ಅಮ್ಮಾ ಸಾಯುತ್ತಿರುವಾಗಲೂ ವೈಮನಸ್ಯವೇ?

ಹೆತ್ತವರು ನಮ್ಮ ಜೀವನದ ಅಡಿಪಾಯ. ಹಾಗಾಗಿಯೇ ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯರೇ ನಮ್ಮ ಮೊದಲ ಗುರುಗಳಾಘುತ್ತಾರೆ. ಅವರೇ ನಮ್ಮ ಎಲ್ಲಾ ಇಚ್ಛೆಗಳಿಗೂ ಪೂರೈಕೆದಾರರು ಮತ್ತು ಭಾವನಾತ್ಮಕ ಸಂಬಂಧಗಳಿಗೆ ಆಧಾರಸ್ತಂಭಗಳು. ಚಿಕ್ಕಂದಿನಿಂದಲೂ ಅವರು ಕಲಿಸಿಕೊಡುವ ಸಂಸ್ಕಾರ ಸಂಸ್ಕೃತಿಗಳ ಮೂಲಕ ನಮ್ಮ ಜೀವನದಲ್ಲಿ ಮೌಲ್ಯಗಳನ್ನು ತುಂಬುವುದಲ್ಲದೇ, ಬದುಕಿನಲ್ಲಿ ಆತ್ಮವಿಶ್ವಾಸ ಮತ್ತು ಸಹಾನುಭೂತಿಯನ್ನು ಹೆಚ್ಚಿಸಿ, ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯಲು ನಮಗೆ ಅಗತ್ಯವಾದ ಬೇಷರತ್ತಾದ ಪ್ರೀತಿ ಮತ್ತು ಸ್ಥಿರತೆಯನ್ನು ಒದಗಿಸುತ್ತಾರೆ.

ತಂದೆ ತಾಯಿಯರು ಎಂತಹ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ, ಅವರುಗಳು ತಮ್ಮ ಮಕ್ಕಳು ಸುರಕ್ಷಿತೆಯತ್ತ ಗಮನ ಹರಿಸುವುದಲ್ಲದೇ, ಸದಾಕಾಲವೂ ತಮ್ಮ ಮಕ್ಕಳು ಸರಿದಾರಿಯಲ್ಲಿ ನಡೆಯುವಂತಹ ನೈತಿಕ ಮಾರ್ಗದರ್ಶನವನ್ನು ನೀಡುತ್ತಾರೆ. ಮಕ್ಕಳುಗಳು ಬೆಳೆದು ದೊಡ್ಡವರಾಗಿ ತಮ್ಮ ಕಾಲಿನ ಮೇಲೆ ತಾವು ನಿಲ್ಲುವಂತಾಗಲು ಅವರಿಗೆ ಎಷ್ಟೇ ಕಷ್ಟವಿದ್ದರೂ, ಒಳ್ಳೊಳ್ಳೇ ಶಾಲೆಗಳಲ್ಲಿ ಶಿಕ್ಷಣ ಕೊಡಿಸುವುದಲ್ಲದೇ, ತಾವು ಉಪವಾಸವಿದ್ದರೂ ತಮ್ಮ ಮಕ್ಕಳ ಹೊಟ್ಟೆ ಬಟ್ಟೆಗೆ ಕೊರತೆಯಾಗದಂತೆ ನೋಡಿಕೊಳ್ಳುತ್ತಾರೆ. ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಅಪ್ಪ ತನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ತನ್ನ ಸಂಪಾದನೆಯ ಸ್ವಲ್ಪ ಭಾಗವನ್ನು ಉಳಿತಾಯ ಮಾಡಿದರೆ, ಅಮ್ಮನೂ ಅದಕ್ಕೆ ಕಡಿಮೆ ಇಲ್ಲದಂತೆ, ಮನೆಯ ಅವಶ್ಯಕತೆಗಳನ್ನು ಹಿತ ಮಿತವಾಗಿ ಬಳಸಿಕೊಂಡು ಉಳಿದ ಹಣವನ್ನು ತನ್ನ ಮಕ್ಕಳಿಗಾಗಿಯೇ ಎತ್ತಿ ಇಡುತ್ತಾರೆ. ಮಕ್ಕಳ ಅಭಿವೃದ್ಧಿ ಮತ್ತು ಏಳಿಗೆಗಳಲ್ಲಿಯೇ ತಮ್ಮ ಕನಸು ಮತ್ತು ವಿಜಯಗಳನ್ನು ಆಚರಿಸುವುದಲ್ಲದೇ, ಮಕ್ಕಳ ವೈಫಲ್ಯಗಳ ಸಮಯದಲ್ಲಿ ಅವರಿಗೆ ಅನಿಯಮಿತ ಮತ್ತು ಷರತ್ತುಬದ್ಧವಲ್ಲದ ಸಾಂತ್ವನ ನೀಡುವುದಲ್ಲದೇ, ಆರ್ಥಿಕವಾಗಿ ಎಂತಹ ಸಹಾಯವನ್ನೂ ಸಹಾ ಮಾಡಲು ಸಿದ್ಧರಿರುತ್ತಾರೆ.

ಅದರಲ್ಲೂ ಅಮ್ಮನೆಂದರೆ, ಎಂಟು ತಿಂಗಳು ಹೊತ್ತು ಹೆತ್ತು, ಚಿಕ್ಕ ಮಕ್ಕಳಿರುವಾಗ, ತನ್ನ ಸೊಂಟದ ಮೇಲೆ ಕೂರಿಸಿಕೊಂಡು ತುತ್ತನ್ನು ತಿನ್ನಿಸುತ್ತಾ, ಮಕ್ಕಳ ಎಲ್ಲಾ ರೀತಿಯ ಸೇವೆಗಳನ್ನು ಮಾಡಿರುತ್ತಾಳೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಒಂದು ಕೈ, ಹೆಚ್ಚಿನ ಅಕ್ಕರೆ ತೋರಿಸುತ್ತಾ, ಆಕೆಯ ಸ್ತ್ರೀತ್ವ, ಭಾವನಾತ್ಮಕ ಭದ್ರತೆ ಮತ್ತು ಅಕೆಯ ಗುರುತಿಗೆ ತಾಯಿಯೇ ಮೊದಲ ನೀಲನಕ್ಷೆಯಾಗಿರುತ್ತಾಳೆ ಎಂದರೂ ತಪ್ಪಾಗದು. ಅಮ್ಮನಿಂದ ಕಲಿತ ಸಂಸ್ಕಾರ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೂಲಕ ಮುಂದೆ ಮಗಳು ಸ್ವಾಭಿಮಾನಿಯಾಗಿ ಸಮಾಜದಲ್ಲಿ ಸಂವಹನ ನಡೆಸುವಂತಹ ಕೌಶಲ್ಯವನ್ನು ಕಲಿಸಿಕೊಡುತ್ತದೆ. ಅಮ್ಮಾ ಮಗಳ ಜೀವನದ ಕನ್ನಡಿಯಾಗಿ, ಆಕೆಯ ಮಾರ್ಗದರ್ಶಕಿಯಾಗಿ ಜಗತ್ತನ್ನು ಯಾವರೀತಿಯಲ್ಲಿ ನೋಡಬೇಕು ಮತ್ತು ತಾನು ಕಲಿಸಿದ ಮೌಲ್ಯದಿಂದ ಜಗತ್ತಿನಲ್ಲಿ ಹೇಗೆ ಜೀವನ ನಡೆಸುತ್ತಾ, ಹೆತ್ತ ಮನೆಗೂ ಮತ್ತು ಹೋದ ಮನೆಗೂ ಕೀರ್ತಿ ತರಬೇಕು ಎಂಬುದನ್ನು ಕಲಿಸಿಕೊಡುತ್ತಾಳೆ. ಜಗತ್ತಿನಲ್ಲಿ ಯಾವ ವಸ್ತು ಅಥವಾ ವ್ಯಕ್ತಿ ಬೇಕಾದರೂ ಕೆಟ್ಟವನಿರಬಹುದು ಆದರೆ ಕೆಟ್ಟ ತಾಯಿ ಮಾತ್ರಾ ಇರುವುದಿಲ್ಲ ಎಂಬುದನ್ನು ಘಂಟಾ ಘೋಷವಾಗಿ ಹೇಳಬಹುದಾಗಿದೆ.

ಹಾಗಾಗಿಯೇ ನಮ್ಮ ಸಮಾಜದಲ್ಲಿ ತಾಯಿಯ ಸ್ಥಾನಕ್ಕೆ ಮತ್ತು ಪ್ರೀತಿಗೆ ನೀಡುವ ಅತ್ಯುನ್ನತ ಗೌರವವಾಗಿದ್ದು ಪ್ರತೀ ತಾಯಿಯೂ ತನ್ನ ಮಕ್ಕಳಿಗಾಗಿ ಮಾಡುವ ತ್ಯಾಗ ಮತ್ತು ತೋರುವ ವಾತ್ಸಲ್ಯಕ್ಕೆ ಸರಿ ಸಾಟಿಯಿಲ್ಲ. ಆದಾಗ್ಯೂ, ಇಂದಿನ ಆಧುನಿಕ ಶಿಕ್ಷಣ ಮತ್ತು ಅಂಧ ಪಾಶ್ಚಾತ್ಯಾನುಕರಣೆಯಿಂದಾಗಿ ಸಾಮಾಜಿಕ ಮೌಲ್ಯಗಳು ಹಾಳಾಗಿರುವುದಲ್ಲದೇ, ಕುಟುಂಬದಲ್ಲೂ ಅತ್ಯಂತ ಕೆಟ್ಟ ಪರಿಣಾಮ ಬೀರುವಂತಾಗಿದೆ. ಇಂದಿನ ಆಧುನಿಕ ಮನೋವಿಜ್ಞಾನದ ಪ್ರಕಾರ, ಪ್ರತಿಯೊಬ್ಬರೂ ಮಾನವ ಸಹಜ ದೌರ್ಬಲ್ಯಗಳನ್ನು ಹೊಂದಿದ್ದು, ಕೆಲವು ಸನ್ನಿವೇಶಗಳು, ಆರ್ಥಿಕ ಸಮಸ್ಯೆಗಳು, ಅಥವಾ ಮಾನಸಿಕ ಒತ್ತಡಗಳಿಂದಾಗಿ ತಾಯಿ ಮಕ್ಕಳು ಮತ್ತು ಕುಟುಂಬದೊಂದಿಗಿನ ಸಂಬಂಧಗಳು ಹಾಳಾಗಿ ಹೋಗಿರುತ್ತದೆ ಎನ್ನುವುದಕ್ಕೆ ಪ್ರಸ್ತುತ ಮೈಸೂರಿನಲ್ಲಿ ತನ್ನ ಮಗನ ಮನೆಯಲ್ಲಿ ವಾಸವಾಗಿದ್ದ 96 ವಯಸ್ಸಿನ ಅಜ್ಜಿಯೊಬ್ಬರ ಕಡೆಯ ಆಸೆಯನ್ನು ಆಕೆಯ ಮಗಳೇ ಕೌಟುಂಬಿಕ ವೈಮನಸ್ಯದಿಂದಾಗಿ ಈಡೇರಿಸದೇ, ಮನೆಯ ಬಾಗಿಲ ಮುಂದೆಯೇ ಅಸು ನೀಗುವಂತಹ ಹೃದಯ ವಿದ್ರಾವಕ ಪ್ರಸಂಗ ನಿಜಕ್ಕೂ ಎಂತಹ ಕಲ್ಲು ಮನಸ್ಸಿನವರನ್ನೂ ದುಃಖಕ್ಕೆ ತಳ್ಳುತ್ತದೆ ಎಂದರೂ ತಪ್ಪಾಗದು.

ಮೂಲತಃ ನಂಜನಗೂಡು ತಾಲ್ಲೂಕಿನ ರಾಂಪುರ ಗ್ರಾಮದ 96 ವಯಸ್ಸಿನವರಾಗಿದ್ದಂತಹ ಪಾರ್ವತಮ್ಮನವರಿಗೆ ನಾಲ್ಕು ಹೆಣ್ಣು ನಾಲ್ಕು ಗಂಡುಮಕ್ಕಳಿದ್ದು, ತಮ್ಮ ದೇಹದಲ್ಲಿ ಕಸುವಿರುವವರೆಗೂ ತಮ್ಮ ಊರಿನಲ್ಲಿ ಇದ್ದು ನಂತರ ವೃದ್ದಾಪ್ಯದಲ್ಲಿ ಮೈಸೂರಿನಲ್ಲಿದ್ದ ತಮ್ಮ ಮಗ ಮುತ್ತುರಾಜ್ ಅವರ ಮನೆಯಲ್ಲಿದ್ದರು. ಮಗ ಸೊಸೆ ಎಷ್ಟೇ ಚೆನ್ನಾಗಿ ನೋಡಿಕೊಂಡರೂ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಎನ್ನುವಂತೆ ತಮ್ಮ ಕಡೆಗಾಲದಲ್ಲಿ ತಾವು ಹುಟ್ಟಿ, ಬೆಳೆದು ಬಾಳಿ ಬದುಕಿದ ಮನೆಯಲ್ಲಿ ಅದರಲ್ಲೂ ತಮ್ಮ ಯಜಮಾನರು ಗತಿಸಿದ ಮನೆಯಲ್ಲಿ ಕೆಲ ದಿನಗಳನ್ನು ಕಳೆಯಬೇಕು ಮತ್ತು ಅಲ್ಲಿಯೇ ತನ್ನ ಪ್ರಾಣ ಹೋದಲ್ಲಿ ತಾನು ತನ್ನ ಗಂಡನನ್ನು ಸೇರುತ್ತೇನೆ ಎಂಬ ಆಸೆಯನ್ನು ಬಹಳ ಸಲಾ ಹೇಳುತ್ತಿದ್ದರೂ, ಅಯ್ಯೋ ಬಿಡ್ತು ಅನ್ನಿ. ಹೀಗ್ಯಾಕೆ ಸದಾಕಾಲವೂ ಸಾಯುವ ಮಾತುಗಳನ್ನಾಡುತ್ತೀರಿ. ನೂರು ವರ್ಷ ಗುಂಡುಕಲ್ಲಾಗಿ ಇದ್ದು ನಮ್ಮೆಲ್ಲರಿಗೂ ಮಾರ್ಗದರ್ಶಿಗಳಾಗಿರುತ್ತೀರಿ ಎಂದು ಮನೆಯವರು ಹೇಳುತ್ತಿದ್ದರೂ, ಪಾರ್ವತಮ್ಮನವರಿಗೆ ಮಾತ್ರಾ, ತಾವು ತಮ್ಮ ಕಡೆಯ ದಿನಗಳನ್ನು ಎಣಿಸುತ್ತಿರುವುದರ ಅರಿವಾಗಿ ಪದೇ ಪದೇ ತಮ್ಮ ಮಕ್ಕಳನ್ನು ಕೇಳಿಕೊಂಡ ಪರಿಣಾಮ ತಮ್ಮ ತಾಯಿಯ ಕಡೆಯ ಆಸೆಯನ್ನು ತೀರಿಸುವ ಸಲುವಾಗಿ 96 ವಯಸ್ಸಿನ ಪಾರ್ವತಮ್ಮನವರನ್ನು ಅವರ ಹೆತ್ತೂರಾದ ರಾಂಪುರ ಗ್ರಾಮದಲ್ಲಿ ಅವರದ್ದೇ ಮನೆಯಲ್ಲಿದ್ದ ಮಗಳು ಉಮಾಳ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಆದರೆ ಕೆಲವರ್ಷಗಳ ಹಿಂದೆ ಮಗಳು ಉಮಾ, ತನ್ನ ತಾಯಿಗೆ ಪಿಂಚಣಿ ಕೊಡಿಸುವ ನೆಪದಲ್ಲಿ ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಮೋಸದಿಂದ ಆವರ ಆಸ್ತಿ ಎಲ್ಲವನ್ನೂ ತನ್ನ ಹೆಸರಿಗೆ ಬರೆಸಿಕೊಂಡಿದ್ದು, ಅದರ ಕುರಿತಾಗಿ ಅವರ ಕುಟುಂಬದಲ್ಲಿ ಆಂತರಿಕ ಕಲಹವೂ ಆಗಿದ್ದು, ಆಸ್ತಿಗಾಗಿ ತನ್ನ ತಾಯಿಗೆ ಮೋಸ ಮಾಡಿ ಸಹಿ ಹಾಕಿಸಿಕೊಂಡ ಪರಿಣಾಮ ಇಡೀ ಕುಟುಂಬವೇ ಉಮಾ ಅವರಿಂದ ದೂರವಿದ್ದರೂ, ವೃದ್ದಾಪ್ಯದ ಅಂಚಿನಲ್ಲಿ ತನ್ನ ಕಡೆಯ ದಿನಗಳನ್ನು ಎಣಿಸುತ್ತಿದ್ದ ಮತ್ತು ತಾನು ಹುಟ್ಟಿ ಬೆಳೆದ ಆ ಸಣ್ಣ ಮನೆಯಲ್ಲಿ ತನ್ನ ಹಳೆಯ ನೆನಪುಗಳನ್ನೊಮ್ಮೆ ಮೆಲುಕು ಹಾಕುತ್ತಲೇ ಜೀವ ಬಿಡಬೇಕೆಂಬ ಆಸೆ ಹೊತ್ತಿದ್ದ ಅಜ್ಜಿ ಪಾರ್ವತಮ್ಮನವರ ಕಡೆಯ ಆಸೆಯನ್ನಾದರೂ ಮಗಳು ಈಡೇರಿಸಬಹುದು ಎಂದು ಇಡೀ ಕುಟುಂಬವೇ ನಂಬಿತ್ತು.

ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ತನ್ನ ಮನೆಗೆ ಮಗನೊಂದಿಗೆ ಬಂದ ಇಳೀ ವಯಸ್ಸಿನ ತಾಯಿಯನ್ನು ತನ್ನ ಮನೆಯ ಬಾಗಿಲಿನಿಂದ ಹೊರಬಂದು ಮಾತನಾಡಿಸಿದ ಮಗಳು ಉಮಾ, ತನ್ನ ತಾಯಿ ಮತ್ತು ತನ್ನ ತಮ್ಮ ಪರಿ ಪರಿಯಾಗಿ ಕೇಳಿಕೊಂಡರೂ, ತನ್ನ ವಯಸ್ಸಾದ ತಾಯಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಲು ಬಿಲ್ ಕುಲ್ ಒಪ್ಪಲಿಲ್ಲ. ಮೋಸದಿಂದ ತಾಯಿ ಆಸ್ತಿಯನ್ನು ಲಪಟಾಯಿಸಿ, ತಾಯಿಯ ಅಂತಿಮ ಆಸೆಯನ್ನೂ ಈಡೇರದಿರುವ ಇಂತಹ ಮಕ್ಕಳೂ ಇರುತ್ತಾರೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡಿದ ಕೆಲವು ಅಕ್ಕ ಪಕ್ಕದವರು ಆಕೆಗೆ ಬುದ್ದಿವಾದ ಹೇಳ ಬಂದಾಗ, ಅವರೆಲ್ಲರಿಗೂ ವಾಚಾಮಗೋಚರವಾಗಿ ಬೈದ್ಯ ಉಮಾ ತನ್ನ ಮನೆಗೆ ಬೀಗ ಜಡಿದಿ ಎಲ್ಲಿಗೋ ಹೊರಟು ಹೋಗಿದ್ದಾಳೆ.

ತನ್ನ ಮನೆಗೆ ಮಗಳು ಬೀಗ ಹಾಕಿಕೊಂಡು ಹೋದರೂ, ಜಗ್ಗದ ಅಜ್ಜಿ, ಕಡೆಯ ಗಳಿಗೆಯಲ್ಲಿ ತಾನು ಹೊತ್ತು ಹೆತ್ತು ಸಾಕಿ ಬೆಳೆಸಿದ ಮಗಳ ಮನಃ ಪರಿವರ್ತನೆಯಾಗಿ ಮನೆಯ ಒಳಗೆ ಕರೆದುಕೊಂಡು ಹೋಗಬಹುದು ಎಂದೇ ಭಾವಿಸಿದ ಆ ಅಜ್ಜಿಯೂ ಸಹಾ ತನ್ನ ಮನೆಯ ಬಾಗಿಲ ಮುಂದೆಯೇ ಎರಡು ದಿನಗಳು ಕಾಲ ಕಳೆದಿದ್ದಾರೆ. ಹೀಗೆ ತನ್ನ ಸಹೋದರಿ ತಮ್ಮ ತಾಯಿಯನ್ನು ಆಕೆಯ ಮನೆಯೊಳಗೆ ಸೇರಿಕೊಳ್ಳದೇ ಹೊದ ವಿಷಯ ತಿಳಿದ ಪಾರ್ವತಮ್ಮನವರ ಉಳಿದ ಮಕ್ಕಳೂ ಸಹಾ ಅಲ್ಲಿಗೆ ಬಂದು ತಮ್ಮ ತಾಯಿಯ ಅಂತಿಮ ಕ್ಷಣದಲ್ಲಿ ಆಕೆಯೊಂದಿಗೆ ಇರಲು ನಿರ್ಧರಿಸಿದ್ದಾರೆ.

ಮಳೆ ಗಾಳಿ ಚಳಿ ಬಿಸಿಲು ಎನ್ನದೇ, ತನ್ನ ಸ್ವಂತ ಮನೆಯ ಬಾಗಿಲ ಮುಂದೆಯೇ ಬೀದಿಯಲ್ಲಿ ಎರಡು ದಿನಗಳನ್ನು ಕಳೆದ ವೃದ್ಧೆ ಪಾರ್ವತಮ್ಮನವರು ಕಡೆಗೆ, ನೊಂದ ಮನಸ್ಸಿನಿಂದ ಮತ್ತು ವಯೋಸಜಯವಾಗಿ ನಿತ್ರಾಣರಾಗಿ ತಮ್ಮ ಕೊನೆಯ ಉಸಿರನ್ನು ಎಳೆದಿದ್ದಾರೆ. ತಾಯಿಗೆ ಮೋಸ ಮೋಸ ಮಾಡಿ ಆಕೆಯ ಮನೆಯನ್ನು ವಶಪಡಿಸಿಕೊಂಡ ಮಗಳು ಉಮಾ, ತಾಯಿಯ ಅಂತಿಮ ಆಸೆಯನ್ನೂ ತೀರಿಸದೇ, ತಮ್ಮದೇ ಮನೆಯ ಮುಂದೆ ಮರಣವಪ್ಪಿದ ಪಾರ್ವತಮ್ಮನವರ ಬಾಳು ಯಾರಿಗೂ ಬಾರದಿರಲಿ ಮತ್ತು ಉಮಾಳಂತಹ ಮಗಳು ಯಾವ ತಾಯಂದಿರಿಗೂ ಹುಟ್ಟದಿರಲಿ ಎಂದು ಇಡೀ ಕುಟುಂಬ ಮತ್ತು ಊರಿನವರು ಬೇಸರ ಪಟ್ಟು ಕೊಂಡಿದ್ದಲ್ಲದೇ, ಮಗಳು ಉಮಾಳ ಕುಯುಕ್ತಿಗಾಗಿ ಹಿಡಿ ಹಿಡಿ ಶಾಪವನ್ನು ಹಾಕುವ ಮೂಲಕ ತಮ್ಮ ಕೋಪವನ್ನು ತೀರಿಕೊಂಡಿರುವುದು ಬೇಸರದ ಸಂಗತಿಯಾಗಿದೆ.

ಒಂದು ತಾಯಿ ತನ್ನ ಹತ್ತು ಮಕ್ಕಳನ್ನು ಯಾವುದೇ ತಾರತಮ್ಯವಿಲ್ಲದೇ ಸಾಕುತ್ತಾಳೆ. ಆದರೆ ಅದೇ ಹತ್ತು ಮಕ್ಕಳು ಒಂದು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲಾರರು ಎಂಬ ಮಾತಿಗೆ ಜ್ವಲಂತ ಉದಾಹರಣೆಯಾಗಿ ನಡೆದಿರುವ ಈ ಅಮಾನವೀಯ ಘಟನೆ ಕೇವಲ ಪಾರ್ವತಮ್ಮನವರ ಕುಟುಂಬವಷ್ಟೇ ಅಲ್ಲದೇ, ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದರೂ ತಪ್ಪಾಗದು. ಜನ್ಮ ಕೊಟ್ಟ ತಂದೆ ತಾಯಿಯರೇ ನಾವು ಕಾಣುವ ಪ್ರತ್ಯಕ್ಷ ದೇವರುಗಳು ಅವರ ಅಂತ್ಯ ಕಾಲದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಪ್ರತಿಯೊಬ್ಬ ಮಕ್ಕಳ ಆದ್ಯ ಕರ್ತವ್ಯ ಎಂದು ಚಿಕ್ಕಂದಿನಿಂದಲೂ ಹೇಳಿಕೊಡುವ ಅದೇ ತಾಯಿಗೆ ಈ ರೀತಿಯಾಗಿ ಅಮಾನವೀಯವಾಗಿ ನಡೆದು ಕೊಳ್ಳುವುದು ಸರ್ವಥಾ ಒಳ್ಳೆಯದಲ್ಲಾ. ಇದೇ ಕುರಿತಾಗಿ ಈ ಹಿಂದೆ ನಾನೇ ಬರೆದಿದ್ದ, ಇದ್ದಾಗ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳದೇ, ಅವರು ಸತ್ತಾಗ ಅತ್ತು ಕರೆದು, ಆಡಂಬರಕ್ಕಾಗಿ ನೂರಾರು ಜನರನ್ನು ಕರೆದು ಭಕ್ಷ ಭೋಜನಗಳ ಊಟವನ್ನು ಹಾಕಿಸಿದರೆ, ಎದ್ದು ಬರುವವರೇ ನಮ್ಮ ಹೆತ್ತವರು ಎಂಬ ಮಾತು ಎಷ್ಟು ಮಾರ್ಮಿಕವಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment