ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ, ಅವರ ಕಾರ್ಯಕ್ಷೇತ್ರದಲ್ಲಿ ಮಾಡಿರುವ ಸೇವೆ ಮತ್ತು ಅದರಿಂದ ಸಮಾಜದ ಮೇಲೆ ಆಗುವ ಪರಿಣಾಮಗಳನ್ನು ನೆನೆದು ಕೃತಜ್ಞತಾ ಪೂರ್ವವಾಗಿ ಅಂತಹ ಸಾಧಕರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸುವುದು ಸಂಪ್ರದಾಯವಾಗಿದೆ. ಆದರೆ ಕೆಲವೊಂದು ಬಾರಿ ಕೆಲವು ಸಾಧಕರಿಗೆ ನೀಡುವ ಪ್ರಶಸ್ತಿಗಳಿಂದಲೇ ಅಂತಹ ಪ್ರಶಸ್ತಿಗಳಿಗೇ ಹೆಚ್ಚಿನ ಗೌರವ ಬರುತ್ತದೆ ಎಂದರೆ ಅದು ಆ ಮಹಾನ್ ಸಾಧಕರ ಸೇವೆ ಎಂತಹ ಅಪೂರ್ವವಾದದ್ದು ಎಂದು ತಿಳಿದು ಬರುತ್ತದೆ. ಕೇಂದ್ರ ಸರ್ಕಾರದ ೨೦೨೬ರ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ನಡೆದಾಡುವ ವಿಶ್ವಕೋಶ, ಪುರುಷಸರಸ್ವತಿ ಎಂದೇ ಪ್ರಖ್ಯಾತರಾಗಿರುವ ನಶಿಸಿ ಹೋಗುತ್ತಿದ್ದ ಅಷ್ಟಾವಧಾನ ಕಲೆಯನ್ನು ಮತ್ತೆ ಪುನರುಜ್ಜೀವನಕ್ಕೆ ತಂದು ಶತಾವಧಾನದ ಕಲೆಯನ್ನು ಸಿದ್ದಿಸಿಕೊಂಡಿರುವ ಶ್ರೀ ಶತಾವಧಾನಿ ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿರುವ ಮೂಲಕ ಆ ಪದ್ಮ ಪ್ರಶಸ್ತಿಗೇ ಭೂಷಣಪ್ರಾಯರಾಗಿಸಿದ್ದಾರೆ ಎಂದರೂ ತಪ್ಪಾಗದು.
ಮೂಲತಃ ದೇವರಾಯ ಸಮುದ್ರಂ ಕಡೆಯಿಂದ ಕಾಲಾನಂತರ ಕೋಲಾರದಲ್ಲಿ ನೆಲಸಿದ್ದ ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಗಳ ಮಗನಾಗಿ ಡಿಸೆಂಬರ್ 4, 1962ರಲ್ಲಿ ಕೋಲಾರದಲ್ಲಿ ಜನಿಸಿದರು. ಮಾತೃಭಾಷೆ ತಮಿಳು, ನೆರೆಹೊರೆಯಲ್ಲಿ ತೆಲುಗು ಪ್ರಭಾವ, ಶಾಲೆಯಲ್ಲಿ ಕಲಿತಿದ್ದು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಜೊತೆಗೆ ಸಾಂಪ್ರದಾಯಸ್ಥ ಮನೆಯಲ್ಲಿ ಸಂಸ್ಕೃತ, ಹೀಗೆ ಕನ್ನಡ, ಸಂಸ್ಕೃತ, ತಮಿಳು, ತೆಲುಗು , ಹಿಂದಿ ಮತ್ತು ಇಂಗ್ಲೀಷ್ ಬಾಷೆಯ ಮೇಲಿನ ಪಾಂಡಿತ್ಯ ಅವರಿಗೆ ಬಾಲ್ಯದಿಂದಲೂ ಲಭಿಸಿತ್ತು. ಇದರ ಜೊತೆಗೆ ಸಂಗೀತ, ನೃತ್ಯ ಮತ್ತು ಸಾಹಿತ್ಯದಂತಹ ಲಲಿತಕಲೆಗಳಲ್ಲಿಯೂ ಅವರಿಗೆ ಅಪರಿಮಿತ ಆಸಕ್ತಿ. ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ನಂತರ ಗೌರಿಬಿದನೂರಿನಲ್ಲಿ ಪ್ರೌಢ ಶಾಲಾಭ್ಯಾಸ ಮುಗಿಸಿ ಬೆಂಗಳೂರಿನ UVCE ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ TATA institute ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವಿ ಪಡೆದರು. ಇದರ ಜೊತಯಲ್ಲಿಯೇ ಮೈಸೂರು ವಿಶ್ವವಿದ್ಯಾಲಯದ ಮೂಲಕ ಸಂಸ್ಕೃತದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದದು ಕೆಲಕಾಲ ಆರ್.ವಿ ಕಾಲೇಜು ಮತ್ತು ಎಂ.ಎಸ್ ರಾಮಯ್ಯ ಇಂಜೀನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಮಾಡಿದರೂ ಆಧ್ಯಾತ್ಮಿಕ ಸಾಹಿತ್ಯದ ಕಡೆಯೇ ಒಲವಿದ್ದ ಕಾರಣ ಸಾಹಿತ್ಯ ಕೃಷಿಗೇ ಮೀಸಲಾಗಿರಿಸಿಕೊಂಡರು.
ಬಾಲ್ಯದಿಂದಲೂ ಕವಿ ಆಗುವ ತುಡಿತವಿದ್ದ ಪರಿಣಾಮ ಶಾಸ್ತ್ರದಿಂದ ಹಿಡಿದು ತತ್ವಶಾಸ್ತ್ರದವರೆಗೆ,ಸಂಗೀತ, ರಾಜಕೀಯ, ಪ್ರಸಕ್ತ ವಿಷಯ ಹೀಗೆ ಅನೇಕ ವಿಷಯಗಳಲ್ಲಿ ಪರಿಣತಿಯನ್ನು ಪಡೆಯುತ್ತಿದ್ದಂತಹ ಸಂಧರ್ಭದಲ್ಲಿಯೇ ಲೇಪಾಕ್ಷಿ ಮೆದಾವರಂ ಮಲ್ಲಿಕಾರ್ಜುನ ಶರ್ಮರವರ ಅಷ್ಟಾವಧಾನವನ್ನು ನೋಡಿ ಅವರಿಂದ ಪ್ರಭಾವಿತರಾಗಿ ಅವಧಾನ ಕಲೆಯತ್ತ ಗಮನ ಹರಿಸಿದ ಶ್ರೀ ಗಣೇಶರು ಅತೀ ಶೀಘ್ರದಲ್ಲಿಯೇ ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಪ್ರತಿಭಾಪೂರ್ಣ ವ್ಯಕ್ತಿಯಾಗಿ ಪ್ರವರ್ಧಮಾನಕ್ಕೆ ಬಂದರು.
ಅವಧಾನವೆಂದರೆ, ಚಿತ್ತೈಕಾಗ್ರ್ಯಮವಧಾನಂ ಎಂದು ವಾಮನನು ಹೇಳಿರುವಂತೆ, ಮನಸ್ಸಿನ ಏಕಾಗ್ರತೆಯೇ ಅವಧಾನ. ಸ್ಮರಣೆ, ಸದ್ಯಸ್ಸ್ಫೂರ್ತಿ, ಬುದ್ಧಿ ಮತ್ತು ಆಶುಕವಿತ್ವ ಶಕ್ತಿಗಳಿಂದ ನಡೆಸುವ ಒಂದು ವಿದ್ವತ್ಕಲೆಯೇ ಅವಧಾನಕಲೆ. ಅವಧಾನಿಯು ಪೃಚ್ಛಕ ಪಂಡಿತರು ಒಡ್ಡುವ ವಿವಿಧ ಸಮಸ್ಯೆಗಳಿಗೆ ಯಥೋಚಿತವಾಗಿ, ಆಶುವಾಗಿ, ಯಾವುದೇ ಲೇಖನ ಸಾಮಗ್ರಿಯಿಲ್ಲದೆ, ಛಂದೋಬದ್ಧ ಪದ್ಯಗಳ ರೂಪದಲ್ಲಿ ಪರಿಹಾರ ನೀಡುವುದು ಈ ಕಲೆಯ ವಿಶೇಷ. ಧಾರಣ ಹಾಗೂ ಪೂರಣ ಅವಧಾನದ ಮೂಲಧಾತುಗಳು. ಸಮಸ್ಯೆಗಳನ್ನು ನಾಲ್ಕು ಸುತ್ತುಗಳಲ್ಲಿ ಸ್ವಾರಸ್ಯಕರವಾಗಿ ಪರಿಹರಿಸುವುದು ಪೂರಣವಾದರೆ, ಸಮಸ್ಯೆ ಮತ್ತು ಹಿಂದಿನ ಸುತ್ತುಗಳಲ್ಲಿ ನೀಡಿರುವ ಪರಿಹಾರಪಾದಗಳನ್ನು ನೆನಪಿನಲ್ಲಿಟ್ಟು, ಮುಂದುವರಿಸುವುದು ಧಾರಣೆ. ಇವೆಲ್ಲವುಗಳ ಮಧ್ಯೆ ಅಪ್ರಸ್ತುತ ಪುಚ್ಛಕರು ಅವರ ಆಲೋಚನೆಗಳನ್ನು ಭಂಗ ಪಡಿಸಲು ನಾನಾ ರೀತಿಯ ಪ್ರಶ್ನೆಗಳನ್ನು ಹಾಕುತ್ತಾ ಕುಚೇಷ್ಟೆಗಳನ್ನು ಮಾಡುತ್ತಿದ್ದರೂ ಶಾಂತ ಚಿತ್ತವಾಗಿ ಎಲ್ಲರಿಗೂ ಉತ್ತರಿಸುವುದೇ ಅವಧಾನದ ಕಲೆ. ಅವಧಾನಗಳಲ್ಲಿ ಅನೇಕ ವಿಧಗಳಿದ್ದರೂ, ಅಷ್ಟಾವಧಾನ ಮತ್ತು ಶತಾವಧಾನಗಳು ಪ್ರಚುರವಾಗಿವೆ. ಅಷ್ಟಾವಧಾನದಲ್ಲಿ, ಎಂಟು ಸಮಸ್ಯೆಗಳನ್ನೂ, ಶತಾವಧಾನದಲ್ಲಿ ನೂರನ್ನೂ ಏಕಕಾಲದಲ್ಲಿ ಪರಿಹರಿಸುವುದಾಗುತ್ತದೆ. ಕೊನೆಯಲ್ಲಿ, ಪೃಚ್ಛಕರ ಪರಿಹಾರಗಳೊಡನೆ ಅವಧಾನವು ಪೂರ್ಣವಾಗುತ್ತದೆ.
ತೆಲುಗಿನ ಪಿಸುಪಾಟಿ ಚಿದಂಬರ ಶಾಸ್ತ್ರಿಗಳ ಪ್ರೇರಣೆಯಿಂದ, ಕನ್ನಡದ ಹಿರಿಯ ಶ್ರೇಷ್ಠ ಕವಿಗಳಾಗಿದ್ದ ಬೆಳ್ಳಾವೆ ನರಹರಿಶಾಸ್ತ್ರಿಗಳು, 1933-36ರ ಸಮಯದಲ್ಲಿ ಅವಧಾನವೊಂದನ್ನು ಮಾಡಿ ತೋರಿಸಿದ ನಂತರ 1982ರಲ್ಲಿ ಗೆಳೆಯರ ಸಮ್ಮುಖದಲ್ಲಿ ಮೊದಲ ಬಾರಿಗೆ ಗಣೇಶ್ ಅವರು ಮಾಡಿದ ಅವಧಾನದಿಂದಾಗಿಯೇ ಕಲಾಸಕ್ತರಿಗೆ ಅವಧಾನದ ಕಲೆಯ ಪರಿಚಯವಾಗಿ ನಾಡಿನಾದ್ಯಂತ ಅನೇಕ ಸಂಘ ಸಂಸ್ಥೆಗಳು ಅವರಿಂದ ಅಷ್ಟಾವಧಾನದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗಣೇಶ್ ಅವರಿಗೂ ಮತ್ತು ಅಷ್ಟಾವಧಾನ ಕಲೆಗೂ ಹೆಚ್ಚಿನ ಪ್ರಾಶಸ್ತ್ಯ ದೊರರೆಯಿತು. ಕೇವಲ ಕರ್ನಾಟಕ ಮತ್ತು ಭಾರತವಷ್ಟೇ ಅಲ್ಲದೇ, ಅಮೇರಿಕಮತ್ತು ಯೂರೋಪ್ ದೇಶಗಳಲ್ಲಿಯೂ ಸುಮಾರು 20ಕ್ಕೂ ಅಧಿಕ ಅಷ್ಟಾವಧಾನದ ಕಾರ್ಯಕ್ರಮಗಳನ್ನು ನಡೆಸಿದಿದ್ದಾರೆ. ಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಕನ್ನಡದಲ್ಲಿ ಮೂರು, ತೆಲುಗು ಮತ್ತು ಸಂಸ್ಕೃತದಲ್ಲಿ ಒಂದೊಂದು ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನ ಮಾಡುವುದಕ್ಕೆ ಸಿದ್ಧರಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೇವಲ ಕನ್ನಡವಲ್ಲದೇ, ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿರುವುದಲ್ಲದೇ, ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಸಾಧನೆ ಮಾಡಿರುವ ಏಕೈಕ ಭಾರತೀಯರಾಗಿದ್ದಾರೆ ಡಾ. ಗಣೇಶ್.
ಕಾವ್ಯಮೀಮಾಂಸೆ, ಛಂದಶ್ಯಾಸ್ತ್ರ, ವೇದಾಂತ, ಉಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ, ಅಲಂಕಾರ ಶಾಸ್ತ್ರ ಹೀಗೆ ಹತ್ತು ಹಲವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯ ಪಡೆದಿರುವುದಲ್ಲದೇ, ಸಂಗೀತ, ನೃತ್ಯ, ಚಿತ್ರಕಲೆ ಮುಂತಾದವುಗಳಲ್ಲಿಯೂ ಸಹಾ ಪ್ರಾವೀಣ್ಯವನ್ನು ಪಡೆದಿದ್ದಾರೆ. ಭರತ ನಾಟ್ಯಕ್ಕಾಗಿಯೇ ಅನೇಕ ತಿಲ್ಲಾನಗಳನ್ನೂ ರಚಿಸಿದ್ದಾರೆ. ಭಾರತೀಯ ಭಾಷೆಗಳಾದ ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ, ಪಾಳಿ, ಶೌರಸೇನಿ, ಮರಾಠೀ, ಬಂಗಾಲೀ, ಮುಂತಾದುವುಗಳಲ್ಲದೇ ವಿದೇಶೀಯ ಭಾಷೆಗಳಾದ ಇಂಗ್ಲೀಷ್, ಗ್ರೀಕ್, ಲ್ಯಾಟಿನ್, ಇಟಾಲಿಯನ್ ಹೀಗೆ ಒಟ್ಟು 18 ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ.
ಉತ್ತಮ ಕವಿ, ಅತ್ಯುತ್ತಮ ಉಪನ್ಯಾಸಕ ಮತ್ತು ಖ್ಯಾತ ಚಿಂತಕರೂ ಆಗಿರುವ ಡಾ. ಗಣೇಶ್ ಇದುವರೆವಿಗೂ ಕನ್ನಡ, ಸಂಸ್ಕೃತ ಹಾಗೂ ತೆಲುಗು ಭಾಷೆಗಳಲ್ಲಿ ಸಾಹಿತ್ಯ, ತತ್ವಶಾಸ್ತ್ರ, ನೀತಿಶಾಸ್ತ್ರ, ಅಲಂಕಾರ ಶಾಸ್ತ್ರ, ವಿಮರ್ಶೆ,ಯಕ್ಶಗಾನ, ನೃತ್ಯ, ತಂತ್ರಜ್ಞಾನ, ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ಅಪೂರ್ವವಾದ ಹಾಗೂ ಆಸಕ್ತಿದಾಯಕವಾದ ವಿಚಾರಗಳ ನೂರಕ್ಕೂ ಹೆಚ್ಚಿನ ಲೇಖನಗಳನ್ನು ಬರೆದಿದ್ದಾರಲ್ಲದೇ ಅವುಗಳ ಕುರಿತಂತೆ ಚರ್ಚೆಗಳಲ್ಲಿಯೂ ಭಾಗವಹಿಸಿದ್ದಾರೆ. ಇದರ ಜೊತೆಗೆ ಉತ್ತಮ ಸಂಶೋಧಕರೂ ಆಗಿರುವ ಗಣೇಶರು, ಪ್ರಾಚೀನ ಭಾರತದ ವಾಸ್ತುಶಾಸ್ತ್ರ ಹಾಗೂ ತಂತ್ರಜ್ಞಾನವೂ ಸೇರಿದಂತೆ ವೇದಗಳ ಇತಿಹಾಸ ಮುಂತಾದ ವಿರಳ ವಿಷಯಗಳ ಬಗ್ಗೆ ಅನೇಕ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ಸಂಸ್ಕೃತದಲ್ಲಿ ಹನ್ನೆರಡಕ್ಕೂ ಹೆಚ್ಚಿನ ನಾಟಕಗಳನ್ನೂ, ಸುಮಾರು ಹದಿನಾರು ಕಾವ್ಯಗಳನ್ನೂ ರಚಿಸಿರುವ ಇವರು ಕನ್ನಡದಲ್ಲಿ ಎಂಟು ಕಾವ್ಯಗಳನ್ನು, ಮೂರು ಕಾದಂಬರಿಗಳನ್ನು ಹಾಗೂ ಆರು ಅನುವಾದಗಳನ್ನು ಮಾಡಿದ್ದಾರೆ.
ಕೇವಲ ಹಿಂದೂ ಧರ್ಮವಲ್ಲದೇ ಭಾರತೀಯ ಇತರೇ ಧರ್ಮಗಳ ಕುರಿತಂತೆಯೂ ಅಪಾರವಾದ ಜ್ಞಾನವನ್ನು ಹೊಂದಿರುವ ಗಣೇಶರ ಕುರಿತಂತೆ ಒಂದು ಪ್ರಸಂಗವನ್ನು ತಿಳಿಸಿದರೆ ಅರ್ಥವಾಗುತ್ತದೆ.
ಅದೊಮ್ಮೆ ರಾಜಸ್ಥಾನದ ಮೌಂಟ್ ಅಬುವಿನ ಜೈನ ದೇವಾಲಯಕ್ಕೆ ಹೋಗಿದ್ದಾಗ, ಸಾರ್ವಜನಿಕರ ಭೇಟಿಯ ಸಮಯ ಮುಗಿದ ನಂತರ ಕೇವಲ ಜೈನರಿಗೆ ಮಾತ್ರ ಆ ದೇವಾಲಯಕ್ಕೆ ಪ್ರವೇಶ ಎಂದು ಅಲ್ಲಿಯ ದ್ವಾರಪಾಲಕ ಗಣೇಶರಿಗೆ ಹೇಳಿದಾಗ, ಕುತೂಹಲದಿಂದ ಬಂದವರು ಜೈನರೋ ಅಲ್ಲವೋ ಎಂದು ಹೇಗೆ ಗುರುತಿಸುತ್ತೀರಿ? ಎಂದು ಗಣೇಶ್ ಪ್ರಶ್ನಿಸುತ್ತಾರೆ. ಆಗ ಆತ ಜೈನರ ಶ್ಲೋಕದವೊಂದನ್ನು ಹೇಳಿ,ಈ ಶ್ಲೋಕವನ್ನು ಸಂಪೂರ್ಣವಾಗಿ ಹೇಳಿದವರಿಗೆ ಮಾತ್ರವೇ ಪೂಜಾ ಸಮಯದಲ್ಲಿ ಪ್ರವೇಶವಿದೆ ಎಂದ ತಕ್ಷಣವೇ, ನಿರರ್ಗಳವಾಗಿ ಆ ಶ್ಲೋಕವಷ್ಟೇ ಅಲ್ಲದೇ, ಅದರ ತಾತ್ಪರ್ಯವನ್ನು ಗಣೇಶರು ಹೇಳಿದ ಕೂಡಲೇ ಮೂಕವಿಸ್ಮಿತನಾಗಿ ಅವರಿಗೆ ವಂದಿಸಿ ದೇವಾಲಯದ ಪ್ರವೇಶಕ್ಕೆ ಆ ದ್ವಾರಪಾಲಕ ಅನುವು ಮಾಡಿಕೊಡುತ್ತಾರೆ.
ಆಂಗ್ಲ ಭಾಷೆಯಲ್ಲಿ Time is money ಎಂಬ ಮಾತಿದ್ದು, ಇದರಲ್ಲಿ ಹಣ ಮಾಡುವುದು ಎನ್ನುವುದಕ್ಕಿಂತಲೂ ಸಮಯವ್ಯರ್ಥ ಮಾಡಬಾರದು ಎನ್ನುವ ಆಶಯವಾಗಿದ್ದು, ಗಣೇಶ್ ಅವರು ಸಮಯಕ್ಕೆ ಕೊಡುವ ಮಹತ್ವ ಎಂತಹದ್ದು ಎಂದರೆ, ಗೆಳೆಯ ಅವಿನಾಶ್ ಭಟ್ ತಿಳಿಸಿದಂತೆ, ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೆಟ್ರೋ ಸ್ಟೇಷನ್ ನಿಂದ ಮೆಜೆಸ್ಟಿಕ್ ಮಧ್ಯೆ ಮೂರು ನಿಲ್ದಾಣಗಳಿದ್ದು, ಸುಮಾರು ಐದು ನಿಮಿಷಗಳಲ್ಲಿ ಅಲ್ಲಿಗೆ ತಲುಪಬಹುದಾಗಿದೆ. ನಮಗೆ ನಿಮಗೆ ಆ ಐದು ನಿಮಿಷ ಹೇಗೆ ಕಳೆಯುತ್ತದೆಯೋ ಗೊತ್ತೇ ಆಗುವುದಿಲ್ಲ. ಅದರೆ ಅದೇ ಶತಾವಧಾನಿಗಳು ಅದೇ ಐದು ನಿಮಿಷಗಳನ್ನೂ ವ್ಯರ್ಥ ಮಾಡದೇ ಅಲ್ಲೂ ಕುಳಿತು ಏನನ್ನೋ ಬರೆಯುವ ಮೂಲಕ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕವೇ ಅವರು ಅಂತಹ ಸಾಧನೆಗೈಯಲು ಸಾಧ್ಯವಾಗಿದೆ ಎಂದತೂ ಅತಿಶಯವಾಗದು.
ಇನ್ನು ಊರಿಗೆ ಅರಸನಾದರೂ ತಾಯಿಗೆ ಮಗನೇ ಎನ್ನುವ ಮಾತಿದ್ದು, ಸಾರಸ್ವತ ಲೋಕದಲ್ಲಿ ಗಣೇಶ್ ಅವರು ಎಂತಹ ಸಾಧನೆ ಮಾಡಿದ್ದರೂ, ಇಳೀ ವಯಸ್ಸಿನಲ್ಲಿದ್ದ ತಮ್ಮ ತಾಯಿಯವರ ಸೇವೆಯನ್ನು ಮಾಡುವುದನ್ನು ಮರೆಯುತ್ತಿರಲಿಲ್ಲ ಎಂಬುದನ್ನು ನಿವೃತ್ತ ಪೋಲೀಸ್ ಅಧಿಕಾರಿಗಳು ಮತ್ತು ಆತ್ಮೀಯರೂ ಆದ ಜೆ. ಬಿ ರಂಗಸ್ವಾಮಿ ಅರ್ಥಾ ನಮ್ಮೆಲ್ಲರ ಪ್ರೀತಿಯ ಜೇಬರ್ ಅವರು ಬಹಳ ಅದ್ಭುತವಾಗಿ ತಿಳಿಸಿದ್ದಾರೆ. 2007ರ ದಸರಾ ಕವಿಗೋಷ್ಠಿ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದು, ಆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾ ಮಂತ್ರಿಗಳೂ ಸೂಚಿಸಿದ್ದ ಕಾರಣ, ಕಾರ್ಯಕ್ರಮದ ಮೆರಗನ್ನು ಹೆಚ್ಚಿಸುವ ಸಲುವಾಗಿ ಸಂಸ್ಕೃತದಲ್ಲಿ ಕವನ ವಾಚಿಸಲು ಶತಾವಧಾನಿ ಗಣೇಶರನ್ನು ದಸರಾ ಕವಿಗೋಷ್ಠಿಗೆ ಬಹಳ ಪ್ರೀತಿಯಿಂದ ಆಹ್ವಾನಿಸಿದಾಗ, ಅವರ ಆಹ್ವಾನಕ್ಕೆ ಧನ್ಯವಾದಗಳನ್ನು ತಿಳಿಸಿ ಬಹಳ ನಯವಂತಿಕೆಯಿಂದ ವಯಕ್ತಿಕ ಕೌಟುಂಬಿಕ ಸಮಸ್ಯೆಗಳಿಂದಾಗಿ ಬರಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ಕ್ಷಮೆ ಇರಲಿ ಎಂದರಂತೆ
ಅರೇ!! ಬ್ರಹ್ಮಚಾರಿಗಳಾದ ಶ್ರೀ ಗಣೇಶ್ ಅವರಿಗೆ ಕೌಟುಂಬಿಕ ಸಮಯಸ್ಯೇ? ಎಂದು ಸೂಕ್ಷ್ಮವಾಗಿ ವಿಚಾರಿಸಿದಾಗ, ಆ ಸಮಯದಲ್ಲಿ ಅವರ ಮನೆಯಲ್ಲಿ 84 ವರ್ಷದ ಅವರ ತಾಯಿಯವರು ಒಬ್ಬರೇ ಇದ್ದು ಅವರ ಸ್ನಾನಾದಿ ಮೊದಲ್ಗೊಂಡು, ಅಡುಗೆ ತಿಂಡಿ ಎಲ್ಲವನ್ನೂ ಮಾಡಿ ಅವರಿಗೆ ತಿನ್ನಿಸಿ ಅವರು ತಮ್ಮ ಕಾಲೇಜಿಗೆ ಹೋಗಿ ಬರುತ್ತಿದ್ದು, ಅವರನ್ನು ಬಿಟ್ಟು ರಾತ್ರಿ ಮೈಸೂರಿಗೆ ಬರಲಾಗದು ಎಂದಿದ್ದಂತೆ. ಅಯ್ಯೋ ಅದಕ್ಕೇನಂತೇ ಅಮ್ಮಾವರನ್ನೂ ಮೈಸೂರಿಗೆ ಕರೆದುಕೊಂಡು ಬನ್ನಿ. ಅವರಿಗೆ ಕಾರಿನಿಂದ ಹಿಡಿದು ಉಳಿದುಕೊಳ್ಳಲು ಸುಸಜ್ಜಿತ ಅತಿಥಿ ಗೃಹದ ವ್ಯವಸ್ಥೆಯೆಲ್ಲವನ್ನು ಮಾಡಿಕೊಡುತ್ತೇವೆ ಎಂದು ಜೇಬರ್ ಅವರು ಹೇಳದಾಗ, ಮುಪ್ಪಿನ ತಾಯಿಯವರು ಮನೆಯಲ್ಲಿ ಓಡಾಡಿಕೊಂಡಿರಲು ಆರೋಗ್ಯವಾಗಿದ್ದರೆಯೇ ಹೊರತು ಅಷ್ಟು ದೂರದ ಪ್ರಯಾಣ ಮಾಡಲು ಅವರಿಗೆ ಸಾಧ್ಯವಾಗದು. ಹಾಗಾಗಿ ದಯವಿಟ್ಟು ಕ್ಷಮಿಸಿ ಎಂದಾಗ, ಒಬ್ಬ ಮಗನಾಗಿ ತಾಯಿಗೆ ಮಾಡಬೇಕಾದ ಕರ್ತವ್ಯವನ್ನು ನೆನೆದು ಜೇಬರ್ ಅವರಿಗೇ ಅರಿವಾಗದಂತೆ ಅವರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತ್ತಂತೆ. ಅಂತಹ ವಿದ್ವತ್ತಿನೊಂದಿಗೆ ಇಂತಹ ಸಾರ್ಥಕ ಸಾತ್ವಿಕ ಬದುಕು ನಡೆಸುತ್ತಿರುವ ಅಂತಹ ಮಗನನ್ನು ಪಡೆದ ಆ ತಾಯಿ ನಿಜಕ್ಕೂ ಧನ್ಯಳೂ ಎಂದರೂ ತಪ್ಪಾಗದು.
ಕನ್ನಡ ಹಿರಿಯ ಸಾಹಿತಿ ಭೈರಪ್ಪನವರ ಕಾದಂಬರಿಯನ್ನು ಸಂಸ್ಕೃತಕ್ಕೆ ಅನುವಾದ ಮಾಡಿರುವ ಗಣೇಶರು, ನನಗೆ ಮರುಜನ್ಮವೇನಾದರೂ ಇದ್ದಲ್ಲಿ ಆಗ ಡಾ.ಎಸ್.ಎಲ್. ಭೈರಪ್ಪನವರ ಮಗನಾಗಿ ಹುಟ್ಟಬೇಕು ಎಂದಿದ್ದಾರೆ. ಜನರಲ್ಲಿ ದಿನೇ ದಿನೇ ಕುಸಿಯುತ್ತಿರುವ ಭಾಷೆ ಮತ್ತು ಸಾಹಿತ್ಯಗಳ ಆಸಕ್ತಿಯ ನಡುವೆ ಅವುಗಳ ಪುನರುಜ್ಜೀವನಕ್ಕಾಗಿ ಆಜೀವ ಬ್ರಹ್ಮಚಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಗಣೇಶರು ನಶಿಸಿಯೇ ಹೋಗಿದ್ದ ಅಷ್ಟಾವಧಾನದ ಕಲೆಗೆ ಜೀವ ತುಂಬಿ ಇನ್ನೂ ಅನೇಕ ಯುವಕರು ಆ ಕಲೆಯತ್ತ ಆಸಕ್ತಿ ಬೆಳೆಸುವ ಮೂಲಕ ಪ್ರಪಂಚಾದ್ಯಂತ ಕನ್ನಡದ ಕಂಪನ್ನು ಹರಡುತ್ತಿರುವ ಶ್ರೀ ಶತಾವಧಾನಿ ಗಣೇಶ್ ಆವರ ಸಾಧನೆಯನ್ನು ಗುರುತಿಸಿ ಈ 2026ನೇ ಸಾಲಿನ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿರುವುದು ನಿಜಕ್ಕೂ ಸಾರಸ್ವತ ಲೋಕಕ್ಕೇ ಹೆಮ್ಮೆಯ ಸಂಗತಿಯಾಗಿದ್ದು, ಅತೀ ಶೀಘ್ರದಲ್ಲಿಯೇ ಅವರ ಸಾಧನೆಗೆ ಪ್ರದ್ಮವಿಭೂಷಣ ಮತ್ತು ಭಾರತರತ್ನದಂತಹ ಪ್ರಶಸ್ತಿಗಳು ಸಿಗುವಂತಾಗಲೀ ಎಂದು ಹಾರೈಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ