ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ನಮ್ಮ ಸನಾತನ ಧರ್ಮದಲ್ಲಿ ಜನಸಾಮಾನ್ಯರು ನೆಮ್ಮದಿಯಾಗಿ ಜೀವನನ್ನು ನಡೆಸಲು ಚಪ್ಪನ್ನಾರು ವಿದ್ಯೆಗಳು ಅರ್ಥಾತ್ 64 ವಿದ್ಯೆಗಳಿದ್ದು ಅವುಗಳನ್ನು ಕಲಿಸಿಕೊಡಲು ಗುರುಕುಲಗಳಿದ್ದವು. ಹುಡುಗರುಗಳಿಗೆ 7-8 ವರ್ಷ ವಯಸ್ಸಾಗಿ ತಾಯಿಯ ಎದೆಯ ಹಾಲನ್ನು ಕುಡಿಯುದನ್ನು ಬಿಟ್ಟು ತನ್ನ ಪಾಡಿಗೆ ತಾನು ಆಹಾರವನ್ನು ತಿನ್ನುವುದನ್ನು ಕಲಿಯುತ್ತಿದ್ದಂತೆಯೇ ಆತನನ್ನು ವಿದ್ಯಾಭ್ಯಾಸಕ್ಕಾಗಿ ಹತ್ತಿರದ ಗುರುಕುಲಗಳಿಗೆ ಸೇರಿಸಿದಾಗ, ಅಲ್ಲಿನ ಗುರುಗಳು ಆ ಹುಡುಗನನ್ನು ಕೆಲ ಕಾಲ ಸ್ವಚ್ಚಂದವಾಗಿ ಬಿಟ್ಟು ಆತನ ಆಸಕ್ತಿ ಮತ್ತು ಆತನ ಸಾಮರ್ಥ್ಯದ ಅನುಗುಣವಾಗಿ ಆ  64 ವಿದ್ಯೆಗಳಲ್ಲಿ ಒಂದೆರಡು ವಿದ್ಯೆಗಳನ್ನು ಆತನಿಗೆ ಕಲಿಸಿದ ನಂತರ ಅಲ್ಲಿ ಕಲಿತ ವಿದ್ಯೆಯಿಂದ ಆತ ತನ್ನ ಕಾಲಮೇಲೆ ತಾನು ನಿಂದು ಜೀವನ ನಡೆಸುವಂತಾದಾಗಾ ನಿನ್ನ ವಿದ್ಯಾಭ್ಯಾಸ  ಇಲ್ಲಿಗೆ ಮುಗಿದಿದ್ದು ಇನ್ನು ಮುಂದೆ ಸಂಸಾರಿಯಾಗಿ ಸುಖಃ ಜೀವನ ನಡೆಸು ಎಂದು ಹಾರೈಸಿ ಕಳಿಸುತ್ತಿದ್ದರು. ಈ ರೀತಿಯಾಗಿ ಅಂದು ಗುರುಕುಲಗಳು ಮಾಡುತ್ತಿದ್ದ ಕೆಲಸವನ್ನು ತದನಂತರ ಮಠ ಮಾನ್ಯಗಳು ಮುಂದುವರೆಸಿಕೊಂಡು ಹೋಗುತ್ತಿದ್ದವು.

ದುರಾದೃಷ್ಟವಷಾತ್ ಬ್ರಿಟೀಷರು ಭಾರತಕ್ಕೆ ಬಂದಾಗ ಗುರುಕುಲವನ್ನು ನಾಶಪಡಿಸದ ಹೊರತಾಗಿ ಇಲ್ಲಿನ ಜನರನ್ನು ಒಡೆಯಲಾಗದು ಎಂದು ತಿಳಿದ  ಮೆಕಾಲೆ ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಕೀಳರಿಮೆಯ ಭಾವನೆಗಳನ್ನು ಬೆಳಸಿ, ಇಂಗ್ಲೀಷ್ ಮಾಧ್ಯಮವನ್ನು ಪರಿಚಯಿಸಿ ನಮ್ಮ ಹೆಮ್ಮೆಯ ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ಬಹುತೇಕ ನಾಶ ಪಡಿಸಿದರೂ, ಇನ್ನೂ ಸಹಾ  ಅಲ್ಲಿಲ್ಲಿ ಪಳುವಳಿಕೆಯ ಮಾದರಿಯಲ್ಲಿ ಗುರುಕುಲಗಳು ಉಳಿದಿದ್ದು ಅಂದು ಅವಿಭಾಜ್ಯ ಕರ್ನಾಟಕದ ಭಾಗವಾಗಿದ್ದು ಇಂದು ಭೌಗೋಳಿಕವಾಗಿ  ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲ್ಲೂಕ್ಕಿಗೆ ಸೇರಿರುವ  ಕನೇರಿ ಗ್ರಾಮದ 1,300 ವರ್ಷಗಳ ಇತಿಹಾಸ ಇರುವ ಶ್ರೀ ಸಿದ್ಧಗಿರಿ ಮಠದ ಪೂಜ್ಯಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಸೇವಾ ಚಟುವಟಿಕೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ  ಇದೋ ನಿಮಗಾಗಿ

ಬೆಳಗಾವಿಯಿಂದ 100 ಕಿ.ಮೀ ದೂರದಲ್ಲಿರುವ, ಪ್ರಸ್ತುತ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲ್ಲೂಕಿನ ಕನೇರಿ ಸಿದ್ಧಗಿರಿ ಮಠಕ್ಕೆ BCom ಪದವಿ ಪಡೆದು Marketing ಕೆಲಸ ಮಾಡುತ್ತಿದ್ದ  ಪೂಜ್ಯಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು 1989ರಲ್ಲಿ 49ನೇ ಮಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದರು.  ಆರಂಭದ  ಒಂದೆರಡು ವರ್ಷಗಳ ಕಾಲ ತಮ್ಮ ಮಠದ ರೀತಿ ರಿವಾಜುಗಳನ್ನು ಅಧ್ಯಯನ ಮಾಡಿದ ನಂತರ 1991 ರಿಂದ, ಪೂಜ್ಯಶ್ರೀ ಅವರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳಲು ನಿರ್ಧರಿಸಿ ಅದಕ್ಕಾಗಿ ತಮ್ಮ  ಮತ್ತು ಈ ಉದ್ದೇಶಕ್ಕಾಗಿ ಅವರು ಸಮೀಪದ ಗ್ರಾಮವಾದ ಕನ್ನೇರಿಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಕೊಂಡು ಆ ಗ್ರಾಮ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ನೆರವಿನ ಮೇಲೆ ಅವಲಂಬಿತರಾಗದೇ ಆತ್ಮನಿರ್ಭರ್ ಕಲ್ಪನೆಯ ಆಧಾರದಲ್ಲಿ ತಮ್ಮ ಸ್ವಸಾಮರ್ಥ್ಯದಿಂದ ಊರನ್ನು ಉದ್ದಾರ ಮಾಡಬಹುದೆಂಬ ವಿಷಯವನ್ನು ಅಲ್ಲಿನ ಯುವಕರಿಗೆ ಮನವರಿಕೆ ಮಾಡಿಕೊಡುವುದರಲ್ಲಿ ಶ್ರೀಗಳು ಸಫಲರಾದರು.

ಮಠದ ಪೀಠಾಧಿಪತಿಯಾಗಿ ಪೂಜೆ ಪುನಸ್ಕಾರ, ಆಶೀರ್ವಾದ ಪ್ರವಚನಗಳಲ್ಲಿಯೇ  ಇಡೀ ದಿನ ಕಳೆದು ಹೋದರೆ ತಮ್ಮ ಕನಸುಗಳನ್ನು ಸಾಕಾರ ಮಾಡಲು ಸಮಯವೇ ಸಾಗಾಕುವುದಿಲ್ಲಾ ಎಂಬುದನ್ನು ಅರಿತ ಶ್ರೀಗಳು  ತಮ್ಮ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಸಲುವಾಗಿ 2014 ರಲ್ಲಿ ತಮ್ಮ ಪೀಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಿ  ತಮ್ಮ ಪೀಠತ್ಯಾಗದ ಮಾಡಿದರೂ ಸನ್ಯಾಸಿಗಳಾಗಿಯೇ ಆತ್ಮನಿರ್ಭರ (ಸ್ವಯಂ) ಅಭಿವೃದ್ಧಿಗಾಗಿ ಸಿದ್ಧಗಿರಿ ಮಠದ ಕಡೆಯಿಂದಲೇ ಆರೋಗ್ಯ, ಶಿಕ್ಷಣ, ಗ್ರಾಮಾಭಿವೃದ್ಧಿ, ಕೃಷಿ ಮತ್ತು ಪರಂಪರೆಯ ಕ್ಷೇತ್ರಗಳಲ್ಲಿ  ಸಮಗ್ರ ಆಭಿವೃದ್ಧಿಗಾಗಿ  ಅಶಿರ್ನಿಶಿಯಾಗಿ  ದುಡಿಯುತ್ತಿದ್ದಾರೆ.  ಅದುವರೆವಿಗೂ ಕೇವಲ ಪುಣ್ಯಕ್ಷೇತ್ರವಾಗಿದ್ದ ಕನೇರಿಯಲ್ಲಿ   ಶಿಲಾವನ, ಗ್ರಾಮೀಣ ಬದುಕಿನ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸುವ ಮೂಲಕ ಅದನ್ನು ಪ್ರವಾಸಿ ತಾಣವನ್ನಾಗಿಸಿದ್ದಲ್ಲದೇ, ನಮ್ಮ ಸನಾತನ ಆಯುರ್ವೇದ ಪದ್ದತಿಯ  ಆತ್ಯಾಧುನಿಕ ಆಸ್ಪತ್ರೆ, ಗುರುಕುಲವನ್ನು ಆರಂಭಿಸಿದ್ದಲ್ಲದೇ, ಅಲ್ಲಿನ ಸುತ್ತಮುತ್ತಲಿನ ಸುಮಾರು 30ಕ್ಕೂ ಅಧಿಕ ಶಾಲೆಗಳನ್ನು ದತ್ತು ಪಡೆದು ಅದರನ್ನು ಅಭಿವೃದ್ಧಿ ಪಡಿಸಿದ್ದಾರೆ.

ಕಾಡಸಿದ್ದೇಶ್ವರ ಸ್ವಾಮೀಜಿಯವರು ಮಠದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಶೇಳಕೆವಾಡಿ ಎಂಬ ಗ್ರಾಮವನ್ನು ದತ್ತು ಪಡೆದು ಅದನ್ನು ಆದರ್ಶ ಗ್ರಾಮವನ್ನಾಗಿ ರೂಪಿಸಿರುವ ಕಾರಣ, ಆ ಗ್ರಾಮದಲ್ಲಿ ಕಳೆದ 5 ವರ್ಷದಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯಗಳು ನಡೆದಿಲ್ಲಾ ಎನ್ನುವುದೇ ಸ್ವಾಮೀಜೀಗಳ ಕಲ್ಪನೆಗೆ ಜನರ ಸ್ಪಂದನೆ ಹೇಗಿದೆ ಎಂಬುದರ ಅರ್ಥವಾಗುತ್ತದೆ.  ಅಡುಗೆಗಾಗಿ ಉರುವಲುಗಳನ್ನು ಬಳಸುವ ಮೂಲಕ ಪರಿಸರ ಮತ್ತು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಇಡೀ ಗ್ರಾಮಕ್ಕೇ ಬಯೋಗ್ಯಾಸ್ ಸೌಲಭ್ಯ  ನೀಡುವ ಮೂಲಕ ಜನರ ಬವಣೆಯನ್ನು ನಿವಾರಿಸಿದ್ದಾರೆ. ಇನ್ನು ಹೊತ್ತಲ್ಲದ ಹೊತ್ತಿನಲ್ಲಿ ಹೆಣ್ಣುಮಕ್ಕಳು ಬಯಲು ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಪ್ರತೀಯೊಂದು ಮನೆಗಳಲ್ಲಿಯೂ ಶೌಚಾಲಯವನ್ನು ಕಟ್ಟಿಸಿದ್ದು, ಆ ಊರಿನಲ್ಲಿ ತೆರೆದ ಚಂಡಿಗಳ ಬದಲು ಒಳಚರಂಡಿ ವ್ಯವಸ್ಥೆ ಇದೆ. ಆ ಊರಿನಲ್ಲಿ ಗಂಡು ಮತ್ತು ಹೆಣ್ಣಿನ ಅನುಪಾತ ಸಮಾನವಾಗಿದ್ದು, ತಾನು ಹೆಚ್ಚು ನೀನು ಎಂಬ ತಾರತಮ್ಯವಿಲ್ಲದೇ  ಗಂಡು ಹೆಣ್ಣು ಎಂಬ ಯಾವುದೇ ರೀತಿಯ ಬೇಧವಿಲ್ಲದೇ ಎಲ್ಲಾ ಮಕ್ಕಳಿಗೂ ಶಿಕ್ಷಣದ ಜೊತೆ ಸ್ವಚ್ಛತೆ ಮತ್ತು ಸ್ವಾವಲಂಭನೆಯನ್ನು ಕಲಿಸಿಕೊಡಲಾಗುತ್ತಿದ್ದೆ. ದೇಶದ ಎಲ್ಲ ಗ್ರಾಮಗಳೂ ಹೀಗೆಯೇ ಆಗಬೇಕು ಎನ್ನುವ ಅವರ ಕನಸಿಗೆ ಈ ಗ್ರಾಮ ಮಾದರಿಯಾಗಿದ್ದು. ಪ್ರತೀ ಗ್ರಾಮಗಳೂ ಈ ರೀತಿಯಾಗಿ ಅಭಿವೃದ್ಧಿ ಹೊಂದಿ ಸ್ವರಾಜ್ಯವಾದರೆ ದೇಶ ಸ್ವಾವಲಂಬಿಯಾಗುತ್ತದೆ ಎಂದು ಸ್ವಾಮೀಜಿಗಳ ಎಲ್ಲಾ ಕಡೆಯಲ್ಲಿನ ಪ್ರವಚನಗಳಲ್ಲಿ ಹೇಳುವಾಗ ಅವರ ಕಣ್ಣುಗಳು ಹೊಳೆಯುತ್ತವೆ.

ಒಂದು ಕುಟುಂಬ ಸ್ವತಂತ್ರವಾಗಿ ಜೀವನ ನಡೆಸಬೇಕೆಂದರೆ  ಹತ್ತಾರು ಎಕರೆ ಜಮೀನ ಅವಶ್ಯಕತೆ ಇರದೇ, ಕೇವಲ  ಒಂದು ಎಕರೆ ಕೃಷಿ ಜಮೀನಿನಲ್ಲಿ ಸುಭಾಷ್ ಪಾಲೇಕರ್ ಅವರ  ಶೂನ್ಯ ಬಜೆಟ್ ನೈಸರ್ಗಿಕ ಕೃಷಿ (ZBNF) ಎಂದೂ ಕರೆಯಲ್ಪಡುವ ಪಾಲೇಕರ್ ಕೃಷಿ ವಿಧಾನವು ರಾಸಾಯನಿಕ ಮುಕ್ತ ಕೃಷಿ ತಂತ್ರವಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಅವಲಂಬಿಸಿ ಕೃಷಿ ವೆಚ್ಚವನ್ನು ಶೂನ್ಯಕ್ಕೆ ಇಳಿಸುವ ಗುರಿಯನ್ನು ಹೊಂದಿದ್ದು, ಒಂದು ಪ್ರದೇಶದಲ್ಲಿ ಒಂದು ಬಾರಿಗೆ ಕೇವಲ ಒಂದೇ ತರಹದ ಬೆಳೆಯನ್ನು ಬೆಳೆಯದೇ ಬಹು ಬೆಳೆಗಳನ್ನು ಯಾವುದೇ ಕೀಟ ನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳನ್ನು ಬಳಸದೇ, ಹಸುವಿನ ಗಂಜಲ, ಸಗಣಿ, ಬೇವಿನ ಎಣ್ಣೆ ಮತ್ತು ಬೇವಿನ ಹಿಂಡಿಯನ್ನು ಬಳಿಸಿದಂತಹ  ಜೀವಾಮೃತ ತಯಾರಿಸಿ ಸ್ಥಳೀಯ ಬೀಜಗಳಿಂದಲೇ ಒಂದು ಎಕರೆ ಜಮೀನಿನಲ್ಲಿ ಒಂದು ಕುಟುಂಬಕ್ಕೆ ಬೇಕಾಗುವ ಎಲ್ಲ ದವಸಧಾನ್ಯಗಳನ್ನೂ ಬೆಳೆಯಲು ಸಾಧ್ಯವಿದೆ ಎನ್ನುವುದನ್ನು ಪ್ರಾತ್ಯಕ್ಷಿಕವಾಗಿ ತೋರಿಸಿಕೊಟ್ಟಿದ್ದಾರೆ. ಅದೇ ರೀಯಲ್ಲಿ  ಅಂತರ ಬೆಳೆಯ ಮೂಲಕ ಪ್ರತಿ ದಿನಬೂ ರೈತನಿಗೆ ಕನಿಷ್ಠ 400 ರೂಪಾಯಿಗಳಷ್ಟು ಆದಾಯ ಬರುವ ಹಾಗೆ ಮಾಡಿರುದರ ಮೂಲಕ ದೈನಂದಿನ ಅವಶ್ಯಕತೆಯನ್ನು ಪೂರೈಸಲು ಸಹಕಾರಿಯಾಗಿದೆ. ಕೇವಲ ಕೃಷಿ ಸಾವಯವ ಆದರೆ ಸಾಲದು, ರೈತರ ಬದುಕೂ ಸಾವಯವ ಆಗಬೇಕು. ದೇಶದ ಎಲ್ಲ ರೈತರೂ ಹೀಗೆ ಸ್ವಾವಲಂಬಿ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದೇ ಉತ್ತಮ ಎನ್ನುವುದು ಶ್ರೀಗಳ ಅಭಿಪ್ರಾಯವಾಗಿದೆ.

ಹೆಚ್ಚು ಹೆಚ್ಚು ಹಣ ಮತ್ತು ಹಾಲಿನಾಸೆಗಾಗಿ ಜರ್ಸಿ ಹಸಗಳನ್ನು ಸಾಕಿ ದೀರ್ಘಾವಧಿಯಲ್ಲಿ  ಆನಾರೋಗ್ಯಕ್ಕೆ ಬೀಳುವ ಬದಲು ಕಡಿಮೆ ಹಾಲು ಕೊಟ್ಟರೂ ಆರೋಗ್ಯಕವಾದ ದೇಸಿ ಗೋ ತಳಿಗಳ ಸಂವರ್ಧನೆಗಾಗಿ ಕನ್ನೇರಿಯಲ್ಲಿಯೇ  ಗೋಶಾಲೆಯನ್ನು ಆರಂಭಿಸಿ ಅದರಲ್ಲಿ 25 ಕ್ಕೂ ಹೆಚ್ಚು ತಳಿಯ 1500ಕ್ಕೂ ಹೆಚ್ಚಿನ ಗೋವುಗಳು ಇಲ್ಲಿದ್ದು.  ಮಠದ ಸುತ್ತಲಿನ 100 ಗ್ರಾಮಗಳಲ್ಲಿ ಗೋ ಸಂವರ್ಧನೆಯ ಬಗ್ಗೆಮತ್ತು  ಸಾವಯವ ಕೃಷಿಯ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿರುವುದಲ್ಲದೇ ಆಸಕ್ತ ರೈತರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಸಾವಯವ ಕೃಷಿಗಾಗಿಯೇ ಶ್ರೀ ಸಿದ್ಧಗಿರಿ ಕೃಷಿ ವಿಜ್ಞಾನ ಕೇಂದ್ರವನ್ನು 2019ರಲ್ಲಿ ಆರಂಭಿಸಿ ಅದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,  ಅದು ನವದೆಹಲಿಯ ಜಿಲ್ಲಾ ಮಟ್ಟದ ಸಂಸ್ಥೆಯಾಗಿದ್ದು ರೈತ ಸಮುದಾಯಕ್ಕಾಗಿ ಶ್ರೀಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಗ್ರಾಮವಿಕಾಸ, ದೇಸಿ ಗೋಶಾಲೆ, ಸಾವಯವ ಕೃಷಿ ಪದ್ಧತಿ ಮತ್ತು ಗುರುಕುಲಗಳಷ್ಟೇ ಅಲ್ಲದೇ, ಧರ್ಮದ ಜಾಗೃತಿಯಲ್ಲಿಯೂ ಬಹಳಷ್ಟು ಸಾಧನೆಗಳನ್ನು ಮಾಡಿರುವ ಶ್ರೀಗಳು ಕಳೆದ  25ವರ್ಷಗಳಲ್ಲಿ ವಿವಿಧ ಆಮಿಷಗಳಿಂದಾಗಿ ಮತಾಂತರವಾಗಿದ್ದ ಸುಮಾರು 25000 ಕ್ಕೂ ಹೆಚ್ಚು ಜನರನ್ನು ಮರಳಿ ಸನಾತನ ಧರ್ಮಕ್ಕೆ  ಕರೆತಂದಿದ್ದಾರೆ.  ಪ್ರತಿವರ್ಷವೂ 500 ಕ್ಕೂ ಅಧಿಕ ಕುಟುಂಬಗಳನ್ನು ಮರಳಿ ಸನಾತನ ಧರ್ಮಕ್ಕೆ ಕರೆತರುತ್ತಾರೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ಕಳೆದ 8-10 ವರ್ಷಗಳಿಂದ ಊಟ ವಸತಿ ಶಿಕ್ಷಣ ಮಾರಾಟಕ್ಕಲ್ಲ ಎಂಬ ಸಂಕಲ್ಪದೊಂದಿಗೆ 400-600 ಕ್ಕೂ ಅಧಿಕ ಮಕ್ಕಳಿಗೆ ಭಾರತೀಯ ಪರಂಪರೆಯ ಗುರುಕುಲದ ಪದ್ದತಿಯಲ್ಲಿ ಅವರವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉಚಿತವಾಗಿ  ಶಿಕ್ಷಣ ನೀಡಿವ ಗುರುಕುಲವನ್ನು ಆರಂಭಿಸಿ ಇಲ್ಲಿ ವಿದ್ಯಾರ್ಥಿಗಳಿಗೆ ಪ್ರಾಚೀನ ಭಾರತದ 4 ವೇದಗಳು, 6 ಶಾಸ್ತ್ರಗಳು, 64 ಕಲೆಗಳು (ಕಲೆಗಳು) ಮತ್ತು 14 ವಿದ್ಯಾಗಳು (ತಂತ್ರಗಳು) ಪಾಂಡಿತ್ಯಗಳಲ್ಲಿ  ಕರಗತ ಮಾಡಿಸಿಅಲಾಗುತ್ತದೆ. ಪ್ರತೀ ವರ್ಷವೂ ಮಹಾರಾಷ್ಟ್ರ, ಕರ್ನಾಟಕ, ಗೋವಾ ಮತ್ತು ವಿದೇಶಗಳಿಂದಲೂ 7 ರಿಂದ 10 ವರ್ಷದೊಳಗಿನ ಸುಮಾರು 200 ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿ  ಅವರುಗಳಲ್ಲಿ  ಆಯ್ದ 100 ಮಕ್ಕಳಿಗೆ ವರ್ಷಕ್ಕೆ ಉಚಿತ ಮತ್ತು ವಸತಿ ಪ್ರವೇಶವನ್ನು ನೀಡೀ ಆವಿದ್ಯಾರ್ಥಿಗಳಿಗೆ ಸನಾತನ ಮೌಲ್ಯಗಳೊಂದಿಗೆ ಅಧುನಿಕ ತಂತ್ರಜ್ಞಾನವನ್ನೂ  ದೇಶಾದ್ಯಂತ ಸುಮಾರು 50+ ಆಧುನಿಕ ಮತ್ತು ಸಾಂಪ್ರದಾಯಿಕ ತಜ್ಞರಿಂದ  ತರಬೇತಿ ಕೊಡಿಸಲಾಗುತ್ತದೆ.

ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಈಗಾಗಲೇ, ಕತ್ತಿವರಸೇ, ಲಾಠಿ, ದಂಡಪಟ್ಟ, ಧನುರ್ವಿದ್ಯಾ, ಮಲ್ಲಕಂಬ,  ವೇದ ಗಣಿತ, ಯೋಗ ಮತ್ತು ಸಂಸ್ಕೃತ ಭಾಷೆ. ವ್ಯಾಕರಣ ಮತ್ತು ಛಂದ (ವಾಕ್ಚಾತುರ್ಯ)ಗಳ ಪರಿಚಯದೊಂದಿಗೆ,  ವಿವಿಧ ಭಾಷಾ ಕೌಶಲ್ಯಗಳನ್ನು ಸಹ ಕರಗತ ಮಾಡಿಕೊಳ್ಳುತ್ತಾರೆ. ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕುದುರೆ ಸವಾರಿಯಂತಹ ಕ್ರೀಡೆಗಳಲ್ಲಿ ಪ್ರಶಸ್ತಿಗಳನ್ನು ಸಹಾ ಪಡೆಯುವ ಮೂಲಕ  ಸ್ವಾವಲಂಬನೆಯ ಹಾದಿಯಲ್ಲಿ ಮುಂದಿನ ಜೀವನವನ್ನು ನಡೆಸುವಂತಾಗಲೂ ಇಲ್ಲಿ ಶಿಕ್ಷಣ ಮುಗಿಸಿ ಹೋಗುವ ಮಕ್ಕಳಿಗೆ ಕೆಲವು ಲಕ್ಷ ಹಣವನ್ನೂ ಸಹಾ ನೀಡುವುದು ಇಲ್ಲಿನ ವಿಶೇಷತೆಯಾಗಿದೆ.

ಈ ಗುರುಕುಲದಿಂದ ಪದವಿ ಪಡೆಯುವ ಪ್ರತಿಯೊಬ್ಬರೂ ಸ್ವಾವಲಂಬಿಗಳಾಗುತ್ತಾರೆ ಮತ್ತು ಜೀವನೋಪಾಯಕ್ಕಾಗಿ ಯಾರನ್ನೂ  ಅವಲಂಭಿಸದೇ, ಗೋಪಾಲಕ್ (ಸ್ಥಳೀಯ ಹಸು ಪಾಲನೆದಾರ ಮತ್ತು ಉದ್ಯಮಿ), ಸಾವಿರ ವರ್ಷಗಳ ಕಾಲ ಬಾಳಿಕೆ ಬರುವಂತಹ ಮನೆ ನಿರ್ಮಾಣ ಎಂಜಿನಿಯರ್, ಪ್ರಕ್ರಿಯೆ ಉದ್ಯಮಿ, ವೃತ್ತಿಪರ, ಶಿಲ್ಪಿ, ಸಂಗೀತಗಾರ, ಅಡುಗೆಯವರು, ಜ್ಯೋತಿಷ್ಯ (ಖಗೋಳಶಾಸ್ತ್ರ), ಹವಾಮಾನಶಾಸ್ತ್ರ, ಕುದುರೆ ಮತ್ತು ಗೂಳಿ ಸವಾರಿ, ಇತಿಹಾಸ, ಪಠಣ (ಆಯುರ್ವೇದದ ಶ್ಲೋಕಗಳು), ಶಿಲ್ಪವೇದ, ಧನುರ್ವೇದ, ಗಂಧರ್ವವೇದ (ಮ್ಯೂಸಿಷಿಯನ್), ಸಮರ ಕಲೆಗಳು, ನಿರ್ವಹಣೆ, ನೈಸರ್ಗಿಕ ವಿಜ್ಞಾನ, ವೇದ ಗಣಿತ, ಬ್ಯೂಟಿ ಪಾರ್ಲರ್‌ನಲ್ಲಿ ನುರಿತವರಾಗಿ, ಸ್ವಾವಲಂಭಿಗಳಾಗಿ ತಾವೂ ಕೆಲಸ ಮಾಡುತ್ತಾ, ಇತರೇ ಹತ್ತಾರು ಜನರಿಗೆ ಉದ್ಯೋಗ ನೀಡುವಂತಾಗುವಂತಹ ವಿಶ್ವಾಸವನ್ನು ಗಳಿಸೊಕೊಳ್ಳುವುದಲ್ಲದೇ, ಈ ಕಲಿಕೆಯಲ್ಲಿ, ಸಂಸ್ಕೃತ ಭಾಷೆ ಅವರ ಮಾತೃಭಾಷೆ, ಆಶ್ರಮ ಭಾಷೆ, ರಾಷ್ಟ್ರೀಯ ಭಾಷೆಯ ಜೊತೆಯಲ್ಲಿ ಸಂಪರ್ಕಭಾಷೆಯಾಗಿ ಇಂಗ್ಲಿಷ್ ಭಾಷೆಯಲ್ಲಿಯೂ ತರಭೇತಿ ಪಡೆದು ಸಮಾಜದಲ್ಲಿ ಎಂತಹ ಪ್ರದೇಶದಲ್ಲೂ ಎಂತಹ ಸಂಧರ್ಭದಲ್ಲೂ ಜೀವಿಸಬಲ್ಲೆ ಎಂಬ ಆತ್ಮವಿಶ್ವಾಸವನ್ನು ಮೂಡಿಸುವುದರಲ್ಲಿ ಶ್ರೀಗಳು ಮತ್ತು ಶ್ರೀಮಠ ಸಫಲವಾಗಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.

ಇದುವರೆವಿಗೂ ಸುಮಾರು 1000ಕ್ಕೂ ಅಧಿಕ ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಉಚಿತ ಊಟ ವಸತಿ ಶಿಕ್ಷಣ ನೀಡುವುದಲ್ಲದೆ ಉದ್ಯೋಗವನ್ನೂ ಒದಗಿಸುತ್ತಿದ್ದಾರೆ. ಹಿಂದುಳಿದ ಗ್ರಾಮಗಳ 500 ಕ್ಕೂ ಅಧಿಕ ಶಾಲೆಗಳನ್ನು ದತ್ತು ಪಡೆದು ಅಲ್ಲಿ ಅವಶ್ಯಕ ಶಿಕ್ಷಕರನ್ನು ನೇಮಿಸಿ ಅಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತಿದ್ದಾರೆ.  600ಕ್ಕೂ ಅಧಿಕ ವಯೋವೃದ್ಧರಿಗೆ ತಾವೇ ಗೌರವಧನ ನೀಡಿ ಸಾಕಿ ಸಲಹುತ್ತಿದ್ದಾರೆ. ವಿಶ್ವ ದರ್ಜೆಯ ಆಯುರ್ವೇದ ಹಾಗೂ ಅಲೋಪತಿ ಆಸ್ಪತ್ರೆ ಕಟ್ಟಿಸಿ ಲಕ್ಷಾಂತರ ಬಡವರಿಗೆ ಅತ್ಯಲ್ಪ ಖರ್ಚಿನಲ್ಲಿ ಅರೋಗ್ಯ ಸೇವೆ ಕೊಡಿಸುತ್ತಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನ ನೀಡಲು ಬ್ರಹ್ಮಚಾರ್ಯ ಗುರುಕುಲವನ್ನು ನಿರ್ಮಿಸಿ 100 ಕ್ಕೂ ಅಧಿಕ ವೀರ ಸನ್ಯಾಸಿಗಳನ್ನು ಬೆಳೆಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ 15 ಲಕ್ಷ ಕ್ಕೂ ಅಧಿಕ ರೈತರಿಗೆ ಗೋ ಆಧಾರಿತ / ಸಾವಯವ / ನೈಸರ್ಗಿಕ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. 10000ಕ್ಕೂ ಅಧಿಕ ದೇಶಿಯ ಬೀಜಗಳನ್ನು ಬೆಳೆಸಿ ಭಾರತದಾದ್ಯಂತ ಹಂಚುತ್ತಿದ್ದಾರೆ. ಭಾರತದ ಮೊಟ್ಟಮೊದಲ ಸಾವಯವ ಕೃಷಿ ವಿಜ್ಞಾನ ಕೇಂದ್ರ ವನ್ನು ನಿರ್ಮಿಸಿ ಲಕ್ಷಾಂತರ ರೈತರಿಗೆ ಸಮಗ್ರ ವಿಷಮುಕ್ತ ಗೋ ಆಧಾರಿತ ಕೃಷಿಯ ಜ್ಞಾನ ನೀಡುತ್ತಿದ್ದಾರೆ.

ಇದೆಲ್ಲದರ ಜೊತೆಗೆ ನಿರಂತರವಾಗಿ ದೇಶಾದ್ಯಂತ ಪರ್ಯಟನೆ ಮಾಡುತ್ತಾ ತಮ್ಮ ಪ್ರವಚನಗಳ ಮೂಲಕ  ಕೋಟ್ಯಂತರ ಭಾರತೀಯರಿಗೆ ನಮ್ಮ ದೇಶ ಧರ್ಮದ ಆಧ್ಯಾತ್ಮ ಸಂಸ್ಕೃತಿ ಪರಂಪರೆ ಆಚಾರ ವಿಚಾರಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಲೇ ಇದ್ದು, ನಮ್ಮ ಪುರಾಣಗಳಲ್ಲಿ ಯುಗಪುರುಷರ ಬಗ್ಗೆ ಓದಿ ತಿಳಿದ್ದೆವು.  ಈಗ  ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾ ಸ್ವಾಮಿಜಿಗಳ ಕಾರ್ಯಚಟುವಟಿಗೆಗಳು ಮತ್ತು ಅವರ ಆಶಯಗಳನ್ನು  ಪ್ರತ್ಯಕ್ಷವಾಗಿ ನೋಡಿದ ನಂತರ ಸಾಕ್ಷಾತ್ ಯುಗಪುರುಷರೇ ಅದೃಶ್ಯ ಕಾಡುಸಿದ್ದೇಶ್ವರ ಮಹಾ ಸ್ವಾಮಿಜಿಗಳ ರೂಪದಲ್ಲಿ ನಮ್ಮೊಡನೆ ಇರುವ ಕಾರಣ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

  1. ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಗಳ ಬಗ್ಗೆ ಓದಿ ಅವರ ಮೇಲೆ ಭಕ್ತಿ ಭಾವದಿಂದ ಗೌರವ ಮೂಡಿತ್ತು ಹಾಗೂ ಹೆಮ್ಮೆ ಆಯಿತು.

    ಜನತೆಗೆ ಇಂತವರ ಮಾರ್ಗದರ್ಶನ ದಿಂದ ಭವ್ಯ ಭಾರತದ ಕನಸು ನನಸು ಆಗುವುದು ಖಂಡಿತಾ.

    🌺🙏ಮಹಾಸ್ವಾಮಿಗಳ ಪಾದರವಿಂದಗಳಿಗೆ ಅನಂತ ನಮನಗಳು 🙏🌺

    Liked by 1 person

Leave a comment