ಕುಮಾರಕೃಪ ಅತಿಥಿ ಗೃಹ – ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕ

ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕುಮಾರಕೃಪ ಅತಿಥಿ ಗೃಹ ರಾಜ್ಯದ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಅತಿಥಿ ಗೃಹಗಳಲ್ಲಿ ಒಂದಾಗಿದೆ. ವಿಶಾಲವಾದ ಹಸಿರು ವಾತಾವರಣ, ಐತಿಹಾಸಿಕ ಹಿನ್ನೆಲೆ, ಉತ್ತಮ ಆತಿಥ್ಯ ಸೇವೆ ಮತ್ತು ರಾಜಕೀಯ ಮಹತ್ವದಿಂದಾಗಿ ಇದು ಕರ್ನಾಟಕದ ಆಡಳಿತ ವ್ಯವಸ್ಥೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.ಹೊರ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು, ರಾಷ್ಟ್ರದ ಗಣ್ಯರು ಹಾಗೂ ವಿದೇಶಿ ಪ್ರತಿನಿಧಿಗಳು ಬೆಂಗಳೂರಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ವಾಸ್ತವ್ಯ ಮಾಡುವ ಪ್ರಮುಖ ಸ್ಥಳಗಳಲ್ಲಿ ಕುಮಾರಕೃಪ ಅತಿಥಿ ಗೃಹವೂ ಒಂದಾಗಿದೆ. ಇಂತಹ ಪಾರಂಪರಿಕ ಕಟ್ಟಡವನ್ನು ರಕ್ಷಣೆ ಮಾಡಬೇಕಾದವರೇ ಅದರ ವಿನಾಶಕ್ಕೆ ಕೈ ಹಾಕಿರುವುದು ವಿಪರ್ಯಾಸವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಈ ಕಟ್ಟಡವನ್ನು ತಮ್ಮ ಗೃಹ ಕಚೇರಿ ಮಾಡಿಕೊಳ್ಳುವ ನೆಪದಲ್ಲಿ ಅದರ ಮೂಲಸ್ವರೂಪಕ್ಕೆ ಧಕ್ಕೆ ತರುತ್ತಿರುವ ಹಿನ್ನಲೆಯಲ್ಲಿ ಕುಮಾರಕೃಪಾ ಅಥಿಗೃಹದ ಸಂಪೂರ್ಣ ವಿವರಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ


ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಈ ಅತಿಥಿ ಗೃಹ ಕುಮಾರ ಕೃಪ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ದಿವಾನ್ ಸರ್ ಕೆ. ಶೇಷಾದ್ರಿ ಅಯ್ಯರ್ (1883–1901) ಅವರ ಖಾಸಗಿ ಬಂಗಲೆ ಎನ್ನುವುದು ಅತ್ಯಂತ ಗಮನಾರ್ಹವಾಗಿದೆ. 1831ರಲ್ಲಿ ಅಧಿಕಾರವನ್ನು ಕಳೆದುಕೊಂಡಂತಹ ಮೈಸೂರು ಅರಸರು ಸುಮಾರು 50 ವರ್ಷಗಳ ಕಾಲ ಸುಧೀರ್ಘವಾದ ಪತ್ರ ವ್ಯವಹಾರದ ನಂತರ 1881 ರಲ್ಲಿ, ಮೈಸೂರು ರಾಜಪ್ರಭುತ್ವ ಒಡೆಯರ್ ರಾಜವಂಶಕ್ಕೆ ಹಸ್ತಾಂತರವಾದಾಗ, ಹತ್ತನೇ ಚಾಮರಾಜೇಂದ್ರ ಒಡೆಯರ್ ಮೈಸೂರಿನ ಒಡೆಯರಾಗಿ ಆಡಳಿತದ ಜವಾಬ್ದಾರಿಯನ್ನು ವಹಿಸಿ ಕೊಂಡರೆ ಶ್ರೀ ರಂಗಾಚಾರ್ಲು ಅವರು ದಿವಾನರಾದರು, ಕೇವಲ ಎರಡೇ ವರ್ಷಗಳಲ್ಲಿ ಆವರು ಅಕಾಲಿಕವಾಗಿ ಮರಣ ಹೊಂದಿದಾಗ ದಿವಾನರಾದವರೇ ಶ್ರೀ ಕೆ. ಶೇಷಾದ್ರಿ ಅಯ್ಯರ್.

ಚಾಮರಾಜ ಒಡೆಯರ ಪ್ರಜಾಹಿತದೃಷ್ಟಿ ಮತ್ತು ದಿವಾನ್ ಶೇಷಾದ್ರಿ ಐಯ್ಯರ್ ಅವರ ವಿವೇಕ ಹಾಗೂ ಜಾಣ್ಮೆಯಿಂದ ಮೈಸೂರು ರಾಜ್ಯದ ಪ್ರಗತಿ ಮತ್ತೊಂದು ಮಜಲಿಗೆ ತಲುಪುತ್ತದೆ. ಪ್ರಜೆಗಳ ಹಿತರಕ್ಷಣೆಗಾಗಿ ಬಹಳಷ್ಟು ಒತ್ತು ನೀಡಿ ಶಿಕ್ಷಣ, ಆರೋಗ್ಯ, ಅರಣ್ಯ ಸಂಪತ್ತು ಕಾಪಾದುವ ಮೂಲಕ ರಾಜ್ಯದ ಪ್ರಗತಿಯನ್ನು ತರುವುದಲ್ಲದೇ, ರಾಜ್ಯದ ಆದಾಯವನ್ನು ಹೆಚ್ಚಿಸುವ ಮೂಲಕ ಪ್ರಜೆಗಳ ನೆಮ್ಮದಿಯನ್ನು ಇಮ್ಮಡಿಸುವುದರಲ್ಲಿ ಸಫಲರಾಗುತ್ತಾರೆ. ಬೆಂಗಳೂರನ್ನು ಆಧುನಿಕರಣಗೊಳಿಸಿದ ಕಾರಣಕ್ಕಾಗಿ ಆವರು ಆಧುನಿಕ ಬೆಂಗಳೂರಿನ ನಿರ್ಮಾಪಕ ಎಂದೇ ಪ್ರಖ್ಯಾತಿಯನ್ನು ಹೊಂದಿದ್ದಾರೆ.

ಆಗಸ್ಟ್ 1898ರಲ್ಲಿ ಬೆಂಗಳೂರಿಗೆ ಪ್ಲೇಗ್ ಎಂಬ ಮಹಾಮಾರಿ ವಕ್ಕರಿಸಿದಾಗ, ಅಂದಿನ ಮೈಸೂರು ಸರ್ಕಾರವು ಜನನಿಬಿಡ ಪ್ರದೇಶವಾಗಿದ್ದ ಬಸವನಗುಡಿ ಮತ್ತು ಮಲ್ಲೇಶ್ವರಂ ಬಡಾವಣೆಗಳಿಂದ ಹೊಸಾ ಬಡವಾಣೆಗಳನ್ನು ನಿರ್ಮಿಸಲು ಯೋಚಿಸಿದಾಗಲೇ ಪ್ರಸ್ತುತ ಶೇಷಾದ್ರಿಪುರದ ನಿರ್ಮಾಣವಾಗಿ ಅಂತಹ ಕೆ. ಶೇಷಾದ್ರಿ ಅಯ್ಯರ್ ಆವರು ತಮ್ಮ ಅಧಿಕಾರದ ಕೊನೆಯ ಹಂತದಲ್ಲಿ ತಮ್ಮ ವಾಸಕ್ಕಾಗಿ ಒಂದು ಮನೆಯನ್ನು ಕಟ್ಟಲು ನಿರ್ಧರಿಸಿದಾಗ ಅಂದಿನ ವಾಸ್ತುತಜ್ಞರು ಅಂದಿನ ಕಾಲದ ವಿಶಿಷ್ಟ ಬ್ರಿಟಿಷ್ ಶೈಲಿಯ ಕುಟೀರಗಳಂತೆ ವಿನ್ಯಾಸ ಗೊಳಿಸಿದ್ದನ್ನು ಇಚ್ಚಿಸದ ಶೇಷಾದ್ರಿಗಳು ತಮ್ಮ ನಿವಾಸ ಸಂಪೂರ್ಣವಾಗಿ ಭಾರತೀಯ ಸೌಂದರ್ಯಶಾಸ್ತ್ರ ಮತ್ತು ವಾಸ್ತುಶಾಸ್ತ್ರದ ಅನುಗುಣವಾಗಿ ಇರಬೇಕೆಂದು ಸೂಚಿಸಿ ಅದರ ಅನುಗುಣವಾಗಿ ಈ ಅರಮನೆಯಂತಹ ಮೇರು ಕೃತಿಯನ್ನು ಸುಮಾರು 1897ರಲ್ಲಿ ನಿರ್ಮಿಸಿದರು. ಕೇರಳದ ಪಾಲಕ್ಕಾಡಿನ ಕುಮಾರಪುರಂ ಮೂಲದವರಾದ ಅಯ್ಯರ್ ಅವರು ತಮ್ಮ ಕುಲ ದೇವರಾದ ಕುಮಾರಸ್ವಾಮಿಯ (ಸುಬ್ರಹ್ಮಣ್ಯಸ್ವಾಮಿ) ಆಶೀರ್ವಾದ ಎನ್ನುವಂತೆ ಆ ಭವ್ಯವಾದ ಕಟ್ಟಡಕ್ಕೆ ಕುಮಾರಕೃಪ ಎಂಬ ಹೆಸರನ್ನು ಇಡಲಾಗುತ್ತದೆ.

ಸುಮಾರು 100 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದ ವಿಸ್ತಾರವಾದ ಕುಮಾರಾ ಪಾರ್ಕ್ ಮೈದಾನದ ಒಂದು ಮೂಲೆಯಲ್ಲಿ ಬೆಂಗಳೂರಿನ ಗದ್ದಲದ ನದುವೆಯೂ ಹಲವು ಎಕರೆ ಪ್ರದೇಶದಲ್ಲಿ ಶಾಂತ ಮತ್ತು ಹಸಿರು ವಾತಾವರಣದ ಮಧ್ಯೆ ನೂರಾರು ಮರಗಳಿಂದ ಆವೃತವಾದ ಪ್ರದೇಶದಲ್ಲಿ ಸುಂದರವಾದ ಹೂತೋಟಗಳ ಮಧ್ಯದಲ್ಲಿ ಪಾರಂಪರಿಕವಾಗಿ ಕಲ್ಲಿನಿಂದ ಸುಮಾರು 845 ಚದರ ಮೀಟರ್ ಗಳಷ್ಟು ವಿಸ್ತೀರ್ಣದ ಎರಡು ಮಹಡಿಯ, ವಿಶಾಲವಾದ ಆರು ಕೊಠಡಿಗಳು,ಪೂಜಾ ಕೋಣೆ, ಊಟದ ಮನೆ ಮತ್ತು ಅಡುಗೆಮನೆಯೊಂದಿಗೆ ಭೂಗತ ನೆಲಮಾಳಿಗೆಯನ್ನು ಹೊಂದಿದ್ದಂತಹ ಸಾಕಷ್ಟು ಅದ್ದೂರಿಯಾಗಿ ಅಲಂಕರಿಸಲ್ಪಟ್ಟ ಭವ್ಯ ಮತ್ತು ಭವ್ಯವಾದ ನಿರ್ಮಿಸಲಾದ ಕಟ್ಟಡವಾಗಿದೆ. ಕಟ್ತಡದ ಬಾಲ್ಕನಿಗಳು ಸಂಕೀರ್ಣವಾದ ವಿವರವಾದ ಎರಕಹೊಯ್ದ ಕಬ್ಬಿಣದ ರೇಲಿಂಗ್‌ಗಳನ್ನು ಹೊಂದಿದ್ದು, ಬಾಗಿದ ಆವರಣಗಳು, ಟ್ರೆಫಾಯಿಲ್ ಮೆರ್ಲಾನ್‌ಗಳನ್ನು ಹೊಂದಿರುವ ಚಜ್ಜಾಗಳು, ರಂಧ್ರವಿರುವ ಪರದೆಗಳು ಇವೆಲ್ಲವೂ ಕುಮಾರ ಕೃಪ ಕಟ್ಟಡಕ್ಕೆ ಭಾರತೀಯ ನೋಟವನ್ನು ನೀಡುತ್ತವೆ. ಹಿರಿಯ ಐಎಎಸ್ ಅಧಿಕಾರಿಗಳು, ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿಗಳಾಗಿದ್ದಂತಹ ಮತ್ತು ಬೆಂಗಳೂರಿನ ಪರಂಪರೆ, ಸೌಂದರ್ಯಶಾಸ್ತ್ರ ಪರಿಸರದದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಂತಹ ಶ್ರೀ ಟಿ.ಪಿ. ಇಸ್ಸಾರ್ ಅವರು ತಮ್ಮ ” ದಿ ಸಿಟಿ ಬ್ಯೂಟಿಫುಲ್” ಪುಸ್ತಕದಲ್ಲಿ ಹೇಳಿರುವಂತೆ, ಕುಮಾರ ಕೃಪವು ‘ಅಲಂಕಾರವನ್ನು ವಾಸ್ತುಶಿಲ್ಪದ ಅತ್ಯಗತ್ಯ ಭಾಗವೆಂದು ಪರಿಗಣಿಸಲಾಗಿದ್ದ ಕಾಲದಿಂದ ಬಂದಿದೆ ಮತ್ತು ಇದು ಬೆಂಗಳೂರಿನ ‘ಸುಂದರ ಮತ್ತು ಪರಿಪೂರ್ಣವಾಗಿ ಸಂಯೋಜಿಸಲ್ಪಟ್ಟ ಸೃಷ್ಟಿಗಳಲ್ಲಿ ಒಂದಾಗಿದೆ.

ಶೇಷಾದ್ರಿ ಅಯ್ಯರ್ ಮಾರ್ಚ್ 1901 ರಲ್ಲಿ ನಿವೃತ್ತರಾದ ಆರು ತಿಂಗಳಲ್ಲೇ ನಿಧನರಾದಾಗ, ಅವರ ಅಂತ್ಯಕ್ರಿಯೆಯೂ ಸಹಾ. ಅದೇ ಕುಮಾರಕೃಪದ ಬಳಿಯ ಮೈದಾನದಲ್ಲೇ ಮಾಡಲಾಗಿತ್ತು. ಆದದ ಕೆಲವು ವರ್ಷಗಳ ನಂತರ ಅವರ ಕುಟುಂಬದವರು ಹೊರ ರಾಜ್ಯಗಳು ಮತ್ತು ಹೊರದೇಶಗಳಲ್ಲಿ ವಾಸ್ತವ್ಯ ಹೂಡಿದ್ದನ್ನು ಗಮನಿಸಿದ ಅಂದಿನ ಮೈಸೂರು ಸರ್ಕಾರವು 1918ರಲ್ಲಿ ಶೇಷಾದ್ರಿ ಅಯ್ಯರ್ ಅವರ ಪುತ್ರರಿಂದ ಆ ವಿಸ್ತಾರವಾದ ಮನೆಯನ್ನು ಖರೀದಿಸಿ, ಅದನ್ನು ಗಣ್ಯರಿಗಾಗಿ ಅಧಿಕೃತ ರಾಜ್ಯ ಅತಿಥಿ ಗೃಹವಾಗಿ ಮರುರೂಪಿಸಿತು

ಆನಂತರದ ದಿನಗಳಲ್ಲಿ ದೇಶ ವಿದೇಶಗಳ ಸಾವಿರಾರು ಅಥಿಗಳು ಕುಮಾರ ಪಾರ್ಕ್‌ನಲ್ಲಿ ತಂಗಿದ್ದು, ಅಂತಹ ಅತಿಧಿಗಳಲ್ಲಿ ಪ್ರಮುಖರುಗಳ ಪಟ್ಟಿ ಹೀಗಿದೆ.

ಸ್ವಾತಂತ್ರ ಹೋರಾಟದಲ್ಲಿ ನಿರಂತರವಾಗಿ ತೊಡಗಿಕೊಂಡು ವಿಪರೀತವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಂತಹ ಮಹಾತ್ಮ ಗಾಂಧಿಯವರು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಲುವಾಗಿ 1927 ರಲ್ಲಿ ಸುಮಾರು ಮೂರು ತಿಂಗಳುಗಳ ಕಾಲ ಕುಮಾರಕೃಪ ಅಥಿತಿ ಗೃಹದಲ್ಲಿ ತಂಗಿದ್ದಂತಹ ಸಂಧರ್ಭದಲ್ಲಿ ಇಲ್ಲಿನ ಉದ್ಯಾನವನಗಳ ಸುತ್ತಲೂ ನಡೆಯಲು ಇಷ್ಟಪಡುತ್ತಿದ್ದರು. ಪ್ರತಿ ದಿನ ಸಂಜೆ, ಅವರು ಮೈದಾನದಲ್ಲಿರುವ ಮರದ ಕೆಳಗೆ ನಡೆಸುತ್ತಿದ್ದಂತಹ ಪ್ರಾರ್ಥನಾ ಸಭೆಗಳಿಗೆ ನೂರಾರು ಜನರು ಹಾಜರಾಗುತ್ತಿದ್ದರು. 1934ರಲ್ಲಿ ಮತ್ತೆ ಇದೇ ಬಂಗಲೆಗೆ ಭೇಟಿ ನೀಡಿ ದೀರ್ಘಕಾಲದವರೆಗೆ ಅಲ್ಲಿ ತಂಗಿದ್ದರು, ಇಂದಿಗೂ ಮಹಾತ್ಮಾಗಾಂಧಿಯವರ ಪ್ರಾರ್ಥನಾ ಸಭೆಗಳಿಗೆ ಸಾಕ್ಷಿಯಾಗಿದ್ದಂತಹ ಮರಗಳು ಮತ್ತು ಸ್ಥಳಗಳು ಸಣ್ಣ ಸ್ಮಾರಕದ ರೂಪದಲ್ಲಿ ಹೋಟೆಲ್ ಲಲಿತ್ ಅಶೋಕ್‌ನ ಆವರಣದಲ್ಲಿದೆ.

ಬೌದ್ಧಧರ್ಮದ ಅತ್ಯುನ್ನತ ಆಧ್ಯಾತ್ಮಿಕ ಗುರುಗಳಾದಂತಹ ಟಿಬೆಟ್ ಮೂಲದ ದಲೈ ಲಾಮಾ ಅವರು ಸುಮಾರು ನಾಲ್ಕು ವರ್ಷಗಳ ಕಾಲ ಇದೇ ಕುಮಾರ ಕೃಪಾದಲ್ಲಿ ತಂಗಿದ್ದ ಕಾರಣ, ಇಂದಿಗೂ ಪ್ರತೀ ಬಾರಿ ಅವರು ಬೆಂಗಳೂರಿಗೆ ಭೇಟಿ ನೀಡಿದಾಗಲೂ ಇದೇ ಐತಿಹಾಸಿಕ ಕುಮಾರ ಕೃಪ ಅತಿಥಿ ಗೃಹದಲ್ಲಿಯೇ ತಂಗಲು ಇಚ್ಚಿಸುತ್ತಾರೆ. ಜನವರಿ 2014 ರಲ್ಲಿ ಭೇಟಿ ನೀಡಿದ ಸಮಯದಲ್ಲಿ ಇಲ್ಲಿಯೇ ಉಳಿದು ಕಾರ್ಯಕ್ರಮಗಳನ್ನು ನಡೆಸಿದ್ದರು ಎಂಬುದು ಗಮನಾರ್ಹ.

ನೆಹರು-ಗಾಂಧಿ ಕುಟುಂಬದ ಸದಸ್ಯರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳು ಇಲ್ಲಿ ಅತಿಥಿಗಳಾಗಿದ್ದು. ಮಾಜಿ ಪ್ರಧಾನಿ ರಾಜೀವ್ ಗಾಂಧಿ 1991 ರಲ್ಲಿ ಶ್ರೀಪೆರಂಬದೂರಿನಲ್ಲಿ ಬಾಂಬ್ ಹತ್ಯೆಯಲ್ಲಿ ದುರ್ಮಣರಾಗುವ ಮುನ್ನಾ ತಮ್ಮ ಕೊನೆಯ ಪತ್ರಿಕಾಗೋಷ್ಠಿಯನ್ನು ಇದೇ ಕುಮಾರಕೃಪಾದಲ್ಲಿಯೇ ನಡೆಸಿದ್ದರು ಎನ್ನುವುದು ಈಗ ನೆನಪಾಗಿಯೇ ಉಳಿದಿದೆ,

ಕುಮಾರ ಪಾರ್ಕ್‌ನ ಮೈದಾನದಲ್ಲಿ ಹೆಚ್ಚಿನ ವಸತಿ ಸಮುಚ್ಚಾಯವನ್ನು ನಿರ್ಮಿಸುವ ಸಲುವಾಗಿ ಅಂದಿನ ನಗರ ಸುಧಾರಣಾ ಟ್ರಸ್ಟ್ ಮಂಡಳಿಯು 1947 ರಲ್ಲಿ ರೈಲ್ವೆ ಮಾರ್ಗದ ಪಶ್ಚಿಮಕ್ಕೆ ಕುಮಾರ ಪಾರ್ಕ್ ಪಶ್ಚಿಮ ವಿಸ್ತರಣೆಯನ್ನು ರೂಪಿಸಿ ಗಾಂಧಿ ಭವನವನ್ನು 1965 ಮತ್ತೊಂದು ತುದಿಯಲ್ಲಿ ನಿರ್ಮಿಸಿದರೆ, ಕುಮಾರಕೃಫ ಮತ್ತು ಗಾಂಧಿಮೈದಾದನ ಮಧ್ಯೆ ಈಗ ಲಲಿತ್ ಅಶೋಕ್ ಎಂದು ಕರೆಯಲ್ಪಡುವ ಹೋಟೆಲ್ ಅಶೋಕ್ ವನ್ನು 1971 ರಲ್ಲಿ ನಿರ್ಮಿಸಿದ ನಂತರ ಕುಮಾರ ಕೃಪ ಅಥಿತಿಗೃಹ ಸಂಕೀರ್ಣವು 14 ಎಕರೆಗಳಷ್ಟು ಪ್ರದೇಶಕ್ಕೆ ಸೀಮಿತವಾಯಿತು.

1977 ರಲ್ಲಿ ಕುಮಾರಕೃಫಾ ಅನೆ‍ಕ್ಸ್ ಎಂಬ ಹೆಸರಿನಲ್ಲಿ ಸುಮಾರು 1,149 ಚದರ ಮೀಟರ್ ವಿಸ್ತೀರ್ಣದ, 27 ಕೊಠಡಿಗಳ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ ಸರ್ಕಾರ ಮತ್ತೆ 1990 ರಲ್ಲಿ, ಮುಖ್ಯ ಕಟ್ಟಡದ ಪಕ್ಕದಲ್ಲಿರುವ ಹಿಂಭಾಗದಲ್ಲಿ 162 ಸಾಮಾನ್ಯ ಮತ್ತು 40 ವಿಐಪಿ ಅತಿಥಿ ಕೊಠಡಿಗಳನ್ನು ಹೊಂದಿರುವ 202 ಪ್ಲಶ್ ಕೊಠಡಿಗಳನ್ನು ಹೊಂದಿರುವಂತಹ ಕಟ್ಟಡವನ್ನು 1,096 ಚದರ ಮೀಟರ್‌ಗೆ ವಿಸ್ತರಿಸಿ ಈ ಅತಿಥಿಗೃಹದ ನಿರ್ವಣೆಯನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಹಸ್ತಾಂತರಿಸಿ ಅದರ ಮೂಲಕ ಕೇವಲ ದೇಶ ವಿದೇಶಗಳಿಂದ ಬರುವಂತಃಹ ಸರ್ಕಾರೀ ಮತ್ತು ಖಾಸಗೀ ಅತಿಥಿಗಳಷ್ಟೇ ಅಲ್ಲದೇ ಇತರೇ ಆಸಕ್ತರಿಗೂ ಸಹಾ ಕುಮಾರಕೃಪಾದಲ್ಲಿ ತಂಗುವಂತಹ ವ್ಯವಸ್ಥೆಯನ್ನು ಮಾಡಲಾಯಿತು.

1898ರಲ್ಲಿ ಬೆಂಗಳೂರಿಗೆ ಪ್ಲೇಗ್ ಬಂದಂತಹ ಸಂಧರ್ಭದಲ್ಲಿ ಜನರ ಸುರಕ್ಷತೆಗಾಗಿ ಶೇಷಾದ್ರಿಪುರಕ್ಕೆ ಸ್ಥಳಾಂರವಾದದ್ದನ್ನು ನೆನಪಿಸುವಂತೆ 2021-22 ಕೋವಿಡ್ ಮಹಾಮಾರಿ ವಕ್ಕರಿಸಿಕೊಂಡಾಗ, 100 ಹಾಸಿಗೆಗಳನ್ನು ಹೊಂದಿರುವ ಕುಮಾರ ಕೃಪಾ ಅತಿಥಿಗೃಹದ ಒಂದು ವಿಭಾಗವು ಕೋವಿಡ್ -19 ಆರೈಕೆ ಕೇಂದ್ರವಾಗಿ ಕಾರ್ಯನಿರ್ವಹಿಸಿದ್ದು ಮೆಚ್ಚುವಂತಹ ಕಾರ್ಯವಾಗಿತ್ತು

ಕುಮಾರಕೃಪ ಅತಿಥಿ ಗೃಹವು ಬೆಂಗಳೂರಿನ ಬೆಂಗಳೂರು ಗಾಲ್ಫ್ ಕ್ಲಬ್ ಎದುರು ಮತ್ತು ವಿಧಾನ ಸೌಧದಿಂದ ಕೂಗಳತೆಯ ದೂರಲ್ಲೇ ಇದ್ದು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅನೇಕ ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಸರ್ಕಾರ ರಚನೆಗೆ ಸಂಬಂಧಿಸಿದ ಮಾತುಕತೆಗಳು, ರಾಜಕೀಯ ನಾಯಕರ ಸಭೆಗಳು, ಉನ್ನತ ಮಟ್ಟದ ಆಡಳಿತ ಚರ್ಚೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಯೋಜನಾ ಸಭೆಗಳು ಇಲ್ಲಿ ನಡೆಯುತ್ತಲೇ ಇರುವ ಕಾರಣ, ಕರ್ನಾಟಕ ರಾಜ್ಯದಲ್ಲಿ ಯಾವುದೇ ರೀತಿಯ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡ ಸಂದರ್ಭಗಳಲ್ಲಿ ಬಹುತೇಕ ಮಾಧ್ಯಮಗಳ ಗಮನವೆಲ್ಲವೂ ಸಾಮಾನ್ಯವಾಗಿ ಕುಮಾರಕೃಪದತ್ತ ಸೆಳೆಯುತ್ತದೆ.

ಕೇವಲ ರಾಜಕೀಯಕ್ಕೆ ಮಾತ್ರಾ ಸೀಮಿತವಾಗದೇ, ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಗಣ್ಯರು, ಕಲಾವಿದರು, ಸಾಹಿತಿಗಳು ಮತ್ತು ಅಧಿಕಾರಿಗಳು ಇಲ್ಲಿ ವಾಸ್ತವ್ಯ ಮಾಡುವ ಮೂಲಕ ರಾಜ್ಯದ ಸಾಂಸ್ಕೃತಿಕ ವಿನಿಮಯಕ್ಕೂ ಈ ಸ್ಥಳ ಪರೋಕ್ಷವಾಗಿ ಕೊಡುಗೆ ನೀಡಿದ್ದು, ಅನೇಕ ಪ್ರಮುಖ ಸಾಹಿತ್ಯ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಚರ್ಚೆಗಳು ಇಲ್ಲಿ ನಡೆದಿವೆ.


ಸುಮಾರು 125 ವರ್ಷಗಳ ಇತಿಹಾಸ ಹೊಂದಿರುವ ಕುಮಾರಕೃಪ ಅತಿಥಿ ಗೃಹವು ಕೇವಲ ಒಂದು ಸರ್ಕಾರಿ ವಸತಿ ಸೌಲಭ್ಯವಲ್ಲ; ಅದು ಕರ್ನಾಟಕದ ಆಡಳಿತಾತ್ಮಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಕೇತವಾಗಿದೆ. ಮಹಾತ್ಮ ಗಾಂಧೀಜಿ, ದಲೈ ಲಾಮಾ, ವಿವಿಧ ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಗಣ್ಯ ವ್ಯಕ್ತಿಗಳು ತಂಗಿರುವ ಈ ಕಟ್ಟಡವು ರಾಜ್ಯದ ಇತಿಹಾಸದ ಅನೇಕ ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗಿದೆ.


ಇತ್ತೀಚಿನ ದಿನಗಳಲ್ಲಿ ಕುಮಾರಕೃಪ ಅತಿಥಿ ಗೃಹವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿಯಾಗಿ ಬಳಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ಅಗತ್ಯ ಬದಲಾವಣೆಗಳು ಅಥವಾ ನವೀಕರಣ ಕಾರ್ಯಗಳು ನಡೆದರೆ, ಅವು ಪಾರಂಪರಿಕ ಕಟ್ಟಡ ಸಂರಕ್ಷಣೆಯ ನಿಯಮಾವಳಿಗಳಿಗೆ ಅನುಗುಣವಾಗಿ ನಡೆಯಬೇಕು ಎಂಬುದು ಇತಿಹಾಸ ತಜ್ಞರು, ವಾಸ್ತುಶಿಲ್ಪಿಗಳು ಮತ್ತು ಪರಂಪರೆ ಸಂರಕ್ಷಣಾ ಹೋರಾಟಗಾರರ ಅಭಿಪ್ರಾಯವಾಗಿದೆ.ಯಾವುದೇ ಐತಿಹಾಸಿಕ ಕಟ್ಟಡವನ್ನು ಆಧುನಿಕ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ರೂಪಾಂತರಿಸುವಾಗ ಅದರ ಮೂಲ ಸ್ವರೂಪ, ವಾಸ್ತು ವೈಶಿಷ್ಟ್ಯ ಮತ್ತು ಐತಿಹಾಸಿಕ ಮೌಲ್ಯಕ್ಕೆ ಧಕ್ಕೆಯಾಗದಂತೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ಅಭಿವೃದ್ಧಿ ಮತ್ತು ಪರಂಪರೆ ಸಂರಕ್ಷಣೆ ಎರಡರ ನಡುವೆ ಸಮತೋಲನ ಸಾಧಿಸುವುದು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿಯಾಗಿದೆ.


ಕುಮಾರಕೃಪ ಅತಿಥಿ ಗೃಹವು ಕೇವಲ ಒಂದು ಕಟ್ಟಡವಲ್ಲ; ಅದು ಕರ್ನಾಟಕದ ಆಡಳಿತ ಪರಂಪರೆ, ರಾಜಕೀಯ ಇತಿಹಾಸ, ಸಾಂಸ್ಕೃತಿಕ ವೈಭವ ಮತ್ತು ಆತಿಥ್ಯದ ಜೀವಂತ ಪ್ರತೀಕವಾಗಿದೆ. ಬೆಂಗಳೂರಿನ ವೇಗದ ನಗರೀಕರಣದ ಮಧ್ಯೆಯೂ ತನ್ನ ಹಸಿರು ಪರಿಸರ, ಘನತೆ ಮತ್ತು ಐತಿಹಾಸಿಕ ಮಹತ್ವವನ್ನು ಉಳಿಸಿಕೊಂಡಿರುವ ಈ ಪರಂಪರೆಯ ಕಟ್ಟಡವು ರಾಜ್ಯದ ಹೆಮ್ಮೆಯ ಆಸ್ತಿಗಳಲ್ಲಿ ಒಂದಾಗಿದೆ. ಇಂತಹ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಂಪರೆ ಮತ್ತು ಪ್ರಗತಿ ಎರಡನ್ನೂ ಸಮಾನವಾಗಿ ಗೌರವಿಸುವ ಮನೋಭಾವದಿಂದಲೇ ಕರ್ನಾಟಕದ ಶ್ರೀಮಂತ ಇತಿಹಾಸವನ್ನು ಸಂರಕ್ಷಿಸಬಹುದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment