ಮಿನರ್ವಾ ಮಿಲ್ ಬೆಂಗಳೂರಿನ ಕೈಗಾರಿಕಾ ಯುಗವನ್ನು ಕಟ್ಟಿದ ಜವಳಿ ಸಾಮ್ರಾಜ್ಯದ ಕಥೆ

ಇಂದು ಬೆಂಗಳೂರಿನ ಮಾಗಡಿ ರಸ್ತೆ, ಬಿನ್ನಿಪೇಟೆ, ಗೋಪಾಲಪುರ, ರಾಜಾಜಿನಗರ ಪ್ರದೇಶದಲ್ಲಿ ಸಂಚರಿಸುವಾಗ ದೊಡ್ಡ ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಮೆಟ್ರೋ, ವಾಣಿಜ್ಯ ಕಟ್ಟಡಗಳು ಮತ್ತು ವಾಹನಗಳ ದಟ್ಟಣೆ ಕಾಣಿಸುತ್ತದೆ. ಆದರೆ ಇದೇ ಭೂಮಿಯಲ್ಲಿ ಒಂದು ಕಾಲದಲ್ಲಿ ಸಾವಿರಾರು ಕಾರ್ಮಿಕರ ಬದುಕು, ಬೃಹತ್ ಯಂತ್ರಗಳ ಸದ್ದು, ಹತ್ತಿಯ ವಾಸನೆ, ಬಟ್ಟೆಯ ರಾಶಿಗಳು ಮತ್ತು ಕಾರ್ಖಾನೆಯ ಸೈರನ್‌ ಬೆಂಗಳೂರಿನ ದಿನಚರಿಯ ಭಾಗವಾಗಿದ್ದವು. ಆ ಕೈಗಾರಿಕಾ ಬೆಂಗಳೂರಿನ ಕಥೆಯಲ್ಲಿ ಮಿನರ್ವಾ ಮಿಲ್ ಗೆ ವಿಶೇಷ ಸ್ಥಾನವಿದೆ. ಮಿನರ್ವಾ ಮಿಲ್ ಹಳೆಯ ಬೆಂಗಳೂರಿನ ಪ್ರಮುಖ ದೊಡ್ಡ ಜವಳಿ ಕಾರ್ಖಾನೆಗಳಲ್ಲಿ ಒಂದಾಗಿ 20ನೇ ಶತಮಾನದ ಆರಂಭದಲ್ಲಿ ಬೆಳೆದರೆ, ಬೆಂಗಳೂರು ಹೇಗೆ ವ್ಯಾಪಾರ ನಗರದಿಂದ ಕೈಗಾರಿಕಾ ನಗರವಾಯಿತು, ಕಾರ್ಮಿಕ ವರ್ಗ ಹೇಗೆ ರೂಪುಗೊಂಡಿತು ಮತ್ತು ನಂತರ ಮಿಲ್‌ಗಳ ಜಾಗದಲ್ಲಿ ಹೊಸ ನಗರ ಹೇಗೆ ಹುಟ್ಟಿಕೊಂಡಿತು ಎಂಬುದರ ಕಥೆಯಾಗಿದೆ. ಅಂದಿನ  Mill ಇಂದಿನ Mall ಗಳಾಗಿದ್ದು, ಬೆಂಗಳೂರಿನಲ್ಲಿದ್ದ ಮಿಲ್ ಗಳ ಬಗ್ಗೆ ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಬೆಂಗಳೂರು ಎಂದರೆ ಕೇವಲ ಐಟಿ ನಗರವಲ್ಲ

ಇಂದು ಬೆಂಗಳೂರು Silicon Valley of India ಎಂದು ಕರೆಯಲ್ಪಡುತ್ತದೆ. ಆದರೆ ಕಂಪ್ಯೂಟರ್‌ಗಳು ಬರುವುದಕ್ಕಿಂತ ಬಹಳ ಹಿಂದೆಯೇ ಈ ನಗರವು ಜವಳಿ, ರೇಷ್ಮೆ, ಹತ್ತಿ ಮತ್ತು ಕೈಗಾರಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಬೆಂಗಳೂರು ಐಟಿ ನಗರವಾಗುವುದಕ್ಕೆ ಬಹಳ ಹಿಂದೆಯೇ ಅದು Textile City ಆಗಿತ್ತು.  16ನೇ ಶತಮಾನದಿಂದಲೇ ಬೆಂಗಳೂರು ಜವಳಿ ಉತ್ಪಾದನೆ ಮತ್ತು ವ್ಯಾಪಾರದೊಂದಿಗೆ ಸಂಬಂಧ ಹೊಂದಿತ್ತು. ಆರಂಭದಲ್ಲಿ ಮನೆಮಟ್ಟದ ಮತ್ತು ಸಣ್ಣ ಉತ್ಪಾದನಾ ವ್ಯವಸ್ಥೆಗಳಿದ್ದವು. ನಂತರ ಯಂತ್ರಾಧಾರಿತ ದೊಡ್ಡ ಜವಳಿ ಮಿಲ್‌ಗಳು ಬಂದವು. 19ನೇ ಶತಮಾನದ ಕೊನೆಯ ಭಾಗ ಮತ್ತು 20ನೇ ಶತಮಾನದ ಆರಂಭದಲ್ಲಿ ಈ ಮಿಲ್‌ಗಳು ಬೆಂಗಳೂರಿನ ಆರ್ಥಿಕತೆಯನ್ನು ಬದಲಾಯಿಸಿದವು. ಬಿನ್ನಿ ಮಿಲ್, ಮೈಸೂರು ಮಿಲ್, ಮಿನರ್ವಾ ಮಿಲ್ ಮುಂತಾದ ದೊಡ್ಡ ಕಾರ್ಖಾನೆಗಳು ಬೆಂಗಳೂರನ್ನು ಆಧುನಿಕ ಕೈಗಾರಿಕಾ ನಗರದತ್ತ ಕರೆದೊಯ್ದವು.

ಮಿನರ್ವಾ ಮಿಲ್ ಎಂದು ಮತ್ತು ಯಾರು ಆರಂಭಿಸಿದರು?

ಬೆಂಗಳೂರಿನ ಕೈಗಾರಿಕಾ ಇತಿಹಾಸದ ಕಾಲಕ್ರಮದಲ್ಲಿ ಮಿನರ್ವಾ ಮಿಲ್‌  1919–20ರ ಅವಧಿಯಲ್ಲಿ ಮಿನರ್ವಾ ಮಿಲ್ ಆರಂಭವಾಯಿತು.  ಮಿನರ್ವಾ ಮಿಲ್‌ನ್ನು ಕರ್ನಾಟಕದ ಉತ್ತರ ಕನ್ನಡದ ಮೂಲದ ಉದ್ಯಮಿ ಎನ್.ಡಿ. ಸಿರುರ್ (N.D. Sirur) ಅವರ Sirur & Co. ಆರಂಭಿಸಿತು. ಆ ಕಾಲಕ್ಕೆ ಸುಮಾರು ₹30 ಲಕ್ಷ ಬಂಡವಾಳ ಹೂಡಲಾಗಿತ್ತು—ಆ ಕಾಲದ ದೃಷ್ಟಿಯಿಂದ ಅದು ಬಹಳ ದೊಡ್ಡ ಕೈಗಾರಿಕಾ ಹೂಡಿಕೆ. ಸಿರುರ್ ಅವರಿಗೆ ಬೆಂಗಳೂರಿನ ಮತ್ತೊಂದು ಪ್ರಮುಖ ಜವಳಿ ಸಂಸ್ಥೆಯಾದ ಮೈಸೂರು ಮಿಲ್‌ನಲ್ಲಿಯೂ ಆಸಕ್ತಿ/ಸ್ವಾಮ್ಯವಿತ್ತು.

ಮಿನರ್ವಾ ಮಿಲ್ ಬೆಂಗಳೂರಿನಲ್ಲೇ ಏಕೆ?

ಅದಕ್ಕೆ ಹಲವು ಕಾರಣಗಳಿದ್ದವು.

  • ಬೆಂಗಳೂರಿನಲ್ಲಿ ಈಗಾಗಲೇ ಜವಳಿ ಉದ್ಯಮದ ಪರಂಪರೆ ಇತ್ತು.
  • ಹತ್ತಿ ಮತ್ತು ನೂಲು ವ್ಯಾಪಾರಕ್ಕೆ ನಗರದಲ್ಲಿ ಬಲವಾದ ಮಾರುಕಟ್ಟೆ ಇತ್ತು.
  • ದಕ್ಷಿಣ ಭಾರತದ ವಿವಿಧ ಭಾಗಗಳಿಂದ ಕಚ್ಚಾ ಹತ್ತಿ ದೊರೆಯುತ್ತಿತ್ತು.
  • ರೈಲು ಸಂಪರ್ಕ ಅಭಿವೃದ್ಧಿಯಾಗುತ್ತಿತ್ತು.
  • ನಗರದಲ್ಲಿ ಕಾರ್ಮಿಕರನ್ನು ಪಡೆಯುವುದು ಸುಲಭವಾಗಿತ್ತು.
  • ಮೈಸೂರು ಸಂಸ್ಥಾನದ ಕೈಗಾರಿಕೀಕರಣದ ವಾತಾವರಣ ಉದ್ಯಮಗಳಿಗೆ ಅನುಕೂಲಕರವಾಗಿತ್ತು.
  • ಮಿಲ್‌ಗಳಿಗೆ ದೊಡ್ಡ ಪ್ರಮಾಣದ ನೀರು ಬೇಕಾಗುತ್ತಿತ್ತು; ಬೆಂಗಳೂರಿನ ಕೆರೆ-ಕಟ್ಟೆಗಳ ವ್ಯವಸ್ಥೆ ಆ ಕಾಲದ ಕೈಗಾರಿಕೆಗಳಿಗೆ ಮಹತ್ವದ್ದಾಗಿತ್ತು.

ಮಿಲ್ ಎಂದರೆ ಕೇವಲ ಕಟ್ಟಡವಲ್ಲ – ಒಂದು ಸಂಪೂರ್ಣ ಕೈಗಾರಿಕಾ ಜಗತ್ತು

ಇಂದು ನಾವು ಮಿಲ್ ಎಂದರೆ ಒಂದು ಕಟ್ಟಡ ಎಂದುಕೊಳ್ಳಬಹುದು. ಆದರೆ 1920ರ ಮಿನರ್ವಾ ಮಿಲ್ ಎಂದರೆ ಒಂದು ಸಂಪೂರ್ಣ ಕೈಗಾರಿಕಾ ವ್ಯವಸ್ಥೆ. ಒಂದೆಡೆ ಹತ್ತಿ ಬರುತ್ತಿತ್ತು. ಅದು ಸ್ವಚ್ಛಗೊಳ್ಳುತ್ತಿತ್ತು. ನಂತರ ಯಂತ್ರಗಳಲ್ಲಿ ಹತ್ತಿಯನ್ನು ನೂಲಾಗಿ ಪರಿವರ್ತಿಸಲಾಗುತ್ತಿತ್ತು. ನೂಲು ವಿವಿಧ ಪ್ರಕ್ರಿಯೆಗಳ ಮೂಲಕ ಸಿದ್ಧವಾಗುತ್ತಿತ್ತು. ನಂತರ ನೇಯ್ಗೆ ವಿಭಾಗದಲ್ಲಿ ಬಟ್ಟೆ ತಯಾರಾಗುತ್ತಿತ್ತು. ಅಂತಿಮವಾಗಿ ಸಿದ್ಧವಾದ ಬಟ್ಟೆ ಮಾರುಕಟ್ಟೆಗೆ ಹೋಗುತ್ತಿತ್ತು. ಅಂದರೆ ಹತ್ತಿ → ನೂಲು → ನೇಯ್ಗೆ → ಬಟ್ಟೆ → ಮಾರುಕಟ್ಟೆ ಈ ಸಂಪೂರ್ಣ ಸರಪಳಿಯಲ್ಲಿ ನೂರಾರು, ನಂತರ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತಿತ್ತು.

ಮಿನರ್ವಾ ಮಿಲ್ ಎಷ್ಟು ದೊಡ್ಡದಾಗಿತ್ತು?

Minerva Mill - Wikidata

ಇದರ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಒಂದು ಅಂಕಿ ಸಾಕು. 1950ರ ಸುಮಾರಿಗೆ ಮಿನರ್ವಾ ಮಿಲ್‌ನಲ್ಲಿ ಸುಮಾರು 3,100 ಮಂದಿ ಕೆಲಸ ಮಾಡುತ್ತಿದ್ದರು. ಅದೇ ಕಾಲದಲ್ಲಿ ಬೆಂಗಳೂರು Woollen, Cotton & Silk Mills ಸುಮಾರು 7,486 ಮಂದಿಯನ್ನು ಮತ್ತು Mysore Spinning & Manufacturing Company ಸುಮಾರು 3,700 ಮಂದಿಯನ್ನು ಉದ್ಯೋಗದಲ್ಲಿಟ್ಟುಕೊಂಡಿದ್ದವು. ಅಂದರೆ ಮಿಲ್‌ಗಳು ಆ ಕಾಲದಲ್ಲಿ ಒಂದು ಕಂಪನಿ ಮಾತ್ರವಲ್ಲ—ಒಂದು ಸಣ್ಣ ನಗರದಷ್ಟೇ ದೊಡ್ಡ ಉದ್ಯೋಗ ವ್ಯವಸ್ಥೆ.

ಮಿಲ್‌ಗಳ ಸುತ್ತಲೇ ಕಾರ್ಮಿಕರ ಬದುಕು ರೂಪುಗೊಂಡಿತು

ಒಂದು ದೊಡ್ಡ ಕಾರ್ಖಾನೆ ಬಂದರೆ ಅದರ ಸುತ್ತಮುತ್ತಲಿನ ಭೂಗೋಳವೇ ಬದಲಾಗುತ್ತದೆ. ಅದೇ ಮಿನರ್ವಾ ಮಿಲ್‌ನಲ್ಲಿಯೂ ನಡೆಯಿತು. ಕಾರ್ಮಿಕರು  ವಿವಿಧ ಊರುಗಳಿಂದ ಇಲ್ಲಿಗೆ ಬಂದು ಕೆಲಸಕ್ಕೆ ಸೇರಿಕೊಂಡರು. ಕೆಲವರು ಮಿಲ್ ಹತ್ತಿರವೇ ಮನೆ ಮಾಡಿಕೊಂಡರು. ಕೆಲವರು ಬಾಡಿಗೆ ಮನೆಗಳಲ್ಲಿ ವಾಸಿಸಿದರು. ಕಾರ್ಮಿಕರಿಗಾಗಿ ವಸತಿ ವ್ಯವಸ್ಥೆ ಕಲ್ಪಿಸುವ ಪ್ರಯತ್ನಗಳೂ ನಡೆದವು. ಮೈಸೂರು ಮಿಲ್ ಮತ್ತು ಮಿನರ್ವಾ ಮಿಲ್ ಎರಡೂ 1928–29ರ ಅವಧಿಯಲ್ಲಿ ಕಾರ್ಮಿಕರ ವಸತಿಗಾಗಿ ಭೂಮಿ ಪಡೆದಿದ್ದವು ಎಂದು ಬೆಂಗಳೂರಿನ ನಗರಾಭಿವೃದ್ಧಿ ಅಧ್ಯಯನಗಳು ದಾಖಲಿಸುತ್ತವೆ. ಹೀಗಾಗಿ ಮಿಲ್‌ಗಳು ಬೆಂಗಳೂರಿನ ಕಾರ್ಮಿಕ ಬಡಾವಣೆಗಳ ಬೆಳವಣಿಗೆಗೂ ಕಾರಣವಾದವು. Infosys ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ತಂದೆ ಮೋಹನರಾವ್ ನಿಲೇಕಣಿ ಮೈಸೂರು ಮತ್ತು ಮಿನರ್ವಾ ಮಿಲ್‌ಗಳಲ್ಲಿ General Manager ಆಗಿ ಕೆಲಸ ಮಾಡಿದ್ದರು. 

ಮಿನರ್ವಾ ಮಿಲ್ ಮತ್ತು ಬೆಂಗಳೂರಿನ ಕೆರೆಗಳ ಸಂಬಂಧ

ಇಂದು ಬೆಂಗಳೂರಿನ ಕೆರೆಗಳು ಮುಖ್ಯವಾಗಿ ಪರಿಸರದ ದೃಷ್ಟಿಯಿಂದ ಚರ್ಚೆಯಾಗುತ್ತವೆ. ಆದರೆ ಒಂದು ಕಾಲದಲ್ಲಿ ಅವು ನಗರದ ಕೈಗಾರಿಕಾ ಆರ್ಥಿಕತೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದವು. ಮಿನರ್ವಾ ಸೇರಿದಂತೆ ಆರಂಭಿಕ ಜವಳಿ ಮಿಲ್‌ಗಳು ತಮ್ಮ ಕೈಗಾರಿಕಾ ಚಟುವಟಿಕೆಗಳಿಗೆ ಕೆರೆಗಳ ನೀರನ್ನು ಬಳಸುತ್ತಿದ್ದವು. 1935ರ ಬೆಂಗಳೂರಿನ ನಕ್ಷೆಯೊಂದರಲ್ಲಿ ಮೈಸೂರು ಮಿಲ್, ಮಿನರ್ವಾ ಮಿಲ್ ಮತ್ತು ಬಿನ್ನಿ ಮಿಲ್‌ಗಳು ಅಗ್ರಹಾರ ಕೆರೆಯ ಬಳಿಯಲ್ಲಿಯೇ ಇದ್ದು ಆದೇ ಕೆರೆಯ ನೀರನ್ನು ಬಳಸಿಕೊಳ್ಳುತ್ತಿದ್ದವು.  ಮಿಲ್‌ಗಳು + ಕೆರೆಗಳು + ಕಾರ್ಮಿಕರು + ಕೃಷಿ ಭೂಮಿ + ವಸತಿ. ಕೈಗಾರಿಕೀಕರಣದೊಂದಿಗೆ ಈ ಸಮತೋಲನ ನಿಧಾನವಾಗಿ ಬದಲಾಯಿತು.

ಮಿನರ್ವಾ ಮಿಲ್ ಕಾರ್ಮಿಕ ಚಳವಳಿಯಲ್ಲೂ ಪ್ರಮುಖವಾಗಿತ್ತು

ಜವಳಿ ಮಿಲ್‌ಗಳು ಬೆಂಗಳೂರಿನ ಕಾರ್ಮಿಕ ಚಳವಳಿಯ ಜನ್ಮಸ್ಥಳಗಳಾಗಿದ್ದವು. 1920ರಲ್ಲಿ ಬಿನ್ನಿ ಮಿಲ್‌ನಲ್ಲಿ ನಡೆದ ಕಾರ್ಮಿಕ ಮುಷ್ಕರದ ನಂತರ ಕಾರ್ಮಿಕ ಸಂಘಟನೆಗೆ ಹೊಸ ರೂಪ ಸಿಕ್ಕಿತು. ಅದರ ಪ್ರಭಾವ ಮಿನರ್ವಾ ಮತ್ತು ಕೃಷ್ಣ ಮಿಲ್‌ಗಳ ಕಾರ್ಮಿಕರ ಮೇಲೂ ಬಿತ್ತು. 1929ರಲ್ಲಿ ಮಿನರ್ವಾ ಮಿಲ್ ಕಾರ್ಮಿಕರು ಮೈಸೂರು/ಮಹಾರಾಜಾ ಮಿಲ್ ಕಾರ್ಮಿಕರ ಪರವಾಗಿ ಮುಷ್ಕರದಲ್ಲೂ ಭಾಗವಹಿಸಿದ್ದರು. ಅಂದಿನ ಅಂತರರಾಷ್ಟ್ರೀಯ ಕಾರ್ಮಿಕ ವರದಿಯಲ್ಲಿ ಮಿನರ್ವಾ ಮಿಲ್ ಕಾರ್ಮಿಕರು ಜೂನ್ 30, 1929ರಂದು ಸಹಾನುಭೂತಿ ಮುಷ್ಕರಕ್ಕೆ ಇಳಿದಿರುವುದನ್ನು ದಾಖಲಿಸಲಾಗಿದೆ.  ಹೀಗಾಗಿ ಮಿನರ್ವಾ ಮಿಲ್ ಬೆಂಗಳೂರು ಕಾರ್ಮಿಕ ಹಕ್ಕುಗಳ ಇತಿಹಾಸದಲ್ಲಿಯೂ ಒಂದು ಪ್ರಮುಖ ಅಧ್ಯಾಯ.

ಆ ಕಾಲದ ಮಿನರ್ವಾ ಮಿಲ್ ಹೇಗಿತ್ತು?

ಸುಮಾರು 1930ರ ಕಾಲದಲ್ಲಿ ಬೆಳಗಿನ ಹೊತ್ತು. ಮಿಲ್ ಸೈರನ್ ಮೊಳಗುತ್ತದೆ. ಸುತ್ತಮುತ್ತಲಿನ ಕಾರ್ಮಿಕರು ಕಾರ್ಖಾನೆಯತ್ತ ಧಾವಿಸುತ್ತಾರೆ. ಒಳಗೆ ಹತ್ತಿ ಯಂತ್ರಗಳ ಸದ್ದು. ಸಾವಿರಾರು ಸ್ಪಿಂಡಲ್‌ಗಳು ಸುತ್ತುತ್ತಿವೆ. ನೂಲು ತಯಾರಾಗುತ್ತಿದೆ. ನೇಯ್ಗೆ ಯಂತ್ರಗಳು ನಿರಂತರವಾಗಿ ಚಲಿಸುತ್ತಿವೆ. ಹೊರಗೆ ಸರಕು ಸಾಗಿಸುವ ವಾಹನಗಳು. ಮಿಲ್ ಸುತ್ತ ಕಾರ್ಮಿಕರ ವಸತಿ. ಅದರಾಚೆಗೆ ಇನ್ನೂ ಖಾಲಿ ಜಾಗ, ಕೆರೆ, ತೋಟ ಮತ್ತು ಹಳೆಯ ಬೆಂಗಳೂರಿನ ಗ್ರಾಮೀಣ ಸ್ವರೂಪ. ಇಂದಿನ ರಾಜಾಜಿನಗರ–ಬಿನ್ನಿಪೇಟೆಯನ್ನು ಊಹಿಸುವುದೇ ಕಷ್ಟ!

ಮಿನರ್ವಾ ಮಿಲ್‌ನ ಸುವರ್ಣಕಾಲ ನಿಧಾನವಾಗಿ ಮುಗಿಯಿತು

ಸ್ವಾತಂತ್ರ್ಯಾನಂತರ ಭಾರತದ ಕೈಗಾರಿಕಾ ವ್ಯವಸ್ಥೆ ಬದಲಾಗತೊಡಗಿತು. ಹಳೆಯ ಯಂತ್ರೋಪಕರಣಗಳು, ಉತ್ಪಾದನಾ ವೆಚ್ಚ, ಸ್ಪರ್ಧೆ, ಕಾರ್ಮಿಕ ಸಮಸ್ಯೆಗಳು, ಬಂಡವಾಳದ ಕೊರತೆ ಮತ್ತು ಮಾರುಕಟ್ಟೆಯ ಬದಲಾವಣೆಗಳು ಅನೇಕ ಹಳೆಯ ಜವಳಿ ಮಿಲ್‌ಗಳಿಗೆ ಹೊಡೆತ ನೀಡಿದವು. ಮಿನರ್ವಾ ಮಿಲ್ ಕೂಡ ಈ ಸಂಕಷ್ಟದಿಂದ ಹೊರತಾಗಲಿಲ್ಲ.  ದಾಖಲೆಗಳ ಪ್ರಕಾರ ಮಿಲ್ 1966–67 ಮತ್ತು ಮತ್ತೆ 1970–71ರಲ್ಲಿ ಮುಚ್ಚಲ್ಪಟ್ಟ ಅವಧಿಗಳನ್ನು ಕಂಡಿತ್ತು. 1971ರಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಜವಳಿ ನಿಗಮ (NTC) ಮೂಲಕ ಅದರ ನಿರ್ವಹಣೆಯನ್ನು ವಶಕ್ಕೆ ತೆಗೆದುಕೊಂಡಿತು. ನಂತರ 1974ರ ಕಾಯ್ದೆಯಡಿ ಮಿಲ್ ರಾಷ್ಟ್ರೀಕರಣಗೊಂಡಿತು.

ಒಂದು ಕುತೂಹಲಕಾರಿ ತಿರುವು, ಮಿನರ್ವಾ ಮಿಲ್ ಹೆಸರು ಕಾನೂನು ಇತಿಹಾಸದಲ್ಲೂ ಉಳಿಯಿತು

ಮಿನರ್ವಾ ಮಿಲ್ ಎಂದರೆ ಕೇವಲ ಕಾರ್ಮಿಕ ಮತ್ತು ಕೈಗಾರಿಕಾ ಇತಿಹಾಸವಲ್ಲ. ಇದೇ ಮಿಲ್‌ಗೆ ಸಂಬಂಧಿಸಿದ Minerva Mills Ltd. v. Union of India ಪ್ರಕರಣವು ಭಾರತದ ಸಂವಿಧಾನಿಕ ಕಾನೂನು ಇತಿಹಾಸದಲ್ಲಿಯೂ ಪ್ರಸಿದ್ಧವಾಗಿದೆ. 1980ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಂವಿಧಾನದ ಮೂಲ ರಚನೆ (Basic Structure) ಸಿದ್ಧಾಂತದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪ್ರಕರಣವಾಯಿತು. ಮಿಲ್‌ನ ರಾಷ್ಟ್ರೀಕರಣದ ಹಿನ್ನೆಲೆಯಿಂದ ಹುಟ್ಟಿದ ಪ್ರಕರಣವೇ ದೇಶದ ಸಂವಿಧಾನಿಕ ಇತಿಹಾಸದ ಪ್ರಮುಖ ತೀರ್ಪುಗಳಲ್ಲಿ ಒಂದಾಗಿ ಮಾರ್ಪಟ್ಟಿತು.  ಅಂದರೆ— ಒಂದು ಕಾಲದಲ್ಲಿ ಬಟ್ಟೆ ನೇಯ್ದ ಮಿಲ್, ನಂತರ ಭಾರತದ ಸಂವಿಧಾನಿಕ ಇತಿಹಾಸದಲ್ಲೂ ತನ್ನ ಹೆಸರನ್ನು ಬಿಟ್ಟಿತು.

ಮಿನರ್ವಾ ಮಿಲ್ಸ್,  ಮಿಲ್‌ನಿಂದ ಸ್ಯಾಂಡಲ್‌ವುಡ್‌ನ ಜನಪ್ರಿಯ ಶೂಟಿಂಗ್‌ ಸ್ಪಾಟ್‌ವರೆಗೆ…

ಮೆಜೆಸ್ಟಿಕ್‌ನಿಂದ ಕೇವಲ ಕೆಲವೇ ಕಿಲೋಮೀಟರ್‌ ದೂರದ,  ಸುಮಾರು 20 ಎಕರೆ ವಿಸ್ತೀರ್ಣದ ಮಿನರ್ವಾ ಮಿಲ್ಸ್‌ನ ಮುಚ್ಚಿಹೋದ ನಂತರ ಪಾಳು ಬಿದ್ದ ಪ್ರದೇಶದಂತಾಗಿ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ನೆಚ್ಚಿನ ಶೂಟಿಂಗ್‌ ತಾಣವಾಗಿತ್ತು. ಬ್ರಿಟಿಷರ ಕಾಲದ ಹಳೆಯ ಕಾರ್ಖಾನೆಯ ಕಟ್ಟಡಗಳು, ಕಾಡಿನಂತಿದ್ದ ಹಸಿರು ಪ್ರದೇಶ, ಹಳೆಯ ಗಲ್ಲಿಗಳು ಮತ್ತು ವಿಶಾಲ ಆವರಣ—ನಿರ್ದೇಶಕರು ಹಾಗೂ ಕಲಾ ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಇಲ್ಲಿ ವಿಭಿನ್ನ ಲೋಕಗಳನ್ನೇ ಸೃಷ್ಟಿಸಲು ಸಾಧ್ಯವಾಗುತ್ತಿತ್ತು.

Kannada Film Industry: ಪಾಳು ಬಿದ್ದ 'ಮಿನರ್ವಾ ಮಿಲ್ಸ್', ಸ್ವರ್ಗದ ಬಾಗಿಲು ಸಿನಿ ಮಂದಿಗೆ ಕಂಪ್ಲೀಟ್ ಕ್ಲೋಸ್! | Sandalwood Shooting Minerva Mills Now Closed for Shooting | - News18 Kannada

ಕೆಜಿಎಫ್ Chapter 1 & Chapter 2, ಶಿವರಾಜ್‌ಕುಮಾರ್ ಅವರ ಟಗರು, ಸುದೀಪ್ ಅವರ ದಿ ವಿಲನ್ ಚಿತ್ರದ ಕೆಲವು ರಸ್ತೆ ದೃಶ್ಯಗಳು ಸೇರಿದಂತೆ Mr. & Mrs. ರಾಮಾಚಾರಿ ಚಿತ್ರದ ಟೈಟಲ್‌ ಟ್ರ್ಯಾಕ್‌,  ಶ್ರೀಮುರಳಿ ನಟನೆಯ ಉಗ್ರಂ ಚಿತ್ರದ ಹಾಡು, ಕಬ್ಜ ಮತ್ತು ಘೋಸ್ಟ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ.  ಜೈಲು, ಹಳೆಯ ಬ್ರಿಟಿಷ್‌ ಕಾಲದ ರಸ್ತೆ, ಭೂಗತ ಜಗತ್ತು, ಕಾಡು ಹೀಗೆ ಸಿನಿಮಾದ ಅಗತ್ಯಕ್ಕೆ ತಕ್ಕಂತೆ ಪಾಳುಬಿದ್ದ ಕಾರ್ಖಾನೆಯೇ ಅದ್ಭುತ ಸೆಟ್‌ ಆಗಿ ರೂಪಾಂತರಗೊಳ್ಳುತ್ತಿತ್ತು. ಆದರೆ ಆ ಸಿನಿ ಲೋಕಕ್ಕೂ ತೆರೆ ಬಿದ್ದು,. ಒಮ್ಮೆ ಸ್ಯಾಂಡಲ್‌ವುಡ್‌ನ ಕನಸುಗಳನ್ನು ಸಾಕಾರಗೊಳಿಸಿದ್ದ ಮಿನರ್ವಾ ಮಿಲ್ಸ್‌  ಇಂದು ಶೂಟಿಂಗ್‌ ಸ್ಪಾಟ್‌ ಆಗಿ ಉಳಿದಿಲ್ಲ.  ಮಿನರ್ವಾ ಮಿಲ್ಸ್‌ನ ಅಮೂಲ್ಯ ಭೂಮಿಯಲ್ಲಿ  ವಾಣಿಜ್ಯ ಮತ್ತು ವಸತಿ ಅಭಿವೃದ್ಧಿಗಳು ತಲೆ ಎತ್ತುತ್ತಿದ್ದು, ಸುತ್ತಮುತ್ತ ಈಗಾಗಲೇ ದೊಡ್ಡ ಮಾಲ್‌ಗಳು ನಿರ್ಮಾಣಗೊಂಡಿವೆ.

ಮಿನರ್ವಾ ಮಿಲ್ಸ್  ಇದ್ದ ಜಾಗ ಇಂದು ಏನಾಗಿದೆ?

LuLu Mall Bengaluru | The Ultimate Shopping Destination

ಇಂದು ಆ ಹಳೆಯ ಕೈಗಾರಿಕಾ ಭೂದೃಶ್ಯ ಬಹುತೇಕ ಸಂಪೂರ್ಣ ಬದಲಾಗಿದೆ. 2005ರಲ್ಲಿ ಹಳೆಯ ಮಿನರ್ವಾ ಮಿಲ್‌ನ NTC ಭೂಮಿಯನ್ನು ಮುಕ್ತ ಹರಾಜಿನಲ್ಲಿ ಮಾರಾಟ ಮಾಡಲಾದ  ನಂತರ, ಅಲ್ಲಿ ದೊಡ್ಡ ವಾಣಿಜ್ಯ-ವಸತಿ ಯೋಜನೆಗಳು ಬಂದವು.  ಮಿನರ್ವಾ ಮಿಲ್‌ನ ವಿಶಾಲ ಜಾಗದ ಒಂದು ಭಾಗದಲ್ಲಿ ಇಂದು LuLu Global Mall ಇದೆ. ಅದೇ ಮಿನರ್ವಾ ಮಿಲ್ ಕಾಂಪೌಂಡ್‌ನಲ್ಲಿ Sobha Indraprastha ಮುಂತಾದ ವಸತಿ-ವಾಣಿಜ್ಯ ಅಭಿವೃದ್ಧಿಗಳೂ ನಿರ್ಮಾಣಗೊಂಡಿವೆ. ಮತ್ತೊಂದು ಭಾಗದಲ್ಲಿ Prestige West Woods ಇದೆ. ಪ್ರಸ್ತುತ ಆ ಪ್ರದೇಶದ ವಿಳಾಸಗಳಲ್ಲಿಯೂ Minerva Mills Compound ಎಂಬ ಹೆಸರು ಮುಂದುವರಿದಿದೆ.   ಇಂದು  ಸಜ್ಜಿತ ಮಾಲ್, ಐಷಾರಾಮಿ ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಕಟ್ಟಡಗಳನ್ನು ನೋಡುವ ಜಾಗದಲ್ಲೇ ಒಮ್ಮೆ ಸಾವಿರಾರು ಕಾರ್ಮಿಕರು ಹತ್ತಿ ಮತ್ತು ಬಟ್ಟೆಯೊಂದಿಗೆ ಬದುಕು ಕಟ್ಟಿಕೊಂಡಿದ್ದರು.

19ನೇ ಶತಮಾನದ ಕೊನೆಯಿಂದ 20ನೇ ಶತಮಾನದ ಮಧ್ಯಭಾಗದವರೆಗೆ ಜವಳಿ ಉದ್ಯಮವು ನಗರದ ಆರ್ಥಿಕತೆಯ ಪ್ರಮುಖ ಆಧಾರವಾಗಿತ್ತು. 1950ರ ವೇಳೆಗೆ ದೊಡ್ಡ ಜವಳಿ ಮಿಲ್‌ಗಳಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿದ್ದರು. ನಂತರ ಜವಳಿ → ಸಾರ್ವಜನಿಕ ವಲಯದ ಕೈಗಾರಿಕೆಗಳು → ಎಂಜಿನಿಯರಿಂಗ್ → ಎಲೆಕ್ಟ್ರಾನಿಕ್ಸ್ → ಏರೋಸ್ಪೇಸ್ → ಐಟಿ ಎಂಬ ಹಂತಗಳ ಮೂಲಕ ಬೆಂಗಳೂರು ಬದಲಾಗಿ,  Electronic City, Whitefield, Outer Ring Road ಮುಂತಾದ ಪ್ರದೇಶಗಳಲ್ಲಿ ಐಟಿ ಉದ್ಯಮಗಳು ಆರಂಭವಾಗಿ ಲಕ್ಷಾಂತರ ಸಂಬಳದ ರುಚಿ ಕಾಣುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಹತ್ತಿ ಗಿರಣಿಗಳು ಒಂದೊಂದಾಗಿ ಮುಚ್ಚಿ ಹೋಗುತ್ತಾ, Mill ಇದ್ದ ಪ್ರದೇಶಗಳೆಲ್ಲವೂ ಇಂದು Mallಗಳಾಗಿ. ಹೋಗಿದ್ದನ್ನು ಬೆಂಗಳೂರಿನ ಅಭಿವೃದ್ಧಿ ಎನ್ನಬೇಕೋ, ಅವಸಾನ ಎನ್ನಬೇಕೋ? ಎನ್ನುವ ಜಿಜ್ಞಾಸೆ ಕಾಡುತ್ತಿರುವುದಂತೂ ಸುಳ್ಳಲ್ಲಾ!

ಕೊನೆಯ ಮಾತು. ಮಿಲ್‌ಗಳ ಸದ್ದು ನಿಂತರೂ ಇತಿಹಾಸದ ಸದ್ದು ನಿಲ್ಲುವುದಿಲ್ಲ

Lulu Mall Bengaluru, Global Malls, Bangalore, shorts - magicpin | September, 2026

ಮಿನರ್ವಾ ಮಿಲ್ ಈ ಕೈಗಾರಿಕಾ ಬೆಂಗಳೂರಿನ ಆರಂಭಿಕ ದೊಡ್ಡ ಅಧ್ಯಾಯಗಳಲ್ಲಿ ಒಂದಾಗಿತ್ತು. ಇಂದು ಮಿನರ್ವಾ ಮಿಲ್‌ನ ಜಾಗದಲ್ಲಿ ಮಾಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳು ನಿಂತಿವೆ. ಆದರೆ ಆಧುನಿಕ ಕಟ್ಟಡಗಳ ಕೆಳಗೆ ಇನ್ನೂ ಒಂದು ಹಳೆಯ ಬೆಂಗಳೂರು ಮಲಗಿದೆ. ಒಮ್ಮೆ ಇಲ್ಲಿ ಯಂತ್ರಗಳು ಸದ್ದು ಮಾಡುತ್ತಿದ್ದವು. ಇಂದು ಇಲ್ಲಿ ನಗರ ಬದುಕು ಸದ್ದು ಮಾಡುತ್ತಿದೆ. ಅದೇ ಮಿನರ್ವಾ ಮಿಲ್  ಬೆಂಗಳೂರಿಗೆ ನೀಡಿದ ದೊಡ್ಡ ಪರಂಪರೆ.

ಇದು ಕೇವಲ  ಒಂದು ಮಿಲ್‌ ಅಥವಾ  ಒಂದು ಶೂಟಿಂಗ್‌ ತಾಣ ಕಳೆದುಹೋದ ಕಥೆಯಲ್ಲ. ಬೆಂಗಳೂರಿನ ಹಳೆಯ ಕೈಗಾರಿಕಾ ಪರಂಪರೆ ಹೇಗೆ ನಿಧಾನವಾಗಿ ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಆಧುನಿಕ ವಾಣಿಜ್ಯ ಕಟ್ಟಡಗಳಿಗೆ ಜಾಗ ಮಾಡಿಕೊಡುತ್ತಿದೆ ಎಂಬುದರ ಮತ್ತೊಂದು ಉದಾಹರಣೆ. ಇಂದು ಮಿನರ್ವಾ ಮಿಲ್ಸ್‌  ಸ್ಯಾಂಡಲ್‌ವುಡ್‌ನ ನೆನಪುಗಳಲ್ಲಿ ಮಾತ್ರ ಉಳಿದು ಹೋದದ್ದು ವಿಷಾಧನೀಯವಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಮಿನರ್ವಾ ಮಿಲ್ ಬೆಂಗಳೂರಿನ ಕೈಗಾರಿಕಾ ಯುಗವನ್ನು ಕಟ್ಟಿದ ಜವಳಿ ಸಾಮ್ರಾಜ್ಯದ ಕಥೆ”

  1. ಕಾಲಕ್ಕೆ ತಕ್ಕಂತೆ ಗಿರಣಿಯ ತಂತ್ರಜ್ಞಾನ ಆಧುನಿಕತೆಯೂ ಆಯಿತು. ಕೇಂದ್ರ ಸರ್ಕಾರ ಕೋಟ್ಯಾತರ ರೂಪಾಯಿ ಹಣವನ್ನು ಹಾಕಿ ಸಾಕಷ್ಟು ಆಧುನಿಕರಣವನ್ನು ಮಾಡಿತು. ದೇಶದ ಎಲ್ಲ ಕಡೆ ಈ ತರಹದ NTC Mill ಗಳಿವೆ. ಆದರೆ ಬದಲಾದ ಮಾರುಕಟ್ಟೆ, ಜನರ ಅಭಿರುಚಿಗಳ ಮುಂದೆ ಯಾವುದೇ ಬಟ್ಟೆ ಕಾರ್ಖಾನೆಗಳು ನಿಲ್ಲಲು ಆಗಲಿಲ್ಲ. ಕಾಲಾಯ ತಸ್ಮೈ ನಮಃ 🙏🏻

Leave a Reply