ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ನಾವು ಇಂದು ಸ್ವತಂತ್ರವಾಗಿ ಉಸಿರಾಡುತ್ತಿದ್ದೇವೆ ಎಂದರೆ, ಅದರ ಹಿಂದೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕಣ್ಣೀರಿನ ಕಥೆಗಳಿವೆ. ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸಿಕೊಂಡಾಗ ದೆಹಲಿ, ಮುಂಬೈ, ಕೋಲ್ಕತ್ತಾ, ಪಂಜಾಬ್ ಅಥವಾ ಬಂಗಾಳದ ಹೋರಾಟಗಳು ನಮ್ಮ ನೆನಪಿಗೆ ಬರುತ್ತವೆ. ಆದರೆ ಕರ್ನಾಟಕದ ನೆಲವೂ ಬ್ರಿಟಿಷ್ ವಿರೋಧಿ ಚಳವಳಿಯ ಕಿಚ್ಚನ್ನು ತನ್ನೊಳಗೆ ಹೊತ್ತಿತ್ತು. ವಿಶೇಷವಾಗಿ ಅಂದಿನ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿಯುತ ಸರ್ಕಾರಕ್ಕಾಗಿ ನಡೆದ ಹೋರಾಟವು ಮುಂದಿನ ದಿನಗಳಲ್ಲಿ ದೊಡ್ಡ ಜನಾಂದೋಲನಕ್ಕೆ ರೂಪುಗೊಂಡಿತು. ಈ ಹೋರಾಟದಲ್ಲಿ ಕೆಲವು ಹೆಸರುಗಳು ಇತಿಹಾಸದ ಪುಟಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ದಾಖಲಾಗಿವೆ. ಆದರೆ ಇನ್ನೂ ಕೆಲವು ಹೆಸರುಗಳು ಎಲೆಮರೆಯ ಕಾಯಿಯಂತೆ ಉಳಿದುಬಿಟ್ಟಿವೆ. ಅಂತಹ ಮರೆಯಾದ ರಾಷ್ಟ್ರೀಯವಾದಿ ನಾಯಕರಲ್ಲಿ ಒಬ್ಬರು ಶ್ರೀ ಜಮಖಂಡಿ ಭೀಮರಾವ್. ಅವರ ಬದುಕು ಕೇವಲ ರಾಜಕೀಯ ಚಟುವಟಿಕೆಯ ಕಥೆಯಲ್ಲ. ಅದು ರಾಷ್ಟ್ರಭಕ್ತಿ, ಸಾರ್ವಜನಿಕ ಪ್ರತಿರೋಧ, ವೈಯಕ್ತಿಕ ತ್ಯಾಗ ಮತ್ತು ಕುಟುಂಬವೇ ಬೆಲೆ ತೆತ್ತ ಸ್ವಾತಂತ್ರ್ಯ ಹೋರಾಟದ ಒಂದು ಕರುಣಾಜನಕ ಅಧ್ಯಾಯ.

ಮೈಸೂರು ಸಂಸ್ಥಾನದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಉದಯ

ಅಂದಿನ ಕರ್ನಾಟಕ ಇಂದಿನಂತೆ ಒಂದೇ ಆಡಳಿತ ಘಟಕವಾಗಿರಲಿಲ್ಲ. ಮೈಸೂರು ಸಂಸ್ಥಾನ, ಬಾಂಬೆ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಮದ್ರಾಸ್ ಪ್ರಾಂತ್ಯದ ಭಾಗಗಳು ಸೇರಿದಂತೆ ವಿವಿಧ ಆಡಳಿತ ವ್ಯವಸ್ಥೆಗಳಲ್ಲಿ ಕನ್ನಡಿಗರು ವಾಸಿಸುತ್ತಿದ್ದರು. ಮೈಸೂರು ಸಂಸ್ಥಾನದೊಳಗೆ ಜನಪ್ರತಿನಿಧಿತ್ವ ಮತ್ತು ಜವಾಬ್ದಾರಿಯುತ ಸರ್ಕಾರಕ್ಕಾಗಿ ಹೋರಾಟದ ಅಗತ್ಯ ಕ್ರಮೇಣ ಹೆಚ್ಚುತ್ತಿತ್ತು. 1920ರಲ್ಲಿ ನಾಗಪುರದಲ್ಲಿ ಶ್ರೀ ಸಿ. ವಿಜಯರಾಘವಾಚಾರ್ ಅವರ ಅಧ್ಯಕ್ಷತೆಯಲ್ಲಿ 37ನೇ ಕಾಂಗ್ರೆಸ್ ಅಧಿವೇಶನ ನಡೆಯಿತು. ದೇಶೀಯ ಸಂಸ್ಥಾನಗಳಲ್ಲಿಯೂ ರಾಜಕೀಯ ಜಾಗೃತಿ ಮತ್ತು ಕಾಂಗ್ರೆಸ್ ಸಂಘಟನೆಗಳನ್ನು ಬೆಳೆಸುವ ದಿಕ್ಕಿನಲ್ಲಿ ಮಹತ್ವದ ಬೆಳವಣಿಗೆಗಳು ನಡೆದವು. 1921ರಲ್ಲಿ ಮೈಸೂರು ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದ ಶ್ರೀ ಎಸ್. ಎಸ್. ಸೆಟ್ಲೂರ್ ತಮ್ಮ ಹುದ್ದೆಯನ್ನು ತ್ಯಜಿಸಿ ರಾಷ್ಟ್ರೀಯ ಚಟುವಟಿಕೆಗೆ ಬಂದರು. ಅವರು ಲೋಕಮಾನ್ಯ ಬಾಲಗಂಗಾಧರ ತಿಲಕರ ವಿಚಾರಗಳಿಂದ ಪ್ರಭಾವಿತರಾಗಿದ್ದವರು. ಮೈಸೂರು ಸಂಸ್ಥಾನದಲ್ಲಿ ಕಾಂಗ್ರೆಸ್ ಸಂಘಟನೆಯ ಪ್ರಾರಂಭಿಕ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು.  ಬೆಂಗಳೂರಿನಲ್ಲಿ ಕಾಂಗ್ರೆಸ್ ಚಟುವಟಿಕೆಗಳಿಗೆ ಕ್ರಮೇಣ ಕೇಂದ್ರ ರೂಪುಗೊಂಡಿತು. ಹಳೆಯ ಬೆಂಗಳೂರಿನ ಕಾಂಗ್ರೆಸ್ ಹೌಸ್ ರಾಷ್ಟ್ರೀಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಖಾದಿ, ಸ್ವದೇಶಿ, ಅಸ್ಪೃಶ್ಯತಾ ನಿರ್ಮೂಲನೆ ಮತ್ತು ರಚನಾತ್ಮಕ ಕಾರ್ಯಕ್ರಮಗಳು ರಾಜಕೀಯ ಚಟುವಟಿಕೆಯ ಭಾಗವಾದವು.

ತಗಡೂರು ರಾಮಚಂದ್ರರಾಯರಿಂದ ಬೆಳಗಿದ ಸ್ವರಾಜ್ಯದ ದೀಪ

1921ರಲ್ಲಿಯೇ ತಗಡೂರು ರಾಮಚಂದ್ರರಾಯರು ತಗಡೂರಿನಲ್ಲಿ ಸ್ವರಾಜ್ಯ ಮಂದಿರ ಮತ್ತು ಸತ್ಯಾಗ್ರಹ ಆಶ್ರಮ ಸ್ಥಾಪಿಸಿದರು. ನಂತರ ಅವರು ಗಾಂಧೀಜಿಯ ಸ್ವದೇಶಿ, ಖಾದಿ, ಚರಕ, ಅಸ್ಪೃಶ್ಯತಾ ನಿರ್ಮೂಲನೆ ಮತ್ತು ಸಾಮಾಜಿಕ ಸಮಾನತೆಯ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.  1922ರಿಂದ 1925ರವರೆಗೆ ರಾಷ್ಟ್ರೀಯ ನಾಯಕರು ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಿದರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದರು. ಈ ಅಧಿವೇಶನ ಕರ್ನಾಟಕದ ರಾಷ್ಟ್ರೀಯ ಚಳವಳಿಗೆ ಹೊಸ ಉತ್ಸಾಹ ನೀಡಿದ ಪ್ರಮುಖ ಘಟ್ಟಗಳಲ್ಲಿ ಒಂದಾಯಿತು. ಗಾಂಧೀಜಿಯ ರಚನಾತ್ಮಕ ಕಾರ್ಯಕ್ರಮಗಳನ್ನು ಕರ್ನಾಟಕ ಕಾಂಗ್ರೆಸ್ ಗಂಭೀರವಾಗಿ ಕೈಗೆತ್ತಿಕೊಂಡಿತು. ಖಾದಿ, ಗ್ರಾಮೋದ್ಯೋಗ ಮತ್ತು ಸ್ವದೇಶಿ ಜನಜೀವನದ ಭಾಗವಾಗತೊಡಗಿದವು.

1928: ಬೆಂಗಳೂರಿನ ರಾಜಕೀಯ ವಾತಾವರಣ ಬದಲಾಗಿದ್ದ ವರ್ಷ

1928ರ ವೇಳೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಚಳವಳಿಯು ಹೆಚ್ಚು ಚುರುಕುಗೊಂಡಿತ್ತು. ಈ ಸಂದರ್ಭದಲ್ಲಿ ಡಿ.ವಿ. ಗುಂಡಪ್ಪ, ಸಂಪಿಗೆ ವೆಂಕಟಪತಯ್ಯ, ಎಚ್.ವಿ. ಸುಬ್ರಹ್ಮಣ್ಯಂ, ಜಮಖಂಡಿ ಭೀಮರಾವ್, ರಾಮಲಾಲ್ ತಿವಾರಿ, ತಗಡೂರು ರಾಮಚಂದ್ರರಾವ್, ವೀರಕೇಸರಿ ಸೀತಾರಾಮಶಾಸ್ತ್ರಿ, ಹೊಸಕೊಪ್ಪ ಕೃಷ್ಣರಾವ್ ಸೇರಿದಂತೆ ಅನೇಕರು ರಾಷ್ಟ್ರೀಯ ಚಟುವಟಿಕೆಗಳಿಗೆ ವೇಗ ನೀಡುತ್ತಿದ್ದರು. ಕೆಲವರು ಪತ್ರಿಕೋದ್ಯಮದ ಮೂಲಕ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದರೆ, ಮತ್ತಿತರರು ಸಂಘಟನೆ ಮತ್ತು ನೇರ ಸಾರ್ವಜನಿಕ ಚಟುವಟಿಕೆಗಳ ಮೂಲಕ ಜನರನ್ನು ಹೋರಾಟಕ್ಕೆ ಸೆಳೆಯುತ್ತಿದ್ದರು. ಈ ಹಿನ್ನೆಲೆಯಲ್ಲೇ ಜಮಖಂಡಿ ಭೀಮರಾವ್ ಅವರ ಹೆಸರು ಬೆಂಗಳೂರಿನ ರಾಜಕೀಯ ರಂಗದಲ್ಲಿ ಗಮನಾರ್ಹವಾಗಿ ಕಾಣಿಸಿಕೊಳ್ಳುತ್ತದೆ.

ಜಮಖಂಡಿಯಿಂದ ಬೆಂಗಳೂರಿಗೆ ಬಂದ ಭೀಮರಾವ್

ಜಮಖಂಡಿ ಭೀಮರಾವ್ ಅವರ ಕುಟುಂಬದ ಮೂಲವು ಉತ್ತರ ಕರ್ನಾಟಕದ ಜಮಖಂಡಿ ಪ್ರದೇಶದೊಂದಿಗೆ ಸಂಬಂಧ ಹೊಂದಿತ್ತು ಎಂದು ಸ್ಥಳೀಯ ಐತಿಹಾಸಿಕ ಉಲ್ಲೇಖಗಳು ಸೂಚಿಸುತ್ತವೆ. ಅವರು ಬೆಂಗಳೂರಿನ ಮಾಮೂಲುಪೇಟೆ ಪ್ರದೇಶದಲ್ಲಿ ವಾಸಿಸುತ್ತಿದ್ದರು  ಭೀಮರಾವ್ ಕೇವಲ ರಾಜಕೀಯ ಕಾರ್ಯಕರ್ತರಾಗಿರಲಿಲ್ಲ; ಕೈಗಾರಿಕೋದ್ಯಮಿಯಾಗಿಯೂ ಬದುಕು ಕಟ್ಟಿಕೊಂಡಿದ್ದರು. ಆದರೆ ದೇಶದ ರಾಜಕೀಯ ಪರಿಸ್ಥಿತಿ ಅವರನ್ನು ಕ್ರಮೇಣ ಸಾರ್ವಜನಿಕ ಹೋರಾಟದತ್ತ ಸೆಳೆಯಿತು. ಅವರ ಜೊತೆಗಿನ ಪ್ರಮುಖ ಸಹಚರರಲ್ಲಿ ಎಚ್.ವಿ. ಸುಬ್ರಹ್ಮಣ್ಯಂ ಮತ್ತು ರಾಮಲಾಲ್ ತಿವಾರಿ ಪ್ರಮುಖರಾಗಿದ್ದರು. 1928ರ ಅವಧಿಯಲ್ಲಿ ಜಮಖಂಡಿ ಭೀಮರಾವ್ ಬೆಂಗಳೂರಿನ ಕಾಂಗ್ರೆಸ್ ಪರ ರಾಷ್ಟ್ರೀಯವಾದಿ ಚಟುವಟಿಕೆಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು ಎಂಬ ಉಲ್ಲೇಖಗಳು ದೊರೆಯುತ್ತವೆ. ಹಳೆಯ ದಾಖಲೆಗಳಲ್ಲಿಯೂ ಬೆಂಗಳೂರಿನ J. Bhimrao ಎಂಬ ಹೆಸರು ಸಂಸ್ಥಾನಗಳ ಜನಪ್ರತಿನಿಧಿಗಳ ರಾಷ್ಟ್ರೀಯ ಚಟುವಟಿಕೆಗಳ ಸಂದರ್ಭದಲ್ಲಿ ಕಾಣಿಸುತ್ತದೆ.

ಸುಲ್ತಾನ್‌ಪೇಟೆಯ ಗಣಪತಿ ಗಲಭೆ, ಭೀಮರಾವ್ ಅವರ ಸಾರ್ವಜನಿಕ ಬದುಕಿನ ತಿರುವು

1928ರ ಜೂನ್–ಜುಲೈ ಅವಧಿಯಲ್ಲಿ ಬೆಂಗಳೂರಿನ ಸುಲ್ತಾನ್‌ಪೇಟೆ ಪ್ರದೇಶದಲ್ಲಿ ನಡೆದ ಘಟನೆಗಳು ಮೈಸೂರು ಸಂಸ್ಥಾನದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದವು. ಈ ಘಟನೆ ಮುಂದೆ ಸುಲ್ತಾನ್‌ಪೇಟೆ ಗಣಪತಿ ಗಲಾಟೆ ಅಥವಾ ಗಣಪತಿ ಗಲಭೆ ಎಂದು ಪ್ರಸಿದ್ಧವಾಯಿತು. ಘಟನೆಯ ಹಿನ್ನೆಲೆ ಒಂದು ಶಾಲೆಯಲ್ಲಿದ್ದ ಗಣೇಶನ ವಿಗ್ರಹಕ್ಕೆ ಸಂಬಂಧಿಸಿತ್ತು. ಹಿಂದೂ ಆಂಗ್ಲೋ-ವರ್ನಾಕ್ಯುಲರ್ ಶಾಲೆಯ ಆವರಣದಲ್ಲಿದ್ದ ಗಣೇಶನ ವಿಗ್ರಹಕ್ಕೆ ಸಣ್ಣ ಗೂಡು ಅಥವಾ ದೇವಾಲಯದಂತಹ ರಚನೆ ನಿರ್ಮಿಸಲು ವಿದ್ಯಾರ್ಥಿಗಳು ಬಯಸಿದ್ದರು. ಆದರೆ ಶಿಕ್ಷಣ ಇಲಾಖೆಯ ಕ್ರಮದಿಂದ ವಿಗ್ರಹವನ್ನು ಮುಚ್ಚಿದ ಕೊಠಡಿಗೆ ಸ್ಥಳಾಂತರಿಸಲಾಯಿತು ಎಂಬುದು ಪ್ರತಿಭಟನೆಗೆ ಕಾರಣವಾಯಿತು. ಶಾಲೆಯ ವಿದ್ಯಾರ್ಥಿಗಳ ಪ್ರತಿಭಟನೆಗೆ ಇತರ ಶಾಲೆಗಳ ವಿದ್ಯಾರ್ಥಿಗಳೂ ಬೆಂಬಲ ನೀಡಿದರು. ಆ ಕಾಲದ ರಾಷ್ಟ್ರೀಯವಾದಿ ಪತ್ರಿಕೆಗಳೂ ವಿದ್ಯಾರ್ಥಿಗಳ ಚಳವಳಿಗೆ ಧ್ವನಿ ನೀಡಿದವು. ಸೀತಾರಾಮ ಶಾಸ್ತ್ರಿಗಳ “ವೀರಕೇಸರಿಯಂತಹ ಪತ್ರಿಕೆಗಳು ರಾಷ್ಟ್ರೀಯ ಭಾವನೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವು.

ವಿದ್ಯಾರ್ಥಿ ಚಳವಳಿಯಿಂದ ಜನಾಂದೋಲನದವರೆಗೆ

ಪರಿಸ್ಥಿತಿ ಬಿಗಡಾಯಿಸಿದಾಗ ಮೈಸೂರು ಸಂಸ್ಥಾನದ ಸರ್ಕಾರ ಮತ್ತು ದಿವಾನರ ಆಡಳಿತವು ಪೊಲೀಸ್ ಬಲ ಬಳಸಿತು. ಪ್ರತಿಭಟನೆಯನ್ನು ಸಂಘಟಿಸುತ್ತಿದ್ದ ಪ್ರಮುಖ ನಾಯಕರನ್ನು ಬಂಧಿಸಲಾಯಿತು. ಅವರಲ್ಲಿ ಜಮಖಂಡಿ ಭೀಮರಾವ್, ರಾಮಲಾಲ್ ತಿವಾರಿ ಮತ್ತು ಎಚ್.ವಿ. ಸುಬ್ರಹ್ಮಣ್ಯಂ ಇದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಸಂಪೂರ್ಣ ವಿರುದ್ಧವಾದ ಪರಿಣಾಮ ಉಂಟಾಯಿತು. ನಾಯಕರ ಬಂಧನವೇ ಜನರನ್ನು ಇನ್ನಷ್ಟು ಒಗ್ಗೂಡಿಸಿತು. ಸಾವಿರಾರು ವಿದ್ಯಾರ್ಥಿಗಳು ಮತ್ತು ನಾಗರಿಕರು ಬೆಂಗಳೂರು ಕೇಂದ್ರ ಕಾರಾಗೃಹದ ಮುಂದೆ ಹಾಗೂ ದಿವಾನರ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಎಷ್ಟು ಉದ್ವಿಗ್ನಗೊಂಡಿತೆಂದರೆ ಶಾಂತಿ ಕಾಪಾಡಲು ಸೇನೆಯನ್ನು ಕರೆಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕೊನೆಗೆ ಸಾರ್ವಜನಿಕ ಒತ್ತಡಕ್ಕೆ ಮಣಿದ ಸರ್ಕಾರವು ಭೀಮರಾವ್ ಮತ್ತು ಅವರ ಸಹಚರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು.

ಬಿಡುಗಡೆಯಾದ ನಾಯಕರು ಬೆಂಗಳೂರಿನ ಬೀದಿಗಳಲ್ಲಿ ವಿಜಯೋತ್ಸವ

ಜೈಲಿನಿಂದ ಬಿಡುಗಡೆಯಾದ ನಂತರ ಭೀಮರಾವ್, ರಾಮಲಾಲ್ ತಿವಾರಿ ಮತ್ತು ಎಚ್.ವಿ. ಸುಬ್ರಹ್ಮಣ್ಯಂ ಅವರು ಜನರ ಕಣ್ಣಲ್ಲಿ ನಾಯಕರಾಗಿ ಹೊರಹೊಮ್ಮಿದರು. ಅವರನ್ನು ಬೆಂಗಳೂರಿನ ಬೀದಿಗಳಲ್ಲಿ ಬೃಹತ್ ವಿಜಯೋತ್ಸವದ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು ಎಂದು ಈ ಘಟನೆಗೆ ಸಂಬಂಧಿಸಿದ ಉಲ್ಲೇಖಗಳಲ್ಲಿ ಹೇಳಲಾಗಿದೆ. ಗಣೇಶನ ವಿಗ್ರಹವನ್ನು ಪುನಃ ಪ್ರತಿಷ್ಠಾಪಿಸಲಾಯಿತು. ಈ ಘಟನೆ ಕೇವಲ ಒಂದು ಧಾರ್ಮಿಕ ವಿವಾದವಾಗಿ ಉಳಿಯಲಿಲ್ಲ. ಅದು ಸಾರ್ವಜನಿಕ ಹಕ್ಕು, ಆಡಳಿತದ ಹೊಣೆಗಾರಿಕೆ ಮತ್ತು ಜನಪ್ರತಿರೋಧದ ಪ್ರಶ್ನೆಯಾಗಿ ರೂಪುಗೊಂಡಿತು. 1928ರ ಗಣಪತಿ ಗಲಭೆಯ ನಂತರ ಮೈಸೂರು ಸಂಸ್ಥಾನದಲ್ಲಿ ಕಾಂಗ್ರೆಸ್‌ನ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಬಲಗೊಂಡವು ಎಂಬ ಇತಿಹಾಸದ ಅಧ್ಯಯನಗಳೂ ಇವೆ.

ಮೈಸೂರು ಸ್ಟೇಟ್ ಕಾಂಗ್ರೆಸ್ ಜವಾಬ್ದಾರಿಯುತ ಸರ್ಕಾರದ ಬೇಡಿಕೆ

1928ರಲ್ಲಿ ಸಂಸ್ಥಾನ ಕಾಂಗ್ರೆಸ್ ಪ್ರತಿನಿಧಿಗಳು ಸಮಾವೇಶಗೊಂಡು ಮೈಸೂರು ಸ್ಟೇಟ್ ಕಾಂಗ್ರೆಸ್ ಎಂಬ ಸಂಘಟನೆಯನ್ನು ಸ್ಥಾಪಿಸಿ, ಸಂಸ್ಥಾನದಲ್ಲಿ ಜವಾಬ್ದಾರಿಯುತ ಸರ್ಕಾರ ಸ್ಥಾಪನೆಗಾಗಿ ಚಳವಳಿ ನಡೆಸಲು ನಿರ್ಧರಿಸಿದರು. ಬೆಂಗಳೂರಿನ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಜಮಖಂಡಿ ಭೀಮರಾವ್, ಎಚ್.ವಿ. ಸುಬ್ರಹ್ಮಣ್ಯಂ ಮತ್ತು ರಾಮಲಾಲ್ ತಿವಾರಿ ಪ್ರಮುಖವಾಗಿ ಕಾಣಿಸಿಕೊಂಡರು. ಇದು ಸಾಮಾನ್ಯ ರಾಜಕೀಯ ಸಂಘಟನೆ ನಿರ್ಮಾಣವಲ್ಲ. “ಆಡಳಿತ ಜನರಿಗಾಗಿ ಇರಬೇಕು; ಜನರಿಗೆ ಆಡಳಿತದಲ್ಲಿ ಧ್ವನಿ ಇರಬೇಕು” ಎಂಬ ಆಲೋಚನೆ ಮೈಸೂರು ಸಂಸ್ಥಾನದ ರಾಜಕೀಯ ಚರ್ಚೆಯ ಕೇಂದ್ರವಾಗುತ್ತಿತ್ತು. ಮುಂದೆ 1947ರಲ್ಲಿ ನಡೆದ ಮೈಸೂರು ಚಲೋ ಮತ್ತು ಜವಾಬ್ದಾರಿಯುತ ಸರ್ಕಾರದ ಹೋರಾಟಕ್ಕೆ ಇದೇ ರಾಜಕೀಯ ಜಾಗೃತಿಯು ಒಂದು ದೀರ್ಘ ಹಿನ್ನೆಲೆಯಾಯಿತು. ಮೈಸೂರು ಮಹಾರಾಜರು ಕೊನೆಗೆ 24 ಅಕ್ಟೋಬರ್ 1947ರಂದು ಜವಾಬ್ದಾರಿಯುತ ಸರ್ಕಾರ ರಚನೆಗೆ ಒಪ್ಪಿಗೆ ನೀಡಿದರು.

ಸ್ವಾತಂತ್ರ್ಯ ಹೋರಾಟದ ಬೆಲೆ,  ಛಿದ್ರವಾದ ಭೀಮರಾವ್ ಅವರ ಕೌಟುಂಬಿಕ ಬದುಕು

ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದುವಾಗ ನಾವು ಸಾಮಾನ್ಯವಾಗಿ ಜೈಲು, ಲಾಠಿ, ಸತ್ಯಾಗ್ರಹ ಮತ್ತು ಬಲಿದಾನಗಳನ್ನು ಮಾತ್ರ ನೆನಪಿಸಿಕೊಳ್ಳುತ್ತೇವೆ. ಆದರೆ ಹೋರಾಟಗಾರನ ಕುಟುಂಬದ ಮೇಲೆ ಬಿದ್ದ ಪರಿಣಾಮವನ್ನು ಎಷ್ಟು ಬಾರಿ ನೆನಪಿಸಿಕೊಳ್ಳುತ್ತೇವೆ? ಜಮಖಂಡಿ ಭೀಮರಾವ್ ಅವರ ಬದುಕಿನ ಕರುಣಾಜನಕ ಭಾಗ ಇಲ್ಲಿದೆ.

ಬ್ರಿಟಿಷ್ ವಿರೋಧಿ ಮತ್ತು ಸಂಸ್ಥಾನ ವಿರೋಧಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಆರ್ಥಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿತು. ಕೈಗಾರಿಕೋದ್ಯಮಿಯಾಗಿದ್ದ ಭೀಮರಾವ್ ಅವರ ಸಂಸಾರವೇ ಛಿದ್ರವಾಯಿತು. ಅಂತಿಮವಾಗಿ ಅವರು ಕೊನೆಯುಸಿರೆಳೆದರು.

ಅವರ ಮರಣದ ನಂತರ ಕುಟುಂಬದ ಸದಸ್ಯರು ಬೇರೆ ಬೇರೆ ದಿಕ್ಕು ಹಿಡಿದರು.

  • ಮೊದಲ ಮಗ ರಾಮಚಂದ್ರರಾವ್ ಬೆಂಗಳೂರಿನಲ್ಲೇ ಉಳಿದರು.
  • ಎರಡನೆಯ ಮಗ ನಾರಾಯಣರಾವ್ ಚೆನ್ನೈಗೆ ರೈಲು ಹತ್ತಿದರು.
  • ಮೂರನೆಯ ಮತ್ತು ನಾಲ್ಕನೆಯ ಮಕ್ಕಳಿಗೆ ರಾಮಚಂದ್ರರಾಯರು ಆಸರೆಯಾದರು.
  • ದೊಡ್ಡ ಮಗಳಿಗೆ ಈಗಾಗಲೇ ಮದುವೆಯಾಗಿತ್ತು.
  • ಇಬ್ಬರು ಹೆಣ್ಣು ಮಕ್ಕಳು ದಿಕ್ಕಾಪಾಲಾದರು.
  • ನಾರಾಯಣರಾವ್ ಅವರು ಕೊನೆಯುಸಿರು ಎಳೆಯುವವರೆಗೂ ಆ ಇಬ್ಬರನ್ನು ಮತ್ತೆ ನೋಡಲು ಸಾಧ್ಯವಾಗಲಿಲ್ಲ ಎಂಬುದು ಈ ಕುಟುಂಬದ ದುರಂತದ ಮತ್ತೊಂದು ಮುಖ.

ಸ್ವಾತಂತ್ರ್ಯದ ಬೆಲೆ ಕೆಲವೊಮ್ಮೆ ಜೈಲಿನ ಗೋಡೆಗಳೊಳಗೆ ಮಾತ್ರ ಪಾವತಿಯಾಗುವುದಿಲ್ಲ; ಮನೆಯ ಬಾಗಿಲಿನೊಳಗೂ ಪಾವತಿಯಾಗುತ್ತದೆ.

ರಾಮಚಂದ್ರರಾವ್: ತಂದೆಯ ಹೋರಾಟದ ಹೆಜ್ಜೆ ಮುಂದುವರಿಸಿದ ಮಗ

ಜಮಖಂಡಿ ಭೀಮರಾವ್ ಅವರ ಮೊದಲ ಮಗ ರಾಮಚಂದ್ರರಾವ್ ಅಜಾನುಬಾಹು ದೇಹ ಹೊಂದಿದ್ದ ಕುಸ್ತಿಪಟುವಾಗಿದ್ದರು. ಅವರು ಸಾರ್ವಜನಿಕ ಹೋರಾಟದಲ್ಲಿಯೂ ಸಕ್ರಿಯರಾಗಿದ್ದರು. 1929ರಲ್ಲಿ ಬೆಂಗಳೂರಿನ ಜೈಮಾರುತಿ ಜಿಮ್ನಾಷಿಯಂನ ಯುವಕರು ಮಾರುತಿ ಪಥಕ್ ಎಂಬ ಹೆಸರಿನಲ್ಲಿ ಅರಣ್ಯ ಸತ್ಯಾಗ್ರಹಕ್ಕೆ ಹೊರಟರು. ಆ ಪಥಕದಲ್ಲಿ, ವೈ.ವಿ. ರಾಮಚಂದ್ರನ್, ಟಿ.ಎಂ. ನಾರಾಯಣಸ್ವಾಮಿ, ಟಿ.ಎಂ. ಜವರಯ್ಯ, ಡಿ.ಎಂ. ನಂಜಪ್ಪ, ಕೆ.ಎಂ. ವೀರಣ್ಣ, ಜಮಖಂಡಿ ಭೀಮರಾವ್ ಅವರ ಮಗ ರಾಮಚಂದ್ರ, ಚಂಗಲಾರಾಧ್ಯ, ಮಾಣಿಕ್ಯರಾವ್ ಮತ್ತು ಎಚ್.ಬಿ. ಪದ ಇದ್ದರು ಎಂದು ಉಲ್ಲೇಖಿಸಲಾಗಿದೆ. ಇವರಿಗೆ ಕೆ. ವಾಸುದೇವರಾಯರು ಮತ್ತು ಎಸ್. ವಾಸುದೇವರಾಯರು ಸೇವಾದಳದ ತರಬೇತಿ ನೀಡಿದರು. ಅಂದರೆ, ಒಂದು ಕುಟುಂಬದಲ್ಲಿ ತಂದೆಯು ರಾಷ್ಟ್ರೀಯ ಚಳವಳಿಗೆ ನೀಡಿದ ಕೊಡುಗೆಯ ನಂತರ, ಮಗನೂ ಅದೇ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದು ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ ಎಂಬುದಕ್ಕೆ ದ್ಯೋತಕವಾಗಿತ್ತು.

ಪತ್ರಿಕೆಗಳೂ ಹೋರಾಟದ ಆಯುಧಗಳಾಗಿದ್ದವು

ಆ ಕಾಲದಲ್ಲಿ ಪತ್ರಿಕೆ ಎಂದರೆ ಇಂದಿನಂತೆ ಕೇವಲ ಸುದ್ದಿಯ ಮಾಧ್ಯಮವಲ್ಲ. ಅದು ರಾಜಕೀಯ ಜಾಗೃತಿಯ ಆಯುಧ. ವೀರಕೇಸರಿ ಸೀತಾರಾಮಶಾಸ್ತ್ರಿ, ಟಿ.ಟಿ. ಶರ್ಮ, ಡಿ.ವಿ. ಗುಂಡಪ್ಪ, ಜಿ. ನಾರಾಯಣ ಅಯ್ಯಂಗಾರ್, ಎಚ್.ಕೆ. ವೀರಣ್ಣಗೌಡ, ಪಿ.ಆರ್. ರಾಮಯ್ಯ ಸೇರಿದಂತೆ ಅನೇಕರು ತಮ್ಮ ಬರಹ ಮತ್ತು ಪತ್ರಿಕೆಗಳ ಮೂಲಕ ರಾಷ್ಟ್ರೀಯ ಭಾವನೆ ಬೆಳೆಸಿದರು. 1920ರ ದಶಕದಲ್ಲಿ ಬೆಂಗಳೂರಿನಲ್ಲಿ ಮತ್ತು ಮೈಸೂರು ಸಂಸ್ಥಾನದಲ್ಲಿ ಪತ್ರಿಕೋದ್ಯಮ ಹಾಗೂ ರಾಜಕೀಯ ಚಟುವಟಿಕೆಗಳು ಪರಸ್ಪರ ಕೈಜೋಡಿಸಿದ್ದವು. ಹೀಗಾಗಿ ಒಂದು ಕಡೆ ಸಭೆ–ಮೆರವಣಿಗೆ, ಇನ್ನೊಂದು ಕಡೆ ಪತ್ರಿಕೆಯ ಸಂಪಾದಕೀಯ—ಎರಡೂ ಸ್ವಾತಂತ್ರ್ಯದ ಸಂದೇಶವನ್ನು ಜನರ ಮನೆಗಳಿಗೆ ಕೊಂಡೊಯ್ದವು.

ಗಣಪತಿ ಗಲಭೆಯ ನಂತರದ ದೊಡ್ಡ ಪ್ರಶ್ನೆ

1928ರ ಬೆಂಗಳೂರಿನ ಗಲಭೆಯು ಕೇವಲ ಆ ಕಾಲದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ಉಳಿಯಲಿಲ್ಲ. ಗಲಭೆಯನ್ನು ನಿಯಂತ್ರಿಸಲು ಹಲವು ಕಡೆ ಗುಂಡಿನ ದಾಳಿ ನಡೆದಿದ್ದು, ಪರಿಸ್ಥಿತಿ ತಕ್ಷಣ ಶಾಂತವಾಗಲಿಲ್ಲ. ಘಟನೆಯ ಪರಿಶೀಲನೆಗಾಗಿ ಮೈಸೂರು ಸಂಸ್ಥಾನದ ಮಾಜಿ ದಿವಾನರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿಯನ್ನು ರಚಿಸಲಾಯಿತು. ಆದರೆ ಸಮಿತಿಯ ವರದಿ ಸಾರ್ವಜನಿಕವಾಗಿ ಬೆಳಕಿಗೆ ಬರಲಿಲ್ಲ ಎಂಬುದು ಈ ಅಧ್ಯಾಯದ ಮತ್ತೊಂದು ಕುತೂಹಲಕಾರಿ ಅಂಶ. ವರದಿಯಲ್ಲಿ, ಇಂತಹ ಗಲಭೆಗಳು ಮರುಕಳಿಸದಂತೆ ಮಾಡುವ  ಜವಾಬ್ದಾರಿಯುತ ಸರ್ಕಾರದ ಸ್ಥಾಪನೆಯೇ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು  ಅಂದರೆ, ಸಮಸ್ಯೆಯ ಮೂಲವನ್ನು ಕೇವಲ ಪೊಲೀಸ್ ಕ್ರಮದಿಂದ ಪರಿಹರಿಸಲಾಗುವುದಿಲ್ಲ. ಜನರಿಗೆ ಆಡಳಿತದಲ್ಲಿ ಪಾಲು ನೀಡುವುದೇ ದೀರ್ಘಕಾಲೀನ ಪರಿಹಾರ ಎಂಬ ರಾಜಕೀಯ ಸಂದೇಶ ಇಲ್ಲಿದೆ.

ಇತಿಹಾಸದ ಪುಟಗಳಲ್ಲಿ ಸಣ್ಣ ಹೆಸರು, ಆದರೆ ದೊಡ್ಡ ಹೆಜ್ಜೆ

ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬರೆಯುವಾಗ ಕೆಲವೇ ಪ್ರಸಿದ್ಧ ನಾಯಕರ ಹೆಸರುಗಳು ಮರುಮರು ಕೇಳಿಬರುತ್ತವೆ. ಆದರೆ ಒಂದು ಚಳವಳಿಯನ್ನು ನಿರ್ಮಿಸುವವರು ಯಾವಾಗಲೂ ಒಬ್ಬರೇ ಅಲ್ಲ.

ಯಾರೋ ಭಾಷಣ ಮಾಡುತ್ತಾರೆ.
ಯಾರೋ ಪತ್ರಿಕೆ ನಡೆಸುತ್ತಾರೆ.
ಯಾರೋ ಜೈಲಿಗೆ ಹೋಗುತ್ತಾರೆ.
ಯಾರೋ ತಮ್ಮ ಆಸ್ತಿಯನ್ನು ಕಳೆದುಕೊಳ್ಳುತ್ತಾರೆ.
ಯಾರೋ ಕುಟುಂಬವನ್ನೇ ಕಳೆದುಕೊಳ್ಳುತ್ತಾರೆ.
ಯಾರೋ ತಮ್ಮ ಮಕ್ಕಳನ್ನೂ ಹೋರಾಟದ ದಾರಿಗೆ ಕಳುಹಿಸುತ್ತಾರೆ.

ಜಮಖಂಡಿ ಭೀಮರಾವ್ ಅವರ ಕಥೆ ಈ ಎಲ್ಲ ಮುಖಗಳನ್ನು ಒಟ್ಟಾಗಿ ತೋರಿಸುತ್ತದೆ.

ಹೋರಾಟಗಾರರ ಚರಿತ್ರೆ ದಾಖಲಾಗದಿದ್ದರೆ?

ಸ್ವಾತಂತ್ರ್ಯ ಸಮರದಲ್ಲಿ ಸಾವಿರಾರು ಜನರು ತಮ್ಮ ಬದುಕನ್ನೇ ಅರ್ಪಿಸಿದರು. ಆದರೆ ಅವರಲ್ಲಿ ಕೆಲವರ ಹೆಸರುಗಳು ಮಾತ್ರ ಅಧಿಕೃತ ದಾಖಲೆಗಳಲ್ಲಿ ಉಳಿದವು. ಅನೇಕ ಕುಟುಂಬಗಳ ನೆನಪುಗಳು, ಸ್ಥಳೀಯ ಇತಿಹಾಸ, ಹಳೆಯ ಪತ್ರಿಕೆಗಳು ಮತ್ತು ವೈಯಕ್ತಿಕ ಸ್ಮರಣೆಗಳಲ್ಲೇ ಉಳಿದುಕೊಂಡವು. ಜಮಖಂಡಿ ಭೀಮರಾವ್ ಅವರ ಕುಟುಂಬದ ಇತಿಹಾಸವೂ ಇದೇ ರೀತಿಯ ಒಂದು ಮರೆಯಾದ ಅಧ್ಯಾಯ.

ರಾಮಚಂದ್ರರಾವ್ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರ ಪ್ರಮಾಣಪತ್ರ ದೊರೆತಿತ್ತು. ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮಕ್ಕಳು ಬೆಂಗಳೂರಿನ ಟಾಟಾ ಸಿಲ್ಕ್ ಫಾರಂ ಪ್ರದೇಶದಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ  ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಶತಾಯುಷಿ ಎಚ್.ಎಸ್. ದೊರೆಸ್ವಾಮಿ ಅವರು ಬರೆದ ಹೋರಾಟದ ದಿಟ್ಟ ಹೆಜ್ಜೆಗಳು ಕೃತಿಯಲ್ಲಿಯೂ ಜಮಖಂಡಿ ಭೀಮರಾವ್ ಅವರ ಬಗ್ಗೆ ಮಾಹಿತಿ ದಾಖಲಾಗಿರುವುದು ಗಮನಾರ್ಹ

ಮರೆಯಾದ ಆ ಧೀರನನ್ನು ಮತ್ತೆ ನೆನಪಿಸಿಕೊಳ್ಳೋಣ

ಇಂದು ನಾವು ಸ್ವತಂತ್ರ ದೇಶದಲ್ಲಿ ಬದುಕುತ್ತಿದ್ದೇವೆ. ನಮ್ಮ ಕೈಯಲ್ಲಿ ಮತದಾನದ ಹಕ್ಕಿದೆ. ನಮ್ಮ ಮಾತಿಗೆ ಮೌಲ್ಯವಿದೆ. ನಮ್ಮ ಪತ್ರಿಕೆಗಳು ಆಡಳಿತವನ್ನು ಪ್ರಶ್ನಿಸಬಹುದು. ನಮ್ಮ ನಾಗರಿಕರು ಸರ್ಕಾರದ ವಿರುದ್ಧ ಪ್ರತಿಭಟಿಸಬಹುದು. ನಮ್ಮ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಅವಕಾಶವಿದೆ. ಈ ಹಕ್ಕುಗಳು ಒಂದು ದಿನದಲ್ಲಿ ಬಂದಿಲ್ಲ. 1928ರ ಬೆಂಗಳೂರಿನ ಬೀದಿಗಳಲ್ಲಿ ನಡೆದ ಪ್ರತಿಭಟನೆಗಳಿಂದ ಹಿಡಿದು, 1930ರ ಸತ್ಯಾಗ್ರಹಗಳು, 1942ರ ಭಾರತ ಬಿಟ್ಟು ತೊಲಗಿ ಚಳವಳಿ, ಕೊನೆಗೆ 1947ರ ಮೈಸೂರು ಚಲೋವರೆಗೆ—ಕರ್ನಾಟಕದ ಸ್ವಾತಂತ್ರ್ಯ ಹೋರಾಟವು ಹಲವು ಹಂತಗಳಲ್ಲಿ ಸಾಗಿತು. ಅದರಲ್ಲೊಂದು ಪ್ರಮುಖ ಕೊಂಡಿಯಾಗಿ ಜಮಖಂಡಿ ಭೀಮರಾವ್ ಅವರಂತಹ ಸ್ಥಳೀಯ ರಾಷ್ಟ್ರೀಯವಾದಿ ನಾಯಕರನ್ನು ನೆನಪಿಸಿಕೊಳ್ಳುವುದು ಅಗತ್ಯ.

ಇತಿಹಾಸವೆಂದರೆ ಕೇವಲ ದೊಡ್ಡ ನಾಯಕರ ಪ್ರತಿಮೆಗಳಲ್ಲ. ಅದು ಹೆಸರಿಲ್ಲದ ಸಾವಿರಾರು ಜನರ ಬೆವರಿನಲ್ಲಿ, ಜೈಲಿನ ಗೋಡೆಗಳಲ್ಲಿ, ಹರಿದ ಖಾದಿಯಲ್ಲಿ, ಸುಟ್ಟ ವಿದೇಶಿ ಬಟ್ಟೆಯಲ್ಲಿ, ಬೀದಿಯಲ್ಲಿ ಮೊಳಗಿದ ಘೋಷಣೆಗಳಲ್ಲಿ ಮತ್ತು ಕುಟುಂಬಗಳು ಅನುಭವಿಸಿದ ಕಣ್ಣೀರಿನಲ್ಲಿದೆ. ಜಮಖಂಡಿ ಭೀಮರಾವ್ ಅವರ ಕಥೆಯೂ ಅಂತಹದ್ದೇ ಒಂದು ಮರೆಯಾದ ದಿಟ್ಟ ಹೆಜ್ಜೆ. ನಾವು ಇಂದು ಸ್ವತಂತ್ರವಾಗಿ ನಡೆಯುತ್ತಿರುವ ಪ್ರತಿಯೊಂದು ಹೆಜ್ಜೆಯ ಹಿಂದೆಯೂ, ಇಂತಹ ಅನೇಕರು ತಮ್ಮ ಬದುಕನ್ನೇ ಇಟ್ಟಿದ್ದರು.

ಅವರನ್ನು ನೆನಪಿಸಿಕೊಳ್ಳುವುದು ಕೇವಲ ಇತಿಹಾಸವನ್ನು ನೆನಪಿಸಿಕೊಳ್ಳುವುದಲ್ಲ. ನಾವು ಪಡೆದ ಸ್ವಾತಂತ್ರ್ಯದ ಬೆಲೆಯನ್ನು ಅರಿತುಕೊಳ್ಳುವುದು ಎಂದರೂ ಅತಿಶಯವಲ್ಲಾ ಅಲ್ವೇ? 

ಏನಂತೀರೀ?
ನಿಮ್ಮವನೇ ಉಮಾಸುತ

ಭಾರತ ಮಾತಾ ಕೀ ಜೈ! 🇮🇳

Leave a Reply