1977ರಲ್ಲಿ ಬಿಡುಗಡೆಯಾದ ವರನಟ ರಾಜಕುಮಾರ್, ಬಾಲ ನಟ ಲೋಹಿತ್, ಜಯಪ್ರದ ಮತ್ತು ಅಶೋಕ್ ಅಭಿನಯಿಸಿರುವ ಸನಾದಿ ಅಪ್ಪಣ್ಣ ಚಿತ್ರದಲ್ಲಿ ರಾಜಕುಮಾರ್ ಅವರ ಮನೋಜ್ಞ ಅಭಿನಯ ಒಂದು ಕಡೆಯಾದರೆ, ಆ ಚಿತ್ರದ ನಿಜವಾದ ಕಥಾವಸ್ತು ಸನಾದಿ (ಶಹನಾಯಿ) ಮತ್ತು ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರದ್ದೂ ಮತ್ತೊಂದು ಮಜಲು ಎಂದರೂ ತಪ್ಪಾಗದು. ಆ ಚಿತ್ರದಲ್ಲಿ ರಾಜ್ ಅವರ ಶರೀರಕ್ಕೆ ಶಹನಾಯಿಯ ಮೂಲಕ ಶಾರೀವಾಗಿದ್ದ ನಾಡಿನ ಹೆಸರಾಂತ ಶಹನಾಯಿ ದಂತಕತೆಯಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ವಾದನ ಚಿತ್ರವನ್ನು ಬಹು ಎತ್ತರಕ್ಕೆ ಕೊಂಡೊಯ್ದಿತ್ತು. ಶಾಸ್ತ್ರೀಯ ಸಂಗೀತ. ಕಛೇರಿಗಳಲ್ಲಿ ಸುಶ್ರಾವ್ಯವಾಗಿ ಶಹನಾಯಿ ನುಡಿಸುತ್ತಾ, ಸಂಗೀತಾಸಕ್ತರ ಗಮನವನ್ನು ಸೆಳೆಯುತ್ತಿದ್ದ ಬಿಸ್ಮಿಲ್ಲಾ ಖಾನ್ ಅವರು ಈ ಸಿನಿಮಾಕ್ಕೆ ನುಡಿಸಲು ಆರಂಭದಲ್ಲಿ ಒಪ್ಪಿಕೊಂಡಿರದಿದ್ದಾಗ, ಸಿನಿಮಾದ ನಿರ್ಮಾಪಕರಾದ ಶ್ರೀ ವಿಕ್ರಂ ಶ್ರೀನಿವಾಸ್ ಅವರು ಪಟ್ಟು ಬಿಡದೇ, ವಾರಣಾಸಿಯಲ್ಲಿ ಕೆಲವು ದಿನಗಳಾ ಇದ್ದು ಅವರ ಮನವೊಲಿಸಿ ಬಿಸ್ಮಿಲ್ಲಾ ಖಾನ್ ಕೆಲವೊಂದು ಷರತ್ತುಗಳೊಂದಿಗೆ ತಮ್ಮ ಸಂಗೀತಗಾರರೊಂದಿಗೆ ಅಂದಿನ ಮದ್ರಾಸಿನಲ್ಲಿ ಹಾಡಿನ ರೀರೆಕಾರ್ಡಿಂಗಿಗೆ ಬಂದು ಅವರ ಇಚ್ಚೆಯಂತೆ ನುಡಿಸಿದ ಸಂಪೂರ್ಣ ರಾಗಗಳಿಗೆ ಯಾವುದೇ ಆಕ್ಷೇಪ ಮಾಡದೇ ಎಲ್ಲವನ್ನೂ ರೆಕಾಂರ್ಡಿಂಗ್ ಮಾಡಿಕೊಂಡು ನಂತರ ನಿರ್ದೇಶಕ ವಿಜಯ್ ಮತ್ತು ಸಂಗೀತ ಸಂಯೋಜಕರಾದ ಜಿ ಕೆ ವೆಂಕಟೇಶ್ ಬಹಳ ಜಾಣ್ಮೆಯಿಂದ ಸೊಗಸಾಗಿ ಬಳಕೆ ಮಾಡಿಕೊಂಡಿದ್ದರಿಂದ ಸೂಪರ್ ಡ್ಯೂಪರ್ ಹಿಟ್ ಆಗಿದ್ದಲ್ಲದೇ ಕನ್ನಡ ಚಿತ್ರರಂಗದ ಮೈಲುಗಲ್ಲು ಎನಿಸಿತು.
ಸನಾದಿ ಅಪ್ಪಣ್ಣ ಚಿತ್ರಕ್ಕೆ ಬಿಸ್ಮಿಲ್ಲಾ ಖಾನ್ ಅವರು ಶಹನಾಯಿ ನುಡಿಸಲು ಒಪ್ಪಿಕೊಂಡು ರೆಕಾರ್ಡಿಂಗಿಗೆ ಬರುತ್ತಿದ್ದಾರೆ ಎಂದು ತಿಳಿದಾಕ್ಷಣ, ರಾಜಕುಮಾರ್ ಅವರು ತಮ್ಮ ಎಲ್ಲಾ ಸಿನಿಮಾಗಳ ಚಿತ್ರೀಕರಣವನ್ನು ರದ್ದುಗೊಳಿಸಿ ಹಾಡುಗಳ ರೆಕಾರ್ಡಿಂಗ್ ಮಾಡುವಾಗ ಬಿಸ್ಮಿಲ್ಲಾ ಖಾನ್ ಅವರು ಶಹನಾಯಿ ವಾದನಮಾಡುವಾಗ ತಲ್ಲೀನದಿಂದ ಆಲಿಸುತ್ತಾ, ಗಾಯಕನ ಹಾವ-ಭಾವ ಅಭ್ಯಸುತ್ತಲೇ ಅವರಿಬ್ಬರೂ ಬಹಳ ಆತ್ಮೀಯರಾಗಿ ಹೋದರು. ಬೆಂಗಳೂರಿನ ಊರ್ವಶಿ ಚಿತ್ರಮಂದಿರಲ್ಲಿ ಆ ಸಿನಿಮಾದ ಶತದಿನೋತ್ಸವ ಸಮಾರಂಭದಲ್ಲಿ ಮತ್ತೆ ಆ ದಿಗ್ಗಜರಿಬ್ಬರ ಸಮಾಗಮದಲ್ಲಿ, ಸಿನಿಮಾ ನೋಡುವಾಗ ಸ್ವತಃ ನಾನೇ ಶಹನಾಯಿ ನುಡಿಸುತ್ತಿದ್ದಂತಹ ಅನುಭವ ನನಗಾಯಿತು ಎಂದು ಬಿಸ್ಮಿಲ್ಲಾ ಖಾನ್ ಅವರು ರಾಜಕುಮಾರ್ ಅವರ ಅಭಿನಯವನ್ನು ಹೊಗಳಿದ್ದಕ್ಕೆ ಪ್ರತಿಯಾಗಿ, ಈ ಚಿತ್ರದಲ್ಲಿ ನಾನು ಕೇವಲ ಅಪ್ಪಣ್ಣನಾಗಿ ಪಾತ್ರವಹಿಸಿದ್ದೆ. ಆದರೆ ಇಡೀ ಚಿತ್ರದ ಜೀವಾಳವೇ ಬಿಸ್ಮಿಲ್ಲಾ ಖಾನ್‌ರ ಅವರ ವಾದನ ಎಂದು ಪರಸ್ಪರ ಮೆಚ್ಚಿಕೊಂಡಿದ್ದರು. ಇವರಿಬ್ಬರ ಗೆಳೆತನ ಎಷ್ಟರಮಟ್ಟಿಗಿತ್ತು ಎಂದರೆ, ರಾಜಕುಮಾರ್ ಅವರು ಉತ್ತರ ಭಾರತದ ಕಡೆ ಹೋಗುವಾಗಲೆಲ್ಲಾ, ಇಲ್ಲಿನ ಉತ್ಕೃಷ್ಟವಾದ ಸುಗಂಧಭರಿತ ಅಗರಬತ್ತಿಗಳನ್ನು ಬಿಸ್ಮಿಲ್ಲಾ ಖಾನ್‌ರಿಗಾಗಿ ತೆಗೆಕೊಂಡು ಹೋಗಿ ಕೊಡುತ್ತಿದ್ದರಂತೆ.
ಇಂತಹ ಹೆಸರಾಂತ ಹಿಂದೂಸ್ಥಾನಿ ಸಂಗೀತ ದಿಗ್ಗಜ ಬಿಸ್ಮಿಲ್ಲಾ ಖಾನ್ ಅವರು 1916 ರ ಮಾರ್ಚ್ 21 ರಂದು ಇಂದಿನ ಬಿಹಾರದ ಬಕ್ಸಾರ್ ಜಿಲ್ಲೆಯ ಭೋಜ್‌ಪುರ ಪ್ರದೇಶದ ದುಮ್ರಾನ್ ರಾಜ್ಯದ (ಈಗ ದುಮ್ರಾನ್ ಪಟ್ಟಣ) ಮಹಾರಾಜ ಕೇಶವ್ ಪ್ರಸಾದ್ ಸಿಂಗ್ ಅವರ ಆಸ್ಥಾನದಲ್ಲಿ ಆಸ್ಥಾನ ಸಂಗೀತಗಾರರಾಗಿದ್ದಂತಹ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಬಕ್ಸ್ ಖಾನ್ ಮತ್ತು ಮಿತ್ತನ್‌ಬಾಯಿ ಅವರ ಎರಡನೇ ಮಗನಾಗಿ ಜನಿಸಿದರು. ತಮ್ಮ ಮೊದಲಿನ ಮಗನಿಗೆ ಶಮ್ಸುದ್ದೀನ್ ಎಂಬ ಹೆಸರಿದ್ದು, ಅಣ್ಣನೊಂದಿಗೆ ತಮ್ಮನ ಹೆಸರೂ ಸಹಾ ಪ್ರಾಸಬದ್ಧವಾಗಿರಲಿ ಎಂದು ಖಮ್ರುದ್ದೀನ್ ಎಂದು ಹೆಸರಿಡುತ್ತಾರೆ. ಆದರೆ ಅದೇ ಸಂಸ್ಥಾನದಲ್ಲಿ ಸಂಗೀತಗಾರರಾಗಿದ್ದ ಅವರ ಅಜ್ಜಂದಿರಾಗಿದ್ದಂತಹ ಉಸ್ತಾದ್ ಸಲಾರ್ ಹುಸೇನ್ ಖಾನ್ ಮತ್ತು ಶೆಹನಾಯಿ ವಾದಕರಾಗಿದ್ದ ರಸೂಲ್ ಬಕ್ಸ್ ಖಾನ್ ನವಜಾತ ಶಿಶುವನ್ನು ನೋಡಿ, ಇದು ಬಿಸ್ಮಿಲ್ಲಾ ಅರ್ಥಾತ್ ಅಲ್ಲಾಹನ ಆಶೀರ್ವಾದ ಎಂದು ಹೇಳಿದ್ದೇ ತಡಾ ಆ ಮಗುವಿಗೆ ಅಂದಿನಿಂದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯಲಾರಂಭಿಸಿದರು.
ಬಿಸ್ಮಿಲ್ಲಾ ಖಾನ್ ಅವರಿಗೆ ಮೂರು ವರ್ಷದವನಿದ್ದಾಗ, ಅವರ ತಾಯಿಯ ತವರೂದಾದ ಉತ್ತರ ಪ್ರದೇಶದ ವಾರಣಾಸಿಗೆ ಬಂದಾಗ ಅವರ ಮಾವ, ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶೆಹನಾಯಿ ವಾದಕರಾಗಿದ್ದ ಅಲಿ ಬಕ್ಸ್ ವಿಲಾಯತ್ ಖಾನ್ ಅವರಿಂದ ಪ್ರೇರಿತರಾಗಿ ಅವರ ಬಳಿಯೇ ಶಹನಾಯಿ ಕಲಿಯಲಾರಂಭಿಸಿದರು. ಅವರದ್ದು ಸಂಪ್ರದಾಯಸ್ಥ ಮುಸ್ಲಿಂ ಕುಟುಂಬವಾಗಿದ್ದರೂ ಅವರ ಮಾವ ಅಲಿ ಬಕ್ಷ್ ಪಕ್ಕದ ಜಾದೌ ದೇವಸ್ಥಾನದಲ್ಲಿ ಶೆಹನಾಯಿ ನುಡಿಸುತ್ತಿದ್ದಕ್ಕಾಗಿ ಅವರಿಗೆ ತಿಂಗಳಿಗೆ 4 ರೂ. ಸಂಭಾವನೆ ನೀಡಲಾಗುತ್ತಿತ್ತು. ಬೆಳಿಗ್ಗೆ ಜಾದೌ ದೇವಸ್ಥಾನದಲ್ಲಿ ಸಂಗೀತ ಸೇವೆ ನಡೆಸಿದ ನಂತರ ಪಂಚಗಂಗಾ ಘಾಟ್ ನಲ್ಲಿರುವ ಮಹಾವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಅವರಿಗೆಂದೇ ಮೀಸಲಿರಿಸಿದ್ದ ಕೋಣೆಯೊಂದರಲ್ಲಿ ಪ್ರತೀ ದಿನವೂ ಸುಮಾರು ಐದಾರು ಗಂಟೆ ಇನ್ನೂ ಕೆಲವೊಮ್ಮೆ ಲೆಕ್ಕವಿಲ್ಲದಷ್ಟು ಕಾಲ ಹಸಿವು ನೀರಡಿಕೆಯಿಲ್ಲದೇ, ಸಂಗೀತ ಅಭ್ಯಾಸ ಮಾಡುತ್ತಿದ್ದದ್ದದ್ದನ್ನು ಅನೇಕ ಬಾರಿ ಬಿಸ್ಮಿಲ್ಲಾ ಖಾನ್ ಅವರೂ ಗಮನಿಸುತ್ತಿದ್ದರು. ತಮ್ಮ ಮನೆಯಲ್ಲಿಯೇ ತೊಂದರೆಯಿಲ್ಲದೇ ಅಭ್ಯಾಸ ಮಾಡಲು ಸಾಧ್ಯವಿರುವಾಗ ಮಾವನೇಕೆ ವಿಷ್ಣು ದೇವಾಲಯದಲ್ಲಿ ಅಭ್ಯಾಸ ಮಾಡುತ್ತಾರೆ? ಎಂಬ ಜಿಜ್ಞಾಸೆಯಿಂದಾಗಿ ಒಮ್ಮೆ ಧೈರ್ಯ ಮಾಡಿ ತಮ್ಮ ಮಾವನನ್ನು ಈ ಕುರಿತಾಗಿ ಕೇಳಿಯೇ ಬಿಟ್ಟರು.
ಸೋದರಳಿಯನ ಮಾತುಗಳನ್ನು ಕೇಳಿ ಸುಮ್ಮನೇ ನಕ್ಕ ಅವರ ಮಾವ ನೀನೂ ಅಲ್ಲಿ ಅಭ್ಯಾಸ ಮಾಡಲು ಆರಂಭಿಸಿದಾಗ ನಿನಗೂ ಅದರ ಅರಿವಾಗುತ್ತದೆ ಎಂದಾಗಾ, ಹಾಗಾದರೇ, ಮಾಮೂ ನಾನು ಅಲ್ಲಿ ಯಾವಾಗಲಿಂದ ಅಲ್ಲಿ ಅಭ್ಯಾಸ ಮಾಡಬೇಕು ಎಂದು ಕುತೂಹಲದಿಂದ ಕೇಳಿದ್ದಕ್ಕೇ ಆ ಸಂಜೆಯೇ ಅವರ ಮಾವ ಆ ವಿಷ್ಣು ದೇವಸ್ಥಾನದಲ್ಲಿದ್ದ ತಮ್ಮ ಕೋಣೆಗೆ ಕರೆದುಕೊಂಡು ಹೋಗಿ ಅಲ್ಲಿ ಬಿಸ್ಲಿಲ್ಲಾ ಅವರಿಗೆ ಶಹನಾಯಿ ಅಭ್ಯಾಸ ಮಾಡಲು ಅನುಮತಿ ನೀಡಿದ್ದಲ್ಲದೇ, ಇಲ್ಲಿ ಆಗುವ ಅಸಾಧಾರಣ ಅನುಭವವನ್ನು ನೀನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬ ಕಟ್ಟೆಚ್ಚರಿಕೆಯನ್ನೂ ಹಾಕಿದ್ದರು.
ಅಂದಿನಿಂದ ಪ್ರತೀ ದಿನವೂ ಬಿಸ್ಮಿಲ್ಲಾ ಖಾನರು ಬಹಳ ಸಂತೋಷದಿಂದ ಆ ಕೋಣೆಯಲ್ಲಿ ಹೊರಗಡೆ ಆಗುತ್ತಿದ್ದ ಯಾವುದೇ ಸದ್ದು ಗದ್ದಲಗಳನ್ನೂ ಮರೆತು ಸುಮಾರು 4 ರಿಂದ 6 ಗಂಟೆಗಳ ಕಾಲ ಅಭ್ಯಾಸ ಮಾಡತೊಡಗಿದದ ಕಾರಣ, ಅವರಿಗೇ ಅರಿವಿಲ್ಲದಂತೆ ಅವರ ಸಂಗೀತ ಬಹಳಷ್ಟು ಸುಧಾರಿಸಿತ್ತು. ಅದೊಮ್ಮೆ ಬೆಳ್ಳಂಬೆಳಿಗ್ಗೆ 4:00 ಗಂಟೆಯ ಸುಮಾರಿಗೆ ಪಂಚಗಂಗಾ ಘಾಟ್ ನಲ್ಲಿರುವ ಆ ದೇವಾಲಯದ ಆವರಣದಲ್ಲಿ ಒಬ್ಬಂಟಿಯಾಗಿ ತನ್ನ ಶಹನಾಯಿ ಅಭ್ಯಾಸದಲ್ಲಿ ಮುಳುಗಿದ್ದಾಗ, ಅವರ ಪಕ್ಕದಲ್ಲಿ ಯಾರೋ ಬಂದು ಕುಳಿತ ಅನುಭವಾಗಿ, ಅದು ಯಾರೆಂದು ನೋಡಿದಾಗ, ಸ್ವತಃ ಶ್ರೀ ಕೃಷ್ಣನೇ ಅವರ ಪಕ್ಕದಲ್ಲಿ ಕುಳಿತದ್ದನ್ನು ಕಂಡು ದಿಗ್ಭ್ರಮೆಗೊಂಡು ಮೂಕವಿಸ್ಮಿತರಾದರು.
ಆಗ ಭಗವಾನ್ ಶ್ರೀಕೃಷ್ಣ ಸಮ್ಮನೇ ನಗುತ್ತಾ, ನಿನ್ನ ಪಾಡಿಗೆ ನಿನ್ನ ಅಭ್ಯಾಸ ಮುಂದುವರೆಸು ಮಗೂ ನನ್ನ ಅನುಗ್ರಹ ನಿನ್ನ ಮೇಲಿದೆ ಎಂದು ಹೇಳಿ ಅಲ್ಲಿಂದ ಹೋರಟು ಹೋದನು. ಅಂದಿನ ಅಭ್ಯಾಸ ಮುಗಿಸಿಕೊಂಡು ಮನೆಗೆ ಬಂದ ಬಿಸ್ಮಿಲ್ಲಾ ಖಾನ್ ತನ್ನ ಆ ಅನುಭವವನ್ನು ತನ್ನ ಗುರು ಮತ್ತು ಸೋದರ ಮಾವ ಅಲಿಯ ಬಳಿ ಹೇಳಿಕೊಂಡಾಗ, ಇದಕ್ಕೇ ಅಂದು ಅಲ್ಲಿ ನಡೆಯುವ ಅನುಭವವನ್ನು ಯಾರೊಂದಿಗೂ ಹೇಳಬಾರದು ಎಂದು ಎಚ್ಚರಿಸಿದ್ದನ್ನಲ್ವೇ ಎಂದು ನಗುತ್ತಾ ಹೇಳಿ ಅವರ ಕೆನ್ನೆ ಸವರಿ ಹೋಗಿದ್ದರು. ಅಂದಿನಿಂದ ಬಿಸ್ಲಿಲ್ಲಾ ಖಾನ್ ಅವರು ತಮ್ಮ ಮುಸ್ಲಿಂ ನಂಬಿಕೆಯ ಹೊರತಾಗಿಯೂ, ಶ್ರೀ ಕೃಷ್ಣನ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಲ್ಲದೇ, ಪರಮ ಕರುಣಾಮಯಿ ಶ್ರೀ ಕೃಷ್ಣನೊಂದಿಗೆ ವೈಯಕ್ತಿಕವಾದ ಅನಿನಾಭಾವ ಸ್ನೇಹವನ್ನು ಹೊಂದಿದ್ದೆ ಎಂದು ಸ್ವತಃ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರೇ ಮಲಯಾಳ ಮನೋರಮಾ ಪತ್ರಿಕೆಗಾಗಿ ಡಾ. ಮಧು ವಾಸುದೇವನ್ ಅವರ ಸಂದರ್ಶನದಲ್ಲಿ ತಿಳಿಸಿದ್ದ ವಿಷಯ ಆ ಪತ್ರಿಕೆಯಲ್ಲೂ ಪ್ರಕಟವಾಗಿತ್ತು.
ಅದೇ ರೀತಿಯಾಗಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅದೊಮ್ಮೆ ಜಮ್ ಷೆಡ್ಪುರದಿಂದ ವಾರಣಾಸಿಗೆ ರೈಲಿನಲ್ಲಿ ಮೀಟರ್ ಗೇಜ್ ಕಲ್ಲಿದ್ದಲು ಚಾಲಿತ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಣಿಸುವಾಗ, ಅವರ ಬೋಗಿಗೆ ಕಪ್ಪು ಬಣ್ಣದ ತೆಳ್ಳಗಿನ ಯುವ ದನಗಾಹಿಯೊಬ್ಬ ಅವರ ಪಕ್ಕದಲ್ಲಿ ಕುಳಿತು ಸ್ವಲ್ಪ ಹೊತ್ತಿನ ನಂತರ ಅವನು ತನ್ನ ಬಳಿಯಿದ್ದ ಕೊಳಲನ್ನು ನುಡಿಸಲು ಪ್ರಾರಂಭಿಸುತ್ತಿದ್ದಂತೆಯೇ ಬಹಳ ತಲ್ಲೀನತೆಯಿಂದ ಬಿಸ್ಮಿಲ್ಲಾ ಖಾನರು ಕಣ್ಣು ಮುಚ್ಚಿ ಅವನ ವೇಣು ನಾದನವನ್ನು ಆಲಿಸತೊಡಗಿದರು. ಸಂಗೀತ ಮಾಂತ್ರಿಕ ಬಿಸ್ಮಿಲ್ಲಾ ಖಾನರಿಗೇ ಆ ಯುವಕ ನುಡಿಸುತ್ತಿರುವ ರಾಗ ಯಾವುದು ಎಂದು ತಿಳಿಯದ ಮಟ್ಟಿಗೆ ಬಹಳ ಅದ್ಭುತವಾಗಿ ಮತ್ತು ಉತ್ಕೃಷ್ಟ ಗುಣಮಟ್ಟದಿಂದ ನುಡಿಸುತ್ತಿದ್ದದ್ದನ್ನು ಕಂಡು ಆಶ್ಚರ್ಯಚಕಿತನಾಗಿ ಕಣ್ಣು ಬಿಟ್ಟು ಆ ಹುಡುಗನನ್ನು ಸೂಕ್ಷ್ಮವಾಗಿ ಗಮನಿಸಿದ ಉಸ್ತಾದ್ ಬಿಸ್ಮಿಲ್ಲಾ ಖಾನರಿಗೆ ಆ ಹುಡುಗ ಬೇರೆ ಯಾರೂ ಆಗಿರದೇ ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನೇ ಆಗಿರುವುದು ಕಂಡು ಅಚ್ಚರಿ ಪಟ್ಟಿದ್ದರು.
ಹೀಗಾಗಿ ಬಿಸ್ಮಿಲ್ಲಾ ಖಾನ್ ತಮ್ಮ ಸಂಗೀತ ಕೌಶಲ್ಯಕ್ಕೆ ನಾಥನ ಅರ್ಥಾತ್ ಶಿವ ಮತ್ತು ಶ್ರೀಕೃಷ್ಣನ ಆಶೀರ್ವಾದವೇ ಕಾರಣವೆಂದು ಸದಾ ಕಾಲವೂ ಹೇಳುತ್ತಿದ್ದರು. ಹಾಗಾಗಿಯೇ ಭಗವಂತನ ಅನುಗ್ರಹ ಇಲ್ಲದೇ ಇದ್ದಲ್ಲಿ ತಮ್ಮ ಸಂಗೀತ ಕೌಶಲ್ಯವನ್ನು ಶಿಷ್ಯರಿಗೆ ಧಾರೆ ಎರೆಯುವುದು ಸಾಧ್ಯವಿಲ್ಲಾ ಎಂದೇ ನಂಬಿದ್ದ ಬಿಸ್ಮಿಲ್ಲರು ತಮ್ಮ ಶಿಷ್ಯಂದಿರಾಗಿ ವಿದ್ಯಾರ್ಥಿಗಳನ್ನು ಬಹಳ ವಿರಳವಾಗಿ ಸ್ವೀಕರಿಸುತ್ತಿದ್ದದ್ದಲ್ಲದೇ ಅವರಿಗೆ ಭಗವಂತನ ಅನುಗ್ರಹ ದೊರೆತಾಗ ಮಾತ್ರವೇ ತಮ್ಮ ಜ್ಞಾನವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದೇ ಹೇಳುತ್ತಿದ್ದರು. ಹಾಗಾಗಿಯೇ ಒಬ್ಬ ಧರ್ಮನಿಷ್ಠ ಮುಸ್ಲಿಂ ಆಗಿದ್ದರೂ ನಿಸ್ಸಂಕೋಚವಾಗಿ ಅವರು ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಭೇ ಸಮಾರಂಭಗಳಲ್ಲಿ ಸಂಕೋಚವಿಲ್ಲದೇ ಸಂಗೀತ ಕಛೇರಿಗಳನ್ನು ನೀಡುವ ಮೂಲಕ ಸಂಗೀತ ಎನ್ನುವುದು ಧಾರ್ಮಿಕ ಸಾಮರಸ್ಯದ ಸಂಕೇತ ಎಂದೇ ಸಾರುತ್ತಿದ್ದರು.
1947ರ ಆಗಸ್ಟ್ 15 ರಂದು ಬ್ರಿಟೀಷರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆತು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಮೇಲೆ ಅಂದಿನ ನಿಯೋಜಿತ ಪ್ರಧಾನಿಗಳಾದ ಜವಹರ್ ಲಾಲ್ ನೆಹರು ಅವರು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಸಮಾರಂಭದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಬಿಸ್ಮಿಲ್ಲಾ ಖಾನ್ ಅವರಿಗೆ ಎಂದು ಸಂಗೀತ ಕಛೇರಿಯನ್ನು ನೀಡಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ಅಂದಿನಿಂದ ಪ್ರತೀ ಸ್ವಾತಂತ್ರ್ಯ ದಿನದಂದು ಆಕಾಶವಾಣಿ ನಂತರ ದೂರದರ್ಶನದಲ್ಲಿ ರಾಗ ಕಾಫಿ ರಾಗದ ಆರ ಸಂಗೀತ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿತ್ತು. ಆ ನಂತರ ಭಾರತ ಸರ್ಕಾರ ಒತ್ತಾಯದ ಮೇರೆಗೆ 1966ರ ಎಡಿನ್‌ಬರ್ಗ್ ಅಂತರರಾಷ್ಟ್ರೀಯ ಉತ್ಸವದಲ್ಲಿ ಪ್ರದರ್ಶನ ನೀಡಿದ ನಂತರ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಅಭಿಮಾನಿಗಳು ದೊರೆತು ಯುರೋಪ್ ಮತ್ತು ಉತ್ತರ ಅಮೆರಿಕಾ ಅಲ್ಲದೇ, ಅಫ್ಘಾನಿಸ್ತಾನ, ಯುಎಸ್ಎ, ಕೆನಡಾ, ಬಾಂಗ್ಲಾದೇಶ, ಇರಾನ್, ಇರಾಕ್, ಪಶ್ಚಿಮ ಆಫ್ರಿಕಾ, ಜಪಾನ್, ಹಾಂಗ್ ಕಾಂಗ್ ಮುಂತಾದೆಡೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ನುಡಿಸಿದರು. ಅಂತಹ ಕಾರ್ಯಕ್ರಮಗಳಲ್ಲಿ ಮಾಂಟ್ರಿಯಲ್‌ನಲ್ಲಿ ವರ್ಲ್ಡ್ ಎಕ್ಸ್‌ಪೊಸಿಷನ್ , ಕೇನ್ಸ್ ಆರ್ಟ್ ಫೆಸ್ಟಿವಲ್ ಮತ್ತು ಒಸಾಕಾ ಟ್ರೇಡ್ ಫೇರ್ ಸಹಾ ಸೇರಿರುವುದು ಅವರ ಹೆಗ್ಗಳಿಕೆಯಾಗಿದೆ.
ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸಂಗೀತ ಸಾಧನೆಗಳನ್ನು ಗುರುತಿಸಿ ಅನೇಕ ಸಂಘಸಂಸ್ಥೆಗಳು ಅವರಿಗೆ ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದು ಅವುಗಳಲ್ಲಿ ಪ್ರಮುಖವಾದದ್ದು ಹೀಗಿದೆ.
- 1937ರಲ್ಲಿ ಕಲ್ಕತ್ತಾದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಮೂರು ಪದಕಗಳು
- ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯ ಸೇರಿದಂತೆ ಸುಮಾರು 25 ವಿಶ್ವವಿದ್ಯಾಲಯಗಳಿಂದ ಗೌರವ ದಾಕ್ಟರೇಟ್ ಪ್ರಶಸ್ತಿ
- ಮಧ್ಯಪ್ರದೇಶ ಸರ್ಕಾರದಿಂದ ತಾನ್ಸೇನ್ ಪ್ರಶಸ್ತಿ
- 1961 ರಲ್ಲಿ ಪದ್ಮಶ್ರೀ, 1968ರಲ್ಲಿ ಪದ್ಮಭೂಷಣ ಮತ್ತು 1980ರಲ್ಲಿ ಪದ್ಮವಿಭೂಷಣ ಪ್ರಶಸ್ತಿ
- 1992ರಲ್ಲಿ ಇರಾನ್ ಗಣರಾಜ್ಯದಿಂದ ತಹರ್ ಮೌಸಿಕ್ ಪ್ರಶಸ್ತಿ
- 1995 ರಲ್ಲಿ ಕರ್ನಾಟಕ ಸರ್ಕಾರದಿಂದ ಟಿ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ
- 1998ರರಲ್ಲಿ ಕೇರಳ ಸರ್ಕಾರದವತಿಯಿಂದ ಸ್ವಾತಿ ಸಂಗೀತ ಪುರಸ್ಕಾರಂ
- 2001ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಭಾರತ ರತ್ನಕ್ಕೂ ಭಾಜನರಾಗಿದ್ದಾರೆ.
ಹಿಂದೂಸ್ಥಾನಿ ಸಂಗೀತ ಶೈಲಿಯ ಶಯನಾಯಿಯಲ್ಲಿ ಅಪಾರವಾದ ಸಾಧನೆ ಮಾಡಿದ್ದ ಬಿಸ್ಮಿಲ್ಲಾ ಖಾನ್ ಅವರ ಆರೋಗ್ಯ ತೀವ್ರವಾಗಿ ಹದಗೆಡ ತೊಡಗಿದಾಗ, ಚಿಕಿತ್ಸೆಗಾಗಿ ವಾರಣಾಸಿಯ ಹೆರಿಟೇಜ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿನ ವೈದ್ಯರುಗಳು ನೀಡಿರ ಚಿಕಿತ್ಸೆಗೆ ಸ್ಪಂದಿಸದ ಅವರ ಇಳೀ ವಯಸ್ಸಿನ ಶರೀರ 2006ರ ಆಗಸ್ಟ್ 21ರಂದು ತಮ್ಮ 90 ನೇ ವಯಸ್ಸಿನಲ್ಲಿ ಹೃದಯಾಘಾತದಿಂದಾಗಿ ಇಂಡಿಯಾ ಗೇಟ್‌ನಲ್ಲಿ ತಮ್ಮ ಸಂಗೀತ ಕಛೇರಿ ಮಾಡಬೇಕೆನ್ನುವ ಅವರ ಆಸೆ ಈಡೇರದೇ ನಿಧನರಾಗುವ ಮೂಲಕ ಸಂಗೀತ ಲೋಕದ ಧೃವತಾರೆಯೊಂದು ಕಣ್ಮರೆಯಾದರೂ, ಕಲಾವಿದರುಗಳಿಗೆ ಸಾವಿಲ್ಲಾ ಎನ್ನುವಂತೆ ಭೌತಿಕವಾಗಿ ಅವರು ನಮ್ಮ ನಿಮ್ಮೊಂದಿಗೆ ಇಲ್ಲದೇ ಹೋದರೂ ತಮ್ಮ ಸಂಗೀತ ಸಾಧನೆಗಳ ಮೂಲಕ ಆಚಂದ್ರಾರ್ಕವಾಗಿ ನಮ್ಮೆಲ್ಲರೊಂದಿಗೆ ಇದ್ದೇ ಇರುತ್ತಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
quite a nostalgic writing! Deep drawn emotions inbuilt in the article! Thank you sir
LikeLike