ ಬಿಂದೂರಾವ್ ದೇಶಪಾಂಡೆಯವರ ಮಗಳು ತುಳಸಾಬಾಯಿ ಅವರನ್ನೂ ಸಹಾ ವಿವಾಹವಾಗಿ ಇಬ್ಬರ ಹೆಂಡಿರ ಮುದ್ದಿನ ಗಂಡನಾಗಿದ್ದರು. ಹೀಗೆ ಇಬ್ಬರು ಪತ್ನಿಯರೊಂದಿಗಿನ ಸುಂದರವಾದ ದಾಂಪತ್ಯ ಜೀವನದಲ್ಲಿ ಅವರಿಗೆ ಏಳು ಜನ ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳೂ ಜನಿಸಿ ಅವರೆಲ್ಲರಿಗೂ ಪ್ರೀತಿಯ ನಾನಾ ಆಗಿದ್ದರು. ಜೀವನದಲ್ಲಿ ಬಹಳ ಬೇಗನೆ ತಮ್ಮ ಮೊದಲ ಪತ್ನಿ ಶ್ರೀಮತಿ ಲಕ್ಷ್ಮೀ ಬಾಯಿ ಅವರನ್ನು ಕಳೆದುಕೊಂಡರೆ ನಂತರ 1946ರಲ್ಲಿ ಅವರ ಎರಡನೇ ಪತ್ನಿಯಾದ ಶ್ರೀಮತಿ ತುಳಸಾಬಾಯಿ ಅವರೂ ನಿಧನರಾದ ನಂತರ, ರಾಯರು ತಮ್ಮ ವೃದ್ಧಾಪ್ಯವನ್ನು ಗದಗ, ಹುಬ್ಬಳ್ಳಿ, ಬಳ್ಳಾರಿಗಳಲ್ಲಿ ತಮ್ಮ ಗಂಡು ಮಕ್ಕಳ ಮನೆಯಲ್ಲಿ ನೆಮ್ಮದಿಂದ ಕಳೆದು 1971ರ ಜುಲೈ 4ರಂದು ತಮ್ಮ 81ನೇ ವಯಸ್ಸಿನಲ್ಲಿ ವಿಧಿವಶವಾದರು.
ಕನ್ನಡದ ಶ್ರೇಷ್ಠ ಕವಿ, ಸ್ವಾತಂತ್ರ್ಯ ಹೋರಾಟಗಾರ, ಉತ್ತಮ ವಾಗ್ಮಿ, ಶ್ರೇಷ್ಠ ನಾಟಕಕಾರರೂ, ನಟರೂ, ಚಿಂತಕರೂ ಹೀಗೆ ಬಹುಮುಖ ಪ್ರತಿಭೆಯ ಮೇರು ವ್ಯಕ್ತಿಗಳಾಗಿದ್ದಂತಹ ಹುಯಿಲಗೋಳ ನಾರಾಯಣರಾಯರು ತಮ್ಮ ಕೃತಿಗಳು ಮತ್ತು ನಾಡಸೇವೆಗಳ ಮೂಲಕವೇ, ಇಂದಿಗೂ ಸಮಸ್ತ ಕನ್ನಡಿಗರ ಹೃದಯದಲ್ಲಿ ನೆಲೆ ನಿಂತಿದ್ದು, 100 ವರ್ಷಗಳ ಹಿಂದೆ ಬರೆದ ಅವರ ಆ ಒಂದು ಗೀತೆಯು ಇಂದಿಗೂ ಕನ್ನಡಿಗರಲ್ಲಿ ಚೈತನ್ಯವನ್ನು ತುಂಬುವಂತೆ ಮಾಡುವುದೇ ಅವರ ಸಾರ್ವಕಾಲಿಕತೆಗೆ ಸಾಕ್ಷಿಯಾಗಿದ್ದು ಈ ಎಲ್ಲ ಕಾರಣಗಳಿಂದಾಗಿ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ