ಬೆಂಗಳೂರು ಗಣೇಶೋತ್ಸವ, ಭಕ್ತಿಯಿಂದ ಆರಂಭವಾಗಿ ಬೆಂಗಳೂರಿನ ಸಾಂಸ್ಕೃತಿಕ ಮಹೋತ್ಸವವಾಗಿ ಬೆಳೆದ ಕಥೆ

ಬೆಂಗಳೂರು ಎಂದರೆ ಕೇವಲ ಉದ್ಯಾನನಗರಿ, ಐಟಿ ನಗರಿ ಅಥವಾ ಆಧುನಿಕ ಮಹಾನಗರ ಮಾತ್ರವಲ್ಲ. ಈ ನಗರದ ಮತ್ತೊಂದು ಮುಖವೆಂದರೆ ಅದರ ಶ್ರೀಮಂತ ಧಾರ್ಮಿಕ, ಸಾಹಿತ್ಯಿಕ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆ. ಹಳೆಯ ಬೆಂಗಳೂರಿನ ಬೀದಿಗಳಲ್ಲಿ ಇಂದಿಗೂ ಆ ಪರಂಪರೆಯ ಹೆಜ್ಜೆ ಗುರುತುಗಳು ಕಾಣಸಿಗುತ್ತವೆ.ಅಂತಹ ಪರಂಪರೆಗಳಲ್ಲಿ ವಿಶೇಷ ಸ್ಥಾನ ಪಡೆದಿರುವುದು ಬಸವನಗುಡಿಯ ಬೆಂಗಳೂರು ಗಣೇಶೋತ್ಸವ. ಇಂದು ಸಾವಿರಾರು ಜನರನ್ನು ಸೆಳೆಯುವ, ದೇಶದ ಪ್ರಸಿದ್ಧ ಸಂಗೀತಗಾರರು, ಕಲಾವಿದರು ಹಾಗೂ ಸಾಂಸ್ಕೃತಿಕ ದಿಗ್ಗಜರಿಗೆ ವೇದಿಕೆ ಕಲ್ಪಿಸುವ ಈ ಉತ್ಸವದ ಆರಂಭ ಮಾತ್ರ ಅತ್ಯಂತ ಸರಳವಾಗಿತ್ತು. ದೊಡ್ಡ ವೇದಿಕೆಯಿರಲಿಲ್ಲ, ಭವ್ಯ ಪ್ರಾಯೋಜಕರಿರಲಿಲ್ಲ, ಕೋಟ್ಯಂತರ ರೂಪಾಯಿಗಳ ಬಜೆಟ್ ಇರಲಿಲ್ಲ. ಇದ್ದದ್ದು ಕೆಲ ಯುವಕರ ಉತ್ಸಾಹ, ಕನ್ನಡ–ಸಂಸ್ಕೃತಿಯ ಮೇಲಿನ ಅಭಿಮಾನ ಮತ್ತು ಗಣಪತಿಯ ಮೇಲಿನ ಭಕ್ತಿ. ಬೆಂಗಳೂರು ಗಣೇಶೋತ್ಸವದ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಬೆಂಗಳೂರು ಗಣೇಶೋತ್ಸವ ಆರಂಭವಾಗಿದ್ದು ಯಾವಾಗ?

ಬಸವನಗುಡಿಯ ಡಿ.ವಿ.ಜಿ. ರಸ್ತೆಯ ಸಮೀಪದ ಮಲ್ಲಿಕಾರ್ಜುನ ದೇವಸ್ಥಾನದ ಓಣಿಯಲ್ಲಿ 1962ರ ಸೆಪ್ಟೆಂಬರ್ 2ರಂದು ಮೊದಲ ಬೆಂಗಳೂರು ಗಣೇಶೋತ್ಸವ ನಡೆಯಿತು. ಅಂದಿನ ಗೃಹ ಸಚಿವರಾಗಿದ್ದ ಆರ್.ಎಂ. ಪಾಟೀಲ್ ಅವರು ಉತ್ಸವವನ್ನು ಉದ್ಘಾಟಿಸಿದ್ದರು. ಕನ್ನಡದ ಹಿರಿಯ ಚಿಂತಕ ಹಾಗೂ ಸಾಹಿತಿ ಡಿ.ವಿ. ಗುಂಡಪ್ಪ (ಡಿ.ವಿ.ಜಿ.) ಅವರೂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಮೊದಲ ಉತ್ಸವದಲ್ಲಿ ಪಿ. ಕಾಳಿಂಗರಾಯ, ಬೆಂಗಳೂರು ಲತಾ ಮತ್ತು ಮಂಡ್ಯದ ಗುರುರಾಜುಲು ದಾಸರು ಸಂಗೀತ ಹಾಗೂ ಹರಿಕಥಾ ಕಾರ್ಯಕ್ರಮಗಳನ್ನು ನೀಡಿದ್ದರು.

ಆದರೆ ಈ ಗಣೇಶೋತ್ಸವವನ್ನು ಯಾರು ಆರಂಭಿಸಿದರು? ಎಂಬ ಪ್ರಶ್ನೆಗೆ ಒಬ್ಬರ ಹೆಸರನ್ನು ಮಾತ್ರ ಹೇಳಲಾಗದು. ಏಕೆಂದರೆ ಈ ಉತ್ಸವ ಹಿಂದೆ ಬಹುದೊಡ್ಡ ಇತಿಹಾಸವಿದೆ.  ಈ ಉತ್ಸವದ ಹಿಂದೆ ಶ್ರೀ ವಿದ್ಯಾರಣ್ಯ ವಿಚಾರ ವಿನಿಮಯ ಕನ್ನಡಿಗರ ಸಂಘ, ನಂತರ ಶ್ರೀ ವಿದ್ಯಾರಣ್ಯ ಯುವಕ ಸಂಘವಾಗಿ ರೂಪುಗೊಂಡ ಯುವಕರ ತಂಡದ ಪ್ರಯತ್ನವಿತ್ತು. ಡಿ.ವಿ.ಜಿ. ರಸ್ತೆಯಲ್ಲಿದ್ದ ವಿನಾಯಕ ಸೈಕಲ್ ಮಾರ್ಟ್‌ನ ಮಾಲೀಕರಾದ ಜಿ.ಕೆ. ಗೋಪಾಲ್, ಅವರ ಸಹೋದರ ಜಿ.ಕೆ. ಓಬಯ್ಯ, ಎ. ಮರಿಯಪ್ಪ, ಗಂಗಾಧರ್, ಶಿವಶಂಕರ್, ಸುಂದರ್ ಮುಂತಾದವರು ಕನ್ನಡ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜದ ಕುರಿತು ಚರ್ಚಿಸುತ್ತಿದ್ದ ಯುವಕರ ಗುಂಪಿನ ಪ್ರಮುಖರಾಗಿದ್ದರು.

ಈ ಸಂಘಟನೆಯ ಸ್ಥಾಪನೆಯ ಸಂದರ್ಭದಲ್ಲಿ ಖ್ಯಾತ ಸಾಹಿತಿ ಕು.ರಾ. ಸೀತಾರಾಮ ಶಾಸ್ತ್ರಿ (ಕು.ರಾ.ಸಿ.) ಅವರ ಮಾರ್ಗದರ್ಶನ ಮತ್ತು ಅಧ್ಯಕ್ಷತೆ ಮಹತ್ವದ್ದಾಗಿತ್ತು. ಕೆಲವು ಹಳೆಯ ವರದಿಗಳು ಬೆಂಗಳೂರು ಗಣೇಶೋತ್ಸವವನ್ನು ಕು.ರಾ. ಸೀತಾರಾಮ ಶಾಸ್ತ್ರಿಯವರು ಆರಂಭಿಸಿದರು ಎಂದು ಹೇಳುತ್ತವೆ; ಮತ್ತೊಂದೆಡೆ ಉತ್ಸವದ ಅಧಿಕೃತ ಇತಿಹಾಸವು ಇದನ್ನು ಹಲವು ಯುವಕರ ಒಕ್ಕೂಟದ ಪ್ರಯತ್ನವಾಗಿ ವಿವರಿಸುತ್ತದೆ. ಆದ್ದರಿಂದ ಕು.ರಾ.ಸಿ. ಅವರ ಪ್ರಮುಖ ಮಾರ್ಗದರ್ಶನ, ಡಿ.ವಿ.ಜಿ. ಅವರ ಪ್ರೋತ್ಸಾಹ ಮತ್ತು ಯುವಕರ ಸಂಘಟಿತ ಪ್ರಯತ್ನದಿಂದ ಈ ಉತ್ಸವ ರೂಪುಗೊಂಡಿತು ಎನ್ನುವುದು ಹೆಚ್ಚು ಸಮಗ್ರವಾದ ವಿವರಣೆ.

ಸೈಕಲ್ ಅಂಗಡಿಯಿಂದ ಆರಂಭವಾದ ಸಾಂಸ್ಕೃತಿಕ ಚಳವಳಿ

ಇಂದಿನ ಭವ್ಯ ಬೆಂಗಳೂರು ಗಣೇಶೋತ್ಸವವನ್ನು ಅದರ ಆರಂಭದ ದಿನಗಳೊಂದಿಗೆ ಹೋಲಿಸಿದರೆ ಆಶ್ಚರ್ಯವಾಗುತ್ತದೆ. ಡಿ.ವಿ.ಜಿ. ರಸ್ತೆಯ ವಿನಾಯಕ ಸೈಕಲ್ ಮಾರ್ಟ್ ಈ ಯುವಕರ ಚರ್ಚೆಯ ಕೇಂದ್ರವಾಗಿತ್ತು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜದ ಕುರಿತು ಚರ್ಚಿಸುತ್ತಿದ್ದ ಈ ಯುವಕರಿಗೆ ಒಂದು ಸಾಂಸ್ಕೃತಿಕ ವೇದಿಕೆಯ ಅಗತ್ಯವಿತ್ತು. ಆದರೆ ಹಣದ ಕೊರತೆ ದೊಡ್ಡ ಸಮಸ್ಯೆಯಾಗಿತ್ತು.

ಆಗ ಅವರು ‘ರಣಕಹಳೆ’ ಎಂಬ ನಾಟಕವನ್ನು ಪ್ರದರ್ಶಿಸಿ ಹಣ ಸಂಗ್ರಹಿಸಿದರು. ನಾಟಕದ ಪ್ರದರ್ಶನದಿಂದ ಸುಮಾರು ₹300 ಹಣ ಉಳಿಯಿತು. ಇದೇ ಹಣ ಮುಂದಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೀಜಧನವಾಯಿತು ಎಂದು ಉತ್ಸವದ ಇತಿಹಾಸದಲ್ಲಿ ವಿವರಿಸಲಾಗಿದೆ. ಮತ್ತೊಂದು ಹಳೆಯ ವರದಿಯ ಪ್ರಕಾರ, ಸಂಘದ ಸದಸ್ಯರು ತಲಾ 25 ಪೈಸೆಯಷ್ಟು ಕೊಡುಗೆ ನೀಡಿ ಸುಮಾರು ₹40 ಸಂಗ್ರಹಿಸಿದ್ದರು. ಇದೇ ಸಮಯದಲ್ಲಿ ಮೊದಲ ಗಣೇಶ ಮೂರ್ತಿಯನ್ನು ಕೇವಲ ₹4ಕ್ಕೆ ಖರೀದಿಸಿ ಉತ್ಸವ ನಡೆಸಲಾಗಿತ್ತು ಎಂಬ ನೆನಪನ್ನೂ ಸಂಸ್ಥೆಯ ಹಿರಿಯ ಸದಸ್ಯ ಎ. ಮರಿಯಪ್ಪ ಅವರು ಹಂಚಿಕೊಂಡಿದ್ದಾರೆ. ಅಂದರೆ, ದೊಡ್ಡ ಮೊತ್ತದ ಹಣದಿಂದ ಹುಟ್ಟಿದ ಉತ್ಸವವಲ್ಲ ಇದು; ಸಣ್ಣ ಕೊಡುಗೆಗಳು, ದೊಡ್ಡ ಕನಸು ಮತ್ತು ಸಮೂಹ ಪ್ರಯತ್ನದಿಂದ ಹುಟ್ಟಿದ ಉತ್ಸವ.

ಮೊದಲ ಉತ್ಸವ ಹೇಗಿತ್ತು?

1962ರಲ್ಲಿ ನಡೆದ ಮೊದಲ ಉತ್ಸವವು ಇಂದಿನಂತೆ ಹತ್ತು–ಹನ್ನೆರಡು ದಿನಗಳ ಅದ್ದೂರಿ ಕಾರ್ಯಕ್ರಮವಾಗಿರಲಿಲ್ಲ. ರಸ್ತೆಯ ಬದಿಯ ಸರಳ ವೇದಿಕೆಯಲ್ಲಿ ಗಣಪತಿ ಪ್ರತಿಷ್ಠಾಪನೆ, ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ಮೊದಲಿನಿಂದಲೇ ಒಂದು ವಿಶೇಷ ಉದ್ದೇಶ ಇತ್ತು—ಗಣೇಶೋತ್ಸವದ ಮೂಲಕ ಜನರನ್ನು ಒಂದೆಡೆ ಸೇರಿಸುವುದು ಮತ್ತು ಕನ್ನಡದ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಗೆ ವೇದಿಕೆ ಒದಗಿಸುವುದು. ಮೊದಲ ಉತ್ಸವದಲ್ಲಿಯೇ ಪಿ. ಕಾಳಿಂಗರಾಯ, ಬೆಂಗಳೂರು ಲತಾ ಮತ್ತು ಗುರುರಾಜುಲು ದಾಸರಂತಹ ಕಲಾವಿದರು ಭಾಗವಹಿಸಿದ್ದು ಈ ಉದ್ದೇಶಕ್ಕೆ ಸಾಕ್ಷಿಯಾಗಿದೆ.

ನಿಧಾನವಾಗಿ ಬೆಳೆಯತೊಡಗಿದ ಉತ್ಸವ

May be an image of temple and text

ಮುಂದಿನ ವರ್ಷಗಳಲ್ಲಿ ಗಣೇಶೋತ್ಸವದ ಜನಪ್ರಿಯತೆ ಹೆಚ್ಚುತ್ತಾ ಹೋಯಿತು. ಸ್ಥಳೀಯ ಸಂಗೀತಗಾರರು, ನೃತ್ಯ ಕಲಾವಿದರು, ಜಾನಪದ ಕಲಾವಿದರು, ಹರಿಕಥಾ ವಿದ್ವಾಂಸರು ಮತ್ತು ನಾಟಕ ತಂಡಗಳು ಉತ್ಸವದಲ್ಲಿ ಭಾಗವಹಿಸಲು ಆರಂಭಿಸಿದರು. ಒಂದು ಹಂತದಲ್ಲಿ ಡಿ.ವಿ.ಜಿ. ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚಾಗಿ ಸಂಚಾರಕ್ಕೂ ತೊಂದರೆಯಾಗತೊಡಗಿತು. ಹೀಗಾಗಿ 1976ರಲ್ಲಿ ಉತ್ಸವದ ಸ್ಥಳವನ್ನು ಮಲ್ಲಿಕಾರ್ಜುನ ದೇವಸ್ಥಾನದ ಆವರಣದತ್ತ ಸ್ಥಳಾಂತರಿಸಲಾಯಿತು. ಹೀಗೆ ಒಂದು ಸಣ್ಣ ಬೀದಿ ಉತ್ಸವ ಕ್ರಮೇಣ ಬೆಂಗಳೂರಿನ ಪ್ರಮುಖ ಸಾಂಸ್ಕೃತಿಕ ವೇದಿಕೆಯಾಗಿ ಬೆಳೆಯಿತು.

ಪಿ.ಬಿ. ಶ್ರೀನಿವಾಸ್ ಮತ್ತು ಎಸ್.ಪಿ.ಬಿ. ತಂದ ಹೊಸ ಅಧ್ಯಾಯ

ಬೆಂಗಳೂರು ಗಣೇಶೋತ್ಸವದ ಇತಿಹಾಸದಲ್ಲಿ ಸಂಗೀತ ಕಾರ್ಯಕ್ರಮಗಳಿಗೆ ವಿಶೇಷ ಸ್ಥಾನವಿದೆ. 1974ರಲ್ಲಿ ಡಾ. ಪಿ.ಬಿ. ಶ್ರೀನಿವಾಸ್ ಮತ್ತು ಸಂಗೀತ ನಿರ್ದೇಶಕ ಎಂ. ರಂಗರಾವ್ ಉತ್ಸವದಲ್ಲಿ ಕಾರ್ಯಕ್ರಮ ನೀಡಿದರು. ಮುಂದಿನ ವರ್ಷ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಭಾಗವಹಿಸಿದರು. ಈ ಕಾರ್ಯಕ್ರಮವು ಎಸ್.ಪಿ.ಬಿ. ಅವರು ಕರ್ನಾಟಕದಲ್ಲಿ ನೀಡಿದ ಮೊದಲ ಲೈವ್ ಸಂಗೀತ ಕಾರ್ಯಕ್ರಮಗಳಲ್ಲಿ ಒಂದಾಗಿ ಉತ್ಸವದ ಇತಿಹಾಸದಲ್ಲಿ ನೆನಪಾಗಿದೆ. ಇದಾದ ನಂತರ ದೇಶದ ವಿವಿಧ ಭಾಗಗಳ ಖ್ಯಾತ ಕಲಾವಿದರು ಬೆಂಗಳೂರು ಗಣೇಶೋತ್ಸವದ ವೇದಿಕೆಗೆ ಬರತೊಡಗಿದರು. ಹೀಗಾಗಿ ಈ ಉತ್ಸವವು ಕೇವಲ ಗಣಪತಿ ಪೂಜೆಯ ಕಾರ್ಯಕ್ರಮವಾಗದೆ ಸಂಗೀತ ಪ್ರೇಮಿಗಳ ವಾರ್ಷಿಕ ಸಾಂಸ್ಕೃತಿಕ ಹಬ್ಬವಾಗಿ ರೂಪುಗೊಂಡಿತು.

ಒಂದು ಬೆಂಕಿ ಅವಘಡವೂ ಉತ್ಸವವನ್ನು ನಿಲ್ಲಿಸಲಿಲ್ಲ

ಉತ್ಸವದ ಇತಿಹಾಸದಲ್ಲಿ ಒಂದು ದುಃಖಕರ ಘಟನೆ ಕೂಡ ನಡೆದಿದೆ. ಒಮ್ಮೆ ಗುರುರಾಜುಲು ದಾಸರು ಕಾರ್ಯಕ್ರಮ ನೀಡುತ್ತಿದ್ದ ಸಂದರ್ಭದಲ್ಲಿ, ಹಿಮಾಲಯದ ರೂಪ ನೀಡಲು ಹತ್ತಿಯನ್ನು ಬಳಸಿ ಅಲಂಕರಿಸಲಾಗಿದ್ದ ಗಣಪತಿ ವೇದಿಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ವೇದಿಕೆ ಹೊಗೆ ಮತ್ತು ಬೆಂಕಿಯಿಂದ ಆವೃತವಾಯಿತು. ಗಣಪತಿ ಮೂರ್ತಿಗೂ ಹಾನಿಯಾಯಿತು. ಕಾರ್ಯಕ್ರಮಗಳನ್ನು ರದ್ದುಪಡಿಸಬೇಕಾಯಿತು. ಈ ಘಟನೆಯ ನಂತರ ಕೆಲವರು ಉತ್ಸವವನ್ನು ನಿಲ್ಲಿಸುವ ಮಾತುಗಳನ್ನಾಡಿದರೂ ಆಯೋಜಕರು ಅದಕ್ಕೆ ಜಗ್ಗದೇ, ಅಂತಹ ಅವಗಡಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮವನ್ನು ತೆಗೆದುಕೊಂಡು ಉತ್ಸವವನ್ನು ಮುಂದುವರಿಸಬೇಕು ಎಂಬ ನಿರ್ಧಾರ ಕೈಗೊಂಡರು. ಮುಂದೆ ಈ ಘಟನೆ ಕೂಡ ಉತ್ಸವದ ಇತಿಹಾಸದ ಒಂದು ಪ್ರಮುಖ ಅಧ್ಯಾಯವಾಯಿತು.

ಗಣೇಶೋತ್ಸವದಿಂದ ಸಮಾಜ ಸೇವೆಯತ್ತ

Bengaluru Ganesh Utsava 2025 returns

ಬೆಂಗಳೂರು ಗಣೇಶೋತ್ಸವದ ಮತ್ತೊಂದು ವಿಶೇಷತೆ ಎಂದರೆ ಧಾರ್ಮಿಕ ಆಚರಣೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಅಳವಡಿಸಿಕೊಂಡಿರುವುದು. 1978ರಲ್ಲಿ ಆಂಧ್ರಪ್ರದೇಶದಲ್ಲಿ ಚಂಡಮಾರುತ ಮತ್ತು ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ನೆರವಾಗಲು ಉತ್ಸವದ ಸಂಘಟಕರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ, ವಾಣಿ ಜಯರಾಮ್ ಮತ್ತು ಎಸ್.ಪಿ. ಶೈಲಜಾ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು. ಚಿತ್ರರಂಗದ ಹಲವು ಗಣ್ಯರೂ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದರು. ಸಂಗ್ರಹವಾದ ಹಣವನ್ನು ರಾಮಕೃಷ್ಣ ಮಿಷನ್ ಮೂಲಕ ಪ್ರವಾಹ ಸಂತ್ರಸ್ತರಿಗೆ ನೆರವಿಗಾಗಿ ನೀಡಲಾಯಿತು. ಇದರಿಂದ ಗಣೇಶೋತ್ಸವವು ಕೇವಲ ಭಕ್ತಿಯ ವೇದಿಕೆಯಲ್ಲ, ಸಾಮಾಜಿಕ ಸೇವೆಯ ವೇದಿಕೆಯೂ ಆಗಬಹುದು ಎಂಬ ಹೊಸ ಆಯಾಮವನ್ನು ಪಡೆದುಕೊಂಡಿತು.

ಕನ್ನಡ ಸಂಸ್ಕೃತಿಗೂ ಪ್ರಮುಖ ವೇದಿಕೆ

ಬೆಂಗಳೂರು ಗಣೇಶೋತ್ಸವದ ಮೂಲ ಉದ್ದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರೋತ್ಸಾಹವೂ ಪ್ರಮುಖವಾಗಿತ್ತು. ಸಾಹಿತ್ಯ, ಸಂಗೀತ, ನಾಟಕ, ನೃತ್ಯ, ಜಾನಪದ ಕಲೆ ಮತ್ತು ಶಾಸ್ತ್ರೀಯ ಸಂಗೀತಕ್ಕೆ ವೇದಿಕೆ ಒದಗಿಸುವ ಮೂಲಕ ಹಲವು ಪ್ರತಿಭೆಗಳಿಗೆ ದೊಡ್ಡ ಪ್ರೇಕ್ಷಕರನ್ನು ತಲುಪುವ ಅವಕಾಶ ದೊರೆಯಿತು. ನಂತರ ಉತ್ಸವದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೂ ಸ್ಥಾನ ದೊರೆಯಿತು. ಹಂಪಿಯ ವಿದ್ಯಾರಣ್ಯ ಮಹಾಸಂಸ್ಥಾನದ ಶ್ರೀ ನರಸಿಂಹಭಾರತಿ ಸ್ವಾಮಿಗಳ ಪ್ರೋತ್ಸಾಹದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಆರಂಭಗೊಂಡಿತು ಎಂಬ ಮಾಹಿತಿಯೂ ಉತ್ಸವದ ಇತಿಹಾಸದಲ್ಲಿ ದಾಖಲಾಗಿದೆ.

2003: ಯುವಕರಿಗೆ ಹೊಣೆಗಾರಿಕೆ

ಯಾವುದೇ ಸಂಸ್ಥೆ ಹಲವು ದಶಕಗಳ ಕಾಲ ಉಳಿಯಬೇಕಾದರೆ ಹೊಸ ತಲೆಮಾರಿನ ಭಾಗವಹಿಸುವಿಕೆ ಅತ್ಯಗತ್ಯ. ಈ ದೃಷ್ಟಿಯಿಂದ ಬೆಂಗಳೂರು ಗಣೇಶೋತ್ಸವದ ಇತಿಹಾಸದಲ್ಲಿ 2003ನೇ ವರ್ಷ ಒಂದು ಮಹತ್ವದ ತಿರುವು. ಸ್ಥಾಪಕ ತಲೆಮಾರಿನ ನಂತರ ಯುವಕರಿಗೆ ಹೆಚ್ಚಿನ ಹೊಣೆಗಾರಿಕೆ ಹಸ್ತಾಂತರಿಸಲಾಯಿತು. ಎ. ಮರಿಯಪ್ಪ ಅವರ ಪುತ್ರ ಎಸ್.ಎಂ. ನಂದೀಶ್ ನೇತೃತ್ವದ ಯುವ ತಂಡ ಉತ್ಸವದ ಜವಾಬ್ದಾರಿಯನ್ನು ವಹಿಸಿಕೊಂಡಿತು. ಹೊಸ ತಲೆಮಾರು ಉತ್ಸವಕ್ಕೆ ವೃತ್ತಿಪರ ನಿರ್ವಹಣೆ, ಹೊಸ ಆಲೋಚನೆ ಮತ್ತು ಆಧುನಿಕ ಪ್ರಚಾರ ವಿಧಾನಗಳನ್ನು ತಂದಿತು.

2007ರಲ್ಲಿ ಎಪಿಎಸ್ ಕಾಲೇಜು ಮೈದಾನಕ್ಕೆ

May be an image of temple, crowd and text

ಉತ್ಸವದ ಜನಪ್ರಿಯತೆ ಹೆಚ್ಚಿದಂತೆ ಹಳೆಯ ಸ್ಥಳಗಳು ಸಾಕಾಗಲಿಲ್ಲ. 2007ರಲ್ಲಿ ಉತ್ಸವವನ್ನು ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಯಿತು. ನಂತರ ರಾಷ್ಟ್ರೀಯ ಕಾಲೇಜು ಮೈದಾನವೂ ಉತ್ಸವದ ಪ್ರಮುಖ ವೇದಿಕೆಯಾಯಿತು. ಈ ಸ್ಥಳಾಂತರದೊಂದಿಗೆ ಉತ್ಸವದ ಪ್ರಮಾಣವೂ ಹೆಚ್ಚಾಯಿತು.

2008ರಲ್ಲಿ ಬೆಂಗಳೂರು ಗಣೇಶೋತ್ಸವ ಎಂಬ ಹೊಸ ರೂಪ

2008ರಲ್ಲಿ ಗಣೇಶೋತ್ಸವವನ್ನು ‘Bengaluru Ganesh Utsava – BGU’ ಎಂಬ ಹೊಸ ರೂಪದಲ್ಲಿ ಮರುಬ್ರ್ಯಾಂಡಿಂಗ್ ಮಾಡಲಾಯಿತು. ಹೊಸ ತಲೆಮಾರಿನ ಸಂಘಟಕರು ಸಾಂಪ್ರದಾಯಿಕ ಭಕ್ತಿಯ ಜೊತೆಗೆ ಆಧುನಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೇರಿಸಿದರು. ಸಂಗೀತ, ನೃತ್ಯ, ನಾಟಕ, ಜಾನಪದ ಕಲೆ, ಆಹಾರ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಸ್ಥಾನ ದೊರೆಯಿತು.

ಬೆಂಗಳೂರು ಗಣೇಶೋತ್ಸವದ ವಿಶ್ವ ದಾಖಲೆಗಳು ಮತ್ತು ಸಾಧನೆಗಳು

  • ವಿಶ್ವ ದಾಖಲೆಗಳು ಮತ್ತು ಸಾಧನೆಗಳು: ಬೆಂಗಳೂರು ಗಣೇಶೋತ್ಸವವು ತನ್ನ ನೂತನ ಪ್ರಯೋಗಗಳಿಂದ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿದೆ. ಪರಿಸರ ಜಾಗೃತಿಗಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ೩೦೦೦ಕ್ಕೂ ಹೆಚ್ಚು ಬೀಜದ ಜೇಡಿಮಣ್ಣಿನ ಗಣೇಶ ಮೂರ್ತಿಗಳನ್ನು (Seed Ganeshas) ಏಕಕಾಲಕ್ಕೆ ತಯಾರಿಸಿ ಗಿನ್ನೆಸ್ ದಾಖಲೆ ಬರೆಯಲಾಗಿತ್ತು. ಒಮ್ಮೆ ೫೦೦ ಶಾಸ್ತ್ರೀಯ ನೃತ್ಯ ಕಲಾವಿದರು ಏಕಕಾಲದಲ್ಲಿ ನೃತ್ಯ ಪ್ರದರ್ಶನ ನೀಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದರು.
  • ಪರಿಸರಸ್ನೇಹಿ ಆಚರಣೆ (Eco-Friendly Initiative): ಹಬ್ಬದ ಭವ್ಯತೆಯ ನಡುವೆಯೂ ಪರಿಸರ ಸಂರಕ್ಷಣೆಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಮೂರ್ತಿಗಳ ಬದಲಿಗೆ ಸಂಪೂರ್ಣವಾಗಿ ಜೇಡಿಮಣ್ಣು ಹಾಗೂ ನೈಸರ್ಗಿಕ ಬಣ್ಣಗಳಿಂದ ಸಿದ್ಧಗೊಂಡ ಗಣೇಶ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
  • ಉಚಿತ ಪ್ರವೇಶ ಮತ್ತು ಸಾರ್ವಜನಿಕ ಒಕ್ಕೂಟ: ಯಾವುದೇ ತಾರತಮ್ಯವಿಲ್ಲದೆ ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಉಚಿತ ಪ್ರವೇಶ ಕಲ್ಪಿಸಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಮತ್ತು ಕಲಾಪ್ರೇಮಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
  • ಕಲಾತ್ಮಕ ವಿನ್ಯಾಸ ಮತ್ತು ಆಹಾರ ಉತ್ಸವ: ಪ್ರತಿ ವರ್ಷವೂ ಮಂಟಪದ ವಿನ್ಯಾಸವನ್ನು ಭಾರತದ ಪ್ರಸಿದ್ಧ ದೇವಾಲಯಗಳ (ಉದಾಹರಣೆಗೆ ಮೈಸೂರು ಅರಮನೆ, ಮೇಲುಕೋಟೆ ದೇವಸ್ಥಾನ ಇತ್ಯಾದಿ) ಮಾದರಿಯಲ್ಲಿ ಅತ್ಯಂತ ಭವ್ಯವಾಗಿ ನಿರ್ಮಿಸಲಾಗುತ್ತದೆ. ಇದರೊಂದಿಗೆ ಕರ್ನಾಟಕದ ವಿವಿಧ ಭಾಗಗಳ ಸಾಂಪ್ರದಾಯಿಕ ಅಡುಗೆಗಳನ್ನು ಉಣಬಡಿಸುವ ‘ಕರ್ನಾಟಕದ ಪರಿಮಳಗಳು’ ಎಂಬ ಆಹಾರ ಮೇಳವೂ ಜನರ ನೆಚ್ಚಿನ ಆಕರ್ಷಣೆಯಾಗಿದೆ.

ಆಹಾರವೂ ಗಣೇಶೋತ್ಸವದ ಭಾಗವಾಯಿತು

ಕರ್ನಾಟಕದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ‘Aromas of Karnataka’ ಮುಂತಾದ ಕಾರ್ಯಕ್ರಮಗಳು ಉತ್ಸವದ ಮತ್ತೊಂದು ಆಕರ್ಷಣೆಯಾದವು. ಉತ್ತರ ಕರ್ನಾಟಕದ ಗೋಕಾಕ ಕರದಂಟಿನಿಂದ ಹಿಡಿದು ಮಲೆನಾಡಿನ ಹಲಸಿನ ಮುಳಕ, ಕರಾವಳಿಯ ಇಡೀಯಪ್ಪಂ, ದಾವಣಗೆರೆ ಬೆಣ್ಣೆ ದೋಸೆ, ಕೊಟ್ಟೆ ಕಡುಬು, ಮದ್ದೂರು ವಡೆ ಸೇರಿದಂತೆ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಆಹಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಲಾಯಿತು. ಒಂದು ಆವೃತ್ತಿಯಲ್ಲಿ ಕರ್ನಾಟಕದ ವಿವಿಧ ಭಾಗಗಳ 130ಕ್ಕೂ ಹೆಚ್ಚು ಸಾಂಪ್ರದಾಯಿಕ ಸಸ್ಯಾಹಾರಿ ಖಾದ್ಯಗಳನ್ನು ಪರಿಚಯಿಸಲಾಗಿತ್ತು ಎಂದು ವರದಿಯಾಗಿದೆ. ಇದರಿಂದ ಗಣೇಶೋತ್ಸವವು ಕಲೆ ಮತ್ತು ಭಕ್ತಿಯ ಜೊತೆಗೆ ಕರ್ನಾಟಕದ ಆಹಾರ ಸಂಸ್ಕೃತಿಯ ಉತ್ಸವವೂ ಆಯಿತು.

6,000 ಕೆ.ಜಿ. ಲಡ್ಡು!

May be an image of temple and text

ಬೆಂಗಳೂರು ಗಣೇಶೋತ್ಸವದ ಕೆಲವು ವಿಶೇಷತೆಗಳು ಇಂದಿಗೂ ಅಚ್ಚರಿಗೊಳಿಸುತ್ತವೆ. ಒಂದು ಸಂದರ್ಭದಲ್ಲಿ ಬರೋಬ್ಬರಿ 6,000 ಕೆ.ಜಿ. ತೂಕದ ಬೃಹತ್ ಲಡ್ಡು ತಯಾರಿಸಲಾಗಿತ್ತು. ಅದಕ್ಕೆ ಸುಮಾರು 1,500 ಕೆ.ಜಿ. ಕಡಲೆ, 1,700 ಕೆ.ಜಿ. ತುಪ್ಪ, 500 ಕೆ.ಜಿ. ಒಣದ್ರಾಕ್ಷಿ ಮತ್ತು 2,400 ಕೆ.ಜಿ. ಸಕ್ಕರೆ ಬಳಸಲಾಗಿತ್ತು. ಇದನ್ನು ತಯಾರಿಸಲು 100ಕ್ಕೂ ಹೆಚ್ಚು ಮಂದಿ ಕೆಲಸ ಮಾಡಿದ್ದರು ಎಂದು ಉತ್ಸವದ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ನಂತರ ಈ ಲಡ್ಡುವನ್ನು ಪ್ರಸಾದವಾಗಿ ಭಕ್ತರಿಗೆ ಹಂಚಲಾಯಿತು.

ಸಾವಿರಾರು ದೀಪಗಳ ಬೆಳಕಿನಲ್ಲಿ ಗಣೇಶೋತ್ಸವ

May be an image of text

ಬೆಂಗಳೂರು ಗಣೇಶೋತ್ಸವದ ಮತ್ತೊಂದು ಮನಮೋಹಕ ದೃಶ್ಯವೆಂದರೆ ದೀಪೋತ್ಸವ. ಕೆಲವು ಆವೃತ್ತಿಗಳಲ್ಲಿ ಗಣೇಶ ಆರತಿಗೆ ಮುನ್ನ 10,000ಕ್ಕೂ ಹೆಚ್ಚು ಎಣ್ಣೆಯ ದೀಪಗಳನ್ನು ಬೆಳಗಿಸಲಾಗುತ್ತಿತ್ತು. ಎಪಿಎಸ್ ಕಾಲೇಜು ಮೈದಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಾವಿರಾರು ದೀಪಗಳಿಂದ ಕಂಗೊಳಿಸುತ್ತಿದ್ದವು. ಅಂತಹ ದೃಶ್ಯಗಳು ಉತ್ಸವಕ್ಕೆ ಧಾರ್ಮಿಕ ಭಾವನೆಯ ಜೊತೆಗೆ ಅಪೂರ್ವ ದೃಶ್ಯ ವೈಭವವನ್ನೂ ನೀಡಿವೆ.

ರಂಗೋಲಿ ಉತ್ಸವದಿಂದ ಮಹಿಳೆಯರ ಪಾಲ್ಗೊಳ್ಳುವಿಕೆ

Ganesh Chaturthi Rangoli: ಗಣೇಶ ಚತುರ್ಥಿಗೆ ಸುಲಭವಾದ ರಂಗೋಲಿ ಐಡಿಯಾ! ಇಲ್ಲಿವೆ ಆಕರ್ಷಕ ರಂಗೋಲಿ ಡಿಸೈನ್‌ | Times Now Kannada

ಉತ್ಸವದ ಮತ್ತೊಂದು ಗಮನಾರ್ಹ ಪ್ರಯತ್ನವೆಂದರೆ ‘ರಂಗರಂಗ್’ ರಂಗೋಲಿ ಉತ್ಸವ. ಮಹಿಳೆಯರಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ದೊಡ್ಡ ವೇದಿಕೆ ಕಲ್ಪಿಸಲಾಯಿತು. 2010ರ ವೇಳೆಗೆ ಈ ಕಾರ್ಯಕ್ರಮವು ನೂರಾರು ಮಹಿಳೆಯರನ್ನು ಒಳಗೊಂಡ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೆಳೆದಿತ್ತು. ನಂತರ ಮಹಿಳೆಯರ ವಿಶೇಷ ತಂಡವೂ ಉತ್ಸವದ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿತು.

ಕಲಾವಿದರ ಸಂಗಮ

May be an image of dancing, violin and text

ದಶಕಗಳ ಅವಧಿಯಲ್ಲಿ ಬೆಂಗಳೂರು ಗಣೇಶೋತ್ಸವದ ವೇದಿಕೆಗೆ ದೇಶದ ಹಲವು ಪ್ರಮುಖ ಕಲಾವಿದರು ಆಗಮಿಸಿದ್ದಾರೆ. ಶಾಸ್ತ್ರೀಯ ಸಂಗೀತಗಾರರು, ಸುಗಮ ಸಂಗೀತದ ಗಾಯಕರು, ಚಲನಚಿತ್ರ ಸಂಗೀತಗಾರರು, ನೃತ್ಯ ಕಲಾವಿದರು, ನಾಟಕ ತಂಡಗಳು, ಜಾನಪದ ಕಲಾವಿದರು ಮತ್ತು ಪ್ರಸಿದ್ಧ ಮನರಂಜನಾ ಕ್ಷೇತ್ರದ ವ್ಯಕ್ತಿಗಳು ಇಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇದರ ಪರಿಣಾಮವಾಗಿ ಗಣೇಶೋತ್ಸವವು ಒಂದು ಧಾರ್ಮಿಕ ಕಾರ್ಯಕ್ರಮ ಎಂಬ ಸೀಮಿತ ಅರ್ಥವನ್ನು ಮೀರಿ, ಕಲೆ–ಸಂಸ್ಕೃತಿಯ ಸಾರ್ವಜನಿಕ ವೇದಿಕೆಯಾಗಿ ಗುರುತಿಸಿಕೊಂಡಿದೆ.

ಚಂಡೆ–ತಮಟೆಯ ತಾಳಕ್ಕೆ ಹೆಜ್ಜೆ ಹಾಕುವ ಹೆಣ್ಣುಮಕ್ಕಳು!

Bengaluru Ganesh Utsava | Frames from Beat Gurus at the 64th Bengaluru Ganesh Utsava, where percussion became prayer and the crowd found the rhythm without being... | Instagram

ಬೆಂಗಳೂರು ಗಣೇಶೋತ್ಸವದಲ್ಲಿ ಹೆಣ್ಣುಮಕ್ಕಳು ಚಂಡೆ–ತಮಟೆ ನುಡಿಸುವುದು ಇತ್ತೀಚಿನ ವರ್ಷಗಳ ವಿಶೇಷ ಆಕರ್ಷಣೆಯಾಗಿದೆ. ನೂರಾರು ಮಹಿಳೆಯರು ಒಂದಾಗಿ ಒಂದೇ ಲಯದಲ್ಲಿ ವಾದ್ಯ ನುಡಿಸುವ ಸಮೂಹ ಪ್ರದರ್ಶನ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡುತ್ತಿದೆ. ಈ ಪ್ರದರ್ಶನದಲ್ಲಿ ಭಾಗವಹಿಸುವ ಬಹುತೇಕ ಹೆಣ್ಣು ಮಕ್ಕಳ ವೃತ್ತಿಪರ ವಾದ್ಯಗಾರ್ತಿಯರಾಗಿರದೇ, ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುವವರು, ಬೆಂಗಳೂರು ಗಣೇಶೋತ್ಸವಕ್ಕಾಗಿಯೇ ವಿಶೇಷವಾಗಿ ತಿಂಗಳುಗಟ್ಟಲೆ ಮುಂಚಿತವಾಗಿ ಬೀಟ್ ಗುರುಸ್ (Beat Gurus) ನಂತಹ ತಜ್ಞರಿಂದ ಕಠಿಣ ತರಬೇತಿ ಪಡೆದು, ಗಣೇಶನ ಸಂಜೆಯ ಮಹಾಮಂಗಳಾರತಿಯ ಸಮಯದಲ್ಲಿ ಭಕ್ತಿಯ ಪರಾಕಾಷ್ಠೆಯಿಂದ ಇವರು ನುಡಿಸುವ ಚಂಡೆಯ ಸದ್ದು ನೆರೆದ ಭಕ್ತರಲ್ಲಿ ಮೈ ರೋಮಾಂಚನಗೊಳಿಸುತ್ತದೆ.

ಸಾಂಪ್ರದಾಯಿಕ ಉಡುಗೆಯಲ್ಲಿ, ಕಠಿಣ ತರಬೇತಿ ಪಡೆದು ಭಕ್ತಿ ಮತ್ತು ಉತ್ಸಾಹದಿಂದ ಚಂಡೆ–ತಮಟೆ ನುಡಿಸುವ ಮಹಿಳೆಯರ ಪ್ರದರ್ಶನ ನೆರೆದ ಭಕ್ತರನ್ನು ರೋಮಾಂಚನಗೊಳಿಸುತ್ತದೆ. ಹಿಂದೆ ಪುರುಷ ಪ್ರಧಾನವಾಗಿದ್ದ ಈ ಕಲಾಪ್ರಕಾರದಲ್ಲಿ ಮಹಿಳೆಯರೂ ಸಮರ್ಥವಾಗಿ ಪಾಲ್ಗೊಳ್ಳುವ ಮೂಲಕ ಪರಂಪರೆ ಮತ್ತು ಮಹಿಳಾ ಸಬಲೀಕರಣದ ಸುಂದರ ಸಂಯೋಜನೆಯನ್ನು ತೋರಿಸುತ್ತಿದ್ದಾರೆ.

ಗಣೇಶ ವಿಸರ್ಜನೆ

ಬೆಂಗಳೂರಿನ ಗಣೇಶ ವಿಸರ್ಜನಾ ಮೆರವಣಿಗೆ ಭಕ್ತಿ, ಜನಪದ ಕಲೆ ಮತ್ತು ಸಾಂಸ್ಕೃತಿಕ ವೈಭವದ ಅಪೂರ್ವ ಸಂಗಮವಾಗಿದೆ. ಅಲಂಕೃತ ಗಣೇಶ ರಥದೊಂದಿಗೆ ಸಾಗುವ ಮೆರವಣಿಗೆಯಲ್ಲಿ ಚಂಡೆ, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಕೋಲಾಟ, ನಂದಿಕೋಲು, ಕಿಲುಕುದುರೆ ಹಾಗೂ ಪಟದ ಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಭಾಗವಹಿಸುತ್ತವೆ. ದೀಪಾಲಂಕೃತ ರಥಗಳು, ಪಲ್ಲಕ್ಕಿಗಳು, ಸಂಗೀತ ಮತ್ತು ಸಾವಿರಾರು ಭಕ್ತರ ಸಂಭ್ರಮ ಮೆರವಣಿಗೆಗೆ ವಿಶೇಷ ಮೆರುಗು ನೀಡುತ್ತವೆ. ಈ ಸಂದರ್ಭದಲ್ಲಿ ಸುಮಾರು 25,000 ಲಡ್ಡುಗಳನ್ನು ಪ್ರಸಾದವಾಗಿ ವಿತರಿಸುವುದು ಕೂಡ ವಿಶೇಷ.

ಪರಿಸರ ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಯಡಿಯೂರು ಕೆರೆಯಲ್ಲಿ ವಿಸರ್ಜನೆಯನ್ನು ನಿಲ್ಲಿಸಿ, ಶುದ್ಧ ನೀರಿನ ಕೃತಕ ವಿಸರ್ಜನಾ ವ್ಯವಸ್ಥೆ ರೂಪಿಸಲಾಗಿದೆ. ವಿಸರ್ಜನೆಯ ನಂತರದ ನೀರನ್ನು ಕೃಷಿ ಹಾಗೂ ಸಸ್ಯಗಳಿಗೆ ಬಳಸಲಾಗುತ್ತದೆ. 54ನೇ ವರ್ಷದಿಂದ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣೇಶನನ್ನು ಸಣ್ಣ ನೀರಿನ ತೊಟ್ಟಿಯಲ್ಲಿ ವಿಸರ್ಜಿಸುವ ಪದ್ಧತಿಯೂ ರೂಢಿಯಾಯಿತು. ಕೋವಿಡ್‌ನ 58ನೇ ಮತ್ತು 59ನೇ ವರ್ಷಗಳಲ್ಲಿ ಮೆರವಣಿಗೆಗೆ ನಿರ್ಬಂಧವಿದ್ದ ಕಾರಣ, ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ನಿರ್ಮಿಸಿದ್ದ ಸಣ್ಣ ಕೊಳದಲ್ಲೇ ಸರಳವಾಗಿ ವಿಸರ್ಜನೆ ನೆರವೇರಿಸಲಾಯಿತು. ಮೆರವಣಿಗೆ ಸೀಮಿತವಾಗಿದ್ದರೂ ಭಕ್ತಿಯ ಸಂಭ್ರಮ ಮಾತ್ರ ಎಂದಿನಂತೆಯೇ ಕಂಗೊಳಿಸಿತು.

ಗಣೇಶೋತ್ಸವದ ಮತ್ತೊಂದು ಮುಖ, ಸಮಾಜ ಸೇವೆ

ಶ್ರೀ ವಿದ್ಯಾರಣ್ಯ ಯುವಕ ಸಂಘದ ಚಟುವಟಿಕೆಗಳು ಗಣೇಶೋತ್ಸವಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬಡ ವಿದ್ಯಾರ್ಥಿಗಳಿಗೆ ನೆರವು, ಆರೋಗ್ಯ ಶಿಬಿರಗಳು, ರಕ್ತದಾನ ಕಾರ್ಯಕ್ರಮಗಳು, ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸಹಾಯ, ಸಾಮಾಜಿಕ ಸೇವೆ ಮಾಡಿದವರ ಸನ್ಮಾನ, ಕ್ರೀಡಾ ಚಟುವಟಿಕೆಗಳು ಮುಂತಾದ ಕಾರ್ಯಕ್ರಮಗಳನ್ನೂ ಸಂಘಟನೆಯು ನಡೆಸಿದೆ ಎಂದು ಅದರ ಇತಿಹಾಸದಲ್ಲಿ ವಿವರಿಸಲಾಗಿದೆ. ಹೀಗಾಗಿ ಇಲ್ಲಿ ಗಣಪತಿಯ ಪೂಜೆಯ ಜೊತೆಗೆ ಸಮಾಜದ ಸೇವೆಯೂ ಒಂದು ಪರಂಪರೆಯಾಗಿ ಬೆಳೆದಿದೆ.

2026ರಲ್ಲಿ 64ನೇ ವರ್ಷದ ಸಂಭ್ರಮ

2026ಕ್ಕೆ ಬೆಂಗಳೂರು ಗಣೇಶೋತ್ಸವ ತನ್ನ 64ನೇ ಆವೃತ್ತಿಗೆ ತಲುಪಿದೆ. , 2026ರ ಉತ್ಸವವು ಸೆಪ್ಟೆಂಬರ್ 14ರಿಂದ 26ರವರೆಗೆ ನಡೆದಿದ್ದು, ಬಸವನಗುಡಿಯ ಈ ಉತ್ಸವದಲ್ಲಿ ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಶ್ರೀ ಗಣೇಶ ಪಂಚರತ್ನ ಆರಾಧನೆ ವಿಶೇಷ ಆಕರ್ಷಣೆಯಾಗಿದೆ. ಸೆಪ್ಟೆಂಬರ್ 20ರಂದು 10,000ಕ್ಕೂ ಹೆಚ್ಚು ಭಕ್ತರು ಒಟ್ಟಾಗಿ ಶ್ರೀ ಗಣೇಶ ಪಂಚರತ್ನ ಸ್ತೋತ್ರವನ್ನು ಪಠಿಸುವ ಕಾರ್ಯಕ್ರಮ ಬಹಳ ಯಶಸ್ವಿಯಾಗಿದ್ದು, ಮುಂದಿನ ವರ್ಷ ಮತ್ತೊಂದು ಹೊಸಾ ಸಾಧನೆಯನ್ನು ಮಾಡಲು ಪ್ರೇರೇಪಿಸಿದೆ.  ಇದು 1962ರಲ್ಲಿ ಸರಳವಾಗಿ ಆರಂಭವಾದ ಕಾರ್ಯಕ್ರಮ ಆರು ದಶಕಗಳಲ್ಲಿ ಎಷ್ಟು ದೊಡ್ಡ ಸಾಂಸ್ಕೃತಿಕ ಪರಂಪರೆಯಾಗಿ ಬೆಳೆದಿದೆ ಎಂಬುದಕ್ಕೆ ಒಂದು ಉದಾಹರಣೆ.

ಬೆಂಗಳೂರು ಗಣೇಶೋತ್ಸವದ ವೈಶಿಷ್ಟ್ಯವೇನು?

ಬೆಂಗಳೂರು ಗಣೇಶೋತ್ಸವವನ್ನು ಇತರ ಗಣೇಶೋತ್ಸವಗಳಿಂದ ಪ್ರತ್ಯೇಕಿಸುವ ಕೆಲವು ಪ್ರಮುಖ ಅಂಶಗಳಿವೆ:

  • ಮೊದಲನೆಯದು – ಭಕ್ತಿ : ಗಣಪತಿ ಆರಾಧನೆಯೇ ಉತ್ಸವದ ಮೂಲ.
  • ಎರಡನೆಯದು – ಸಂಗೀತ: ದೇಶದ ಪ್ರಸಿದ್ಧ ಕಲಾವಿದರಿಗೆ ವೇದಿಕೆ ಕಲ್ಪಿಸಿರುವ ದೀರ್ಘ ಪರಂಪರೆ ಇಲ್ಲಿದೆ.
  • ಮೂರನೆಯದು – ಕನ್ನಡ ಸಂಸ್ಕೃತಿ : ಕನ್ನಡ ಸಾಹಿತ್ಯ, ನಾಟಕ, ಜಾನಪದ ಕಲೆ ಮತ್ತು ಸಂಗೀತಕ್ಕೆ ಪ್ರೋತ್ಸಾಹ ನೀಡುವುದು ಉತ್ಸವದ ಮೂಲ ಆಶಯಗಳಲ್ಲಿ ಒಂದಾಗಿದೆ.
  • ನಾಲ್ಕನೆಯದು – ಸಾಮಾಜಿಕ ಸೇವೆ : ಪ್ರವಾಹ ಸಂತ್ರಸ್ತರಿಗೆ ನೆರವಿನಿಂದ ಹಿಡಿದು ಆರೋಗ್ಯ ಶಿಬಿರ, ರಕ್ತದಾನ ಮತ್ತು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವವರೆಗೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಸಂಘಟನೆ ತೊಡಗಿಕೊಂಡಿದೆ.
  • ಐದನೆಯದು – ಹೊಸತನ : ರಂಗೋಲಿ ಉತ್ಸವ, ಕರ್ನಾಟಕದ ಆಹಾರ ಮೇಳ, ಬೃಹತ್ ಲಡ್ಡು, ದೀಪೋತ್ಸವ, ಸಾಮೂಹಿಕ ಸ್ತೋತ್ರ ಪಠಣ ಮುಂತಾದ ವಿಭಿನ್ನ ಪ್ರಯೋಗಗಳು ಉತ್ಸವಕ್ಕೆ ಹೊಸ ಆಯಾಮಗಳನ್ನು ನೀಡಿವೆ.

1962ರ ನಾಲ್ಕು ರೂಪಾಯಿಯ ಗಣಪತಿಯಿಂದ ಇಂದಿನ ಮಹೋತ್ಸವದವರೆಗೆ…

ಒಮ್ಮೆ ₹4ಕ್ಕೆ ಖರೀದಿಸಿದ ಗಣೇಶ ಮೂರ್ತಿಯಿಂದ ಆರಂಭವಾದ ಉತ್ಸವ ಇಂದು ಸಾವಿರಾರು ಭಕ್ತರು ಮತ್ತು ಕಲಾಭಿಮಾನಿಗಳನ್ನು ಸೆಳೆಯುವ ಮಹತ್ವದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೆಳೆದಿದೆ ಎಂಬುದು ನಿಜಕ್ಕೂ ಗಮನಾರ್ಹ. 1962ರಲ್ಲಿ ಕೆಲ ಯುವಕರ ಸಣ್ಣ ಕನಸಾಗಿ ಆರಂಭವಾದದ್ದು, 2026ರಲ್ಲಿ 64 ವರ್ಷಗಳ ಸಾಂಸ್ಕೃತಿಕ ಪರಂಪರೆಯಾಗಿ ಬೆಳೆದಿದೆ. ಇದೇ ಬೆಂಗಳೂರು ಗಣೇಶೋತ್ಸವದ ನಿಜವಾದ ಕಥೆ.

ಲೋಕಮಾನ್ಯ ಬಾಲಗಂಗಾಧರ ತಿಲಕರು ದೇಶದ ಸ್ವಾತಂತ್ರ್ಯ ಚಳುವಳಿಗಾಗಿ ಜನರನ್ನು ಒಟ್ಟುಗೂಡಿಸಲು ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಅದೇ ಆಶಯವನ್ನು ಮುಂದುವರಿಸಿಕೊಂಡು ಬಂದಿರುವ Sri Vidyaranya Yuvaka Sangha, ಕಲೆ ಮತ್ತು ಸಂಸ್ಕೃತಿಯ ಮೂಲಕ ಜನರನ್ನು ಬೆಸೆಯುವ ಮಹತ್ತರ ಕಾರ್ಯವನ್ನು “ಬೆಂಗಳೂರು ಗಣೇಶೋತ್ಸವ”ದ ಮೂಲಕ ಯಶಸ್ವಿಯಾಗಿ ಮಾಡುತ್ತಾ ಬಂದಿದೆ. ಇಂದು ಇದು ಕೇವಲ ಬೆಂಗಳೂರಿನ ಹಬ್ಬವಾಗಿ ಉಳಿಯದೆ, ಇಡೀ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಸಂಕೇತವಾಗಿ ಹೊರಹೊಮ್ಮಿದೆ.  ಗಣಪತಿಯ ಭಕ್ತಿಯಿಂದ ಆರಂಭವಾಗಿ, ಕನ್ನಡದ ಕಲೆ–ಸಂಸ್ಕೃತಿಯನ್ನು ಅಪ್ಪಿಕೊಂಡು, ಸಮಾಜ ಸೇವೆಯ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ತಲೆಮಾರುಗಳಿಂದ ತಲೆಮಾರಿಗೆ ಸಾಗುತ್ತಿರುವ ಈ ಉತ್ಸವ—ಬೆಂಗಳೂರಿನ ಸಾಂಸ್ಕೃತಿಕ ಹೃದಯದ ಒಂದು ಸ್ಪಂದನವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply