ಬೃಹದಾರಣ್ಯಕ ಉಪನಿಷತ್ತಿನ ಯಾಜ್ಞವಲ್ಕ್ಯ ಮೈತ್ರೇಯಿ ಸಂವಾದದ ಈ ಪ್ರಸಂಗವು ಜೀವನದ ಅತ್ಯಂತ ಗಂಭೀರವಾದ ಪ್ರಶ್ನೆಯಾದ “ಸಂಪತ್ತೇ ಮುಖ್ಯವೇ? ಆತ್ಮಜ್ಞಾನವೇ ಮುಖ್ಯವೇ?” ಎಂಬುದನ್ನು ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದೆ. “ಮನುಷ್ಯನು ಏನನ್ನು ಸಂಪಾದಿಸುತ್ತಾನೆ ಎನ್ನುವುದಕ್ಕಿಂತ, ಏನನ್ನು ಬಿಟ್ಟು ಹೋಗುತ್ತಾನೆ ಎಂಬುದೇ ಅವನ ಜೀವನದ ನಿಜವಾದ ಅಳತೆ.“
ವೇದಕಾಲದ ಮಹಾನ್ ಋಷಿಗಳಲ್ಲಿ ಯಾಜ್ಞವಲ್ಕ್ಯರು ಅಗ್ರಗಣ್ಯರು. ತರ್ಕಶಾಸ್ತ್ರ, ವೇದಾಂತ ಮತ್ತು ಆತ್ಮಜ್ಞಾನದ ಕ್ಷೇತ್ರದಲ್ಲಿ ಅವರಿಗೆ ಸಮಾನರು ವಿರಳ. ಅವರ ಜ್ಞಾನವನ್ನು ಪರೀಕ್ಷಿಸಲು ರಾಜರ್ಷಿ ಜನಕನು ಅನೇಕ ಬಾರಿ ವಿದ್ವತ್‌ಸಭೆಗಳನ್ನು ಏರ್ಪಡಿಸುತ್ತಿದ್ದನು. ಒಮ್ಮೆ ಜನಕನು ವಿಶಿಷ್ಟವಾದ ವಿದ್ವತ್‌ಸಮ್ಮೇಳನವನ್ನು ಆಯೋಜಿಸಿದನು. ಸಾವಿರ ಹಸುಗಳನ್ನು ಅಲಂಕರಿಸಿ, ಅವುಗಳ ಕೊಂಬುಗಳಿಗೆ ಚಿನ್ನದ ಹೊದಿಕೆ ಹಾಕಿಸಿ, ಅಮೂಲ್ಯ ವಸ್ತ್ರಗಳಿಂದ ಸಿಂಗರಿಸಿ ಅರಮನೆಯ ದ್ವಾರದಲ್ಲಿ ನಿಲ್ಲಿಸಲಾಯಿತು.
“ಇಂದಿನ ಚರ್ಚೆಯಲ್ಲಿ ಯಾರು ಶ್ರೇಷ್ಠ ವಿದ್ವಾಂಸರೆಂದು ಸಾಬೀತುಪಡಿಸುತ್ತಾರೋ, ಈ ಸಾವಿರ ಹಸುಗಳು ಅವರ ಬಹುಮಾನ,” ಎಂದು ರಾಜನು ಘೋಷಿಸಿದನು. ದೇಶದ ಮೂಲೆ ಮೂಲೆಗಳಿಂದ ಪ್ರಸಿದ್ಧ ಪಂಡಿತರು ಆಗಮಿಸಿದರು. ಬೆಳಗ್ಗೆಯಿಂದಲೇ ತರ್ಕ, ಪ್ರತಿತರ್ಕಗಳು ನಡೆಯುತ್ತಲೇ ಇದ್ದವು. ಆದರೆ ಮಧ್ಯಾಹ್ನವಾದರೂ ಯಾರೂ ನಿರ್ಣಾಯಕವಾಗಿ ಮೇಲುಗೈ ಸಾಧಿಸಲಿಲ್ಲ. ಅಷ್ಟರಲ್ಲಿ ಯಾಜ್ಞವಲ್ಕ್ಯರು ತಮ್ಮ ಶಿಷ್ಯರೊಂದಿಗೆ ಸಭೆಗೆ ಆಗಮಿಸಿದರು. ಅರಮನೆಯ ಬಾಗಿಲಲ್ಲಿ ನಿಂತಿದ್ದ ಹಸುಗಳನ್ನು ಗಮನಿಸಿದ ಅವರು, ಅವು ಬೆಳಗ್ಗೆಯಿಂದ ಬಿಸಿಲಿನಲ್ಲಿ ನಿಂತು ಸುಸ್ತಾಗಿರುವುದನ್ನು ಕಂಡರು.
ಅವರು ಶಿಷ್ಯರ ಕಡೆ ತಿರುಗಿ ಶಾಂತವಾಗಿ ಹೇಳಿದರು: “ಈ ಹಸುಗಳನ್ನು ನಮ್ಮ ಆಶ್ರಮಕ್ಕೆ ಕರೆದೊಯ್ಯಿರಿ. ನಾನು ಸಭೆಗೆ ಹೋಗಿ ಉಳಿದದ್ದನ್ನು ನೋಡಿಕೊಳ್ಳುತ್ತೇನೆ.” ಸಭೆಯಲ್ಲಿದ್ದ ಪಂಡಿತರು ಆಶ್ಚರ್ಯಚಕಿತರಾದರು. “ಇದು ನಿಯಮಕ್ಕೆ ವಿರುದ್ಧ! ಮೊದಲು ಚರ್ಚೆಯಲ್ಲಿ ಗೆಲ್ಲಬೇಕು; ನಂತರ ಬಹುಮಾನ ಪಡೆಯಬೇಕು,” ಎಂದು ಕೆಲವರು ಆಕ್ಷೇಪಿಸಿದರು. ಯಾಜ್ಞವಲ್ಕ್ಯರು ಮಂದಹಾಸ ಬೀರಿ ಉತ್ತರಿಸಿದರು.
“ಚಿಂತಿಸಬೇಡಿ. ಚರ್ಚೆಯನ್ನು ನಾನು ಗೆಲ್ಲುತ್ತೇನೆ. ಆದರೆ ಈ ಮೂಕ ಪ್ರಾಣಿಗಳು ಅನಗತ್ಯವಾಗಿ ಬಿಸಿಲಿನಲ್ಲಿ ನರಳುವುದು ಸರಿಯಲ್ಲ.” ಶಿಷ್ಯರು ಹಸುಗಳನ್ನು ಕರೆದುಕೊಂಡು ಹೋದರು. ನಂತರ ನಡೆದ ವಿದ್ವತ್‌ಚರ್ಚೆಯಲ್ಲಿ ಯಾಜ್ಞವಲ್ಕ್ಯರೇ ವಿಜಯಿಗಳಾದರು.
ಈ ಘಟನೆಯು ಅವರ ಆತ್ಮವಿಶ್ವಾಸವನ್ನಷ್ಟೇ ಅಲ್ಲ, ಜೀವಜಂತುಗಳ ಮೇಲಿನ ಕರುಣೆ ಮತ್ತು ತನ್ನ ಸಾಮರ್ಥ್ಯದ ಮೇಲಿನ ನಂಬಿಕೆಯನ್ನು ಸಹ ತೋರಿಸುತ್ತದೆ.
ಕಾಲ ಕಳೆದಿತು.
ಜೀವನದ ಸಂಧ್ಯಾಕಾಲ ಸಮೀಪಿಸಿತು. ಯಾಜ್ಞವಲ್ಕ್ಯರು ಒಂದು ಮಹತ್ತರ ನಿರ್ಧಾರ ಕೈಗೊಂಡರು. ಸಂಸಾರವನ್ನು ತ್ಯಜಿಸಿ ಅರಣ್ಯಕ್ಕೆ ತೆರಳಿ ಉಳಿದ ಜೀವನವನ್ನು ಆತ್ಮಸಾಧನೆಗೆ ಮೀಸಲಿಡಲು ನಿರ್ಧರಿಸಿದರು. ಅವರಿಗೆ ಕಾತ್ಯಾಯನಿ ಮತ್ತು ಮೈತ್ರೇಯಿ. ಎಂಬ ಇಬ್ಬರು ಪತ್ನಿಯರು ಇದ್ದರು. ಅವರಿಬ್ಬರನ್ನೂ ಕರೆದು ಹೀಗೆ ಹೇಳಿದರು.
“ನನ್ನಲ್ಲಿರುವ ಎಲ್ಲಾ ಸಂಪತ್ತನ್ನು ನಿಮ್ಮಿಬ್ಬರ ನಡುವೆ ಸಮಾನವಾಗಿ ಹಂಚುತ್ತಿದ್ದೇನೆ. ಈ ಆಸ್ತಿ ನಿಮಗೆ ಹಲವು ತಲೆಮಾರುಗಳವರೆಗೆ ಸಾಕಾಗುತ್ತದೆ. ನನಗೆ ಈಗ ಇವುಗಳ ಅಗತ್ಯವಿಲ್ಲ. ಉಳಿದ ಬದುಕನ್ನು ಬ್ರಹ್ಮಜ್ಞಾನಕ್ಕಾಗಿ ಅರ್ಪಿಸಬೇಕೆಂದು ನಿರ್ಧರಿಸಿದ್ದೇನೆ.” ಕಾತ್ಯಾಯನಿ ಸಂತೋಷದಿಂದ ಅದನ್ನು ಒಪ್ಪಿಕೊಂಡಳು. ಆದರೆ ಮೈತ್ರೇಯಿ ಮಾತ್ರ ಗಂಭೀರವಾಗಿ ಒಂದು ಪ್ರಶ್ನೆ ಕೇಳಿದಳು. “ಸ್ವಾಮಿ, ಈ ಸಂಪತ್ತಿನಿಂದ ನಿಮಗೆ ಶಾಶ್ವತ ಸಂತೋಷ ಸಿಕ್ಕಿದೆಯೇ?” ಯಾಜ್ಞವಲ್ಕ್ಯರು ಮೌನವಾಗಿದ್ದರು.
ಅವಳು ಮತ್ತೆ ಕೇಳಿದಳು. “ಈ ಸಂಪತ್ತು ನಿಮಗೆ ಅಮೃತತ್ವವನ್ನು ಕೊಟ್ಟಿದೆಯೇ? ದೇವರನ್ನು ಕಾಣುವ ಅನುಭವವನ್ನು ನೀಡಿದೆಯೇ?” ಮತ್ತೆ ಮೌನ. “ಇದರಿಂದ ನಿಮಗೆ ಅದು ದೊರೆತಿದ್ದರೆ, ನೀವು ಅರಣ್ಯಕ್ಕೆ ಹೋಗುವ ಅಗತ್ಯವೇ ಇರಲಿಲ್ಲ. ಅದು ದೊರೆಯದಿದ್ದರೆ, ನಿಮಗೆ ಉಪಯೋಗವಾಗದ ಈ ಸಂಪತ್ತನ್ನು ನನ್ನ ತಲೆಯ ಮೇಲೆ ಏಕೆ ಹಾಕುತ್ತಿದ್ದೀರಿ?” ಸಭೆಗಳಲ್ಲಿ ಅಸಂಖ್ಯಾತ ವಿದ್ವಾಂಸರನ್ನು ತರ್ಕದಿಂದ ಸೋಲಿಸಿದ್ದ ಯಾಜ್ಞವಲ್ಕ್ಯರು, ತಮ್ಮ ಪತ್ನಿಯ ಈ ಸರಳ ಪ್ರಶ್ನೆಯ ಮುಂದೆ ಕ್ಷಣಕಾಲ ಮೌನವಾದರು. ಆ ಪ್ರಶ್ನೆಯಲ್ಲಿ ತರ್ಕಕ್ಕಿಂತಲೂ ಹೆಚ್ಚಿನ ಸತ್ಯವಿತ್ತು.
ಸ್ವಲ್ಪ ಹೊತ್ತಿನ ನಂತರ ಯಾಜ್ಞವಲ್ಕ್ಯರು ಹೇಳಿದರು:
“ಮೈತ್ರೇಯಿ, ಸಂಪತ್ತಿನಿಂದ ಸುಖೋಪಭೋಗ ಸಿಗಬಹುದು; ಆದರೆ ಅಮೃತತ್ವ ಸಿಗುವುದಿಲ್ಲ. ಆತ್ಮಜ್ಞಾನವನ್ನು ಹಣದಿಂದ ಕೊಳ್ಳಲು ಸಾಧ್ಯವಿಲ್ಲ.” ಅದಕ್ಕೆ ಮೈತ್ರೇಯಿ ಉತ್ತರಿಸಿದಳು: “ಹಾಗಿದ್ದರೆ ನನಗೆ ಈ ಸಂಪತ್ತಿನ ಅಗತ್ಯವಿಲ್ಲ. ನನಗೂ ಆತ್ಮಜ್ಞಾನದ ಮಾರ್ಗವನ್ನೇ ತೋರಿಸಿ.” ಆ ಕ್ಷಣದಿಂದ ಯಾಜ್ಞವಲ್ಕ್ಯರು ಪತ್ನಿಗೆ ಸಂಪತ್ತನ್ನು ಅಲ್ಲ, ಬ್ರಹ್ಮವಿದ್ಯೆಯನ್ನು ಬೋಧಿಸಲು ಆರಂಭಿಸಿದರು.
ಇದೇ ಉಪನಿಷತ್ತಿನ ಪ್ರಸಿದ್ಧ “ಯಾಜ್ಞವಲ್ಕ್ಯ–ಮೈತ್ರೇಯಿ ಸಂವಾದ”.
ಈ ಕಥೆಯ ಸಾರ ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ.
ಇಂದು ಮನುಷ್ಯನು ಜೀವನಪೂರ್ತಿ ಸಂಪತ್ತಿನ ಹಿಂದೆ ಓಡುತ್ತಾನೆ. ಮನೆ, ಜಮೀನು, ಬ್ಯಾಂಕ್ ಬ್ಯಾಲೆನ್ಸ್, ಚಿನ್ನ, ಹೂಡಿಕೆ—ಇವೆಲ್ಲವನ್ನೂ ಕೂಡಿಸಿಕೊಳ್ಳುವುದರಲ್ಲೇ ಬದುಕನ್ನು ಕಳೆಯುತ್ತಾನೆ. ಆದರೆ ಒಂದು ದಿನ ಅವೆಲ್ಲವನ್ನೂ ಬಿಟ್ಟು ಹೋಗಲೇಬೇಕು. ಸಂಪತ್ತು ಜೀವನವನ್ನು ಸುಖಮಯವಾಗಿಸಬಹುದು; ಆದರೆ ಅರ್ಥಪೂರ್ಣವಾಗಿಸುವುದು ಜ್ಞಾನ, ಪ್ರೀತಿ, ಸೇವೆ ಮತ್ತು ಆತ್ಮಸಾಕ್ಷಾತ್ಕಾರ.
ಯಾಜ್ಞವಲ್ಕ್ಯರು ನಮಗೆ ಕಲಿಸುವ ಮಹತ್ತರ ಪಾಠವೇ ಇದು—
“ಸಂಪತ್ತನ್ನು ಸಂಗ್ರಹಿಸುವುದಕ್ಕಿಂತ, ಆತ್ಮಜ್ಞಾನವನ್ನು ಸಂಪಾದಿಸುವುದೇ ಜೀವನದ ಶ್ರೇಷ್ಠ ಸಾಧನೆ.”