ಇದು ನಂಬಿಕೆಯೋ? ಅಥವಾ ತೋರ್ಪಡಿಕೆಯೋ?



ಅದು 1990ರ ದಶಕ. ನಾನು ಆಗ ಸುಮಾರು 10-12 ಉದ್ಯೋಗಿಗಳಿದ್ದ ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕಂಪನಿಯ ಮೂವರು ಪಾಲುದಾರರಲ್ಲಿ ಇಬ್ಬರು ಹಿಂದೂಗಳಾಗಿದ್ದರೆ, ಮತ್ತೊಬ್ಬರು ಕ್ರೈಸ್ತರಾಗಿದ್ದರು. ನಮ್ಮ ಸಂಸ್ಥೆಯಲ್ಲಿ ಮಾಲೀಕ-ಉದ್ಯೋಗಿ ಎಂಬ ಅಂತರಕ್ಕಿಂತ ಸಹೋದ್ಯೋಗಿ ಎಂಬ ಆತ್ಮೀಯತೆಯೇ ಹೆಚ್ಚು. ವಯಸ್ಸಿನ ಅಂತರವೂ ಹೆಚ್ಚು ಇರಲಿಲ್ಲ. ಹೀಗಾಗಿ ಎಲ್ಲರೂ ಒಂದೇ ಕುಟುಂಬದವರಂತೆ ಕೆಲಸ ಮಾಡುತ್ತಿದ್ದೆವು.

ವಾರಾಂತ್ಯದಲ್ಲಿ ಯಾರಾದರೂ ತಮ್ಮ ಊರಿಗೆ ಹೋಗಿ ಬಂದರೆ ಅಥವಾ ಯಾವುದಾದರೂ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿ ಬಂದರೆ ಅಲ್ಲಿನ ವಿಶೇಷ ಸಿಹಿತಿಂಡಿಗಳು ಅಥವಾ ದೇವರ ತೀರ್ಥ-ಪ್ರಸಾದವನ್ನು ಕಚೇರಿಗೆ ತಂದು ಎಲ್ಲರೊಂದಿಗೆ ಹಂಚಿಕೊಳ್ಳುವುದು ಒಂದು ಸುಂದರ ಸಂಪ್ರದಾಯವಾಗಿತ್ತು. ಆ ಪ್ರಸಾದವನ್ನು ಯಾರೂ ಧರ್ಮದ ಆಧಾರದ ಮೇಲೆ ಬೇರ್ಪಡಿಸದೇ ಸಂತೋಷದಿಂದ ಸ್ವೀಕರಿಸುತ್ತಿದ್ದರು.

ಒಂದು ದಿನ ಸಂಜೆ ಕಚೇರಿ ಮುಗಿದ ಬಳಿಕ ಭಾರೀ ಮಳೆ ಸುರಿಯುತ್ತಿದ್ದ ಕಾರಣ ಎಲ್ಲರೂ ಅಲ್ಲಿಯೇ ಕುಳಿತು ಹರಟೆ ಹೊಡೆಯುತ್ತಿದ್ದೆವು. ಮಾತಿನ ಮಧ್ಯೆ ಧಾರ್ಮಿಕ ನಂಬಿಕೆಗಳ ಬಗ್ಗೆ ಚರ್ಚೆ ಶುರುವಾಯಿತು. ಚರ್ಚೆ ಸ್ವಲ್ಪ ತೀವ್ರ ಸ್ವರೂಪ ಪಡೆಯುತ್ತಿದ್ದಾಗ ನಾನು ಒಮ್ಮೆಲೇ ನಮ್ಮ ಕ್ರೈಸ್ತ ಪಾಲುದಾರರನ್ನು ಕೇಳಿದೆ:

ನಿನಗೆ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲದಿದ್ದರೆ, ನಾವು ತರುವ ಪ್ರಸಾದವನ್ನು ಯಾಕೆ ಸ್ವೀಕರಿಸುತ್ತೀಯ?”

ಆ ಪ್ರಶ್ನೆ ಕೇಳಿದ ತಕ್ಷಣ ವಾತಾವರಣದಲ್ಲಿ ಕ್ಷಣಕಾಲ ಮೌನ ಆವರಿಸಿತು. “ಅಯ್ಯೋ, ನಾನು ಏನಾದರೂ ತಪ್ಪಾಗಿ ಕೇಳಿಬಿಟ್ಟೆನೇ?” ಎಂಬ ಆತಂಕ ನನ್ನ ಮನಸ್ಸಿನಲ್ಲಿ ಮೂಡಿತು.

ಅಷ್ಟರಲ್ಲಿ ನನ್ನ ಬಾಸ್ ನಗುಮುಖದಿಂದ ಮಾತನಾಡಲು ಆರಂಭಿಸಿ, ನೀನು ಕೇಳಿರುವ ಪ್ರಶ್ನೆ ಸರಿಯೇ ಇದೆ. ಅದರ ಉತ್ತರವನ್ನು ನಾನು ಕೊಡುತ್ತೇನೆ.” ಎನ್ನುತ್ತಾ,

ನಾನು ಜನ್ಮತಃ ಕ್ರೈಸ್ತ. ನಮ್ಮ ಕುಟುಂಬದಲ್ಲಿ ಕ್ರೈಸ್ತ ಸಂಪ್ರದಾಯಗಳನ್ನು ಪಾಲಿಸುತ್ತೇವೆ. ಆದರೆ ನನಗೆ ಹಿಂದೂ ಧರ್ಮದ ಮೇಲೂ ಅಪಾರ ಗೌರವ ಮತ್ತು ನಂಬಿಕೆ ಇದೆ. ನಮ್ಮ ಹಿರಿಯರಿಂದ ಕೇಳಿದಂತೆ ನಮ್ಮ ಮೂಲ ಪೂರ್ವಜರು ಗೋವಾದ ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣರು. ಕಾಲಾಂತರದಲ್ಲಿ ಕೆಲವು ಪರಿಸ್ಥಿತಿಗಳಿಂದ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಆದರೆ ಅದರಿಂದ ಹಿಂದೂ ಧರ್ಮದ ಬಗ್ಗೆ ಇದ್ದ ಗೌರವ ಕಡಿಮೆಯಾಗಲಿಲ್ಲ. ನೀವು ತರುವ ಪ್ರಸಾದವನ್ನು ನೀವು ದೇವರ ಅನುಗ್ರಹ ಎಂದು ಭಕ್ತಿಯಿಂದ ಸ್ವೀಕರಿಸುತ್ತೀರಿ. ನಾನು ಅದನ್ನು ನಿಮ್ಮ ಭಕ್ತಿಯ ಸಂಕೇತವಾಗಿ ಗೌರವಿಸುತ್ತೇನೆ. ಧರ್ಮದ ಭೇದ ಮಾಡದೇ ಅದನ್ನು ಪ್ರೀತಿಯಿಂದ ಸಿಹಿ ತಿಂಡಿ ಎಂದು ಸ್ವೀಕರಿಸುತ್ತೇನೆ ಎಂದು ಮಾತನ್ನು ಮುಗಿಯುವಷ್ಟರಲ್ಲಿ ಮಳೆಯೂ ನಿಂತಿತ್ತು. ಆ ದಿನ ಎಲ್ಲರೂ ಹಗುರ ಮನಸ್ಸಿನಿಂದ ಮನೆಗಳತ್ತ ಹೊರಟೆವು.

ಈ ಹಳೆಯ ಘಟನೆಯನ್ನು ಈಗ ನೆನಪಿಸಿಕೊಳ್ಳಲು ಕಾರಣವಿದೆ.

2026ರ ಜೂನ್ 12ರಂದು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕರ್ನಾಟಕದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಒಬ್ಬ ವ್ಯಕ್ತಿಯಾಗಿ ಅವರು ದೇವಾಲಯಕ್ಕೆ ಹೋಗುವುದು, ಪೂಜೆ ಸಲ್ಲಿಸುವುದು ಅಥವಾ ಕಾಣಿಕೆ ಅರ್ಪಿಸುವುದು ಅವರ ವೈಯಕ್ತಿಕ ಹಕ್ಕು ಮತ್ತು ನಂಬಿಕೆಯ ವಿಷಯ. ಅದನ್ನು ಯಾರೂ ಪ್ರಶ್ನಿಸುವ ಅಗತ್ಯವಿಲ್ಲ ಮತ್ತು ಪ್ರಶ್ನಿಸಲೂ ಬಾರದು.

ಆದರೆ ಪ್ರಶ್ನೆ ಉದ್ಭವಿಸುವುದು ಬೇರೆ ಕಾರಣಕ್ಕೆ.

ರಾಜಕೀಯ ಜೀವನದಲ್ಲಿ ವಿಶೇಷವಾಗಿ ಅಧಿಕಾರಕ್ಕೆ ಬಂದ ನಂತರ ಸನಾತನ ಧರ್ಮ, ಅದರ ಆಚರಣೆಗಳು ಮತ್ತು ಧಾರ್ಮಿಕ ವಿಚಾರಗಳ ಕುರಿತು ಅವರ ಪಕ್ಷ ಹಾಗೂ ಸರ್ಕಾರ ತೆಗೆದುಕೊಂಡಿರುವ ಕೆಲವು ನಿಲುವುಗಳನ್ನು ಗಮನಿಸಿದಾಗ, ಈ ಭೇಟಿ ನಿಜವಾದ ಭಕ್ತಿಯ ಪ್ರತೀಕವೇ? ಅಥವಾ ರಾಜಕೀಯ ಸಂದೇಶವೇ? ಎಂಬ ಅನುಮಾನ ಅನೇಕರಲ್ಲಿ ಮೂಡಿರುವುದು ಸಹಜ.

ಮಂಗಳೂರಿಗೆ ಆಗಮಿಸಿದ ವಿಜಯ್ ಅವರನ್ನು ರಾಜ್ಯದ ಸಚಿವರು ಮತ್ತು ಅಧಿಕಾರಿಗಳು ಸ್ವಾಗತಿಸಿದರು. ನಂತರ ಅವರು ಕೊಲ್ಲೂರಿಗೆ ತೆರಳಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ಸುಮಾರು 1.6 ಕೆ.ಜಿ. ತೂಕದ ಬೆಳ್ಳಿ ಖಡ್ಗ, ರೇಷ್ಮೆ ಸೀರೆ ಹಾಗೂ ಇತರ ಕಾಣಿಕೆಗಳನ್ನು ಅರ್ಪಿಸಿದರು ಎಂದು ವರದಿಯಾಗಿದೆ.

ಈ ಖಡ್ಗದ ತೂಕ, ಅದರ ಹಿಂದಿನ ಜ್ಯೋತಿಷ್ಯ ನಂಬಿಕೆಗಳು, ಸಪ್ತಶಕ್ತಿಗಳ ಸಂಕೇತಗಳು ಇತ್ಯಾದಿಗಳ ಬಗ್ಗೆ ಅನೇಕ ವ್ಯಾಖ್ಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಾಗಿ ಹರಿದಾಡುತ್ತಿವೆ.

ಸನಾತನ ಧರ್ಮದ ಜ್ಯೋತಿಷ್ಯಾಧಾರಿತವಾಗಿ ಹಾಗೆ ಅರ್ಪಿಸುವ ಖಡ್ಗವೂ ಇಂತಿಷ್ಟು ತೂಕದಲ್ಲಿಯೇ ಇರಬೇಕೆಂಬ ನಂಬಿಕೆ ಇರುವ ಕಾರಣ ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಂಧರ್ಭದಲ್ಲಿ ತಾಯಿ ಮೂಕಾಂಬಿಕಾ ದೇವಿಗೆ 1,600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ಸಮರ್ಪಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವು ಬ್ರಹ್ಮ, ವಿಷ್ಣು, ಮಹೇಶ್ವರ, ಕಾಳಿ, ಲಕ್ಷ್ಮೀ, ಸರಸ್ವತಿ ಸೇರಿ ಏಳು ದೇವತೆಗಳು ಮತ್ತು ಆದಿ ಗುರು ಶ್ರೀ ಶಂಕರಾಚಾರ್ಯರ ಶಕ್ತಿ ಸಂಗಮವಿರುವ ಈ ಪವಿತ್ರ ಸ್ಥಾನ ಎಂಬ ಹಿನ್ನೆಲೆಯನ್ನು ಹೊಂದಿದ್ದು, ಬೆಳ್ಳಿ ಖಡ್ಗದ ಹಿಂದೆ ಇದೇ ಧಾರ್ಮಿಕ ನಂಬಿಕೆಯ ಕಾರಣಕ್ಕಾಗಿ 1.6 ಕೆಜಿ ಅಂದರೆ 1+6=7 ಆಗುವಂತೆ ಬೆಳ್ಳಿ ಖಡ್ಗವನ್ನು ಅರ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ತಮ್ಮ ಶತ್ರುಗಳ ನಾಶಕ್ಕಾಗಿ ಮತ್ತು ಅವರಿಗೆ ಯಾರದ್ದೇ ಕೆಟ್ಟ ದೃಷ್ಟಿ ಬೀಳದಂತೆ ಕಾಪಾಡುವ ಸಲುವಾಗಿ ದೇವಿಗೆ ಖಡ್ಗ ಅರ್ಪಿಸುವ ಹಿನ್ನೆಲೆಯೂ ಇದೆ.

ಅದೇ ರೀತಿಯಲ್ಲಿ 1,600 ಗ್ರಾಂ ಅಂಕಿಗಳನ್ನು ಕೂಡಿದಾಗ 7 ಆಗುತ್ತಿದ್ದು, ಏಳು ಅಂದರೆ ಸಪ್ತಮ ಸ್ಥಾನ. ಜೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದ ಏಳನೇ ಮನೆಯು ಪತಿ-ಪತ್ನಿ ಸ್ಥಾನವನ್ನು ಸೂಚಿಸುತ್ತದೆ. ಹೀಗಾಗಿ ದಾಂಪತ್ಯ ಸುಖ, ವ್ಯಾವಹಾರಿಕ ಜೀವನಕ್ಕಾಗಿ 7 ಸಹಕಾರಿ ಎಂದು ಹೇಳಲಾಗುತ್ತಿದೆ.. ಹೀಗಾಗಿಯೇ ವಿಜಯ್‌ ಅವರು 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ್ದಾರೆ ಎಂದೂ ಸಹಾ ಹೇಳಲಾಗುತ್ತಿದೆ.

ಇಲ್ಲಿಯವರೆಗೆ ಎಲ್ಲವೂ ಒಬ್ಬ ಭಕ್ತನ ವೈಯಕ್ತಿಕ ನಂಬಿಕೆಯ ಭಾಗವೇ.

ಆದರೆ ರಾಜಕೀಯ ನಾಯಕನಾಗಿ, ಅದರಲ್ಲೂ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, ಸಾರ್ವಜನಿಕ ಜೀವನದಲ್ಲಿ ವ್ಯಕ್ತವಾಗಿರುವ ಅವರ ನಿಲುವುಗಳನ್ನೂ ಜನರು ಪರಿಶೀಲಿಸುವುದು ಸಹಜ. ವಿಜಯ್ ಅವರು ರಾಜಕೀಯಕ್ಕೆ ಬರುವ ಮೊದಲು ಕೇವಲ “ವಿಜಯ್” ಎಂದೇ ಗುರುತಿಸಿಕೊಂಡಿದ್ದರೆ, ನಂತರ ತಮ್ಮ ಹೆಸರನ್ನು “ಸಿ. ಜೋಸೆಫ್ ವಿಜಯ್” ಎಂದು ಒತ್ತಿ ಹೇಳುತ್ತಿರುವುದು, ಚರ್ಚ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು, ಹಾಗೂ ಕೆಲವು ಧಾರ್ಮಿಕ-ರಾಜಕೀಯ ಚರ್ಚೆಗಳಲ್ಲಿ ಅವರ ಮೌನ ನಿಲುವುಗಳು ಸಾರ್ವಜನಿಕ ಚರ್ಚೆಗೆ ಕಾರಣವಾಗಿವೆ.

ಮುಖ್ಯಮಂತ್ರಿಯಾಗಿ, ತಮಿಳುನಾಡಿನ ವಿಧಾನಸಭೆಯಲ್ಲಿ ನಡೆದ ಮೊದಲ ಅಧಿವೇಶನದ ಸಂಧರ್ಭದಲ್ಲಿ ವಿರೋಧ ಪಕ್ಷ ಡಿ.ಎಂ.ಕೆ ನಾಯಕ ಉದಯನಿಧಿ ಸ್ಟಾಲಿನ್ ವಿಜಯ್ ಸಮ್ಮುಖದಲ್ಲೇ, ನಾನೂ ಮತ್ತು ವಿಜಯ್ ಒಂದೇ ಶಾಲೆಯ ವಿದ್ಯಾರ್ಥಿಗಳು ಮತ್ತು ನಾವಿಬ್ಬರೂ ರಾಜಕೀಯಕ್ಕೆ ಬಂದಿರುವುದು ಸನಾತನಧರ್ಮದವನ್ನು ನಾಶಮಾಡುವುದಕ್ಕಾಗಿಯೇ ಎಂದು ಹೇಳಿದಾಗಲೂ, ವಯಕ್ತಿಕವಾಗಿ ಬಿಡಿ, ಒಬ್ಬ ಮುಖ್ಯಮಂತ್ರಿಯಾಗಿ ಸನಾತನದ ಧರ್ಮದ ವಿರುದ್ಧದ ಉದಯನಿಧಿ ಅವರ ಹೇಳಿಕೆಯ ಕುರಿತಾಗಿ ಆಕ್ಷೇಪವೂ ವ್ಯಕ್ತಪಡಿಸದೇ ತುಟಿಕ್ ಪಿಟಿಕ್ ಸಹಾ ಎನ್ನದೇ ಇದ್ದದ್ದು, ಮೌನಂ ಸಮ್ಮತಿ ಲಕ್ಷಣಂ ಎನ್ನುವಂತಾಗಿದೆ.


ಅದೇ ಸಮಯದಲ್ಲಿ ತಮಿಳುನಾಡಿನಲ್ಲಿ ಸನಾತನ ಧರ್ಮಕ್ಕೆ ಸಂಬಂಧಿಸಿದ ಕೆಲವು ವಿವಾದಗಳ ಸಂದರ್ಭದಲ್ಲಿ ಅವರ ಸರ್ಕಾರ ಅಥವಾ ಪಕ್ಷದಿಂದ ಸ್ಪಷ್ಟ ಬೆಂಬಲದ ಧ್ವನಿ ಕೇಳಿಸದಿರುವುದನ್ನು ಅವರ ಟೀಕಾಕಾರರು ಉಲ್ಲೇಖಿಸುತ್ತಾರೆ.

ತಲಾಂತರದಿಂದಲೂ ಮಧುರೈ ಬಳಿಯ ತಿರುಪ್ಪರಕುಂಡ್ರಂ ದೇವಾಲಯದಲ್ಲಿ ರೂಢಿಯಲ್ಲಿದ್ದ ಕಾರ್ತೀಕ ದೀಪೋತ್ಸವವನ್ನು ಆಚರಿಸುವುದಕ್ಕೆ ಹಿಂದಿನ ಡಿಎಂಕೆ ಸರ್ಕಾರ ಮುಸಲ್ಮಾನರ ದರ್ಗಾ ಇದೇ ಎನ್ನುವ ಕಾರಣಕ್ಕಾಗಿ ನಿಷೇಧ ಹೇರಿದ್ದರ ವಿರುದ್ಧ ಹಿಂದೂಗಳು ಮದ್ರಾಸ್ ಹೈಕೋರ್ಟ್ ಮೆಟ್ಟೆಲನ್ನೇರಿದಾಗ, ಅಲ್ಲಿನ ಏಕಸದಸ್ಯ ಪೀಠದ ಆದೇಶ ಹಿಂದೂಗಳ ಪರವಾಗಿ ಬಂದಾಗ, ಕಾಂಗ್ರೇಸ್ ಮತ್ತು ಡಿ.ಎಂ.ಕೆ ಪಕ್ಷಗಳು ಆ ಆದೇಶ ನೀಡಿದ ನ್ಯಾಯಾಧೀಷರ ವಿರುದ್ಧವೇ ಸಂಸತ್ ಸದನದಲ್ಲಿ ಹಕ್ಕುಚ್ಯುತಿಯನ್ನು ಮಂಡಿಸಲು ಮುಂದಾಗಿದ್ದರೂ, ನ್ಯಾಯಾಲಯ ಅದೆಕ್ಕೆ ಸೂಪ್ಪು ಹಾಕದೇ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ಬಾರದಂತೆ ಆಚರಿಸಿ ಎಂಬ ಆದೇಶ ನೀಡಿತ್ತು. ಆದರೆ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಕಾನೂನು ಮತ್ತು ಇಂಧನ ಸಚಿವ ಆರ್. ನಿರ್ಮಲ್‌ಕುಮಾರ್ ಅವರು ನ್ಯಾಯಾಲಯದ ಆದೇಶಕ್ಕಿ ಕಿಂಚಿತ್ತೂ ಬೆಲೆ ಕೊಡದೇ ತಮ್ಮ ಸರ್ಕಾರವು ಯಥಾಸ್ಥಿತಿ ಮತ್ತು ವರ್ಷಗಳಿಂದ ಅನುಸರಿಸುತ್ತಿರುವ ಸಾಂಪ್ರದಾಯಿಕ ಪದ್ಧತಿಗಳನ್ನು ಕಾಯ್ದುಕೊಳ್ಳಲು ಬಯಸುತ್ತದೆ. ಯಾವುದೇ ಕಾರಣದಿಂದ ಕೋಮುವಾದಿ ಅಥವಾ ಬಲಪಂಥೀಯ ಅಂಶಗಳ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಹೀಗಾಗಿ ಈ ಪ್ರಶ್ನೆ ಉದ್ಭವಿಸುವುದು ಸಹಜ:

ಒಂದೆಡೆ ಸನಾತನ ಧರ್ಮದ ಆಚರಣೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಮೌನ ಅಥವಾ ನಿರಾಸಕ್ತಿ ತೋರಿಸುವಂತೆ ಕಾಣುವ ರಾಜಕೀಯ ನಿಲುವು, ಮತ್ತೊಂದೆಡೆ ಅದೇ ಸಂಪ್ರದಾಯದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು — ಇದನ್ನು ಜನರು ಹೇಗೆ ಅರ್ಥಮಾಡಿಕೊಳ್ಳಬೇಕು?

ಇದು ನಿಜವಾದ ವೈಯಕ್ತಿಕ ಭಕ್ತಿಯೇ?

ಅಥವಾ ರಾಜಕೀಯವಾಗಿ ಎಲ್ಲ ವರ್ಗಗಳಿಗೂ ಸಂದೇಶ ನೀಡುವ ಪ್ರಯತ್ನವೇ?

ಈ ಪ್ರಶ್ನೆಗೆ ಉತ್ತರವನ್ನು ವಿಜಯ್ ಅವರೇ ತಮ್ಮ ಮಾತು ಮತ್ತು ಕಾರ್ಯಗಳ ಮೂಲಕ ಮುಂದಿನ ದಿನಗಳಲ್ಲಿ ಸ್ಪಷ್ಟಪಡಿಸಬೇಕಾಗಿದೆ. ಏಕೆಂದರೆ ಸಾರ್ವಜನಿಕ ಜೀವನದಲ್ಲಿ ನಂಬಿಕೆಗಿಂತಲೂ ಸ್ಥಿರತೆ ಮತ್ತು ಸಾತತ್ಯಕ್ಕೆ ಹೆಚ್ಚು ಮೌಲ್ಯ ಇರುತ್ತದೆ ಆಲ್ವೇ?


ಏನಂತೀರೀ?
ನಿಮ್ಮವನೇ ಉಮಾಸುತ



Leave a comment