ಇಂಡಿಗೋ ಚೆಲ್ಲಾಟ, ಪ್ರಯಾಣಿಕರ ಪರದಾಟ

ಕಳೆದ ಒಂದು ವಾರದಲ್ಲಿ ನಮ್ಮ ದೇಶದಲ್ಲಿ ಎರಡು ಪ್ರಮುಖ ಘಟನೆಗಳು ನಡೆದಿದ್ದು  ಆ ಎರಡೂ ಘಟನೆಗಳು ಕೇವಲ ದೇಶವಷ್ಟೇ ಅಲ್ಲದೇ ಇಡೀ  ಪ್ರಪಂಚದಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದೆ. ಮೊದಲನೆಯದಾಗಿ ರಷ್ಯಾ ಮತ್ತು ಉಕ್ರೇನ್ ನಡುವೆ ಕಳೆದ ನಾಲ್ಕು ವರ್ಷಗಳಿಂದಲೂ ನಡೆಯುತ್ತಿರುವ ಯುದ್ಧದ ನಡುವೆಯೂ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಸಂಪುಟದ ಹಿರಿಯ ಸಚಿವರು ಮತ್ತು ರಷ್ಯಾದ ದೊಡ್ಡ ವ್ಯಾಪಾರ ನಿಯೋಗದೊಂದಿಗೆ 2025ರ ಡಿಸೆಂಬರ್ 4 & 5ರಂದು  2 ದಿನಗಳ ಕಾಲ ನಮ್ಮ ದೇಶಕ್ಕೆ  ಭೇಟಿ ನೀಡಿ ಭಾರತ ಮತ್ತು ರಷ್ಯಾದ ನಡುವೆ  ಇಂಧನ ಮತ್ತು ರಕ್ಷಣೆಯನ್ನು ಮೀರಿ ಆನೇಕ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈ ಶಂಕರ್ ಮತ್ತು ಅನೇಕ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತನಾಡಿ ರಷ್ಯಾ ಮತ್ತು ಭಾರತದ ನಡೆವೆ ಉತ್ತಮ ವ್ಯಾಪಾರ ಸಂಬಂಧಗಳನ್ನು ಕುದುರಿಸಿಕೊಂಡು ಹೋದರೆ, ಇದೇ ಸಮಯದಲ್ಲಿ ದೇಶದ ವೈಮಾನಿಕ ವ್ಯವಸ್ಥೆಯಲ್ಲಿ ಸುಮಾರು 60% ರಷ್ಟು ಪಾಲನ್ನು ಹೊಂದಿರುವಂತ ಇಂಡಿಗೋ ಸಂಸ್ಥೆಯ ನೂರಾರು ವಿಮಾನಗಳ ಸಾವಿರಾರು ಹಾರಾಟಗಳು ಇದ್ದಕ್ಕಿದ್ದಂತೆಯೇ ಅಸ್ತವ್ಯಸ್ಥಗೊಂಡು ಮುಂಗಡವಾಗಿ ಹಣವನ್ನು ಪಾಲಿಸಿದ್ದ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಏರ್ಪಟ್ಟು, ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಸ್ಥಳೀಯ ವಾಯುಸಂಚಾರವನ್ನು ನಿಭಾಯಿಸಲು ಆಗುತ್ತಿಲ್ಲ  ಮತ್ತು ಪ್ರಸ್ತುತವಾಗಿ ಮೋದಿ ಸರ್ಕಾರವು,  ಸರ್ಕಾರಿ ಸ್ವಾಮ್ಯತೆಯ ಕಂಪನಿಗಳಿಂದ ಸರ್ಕಾರದ ಪಾಲನ್ನು ಹಿಂದೆತೆಗೆದುಕೊಂಡು ಖಾಸಗೀಕರಣಕ್ಕೆ  ಒತ್ತು ನೀಡಿರುವುದರಿಂದಲೇ ಈ ರೀತಿಯ  ಅವ್ಯವಸ್ಥೆಯಾಗಿದೆ ಎಂದು ಜಗತ್ತಿನ ಮುಂದೆ  ಎತ್ತಿ ತೋರಿಸಿ  ಮೋದಿ  ಮತ್ತು ಅವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಷಡ್ಯಂತ್ರವೊಂದು ನಡೆದಿದ್ದು, ಇದರ ಕುರಿತಾಗಿ ಸರ್ಕಾರ ತೆಗೆದುಕೊಂಡು ಕ್ಷಿಪ್ರ ನಿರ್ಧಾರ ಪರಿಸ್ಥಿತಿಯನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾಗಿದೆ.

ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ,  ಮನೆಯಲ್ಲಿರುವ ಸಣ್ಣ ಮಕ್ಕಳು ಮನೆಗೆ ಯಾರಾದರೂ ಅತಿಥಿಗಳು ಬಂದಿರುವಾಗ,   ಅವರ ಅತಿಥ್ಯಕ್ಕೇ ಹೆಚ್ಚು ಗಮನವಹಿಸಿ ತಮ್ಮ ವಿರುದ್ಧ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬುದನ್ನು ಅರಿತು  ಅತಿಥಿಗಳ ಸಮ್ಮುಖದಲ್ಲೇ ಅತ್ಯಂತ ಹೆಚ್ಚು ಗಲಾಟೆ ಮಾಡಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡುವಂತೆ  ಈ ಪ್ರಕರಣದಲ್ಲೂ ರಷ್ಯಾ ಅಧ್ಯಕ್ಷರು ಭಾರತಕ್ಕೆ ಬಂದಂತಹ ಸಂಧರ್ಭದಲ್ಲಿಯೇ ಇಂಡಿಗೋ ಸಹಾ ಇದನ್ನೇ ಮಾಡಿರುವುದು ಸ್ಪಷ್ಟವಾಗಿದೆ.

ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಈ ಬಾರಿಯ ಮೋದಿ ಸರ್ಕಾರಕ್ಕೆ ಸ್ವಪಕ್ಷದ ಬಹುಮತವಿಲ್ಲದೇ, ಎನ್.ಡಿ.ಎ ಅಂಗಪಕ್ಷಗಳದ ಜೆಡಿ(ಯು) ಮತ್ತು ಟಿಡಿಪಿಗಳನ್ನೇ ಹೆಚ್ಚಾಗಿ ಅವಲಂಭಿಸಿರುವಾಗ, ಮೋದಿಯವರ ಸರ್ಕಾರದಲ್ಲಿ ಟಿಡಿಪಿ ಪಕ್ಷದ ಸಾಂಸದರಾದ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ನಾಗರಿಕ ವಿಮಾನಯಾನ ಸಚಿವರಾಗಿದ್ದಾರೆ. ಖಾಸಗೀ ಕಂಪನಿಗಳ ಏಕಸ್ವಾಮ್ಯತೆಯಿಂದಾಗಿ  ಈ ರೀತಿಯ ಪರಿಸ್ಥಿತಿ ಉದ್ಭವಿಸಿದ್ದು ಇದಕ್ಕಾಗಿ ಈ  ಪ್ರಕರಣದ ಕುರಿತಾಗಿ ವಿಮಾನಯಾನ ಸಚಿವರವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು ಮತ್ತು ಮೋದಿಯವರು ರಾಜೀನಾಮೆ ನೀಡ ಬೇಕು ಎಂದು ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಆಗ್ರಹಿಸುತ್ತಿರುವ ಹಿಂದೆ ರಾಜಕೀಯದ ವಾಸನೆ ದಟ್ಟವಾಗಿ ಬರುತ್ತಿದೆ.

ನಮ್ಮ ದೇಶದ ಭದ್ರತಾ ಸಲಹಗಾರರಾದ ಅಜಿತ್ ದೋವೆಲ್ ಮತ್ತು ದಿವಂಗತ CDS ಜನರಲ್ ಬಿಪಿನ್ ರಾವತ್ ಅವರು ಹೇಳುತ್ತಿದ್ದ 2.5 ಫ್ರಂಟ್ ವಾರ್ ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಭಾರತ ಇಂದು ತನ್ನ ಮೊದಲನೇ ಶತ್ರುವಾಗಿ  ಚೀನಾ  ಮತ್ತು  ಎರಡನೇ ಶತ್ರುವಾಗಿ  ಪಾಕಿಸ್ತಾನ ವಷ್ಟೇ ಅಲ್ಲದೇ 0.5 ಫ್ರಂಟ್  ಅಂಗವಾಗಿ ಆಂತರಿಕವಾಗಿ ಶತಾಯಗತಾಯ ಮೋದಿಯವರನ್ನು ಅಧಿಕಾರದಿಂದ ಇಳಿಸಿ ತಾನು ಅಧಿಕಾರಕ್ಕೆ ಬರಬೇಕು ಎಂದು ಹವಣಿಸುತ್ತಿರುವ ರಾಹುಲ್ ಗಾಂಧಿಯ ಜೊತೆ  ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಪ್ರತ್ಯೇಕತಾವಾದಿ ಚಳುವಳಿಗಳು ನಕ್ಸಲ್/ಮಾವೋವಾದಿಗಳ  ಹಿಂಸಾಚಾರ ಮತ್ತು  ಜಾರ್ಜ್ ಸೊರೊಸ್, ಸ್ಯಾಮ್ ಪಿತ್ರೋಡ ಮತ್ತು ಹಿಂಡನ್‌ಬರ್ಗ್  ಮುಂತಾದ ವಿದೇಶೀ ಜನರು/ಕಂಪನಿಗಳ ಪ್ರಾಯೋಜಿತ ಭಯೋತ್ಪಾದನೆ ಸೇರಿದಂತೆ  ನೂರಾರು ಆಂತರಿಕ ಭದ್ರತಾ ಸವಾಲುಗಳು ನಿಜಕ್ಕೂ ಭಾರತವನ್ನು  ಅಭದ್ರತೆಗೆ ತಳ್ಳಿ ವಿಶ್ವದ ಅತಿ ಹೆಚ್ಚಿನ ಜನಸಂಖ್ಯೆ  ಹೊಂದಿರುವ ಮತ್ತು ದೊಡ್ಡ ಪ್ರಜಾಪ್ರಭುತ್ವ ದೇಶವಾದ  ಭಾರತವನ್ನು ಮತ್ತೆ ಛಿದ್ರ ಛಿದ್ರಗೊಳಿಸಲು ಪ್ರಯತ್ನಿಸಿತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

ಅಸಲಿಗೆ ಸಮಸ್ಯೆ ಏನೆಂದರೆ, ಅತಿಯಾದ ಕೆಲಸದ ಸಮಯ, ಕಡಿಮೆ ವಿಶ್ರಾಂತಿಯಿಂದಾಗಿ ಹೆಚ್ಚುತ್ತಿರುವ ಆಯಾಸದ ಬಗ್ಗೆ ಪೈಲಟ್ ಸಂಘಗಳು ದೀರ್ಘಕಾಲದಿಂದ ಎತ್ತಿದ್ದ ಕಳವಳಗಳು, ವಿಮಾನದ ಸಿಬ್ಬಂದಿಗಳು ಮತ್ತು ಪ್ರಯಾಣಿಕರ ಸುರಕ್ಷತೆಯನ್ನೂ ಪರಿಗಣಿಸಿ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 2024 ರ ಆರಂಭದಲ್ಲಿ ರೂಪಿಸಿದ ಹೊಸ ನೀತಿಯಂತೆ ಒಬ್ಬ ಪೈಲೆಟ್ ಹಗಲಿನಲ್ಲಿ 10 ಗಂಟೆಗಳಿಗಿಂತ ಹೆಚ್ಚು ಅವಧಿಗೆ ಕರ್ತವ್ಯನಿರ್ವಹಿಸುವಂತಿಲ್ಲ ಮತ್ತು ರಾತ್ರಿ ಪಾಳಿಯಲ್ಲಿ 8 ಗಂಟೆಗೂ ಹೆಚ್ಚು ಕಾಲ ದುಡಿಯುವಂತಿಲ್ಲ.  ಕಡ್ಡಾಯ ವಾರದ ವಿಶ್ರಾಂತಿಯನ್ನು 36 ಗಂಟೆಗಳಿಂದ 48 ಗಂಟೆಗಳಿಗೆ ಹೆಚ್ಚಿಸಿ, ಹೆಚ್ಚುವರಿಯಾಗಿ 12 ಗಂಟೆಗಳ ಅಲಭ್ಯತೆಯನ್ನು ಸೇರಿಸಿ ಈ ನಿಯಮವನ್ನು ಈ ವರ್ಷ ಎರಡು ಹಂತಗಳಲ್ಲಿ ಜಾರಿಗೆ ತರಲಾಗಿದ್ದು ಇತ್ತೀಚಿನ ಹಂತವು ನವೆಂಬರ್ 1 ರಿಂದ ಜಾರಿಗೆ ತರಲು ಎಲ್ಲಾ ವಿಮಾನಯಾನ ಕಂಪನಿಗಳಿಗೂ  ಹೊಸ ಪೈಲಟ್‌ಗಳನ್ನು ನೇಮಿಸಿಕೊಳ್ಳಲು 18 ತಿಂಗಳುಗಳ ಕಾಲ ಸಾಕಷ್ಟು ಸಮಯವನ್ನು ನೀಡಿತ್ತು.

ಸರ್ಕಾರದ ಹೊಸ ನೀತಿಗೆ ಅನುಗುಣವಾಗಿ Air India, Vistara, Akasa, Spice jet ಎಲ್ಲಾ ಕಂಪನಿಗಲು ಹೆಚ್ಚುವರಿ ಪೈಲಟ್‌ಗಳನ್ನು ನೇಮಿಸಿಕೊಂಡರೂ, ಅಧಿಕ ಪೈಲೆಟ್ಟುಗಳನ್ನು ನೇಮಿಸಿಕೊಳ್ಳದೇ, ಇರುವ ಪೈಲೆಟ್ಟುಗಳಿಂದಲೇ ಹೆಚ್ಚುವರಿ ದುಡಿಸಿಕೊಳ್ಳುವ ಸಲುವಾಗಿ ದೇಶದ ವೈಮಾನಿಕ ವ್ಯವಸ್ಥೆಯಲ್ಲಿ ಸುಮಾರು 60% ರಷ್ಟು ಪಾಲನ್ನು ಹೊಂದಿರುವ ಇಂಡಿಗೋ ಸಂಸ್ಥೆಯು ಸರ್ಕಾರದ ಈ ನಿಯಮವನ್ನು ಹಿಂತೆಗೆದುಕೊಳ್ಳುವಂತೆ ಮಾಡುವ ಉದ್ದೇಶದಿಂದಲೋ  ಏನೋ? (ಕೃಷಿ ನೀತಿ ಹಿಂಪಡೆದಂತೆ) ಉದ್ದೇಶಪೂರ್ವಕವಾಗಿ ಹೆಚ್ಚುವರಿ ಪೈಲಟ್‌ಗಳನ್ನು ನೇಮಿಸಿಕೊಳ್ಳಲೇ ಇಲ್ಲ. ದೇಶದಲ್ಲಿ ಅತಿ ಹೆಚ್ಚು  ಏರ್‌ಬಸ್ ಎ320 ಮಾಡೆಲ್ ವಿಮಾನಗಳನ್ನು ಹೊಂದಿರುವ ಈ ಕಂಪನಿ ಕೇಂದ್ರ ಸರಕಾರದ ಮೇಲೆ ಪ್ರಯಾಣಿಕರ ಮೂಲಕ ಒತ್ತಡ ಹೇರುವ ಸಲುವಾಗಿಯೂ ಏನೋ? ರಷ್ಯಾದ ಅಧ್ಯಕ್ಷರು ಬಂದಿರುವಂತಹ ಸಮಯದಲ್ಲೇ ಇದ್ದಕ್ಕಿದ್ದಂತೆಯೇ ಪೈಲೆಟ್ಟುಗಳು ರಜೆ ಹೋಗಿದ್ದಾರೆ  ಎಂಬ ನೆಪವೊಡ್ಡಿ ಯಾವುದೇ ಮುನ್ಸೂಚನೆ  ಇಲ್ಲದೇ  ಏಕಾ ಏಕಿ ನೂರಾರು ವಿಮಾನಗಳನ್ನು ರದ್ದು ಮಾಡುವ ಮೂಲಕ ಪ್ರಯಾಣಿಕರನ್ನು ಅಕ್ಷರಶಃ ಹೈರಾಣು ಮಾಡಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ.

ಇಂತಹ ಪರಿಸ್ಥಿತಿಯ ದುರ್ಲಾಭವನ್ನು ಪಡೆದುಕೊಳ್ಳುವ ಸಲುವಾಗಿ ಇತರೇ ವಿಮಾನ ಸಂಸ್ಥೆಗಳು ಇದ್ದಕ್ಕಿದ್ದಂತೆಯೇ ತಮ್ಮ ಟಿಕೆಟ್ ಬೆಲೆಯಲ್ಲಿ ಹತ್ತಾರು ಪಟ್ಟು ಹೆಚ್ಚಿಸಿದ್ದೂ ಸಹಾ ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಬಿದ್ದಂತಾಗಿ ಬಹಳಷ್ಟು ಸಂಕಟ ಅನುಭವಿಸುವಂತಾಗುತ್ತಿದ್ದಂತೆಯೇ,  ವಿರೋಧ ಪಕ್ಷಗಳು, ಕೆಲವು ಮಾಧ್ಯಮಗಳು ಮತ್ತು ಕೆಲವು ವಿಛಿದ್ರಕಾರಿ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ಸರ್ಕಾರದ ವಿರುದ್ಧ ಕೆಟ್ಟ ಕೊಳಕು ಭಾಷಾ ಪ್ರಯೋಗ ಮಾಡುತ್ತಾ ಕೆಂದ್ರ ಸರ್ಕಾರಕ್ಕೆ ಎಷ್ಟು ಸಾಧ್ಯವೋ ಅಷ್ಟು ಕೆಟ್ಟ ಹೆಸರನ್ನು ತರಲು ಪ್ರಯತ್ನಿಸುತ್ತಿದ್ದದ್ದನ್ನು ಗಮನಿಸಿದ ಸರ್ಕಾರವೂ ಸಹಾ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ತಹಬದಿಗೆ ತರುವ ಸಲುವಾಗಿ ಹೊಸಾ ನೀತಿಯ  ಜಾರಿಗೆಯನ್ನು  2026ರ ಫೆಬ್ರವರಿವರೆಗೆ ವಿನಾಯಿತಿ ನೀಡಿರುವುದಲ್ಲದೇ,  ತತ್ ಕ್ಷಣದಿಂದಲೇ ದೇಶಾದ್ಯಂತ ಪ್ರಯಾಣಿಸುವ ದೂರದ ಅನ್ವಯ ಪ್ರಯಾಣ ದರವನ್ನು  ನಿಗಧಿ ಮಾಡಿದ ಪರಿಣಾಮ  ನೆನ್ನೆ ಸೋಮವಾರದ ಹೊತ್ತಿಗೆ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು,  ಇನ್ನೆರಡು ಮೂರು ದಿನಗಳಷ್ಟರಲ್ಲಿ ಸಂಪೂರ್ಣವಾಗಿ ಸುಗಮವಾಗುವ ಲಕ್ಷಣ ಕಂಡು ಬರುತ್ತಿದೆ.

ವಿರೋಧ ಪಕ್ಷ ಮತ್ತು ಇಂಡಿಗೋ ಸಂಸ್ಥೆಯ ಈ ಕ್ರಮದ ವಿರುದ್ಧ ಕೇಂದ್ರ ವಿಮಾನಯಾನ ಸಚಿವರಾದ ರಾಮ್ ಮೋಹನ್ ನಾಯ್ಡು ಅವರು ಪ್ರತಿಕ್ರಿಯಿಸಿದ್ದು, ಯಾವುದೇ ಒತ್ತಡಕ್ಕೆ ಕೇಂದ್ರ ಸರಕಾರವು ಮಣಿಯುವುದಿಲ್ಲ. ಯಾರೂ ಕೂಡ ನಮ್ಮ ಕೈ ತಿರುಚಲು ಸಾಧ್ಯವಿಲ್ಲ. ನಮಗೆ ವಿಮಾನ ಕಂಪನಿಗಳ ಹಿತಾಸಕ್ತಿಗಿಂತಲೂ ವಿಮಾನ ಪ್ರಯಾಣಿಕರ ಸುರಕ್ಷತೆ ಮತ್ತಉ ಅನುಕೂಲವೇ ಮುಖ್ಯ ಎಂಬ ಸ್ಪಷ್ಟನೆಯನ್ನು ನೀಡುವ ಮೂಲಕ ಸರ್ಕಾರದ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಇದಷ್ಟೇ  ಅಲ್ಲದೇ, ಕೇಂದ್ರ ಸರಕಾರದ ನಿರ್ದೇಶನದಂತೆ ರದ್ದುಗೊಂಡ ವಿಮಾನಗಳ ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾಡಲಾಗುತ್ತಿದೆ. ಇದುವರೆಗೂ 610 ಕೋಟಿ ರೂ. ಹಣವನ್ನು ಪ್ರಯಾಣಿಕರ ಖಾತೆಗೆ ಮರಳಿಸಲಾಗಿದೆ. ಟಿಕೆಟ್ ಹಣ ಮರುಪಾವತಿ ಜತೆಗೆ ಸುರಕ್ಷಿತವಾಗಿ ಲಗೇಜ್ ಮರಳಿಸಲಾಗುತ್ತಿದ್ದು, 3,000 ಬ್ಯಾಗ್‌ಗಳನ್ನು ಮರಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ವೆಬ್ ಸೈಟ್‌ನಲ್ಲಿ ವಿಮಾನಗಳ ಹಾರಾಟದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ.

ಇವೆಲ್ಲದರ ನಡುವೆ ಈ ರೀತಿಯ ಬಿಕ್ಕಟ್ಟಿಗೆ ಇಂಡಿಗೊದ ಮೂಲ ಕಂಪನಿ ಇಂಟರ್‌ಗೋಷ್ ಏವಿಯೇಷನ್ ಸಂಸ್ಥೆಯ ಡಚ್ ಪ್ರಜೆಯಾಗಿರುವ ಕಂಪನಿಯ ಸಿಇಓ ಪೀಟರ್ ಎಲ್ಬರ್ಸ್  ಜೊತೆಗೆ ಆಡಳಿತ ಮಂಡಳಿಯ ಎಂಟು ಸದಸ್ಯರೇ ಮೂಕ ಕಾರಣ ಎಂದು ಸಂಸ್ಥೆಯ ಪೈಲಟ್‌ಗಳು ಆರೋಪಿಸಿದ್ದಾರೆ. ದೇಶದ ನಾಗರಿಕರು ಹಾಗೂ ಇಂಡಿಗೊ ಆಡಳಿತ ಮಂಡಳಿಗೆ ಅವರು ಬರೆದ ಬಹಿರಂಗ ಪತ್ರದಲ್ಲಿ ದೇಶಾದ್ಯಂತ ಆಗುತ್ತಿರುವ ಈ ಪರಿಯ ಅವ್ಯವಸ್ಥೆಗೆ ಪೀಟರ್ ಆಡಳಿತ ಮಂಡಳಿಯ ನೀತಿಗಳೇ ಕಾರಣವೆಂದು ಆರೋಪಿಸಲಾಗಿದೆ. ಕಳೆದ ಒಂದು ವರ್ಷದಿಂದ ಹೊಂದಾಣಿಕೆ ಇಲ್ಲದ ಪಾಳಿಗಳು, ನಿದ್ದೆ ಇಲ್ಲದ ರಾತ್ರಿಗಳು, ಸೂಕ್ತ ವೇತನ ನೀಡದ ನಿಯಮಗಳು, ಪ್ರತಿ ಹಂತದಲ್ಲೂ ಸಿಬ್ಬಂದಿಯನ್ನು ಅವಮಾನಿಸಿದ ಪ್ರಸಂಗಗಳ ಜೊತೆಗೆ ಹೆಚ್ಚುವರಿಗಾಗಿ ಹೊಸಾ ಪೈಲೆಟ್ಟುಗಳನ್ನು ನೇಮಕ ಮಾಡದೇ ಇರುವುದೇ  ಸಮಸ್ಯೆ ಉಲ್ಬಣವಾಗುವುದಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಪೈಲಟ್ ಗಳ ಈ  ದೂರಿನನ್ವಯ  ಇಂಡಿಗೊದ ಆಡಳಿತ ಮಂಡಳಿ ಬಿಕ್ಕಟ್ಟು ನಿರ್ವಹಣಾ ತಂಡವನ್ನು ರಚಿಸಿದ್ದು, ಆ ತಂಡವು ಪರಿಸ್ಥಿತಿ ನಿರ್ವಹಣೆಗೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಮೂಲಕ ಸಮಗ್ರ ಸಮನ್ವಯ ಕೇಂದ್ರ ಸಮಸ್ಯೆ ನಿವಾರಣೆಗೆ ಶ್ರಮಿಸುವ ಮೂಲಕ ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕೆ ಗಮನ ಹರಿಸಲಿದೆ.

ಇಂಡಿಗೊ ಅವಾಂತರದಿಂದ ಐದಾರು ದಿನಗಳ ಕಾಲ ದೇಶಾದ್ಯಂತ ಬಹುತೇಕ ಎಲ್ಲಾ ವಿಮಾನ ನಿಲ್ದಾಣಗಳಲ್ಲಿಯೂ ಪ್ರಯಾಣಿಕರು ಪರದಾಡಿದ್ದು, ಜರ್ಮನ್‌ ನಿಂದ ಬೆಂಗಳೂರಿಗೆ ಆಗಮಿಸಿದ್ದ ಮತ್ತು ಇಲ್ಲಿಂದ ಜೋಧಪುರಕ್ಕೆ ತೆರಳುತ್ತಿದ್ದ ಆ ಮಹಿಳೆಗೆ ಟಿಕೆಟ್ ರದ್ದಾದ ಪರಿಣಾಮ ವಿಮಾನ ನಿಲ್ದಾಣದಲ್ಲಿಯೇ ಮತ್ತೊಂದು ವಿಮಾನ ಸಂಸ್ಥೆಯ ಮೂಲಕ ಟಿಕೆಟ್ ಬುಕ್ ಮಾಡಿಕೊಂಡು ಹೋಗಲು ಪರದಾಡಿದ ಪ್ರಸಂಗ ದೇಶವಿದೇಶಾದ್ಯಂತ ಸುದ್ದಿ ಮಾಡಿದರೆ, ಬೆಂಗಳೂರಿನಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡುತ್ತಿರುವ ಮೇಧಾ ಮತ್ತು ಸಂಗ್ರಾಮ್ ಅವರು ನವೆಂಬರ್ 23 ರಂದು ಭುವನೇಶ್ವರದಲ್ಲಿ ವಿವಾಹವಾಗಿ ಹುಬ್ಬಳ್ಳಿಯಲ್ಲಿ ನಿಶ್ಚಯಿಸಲಾಗಿದ್ದ ಆರತಕ್ಷತೆಗಾಗಿ ಡಿಸೆಂಬರ್ 2 ರಂದು ಭುವನೇಶ್ವರ-ಬೆಂಗಳೂರು-ಹುಬ್ಬಳ್ಳಿಗಾಗಿ ಇಂದಿಗೋ ವಿಮಾನಗಳನ್ನು ಬುಕ್ ಮಾಡಿದ್ದರು, ದುರಾದೃಷ್ಟವಷಾತ್  ಪದೇ ಪದೇ ವಿಮಾನ ವಿಳಂಬವಾಗಿ ಅಂತಿಮವಾಗಿ ಡಿಸೆಂಬರ್ 3 ರಂದು ವಿಮಾನ ರದ್ದಾಯಿತು. ಪೂರ್ವನಿರ್ಧಾರದಂತೆ ಹುಬ್ಬಳ್ಳಿಯ  ಕಲ್ಯಾಣ ಮಂಟಪದಲ್ಲಿ ಆರತಕ್ಷತೆಗಾಗಿ ಬಂಧು-ಮಿತ್ರರು ಬಂದಿದ್ದ ಕಾರಣ, ವಧು-ವರರು  ಭುವನೇಶ್ವರದಿಂದಲೇ ತಮ್ಮ ಮದುವೆಯ ಆರತಕ್ಷತೆಯನ್ನು  ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾಡುವ ಮೂಲಕ ವಿಚಿತ್ರವಾದ ಇತಿಹಾಸವನ್ನು ನಿರ್ಮಿಸಿದ್ದದ್ದು ವಿಪರ್ಯಾಸ ಎನಿಸಿತು.

ರಷ್ಯಾದ ಅಧ್ಯಕ್ಷರ ಭಾರತ ಭೇಟಿಯ ಸಮಯದಲ್ಲಿ ಇಡೀ ಸರ್ಕಾರಿ ಯಂತ್ರವು ಕಾರ್ಯನಿರತವಾಗಿರುವಾಗ ಉದ್ದೇಶಪೂರ್ವಕವಾಗಿ ದೇಶೀಯ ವಿಮಾಮನಯಾನದಲ್ಲಿ ಶೇ.65ರಷ್ಟು ಪಾಲುದಾರಿಕೆ ಹೊಂದಿರುವ ಇಂಡಿಗೋ ಕೃತಕವಾಗಿ ವಿಮಾನಗಳ ಅಭಾವ (ಟಿಕೆಟ್ ಕ್ಯಾನ್ಸಲ್ ತಂತ್ರ) ಸೃಷ್ಟಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಮಾತನಾಡಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇಂಡಿಗೋ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.  ಅದೇ ರೀತಿಯಾಗಿ ದೇಶೀಯ ವಿಮಾನಯಾನದಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಗಳ ಏಕಸ್ವಾಮ್ಯತೆಯನ್ನು(monopoly)ಯನ್ನು  ಕಡಿಮೆ ಮಾಡುವ ಸಲುವಾಗಿ ಭಾರತೀಯ ವಾಯುಯಾನ ವಲಯವನ್ನು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಮುಕ್ತವಾಗಿ ತೆರೆಯುವ ಮೂಲಕ ಏಕಸ್ವಾಮ್ಯತೆಯನ್ನು ಒಡೆಯುವ ಸಾಧ್ಯತೆಯೂ  ಹೆಚ್ಚಾಗಿದೆ. ಇದರ ಜೊತೆ ಜೊತೆಗೆ DGCA ಅಧಿಸೂಚನೆಯ ಅನುಷ್ಠಾನದ ಬಗ್ಗೆ 18 ತಿಂಗಳುಗಳ ಕಾಲ ಸಮಯ ಕೊಟ್ಟಿದ್ದರೂ ಅದರ ಕುರಿತಾಗಿ ಕೊಂಚವೂ ಕ್ರಮ ಕೈಗೊಳ್ಳದ ಇಂಡಿಗೂ ಸಂಸ್ಥೆಯ ಸಿಇಓ ಮತ್ತು ಆ ತಪ್ಪನ್ನು ನೋಡಿಯೋ ನೋಡದೇ ಸುಮ್ಮನಿದ್ದ ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವುದು ನಿಶ್ಚಿತವಾಗಿದೆ.

ಆರ್ಥಿಕವಾಗಿ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಮ್ಮ ಭಾರತ ದೇಶವನ್ನು  ಜಾತಿ, ಧರ್ಮ ಮತ್ತು ಭಾಷೆಗಳ ಮೂಲಕ ಒಡೆಡು ಆ ವೇಗವನ್ನು ತಡೆಯಲು ಹವಣಿಸುತ್ತಿರುವ ಪಟ್ಟಭದ್ರ ಶಕ್ತಿಗಳನ್ನು ಎದುರಿಸಲು ಕೇವಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರವೇ ಸಾಕಾಗದೇ, ನಿಶ್ಚಿತವಾಗಿಯೂ ಪ್ರತಿಯೊಬ್ಬ ಭಾರತೀಯರೂ ಜಾತಿ, ಧರ್ಮ ಮತ್ತು ಭಾಷೆಗಳನ್ನು ಬದಿಗಿಟ್ಟು ಹೋರಾಡಲೇ ಬೇಕಾದ ಅನಿವಾರ್ಯ ಸಂದರ್ಭ  ಎದುರಾಗಿದ್ದು ಅದಕ್ಕಾಗಿ ಎಲ್ಲರೂ ಕಟಿಬದ್ಧರಾಗಿ ಸನ್ನದ್ದರಾಗೋಣ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment