ಹಿಂದೆಲ್ಲಾ ಭಜನೆ, ಹರಿಕಥೆ ಮತ್ತು ನಾಟಕಗಳ ಮೂಲಕ ಕಥೆಗಳನ್ನು ಜನರಿಗೆ ಹೇಳುವುದರೊಂದಿಗೆ ಮನರಂಜನೆಯನ್ನು ತಲುಪಿಸುವ ಪ್ರಯತ್ನವಾಗಿತ್ತು. ನಂತರ ಕತ್ತಲು ಮತ್ತು ಬೆಳಕಿನ ಸಂಕೀರ್ಣದಲ್ಲಿ ಛಾಯಾಚಿತ್ರಗಳನ್ನು ತೆಗೆಯುವ ಕಲೆಯನ್ನು ರೂಡಿಸಿಕೊಂಡ ನಂತರ ಅದೇ ತಂತ್ರಜ್ಞಾನದ ಮೂಲಕ ಮೂಕಿ ಚಿತ್ರಗಳು ಆರಂಭವಾಗಿ ನಂತರ ಅದರ ಜೊತೆ ಶಬ್ಧವನ್ನೂ ಅಳವಡಿಸುವ ಕಲೆ ಕರಗತವಾದಾಗ ಟಾಕೀ ಸಿನಿಮಾಗಳ ಜನರನ್ನು ಮನರಂಜಿಸಲಾರಂಭಿಸಿದವು. ಆನಂತರ ಕಪ್ಪು ಬಿಳುಪಿನ ಜಾಗದಲ್ಲಿ ಬಗೆ ಬಗೆಯ ವರ್ಣ ಚಿತ್ರಗಳು ಆರಂಭವಾಗಿ ಈಗ ಎಲ್ಲವೂ ಡಿಜಟಲೀಕರಣಗೊಂಡು ಸಿನಿಮಾ ರೀಲ್ ಗಳ ಬದಲಾಗಿ ಇಂಟರ್ನೆಟ್ ಸಹಾಯದಿಂದ ಒಂದೇ ಕಡೆಯಿಂದ ಏಕ ಕಾಲಕ್ಕೆ ಸಾವಿರಾರು ಚಿತ್ರಮಂದಿರಗಳನ್ನು ಲಕ್ಷಾಂತರ ಪ್ರೇಕ್ಷರನ್ನು ರಂಜಿಸುವ ತಂತ್ರಜ್ಞಾನ ಬಂದಿದ್ದು, ಈ ಕ್ಷೇತ್ರದಲ್ಲಿ ನಿರಂತರವಾಗಿ ಹೊಸಾ ಹೊಸಾ ಆವಿಷ್ಕಾರಗಳು ನಡೆಯುತ್ತಲೇ ಬಂದಿವೆ.
ಸಿನಿಮಾ ಮಂದಿರ ಕತ್ತಲಿನಲ್ಲಿ ಕುಳಿತು ಬೆಳಕಿನ ದೃಶ್ಯ ಮತ್ತು ಆಡಿಯೊಗಳಿಂದ ಸಂಯೋಜಿತವಾದ ಕಥೆಗಳನ್ನು ನೋಡುವ ಎನ್ನುವುದಕ್ಕಿಂತಲೂ ಆ ಕಥೆಯಲ್ಲಿರುವ ಭಾವನೆಗಳನ್ನು ಅರ್ಥೈಸಿಕೊಳ್ಳುವ ಇಲ್ಲವೆ ಕುಳಿತಲ್ಲಿಂದಲೇ ಅನುಭವಿಸುವ ಕೇಂದ್ರವಾಗಿದೆ. ಹಾಗಾಗಿಯೇ ಬೆಂಗಳೂರಿನ ಹೃದಯಭಾಗವಾದ ಗಾಂಧಿನಗರದಲ್ಲಿ ಸುಬೇದಾರ್ ರಸ್ತೆಯಲ್ಲಿ ಏಶಿಯಾದಲ್ಲೇ ಮೊಟ್ಟಮೊದಲ ಬಾರಿಗೆ ಅತಿದೊಡ್ಡ ಅಂದರೆ ಸುಮಾರು 1465 ಸೀಟ್ಗಳ ಕಪಾಲಿ ಚಿತ್ರಮಂದಿರವನ್ನು ಶ್ರೀ ರಾಜಗೋಪಾಲ್ ರವರು 1965ರಲ್ಲಿ ಕಟ್ಟಲು ಆರಂಭಿಸಿ 1968ರಲ್ಲಿ ಅದು ಸಂಪೂರ್ಣವಾಗಿ ಆ ಚಿತ್ರಮಂದಿರದಲ್ಲಿ ಮೊಟ್ಟಮೊದಲ ಚಿತ್ರವಾಗಿ ಆಂಗ್ಲ ಭಾಷೆಯ Seven Wonders of the World ಬಿಡುಗಡೆ ಮಾಡಲು ಮುಂದಾದಾಗ, ಅಂದಿನ ಕನ್ನಡ ಸಂಘಟನೆಗಳ ಒತ್ತಾಯಕ್ಕೆ ಮಣಿದು, ಕಲ್ಪನ ಮತ್ತು ಗಂಗಾಧರ್ ಅಭಿನಯದ ಚೌಕದ ದೀಪ ಎಂಬ ಕನ್ನಡ ಚಿತ್ರ ಮೊಟ್ಟ ಮೊದಲ ಪ್ರದರ್ಶನಗೊಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
1968ರಲ್ಲೇ ಗೀತಪ್ರಿಯ ಅವರ ಚೊಚ್ಚಲ ನಿರ್ದೇಶನದ ಡಾ. ರಾಜಕುಮಾರ್ ಮತ್ತು ಕಲ್ಪನಾ ಅಭಿನಯದ ಮಣ್ಣಿನ ಮಗ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಎಂಬ ಹೆಸರಿಗೆ ಪಾತ್ರವಾಯಿತು. ಅಷ್ಟು ದೊಡ್ಡ ಆಸನದ ಸಾಮರ್ಥ್ಯದ ಕಪಾಲಿ ಚಿತ್ರಮಂದಿರದಲ್ಲಿ ಸಾಕಷ್ಟು ಸಂಖ್ಯೆಯ ಪ್ರೇಕ್ಷಕರಿದ್ದರೂ ಸಹ ಚಿತ್ರಮಂದಿರ ಖಾಲಿಯಾಗಿ ಕಾಣುತ್ತದೆ ಎಂಬ ಭಯದಿಂದ ಅನೇಕ ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಅನೇಕ ಚಲನಚಿತ್ರ ಹಿಂಜರಿಯುತ್ತಿದ್ದರು. ಅಂತಹ ಬೃಹತ್ ಚಿತ್ರಮಂದಿರಲ್ಲಿ ತುಂಬಿದ ಗೃಹದಲ್ಲಿ 100 ದಿನಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ಪ್ರದರ್ಶನಗೊಂಡು, ಕಪಾಲಿ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಶತದಿನೋತ್ಸವ ಕಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆಗೂ ಮಣ್ಣಿನ ಮಗ ಪಾತ್ರವಾಯಿತು. ಇಂತಹ ಬೃಹತ್ ಚಿತ್ರಮಂದಿರದಲ್ಲಿ ತಮ್ಮ ಸಿನಿಮಾ ರಿಲೀಸ್ ಆಗಿ ಅದು ಹೌಸ್ ಫುಲ್ ಪ್ರದರ್ಶನ ಕಂಡರೆ ತನ್ನ ಜೀವನ ಸಾರ್ಥಕ ಎಂಬ ಆಶಯ ಅಂದಿನ ಪ್ರತಿಯೊಬ್ಬ ಕಲಾವಿದನಿಗಿತ್ತು.
1983ರಲ್ಲಿ ಇದೇ ಕಪಾಲಿ ಚಿತ್ರಮಂದಿರದಲ್ಲಿ ರಾಜಕುಮಾರ್ ಮತ್ತು ಲೋಹಿತ್ (ಪುನೀತ್ ರಾಜಕುಮಾರ್) ಅಭಿನಯದ ಭಕ್ತಪ್ರಹ್ಲಾದ ಚಿತ್ರ ಪ್ರದರ್ಶನ ಆಗುತ್ತಿದ್ದಂತಹ ಸಮಯದಲ್ಲೇ ಕಪಾಲಿ ಚಿತ್ರಮಂದಿರದ ಪಕ್ಕದಲ್ಲೇ ನಿರ್ಮಾಣವಾಗುತ್ತಿದ್ದ ಏಳು ಅಂತಸ್ತಿನ ಗಂಗಾರಾಮ್ಸ್ ಕಟ್ಟಡ ಕುಸಿದು ಸುಮಾರು 123 ಜನರು ಸಾವನ್ನಪ್ಪಿದರೆ, 120 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ದುರಂತದ ನಂತರ ಕಾಕತಾಳೀಯವೋ ಎನ್ನುವಂತೆ ಕಪಾಲಿ ಚಿತ್ರಮಂದಿರಕ್ಕೆ ಗರಬಡಿದಂತಾಗಿ ಆದಾದ ನಂತರ ಅಲ್ಲೊಂದು ಇಲ್ಲೊಂದು ತುಂಬಿದಗೃಹದ ಪ್ರದರ್ಶನಗಳು ಕಾಣುವಂತಾಗಿ ಕನ್ನಡ ಚಲನಚಿತ್ರ ನಿರ್ದೇಶಕರು/ ನಿರ್ಮಾಪಕರ ತಾತ್ಸಾರದಿಂದಾಗಿ ಕಪಾಲಿ ಸಿನಿಮಾ ಹಿಂದಿನ ಮೋಡಿ ಕಳೆದುಕೊಳ್ಳುವಂತಾಯಿತು.
ಅಂತಹ ವಿಶಾಲ ಪರದೆಯ ಜನಪ್ರಿಯ ಚಿತ್ರಮಂದಿರ ಕರ್ನಾಟಕದಲ್ಲಿ ಇದೆ ಎನ್ನುವುದೇ ನಮ್ಮ ಕನ್ನಡಿಗರ ಹೆಮ್ಮೆ ಎಂದು ಬೀಗುತ್ತಿದ್ದಾಗಲೇ, ಅಂದಿನ ಅಬಕಾರಿ ದೊರೆ ದಾಸಪ್ಪ & ದಾಸಪ್ಪ ನವರು, 1993 ರಲ್ಲಿ ಬರೊಬ್ಬರಿ 35 ಕೋಟಿ ರೂಗಳಿಗೆ 57,000 sq ft ಜಾಗ ಮತ್ತು ಬಿಲ್ಡಿಂಗ್ ಎರಡನ್ನು ಖರೀಧಿಸಿ ನಂತರ 2017ರ ಅಕ್ಟೋಬರ್ ನಲ್ಲಿ ಸುಮಾರು 49 ವರ್ಷ ಹಳೆಯದಾದ ಏಕ ಪರದೆಯ ಸಿನಿಮಾ ಮಂದಿರದಲ್ಲಿ ಹುಲಿರಾಯ ಎಂಬ ಕನ್ನಡ ಚಿತ್ರ ಕಡೆಯದಾಗಿ ಪ್ರದರ್ಶಿಸಿ ಆ ಚಿತ್ರಮಂದಿರವನ್ನು ಶಾಶ್ವತವಾಗಿ ಮುಚ್ಚುವ ಮೂಲಕ ಕಪಾಲಿ ಸಿನಿಮಾ ಮಂದಿರ ಇತಿಹಾಸ ಸೇರಿಕೊಳ್ಳುತ್ತದೆ. ಆ ಕಪಾಲಿ ಸಿನಿಮಾ ಮಂದಿರದ ಸ್ಥಳದಲ್ಲಿ ಮಾಲ್ ನಿರ್ಮಿಸಿ ಅದರಲ್ಲಿ ಸುಮಾರು 6-7 ಪರದೆಗಳ ಮಲ್ಟಿಪ್ಲೆಕ್ಸ್ ಆರಂಭಿಸುವ ಯೋಜನೆಯನ್ನು ಜಾರಿಗೆ ತಂದರಾದರೂ, 2020ರ ಜುಲೈ ನಲ್ಲಿ ಕಪಾಲಿ ಸಿನಿಮಾ ಮಂದಿರವಿದ್ದ ಹಿಂದೆಯೇ ಮೂರು ಅಂತಸ್ತಿನ ಕಟ್ಟಡ ಕುಸಿದು ಯಾವುದೇ ಸಾವುನೋವು ಸಂಭವಿಸಲಿಲ್ಲವಾದರೂ ಅದನ್ನೇ ಅಪಶಕುನ ಎಂದು ಭಾವಿಸಿದ ಆ ಮಾಲಿಕರು ಆ ಜಾಗವನ್ನು ಮಾರಾಟ ಮಾಡಲು ಹವಣಿಸುತ್ತಿದ್ದಾಗಲೇ 2016 ನಲ್ಲಿ ಬರೊಬ್ಬರಿ 125 ಕೋಟಿಗಳಿಗೆ ತೆಲುಗು ಚಿತ್ರರಂಗದ ಹೆಸರಾಂತ ನಟ ಕೃಷ್ಣ ಅವರ ಮಗ super star ದೂಕುಡು ಮಹೇಶ್ ಖರೀಧಿಸಿದ ನಂತರ ಅಲ್ಲಿನ ಚಿತ್ರಣವೇ ಬದಲಾಗುತ್ತದೆ.
ಆದಾಗಲೇ ಹೈದರಾಬಾದ್ನಲ್ಲಿ 2018ರ ಡಿಸೆಂಬರ್ ನಲ್ಲಿ ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ಮಹೇಶ್ ಬಾಬು ಮತ್ತು ಭಾರತದ ಪ್ರಮುಖ ಮಲ್ಟಿಪ್ಲೆಕ್ಸ್ ಸರಪಳಿಯಾದ ಏಷ್ಯನ್ ಸಿನಿಮಾಸ್ ನ ಸಹಭಾಗಿತ್ವದಲ್ಲಿ ಗಚಿಬೌಲಿಯ ಶರತ್ ಸಿಟಿ ಕ್ಯಾಪಿಟಲ್ ಮಾಲ್ನಲ್ಲಿ 7-ಪರದೆಗಳ ಪ್ರೀಮಿಯಂ ಸೂಪರ್ಪ್ಲೆಕ್ಸ್ ಅನ್ನು ಎಎಮ್ಬಿ ಸಿನಿಮಾಸ್ ಎಂಬ ಹೆಸರಿನಲ್ಲಿ ಅಧಿಕೃತವಾಗಿ ಉದ್ಘಾಟಿಸಿ ಅದು ಭಾರೀ ಯಶಸ್ವಿಯಾದ ನಂತರ ಈಗ ಅದೇ ರೀತಿಯ ಐಷಾರಾಮಿ ಮಾಲ್ ಅನ್ನು ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲೂ ನಿರ್ಮಿಸಿ ಆ ಸಿನಿಮಾ ಮಂದಿರಕ್ಕೆ ಹಳೆಯ ಕಪಾಲಿ ಹೆಸರನ್ನೂ ಸೇರಿಸಿಕೊಂಡು ಕಪಾಲಿ ಮಾಲ್ ಎಂದು ಕರೆದು ತಮ್ಮ ಪ್ರೀಮಿಯಂ ಮಲ್ಟಿಪ್ಲೆಕ್ಸಿಗೆ ಎಎಂಬಿ ಸಿನಿಮಾಸ್ ಕಪಾಲಿ ಎಂಬ ಹೆಸರಿಟ್ಟು 2025 ರ ಡಿಸೆಂಬರ್ 16ರಂದೇ ಉದ್ಘಾಟನೆ ಆಗಬೇಕಿದ್ದರೂ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲ್ಪಟ್ಟು, ಸರಿಯಾಗಿ ಒಂದು ತಿಂಗಳ ನಂತರ ಜನವರಿ 16, 2026ರಂದು ಅಧಿಕೃತವಾಗಿ 60-65 ಅಡಿ ಅಗಲದ ವಿಶಾಲವಾದ ಪರದೆಯ ಸುಮಾರು ಒಂಬತ್ತು ಪರದೆಗಳನ್ನು ಒಳಗೊಂಡಿರುವ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಹೊಂದಿರುವ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ ಮಂದಿರವನ್ನು ನಟ ಮಹೇಶ್ ಬಾಬು ಉದ್ಘಾಟನೆ ಮಾಡುವ ಮೂಲಕ ಹಳೆಯ ಕಪಾಲಿ ಥಿಯೇಟರಿಗೆ ಹೊಸ ಮೆರಗನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ಈಗಾಗಲೇ ಜನಪ್ರಿಯವಾಗಿರುವ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರಮಾಣಿತ ಧ್ವನಿ ವ್ಯವಸ್ಥೆಗಳು ಮತ್ತು ಉತ್ತಮ ಸೌಕರ್ಯಗಳನ್ನು ಹೊಂದಿರುವ ಪ್ರಮಾಣಿತ, 2K/4K ಪ್ರೊಜೆಕ್ಷನ್ ಹೊಂದಿದ್ದು ಪ್ರಮಾಣಿತ ಡಾಲ್ಬಿ ಅಟ್ಮೋಸ್ ಅನ್ನು ನೀಡುತ್ತವೆ. ಅಂದರೆ, AMB ಸಿನಿಮಾಸ್ ಹೈ-ಎಂಡ್ ಮಲ್ಟಿಪ್ಲೆಕ್ಸ್ ಆಗಿದ್ದು, 4K ಬಾರ್ಕೊ ಲೇಸರ್ ಪ್ರೊಜೆಕ್ಷನ್, ಡಾಲ್ಬಿ ಸಿನಿಮಾ (64-ಚಾನೆಲ್ ಡಾಲ್ಬಿ ವಿಷನ್/ಅಟ್ಮೋಸ್ನೊಂದಿಗೆ) ತಂತ್ರಜ್ಞಾನದ ಜೊತೆಗೆ ಐಷಾರಾಮಿ ಆಸನಗಳನ್ನು ಹೊಂದಿರುವ ವಿಶ್ವದರ್ಜೆಯ ಅನುಭವವನ್ನು ಪ್ರೇಕ್ಷಕರಿಗೆ ನೀಡುವುದಕ್ಕೆ ಮುಂದಾಗಿದೆ. ಡಾಲ್ಬಿ ಸಿನಿಮಾ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಅನ್ನು ಸಂಯೋಜಿಸಿ 16 ಟ್ರ್ಯಾಕ್ಗಳೊಂದಿಗೆ ಸುಧಾರಿತ ಡ್ಯುಯಲ್ 4K ಲೇಸರ್ ಪ್ರೊಜೆಕ್ಟರ್ಗಳ ಮೂಲಕ ಸಿಮಿಮಾ ದೃಶ್ಯಗಳು ಬಾರ್ಕೋ ಲೇಸರ್ ಪ್ರೊಜೆಕ್ಷನ್ ಮೂಲಕ ತೆರೆಯ ಮೇಲೆ ಮೂಡುವುದರಿಂದ ಚಿತ್ರಗಳ ಬಣ್ಣದ ಮತ್ತು ದೃಶ್ಯಗಳು ಸ್ಪಷ್ಟವಾಗಿ ಮತ್ತು ಬಹಳ ಅದ್ಭುತವಾಗಿದ್ದು ಕಣ್ಣಿಗೆ ಕಟ್ಟಿಕೊಡುವಂತಿದ್ದರೆ, ಮರು ಆಯಾಮದ ಆಡಿಯೊ ಪರಿಸರವನ್ನು ರಚಿಸಲು ಸುತ್ತಲೂ ಮತ್ತು ಓವರ್ಹೆಡ್ನೊಂದಿಗೆ ಸ್ಪೀಕರ್ಗಳನ್ನು ಹೊಂದಿರುವ ಧ್ವನಿ ವ್ಯವಸ್ಥೆ ಪ್ರೇಕ್ಷಕರನ್ನು ಸಿನಿಮಾದಲ್ಲಿ ತಲ್ಲೀನಗೊಳಿಸುವಂತಿದ್ದು ಇತರೇ ಪ್ರಮಾಣಿತ 4K/2K ಮಲ್ಟಿ ಪ್ಲೆಕ್ಸ್ ಪರದೆಗಳಿಗೆ ಹೋಲಿಸಿದರೆ ಇದು ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಈ ರೀತಿಯ ಡಾಲ್ಬಿ ಸಿನಿಮಾ ಮಂದಿರ ಪ್ರಸ್ತುತವಾಗಿ ಮಹಾರಾಷ್ಟ್ರದ ಪೂನಾದಲ್ಲಿ ಮಾತ್ರ ಇದ್ದು ಇದು ಭಾರತದಲ್ಲೇ ಎರಡನೇ ಸಿನಿಮಾ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ಉಳಿದ ಮಲ್ಟಿಪ್ಲೆಕ್ಸ್ ಗಳಲ್ಲಿ ಎಲ್ಲಾ ಪರದೆಗಳು ಒಂದೇ ರೀತಿಯದ್ದಾಗಿದ್ದು ಒಂದೇ ಸಂಖ್ಯೆಯ ಆಸನಗಳಿದ್ದರೆ ಇಲ್ಲಿ ಪ್ರತಿಯೊಂದು ಪರದೆಯ ಆಸನಗಳು ವಿಭಿನ್ನವಾಗಿದ್ದು ಬೇರೆ ಬೇರೆ ಸಂಖ್ಯೆ ಆಸನಗಳನ್ನು ಹೊಂದಿದೆ. ಅದರಲ್ಲಿನ ಒಂದು ಪರದೆಯಲ್ಲಿ ಕೇವಲ 64 ಆಸನಗಳಿದ್ದು, ಕಾರ್ಪೋರೇಟ್ ಸಂಸ್ಥೆಗಳು ಇಲ್ಲವೇ ಗಣ್ಯ ವ್ಯಕ್ರಿಗಳ ವಿಶೇಷ ಪ್ರದರ್ಶನಕ್ಕೆ ಹೇಳಿಮಾಡಿಸಿದಂತಿದೆ. ಇರುವ 9 ಸ್ಕ್ರೀನ್ ಗಳಲ್ಲಿ 6 ನೇ ಸ್ಕ್ರೀನ್ ಬಹಳ ವಿಶೇಷವಾಗಿದ್ದು ಸುಮಾರು ಸುಮಾರು 580 ರಿಂದ 588 ಆಸನಗಳುಳ್ಳ ಅರ್ಧ ವೃತ್ತಾಕಾರದ ಪರದೆಯಲ್ಲಿ ಕ್ರಿಸ್ಟಿ 6K ಡಾಲ್ಬಿ ವಿಷನ್ ಪ್ರೊಜೆಕ್ಟರ್ ಇದ್ದು, ಇಮ್ಮರ್ಸಿವ್ ಸೌಂಡ್ ವ್ಯವಸ್ಥೆಯನ್ನು ಹೊಂದಿದೆ. ಇಂದು ಒಂದು ರೀಟಿಯ ಕ್ರೀಡಾಂಗಣದಲ್ಲಿ ಕುಳಿತು ಕೊಳ್ಳುವಂತಿದ್ದು ಸಿನಿಮಾ ಪ್ರದರ್ಶನದ ವೇಳೇ ಶಬ್ಧವು ಅಕ್ಕ-ಪಕ್ಕ ಅಷ್ಟೆ ಅಲ್ಲದೇ ಎಲ್ಲ ದಿಕ್ಕಿನಿಂದಲೂ 360 ಡಿಗ್ರಿ ಸೌಂಡ್ ಕೇಳಿಸಿಕೊಳ್ಳುವ ನೈಜ ಅನುಭವವನ್ನು ಕೊಡುತ್ತದೆ.
ಇತರೇ ಮಲ್ಟಿಪ್ಲೆಕ್ಸ್ಗಳಲ್ಲಿ ಇರುವ ಆಸನಗಳಿಗೆ ಹೋಲಿಸಿದರೆ. AMB ಸಿನಿಮಾಸ್ ಐಷಾರಾಮಿ ಒರಗಿಕೊಳ್ಳುವ ಆಸನಗಳು (ಆರಾಮದಾಯಕವಾದ ರೆಕ್ಲೈನರ್ಗಳು) ಮತ್ತು ಉತ್ತಮವಾದ ಮತ್ತು ಅಷ್ಟೇ ವಿಶಾಲವಾದ ವಿಶ್ರಾಂತಿ ಕೋಣೆಗಳು ಪ್ರೇಕ್ಷರಿಗೆ ವಿಶಿಷ್ಟ ಅನುಭವನ್ನು ನೀಡಲಿದೆ. AMB ಸಾಮಾನ್ಯವಾಗಿ MB ಲಕ್ಸ್ ಮತ್ತು 3D ಯಂತಹ ಪ್ರೀಮಿಯಂ ಸ್ವರೂಪಗಳನ್ನು ಒಳಗೊಂಡಿರುತ್ತದೆ, ಇದು ಪ್ರಮಾಣಿತ ಪರದೆಯ ಆಯ್ಕೆಗಳಿಗೆ ಹೋಲಿಸಿದರೆ ಹೆಚ್ಚು ಸಂಸ್ಕರಿಸಿದ ಸಿನಿಮೀಯ ವೀಕ್ಷಣೆಯನ್ನು ಒದಗಿಸುತ್ತದೆ. ಪ್ರೇಕ್ಷಕರಿಗೆ ಐಷಾರಾಮಿ ಸೌಕರ್ಯ ನೀಡಲು ‘ಎಂ-ಲೌಂಜ್’ ಎನ್ನುವ ವಿಶೇಷ ಲೌಂಜ್ ಮತ್ತು ಆಸನ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇನ್ನು ಸಿನಿಮಾ ನೋಡುವಾಗ ಬಾಯಾಡಿಸಲು ಇಲ್ಲವೇ ಸಿನಿಮಾದ ಮಧ್ಯಂತರದಲ್ಲಿ ಪ್ರೇಕ್ಷಕರ ಬಾಯಿಯ ರುಚಿಯನ್ನು ನೀಗಿಸುವ ಸಲುವಾಗಿ ವಿಶೇಷವಾಗಿ ಆಯ್ಕೆ ಮಾಡಿದ ರುಚಿಕರವಾದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಇದ್ದು. ಅದರಲ್ಲೂ ವಿಶೇಷವಾಗಿ ಹೈದ್ರಾಬಾದ್ ಬಿರಿಯಾನಿ ಹಾಗೂ ಇತರೇ ದಕ್ಷಿಣ ಭಾರತೀಯ ತಿಂಡಿ-ತಿನಿಸುಗಳಲ್ಲದೇ ಜನಪ್ರಿಯವಾದ ಬಗೆ ಬಗೆಯ ಸ್ವಾದದ ಪಾಪ್ ಕಾರ್ನ್ ಮತ್ತು ಚಿಪ್ಸುಗಳು ಲಭ್ಯವಿದ್ದು, ಇದೆಲ್ಲವನ್ನೂ ಎಎಂಬಿ ಸಿನಿಮಾಸ್ ಪಾಕಶಾಲೆಯಿಂದಲೇ ತಯಾರಿಸಲ್ಪಡುವುದರಿಂದ ಶುಚಿ ರುಜಿ ಮತ್ತು ನೈರ್ಮಲ್ಯಕ್ಕೆ ಬಹಳಷ್ಟು ಒತ್ತಿ ನೀಡುತ್ತದೆ.
ಸರಳವಾಗಿ ಹೇಳಬೇಕೆಂದರೆ, ಸಾಮಾನ್ಯವಾದ ಒಂಟಿ ಪರದೆಯ ಸಿನಿಮಾ ಮಂದಿರಗಳಲ್ಲಿ 35 mm ಒಂದೇ ಪ್ರೊಜೆಕ್ಟರಿನಲ್ಲಿ ಸಿನಿಮಾ ನೋಡಿದರೆ, ಇಲ್ಲಿ 3 ಪ್ರೊಜೆಕ್ಟರ್ಗಳೊಂದಿಗೆ 35mm x 3 times ಅಂದ್ರೆ ಬರೊಬ್ಬರಿ 105 mm ಮೂರು ಪಟ್ಟು ಹೆಚ್ಚಿನ ರೀತಿಯಲ್ಲಿ ಎಎಂಬಿ ಸಿನಿಮಾಸ್ ಕಪಾಲಿಯಲ್ಲಿ ನೋಡಬಹುದಾಗಿದೆ. ಇಷ್ಟೆಲ್ಲಾ ಐಶಾರಾಮಿ ಸೌಲಭ್ಯಗಳಿಂದಾಗಿ ಟಿಕೆಟ್ ಬೆಲೆಗಳು ಸಾಮಾನ್ಯ ಜನರಿಗೆ ಕೈಗೆಟುಕುವುದಿಲ್ಲಾ!! ಎಂದು ಮೂಗು ಮುರಿಯುತ್ತಿದರೆ, ಅಚ್ಚರಿ ಎನ್ನುವಂತೆ ಸೋಮವಾರದಿಂದ ಗುರುವಾರದ ವರೆಗೂ ಸಾಮಾನ್ಯ ಮಲ್ಟಿಪ್ಲೆಕ್ಸ್ಗಳ ದರದೊಂದಿಗೆ ಸ್ಪರ್ಧಾತ್ಮಕವಾಗಿದ್ದು ಸರಿಸುಮಾರು ₹250 ರಿಂದ ಟಿಕೆಟ್ ಗಳು ಲಭ್ಯವಿದೆ. ಇನ್ನು ವಾರಾಂತ್ಯದಲ್ಲಿ ಡಾಲ್ಬಿ ಸಿನಿಮಾದಲ್ಲಿನ ಬ್ಲಾಕ್ಬಸ್ಟರ್ಗಳ ಟಿಕೆಟ್ಗಳು ₹350–₹600+ ವರೆಗೆ ಇರುವ ಸಾಧ್ಯತೆಯಿದೆ.
ಎಎಂಬಿ ಸಿನಿಮಾಸ್ ಕಪಾಲಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿಗಳು ತಿಳಿದ ನಂತರ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಅಲ್ಲೊಂದು ಸುಂದರವಾದ ಕನ್ನಡ ಚಿತ್ರವನ್ನು ನೋಡಿಕೊಂಡು ಅಲ್ಲಿನ ವಿವಿಧ ಬ್ರಾಂಡೆಡ್ ಮಳಿಗೆಗಳಲ್ಲಿ ಶಾಪಿಂಗ್ ಮಾಡಿ ವಿವಿಧ ತಿನಿಸುಗಳುಳ್ಳ ಫುಡ್ ಕೋರ್ಟ್ ಮಲ್ಲಿ ಊಟ ಮಾಡಿ ಆಲ್ಲಿನ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ