ವಿ. ಶಾಂತಾರಾಮ್

ಕರ್ನಾಟಕದಲ್ಲಿ ಹುಟ್ಟಿ, ಕೊಲ್ಹಾಪುರದಲ್ಲಿ ಬೆಳೆದ ಹುಡುಗನೊಬ್ಬ ಆರ್ಥಿಕ ಅಸಹಾಯಕತೆಯಿಂದ ಹುಬ್ಬಳ್ಳಿಗೆ ಬಂದು ಸಿನಿಮಾ ನೋಡಲು ಕಾಸಿಲ್ಲದೇ, ಹುಬ್ಬಳ್ಳಿಯ ನ್ಯೂ ಡೆಕ್ಕನ್ ಸಿನಿಮಾ ಥಿಯೇಟರ್‌ನಲ್ಲಿ ಉಚಿತವಾಗಿ ಡೋರ್ ಕೀಪರ್ ಆಗಿ ಕೆಲಸ ಮಾಡುತ್ತಾ ಅಲ್ಲಿ ಪ್ರದರ್ಶನವಾಗುತ್ತಿದ್ದ ದಾದಾ ಸಾಹೇಬ್ ಫಾಲ್ಕೆ ಅವರ ಸಿನಿಮಾಗಳನ್ನು ನೋಡಿ ಪ್ರೇರಣೆಗೊಂಡು ಮುಂದೆ ಇಡೀ ಭಾರತವೇ ಮೆಚ್ಚುವಂತಹ  ಅಮೋಘ ಸಿನಿಮಾಗಳನ್ನು ಮಾಡಿ ಅದೇ ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರಾದ ಶ್ರೀ ವಿ ಶಾಂತಾರಾಮ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಮೂಲತಃ ಅವಿಭಜಿತ ಕರ್ನಾಟಕದ ಭಾಗವಾಗಿದ್ದ, ಇಂದು ಮಹಾರಾಷ್ಟ್ರದ ಭಾಗವಾಗಿದ್ದರೂ, ಇಂದಿಗೂ ಕನ್ನಡಿಗರೇ ಬಹುಸಂಖ್ಯಾತರಾಗಿರುವ ಕೊಲ್ಲಾಪುರದ ಪನ್ಹಾಲಾದ ಮರಾಠಿ ಜೈನ  ವಾಂಕುದ್ರೆ ಕುಟುಂಬದವರಾಗಿದ್ದರೂ ತಮ್ಮ ತಾಯಿಯ ತವರೂರಾದ ಬಿಜಾಪುರ ಜಿಲ್ಲೆಯ ಇಂಡಿ ಎಂಬ ಸಣ್ಣ ಪಟ್ಟಣದಲ್ಲಿ 1901ರ ನವೆಂಬರ್ 18ರಂದು  ಐದು ಸಹೋದರರಲ್ಲಿ ಒಬ್ಬರಾಗಿ ವಿಧ್ಯಾದರ ಶಾಂತಾರಾಮ್ ಅವರ ಜನನವಾಗುತ್ತದೆ.  ಅವರ ಪೂರ್ಣ ಹೆಸರು ಶಾಂತಾರಾಮ್ ರಾಜಾರಾಮ್ ವಾಂಕುದ್ರೆ ಎಂಬುದಾಗಿದ್ದು ಅವರನ್ನು ವಿ. ಶಾಂತಾರಾಮ್ ಅಥವಾ ಶಾಂತಾರಾಮ್ ಬಾಪು ಎಂದೂ ಸಹಾ ಕರೆಯಲಾಗುತ್ತದೆ. ಹೀಗೆ ಮನೆಯ ಭಾಷೆ ಮರಾಠಿಯಾಗಿದ್ದರೂ ಕನ್ನಡ ಭಾಷೆಯ ಮೇಲೂ ಅಷ್ಟೇ ಪ್ರಭುತ್ವವಿತ್ತು.

ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಕೊಲ್ಹಾಪುರದಲ್ಲೇ ಮುಗಿಸಿದ ಶಾಂತಾರಾಮ್ ಓದಿನಷ್ಟೇ ಅಲ್ಲದೇ ಆಟ ಪಾಟಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯಂತ ಚುರುಕಾಗಿದ್ದರು. ಅದೊಮ್ಮೆ ಅವರ ಕುಟುಂಬ ಆರ್ಥಿಕ ಸಮಸ್ಯೆಗೆ ಸಿಲುಕಿದ ಕಾರಣ,  ಉದರ ನಿಮಿತ್ತಂ ಬಹುಕೃತವೇಷಂ ಎನ್ನುವಂತೆ  ಇಂದಿನ ಹುಬ್ಬಳ್ಳಿಗೆ ಬಂದಾಗ ಶಾಂತಾರಾಮ್ ಇನ್ನೂ ಹದಿಹರೆಯದ ಪೋರ.  ಕಲಿಯಲು ಮನಸ್ಸಿದ್ದರೂ ಕುಟುಂಬದ ನಿರ್ವಹಣೆಗಾಗಿ ದಿನಕ್ಕೆ 8 ಆಣೆ (50 ಪೈಸೆ) ಸಂಬಳಕ್ಕೆ ಹುಬ್ಬಳ್ಳಿಯ ರೈಲ್ವೆ ಕಾರ್ಯಾಗಾರದಲ್ಲಿ ಫಿಟ್ಟರ್ ಆಗಿ ಕೆಲಸಕ್ಕೆ  ಸೇರಿಕೊಂಡರು. ನಂತರ ದಿನಗಳಲ್ಲಿ ಕರ್ತವ್ಯ ನಿಷ್ಠೆ ಮತ್ತು  ಕಠಿಣ ಪರಿಶ್ರಮವನ್ನು ಗುರುತಿಸಿ ಅವರ ಸಂಬಳವನ್ನು ದಿನಕ್ಕೆ 12 ಆಣೆಗಳಿಗೆ ಹೆಚ್ಚಿಸಲಾಗುತ್ತದೆ ಇದರಿಂದ ಅವರ ಮನೆಯ ದೈನಂದಿನದ ಪರಿಸ್ಥಿತಿ ತಕ್ಕ ಮಟ್ಟಿಗೆ ಸುಧಾರಿಸಿದರೂ, ಅವರಲ್ಲಿದ್ದ ಸಿನಿಮಾ ಗೀಳನ್ನು ನಿವಾರಿಸಿಕೊಳ್ಳಲು ಆ ಹಣ ಸಾಕಾಗದೇ ಇದ್ದ ಕಾರಣ,  ಸಂಜೆಯ ಬಿಡುವಿನ ಸಮಯದಲ್ಲಿ ಹುಬ್ಬಳ್ಳಿಯ ನ್ಯೂ ಡೆಕ್ಕನ್ ಸಿನಿಮಾ ಥಿಯೇಟರ್‌ನಲ್ಲಿ ಡೋರ್ ಕೀಪರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಈ ಕೆಲಸಕ್ಕೆ ಅವರಿಗೆ ಯಾವುದೇ  ಸಂಬಳ ಸಿಗದಿದ್ದರೂ, ಅಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಎಲ್ಲಾ ಚಲನಚಿತ್ರಗಳನ್ನೂ ಉಚಿತವಾಗಿ ವೀಕ್ಷಿಸಲು ಅವರಿಗೆ ಅವಕಾಶವಿತ್ತು. ಹೀಗೆ ಅಲ್ಲಿ ಅವರು ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಮತ್ತು ಇತರೇ  ಚಲನಚಿತ್ರಗಳನ್ನು ವೀಕ್ಷಿಸುತ್ತಲೇ  ಏಕಲವ್ಯ ದ್ರೋಣಾಚಾರ್ಯರ ಪ್ರತಿಮೆ ಇಟ್ಟುಕೊಂಡು ಬಿಲ್ವಿದ್ಯೆ ಕಲಿತಂತೆ ಶಾಂತಾರಾಂ ಅವರು ಸಿನಿಮಾಗಳನ್ನು ನೋಡುತ್ತಾ ನೋಡುತ್ತಾ. ಚಲನಚಿತ್ರಗಳ ಬಗ್ಗೆ ಉತ್ಸಾಹವನ್ನು ಬೆಳೆಸಿಕೊಳುತ್ತಾರೆ.  ಇವಿಷ್ಟರ ಮಧ್ಯೆ ಹುಬ್ಬಳ್ಳಿಯಲ್ಲಿ ಛಾಯಾಗ್ರಹಣ ಮತ್ತು ಸೈನ್ ಬೋರ್ಡ್ ಚಿತ್ರಕಲೆಯನ್ನು ಕಲಿತ ನಂತರ ಅವರು ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಸಿನಿಮಾದ ಬಗ್ಗೆ ಅವರಿಗಿದ್ದ ಆಸೆಯಿಂದಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಕೊಲ್ಹಾಪುರದ ಬಾಬುರಾವ್ ಪೇಂಟರ್ ಒಡೆತನದ ಮಹಾರಾಷ್ಟ್ರ ಫಿಲ್ಮ್ ಕಂಪನಿಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಪ್ರಾರಂಭಿಸಿರುವಾಗಲೇ 1921ರ ತಮ್ಮ 20ನೇ ವಯಸ್ಸಿನಲ್ಲಿಯೇ ತಮ್ಮ ಕುಟುಂಬದ ಒತ್ತಾಸೆಯಂತೆ 12 ವರ್ಷ ವಯಸ್ಸಿನವರಾಗಿದ್ದ  ವಿಮಲಾಬಾಯಿಯನ್ನು ವಿವಾಹವಾಗುತ್ತಾರೆ ಮತ್ತು ಅದೇ ವರ್ಷ   ಸುರೇಖಾ ಹರನ್ ಎಂಬ ಮೂಕೀ ಚಿತ್ರದ ಮೂಲಕ ನಟನಾಗಿ ಪಾದಾರ್ಪಣೆ ಮಾಡಿದರು.

ಹೀಗೆ ಐದಾರು ಸಿನಿಮಾಗಳಲ್ಲಿ ನಟನಾಗಿ ನಟಿಸುತ್ತಿರುವಾಗಲೇ ಅವರಲ್ಲಿದ್ದ ನಿರ್ದೇಶಕ ಜಾಗೃತನಾಗಿ 1927 ರಲ್ಲಿ ತಮ್ಮ ಮೊದಲ ಚಿತ್ರ ನೇತಾಜಿ ಪಾಲ್ಕರ್ ಅನ್ನು ನಿರ್ದೇಶಿಸುತ್ತಾರೆ. 1929 ರಲ್ಲಿ ಅವರು ವಿಷ್ಣುಪಂತ್ ದಾಮ್ಲೆ , ಕೆ.ಆರ್. ಧೈಬರ್, ಎಸ್. ಫತೇಲಾಲ್ ಮತ್ತು ಎಸ್.ಬಿ. ಕುಲಕರ್ಣಿ ಅವರೊಂದಿಗೆ ಸೇರಿಕೊಂಡು ತಮ್ಮ ಮೊದಲ ಮಗನ ಹೆಸರಲ್ಲಿ ಪ್ರಭಾತ್ ಫಿಲ್ಮ್ ಕಂಪನಿಯನ್ನು ಸ್ಥಾಪಿಸಿ ಅದರ ಮೂಲಕ  1932 ರಲ್ಲಿ ಅವರ ನಿರ್ದೇಶನದಲ್ಲಿ ಮೊದಲ ಮರಾಠಿ ಭಾಷೆಯ ಚಲನಚಿತ್ರವಾದ ಅಯೋಧ್ಯೆಚ ರಾಜವನ್ನು ನಿರ್ಮಿಸುತ್ತಾರೆ. 1942ರಲ್ಲಿ ವಯಕ್ತಿಕ ಕಾರಣಗಳಿಂದ ತಾವೇ ಕಟ್ಟಿದ್ದ ಪ್ರಭಾತ್ ಕಂಪನಿಯನ್ನು ತೊರೆದು ಮುಂಬೈನಲ್ಲಿ ರಾಜ್‌ಕಮಲ್ ಕಲಾಮಂದಿರ್ ಅನ್ನು ಸ್ಥಾಪಿಸುತ್ತಾರೆ. ಕಾಲಾನಂತರದಲ್ಲಿ, ಅದೇ  ರಾಜ್‌ಕಮಲ್  ದೇಶದ ಅತ್ಯಂತ ಅತ್ಯಾಧುನಿಕ ಸ್ಟುಡಿಯೋಗಳಲ್ಲಿ ಒಂದು ಎಂದು ಕಮಾಲ್ ಮಾಡಿದ್ದದ್ದು ಈಗ ಇತಿಹಾಸ.

ದುನಿಯಾ ನಾ ಮಾನೆ (1937), ಇಂಜರಾ ಚಾನಿ ( 1937) ಡಾ. ಕೊಟ್ನಿಸ್ ಕಿ ಅಮರ್ ಕಹಾನಿ (1946), ಅಮರ್ ಭೂಪಾಲಿ (1951), ಝನಕ್ ಝನಕ್ ಪಾಯಲ್ ಬಾಜೆ (1955)  ದೋ ಆಂಖೇನ್ ಬರಾ ಹಾತ್ (1957), ನವರಂಗ್ (1959), ಮತ್ತು ಪಿಂಜ್ರಾ (1972) ಮುಂದಾದವುಗಳು ಅವರ ಕೆಲವು ಪ್ರಸಿದ್ಧ ಚಲನಚಿತ್ರಗಳಾಗಿ ಮೂಕೀ ಯುಗದಿಂದ  ಆಧುನಿಕ ತಂತ್ರಜ್ಞಾನದ ಟಾಕೀ ಯುಗದವರೆಗೂ ತಾಂತ್ರಿಕ ನಾವೀನ್ಯತೆ ಮತ್ತು ಸಾಮಾಜಿಕ ಪ್ರಜ್ಞೆಯ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ಅವರ  ಝನಕ್ ಝನಕ್ ಪಾಯಲ್ ಬಾಜೆ ಮತ್ತು ದೋ ಆಂಖೇನ್ ಬರಾ ಹಾತ್ ಚಿತ್ರಗಳು ಅಂದಿನ ಕಾಲದ ಬ್ಲಾಕ್ ಬರ್ಸ್ಟರ್ ಚಿತ್ರಗಳಾಗಿ ಅವರ ವ್ಯಕ್ತಿತ್ವ ಅಭಿವ್ಯಕ್ತ ಸಿನಿಮಗಳಾಗಿತ್ತು ಎಂದರೂ ತಪ್ಪಾಗದು.

ಝನಕ್ ಝನಕ್ ಪಾಯಲ್ ಬಾಜೆ ಈ ಚಿತ್ರವು  ನೃತ್ಯ ಗುರು ಮಂಗಲ್ ಮಹಾರಾಜ್ ಅವರ ಕುರಿತಾಗಿದ್ದು ಅವರು ತಮ್ಮ ಮಗ ಗಿರ್ಧರ್ ಮತ್ತು ತಮ್ಮ ಶಿಷ್ಯೆ  ನೀಲಾ ಅವರಿಬ್ಬರ ಜೊತೆಯಲ್ಲಿ ಪ್ರತಿಷ್ಠಿತ ನೃತ್ಯ ಸ್ಪರ್ಧೆಯನ್ನು ಗೆಲ್ಲಬೇಕೆಂದು ಬಯಸುತ್ತಾರೆ. ತಂದೆಯ ಆಶಯಕ್ಕಿಂತಲೂ ಪರಸ್ಪರ ಅವರಿಬ್ಬರೂ ಪ್ರೀತಿಯಲ್ಲಿ ಸಿಲುಕಿದ ಪರಿಣಾಮ ಅದು ಅವರ ನೃತ್ಯದ ಮೇಲೆ ಬಾರೀ ದುಶ್ಪರಿಣಾಮ ಬೀರಿ ಕಲೆಯ ಮೇಲಿನ ಸಮರ್ಪಣೆಗೆ ಧಕ್ಕೆಯಾಗಿ  ಪ್ರಣಯಕ್ಕಿಂತಲೂ ನೃತ್ಯ ಶುದ್ಧತೆಗೆ ಆದ್ಯತೆ ನೀಡಬೇಕೆಂಬ ಗುರುಗಳ ಆಶಯಕ್ಕೆ ಭಂಗವಾಗಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ ಗಿರ್ಧರ್ ಅವರ ವೃತ್ತಿಜೀವನಕ್ಕಾಗಿ ನೀಲ ತಮ್ಮ ಪ್ರೀತಿಯನ್ನು ತ್ಯಾಗ ಮಾಡಬೇಕಾಗುತ್ತದೆ. ಹೀಗೆ ಈ ಚಿತ್ರವು ಶಾಸ್ತ್ರೀಯ ಕಲೆ ಮತ್ತು ವಾಣಿಜ್ಯೀಕರಣದ ನಡುವಿನ ಒತ್ತಡವನ್ನು ಹಾಗೂ ಕರ್ತವ್ಯ ಮತ್ತು ಪ್ರೀತಿಯ ನಡುವಿನ ಸಂಘರ್ಷವನ್ನು ಪರಿಶೋಧಿಸುತ್ತದೆ.

ದೋ ಆಂಖೇನ್ ಬಾರಾ ಹಾತ್ ಚಿತ್ರದಲ್ಲಿ ಜೀವನದಲ್ಲಿ ಯಾವುದೋ ಸಂಧರ್ಭ,  ಇಲ್ಲವೇ ಮತ್ತೊಬ್ಬರ ಪ್ರಭಾವಕ್ಕೆ ಒಳಗಾಗಿ ಮಾಡಿದ ತಪ್ಪಿಗೆ ಸೆರೆಮನೆ ವಾಸವೇ ಅಂತಿಮ ಶಿಕ್ಷೆಯಲ್ಲಾ ಎಂದು  ಹೇಳುವ ಪ್ರಗತಿಪರ ಜೈಲರ್ ಒಬ್ಬರ ಕಥೆಯಾಗಿರುತ್ತದೆ. ಈ ಚಿತ್ರದಲ್ಲಿ ಕೊಲೆ ಆರೋಪದ ಮೇಲೆ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಆರು ಕೊಲೆಗಾರರನ್ನು  ಸುಧಾರಣೆ ಮಾಡಲು ತೆರೆದ ಜೈಲು ಎಂಬ ಪರಿಕಲ್ಪನೆಯಿಂದ ಅವರನ್ನು ಒಂದು ಜಮೀನಿನಲ್ಲಿ ಕೆಲಸಕ್ಕೆ ಕರೆದೊಯ್ಯುತ್ತಾನೆ. ಆರಂಭದಲ್ಲಿ ಅವರು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ನಂತರ  ಕಠಿಣ ಪರಿಶ್ರಮ ಮತ್ತು ದಯೆಯ ಮೂಲಕ ಮಾನಸಿಕವಾಗಿ ಬದಲಾಗಿ ಎಲ್ಲರೂ ಒಳ್ಳೆಯ ವ್ಯಕ್ತಿಗಳಾಗುತ್ತಾರೆ. ಈ ಮೂಲಕ  ಪುನರ್ವಸತಿಯಿಂದ ಅಪರಾಧಿಗಳನ್ನು ಸುಧಾರಣೆಗೆ ತರಬಹುದು ಮತ್ತು  ಅಂತಹವರೂ ಜೀವನದಲ್ಲಿ ಎರಡನೇ ಅವಕಾಶಕ್ಕೆ ಅರ್ಹರು ಎಂಬುದನ್ನು ತೋರಿಸುವ ಮೂಲಕ ಜೈಲರ್‌ನ ವಿಶಿಷ್ಟ ವಿಧಾನದ ಮೂಲಕ ಕೈದಿಗಳೂ ಕ್ರಮೇಣ ಹಿಂಸಾತ್ಮಕ ಅಪರಾಧಿಗಳಿಂದ ಉತ್ಪಾದಕ ವ್ಯಕ್ತಿಗಳಾಗಿ ರೂಪಾಂತರಗೊಳ್ಳುವುದನ್ನು ಜಗತ್ತಿಗೆ ತೋರಿಸಿತ್ತು.

ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಅಣ್ಣಾಸಾಹೇಬ್ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಶಾಂತಾರಾಮ್ ಹೀಗೆ  ಸುಮಾರು ಏಳು ದಶಕಗಳ ಕಾಲ ಚಲನಚಿತ್ರ ರಂಗದಲ್ಲಿ ನಟ, ನಿರ್ದೇಶಕ ನಿರ್ಮಾಪಕರಾಗಿ ಅದ್ಭುತವಾದ ವೃತ್ತಿಜೀವನವನ್ನು ಹೊಂದಿದ್ದರು. ಸಾಮಾಜಿಕ ಬದಲಾವಣೆಯ ಸಾಧನವಾಗಿ ಚಲನಚಿತ್ರ ಮಾಧ್ಯಮದ ಪರಿಣಾಮಕಾರಿತ್ವವನ್ನು ಅರಿತುಕೊಂಡ ಆರಂಭಿಕ ಚಲನಚಿತ್ರ ನಿರ್ಮಾಪಕರಲ್ಲಿ  ಅವರು ಅಗ್ರೇಸರರಾಗಿದ್ದರು. ಒಂದೆಡೆ ಮಾನವತಾವಾದವನ್ನು ಪ್ರತಿಪಾದಿಸಲು ಮತ್ತು ಮತ್ತೊಂದೆಡೆ ಧರ್ಮಾಂಧತೆ ಮತ್ತು ಅನ್ಯಾಯವನ್ನು ಬಹಿರಂಗಪಡಿಸಲು ಅದನ್ನು ಯಶಸ್ವಿಯಾಗಿ ಬಳಸಿದರು. ಅಚ್ಚರಿಯ ವಿಷಯವೆಂದರೆ, ವಿ. ಶಾಂತಾರಾಮ್ ಅವರಿಗೆ ಸಂಗೀತದಲ್ಲಿಯೂ  ಬಹಳ ಆಸಕ್ತಿ ಇದ್ದು ಪರೋಕ್ಷವಾಗಿ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿಯೂ  ಸಕ್ರಿಯವಾಗಿ ಭಾಗವಹಿಸಿದರು. ಅವರ ಮರಾಠಿ ಚಲನಚಿತ್ರ ಮನೂಸ್‌ ನೋಡಿದ್ದ ಪ್ರಸಿದ್ಧ ಹಾಸ್ಯನಟ ಚಾರ್ಲಿ ಚಾಪ್ಲಿನ್ ಆ ಚಿತ್ರವನ್ನು ಬಹಳ ಮಟ್ಟಿಗೆ ಇಷ್ಟಪಟ್ಟು ಶಾಂತಾರಾಮ್ ಅವರನ್ನು ಹೊಗಳಿದ್ದರು ಎಂದು ಹೇಳಲಾಗುತ್ತದೆ.

ತಮ್ಮ ವಯಕ್ತಿಕ ಜೀವನದಲ್ಲಿ ತಮ್ಮ ಮೊದಲ ಹೆಂಡತಿ ವಿಮಲಾಬಾಯಿಯವರೊಂದಿಗಿನ ದಾಂಪತ್ಯ ಜೀವನದಲ್ಲಿ ನಾಲ್ಕು ಮಕ್ಕಳ ತಂದೆಯಾಗಿದ್ದರು ಮಗ ಪ್ರಭಾತ್ ಕುಮಾರ್ (ಶಾಂತಾರಾಮ್ ಅವರ ಮೊದಲ ಚಲನಚಿತ್ರ ಕಂಪನಿಯ ಹೆಸರು ಇದೇ ಆಗಿತ್ತು). ಹೆಣ್ಣುಮಕ್ಕಳಾದ ಸರೋಜ್, ಮಧುರಾ ಮತ್ತು ಚಾರುಶೀಲಾ. ಹಿರಿಯ ಮಗಳು ಸರೋಜ್, ಸೋಲಿ ಎಂಜಿನಿಯರ್ ಎಂಬ ಪಾರ್ಸಿಯವರನ್ನು ವಿವಾಹವಾಗಿ ಮುಂಬೈನಲ್ಲಿ ಗ್ರ್ಯಾಂಡ್ ಹೋಟೆಲ್ ಮತ್ತು ಕೊಲ್ಹಾಪುರದ ಬಳಿಯ ಪನ್ಹಾಲಾದಲ್ಲಿ ಶಾಂತಾರಾಮ್ ಅವರ ತೋಟದ ಮನೆಯಲ್ಲಿ  ವ್ಯಾಲಿ ವ್ಯೂ ಗ್ರ್ಯಾಂಡ್ ರೆಸಾರ್ಟ್ ಅನ್ನು ನಡೆಸುತ್ತಿದ್ದಾರೆ. ಶಾಂತಾರಾಮ್ ಅವರ ಎರಡನೇ ಮಗಳು, ಲೇಖಕಿ ಮಧುರಾ, ಪಂಡಿತ್ ಜಸ್ರಾಜ್ ಅವರ ಪತ್ನಿ ಮತ್ತು ಸಂಗೀತ ನಿರ್ದೇಶಕ ಶಾರಂಗ್ ದೇವ್ ಪಂಡಿತ್ ಮತ್ತು ಟಿವಿ ವ್ಯಕ್ತಿತ್ವ ದುರ್ಗಾ ಜಸ್ರಾಜ್ ಅವರ ತಾಯಿ. ಇನ್ನು ಅವರ ಮೂರನೇ ಮಗಳು, ಚಾರುಶೀಲಾ, ಚಲನಚಿತ್ರ ನಟ ಸಿದ್ಧಾರ್ಥ್ ರೇ ಅವರ ತಾಯಿಯಾಗಿದ್ದರು. ಮಗಳು ಮಧುರಾ ಜಸರಾಜ್ ಬರೆದಿರುವ ದಿ ಮ್ಯಾನ್ ಹೂ ಚೇಂಜ್ಡ್ ಇಂಡಿಯನ್ ಸಿನಿಮಾ ಎಂಬ ವಿ. ಶಾಂತಾರಾಮ್ ಅವರ ಆತ್ಮಕಥೆಯ ಪುಸ್ತಕ ಬಹಳ ಜನಪ್ರಿಯವಾಗಿದೆ

1941 ರಲ್ಲಿ, ಶಾಂತಾರಾಮ್ ಅವರು ನಟಿ ಜಯಶ್ರೀ (ಕಮುಲ್ಕರ್) ಅವರನ್ನು ವಿವಾಹವಾದರು, ಅವರೊಂದಿಗೆ ಶಕುಂತಲಾ (1942) ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಈ ದಾಂಪತ್ಯದ ಕುರುಹಾಗಿ ಅವರಿಗೆ ಮೂವರು ಮಕ್ಕಳಿದ್ದರು ಮಗ ಮರಾಠಿ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಕಿರಣ್ ಶಾಂತಾರಾಮ್ ಇಬ್ಬರು ಹೆಣ್ಣುಮಕ್ಕಳು, ನಟಿ ರಾಜಶ್ರೀ ಮತ್ತು ತೇಜಶ್ರೀ. ತಮ್ಮ ಮಗಳು ರಾಜಶ್ರೀಯವರನ್ನು ಮತ್ತು ಜೀತೇಂದ್ರ ಅವರೊಂದಿಗೆ 1964ರಲ್ಲಿ ಗೀತ್ ಗಯಾ ಪಥರೋನ್ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು. ದಂಪತಿಗಳು 1956 ರಲ್ಲಿ ವಿಚ್ಛೇದನ ಪಡೆದರು.

1956 ರಲ್ಲಿ, ಶಾಂತಾರಾಮ್ ಅವರು ತಮ್ಮ ಜೊತೆ ಅಮರ್ ಭೂಪಾಲಿ ಮತ್ತು ಪರ್ಚಯ್ಯನ್ ಚಲನಚಿತ್ರಗಳಲ್ಲಿ ನಟಿಸಿದ್ದ ನಟಿ ಸಂಧ್ಯಾ(ವಿಜಯಾ ದೇಶಮುಖ) ಅವರನ್ನು ವಿವಾಹವಾದ ನಂತರ ಅವರೊಂದಿಗೆ  ದೋ ಆಂಖೇನ್ ಬರಾ ಹಾತ್ , ಪಯ್ ರಂಗ್,  ಜಾನಕ್ ಬರಾಹ್ ಜಹಾನ್  ಮುಂತಾದ ಚಿತ್ರಗಳಲ್ಲಿ ನಟಿಸಿದರು. ಈ ದಾಂಪತ್ಯ ಜೀವನದಲ್ಲಿ ಅವರಿಗೆ ಯಾವುದೇ ಮಕ್ಕಳಿರಲಿಲ್ಲ.

ಭಾರತೀಯ ಚಿತ್ರರಂಗದಲ್ಲಿ ಶಾಂತಾರಾಂ ಅವರು ಅತ್ಯಂತ ಎತ್ತರ ಮಟ್ಟಕ್ಕೆ ತಲುಪಿದ್ದರೂ ಕರ್ನಾಟಕ ಮತ್ತು ಕನ್ನಡ ಚಲನಚಿತ್ರ ರಂಗದೊಂದಿಗೆ ಬಲವಾದ ಸಂಪರ್ಕವನ್ನು ಉಳಿಸಿಕೊಂಡಿದ್ದರು. ಹಾಗಾಗಿಯೇ ಚಲನಚಿತ್ರ ಅಭಿವೃದ್ಧಿ ನಿಗಮ (ಎಫ್‌ಡಿಸಿ) ಸಮಿತಿಯ ಸದಸ್ಯರಾಗ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅನೇಕ ಸಭೆಗಳಲ್ಲಿ ಭಾಗವಹಿಸಿದ್ದರು. ಆ ಸಂಧರ್ಭದಲ್ಲಿ  ಅವರನ್ನು ಕನ್ನಡ ಚಲನಚಿತ್ರೋದ್ಯಮದ ಸದಸ್ಯರು ಸನ್ಮಾನಿಸಿದರು. ಕನ್ನಡ ಚಲನಚಿತ್ರ ನಿರ್ಮಾಣದಲ್ಲಿ ಶಿಸ್ತು, ಹೊಸ ಬೆಳವಣಿಗೆಗಳು ಮತ್ತು ಉದ್ಯಮದ ಅಭ್ಯಾಸಗಳ ಕುರಿತು ಅವರು ನಿರ್ಣಾಯಕ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಹಿಂದಿ ಮತ್ತು ಕನ್ನಡ ಚಲನಚಿತ್ರೋದ್ಯಮಗಳ ನಡುವೆ  ಸಾಂಸ್ಕೃತಿಕ ಸೇತುವೆಯಾಗಿ ಕಾರ್ಯ ನಿರ್ವಹಿಸಿದ್ದು ಶ್ಲಾಘನೀಯವಾಗಿದೆ.

ಬಹಳಷ್ಟು ಜನರಿಗೆ ತಿಳಿಯದೇ ಇದ್ದ ಮತ್ತೊಂದು ವಿಷಯವೆಂದರೆ, ಶಾಂತಾರಾಮ್ ಅವರು ಹಿಂದೂ ಕಲಿ ವೀರ ಸಾವರ್ಕರ್ ಅವರ  ಅಪ್ಪಟ ಅಭಿಮಾನಿಯಾಗಿದ್ದರು. 1966 ಫೆಬ್ರುವರಿ 26 ರಂದು ವೀರ ಸಾವರ್ಕರ್ ಅವರು ವಿಧಿವಶರಾದಾಗ  ಸಾವಿನ ಮನೆಯಲ್ಲಿ ಶತೃತ್ವ ತೋರಬಾರದು ಎಂಬ ನಿಯಮವಿದ್ದರೂ, ಅವರು ನಿಧನರಾದಾಗ ಅವರ ಶರೀರವನ್ನು ಕೊಂಡೊಯ್ಯಲು ಗನ್ ಕ್ಯಾರೇಜ್ ನೀಡಲು ಅಂದಿನ  ರಕ್ಷಣಾ ಸಚಿವ ವೈ.ಬಿ. ಚವಾಣ್ ಅವರು ಅವರ ಪಾರ್ಥಿವ ಶರೀರವನ್ನು ಮಿಲಿಟರಿ ಗನ್-ಕ್ಯಾರೇಜ್‌ನಲ್ಲಿ ಕೊಂಡೊಯ್ಯುವ ವಿನಂತಿಯನ್ನು ನಿರಾಕರಿಸಿದರು.  ಹೀಗೆ ಕೇಂದ್ರ ಮತ್ತು ಮಹಾರಾಷ್ಟ್ರದ ಕಾಂಗ್ರೇಸ್ ಸರ್ಕಾರ ಸಾವರ್ಕರ್ ಅವರಿಗೆ ಅಗೌರವ ತೋರಿದ ವಿಷಯವನ್ನು ತಿಳಿದ ಶಾಂತಾರಾಂ ಕೂಡಲೇ ತಮ್ಮ ನೆಚ್ಚಿನ ಗುರುಗಳ ಅಂತಿಮ ಯಾತ್ರೆಗಾಗಿ ಗುರುದಕ್ಷಿಣೆಯ ರೂಪದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ರಾತ್ರೋ ರಾತ್ರಿ ಗನ್ ಕ್ಯಾರೇಜ್ ವ್ಯವಸ್ಥೆ ಮಾಡುವ ಮೂಲಕ ಅಂದಿನ ಕಾಂಗ್ರೇಸ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದರೆ, ಇಂತಹ ಒಳ್ಳೆಯ ಕೆಲಸದಿಂದಾಗಿ ಸ್ವಾಭಿಮಾನಿ ಭಾರತೀಯರ ಅಭಿಮಾನಕ್ಕೆ ಪಾತ್ರವಾಗಿದ್ದರು.

ಚಿತ್ರರಂಗದಲ್ಲಿನ  ಅವರ ಸಾಧನೆಗಳನ್ನು ಗುರುತಿಸಿ  ಅನೇಕ ಪ್ರಶಸ್ತಿ ಪುರಸ್ಕಾರಗಳು ದೊರೆತಿದ್ದು ಅವುಗಳಲ್ಲಿ ಪ್ರಮುಖವಾಗಿ

  • 1957 ಝನಕ್ ಝನಕ್ ಪಾಯಲ್ ಬಾಜೆ ಅತ್ಯುತ್ತಮ ನಿರ್ದೇಶಕ
  • 1958 ದೋ ಆಂಖೇನ್ ಬರಹ ಹಾಥ್ ಅತ್ಯುತ್ತಮ ಚಿತ್ರ
  • 1985 ರಲ್ಲಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು.
  • 1992  ರಲ್ಲಿ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
  • 2001ರ 17 ನವೆಂಬರ್ ರಂದು ಶಾಂತಾರಾಮ್ ಅವರ ನೆನಪಿನಾರ್ಥ ಅಂಚೆಚೀಟಿ ಬಿಡುಗಡೆಯಾಗಿದೆ
  • ಶಾಂತರಾಮ್ ಅವರ ಆತ್ಮಚರಿತ್ರೆ ಶಾಂತಾರಾಮ ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಪುಸ್ತಕವಾಗಿ ಪ್ರಕಟವಾಗಿದೆ
  • ವಿ. ಶಾಂತಾರಾಮ್ ಅವರ ಹೆಸರನಲ್ಲಿ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರವು ಪ್ರಶಸ್ತಿಯನ್ನು ಸ್ಥಾಪಿಸಿವೆ.

1990ರ ಅಕ್ಟೋಬರ್ 30ರಂದು ಮುಂಬೈನಲ್ಲಿ ವಯೋಸಹವಾಗಿ ಅವರನ್ನು ವಿಧಿವಶರಾದರು. 1993 ರಲ್ಲಿ ಸ್ಥಾಪನೆಯಾದ ವಿ. ಶಾಂತಾರಾಮ್ ಮೋಷನ್ ಪಿಕ್ಚರ್ ಸೈಂಟಿಫಿಕ್ ರಿಸರ್ಚ್ ಅಂಡ್ ಕಲ್ಚರಲ್ ಫೌಂಡೇಶನ್ ಚಲನಚಿತ್ರರಂಗದಲ್ಲಿ  ಅಪರೂಪದ ಸಾಧನೆ ಗೈದ ನಿರ್ಮಾಪಕರಿಗೆ ವಿವಿಧ ಪ್ರಶಸ್ತಿಗಳನ್ನು  ವಾರ್ಷಿಕವಾಗಿ ಅವರ ಹುಟ್ಟು ಹಬ್ಬದ ದಿನವಾದ ನವೆಂಬರ್ 18 ರಂದು ನೀಡಲಾಗುತ್ತಿದೆ.

ಹೀಗೆ ಕರ್ನಾಟಕದಲ್ಲಿ ಹುಟ್ಟಿ ಮಹಾರಾಷ್ಟ್ರದಲ್ಲಿ ಬೆಳೆದು ಮತ್ತೆ ಕರ್ನಾಟದ ಹುಬ್ಬಳ್ಳಿಯ ಸಿನಿಮಾ ಮಂದಿರದ ಗೇಟ್ ಕೀಪರ್ ಆಗಿ ಸಿನಿಮಾಗಳ ಬಗ್ಗೆ ಒಲವನ್ನು ಮೂಡಿಸಿಕೊಂಡು ನಂತರ ದಿನಗಳಲ್ಲಿ ಈ ದೇಶ ಕಂಡ ಅತ್ಯುತ್ತಮ ನಟ, ಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕನಾಗಿ ಪ್ರಖ್ಯಾತಿ ಪಡೆದ ಶ್ರೀ ವಿ. ಶಾಂತಾರಾಮ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment