ಕಾವ್ಯವನ್ನು ಕೇವಲ ಓದುವುದಲ್ಲ, ಹಾಡಿ ಅದರ ಅರ್ಥವನ್ನು ಜನರ ಹೃದಯಕ್ಕೆ ತಲುಪಿಸುವ ಅಪೂರ್ವ ಕಲೆಯೇ ಗಮಕ. ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳಾದ ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಪಂಪ ಭಾರತ, ಜೈಮಿನಿ ಭಾರತ, ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವಲ್ಲಿ ಗಮಕ ಕಲೆಯ ಪಾತ್ರ ಅಪಾರ. . ಆ ಗಮಕ ಕಲೆಗೆ ಐದು ದಶಕಗಳಿಗೂ ಹೆಚ್ಚು ಕಾಲ ತಮ್ಮ ಬದುಕನ್ನೇ ಸಮರ್ಪಿಸಿರುವ ಈ ಪರಂಪರೆಯನ್ನು ಉಳಿಸಿ, ಬೆಳೆಸಿ, ಇಂದಿನ ತಲೆಮಾರಿಗೂ ಪರಿಚಯಿಸುತ್ತಿರುವ ನಮ್ಮೆಲ್ಲರ ನೆಚ್ಚಿನ ಗಮಕ ಮೇಷ್ಟು ಎಂದೇ ಪ್ರಖ್ಯಾತವಾಗಿರುವ ಹಿರಿಯ ಗಮಕಿಗಳಾದ ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ಶ್ರೀ ಜಿ.ಎಸ್. ನಾರಾಯಣ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಇಂದಿನ ಗುರು ಪೂರ್ಣಿಮೆಯಂದು ಪರಿಚಯಿಸುತ್ತಿದ್ದೇನೆ.
ಬಾಲ್ಯ, ಕುಟುಂಬ ಮತ್ತು ಶಿಕ್ಷಣ
1942ರ ಅಕ್ಟೋಬರ್ 14ರಂದು ಹೊಸಕೋಟೆ ಸಮೀಪದ ಗುಲ್ಲಳ್ಳಿಯ ಶ್ರೀ ಶೇಷಪ್ಪ ಮತ್ತು ವಂಕಮ್ಮ ದಂಪತಿಗಳಿಗೆ ಜನಿಸಿದ ಶ್ರೀಯುತ ಜಿ. ಎಸ್. ನಾರಾಯಣ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಮತ್ತು ಹೊಸಕೋಟೆಗಳಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಾಲ್ಯದಿಂದಲೇ ಕನ್ನಡ ಸಾಹಿತ್ಯ, ಪುರಾಣಗಳು ಮತ್ತು ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ಮುಂದೆ ಗಮಕ ಕಲೆಯನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡರು.
ಶಿಕ್ಷಕರಿಂದ ಗಮಕಿಯವರೆಗೆ
ವೃತ್ತಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಜಿ. ಎಸ್. ನಾರಾಯಣ ಅವರು ನಿವೃತ್ತಿಯ ನಂತರವೂ ವಿಶ್ರಾಂತಿ ಪಡೆಯದೆ, ಕನ್ನಡ ಸಾಹಿತ್ಯ ಮತ್ತು ಗಮಕ ಕಲೆಯ ಸೇವೆಯನ್ನೇ ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡರು. ಅವರ ಜೀವನದ ನಿಜವಾದ ಪರಿಚಯ “ಗಮಕಿ“ ಎಂಬ ಹೆಸರಿನಲ್ಲೇ ಅಡಗಿದೆ.
ಗಮಕ ಕಲೆಯಲ್ಲಿ ಶಿಕ್ಷಣ
,ಹಿರಿಯ ಗಮಕಿ ಶ್ರೀಮತಿ ಮಂಜುಳರಾಜು ಅವರ ಬಳಿ ಗಮಕ ಕಲೆಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುತ್ತಲೇ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಗಮಕ ಪ್ರವೇಶ ಮತ್ತು ಪ್ರೌಢ ಪರೀಕ್ಷೆಗಳಲ್ಲಿ (1973–74 ಹಾಗೂ 1974–75) ಯಶಸ್ವಿಯಾಗಿ ತೇರ್ಗಡೆಯಾದ ಅವರು ಆ ನಂತರ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಗಮಕ ಕಲೆಯನ್ನು ಕಲಿಸುವ ಗುರುವಾಗಿಯೂ ಹೊರಹೊಮ್ಮಿದರು.
ಗಮಕ ಬೋಧನೆಯಲ್ಲಿ ಐದು ದಶಕಗಳ ಸೇವೆ
ಗಮಕ ಕೇವಲ ವೇದಿಕೆಗೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಅವರು ಮಲ್ಲೇಶ್ವರಂ ಗಾಂಧೀ ಸಾಹಿತ್ಯ ಸಂಘ, ದಾಸರಹಳ್ಳಿ ಗಾಯತ್ರಿ ಸಂಘ ಮತ್ತು ಕೆಂಗೇರಿಯ ಮಹಿಳಾ ವಿದ್ಯಾಪೀಠಗಳಲ್ಲಿ ಗಮಕ ತರಗತಿಗಳನ್ನು ನಡೆಸಿದರು. ಅವರ ಬಳಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಗಮಕ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಗಮನಾರ್ಹವಾಗಿದೆ.
ನಮ್ಮ ಕುಟುಂಬದೊಂದಿಗೆ ಅವರ ಅವಿನಾಭಾವ ಸಂಬಂಧ
ಹೇಳಿ ಕೇಳಿ ನಮ್ಮದು ಸಂಗೀತ, ಹರಿಕಥೆ ಮತ್ತು ಗಮಕ ಪರಂಪರೆಯನ್ನು ಆರಾಧಿಸಿಕೊಂಡು ಬಂದ ಕುಟುಂಬ. ನಮ್ಮ ತಾತ ಗಮಕಿ ಶ್ರೀ ಬಿ. ನಂಜುಂಡಯ್ಯ ಅವರ ಗಾಯನವನ್ನು ಕೇಳುತ್ತಲೇ ಬೆಳೆದ ನಮ್ಮ ತಂದೆ ಶ್ರೀ ಶಿವಮೂರ್ತಿ ಅವರು ನಂತರ ಗಮಕವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುವ ಉದ್ದೇಶದಿಂದ 70ರ ದಶಕದಲ್ಲಿ ಮಲ್ಲೇಶ್ವರದ ಗಾಂಧಿ ಸಾಹಿತ್ಯ ಸಂಘದಲ್ಲಿ ಗಮಕಾಭ್ಯಾಸ ಆರಂಭಿಸಿದರು. ಅಲ್ಲಿ ಜಿ. ಎಸ್. ನಾರಾಯಣ ಅವರೊಂದಿಗೆ ಆಯಿತು. ಆ ಪರಿಚಯವೇ ಮುಂದೆ ಜೀವನಪರ್ಯಂತದ ಆತ್ಮೀಯ ಬಾಂಧವ್ಯವಾಗಿ ಅರಳಿತು.
ಗುರುಗಳಾದ ನಾರಾಯಣ್ ಅವರ ಬಳಿ ಕೇವಲ ನಮ್ಮ ತಂದೆಯವರು ಮಾತ್ರವಲ್ಲ, ನಮ್ಮ ಚಿಕ್ಕಪ್ಪಂದಿರು, ನಂತರ ವೈಯಕ್ತಿಕವಾಗಿ ನಾನು, ನನ್ನ ಪತ್ನಿ ಮತ್ತು ನನ್ನ ಮಗಳೂ ಸಹ ಕೆಲವು ಕಾಲ ಗಮಕ ಕಲಿತಿದ್ದೇವೆ. ಹೀಗಾಗಿ ಅವರು ನಮ್ಮ ಕುಟುಂಬದಲ್ಲಿ “ಗಮಕ ಮೇಷ್ಟ್ರು“ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು.
ಈ ಸಂಬಂಧ ಗಮಕ ತರಗತಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಮ್ಮ ಎರಡು ಕುಟುಂಬಗಳು ಕಳೆದ ಐದು ದಶಕಗಳಿಂದ ಪರಸ್ಪರರ ಎಲ್ಲ ಶುಭ ಹಾಗೂ ದುಃಖದ ಸಂದರ್ಭಗಳಲ್ಲಿ ಜೊತೆಯಾಗಿದ್ದೇವೆ. ಕುಟುಂಬದ ಸದಸ್ಯರಂತೆಯೇ ಬೆರೆತು ಬದುಕಿದ ಈ ಆತ್ಮೀಯತೆ ನಿಜಕ್ಕೂ ದೇವರ ಕೃಪೆಯೇ ಎನ್ನಬಹುದು.
ಅದ್ಭುತ ಗಮಕ ಜೋಡಿ
ಗುರುಗಳಾದ ಜಿ. ಎಸ್. ನಾರಾಯಣ ಅವರ ಗಮಕ ವಾಚನ ಮತ್ತು ನಮ್ಮ ತಂದೆ ಶ್ರೀ ಶಿವಮೂರ್ತಿ ಅವರ ಭಾವಪೂರ್ಣ ವ್ಯಾಖ್ಯಾನ – ಈ ಜೋಡಿ ಕನ್ನಡ ಗಮಕ ಲೋಕದಲ್ಲಿ ಅಪಾರ ಮೆಚ್ಚುಗೆ ಗಳಿಸಿತ್ತು. ರಾಜ್ಯದಾದ್ಯಂತ ನೂರಾರು ವೇದಿಕೆಗಳಲ್ಲಿ ಈ ಜೋಡಿ ಗಮಕ ಕಾರ್ಯಕ್ರಮಗಳನ್ನು ನಡೆಸಿ ಸಾವಿರಾರು ಶ್ರೋತೃಗಳನ್ನು ರಂಜಿಸಿತು. ವಿಶೇಷವಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಆಯೋಜಿಸುತ್ತಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇವರಿಬ್ಬರ ಗಮಕಕ್ಕೆ ವಿಶಿಷ್ಟ ಸ್ಥಾನವಿತ್ತು.
ಅಷ್ಟೇ ಅಲ್ಲದೆ, ಸುಮಾರು ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ, ನಂದಿಬೆಟ್ಟದ ತಪ್ಪಲಿನಲ್ಲಿರುವ ತಿಮ್ಮರಾಯನಸ್ವಾಮಿ ಬೆಟ್ಟದ ಯಾಜ್ಞವಲ್ಕ ಆಶ್ರಮದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಮಹಾಶಿವರಾತ್ರಿಯ ಜಾಗರಣೆ ಕಾರ್ಯಕ್ರಮಗಳಲ್ಲಿ ಈ ಇಬ್ಬರೂ ಸೇರಿ ಗಮಕ ಕಲೆಯನ್ನು ಪಸರಿಸಿದ ರೀತಿ ಇಂದಿಗೂ ಅನೇಕರ ನೆನಪಿನಲ್ಲಿ ಜೀವಂತವಾಗಿದೆ.
ಇದೇ ರೀತಿ, ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿರುವ ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ಪ್ರತೀ ತಿಂಗಳು ಆಯೋಜಿಸುತ್ತಿದ್ದ “ಇಂಚರ“ ಕಾರ್ಯಕ್ರಮದಲ್ಲಿಯೂ ಗುರು-ಶಿಷ್ಯರ ಈ ಜೋಡಿ ಅನೇಕ ಸ್ಮರಣೀಯ ಗಮಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದೆ.
ನನ್ನ ಜೀವನದ ಮರೆಯಲಾಗದ ಕ್ಷಣ
ನಮ್ಮ ತಂದೆಯವರ ಅಕಾಲಿಕ ಅಗಲಿಕೆಯ ನಂತರ, ಅನೇಕ ಹಿರಿಯರ ಒತ್ತಾಯ ಮತ್ತು ಪ್ರೋತ್ಸಾಹದ ಮೇರೆಗೆ, ಪದ್ಯ ಒಲಿಸಿಕೊಳ್ಳದೇ ಹೋದರೂ ಅಲ್ಪ ಸ್ವಲ್ಪ ಗದ್ಯದ ಮೇಲಿದ್ದ ಹಿಡಿತದಿಂದಾಗಿ ಮೊದಲ ಬಾರಿಗೆ ಬೆಂಗಳೂರಿನ ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯ ವೇದಿಕೆಯಲ್ಲಿ ಗುರುಗಳಾದ ಜಿ. ಎಸ್. ನಾರಾಯಣ ಅವರು “ಸತ್ಯ ಹರಿಶ್ಚಂದ್ರ” ಮಹಾಕಾವ್ಯದ ಪದ್ಯಗಳನ್ನು ವಾಚಿಸುತ್ತಿದ್ದಾಗ, ಅದಕ್ಕೆ ವ್ಯಾಖ್ಯಾನ ಮಾಡುವ ಅವಕಾಶ ನನಗೆ ದೊರೆಯಿತು. ಕಾರ್ಯಕ್ರಮ ಮುಗಿದ ನಂತರ ಗುರುಗಳಾದ ನಾರಾಯಣ್ ಅವರು ನನ್ನ ಬೆನ್ನನ್ನು ತಟ್ಟಿ ಅತ್ಯಂತ ಪ್ರೀತಿಯಿಂದ
“ಭೇಷ್… ಭೇಷ್…! ನಿನ್ನ ತಾತ ಮತ್ತು ತಂದೆಯವರಿಂದ ಬಂದ ವ್ಯಾಖ್ಯಾನದ ಪರಂಪರೆಯನ್ನು ಚೆನ್ನಾಗಿ ಉಳಿಸಿಕೊಂಡಿದ್ದೀಯ. ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದೀಯ!” ಅವರ ಆ ಮಾತುಗಳು ನನಗೆ ದೊರೆತ ಅತ್ಯಂತ ದೊಡ್ಡ ಪ್ರಶಸ್ತಿ. ಆ ಕ್ಷಣವನ್ನು ನಾನು ನನ್ನ ಜೀವಮಾನದಲ್ಲಿ ಎಂದಿಗೂ ಮರೆಯಲಾರೆ.
ಗುರುವಿನ ಆಶೀರ್ವಾದ, ತಾತನವರ ಪರಂಪರೆ ಮತ್ತು ತಂದೆಯವರ ಸಂಸ್ಕಾರ – ಈ ಮೂರು ನನ್ನ ಜೀವನದಲ್ಲಿ ಅಮೂಲ್ಯವಾದ ಸಂಪತ್ತಾಗಿ ಉಳಿದಿವೆ. ಗುರುಗಳಾದ ಗಮಕಿ ಜಿ. ಎಸ್. ನಾರಾಯಣ ಅವರೊಂದಿಗೆ ನಮ್ಮ ಕುಟುಂಬ ಬೆಳೆಸಿಕೊಂಡ ಈ ಅವಿನಾಭಾವ ಸಂಬಂಧವು ನಮ್ಮ ಪಾಲಿಗೆ ಸದಾ ಹೆಮ್ಮೆಯ ಸಂಗತಿ ಮತ್ತು ಪವಿತ್ರ ನೆನಪು.
ಕರ್ನಾಟಕದಾದ್ಯಂತ ಸಾವಿರಾರು ಕಾರ್ಯಕ್ರಮಗಳು
ಹಿರಿಯ ಗಮಕಿ ನೀಲತ್ತಹಳ್ಳಿ ಕಸ್ತೂರಿ ಅವರ ಸಾರಥ್ಯದಲ್ಲಿ ಮತ್ತು ಗಮಕಿಗಳಾದ ರಾಮಾರಾಧ್ಯ ಅವರ ಶಿಷ್ಯತ್ವದಲ್ಲಿ ಜಿ. ಎಸ್. ನಾರಾಯಣ ಅವರು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕುಮಾರವ್ಯಾಸ ಮಂಟಪ, ಆದಿಚುಂಚನಗಿರಿ ಮಠ, ವಿವಿಧ ಸಾಹಿತ್ಯ ಸಮ್ಮೇಳನಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ನೂರಾರು ಗಮಕ ರೂಪಕ ಕಾರ್ಯಕ್ರಮಗ: ಗಳು ಸೇರಿದಂತೆ. ಅವರ ಗಮಕ ಕಾರ್ಯಕ್ರಮಗಳ ಸಂಖ್ಯೆ ಸಾವಿರಾರು ಎಂಬುದು ಅವರ ಕಲಾಸೇವೆಯ ವೈಶಾಲ್ಯವನ್ನು ಸಾರುತ್ತದೆ.
ಆಕಾಶವಾಣಿಯ ಜನಪ್ರಿಯ ಗಮಕಿ
1976ರಲ್ಲಿ ಅವರು ಬೆಂಗಳೂರು ಆಕಾಶವಾಣಿಯ ಗಮಕ ಕಲಾವಿದರಾಗಿ ಸೇರ್ಪಡೆಯಾದರು. ಮುಂದಿನ 30 ವರ್ಷಗಳ ಕಾಲ (1976–2006) ನೂರಾರು ಗಮಕ ಕಾರ್ಯಕ್ರಮಗಳು ಆಕಾಶವಾಣಿಯಿಂದ ಪ್ರಸಾರಗೊಂಡು, ಅವರ ಧ್ವನಿ ರಾಜ್ಯದ ಮನೆಮನೆಗೂ ತಲುಪಿತು. ಆಕಾಶವಾಣಿಯ ಮೂಲಕ ಗಮಕ ಕಲೆಯನ್ನು ಜನಪ್ರಿಯಗೊಳಿಸಿದ ಹಿರಿಯ ಕಲಾವಿದರಲ್ಲಿ ಅವರು ಪ್ರಮುಖರು.
ದೂರದರ್ಶನದ ಆರಂಭಿಕ ಕಲಾವಿದ
1984ರಲ್ಲಿ ಬೆಂಗಳೂರು ದೂರದರ್ಶನ ಆರಂಭವಾದಾಗಿನಿಂದಲೇ ಅವರು ಹಲವು ಕಾವ್ಯ ವಾಚನ ಮತ್ತು ಗಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅವರ ಧ್ವನಿಯಲ್ಲಿ ಮೂಡಿಬಂದ ಅನೇಕ ಕಾವ್ಯಗಳು ಇಂದು ಧ್ವನಿಮುದ್ರಿಕೆಗಳ ರೂಪದಲ್ಲಿ ಲಭ್ಯವಿದ್ದು, ಗಮಕಾಭಿಮಾನಿಗಳಿಗೆ ಅಮೂಲ್ಯ ದಾಖಲೆಯಾಗಿವೆ.
ಧ್ವನಿಮುದ್ರಿಕೆಗಳು ಮತ್ತು ಕ್ಯಾಸೆಟ್‌ಗಳು
ಜಿ. ಎಸ್. ನಾರಾಯಣ ಅವರ ಧ್ವನಿಯಲ್ಲಿ ಅನೇಕ ಮಹತ್ವದ ಕನ್ನಡ ಕೃತಿಗಳು ಧ್ವನಿಮುದ್ರಣಗೊಂಡಿವೆ.
ಅವುಗಳಲ್ಲಿ ಪ್ರಮುಖವಾದವು:
- ಶ್ರೀ ಕೈವಾರ ಕ್ಷೇತ್ರದ ತಾತಯ್ಯ ಅವರು ತೆಲುಗಿನಲ್ಲಿ ರಚಿಸಿದ ಕೃತಿಗಳು – ಎಂ. ಎಸ್. ರಾಮಯ್ಯ ಅವರ ಸಹಯೋಗದಲ್ಲಿ ಐದು ಕ್ಯಾಸೆಟ್‌ಗಳು.
- ಕನ್ನಡ ಗಣಕ ಪರಿಷತ್ತು ಪ್ರಕಟಿಸಿದ ಪಂಪ ಭಾರತ ಮತ್ತು ಕುಮಾರವ್ಯಾಸ ಭಾರತದ ಆಯ್ದ ಭಾಗಗಳು.
- ಎಂ. ಎ. ಜಯರಾಮರಾವ್ ಅವರ ನೇತೃತ್ವದಲ್ಲಿ ತೊರವೆ ರಾಮಾಯಣದ ಸಿ.ಡಿ.
- ಗಣಪತಿ ಸಚ್ಚಿದಾನಂದ ಆಶ್ರಮ ಪ್ರಕಟಿಸಿದ ಬಿ. ಎಸ್. ಎಸ್. ಕೌಶಿಕ್ ಅವರ ಶ್ರೀ ದತ್ತ ದರ್ಶನ ಕಾವ್ಯ.
- ಹಾಸನದ ನರಹರಿ ಅವರ ಏಸು ಕ್ರಿಸ್ತ ಚರಿತೆಯ ಆಯ್ದ ಭಾಗಗಳು.
- ಸುಧಾ ಮೂರ್ತಿ ಅವರ ಆಶ್ರಯದಲ್ಲಿ ಗೋಖಲೆ ವಿಚಾರ ಸಂಸ್ಥೆಯಲ್ಲಿ ನಡೆದ ತೊರವೆ ರಾಮಾಯಣದ ಧ್ವನಿಮುದ್ರಣ.
ಈ ಎಲ್ಲ ದಾಖಲೆಗಳು ಗಮಕ ಕಲೆಯ ಸಂರಕ್ಷಣೆಗೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಪ್ರತಿಬಿಂಬಿಸುತ್ತವೆ.
ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಕೆ
1983ರಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ಬೆಂಗಳೂರಿನ ವೈ.ಎಂ.ಸಿ.ಎ ಮೈದಾನದಲ್ಲಿ ನಡೆದ “ಶ್ರೀಕೃಷ್ಣದೇವರಾಯ ಧ್ವನಿ ಮತ್ತು ಬೆಳಕು“ ಕಾರ್ಯಕ್ರಮದಲ್ಲಿ ಅವರು ಕಲಾವಿದರಾಗಿ ಭಾಗವಹಿಸಿದ್ದರು. ಇದು ಅವರ ಕಲಾ ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾಗಿದೆ.
ಗಮಕದ ಪ್ರಸಾರ ಮತ್ತು ಬೋಧನೆ
ಭದ್ರಗಿರಿ ಅಚ್ಯುತ ದಾಸರ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಪ್ರತಿವರ್ಷ ನಡೆಯುವ ಶಿಬಿರಗಳಲ್ಲಿ ಅವರು ಗಮಕ ಬೋಧನೆ ನಡೆಸಿ, ಕನ್ನಡದ ಅನೇಕ ಶ್ರೇಷ್ಠ ಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದಾರೆ. ಅವರ ಬೋಧನಾ ಶೈಲಿಯ ವಿಶೇಷತೆ ಎಂದರೆ – ಕಾವ್ಯದ ಅರ್ಥವನ್ನು ಸರಳವಾಗಿ, ಭಾವಪೂರ್ಣವಾಗಿ ಮತ್ತು ಜೀವನ ಮೌಲ್ಯಗಳೊಂದಿಗೆ ವಿವರಿಸುವುದು.
ಅಭಿನಯ ತರಬೇತಿಯೂ ಪಡೆದ ಕಲಾವಿದ
ಅವರು ಕೇವಲ ಗಾಯಕನಲ್ಲ. ಆಕಾಶವಾಣಿಯಲ್ಲಿ “ಈರಣ್ಣ“ ಎಂದೇ ಪ್ರಸಿದ್ಧರಾಗಿದ್ದ ಎ. ಎಸ್. ಮೂರ್ತಿ ಅವರ ಅಭಿನಯ ತರಂಗದಲ್ಲಿ ಅಭಿನಯ ತರಬೇತಿಯನ್ನೂ ಪಡೆದಿದ್ದರು. ಈ ತರಬೇತಿಯ ಪರಿಣಾಮವಾಗಿ ಅವರ ಗಮಕ ಕಾರ್ಯಕ್ರಮಗಳಲ್ಲಿ ಭಾವಾಭಿನಯ ಮತ್ತು ನಿರೂಪಣೆಯೂ ವಿಶಿಷ್ಟವಾಗಿ ಮೂಡಿಬರುತ್ತಿತ್ತು.
ಸಂಘಟಕರಾಗಿ ಸೇವೆ
ಜಿ. ಎಸ್. ನಾರಾಯಣ ಅವರು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ, ಗಮಕ ಕಲೆಯ ಸಂಘಟನೆ, ತರಬೇತಿ ಮತ್ತು ಪ್ರಚಾರದಲ್ಲಿ ಮಹತ್ವದ ಪಾತ್ರ ವಹಿಸಿದರು.
ಪ್ರಶಸ್ತಿ ಮತ್ತು ಗೌರವಗಳು
ಅವರ ದೀರ್ಘಕಾಲದ ಗಮಕ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿವೆ.
ಅವುಗಳಲ್ಲಿ ಪ್ರಮುಖವಾದವು:
- “ಕಾವ್ಯ ಗಾಯನ ಕಲಾ ಚತುರ“ ಬಿರುದು – ಮಲ್ಲೇಶ್ವರಂ ಭಾಗವತ ಸಮ್ಮೇಳನ.
- ಗಮಕ ಕಲಾ ಪರಿಷತ್ ವತಿಯಿಂದ ವಿಶೇಷ ಸನ್ಮಾನ.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಗೀತ, ನೃತ್ಯ ಮತ್ತು ಕಲೆಗೆ ಜೀವಮಾನದ ಸಾಧನೆಗಾಗಿ ನೀಡುವ ಅತ್ಯುನ್ನತ ಗೌರವವಾದ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸಹಾ ನಾರಾಯಣ ಅವರ ಮುಡಿಗೇರಿದೆ
- ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಗೌರವಗಳು.
ವ್ಯಕ್ತಿತ್ವ
ಜಿ. ಎಸ್. ನಾರಾಯಣ ಅವರ ವ್ಯಕ್ತಿತ್ವವನ್ನು ಮೂರು ಪದಗಳಲ್ಲಿ ಹೇಳಬಹುದು:
ಸರಳತೆ – ಸಾಹಿತ್ಯಪ್ರೇಮ – ಸಂಸ್ಕೃತಿ ಸೇವೆ. ಅವರಿಗೆ ಗಮಕ ಕೇವಲ ಒಂದು ಕಲೆಯಲ್ಲ; ಅದು ಕನ್ನಡ ಸಾಹಿತ್ಯವನ್ನು ಜನರಿಗೆ ತಲುಪಿಸುವ ಜೀವಂತ ಮಾಧ್ಯಮ. ಅವರ ಗಾಯನದಲ್ಲಿ ರಾಗದ ಮಧುರತೆ, ವ್ಯಾಖ್ಯಾನದಲ್ಲಿ ಸಾಹಿತ್ಯದ ಆಳ ಮತ್ತು ವ್ಯಕ್ತಿತ್ವದಲ್ಲಿ ಕನ್ನಡದ ಮೇಲಿನ ಅಪಾರ ಅಭಿಮಾನ ಕಾಣಿಸುತ್ತದೆ.
ಕೊನೆಯ ಮಾತು
ಇಂದು ಗಮಕ ಕಲೆಯ ಪರಂಪರೆ ಮುಂದುವರಿಯಲು ಕಾರಣರಾದ ಹಿರಿಯ ಸಾಧಕರಲ್ಲಿ ಗಮಕಿ ಜಿ. ಎಸ್. ನಾರಾಯಣ ಅವರು ಅಗ್ರಗಣ್ಯರು. ಶಿಕ್ಷಕರಾಗಿ, ಗಮಕಿಯಾಗಿ, ಗುರುವಾಗಿ, ಸಂಘಟಕರಾಗಿ, ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿ, ಸಾವಿರಾರು ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸಿದ ಅವರ ಸೇವೆ ಸ್ಮರಣೀಯ. 84-85 ರ ಇಳಿ ವಯಸ್ಸಿನಲ್ಲಿ ˌ ಹೃದಯ ಶಸ್ತ್ರ ಚಿಕಿತ್ಸೆಯಾದ ಮೇಲೂ ಸಹˌ ನೆಪ ಹೇಳದೆˌ ಉತ್ಸಾಹದಿಂದ ವಾಚನ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಕಿರಿಯರಿಗೆ ಆದರ್ಶ.
ಅವರ ಬದುಕು ನಮಗೆ ಹೇಳುವುದು ಒಂದೇ ಮಾತು –
“ಸಾಹಿತ್ಯವನ್ನು ಓದಿದಾಗ ಜ್ಞಾನ ಸಿಗುತ್ತದೆ; ಗಮಕವಾಗಿ ಕೇಳಿದಾಗ ಅದು ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತದೆ.” ಕನ್ನಡ ಗಮಕ ಪರಂಪರೆಯ ಇತಿಹಾಸ ಬರೆಯುವಾಗ ಗಮಕಿ ಜಿ. ಎಸ್. ನಾರಾಯಣ ಅವರ ಹೆಸರು ಗೌರವದಿಂದ ಸದಾ ಉಲ್ಲೇಖವಾಗುತ್ತದೆ ಎನ್ನುವುದು ಅತಿಶಯವಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ