ಭಾರತೀಯ ಇತಿಹಾಸದ ಸುಪ್ರಸಿದ್ಧ ಕವಿ ಕಾಳಿದಾಸರು ತಮ್ಮ ಶ್ಯಾಮಲಾ ದಂಡಕದಲ್ಲಿ ಮಾಣಿಕ್ಯವೀಣಾಂ ಉಪಲಾಲಯಂತೀಂ ಎಂದು ಹೇಳುವ ಮೂಲಕ ಶ್ಯಾಮಲೆಯಾದ ಶಾರದಾಂಬೆಯು ಮಾಣಿಕ್ಯ ಮಯವಾದ ವೀಣೆಯನ್ನು ನುಡಿಸುತ್ತಿದ್ದಳು ಎಂದಿದ್ದಾರೆ. ಅದೇ ರೀತಿಯಲ್ಲಿ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ರಾಜಾ ಉದಯನು ಘೋಷವತೀ ಎಂಬ ವೀಣೆಯನ್ನು ನುಡಿಸಿದ್ದನೆಂದು ಸಹಾ ಉಲ್ಲೇಖವಿದರೆ, ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ನಾದಜ್ಯೋತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರಿಗೆ ಗುರು ಚಿದಂಬರನಾಥ ಯೋಗಿಗಳ ಅನುಗ್ರಹದಿಂದ ಕಾಶಿ ಕ್ಷೇತ್ರದಲ್ಲಿ ಗಂಗೆಯಲ್ಲಿ ದೊರೆತ ವೀಣೆಯ ಮೇಲೆ ದೇವನಾಗರಿಯಲ್ಲಿ ರಾಮ ಎಂದು ಕೆತ್ತಲ್ಪಟ್ಟಿದೆಯಂತೆ. ಹೀಗೆ ವೀಣೆ ಎಂಬುದು ನಮ್ಮ ಸನಾತನ ಧರ್ಮದ 64 ವಿದ್ಯೆಗಳಲ್ಲಿ ಒಂದಾದ ಸಂಗೀತ ಕಲೆಯ ಭಾಗವಾಗಿರುವ ತಂತಿ ವಾದ್ಯವಾಗಿದ್ದು, ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಶಾಸ್ತ್ರೀಯ ಸಂಗೀತದಲ್ಲಿ ಬಳಸಲ್ಪಡುತ್ತದೆ. ಈ ವೀಣೆಯನ್ನು ನುಡಿಸುವವರನ್ನು ವೈಣಿಕರೆಂದು ಕರೆಯುತ್ತಾರೆ. ಇಂತಹ ವೀಣೆಯ ತಯಾರಿಕೆಯಲ್ಲಿ ಎತ್ತಿದ ಕೈ ಆಗಿದ್ದ ಶತಾಯುಷಿ ಶ್ರೀ ಶ್ರೀ ಪೆನ್ನ ಓಬಳಯ್ಯ ಆವರ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.
ನಮ್ಮ ಹಿಂದಿನವರು ಅನಕ್ಷರಸ್ಥರಾಗಿದ್ದಿರಬಹುದು ಆದರೆ, ಖಂಡಿತವಾಗಿಯೂ ವಿದ್ಯಾವಂತರಂತೂ ಆಗಿರುತ್ತಿದ್ದರು ಮತ್ತು ಅವರ ವ್ಯವಹಾರ ಜ್ಞಾನ ಇಂದಿನ ಕಾಲದವರಿಗಿಂತಲೂ ಬಹಳವೇ ಚೆನ್ನಾಗಿತ್ತು ಎನ್ನುವುದಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಮಧುರೈ ಸಮೀಪದ ಸಿಂಪಾಡಿ ಪುರದ ನಿವಾಸಿಯಾಗಿದ್ದ ಪೆನ್ನಓಬಳಯ್ಯನವರೇ ಸಾಕ್ಷಿ. ಸುಮಾರು 1922ರ ಆಸುಪಾಸಿನಲ್ಲೇ ಸಿಂಪಾಡಿ ಪುರದ ಕಡು ಬಡತನದ ಕುಟುಂಬವೊಂದರಲ್ಲಿ ಜನಿಸಿದ ಓಬಳ್ಳಯ್ಯನವರಿಗೆ ಎರಡು ಹೊತ್ತು ಊಟ ಸಿಕ್ಕರೆ ಸಾಕು ಎನ್ನುವಂತಹ ಸ್ಥಿತಿಯಲ್ಲಿದ್ದ ಕಾರಣ, ಓದುವುದು ಎಲ್ಲಿಂದ ಬಂತು? ಹಾಗೇ ಆಡು ಕುರಿ, ದನ ಕರುಗಳನ್ನು ಮೇಯಿಸಿಕೊಂಡು ಸಾಕಿ ಸಲುಹಿತ್ತಿದ್ದವರು ಸಂಜೆ ಆಯಿತೆಂದರೆ ದೇವಸ್ಥಾನದಲ್ಲಿ ಪ್ರಸಾದ ಸಿಗುತ್ತದೆ ಎಂಬ ಕಾರಣದಿಂದ ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲಿ ನಡೆಯುತ್ತಿದ್ದ ಭಜನೆಗಳಿಂದ ಆಕರ್ಷಿತರಾಗಿ ಅವರಿಗೇ ಅರಿವಿಲ್ಲದಂತೆಯೇ ಭಜನೆ, ದೇವರ ನಾಮಗಳು ಮತ್ತು ಸಂಗೀತ ಅವರಿಗೆ ಕರಗತವಾಗಿದ್ದಲ್ಲದೇ ಅವರ ಊರಿನಲ್ಲಿ ವೀಣೆಯನ್ನು ತಯಾರಿಸುತ್ತಿದ್ದವರ ಪರಿಚಯವಾಗಿ ಅವರ ಬಳಿ ಕೆಲ ಕಾಲ ಕೆಲಸ ಮಾಡಿ ಅವರಿಂದ ವೀಣೆ ತಯಾರಿಸುವುದನ್ನು ಕಲಿತುಕೊಂಡು ನೋಡ ನೋಡುತ್ತಲೇ ಅವರು ಇಡೀ ದೇಶಕ್ಕೆ ಸಾಂಪ್ರದಾಯಿಕ ವೀಣೆ ತಯಾರಿಸಿ ಸರಬರಾಜು ಮಾಡುತ್ತಿದ್ದದ್ದಲ್ಲದೇ, ಸಾಂಪ್ರದಾಯಕವಾಗಿ ವೀಣೆ ತಯಾರಿಸುವುದನ್ನು ಅನೇಕರಿಗೆ ಕಲಿಸಿಕೊಟ್ಟಿರುವುದು ನಿಜಕ್ಕೂ ಶ್ಲಾಘನೀಯವಾಗಿತ್ತು.
ವೀಣೆ ಎಂದರೆ ಒಂದು ದೊಡ್ಡ ಮತ್ತು ಚಿಕ್ಕ ಬುರುಡೆಗಳನ್ನು ಮರದ ಸಹಾಯದಿಂದ ಬಂಧಿಸಿ ಅದರ ಮೇಲೆ ನಾಲ್ಕು ತಂತಿಗಳನ್ನು ಬಿಗಿಯಾಗಿ ಎಳೆದು ಆ ಮರದ ಮೇಲೆ ಮೇಣ ಮತ್ತು ಇದ್ದಿಲನ್ನು ನುಣ್ಣಗೆ ಪುಡಿಮಾಡಿ ಬೆರೆಸಿ, ಕಲಸಿ, ಬೆಂಕಿಯಲ್ಲಿ ಕಾಯಿಸಿ ಸರಿಯಾದ ಹದಕ್ಕೆ ತಂದು ಕಟ್ಟಬೇಕು. ಇದರ ಮೇಲೆ ಮೆಟ್ಟಿಲುಗಳನ್ನು ನೆಡುವಾಗ ಬಹಳ ಜಾಗರೂಕತೆಯಿಂದ ಮಾಡಬೇಕು. ಸ್ವಲ್ಪ ಕೂದಲೆಳೆಯಷ್ಟು ವ್ಯತ್ಯಾಸವಾದರೂ ಅದು ಅಪಸ್ವರಕ್ಕೆ ಎಡೆಮಾಡಿಕೊಡಬಹುದು. ಈ ಪ್ರಕ್ರಿಯೆಗೆ ವೀಣೆಮೇಳ ಕಟ್ಟುವುದು ಎಂದೇ ಕರೆಯುತ್ತಾರೆ. ಈ ಮೆಟ್ಟಿಲುಗಳ ಮೇಲೆ ವೀಣೆಯ ಕೊಡದ ಮೇಲೆ ಅಂಟಿಸಿದ ಕುದುರೆ (ಮರದ ತುಂಡು) ಮೂಲಕ ಹಾದು ನಾಲ್ಕು ತಂತಿಗಳು ಬರುತ್ತವೆ. ಈ ಎಲ್ಲಾ ಪ್ರಕ್ರಿಯೆಗಳು ಕೇವಲ ಒಂದೇ ದಿನಕ್ಕೆ ಮುಗಿಯುವುದಲ್ಲ. ಇದಕ್ಕೆ ತಿಂಗಳಾನುಗಟ್ಟಲೆ ಸಮಯ ಹಿಡಿಯುತ್ತದೆ ಅಷ್ಟು ಹೊತ್ತು ಕಾಯುವ ತಾಳ್ಮೆ ಇರಬೇಕು.
ಸಾಧಾರಣವಾಗಿ ವೀಣೆಗೆ ಬಳಸುವ ದೊಡ್ಡ ಬುರುಡೆಯನ್ನು ಕೊಡ ಎಂದು ಕರೆಯಲಾಗುಗ್ಗದೆ ಮತ್ತು ಇದನ್ನು ಹಲಸಿನ ಮರದಿಂದ ಮಾಡಲಾಗಿರುತ್ತದೆ. ಇನ್ನು ಸಣ್ಣ ಬುರುಡೆಯು ಬಲಿತ ಸೋರೇಕಾಯಿಯ ಬುರುಡೆಯಾಗಿರುತ್ತದೆ. ಈ ಕೊಡವನ್ನು ಮಾಡುವುದಕ್ಕೆ ಸೂಕ್ತವಾದ ಹಲಸಿನ ಮರವನ್ನು ಆಯ್ಕೆಯ ಪ್ರತಿಯೇ ಒಂದು ದೊಡ್ಡ ರೋಚಕತೆ. ಆ ರೀತಿಯ ಹಲಸಿನ ಮರವನ್ನು ನೀರಿನಲ್ಲಿ ಬಹಳ ಕಾಲ ನೆನೆಸಿಟ್ಟು ಅದನ್ನು ಬೇಕಾದ ಆಕಾರಕ್ಕೆ ಕೊರೆದು, ಒಳಗಿನ ಭಾಗವನ್ನು ಟೊಳ್ಳಾಗಿಸಿ ಅದನ್ನು ಬಹಳಷ್ಟು ಕತ್ತರಿಸಿ ಹಗುರ ಮಾಡಿದರು ಗಟ್ಟಿಯಾಗಿರುವಂತಹ ಕೊಡವನ್ನು ತಯಾರಿಸುತ್ತಾರೆ. ಕೊಡ ಹಗುರವಾಗಿದ್ದಷ್ಟೂ ನಾದ ಚೆನ್ನಾಗಿ ತುಂಬುತ್ತದೆಂಬ ನಂಬಿಕೆಯಿದೆ. ಹೀಗೆ ತಯಾರಿಸಿದ ಕೊಡವನ್ನು ಇನ್ನೊಂದು ಮರದ ಹಾಳೆಯಿಂದ ಮುಚ್ಚಿರುತ್ತಾರೆ. ಅದಕ್ಕೆ ದಂಡಿಯನ್ನು ಜೋಡಿಸುತ್ತಾರೆ. ಅದರ ಎಡತುದಿ ಭೂಮಿಯ ಕಡೆಗೆ ಬಗ್ಗಿರುತ್ತದೆ ಮತ್ತು ಇದಕ್ಕೆ ಇನ್ನೊಂದು ಪುಟ್ಟ ಕೊಡದಂತಹ ಬುರುಡೆಯನ್ನು ಜೋಡಿಸಿರುತ್ತಾರೆ. ಈ ರೀತಿಯ ವೀಣೆ ಮೊಟ್ಟ ಮೊದಲು ತಂಜಾವೂರಿನಲ್ಲಿ ತಯಾರಾದುದರಿಂದ ಇಂತಹ ವೀಣೆಗೆ ತಂಜಾವೂರು ವೀಣೆ ಎನ್ನುತ್ತಾರೆ. ಇನ್ನು ಮತ್ತೊಂದು ತುದಿಯಲ್ಲಿ ಜೋಡಿಸಿರುವ ಪುಟ್ಟ ಕೊಡದಂತಹದು ಸಾಮಾನ್ಯವಾಗಿ ಸೋರೆಬುರುಡೆಯಾಗಿದ್ದರೆ, ಅದು ಸಿಗದೇ ಹೋದ ಸಮಯದಲ್ಲಿ ಕಾಗದದ ಬುರುಡೆ, ಪಿತ್ ಅಥವಾ ರಾಳದ ಬುರುಡೆಯಿಂದ ಅಥವಾ ತಗಡಿನ ಬುರುಡೆಯೂ ಆಗಿರಬಹುದು ಈರೀತಿಯಾಗಿ ಪ್ರತಿಯೊಂದು ಕೆಲಸವೂ ಅತ್ಯಂತ ನಿಧಾನವಾಗಿ ಅಚ್ಚುಕಟ್ಟಿನಿಂದ ಮಾಡಬೇಕಾಗಿರುತ್ತದೆ. ಇಂತಹ ಸೂಕ್ಷ್ಮ ಕೆಲಸಗಳನ್ನು ಓಬಳ್ಳಯ್ಯನವರು ಬಹಳ ತಾಳ್ಮೆಯಿಂದ ಅತ್ಯಂತ ಶಾಸ್ತ್ರೀಯ ರೀತಿಯಲ್ಲಿ ಮಾಡುತ್ತಿದ್ದ ಕಾರಣ, ಅವರು ತಯಾರಿಸುತ್ತಿದ್ದ ವೀಣೆಗೆ ದೇಶಾದ್ಯಂತ ಅತ್ಯಂತ ಬೇಡಿಕೆ ಇರುತ್ತಿತ್ತು.
ಸಾಧಾರಣವಾಗಿ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ತಯಾರಿಕೆಯೂ ಹೆಚ್ಚಾಗುವುದು ಸಹಜವಾದ ವ್ಯಾಪಾರೀ ಧರ್ಮ. ಆದರೆ ಓಬಳ್ಳಯ್ಯನವರು ಇದಕ್ಕೆ ತದ್ವಿರುದ್ಧವಾಗಿ ತಮ್ಮ ವೀಣೆಗೆ ಎಷ್ಟೇ ಬೇಡಿಕೆ ಇದ್ದರೂ, ತಾವು ತಯಾರಿಸುವ ವೀಣೆಯ ಗುಣಮಟ್ಟದಲ್ಲಿ ಕೊಂಚವೂ ವ್ಯತಿರಿಕ್ತವಾಗದೇ, ಪ್ರತಿಯೊಂದಕ್ಕೂ ಅದಕ್ಕೆ ಸಲ್ಲಬೇಕಾದ ಗೌರವನ್ನು ಸಲ್ಲಿಯೇ ತಯಾರಿಸುತ್ತಿದ್ದರೂ ಅದರ ಬೆಲೆಯೂ ಕೈಗೆಟುಕುವ ಹಾಗೆ ಇರುತ್ತಿದ್ದರಿಂದ ಪ್ರತಿಯೊಬ್ಬ ವೈಣಿಕರೂ ಓಬಳ್ಳಯ್ಯನವರು ಅಥವಾ ಅವರ ಗರಡಿಯಲ್ಲಿ ಪಳಗಿದ ಶಿಷ್ಯರು ತಯಾರಿಸಿದ ವೀಣೆಯನ್ನು ಖರೀಧಿಸಿ ನುಡಿಸಲು ಇಚ್ಚಿಸುತಿದ್ದರು.
ಸಂಗೀತ ವಾದ್ಯ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದರೂ ಎಲೆ ಮರೆ ಕಾಯಿಯಂತೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತಿದ್ದ ಓಬಳಯ್ಯವರು ಯಾವುದೇ ಪ್ರಶಸ್ತಿ ಪುರಸ್ಕಾರಗಳ ಹಿಂದೆ ಹೋದವರಲ್ಲ. ಯಾವುದೇ ಹೆಚ್ಚಿನ ರೀತಿಯ ಆಸೆ ಆಕಾಂಕ್ಷೆಗಳಿಲ್ಲದೇ ಒಂದು ರೀತಿಯ ಸಂತರಂತೆ ಜೀವನ ನಡೆಸುತ್ತಿದ್ದ ಕಾರಣ, ಇತ್ತೀಚಿನ ದಿನಗಳಲ್ಲಿ ಬಹಳ ಅಪರೂಪ ಮತ್ತು ಅಚ್ಚರಿಯಂತೆ ಶತಾಯುಷಿಗಳಾಗಿದ್ದರು. ಮೂವರು ಪುತ್ರರು, ಇಬ್ಬರು ಪುತ್ರಿಯರೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದವರಿಗೆ ಕರ್ನಾಟಕ ರಾಜ್ಯ ಸರ್ಕಾರ 70ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಂಗೀತ ವಾದ್ಯಗಳ ತಯಾರಿಕಾ ಕ್ಷೇತ್ರದಲ್ಲಿ ಅವರ ಅಪಾರವಾದ ಸಾಧನೆಯನ್ನು ಗುರುತಿಸಿ ಅವರಿಗೆ 2025ರ ರಾಜ್ಯೋತ್ಸವ ಪ್ರಶಸ್ತಿಗಾಗಿ ಆಯ್ಕೆ ಮಾಡಿದಾಗ ವಾವ್!! ಬಹಳಷ್ಟು ಪ್ರಶಸ್ತಿ ಪುರಸ್ಕೃತರು ವಿವಿಧ ಲಾಬಿಗಳ ಮೂಲಕವೋ ಇಲ್ಲವೇ ರಾಜಕೀಯ ಹಿತಾಸಕ್ತಿಗಳ ಮೂಲಕ ಆಯ್ಕೆಯಾದರೇ, ಓಬಳಯ್ಯ ಮತ್ತಿತರೇ ಕಲವು ಬೆರಳೆಣಿಕೆಯಷ್ಟು ಮಂದಿ ಮಾತ್ರಾ ಅರ್ಹತೆಯ ಮೇಲೆ ಆಯ್ಕೆ ಆಗಿದ್ದಾರೆ ಎಂದು ಸಂಭ್ರಮಿಸಿದ್ದರು.
ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ತಮ್ಮ ಸಾಧನೆಯನ್ನು ಗುರುತಿಸಿ ಸರ್ಕಾರ ನೀಡುವ ಪ್ರಶಸ್ತಿಯನ್ನು 2025ರ ನವೆಂಬರ್ 1 ರಂದು ಬೆಂಗಳೂರಿಗೆ ಬಂದು ಸ್ವೀಕರಿಸಲು ಸಿದ್ಧವಾಗುತ್ತಿದ್ದಂತೆಯೇ ಇದ್ದಕ್ಕಿಂದ್ದಂತೆ ಅಸ್ವಸ್ಥರಾಗಿ ಹಾಸಿಗೆಯಿಂದ ಏಳಲೂ ಸಹಾ ಆಗದೇ ಇದ್ದ ಕಾರಣ, ರಾಜ್ಯೋತ್ಸವ ಪ್ರಶಸ್ತಿಯನ್ನು ಅವರ ಪರವಾಗಿ ಅವರ ಮಕ್ಕಳು ಸ್ವೀಕರಿಸಿದ್ದರು. ದುರಾದೃಷ್ಟವಷಾತ್ ಪ್ರಶಸ್ತಿ ಸ್ವೀಕಾರದ ಸಂಭ್ರಮಾಚರಣೆ ಹೆಚ್ಚು ಗಂಟೆಗಳ ಕಾಲ ಉಳಿಯದೇ, ಪ್ರಶಸ್ತಿ ಪ್ರಧಾನ ಸಮಾರಂಭ ಮುಗಿದ ಮರುದಿನವೇ ಅರ್ಥಾತ್ ನವೆಂಬರ್2ನೇ ತಾರೀಖು ರವಿವಾರ ತಡರಾತ್ರಿಯಂದು ಓಬಳಯ್ಯನವರು ತಮ್ಮ 103ನೇ ವಯಸ್ಸಿನಲ್ಲಿ ನಿಧನರಾಗಿರುವುದಕ್ಕೆ ಕೇವಲ ಅವರ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದ ನಿವಾಸಿಗಳಷ್ಟೇ ಅಲ್ಲದೇ ಹಲವಾರು ಕಲಾವಿದರುಗಳು ಮತ್ತು ನಾಡಿನ ಹಲವಾರು ಜನರು, ಇಡೀ ದೇಶದ ವಾದ್ಯಪ್ರೇಮಿಗಳ ಹೃದಯ ಗೆದ್ದದ್ದಲ್ಲದೇ ತಮ್ಮ ಹುಟ್ಟೂರನ್ನು ತಮ್ಮ ಕೆಲಸ ಮೂಲಕ ಜಗತ್ಪ್ರಸಿದ್ದಿಯನ್ನಾಗಿಸಿದಕ್ಕಾಗಿ ಓಬಳಯ್ಯನವರಿಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ವೀಣೆ ತಯಾರಿಕೆಯಲ್ಲಿ ಅಪಾರ ಮನ್ನಣೆ ಪಡೆದಿದ್ದ ಶ್ರೀ ಪೆನ್ನ ಓಬಳಯ್ಯ ಅವರ ನಿಧನವು ನಾಡಿಗೆ ದೊಡ್ಡ ನಷ್ಟವಾಗಿದ್ದು, ಅವರು ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಬೆಳೆಸಿದ ಅಪರೂಪದ ತಜ್ಞರು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಅವರ ಕುಟುಂಬಕ್ಕೆ ಧೈರ್ಯ ದೊರಕಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ತಮಗೆ ಸಿಕ್ಕ ಪ್ರಶಸ್ತಿಯನ್ನು ಸ್ವೀಕರಿಸಲೂ ಸಾಧ್ಯವಾಗದಷ್ಟು ಅಸ್ವಸ್ತರಾಗಿ ಮಕ್ಕಳ ಮೂಲಕ ಪ್ರಶಸ್ತಿ ಸ್ವೀಕರಿಸಿದ ಪಡೆದ ಮರುದಿನವೇ ಅವರು ದೈವಾಧೀನರಾಗಿರುವುದು ದುರಾದೃಷ್ಟಕರ.ಸಿಂಪಾಡಿ ಪುರದ ಹೆಸರನ್ನು ತಮ್ಮ ವೀಣಿಗಳ ಮೂಲಕ ರಾಷ್ಟ್ರಕ್ಕೆ ಪರಿಚಯಿಸಿದ ಪೆನ್ನ ಓಬಳಯ್ಯ ಅವರ ಸಾಂಸ್ಕೃತಿಕ ಸೇವೆಯನ್ನು ನೆನೆಯುತ್ತಾ ಅವರ ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಹಲವು ದಶಕಗಳಿಂದ ಸಾಂಪ್ರದಾಯಿಕ ವೀಣೆ ತಯಾರಿಕೆ ಕ್ಷೇತ್ರದಲ್ಲಿ ತೊಡಗಿ ಕೊಂಡು ತಮ್ಮ ಸ್ವಂತ ಪರಿಶ್ರಮದಿಂದ ಕಲಿತ ವಿದ್ಯೆಯು ತಮ್ಮೊಂದಿಗೇ ನಶಿಸಿ ಹೋಗಬಾರದು ಎಂದು ನಿರ್ಧರಿಸಿ ತಮ್ಮ ಅನುಭವವನ್ನು ತಮ್ಮ ಮಕ್ಕಳು ಮತ್ತು ನೂರಾರು ಶಿಷ್ಯರಿಗೆ ಸಾಂಪ್ರದಾಯಿಕ ವೀಣೆಯ ತಯಾರಿಕೆಯ ಕೌಶಲ್ಯ ಧಾರೆ ಎರೆದಿದಿದ್ದ ಶ್ರೀ ಓಬಳ್ಳಯ್ಯನವರ ಸೇವೆ ನಿಜಕ್ಕೂ ಅತ್ಯದ್ಭುತವಾಗಿದ್ದು ಅವರು ವೀಣೆ ಬ್ರಹ್ಮ ಎಂಬ ಗೌರವವಕ್ಕೆ ನಿಜಕ್ಕೂ ಅರ್ಹರಾಗಿದ್ದರು ಎಂದರೂ ತಪ್ಪಾಗದು. ಕಲಾವಿದರುಗಳಿಗೆ ಸಾವಿಲ್ಲಾ ಎಂಬ ಮಾತಿದೆ. ಅವರು ಭೌತಿಕವಾಗಿ ನಮ್ಮೆಲ್ಲರೂ ಅಗಲಿದರೂ ಅವರು ತಮ್ಮ ಸಾಧನೆಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರುತ್ತಾರೆ ಎನ್ನುವುದಕ್ಕೆ ಪೆನ್ನ ಓಬಳಯ್ಯನವರೂ ಜ್ವಲಂತ ಸಾಕ್ಷಿಯಾಗಲಿದ್ದಾರೆ ಎಂದರೂ ಅತಿಶಯವಾಗದು. ಅವರ ಅದ್ಭುತ ಕೈಗಳಿಂದ ತಯಾರಾದ ವೀಣೆಗಳು ಇಂದು ಭಾರತದ ಅನೇಕ ರಾಜ್ಯಗಳ ಸಾವಿರಾರು ಕಲಾವಿದರುಗಳ ಮನ ಮತ್ತು ಮನೆಗಳಲ್ಲಿದ್ದು, ಆಂತಹ ವೈಣಿಕರು ಆ ವೀಣೆಗಳನ್ನು ನುಡಿಸುವಾಗ ಅದರಿಂದ ಹೊಮ್ಮುವ ನಾದದ ಮೂಲಕ ಪೆನ್ನ ಓಬಳ್ಳಯವರು ಇನ್ನೂ ನೂರಾರು ವರ್ಷಗಳ ಕಾಲ ನಮ್ಮೊಂದಿಗೆ ಇದ್ದೇ ಇರುವ ಕಾರಣ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ