ಅತಿಯಾಗಿ ದುರುಪಯೋಗವಾಗುತ್ತಿದೆಯೇ ಜಾತಿ ನಿಂದನೆ ಕಾಯ್ದೆ?

ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಅವಮಾನ, ಹಿಂಸೆ ಮತ್ತು ಆಸ್ತಿ/ಜೀವನದ ಮೇಲಿನ ದೌರ್ಜನ್ಯಗಳು ದೀರ್ಘಕಾಲದಿಂದಲೂ ಸಾಮಾಜಿಕ ವಾಸ್ತವಿಕತೆಯ ಭಾಗವಾಗಿದ್ದವು. ಸಂವಿಧಾನದ ವಿಧಿ 17 ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ರದ್ದುಪಡಿಸಿದರೂ, ಅದನ್ನು ತಡೆಯಲು 1955ರ Protection of Civil Rights Act ಜಾರಿಗೆ ಬಂದರೂ, ಅನುಸೂಚಿತ ಜಾತಿ ಮತ್ತು ಪಂಗಡಗಳ ವಿರುದ್ಧದ ಗಂಭೀರ ದೌರ್ಜನ್ಯಗಳನ್ನು ತಡೆಯಲು ಪ್ರತ್ಯೇಕ ಮತ್ತು ಹೆಚ್ಚು ಪರಿಣಾಮಕಾರಿ ಕಾನೂನು ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ 1989ರಲ್ಲಿ SC/ST (Prevention of Atrocities) Act ಜಾರಿಗೆ ಬಂತು. 1989ರ ಕಾಯ್ದೆಯ ಉದ್ದೇಶ ಕೇವಲ “ಜಾತಿ ನಿಂದನೆಗೆ ಶಿಕ್ಷೆ” ನೀಡುವುದಲ್ಲ. ಇದರ ವ್ಯಾಪ್ತಿ ಬಹಳ ದೊಡ್ಡದು. ದೌರ್ಜನ್ಯ ತಡೆ, ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ, ಸಾಕ್ಷಿಗಳ ರಕ್ಷಣೆ ಹಾಗೂ ಸಂಬಂಧಿತ ಆಡಳಿತಾತ್ಮಕ ಹೊಣೆಗಾರಿಕೆಗಳನ್ನೂ ಇದು ಒಳಗೊಂಡಿದೆ.

ಕಾಯ್ದೆ ತರಲು ಕಾರಣವೇನು?

1989ರ ಕಾಯ್ದೆಯ ಉದ್ದೇಶ ಮತ್ತು ಕಾರಣಗಳನ್ನು ವಿವರಿಸುವ ದಾಖಲೆಗಳಲ್ಲಿ, SC/ST ಸಮುದಾಯಗಳು ಸಾಮಾಜಿಕವಾಗಿ ದುರ್ಬಲ ಸ್ಥಿತಿಯಲ್ಲಿ ಉಳಿದಿದ್ದು, ಅವರಿಗೆ ನಾಗರಿಕ ಹಕ್ಕುಗಳನ್ನು ನಿರಾಕರಿಸುವುದು, ಅವಮಾನಿಸುವುದು, ಕಿರುಕುಳ ನೀಡುವುದು, ಜೀವ ಮತ್ತು ಆಸ್ತಿಯ ಮೇಲೆಯೇ ದಾಳಿ ಮಾಡುವುದು ಮುಂತಾದ ಗಂಭೀರ ಘಟನೆಗಳು ನಡೆಯುತ್ತಿದ್ದವು ಎಂದು ದಾಖಲಿಸಲಾಗಿದೆ. ಇದರ ಜೊತೆಗೆ, ಶಿಕ್ಷಣ ಮತ್ತು ಜಾಗೃತಿಯಿಂದ SC/ST ಜನರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಆರಂಭಿಸಿದಾಗ, ಕೆಲವು ಪ್ರಭಾವಶಾಲಿ ಗುಂಪುಗಳು ಅದನ್ನು ವಿರೋಧಿಸಿ ಅವರನ್ನು ಹೆದರಿಸುವ ಅಥವಾ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದವು ಎಂಬುದೂ ಕಾಯ್ದೆಯ ಹಿನ್ನೆಲೆಯಲ್ಲಿತ್ತು.

ಅಂದರೆ, ಸಾಮಾನ್ಯ ಜಗಳವನ್ನು ಜಾತಿ ಜಗಳವನ್ನಾಗಿ ಮಾಡುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿರಲಿಲ್ಲ. ಜಾತಿಯ ಆಧಾರದ ಮೇಲೆ ನಡೆಯುವ ಅವಮಾನ, ದೌರ್ಜನ್ಯ ಮತ್ತು ಅಧಿಕಾರದ ದುರುಪಯೋಗದಿಂದ ದುರ್ಬಲ ಸಮುದಾಯಗಳನ್ನು ರಕ್ಷಿಸುವುದೇ ಅದರ ಮುಖ್ಯ ಉದ್ದೇಶ.

ಹಾಗಾದರೆ ಕಾಯ್ದೆ ಇಷ್ಟು ಕಠಿಣವಾಗಿರುವುದೇಕೆ?

ಕಾಯ್ದೆಯ ಕೆಲವು ನಿಬಂಧನೆಗಳು ಸಾಮಾನ್ಯ ಕ್ರಿಮಿನಲ್ ಕಾನೂನುಗಳಿಗಿಂತ ಕಠಿಣವಾಗಿವೆ. 2015-16ರ ತಿದ್ದುಪಡಿಗಳ ಮೂಲಕ ಹಲವು ಹೊಸ ಅಪರಾಧಗಳನ್ನು ಸೇರಿಸಲಾಯಿತು. ಸಂತ್ರಸ್ತರು ಮತ್ತು ಸಾಕ್ಷಿಗಳ ಹಕ್ಕುಗಳಿಗಾಗಿ Section 15A ಅನ್ನು ಸೇರಿಸಲಾಯಿತು. ವಿಶೇಷ ನ್ಯಾಯಾಲಯಗಳು ಮತ್ತು ತ್ವರಿತ ವಿಚಾರಣೆಯ ವ್ಯವಸ್ಥೆಯನ್ನೂ ಬಲಪಡಿಸಲಾಯಿತು.  2018ರ ತಿದ್ದುಪಡಿಯ ನಂತರ FIR ದಾಖಲಿಸುವ ಮೊದಲು preliminary enquiry ಅಗತ್ಯವಿಲ್ಲ ಎಂಬುದನ್ನು ಕಾನೂನಿನಲ್ಲಿ ಸ್ಪಷ್ಟಪಡಿಸಲಾಯಿತು ಮತ್ತು ಕೆಲವು ಸಂದರ್ಭಗಳಲ್ಲಿ ಬಂಧನಕ್ಕೆ ಪೂರ್ವಾನುಮತಿ ಅಗತ್ಯವಿಲ್ಲ ಎಂಬ ವ್ಯವಸ್ಥೆಯನ್ನೂ ತರಲಾಯಿತು.  ಆದರೆ ಇದರ ಅರ್ಥ ಯಾರಾದರೂ ದೂರು ನೀಡಿದರೆ ಆರೋಪ ಸಾಬೀತಾಗಿದೆ ಎಂದಲ್ಲ. FIR ಒಂದು ಆರೋಪದ ಆರಂಭ; ಅಂತಿಮವಾಗಿ ಪ್ರಕರಣದ ಸತ್ಯಾಸತ್ಯತೆ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯ ಮೂಲಕ ನಿರ್ಧಾರವಾಗುತ್ತದೆ.

ಕಾಯ್ದೆ ದುರುಪಯೋಗ ಹೇಗಾಗುತ್ತಿದೆ ?

ಶತ ಶತಮಾನಗಳಿಂದ ಅನುಭವಿಸಿರಬಹುದು ಎನ್ನಲಾಗುವ ಮತ್ತು ಇಂದಿಗೂ ಕೆಲವರು ಅದೇ ದೌರ್ಜನ್ಯವನ್ನು ಮುನ್ನಡೆಸುತ್ತಿರುವವರನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಕಾನೂನಿನ ಮೂಲಕ ಲಭಿಸಿದ ಜಾತಿ ನಿಂದನೆಯನ್ನು ಅವಶ್ಯಕವಿದ್ದಾಗ ಮಾತ್ರವೇ ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳುವ ಬದಲು ತಮ್ಮ ವಯಕ್ತಿಕ ಲಾಭಕ್ಕಾಗಿ ಗುರಾಣಿಯನ್ನಾಗಿಸಿಕೊಂಡು ತಮಗೆ ಆಗದವರ ವಿರುದ್ಧ ಅನಾವಶ್ಯಕವಾಗಿ ಬಳಸುವ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದ್ದು ಅಂತಹ ದುರುಪಯೋಗಗಳಲ್ಲಿ ಕೆಲವು ಪ್ರಸಂಗಗಳನ್ನು ನೋಡೋಣ ಬನ್ನಿ.

ಆಸ್ತಿ ವಿವಾದಕ್ಕೆ Atrocities Act

2026ರ ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್ ವಿಚಾರಿಸಿದ Munireddy v. State of Karnataka ಪ್ರಕರಣದಲ್ಲಿ, ದೂರಿನಲ್ಲಿ ಜಾತಿ ನಿಂದನೆ ನಡೆದ ದಿನಾಂಕ, ಸಮಯ, ಸ್ಥಳ, ಬಳಸಿದ ನಿರ್ದಿಷ್ಟ ಪದಗಳು ಮುಂತಾದ ಮೂಲ ವಿವರಗಳೇ ಸ್ಪಷ್ಟವಾಗಿಲ್ಲ ಎಂದು ದಾಖಲಿಸಲಾಯಿತು. ಪ್ರಕರಣದ ಹಿನ್ನೆಲೆ ಸುಮಾರು 11 ವರ್ಷ ಹಳೆಯ ಆಸ್ತಿ/ರಸ್ತೆ ಪ್ರವೇಶದ ವಿವಾದವಾಗಿತ್ತು. ನ್ಯಾಯಾಲಯದ ಮುಂದೆ, ಇದು ಮೂಲತಃ ನಾಗರಿಕ ವಿವಾದವಾಗಿದ್ದು, ಅದಕ್ಕೆ ಕ್ರಿಮಿನಲ್ ಪ್ರಕರಣದ ರೂಪ ನೀಡಲಾಗಿದೆ ಎಂಬ ವಾದವೂ ಬಂದಿತ್ತು. 

2026ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್ Sri Shreekant v. State of Karnataka ಪ್ರಕರಣದಲ್ಲಿ SC/ST Actನ ಉದ್ದೇಶವನ್ನು ವಿವರಿಸುತ್ತಾ, ಜಾತಿಯ ಕಾರಣದಿಂದ ವ್ಯಕ್ತಿಯನ್ನು ಅವಮಾನಿಸುವುದು ಅಥವಾ ಬೆದರಿಸುವುದನ್ನು ತಡೆಯುವುದು ಕಾಯ್ದೆಯ ಮುಖ್ಯ ಉದ್ದೇಶಗಳಲ್ಲಿ ಒಂದು ಎಂದು ಹೇಳಿತು. ಆದರೆ ಅದೇ ಸಮಯದಲ್ಲಿ, ಪ್ರಕರಣವು ಮೂಲತಃ ಖಾಸಗಿ ಅಥವಾ ನಾಗರಿಕ ವಿವಾದವಾಗಿದ್ದು, ಆರೋಪಿತ ಕೃತ್ಯ ಜಾತಿಯ ಕಾರಣದಿಂದ ನಡೆದಿಲ್ಲ ಅಥವಾ ಪ್ರಕರಣ ಮುಂದುವರಿಸುವುದೇ ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಕಂಡುಬಂದರೆ, ನ್ಯಾಯಾಲಯವು proceedings ಅನ್ನು ರದ್ದುಪಡಿಸಬಹುದು ಎಂದು ಹೇಳಿತು. ಇದು ಬಹುಶಃ ಈ ಚರ್ಚೆಯ ಅತ್ಯಂತ ಮುಖ್ಯವಾದ ಕಾನೂನು ತತ್ವ.  SC/ST ಕಾಯ್ದೆ ಬಲಿಷ್ಠವಾಗಿರಬೇಕು; ಆದರೆ ಅದರ ಬಲವನ್ನು ವೈಯಕ್ತಿಕ ದ್ವೇಷ ಅಥವಾ ನಾಗರಿಕ ವಿವಾದ ಪರಿಹರಿಸುವ ಸಾಧನವನ್ನಾಗಿ ಮಾಡಬಾರದು.

2026ರ ಆಗಸ್ಟ್ – ಬೆಂಗಳೂರಿನ ಸಮೀಪದ ಆಸ್ತಿ ವಿವಾದ

ಇತ್ತೀಚಿನ ಮತ್ತೊಂದು ಗಮನಾರ್ಹ ಉದಾಹರಣೆ ಅನೇಕಲ್ ತಾಲ್ಲೂಕಿನ ಪ್ರಕರಣ. 2026ರ ಆಗಸ್ಟ್‌ನಲ್ಲಿ ಕರ್ನಾಟಕ ಹೈಕೋರ್ಟ್ ಏಳು ಮಂದಿಯ ವಿರುದ್ಧ ದಾಖಲಾಗಿದ್ದ SC/ST Act ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸಿತು. ಪ್ರಕರಣವು ಜಿಗಣಿ ಪ್ರದೇಶದ ಒಂದು ಆಸ್ತಿಯ ವಿವಾದಕ್ಕೆ ಸಂಬಂಧಿಸಿತ್ತು. ದೂರುದಾರರು ತಮ್ಮ ಕುಟುಂಬದ ಸದಸ್ಯರನ್ನು ಜಾತಿ ಹೆಸರಿನಿಂದ ನಿಂದಿಸಲಾಗಿದೆ ಎಂದು ಆರೋಪಿಸಿದ್ದರು. ಆದರೆ ನ್ಯಾಯಾಲಯದ ಮುಂದೆ ಆಸ್ತಿಯ ಮಾಲೀಕತ್ವದ ಬಗ್ಗೆ ಈಗಾಗಲೇ civil suit ನಡೆಯುತ್ತಿರುವುದು ಗಮನಕ್ಕೆ ಬಂದಿತು. ಪ್ರಕರಣದ ಮೂಲ ಸ್ವರೂಪ ನಾಗರಿಕ ವಿವಾದವಾಗಿದ್ದು, ಕ್ರಿಮಿನಲ್ ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ನ್ಯಾಯಾಲಯ ಕಂಡಿತು. 

ಉದ್ಯೋಗ ವಿವಾದದಲ್ಲೂ ಕಾಯ್ದೆಯ ಬಳಕೆ

2025ರ ಡಿಸೆಂಬರ್‌ನಲ್ಲಿ ಬಾಂಬೆ ಹೈಕೋರ್ಟ್ ವಿಚಾರಿಸಿದ Ravindra Karathadi v. State of Maharashtra ಪ್ರಕರಣದಲ್ಲಿ, ದೂರುದಾರನಿಗೂ ಕಾಲೇಜು ಆಡಳಿತಕ್ಕೂ ಉದ್ಯೋಗ ಸಂಬಂಧಿತ ವಿವಾದವಿತ್ತು. ನ್ಯಾಯಾಲಯದ ಪ್ರಕಾರ, ಆ ವಿವಾದಕ್ಕೆ ಸಂಬಂಧಿಸಿದಂತೆ SC/ST Act ಬಳಸಲಾಗಿತ್ತು. ಆದರೆ ಆರೋಪಿತ ಕೃತ್ಯ ದೂರುದಾರನ ಜಾತಿಯ ಕಾರಣದಿಂದಲೇ ನಡೆದಿತ್ತು ಎಂಬ ಅಗತ್ಯ ಅಂಶ ಕಂಡುಬರಲಿಲ್ಲ. ಆದ್ದರಿಂದ FIR ಅನ್ನು ದುರುಪಯೋಗ ಎಂದು ಪರಿಗಣಿಸಿ ರದ್ದುಪಡಿಸಲಾಯಿತು.  ಇಲ್ಲಿಯೂ ಮೂಲ ಪ್ರಶ್ನೆ ಒಂದೇ. ವಿವಾದದ ಕಾರಣ ಜಾತಿಯೇ? ಅಥವಾ ಬೇರೆ ಕಾರಣವಿದೆಯೇ?

ಸುಪ್ರೀಂ ಕೋರ್ಟ್‌ನ 2025ರ ಸ್ಪಷ್ಟ ನಿಲುವು

2025ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಪ್ರಕರಣದಲ್ಲಿ, ದೂರುದಾರ SC/ST ಸಮುದಾಯಕ್ಕೆ ಸೇರಿದವನು ಎಂಬ ಕಾರಣ ಮಾತ್ರಕ್ಕೆ prosecution ಮುಂದುವರಿಸಲಾಗುವುದಿಲ್ಲ ಎಂದು ಪುನರುಚ್ಚರಿಸಿತು. ಆರೋಪಿತ ಕೃತ್ಯ ಕಾಯ್ದೆಯ ಅಗತ್ಯ ಅಂಶಗಳನ್ನು ಪೂರೈಸಬೇಕು. ಪ್ರಕರಣವು ವೈಯಕ್ತಿಕ ದ್ವೇಷ, ವೈಯಕ್ತಿಕ ಲಾಭ ಅಥವಾ ಬೇರೆ ವಿವಾದವನ್ನು ಬಗೆಹರಿಸಲು ಕಾಯ್ದೆಯನ್ನು ಬಳಸುವ ಪ್ರಯತ್ನವೆಂದು ಸ್ಪಷ್ಟವಾದರೆ, ನ್ಯಾಯಾಲಯವು ಆರಂಭಿಕ ಹಂತದಲ್ಲಿಯೇ ಹಸ್ತಕ್ಷೇಪ ಮಾಡಬಹುದು ಎಂದು ಕೋರ್ಟ್ ಹೇಳಿತು.

2026ರಲ್ಲೂ ಸುಪ್ರೀಂ ಕೋರ್ಟ್ ಏನು ಹೇಳಿದೆ?

ಇದು ಅತ್ಯಂತ ಇತ್ತೀಚಿನ ಬೆಳವಣಿಗೆ. 2026ರ ಸೆಪ್ಟೆಂಬರ್ 23ರಂದು, SC/ST Atrocities Actನ ಕೆಲವು ಕಠಿಣ ನಿಬಂಧನೆಗಳ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದ್ದ PIL ಅನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಕೋರ್ಟ್, ಹಿಂದೆ ನೀಡಿರುವ Prathvi Raj Chauhan ತೀರ್ಪು ಸೇರಿದಂತೆ ಈಗಾಗಲೇ ಇರುವ ನ್ಯಾಯಾಂಗ safeguards ದುರುಪಯೋಗದ ಸಂದರ್ಭಗಳನ್ನು ನಿರ್ವಹಿಸಲು ಸಾಕಷ್ಟು ಎಂದು ಹೇಳಿತು.  ಅಂದರೆ, ಸುಪ್ರೀಂ ಕೋರ್ಟ್‌ನ ನಿಲುವನ್ನು ಎರಡು ಭಾಗಗಳಲ್ಲಿ ಅರ್ಥಮಾಡಿಕೊಳ್ಳಬಹುದು:

ಒಂದೆಡೆ: SC/ST ಸಮುದಾಯದ ವಿರುದ್ಧದ ನಿಜವಾದ ದೌರ್ಜನ್ಯವನ್ನು ದುರ್ಬಲಗೊಳಿಸಬಾರದು.

ಮತ್ತೊಂದೆಡೆ: ಕಾಯ್ದೆಯ ಅಂಶಗಳೇ ಇಲ್ಲದ ಪ್ರಕರಣದಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಹುದು.

ರಕ್ಷಣೆಗಿರುವ ಕಾನೂನು ದುರ್ಬಳಕೆಯ ಇತ್ತೀಚಿನ  ಎರಡು ಪ್ರಮುಖ ಉದಾರಣೆಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ಅತ್ಯಂತ ಮಹತ್ವದ ಕಾನೂನು. ಆದರೆ ಈ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಪ್ರತಿಯೊಂದು ಆರೋಪವೂ ಅಂತಿಮವಾಗಿ ಅಪರಾಧ ಸಾಬೀತಾಗಿದೆ ಎಂದರ್ಥವಲ್ಲ. ಇತ್ತೀಚೆಗೆ ಮುಂಬೈನ ಐಐಟಿ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಪ್ರಕರಣ ಮತ್ತು ಕರ್ನಾಟಕದ ಟಿ. ನರಸೀಪುರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಾಖಲಾಗಿರುವ ಪ್ರಕರಣಗಳು ಈ ವಿಚಾರವನ್ನು ಮತ್ತೆ ಚರ್ಚೆಯ ಕೇಂದ್ರಕ್ಕೆ ತಂದಿವೆ.

ಐಐಟಿ-ಬಾಂಬೆ ಪ್ರಕರಣದಲ್ಲಿ ನಡೆದಿದ್ದೇನು?

2026ರ ಸೆಪ್ಟೆಂಬರ್ 18ರಂದು ಐಐಟಿ-ಬಾಂಬೆಯ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಪರೀಕ್ಷೆಯ ವೇಳೆ ಮೊಬೈಲ್ ಬಳಸುತ್ತಿದ್ದನೆಂಬ ಆರೋಪದ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಯಿಂದ ಹೊರಗೆ ಕರೆದೊಯ್ಯಲ್ಪಟ್ಟಿದ್ದರು. ಐಐಟಿ-ಬಾಂಬೆ ಹೇಳಿಕೆಯ ಪ್ರಕಾರ, ಪ್ರಶ್ನೆಪತ್ರಿಕೆಯನ್ನು ಮೊಬೈಲ್ ಮೂಲಕ AI ವೇದಿಕೆಗೆ ಅಪ್‌ಲೋಡ್ ಮಾಡಿ ಉತ್ತರ ಪಡೆಯಲು ಪ್ರಯತ್ನಿಸಲಾಗಿತ್ತು. ನಂತರ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ.

ವಿದ್ಯಾರ್ಥಿಯ ಕುಟುಂಬವು ಜಾತಿ ಆಧಾರಿತ ಕಿರುಕುಳ ಮತ್ತು ಒತ್ತಡದ ಆರೋಪಗಳನ್ನು ಮಾಡಿದೆ. ಆ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಗೆ ಸಂಬಂಧಿಸಿದ ಆರೋಪಗಳ ಜೊತೆಗೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರ ಹೆಸರೂ ಪ್ರಕರಣದಲ್ಲಿ ಉಲ್ಲೇಖವಾಗಿದೆ.

ಐಐಟಿ-ಬಾಂಬೆ ಆಡಳಿತವು ವಿದ್ಯಾರ್ಥಿ ತನ್ನ SC/ST ಸೆಲ್ ಅಥವಾ ಆಡಳಿತಕ್ಕೆ ಯಾವುದೇ ಜಾತಿ ತಾರತಮ್ಯದ ದೂರು ನೀಡಿರಲಿಲ್ಲ ಎಂದು ಹೇಳಿದೆ. ಸಂಸ್ಥೆಯ ಪ್ರಕಾರ, ಪರೀಕ್ಷಾ ಘಟನೆಯ ನಂತರ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಲಾಗಿತ್ತು ಮತ್ತು ಆತನ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ತಿಳಿಸಲಾಗಿತ್ತು. ಈ ಹೇಳಿಕೆಗಳಿಗೆ ವಿರುದ್ಧವಾಗಿ ಕುಟುಂಬವು ಕಿರುಕುಳದ ಆರೋಪ ಮಾಡಿದೆ. ಆದ್ದರಿಂದ ಅಂತಿಮ ಸತ್ಯ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಿಂದಲೇ ಹೊರಬರಬೇಕಿದೆ. ಇದನ್ನು ನಕಲು ಸಿಕ್ಕಿಬಿದ್ದಿದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡ ಅಥವಾ ಜಾತಿ ತಾರತಮ್ಯದಿಂದಲೇ ಆತ್ಮಹತ್ಯೆ ಮಾಡಿಕೊಂಡರು”ಎಂದು ಈಗಲೇ ಅಂತಿಮವಾಗಿ ಹೇಳಲು ಸಾಧ್ಯವಿಲ್ಲ.

ಟಿ. ನರಸೀಪುರದ ಪ್ರತಾಪ್ ಸಿಂಹ ಪ್ರಕರಣ

ಟಿ ನರಸೀಪುರ ಠಾಣೆಯ ಇನ್ಸ್ಪೆಕ್ಟರ್ ಗಣೇಶೋತ್ಸವದ ಕುರಿತಾಗಿ ಹಿಂದೂ ಕಾರ್ಯಕರ್ತರ ಮೇಲೆ ಹಾಕಿದ್ದ ಧಮಕಿಯನ್ನು ವಿರೋಧಿಸಿ  2026ರ ಸೆಪ್ಟೆಂಬರ್ 18ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶ ವಿಸರ್ಜನಾ ಶೋಭಾಯಾತ್ರೆಯ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಸಾರ್ವಜನಿಕರ ಸಮ್ಮುಖದಲ್ಲಿಯೇ ಯಾವುದೇ ರೀತಿಯ ಜಾತಿಯ ಪ್ರಸ್ತಾಪ ಮಾಡದೇ ಕೇವಲ ವಯಕ್ತಿಕವಾಗಿ ಆ ಇನ್ಸ್ಪೆಕ್ಟರ್  ವಿರುದ್ಧ ಮಾಡಿದ ಭಾಷಣದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಮೊದಲ ಪ್ರಕರಣವು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ಪ್ರಚೋದನಕಾರಿ ಹೇಳಿಕೆಗಳಿಗೆ ಸಂಬಂಧಿಸಿದರೆ, ಅಚ್ಚರಿ ಎನ್ನುವಂತೆ ಎರಡನೇ ದೂರಿನಲ್ಲಿ  ದಲಿತ ಸಮುದಾಯದ ಸದಸ್ಯರನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಆಧಾರದ ಮೇಲೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ಗಳನ್ನೂ ಅನ್ವಯಿಸಲಾಗಿದೆ. ಅವರು ಕೇವಲ ಪೊಲೀಸ್ ಇನ್ಸ್‌ಪೆಕ್ಟರ್‌ ಅವರನ್ನು ವೈಯಕ್ತಿಕವಾಗಿ ಟೀಕಿಸಿದ್ದರು, ಜಾತಿಯ ಬಗ್ಗೆ ಯಾವುದೇ ಮಾತು ಆಡಲಿಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದರೂ, ರಾಜಕೀಯ ದುರುದ್ದೇಶದಿಂದಲೋ ಅಥವಾ ಅವರನ್ನು ಹೇಗಾದರೂ ಮಾಡಿ ಸಿಕ್ಕಿಸಲೇ ಬೇಕೆಂದು ನಿರ್ಧರಿಸಿರುವ ಕೆಲವು ಕಾಣದ ಕೈಗಳ ಒತ್ತಾಯೈಂದಾಗಿ ಪೊಲೀಸರು ಮತ್ತು ಕೆಲವು ದೂರುದಾರರ ಮೂಲಕ ಹಾಕಿಸಿರುವ ಜಾತಿ ನಿಂದನೆ ಕೇಸ್ ಸ್ಪಷ್ಟವಾಗಿ ಜಾತಿ ನಿಂದನೆಯ ಕಾಯ್ದೆಯನ್ನು ಅಧಿಕಾರದಲ್ಲಿರುವವರೇ ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಾಣಿಸುತ್ತಿದೆ. ಪ್ರಸ್ತುತವಾಗಿ ಈ ಪ್ರಕರಣ ಕರ್ನಾಟಕ ಹೈಕೋರ್ಟ್‌ನಲ್ಲಿದ್ದು ಎಲ್ಲರ ಚಿತ್ತ ಹರಿದಿದೆ ಅವರತ್ತ.

ಹಾಗಾದರೆ ಎಸ್‌ಸಿ/ಎಸ್‌ಟಿ ಕಾಯ್ದೆ ಯಾವಾಗ ಅನ್ವಯಿಸುತ್ತದೆ?

ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಸೆಕ್ಷನ್ 3(1)(r) ಅಡಿಯಲ್ಲಿ ಕೇವಲ ಒಬ್ಬ ವ್ಯಕ್ತಿಯನ್ನು ಅವಮಾನಿಸುವುದರಿಂದಲೇ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಿತೇಶ್ ವರ್ಮಾ ವಿರುದ್ಧ ಉತ್ತರಾಖಂಡ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎರಡು ಪ್ರಮುಖ ಅಂಶಗಳನ್ನು ಗುರುತಿಸಿತು:

  1. ಉದ್ದೇಶಪೂರ್ವಕವಾಗಿ ಅವಮಾನ ಅಥವಾ ಬೆದರಿಕೆ ಇರಬೇಕು.
  2. ಅದು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಅವನ/ಅವಳ ಜಾತಿಯ ಕಾರಣದಿಂದ ಅವಮಾನಿಸುವ ಉದ್ದೇಶ ಹೊಂದಿರಬೇಕು ಮತ್ತು ಘಟನೆ ಸಾರ್ವಜನಿಕರ ವೀಕ್ಷಣೆಯಲ್ಲಿರಬೇಕು.

ಅಂದರೆ, ಒಬ್ಬ ವ್ಯಕ್ತಿ ಎಸ್‌ಸಿ ಅಥವಾ ಎಸ್‌ಟಿ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕೆ ಮಾತ್ರ ಆತನೊಂದಿಗೆ ನಡೆದ ಪ್ರತಿಯೊಂದು ಜಗಳ, ಅವಮಾನ ಅಥವಾ ವೈಯಕ್ತಿಕ ಸಂಘರ್ಷವೂ ಸ್ವಯಂಚಾಲಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆಯ ಅಪರಾಧವಾಗುವುದಿಲ್ಲ. ಇದೇ ತತ್ವವನ್ನು ಸುಪ್ರೀಂ ಕೋರ್ಟ್‌ನ ನಂತರದ ತೀರ್ಪುಗಳೂ ಪುನರುಚ್ಚರಿಸಿವೆ. Shajan Skaria ಪ್ರಕರಣದಲ್ಲಿ, ದೂರುದಾರರ ಜಾತಿ ಗೊತ್ತಿರುವುದಷ್ಟೇ ಸಾಕಾಗುವುದಿಲ್ಲ; ಅವಮಾನವು ಅವರ ಜಾತಿಯ ಕಾರಣದಿಂದಲೇ ನಡೆದಿತ್ತು ಎಂಬ ಅಂಶವೂ ಇರಬೇಕು ಎಂದು ನ್ಯಾಯಾಲಯ ಹೇಳಿದೆ.

ಸಾರ್ವಜನಿಕ ವೀಕ್ಷಣೆ ಕೂಡ ಪ್ರಮುಖ ಅಂಶ

ಕಾಯ್ದೆಯ ಕೆಲವು ಪ್ರಮುಖ ಸೆಕ್ಷನ್‌ಗಳಲ್ಲಿ ಘಟನೆ within public view ನಡೆದಿರಬೇಕು ಎಂಬ ಅಂಶವಿದೆ. 2026ರಲ್ಲಿಯೂ ಸುಪ್ರೀಂ ಕೋರ್ಟ್ ಇದೇ ತತ್ವವನ್ನು ಪುನರುಚ್ಚರಿಸಿದೆ. ಕೇವಲ ಸಾರ್ವಜನಿಕ ಸ್ಥಳದಲ್ಲಿರುವುದಷ್ಟೇ ಸಾಕಾಗುವುದಿಲ್ಲ; ಆರೋಪಿತ ಜಾತಿ ನಿಂದನೆಯ ಮಾತುಗಳನ್ನು ಸಾರ್ವಜನಿಕರು ನೋಡಲು ಅಥವಾ ಕೇಳಲು ಸಾಧ್ಯವಾಗುವಂತಹ ಪರಿಸ್ಥಿತಿ ಇರಬೇಕು ಎಂಬುದನ್ನು ನ್ಯಾಯಾಲಯ ಒತ್ತಿಹೇಳಿದೆ. ಹೀಗಾಗಿ ಪ್ರಕರಣವೊಂದರಲ್ಲಿ, ಯಾರು ಹೇಳಿದರು? ಯಾರಿಗೆ ಹೇಳಿದರು? ಯಾವ ಮಾತು ಹೇಳಿದರು? ಆ ಮಾತಿನ ಅರ್ಥವೇನು? ಜಾತಿಯ ಕಾರಣದಿಂದಲೇ ಹೇಳಲಾಗಿತ್ತೇ? ಯಾರ ಸಮ್ಮುಖದಲ್ಲಿ ಹೇಳಲಾಯಿತು? ಸಾರ್ವಜನಿಕರು ಕೇಳುವ/ನೋಡುವ ಸ್ಥಿತಿಯಲ್ಲಿದ್ದರೇ? ಎಂಬ ಪ್ರಶ್ನೆಗಳಿಗೆ ಉತ್ತರ ಬಹಳ ಮುಖ್ಯವಾಗುತ್ತದೆ.

ಅಂದರೆ ಸುಖಾ ಸುಮ್ಮನೇ ನಾಲ್ಕು ಗೋಡೆಗಳ ಮಧ್ಯೆ ಆತ ನನ್ನನ್ನು ಜಾತಿಯ ಅಂಶದಿಂದ ನಿಂದಿಸಿದ ಎಂದು ಮೊಕ್ಕದ್ದಮೆ ಹೂಡಲಾಗದು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ, ನಮ್ಮ ದೇಶದಲ್ಲಿ ಪ್ರತೀವರ್ಷವೂ ಸಾವಿರಾರು ಜಾತಿ ನಿಂದನೆಯ ಹೆಸರಿನಲ್ಲಿ ಮೊಕ್ಕದ್ದಮ್ಮೆಗಳು ದಾಖಲಾಗುತ್ತಿರುವುದು ನಿಶ್ಚಿತವಾಗಿಯೂ ಆ ಕಾಯ್ದೆಯ ದುರುಪಯೋಗ ಆಗುತ್ತಿರುವುದಕ್ಕೆ ಸ್ಪಷ್ಟವಾದ ಉದಾಹರಣೆಯಾಗಿದೆ

ಪ್ರತೀ ವರ್ಷವೂ ಇಂತಹ ಸಹಸ್ರಾರು ನಕಲಿ ಆರೋಪಗಳಿಂದಾಗಿ ಸಹಸ್ರಾರು ಅಮಾಯಕರು ಶಿಕ್ಷೆಯನ್ನು ಅನುಭವಿಸಬೇಕಾಗಿದೆ. ಕೆಲ ವರ್ಷಗಳ ಹಿಂದೆ ವಿಧಾನ ಸೌಧದ ಪಕ್ಕದಲ್ಲಿರುವ ಬಹುಮಹಡಿ ಕಟ್ಟಡದ ಲಿಫ್ಟ್ ಆಪರೇಟರ್ ಒಬ್ಬ ಲಿಫ್ಟ್ ನಲ್ಲಿ ಬರುವ ಒಂಟೀ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಲ್ಲದೇ, ಅವನ ವಿರುದ್ಧ ದೂರು ದಾಖಲಿಸಿದರೇ ಇದೇ ಜಾತಿ ನಿಂದನೆ ಕೇಸ್ ಜಡಿಯುವುದಾಗಿ ಬೆದರಿಕೆ ಹಾಕುತ್ತಿದ್ದರಿಂದ ಸುಮಾರು ವರ್ಷಗಳ ಕಾಲ ಅವನ ಅ ಕುಕೃತ್ಯ ಮುಂದುವರಿಯುತ್ತಲೇ ಇತ್ತು. ಕಡೆಗೊಮ್ಮೆ ಅದು ಹೇಗೋ ಈ ಪ್ರಕರಣ ಹೊರಗೆ ಬಂದಿತಾದರೂ ಮತ್ತೆ ತನ್ನ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಯಾವುದೇ ಶಿಕ್ಷೆ ಇಲ್ಲದೇ ಪಾರಾದ ಸಂಗತಿ ವೃತ್ತ ಪತ್ರಿಕೆಗಳಲ್ಲಿ ಓದಿದ್ದ ನೆನಪು. ಇಂದಿಗೂ ಸಹಾ ಸರ್ಕಾರೀ ಕಚೇರಿಗಳಲ್ಲಿ ಈ ಜಾತಿನಿಂದನೆ ಎಂಬುದನ್ನೇ ಪ್ರಭಲವಾದ ಅಸ್ತ್ರವನ್ನಾಗಿಸಿಕೊಂಡು ಯಾವುದೇ ಕೆಲಸವನ್ನು ಮಾಡದೇ ಸುಮ್ಮನೆ ಸಂಬಳ ಪಡೆಯುತ್ತಿರುವ ಸಾವಿರಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ.

ಕೆಲ ವರ್ಷಗಳ ಹಿಂದೆ ನನ್ನ ಅತ್ಮೀಯ ಗೆಳೆಯನೊಬ್ಬನ ಮನೆಯ ಮುಂದಿನ ಕಸದ ತೊಟ್ಟಿಯನ್ನು ಶುದ್ಧೀಕರಿಸುವ ವಿಚಾರದಲ್ಲಿ ನನ್ನ ಗೆಳೆಯನಿಗೂ ಮತ್ತು ಪೌರ ಕಾರ್ಮಿಕನ ನಡುವೆ ವಾಗ್ವಾದ ನೆಡೆದಿತ್ತು. ಇಂತಹ ಕ್ಷುಲ್ಲಕ ವಿಚಾರಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಆ ಪೌರಕಾರ್ಮಿಕ, ಕತ್ಯವ್ಯದ ಮೇಲಿದ್ದ ಸರ್ಕಾರೀ ಸೇವಕನ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಆರೋಪ ಮಾಡಿದ ಪರಿಣಾಮ ಸುಮಾರು ವರ್ಷಗಳ ಕಾಲ ನನ್ನ ಗೆಳೆಯ ಕೋರ್ಟು ಕಛೇರಿ ಅಲೆದು ಮಾನಸಿಕವಾಗಿ ಸುಸ್ತಾಗಿ ಕಡೆಗೆ ಇಬ್ಬರೂ ವಕೀಲರ ಸಮಕ್ಷಮದಲ್ಲಿ ತನ್ನ ತಪ್ಪಿಲ್ಲದಿದ್ದರೂ, ಆ ಪೌರ ಕಾರ್ಮಿಕ ಬಯಸಿದ್ದಷ್ಟು ಹಣವನ್ನು ನೀಡಿ ನ್ಯಾಯಾಲದ ಹೊರಗೆ ಪ್ರಕರಣ ಬಗೆ ಹರಿಸಿಕೊಂಡಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ಇದೇ ರೀತಿ ವರದಕ್ಷಿಣೆ ಕಾನೂನು ಸಹಾ ಹೆಣ್ಣಿನ ಪರವಾಗಿಯೇ ಇದ್ದು ಯಾವುದೇ ಜಾಮೀನು ಇಲ್ಲದೇ ಬಂಧಿಸುವ ಅಧಿಕಾರನ್ನೇ ಬಳಸಿಕೊಂದು ಧಿಮಾಕಿನ ಲಕ್ಷಾಂತರ ಹೆಂಗಸರು, ಅಮಾಯಕ ಗಂಡಸರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಕೊನೆಯೇ ಇಲ್ಲವಾಗಿದೆ..

ಪ್ರಸಕ್ತ ಸರ್ಕಾರ ಜಾತಿ ನಿಂದನೆ ಮತ್ತು ವರದಕ್ಷಿಣೆ ದೂರಿನ ಪ್ರಕಾರ ಅಮಾಯಕರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ ಆರೋಪ ಬಂದ ಕೂಡಲೇ ಆಪಾದಿತರು ತಮ್ಮ ಪರವಾಗಿ ವಕೀಲರನ್ನು ನೇಮಿಸಿಕೊಳ್ಳಬಹುದೆಂಬ ಕಾನೂನು ತಿದ್ದುಪಡಿಯನ್ನು ಕೆಲ ವರ್ಷಗಳ ಹಿಂದೆ ತಂದರೂ, ಕೆಲ ಪಟ್ಟಭದ್ರ ಹಿತಾಸಕ್ತಿಯ ಕೈವಾಡದಿಂದಾಗಿ ದೇಶಾದ್ಯಂತ ದಲಿತರ ಚಳುವಳಿ ನಡೆಸಿ ದೊಂಬಿ ಮತ್ತು ಗಲಾಟೆಗಳನ್ನು ಮಾಡೆಸಿ ಈ ಸರ್ಕಾರ ದಲಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂಬ ಆರೋಪ ಮಾಡಿ ಈ ಕಾನೂನು ಸೂಕ್ತವಾಗಿ ಜಾರಿಗೆ ಬಾರದಂತೆ ತಡೆಯುವುದರಲ್ಲಿ ಯಶಸ್ವಿಯಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಇಷ್ಟೆಲ್ಲಾ ಆದ ನಂತರ ಬಹುತೇಕರನ್ನು ಕಟ್ಟ ಕಡೆಯದಾಗಿ ಕಾಡುತ್ತಿರುವ ಪಶ್ನೆಯೆಂದರೇ,

  • ಆರೋಪ ಸುಳ್ಳು ಎಂದು ತಿಳಿದ ಮೇಲೂ ನಕಲಿ ಆರೋಪಿಗಳಿಗೆ ಶಿಕ್ಷೆ ಏಕಿಲ್ಲ?
  • ಹಣಕ್ಕಾಗಿ ವಿಚಾರಣೆಗೇ ಬಾರದೇ ವಿನಾಕಾರಣ ಕೇಸ್ಗಳನ್ನು ಮುಂದೂಡುವ ವಕೀಲರಿಗೆ ಏಕೆ ಶಿಕ್ಷೆ ಇಲ್ಲ?
  • ಪ್ರತೀ ವಿಚಾರಣೆಗೂ ಇಂತಿಷ್ಟು ಸಮಯವನ್ನೇಕೆ ನ್ಯಾಯಾಲಯ ನಿಗಧಿ ಮಾಡುವುದಿಲ್ಲ?

ಅಂತಿಮವಾಗಿ ಹೇಳುವುದಾದರೆ…

ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು. ಎಂಬುದು ನಮ್ಮ ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಧ್ಯೇಯ ಹಾಗೂ ಉದ್ದೇಶ ಆಗಿರುವುದಾದರೂ, ಈ ಎರಡು ಸಂಧರ್ಭದಲ್ಲಿ ಮಾತ್ರಾ ಇದಕ್ಕೆ ಹೊರತಾಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಸವರ್ಣೀಯರು ಆಡಿದ್ದು ಮತ್ತು ಮಾಡಿದ್ದೆಲ್ಲಾ ಅಪರಾಧವಲ್ಲ. ಎಲ್ಲಾ ಪ್ರಸಂಗಗಳಲ್ಲೂ ದಲಿತರೇ ಅಮಾಯಕರೇನೂ ಅಲ್ಲ. ಸಮಯ ಸಂಧರ್ಭ ಮತ್ತು ಪರಿಸ್ಥಿತಿಯ ಅನುಗುಣವಾಗಿ ಇಬ್ಬರದ್ದೂ ತಪ್ಪಿರುತ್ತದೆ. ಹಾಗಾಗಿ, ಅಪರಾಧಕ್ಕೆ ಯಾವುದೇ ಜಾತಿ, ಬಡವ ಮತ್ತು ಬಲ್ಲಿದ ಎಂಬ ಏಕಮುಖ ದೃಷ್ಟಿಕೋನದಿಂದ ವಿಚಾರಣೆ ನಡೆಸದೇ, ತಪ್ಪು ಮಾಡಿದವರು ಯಾವುದೇ ಜಾತಿ, ಮತ ಧರ್ಮ, ಅಂತಸ್ತು ಮತ್ತು ಅಧಿಕಾರ ಹೊಂದಿದ್ದರೂ ಶಿಕ್ಷೆಗೆ ಗುರಿ ಪಡಿಸಬೇಕಲ್ಲವೇ?

ಎಲ್ಲಕ್ಕೂ ಮಿಗಿಲಾಗಿ ನೂರಾರು ವರ್ಷಗಳ ಹಿಂದೆ ತುಳಿತಕ್ಕೆ ಒಳಗಾದವರು ಎಂಬ ನೆಪವನ್ನೇ ಮುಂದು ಮಾಡಿಕೊಂಡು ಈ ಆಧುನಿಕ ಯುಗದಲ್ಲೂ ಇದೇ ರೀತಿ ಜಾತಿ ಆಧಾರಿತವಾದ ಮೀಸಲಾತಿ, ಅವರ ಪರವಾಗಿಯೇ ಕಾನೂನುಗಳನ್ನು  ಮುಂದುವರೆಸಿಕೊಂಡು ಹೋದಲ್ಲಿ ಸಾಮಾಜಿಕ ಸಮಾನತೆ ಹೇಗೆ ತಾನೇ ಮೂಡಲು ಸಾಧ್ಯ?

ಜಾತಿ ಆಧಾರಿತವಾದ ಎಲ್ಲಾ ಮೀಸಲಾತಿಗಳನ್ನು ತೆಗೆದು, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಒಂದು ಬಾರೀ ಮಾತ್ರವೇ ಮೇಲೆತ್ತುವ ಕಾರ್ಯವಾದಲ್ಲಿ ಮಾತ್ರವೇ ದೇಶದಲ್ಲಿ ಸಾಮಾಜಿಕ ಸಮಾನತೆ ತರಬಹುದಾಗಿದೆ ಮತ್ತು ಜಾತಿ ಹೆಸರಿನಲ್ಲಿ ಅಮಾಯಕರು ಶಿಕ್ಷೆ ಅನುಭವಿಸುವುದನ್ನು ತಡೆಯಬಹುದಾಗಿದೆ.

ಏನಂತೀತೀ?
ನಿಮ್ಮವನೇ ಉಮಾಸುತ

Leave a Reply