ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಲು ಪ್ರಮುಖ ಕಾರಣಗಳಲ್ಲಿ ಒಂದಾಗಿ ಪಂಚ ಗ್ಯಾರಂಟಿಗಳನ್ನು ಪರಿಗಣಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಹೆಚ್ಚು ಪ್ರಚಾರ ಪಡೆದ ಯೋಜನೆ ಎಂದರೆ “ಗೃಹಲಕ್ಷ್ಮಿ”. ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ₹2,000 ನೀಡುವ ಭರವಸೆ ನೀಡಿ ಮಹಿಳಾ ಮತದಾರರ ಮನ ಗೆದ್ದ ಕಾಂಗ್ರೆಸ್, ಈ ಯೋಜನೆಯನ್ನು ಬಡ ಮಹಿಳೆಯರ ಆರ್ಥಿಕ ಸಬಲೀಕರಣದ ಮಹಾಯೋಜನೆ ಎಂದು ಬಿಂಬಿಸಿತ್ತು. ಆದರೆ ಮೂರು ವರ್ಷಗಳ ಅನುಷ್ಠಾನದ ನಂತರ ಕೇಳಿಬರುತ್ತಿರುವ ಪ್ರಶ್ನೆ ಒಂದೇ – ಇದು ನಿಜವಾಗಿಯೂ ಗೃಹಲಕ್ಷ್ಮಿಯೇ, ಅಥವಾ ಕಾಂಗ್ರೆಸ್ ಲಕ್ಷ್ಮಿಯೇ?

ಸುಮಾರು 1.28 ಕೋಟಿ ಮಹಿಳೆಯರು ನೋಂದಾಯಿಸಿಕೊಂಡ ಈ ಯೋಜನೆಗಾಗಿ 2024-25ರ ಬಜೆಟ್‌ನಲ್ಲಿ ₹28,608.40 ಕೋಟಿ ಮೀಸಲಿಡಲಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುತ್ತಿರುವ ಈ ಯೋಜನೆಯಲ್ಲಿ ಹಣ ವಿತರಣೆಯೇ ನಿಯಮಿತವಾಗಿರಲಿಲ್ಲ ಎಂಬ ಆರೋಪಗಳು ಮೊದಲ ದಿನದಿಂದಲೂ ಕೇಳಿಬರುತ್ತಿವೆ. ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಹಣ ಜಮೆಯಾಗುತ್ತದೆ ಎಂದು ಹೇಳಿದ್ದ ಸರ್ಕಾರ, ಅನೇಕ ಬಾರಿ ಎರಡು ಅಥವಾ ಮೂರು ತಿಂಗಳ ಕಂತುಗಳನ್ನು ಒಟ್ಟಿಗೆ ನೀಡಿ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ ಎಂಬ ಟೀಕೆ ಎದುರಿಸುತ್ತಿದೆ.

ಇನ್ನೂ ಆಶ್ಚರ್ಯದ ಸಂಗತಿ ಎಂದರೆ, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳ ಬಗ್ಗೆ ಉದ್ಭವಿಸಿರುವ ಗೊಂದಲ. ಫಲಾನುಭವಿಗಳಿಗೆ ಹಣ ತಲುಪಿಲ್ಲ ಎಂಬ ದೂರುಗಳ ನಡುವೆ ಆ ಎರಡು ತಿಂಗಳ ಹಣದ ಲೆಕ್ಕಾಚಾರ ಏನು ಎಂಬ ಪ್ರಶ್ನೆಗೆ ಸರ್ಕಾರದಿಂದ ಇನ್ನೂ ಸ್ಪಷ್ಟವಾದ ಉತ್ತರ ಬಂದಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

ಇದೀಗ ಈ ವಿವಾದಕ್ಕೆ ಮತ್ತೊಂದು ಹೊಸ ತಿರುವು ನೀಡಿರುವುದು ಸಿಎಜಿ ವರದಿಯನ್ನು ಆಧರಿಸಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾಡಿರುವ ಆರೋಪಗಳು. ಅವರ ಪ್ರಕಾರ, 19,020 ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಜೋಡಿಸಲಾಗಿದೆ. ಯೋಜನೆಯ ನಿಯಮಗಳ ಪ್ರಕಾರ ಪ್ರತಿಯೊಬ್ಬ ಫಲಾನುಭವಿಗೂ ಪ್ರತ್ಯೇಕ ಬ್ಯಾಂಕ್ ಖಾತೆ ಇರಬೇಕಾದರೆ, ಈ ಅಸಂಗತತೆ ಹೇಗೆ ಸಂಭವಿಸಿತು? ಅಷ್ಟೇ ಅಲ್ಲ, 23,262 ದಾಖಲೆಗಳಲ್ಲಿ ಬ್ಯಾಂಕ್ ಖಾತೆ ವಿವರಗಳೇ ಇಲ್ಲದಿದ್ದರೂ ₹46.52 ಕೋಟಿ ಹಣ ವರ್ಗಾವಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಹಣ ಯಾರ ಖಾತೆಗೆ ತಲುಪಿತು? ಇದರ ಅಂತಿಮ ಫಲಾನುಭವಿಗಳು ಯಾರು? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

2025ರಲ್ಲಿ ಕಾಂಗ್ರೇಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರು 2023ರ ವಿಧಾನಸಭಾ ಚುನಾವಣೆಯ ಸಂಧರ್ಭದಲ್ಲಿವೋಟ್ ಚೋರಿ” (ಮತ ಕಳ್ಳತನ) ನಡೆದಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡು, ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಮಹದೇವಪುರ ಕ್ಷೇತ್ರದಲ್ಲಿ ಸುಮಾರು 1,00,250 ಮತಗಳಿಗೆ ಸಂಬಂಧಿಸಿದ ಅಕ್ರಮಗಳು ಕಂಡುಬಂದಿದ್ದು,ಅದರಲ್ಲಿ ಸುಮಾರು 40,009 ಮತದಾರರು ನಕಲಿ ಅಥವಾ ಅಮಾನ್ಯ ವಿಳಾಸಗಳಲ್ಲಿ ನೋಂದಾಯಿತರಾಗಿದ್ದಾರೆ ಎಂದು ಆರೋಪಿಸಿದ್ದಾರೆ. 11,965 ನಕಲಿ ಮತದಾರರ ದಾಖಲೆಗಳು ಪತ್ತೆಯಾಗಿದ್ದು, ಸುಮಾರು 10,452 ಮತದಾರರು ಒಂದೇ ವಿಳಾಸದಲ್ಲಿ ಗುಂಪುಗೂಡಿಸಿ ನೋಂದಾಯಿಸಲಾಗಿದೆ ಮತ್ತು ಸುಮಾರು 4,132 ಮತದಾರರ ಫೋಟೋಗಳಲ್ಲಿ ದೋಷಗಳಿವೆ ಎಂದು ತಿಳಿಸಿದ್ದರು. ಹಾಗೆಯೇ ಮಾತನ್ನು ಮುಂದುವರೆಸಿದ್ದ ರಾಹುಲ್ ಗಾಂಧಿ, ಇವು ಕೇವಲ ತಾಂತ್ರಿಕ ದೋಷಗಳಲ್ಲ. ಚುನಾವಣೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ರೀತಿಯ ಗಂಭೀರ ಅಕ್ರಮಗಳಾಗಿವೆ. ಇಂದೊಂದು “ಭಯಂಕರ ಚೋರಿ” ಎಂದು ಬಣ್ಣಿಸಿ, ಚುನಾವಣಾ ಆಯೋಗವು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದರು.

ಈಗ ಕನ್ನಡಿಗರಲ್ಲಿ ಕಾಡುತ್ತಿರುವ ಕುತೂಹಲಕಾರಿ ಪ್ರಶ್ನೆ ಎಂದರೆ, ಮತದಾರರ ಪಟ್ಟಿಯಲ್ಲಿ ಅಕ್ರಮಗಳಿವೆ ಎಂದು ಕಾಂಗ್ರೆಸ್ ನಾಯಕತ್ವ ಪ್ರಶ್ನೆ ಎತ್ತುತ್ತಿರುವ ಸಂದರ್ಭದಲ್ಲಿ, ತಮ್ಮದೇ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ಉಂಟಾಗಿರುವುದಾಗಿ ಹೇಳಲಾಗುತ್ತಿರುವ ಅಕ್ರಮ ಆರೋಪಗಳಿಗೆ ಕಾಂಗ್ರೆಸ್ ಪಕ್ಷ ಮತ್ತು ಅದರ ಅಧಿನಾಯಕ ರಾಹುಲ್ ಗಾಂಧಿ ಯಾವ ರೀತಿಯ ಉತ್ತರ ನೀಡಲಿದ್ದಾರೆ? ಒಂದೆಡೆ ಮತದಾರರ ಹಕ್ಕುಗಳ ರಕ್ಷಣೆಯ ಬಗ್ಗೆ ಮಾತನಾಡುವ ಈ ನಾಯಕರು, ಮತ್ತೊಂದೆಡೆ ಜನರ ತೆರಿಗೆ ಹಣದಿಂದ ನಡೆಯುವ ಕಲ್ಯಾಣ ಯೋಜನೆಗಳ ಕುರಿತು ಉದ್ಭವಿಸಿರುವ ಅನುಮಾನಗಳಿಗೆ ಸಂಪೂರ್ಣ ಪಾರದರ್ಶಕ ಉತ್ತರ ನೀಡಬೇಕಾಗಿರುವ ಜವಾಬ್ದಾರಿಯೂ ಅವರ ಮೇಲಿದೆ.

ಗೃಹಲಕ್ಷಿ ಯೋಜನೆಯ ಕುರಿತಾದ ವಿರೋಧ ಪಕ್ಷಗಳ ಆರೋಪವನ್ನು ಈ ಕಾಂಗ್ರೇಸ್ ಸರ್ಕಾರ ಇದೊಂದು ರಾಜಕೀಯ ಪ್ರೇರಿತವೆಂದು ತಳ್ಳಿಹಾಕಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇದ್ದಿದ್ದರೆ, ಎರಡು ತಿಂಗಳುಗಳ ಗೃಹಲಕ್ಷಿ ಯೋಜನೆಯಲ್ಲಿ ನೀಡದ ಹಣ ಮತ್ತು ಇದರ ಕುರಿತಾಗಿ ತನಿಖೆ ನಡೆಸುತ್ತಿರುವ ಸಿಎಜಿಗೆ ಅಗತ್ಯ ದಾಖಲೆಗಳನ್ನು ಸಂಪೂರ್ಣವಾಗಿ ನೀಡಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ಎಂಬ ಪ್ರಶ್ನೆಯನ್ನು ಜನ ಸಾಮಾನ್ಯರೂ ಕೇಳುತ್ತಿದ್ದಾರೆ. ಫಲಾನುಭವಿಗಳ ಪಟ್ಟಿ, ರದ್ದಾದ ಅರ್ಜಿಗಳ ಮಾಹಿತಿ ಮತ್ತು ಹಣ ವರ್ಗಾವಣೆಯ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಸರ್ಕಾರ ತನ್ನ ಮೇಲಿನ ಅನುಮಾನಗಳನ್ನು ನಿವಾರಿಸಬೇಕಾಗಿದೆ.

ಹಾಗೂ ಹೀಗೂ ಮೂರು ವರ್ಷಗಳ ಕಾಲ ಸಿದ್ದರಾಮಯ್ಯನವರ ಆಡಳಿತದಲ್ಲಿ ನಡೆಸಿಕೊಂಡು ಹೋದ ಗೃಹಲಕ್ಷ್ಮಿ ಯೋಜನೆ, ಡಿ. ಕೆ. ಶಿವಕುಮಾರ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಪ್ರತೀ ತಿಂಗಳು ಜನರಿಗೆ ನೇರವಾಗಿ ತಲುಪಿಸುವ ಸಾವಿರಾರು ಕೋಟಿಯ ಈ ಯೋಜನೆ ಜಾರಿಯಾದ ನಂತರ ಬ್ಯಾಂಕ್ ಖಾತೆಯ ಸಮಸ್ಯೆಗಳು, ಆಧಾರ್ ಲಿಂಕ್ ದೋಷಗಳು, ಹೆಸರು ಹೊಂದಾಣಿಕೆ ಸಮಸ್ಯೆಗಳು ಮತ್ತು ಅರ್ಹತಾ ಪರಿಶೀಲನೆಗಳ ಕಾರಣದಿಂದ ಸಾವಿರಾರು ಫಲಾನುಭವಿಗಳು ಹಣದಿಂದ ವಂಚಿತರಾಗಿದ್ದಾರೆ ಎಂಬ ದೂರುಗಳ ನಡುವೆಯೇ ಅದೆಷ್ಟೋ ಹಣ ಸತ್ತವರಿಗೂ ತಲುಪುತ್ತಿದೆ ಎಂಬ ಆರೋಪವೂ ಇದೆ ಎಂದು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮತ್ತೊಮ್ಮೆ ಮರು ಅರ್ಜಿ ಸಲ್ಲಿಸಿ, ದಾಖಲೆಗಳನ್ನು ನವೀಕರಿಸಿ ಜೊತೆಗೆ ಇ-ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗುತ್ತಿದೆ. ಈ ಮೂಲಕ ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚುವುದು, ಹಣ ಸರಿಯಾದ ವ್ಯಕ್ತಿಗೆ ತಲುಪುವುದನ್ನು ಖಚಿತಪಡಿಸುವುದು ಮತ್ತು ಯೋಜನೆಯ ಪಾರದರ್ಶಕತೆಯನ್ನು ಹೆಚ್ಚಿಸುವುದೇ ಸರ್ಕಾರದ ಉದ್ದೇಶವಾಗಿದೆ ಎನ್ನಲಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಕುರಿತು ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುವ ಮೂಲಕ ಮತ್ತೆ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ. ಮತಪಟ್ಟಿ ಪರಿಷ್ಕರಣೆಯ ರೂಪದಲ್ಲಿ ಜನರನ್ನು ಮತ್ತೆ ದಾಖಲೆಗಳನ್ನು ಸಲ್ಲಿಸಲು ಒತ್ತಾಯಿಸುವುದು, ಮರು ನೋಂದಣಿ ಮಾಡಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ ಎಂದು ವಾದಿಸುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ದೃಢೀಕರಣಕ್ಕಾಗಿ ಮರು ನೋಂದಣಿ ಹಾಗೂ ದಾಖಲೆ ಪರಿಶೀಲನೆ ಅಗತ್ಯ ಎಂದು ವಾದಿಸುವ ಕಾಂಗ್ರೆಸ್ ಸರ್ಕಾರ, ಮತದಾರರ ಪಟ್ಟಿಯ ಶುದ್ಧೀಕರಣಕ್ಕಾಗಿ ಚುನಾವಣಾ ಆಯೋಗ ನಡೆಯುವ SIR ಪ್ರಕ್ರಿಯೆಯನ್ನು ಏಕೆ ವಿರೋಧಿಸುತ್ತದೆ? ಒಂದು ಕಡೆ ಸರ್ಕಾರಿ ಯೋಜನೆಯ ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಲು ಮರು ದಾಖಲೆಗಳನ್ನು ಕೇಳುವುದು ಸಮರ್ಥನೀಯವಾದರೆ, ಮತ್ತೊಂದು ಕಡೆ ಮತದಾರರ ಪಟ್ಟಿಯ ನಿಖರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸುವುದು ಕಾಂಗ್ರೇಸ್ ಪಕ್ಷದ ದ್ವಂದ್ವ ನೀತಿ ಎಂದು ವಿರೋಧ ಪಕ್ಷ ಹೇಳುವುದು ಸತ್ಯ ಎನಿಸುತ್ತದೆ

ಯಾವುದೇ ಯೋಜನೆಯಾಗಲಿ ಅಥವಾ ಮತದಾರರ ಪಟ್ಟಿಯಾಗಲಿ, ಸಾರ್ವಜನಿಕ ಸಂಪನ್ಮೂಲಗಳು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳ ವಿಶ್ವಾಸಾರ್ಹತೆಗಾಗಿ ಅರ್ಹತಾ ಪರಿಶೀಲನೆ ಅಗತ್ಯ. ಹಾಗಿದ್ದರೆ ಒಂದನ್ನು ಸಮರ್ಥಿಸಿಕೊಂಡು ಮತ್ತೊಂದನ್ನು ವಿರೋಧಿಸುವುದು ರಾಜಕೀಯ ಅನುಕೂಲತೆಯ ನಿಲುವೇ ಹೊರತು ತಾತ್ವಿಕ ನಿಲುವಲ್ಲ. ಗೃಹಲಕ್ಷ್ಮಿಗೆ ಮರು ನೋಂದಣಿ ಅಗತ್ಯವಿದ್ದರೆ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನೂ ಕಾಲ ಕಾಲಕ್ಕೆ ಮಾಡಬೇಕಲ್ಲವೇ ಎಂದು ಜನರು ಕೇಳುವುದಕ್ಕೆ ಸರ್ಕಾರ ಮತ್ತು ಕಾಂಗ್ರೇಸ್ ಪಕ್ಷ ಸ್ಪಷ್ಟವಾದ ಉತ್ತರ ನೀಡಬೇಕಿದೆ.

ಬಡ ಮಹಿಳೆಯರ ಸಬಲೀಕರಣ ಎಂಬ ಉದಾತ್ತ ಉದ್ದೇಶದಿಂದ ಆರಂಭವಾದ ಗೃಹಲಕ್ಷ್ಮಿ ಯೋಜನೆ, ಇಂದು ಆಡಳಿತಾತ್ಮಕ ಲೋಪ, ಗೊಂದಲ ಮತ್ತು ಹಣಕಾಸು ಅಸಂಗತತೆಗಳ ಆರೋಪಗಳಿಂದ ಸುತ್ತುವರಿದಿದೆ. ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಬದುಕು ಬದಲಾಯಿಸುವ ಕಾರ್ಯಕ್ರಮವೇ? ಅಥವಾ ರಾಜಕೀಯ ಲಾಭಕ್ಕಾಗಿ ರೂಪಿಸಲಾದ ಮತಬ್ಯಾಂಕ್ ಯೋಜನೆಯೇ? ಎಂಬುದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಜನರ ತೆರಿಗೆ ಹಣದ ಪ್ರತಿಯೊಂದು ರೂಪಾಯಿಗೂ ಲೆಕ್ಕ ಕೊಡಬೇಕಾದ ಸರ್ಕಾರ, ಪ್ರಶ್ನೆಗಳನ್ನು ದೇಶದ್ರೋಹ ಅಥವಾ ರಾಜಕೀಯ ದಾಳಿ ಎಂದು ತಳ್ಳಿಹಾಕುವ ಬದಲು, ಪಾರದರ್ಶಕ ಉತ್ತರಗಳನ್ನು ನೀಡಬೇಕಾಗಿದೆ. ಏಕೆಂದರೆ ಇದು ಕೇವಲ ಒಂದು ಯೋಜನೆಯ ಪ್ರಶ್ನೆಯಲ್ಲ; ಸಾರ್ವಜನಿಕ ಹಣದ ವಿಶ್ವಾಸಾರ್ಹ ನಿರ್ವಹಣೆಯ ಪ್ರಶ್ನೆಯಾಗಿದೆ.

ಗೃಹಲಕ್ಷ್ಮಿ ಯೋಜನೆ ನಿಜವಾಗಿಯೂ ಮಹಿಳಾ ಸಬಲೀಕರಣದ ಯಶೋಗಾಥೆಯೇ? ಅಥವಾ ವಿರೋಧ ಪಕ್ಷಗಳು ಆರೋಪಿಸುವಂತೆ ಆಡಳಿತಾತ್ಮಕ ಲೋಪಗಳು ಮತ್ತು ಹಣಕಾಸು ಅಕ್ರಮಗಳ ಪ್ರಶ್ನೆಗಳನ್ನು ಹೊತ್ತಿರುವ ಯೋಜನೆಯೇ? ಈ ಪ್ರಶ್ನೆಗಳಿಗೆ ಅಂತಿಮ ಉತ್ತರ ಸಿಗಬೇಕಾದರೆ ಸಂಪೂರ್ಣ ಪಾರದರ್ಶಕ ತನಿಖೆ, ದಾಖಲೆಗಳ ಬಹಿರಂಗೀಕರಣ ಮತ್ತು ಸರ್ಕಾರದ ಸ್ಪಷ್ಟನೆ ಅಗತ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಆರೋಪಗಳಿಗಿಂತಲೂ ಸತ್ಯಾಂಶಗಳು ಮುಖ್ಯ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲ ಅನುಮಾನಗಳನ್ನು ಸರ್ಕಾರ ನಿವಾರಿಸುವುದು ಮತ್ತು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಕಾಲದ ಅಗತ್ಯವಾಗಿದೆ. ಆದರೆ ಪ್ರಸ್ತಕವಾಗಿ ರಾಜ್ಯದಲ್ಲಿ ಅಂತಹ ಮನಸ್ಥಿತಿಯುಳ್ಳ ಸಭ್ಯ ರಾಜಕಾರಣಿಗಳು ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ಇಲ್ಲದೇ ಇರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment