ಉಪಚುನಾವಣೆ ಫಲಿತಾಂಶ, ಕಾಂಗ್ರೆಸ್‌, ಇಂಡಿ ಒಕ್ಕೂಟ ಮತ್ತು ಸಿಜೆಪಿಗೆ ಭಾರೀ ಮುಖಭಂಗ

SIR ವಿವಾದದ ನಡುವೆ ಬಂದ ಉಪಚುನಾವಣೆ ಫಲಿತಾಂಶಗಳು, ಚುನಾವಣಾ ಆಯೋಗದ ವಿರುದ್ಧದ ಆರೋಪಗಳಿಗೂ ಮಾಜಿ ನ್ಯಾಯಮೂರ್ತಿಗಳ ತೀಕ್ಷ್ಣ ಪ್ರತಿಕ್ರಿಯೆ

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಅಂತಿಮ ತೀರ್ಪುಗಾರರು. ಚುನಾವಣೆಯಲ್ಲಿ ಮತದಾರರು ನೀಡುವ ತೀರ್ಪನ್ನು ಒಪ್ಪಿಕೊಳ್ಳುವುದು ಪ್ರತಿಯೊಂದು ರಾಜಕೀಯ ಪಕ್ಷದ ಪ್ರಜಾಸತ್ತಾತ್ಮಕ ಜವಾಬ್ದಾರಿ. ಗೆಲುವು ಬಂದಾಗ ಅದನ್ನು ಜನರ ಆಶೀರ್ವಾದ ಎಂದು ಸ್ವೀಕರಿಸುವ ಪಕ್ಷಗಳು, ಸೋಲು ಬಂದಾಗ ಮಾತ್ರ ಚುನಾವಣಾ ವ್ಯವಸ್ಥೆಯನ್ನೇ ಪ್ರಶ್ನಿಸುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ.

ಆದರೆ ಅದೇ ಸಮಯದಲ್ಲಿ, ಚುನಾವಣಾ ಪ್ರಕ್ರಿಯೆಯ ಬಗ್ಗೆ ಅನುಮಾನಗಳಿದ್ದರೆ ಅವುಗಳನ್ನು ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನಿಸುವ ಹಕ್ಕು ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಇದೆ. ಚುನಾವಣಾ ಆಯೋಗವನ್ನು ಟೀಕಿಸುವುದು ಮತ್ತು ಚುನಾವಣಾ ವ್ಯವಸ್ಥೆಯ ವಿರುದ್ಧ ಸಾಬೀತಿಲ್ಲದ ಆರೋಪಗಳನ್ನು ಮಾಡುವುದು—ಇವೆರಡೂ ಒಂದೇ ವಿಷಯವಲ್ಲ.

ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ಮತ್ತು ಅಸ್ಸಾಂನಲ್ಲಿ ನಡೆದ ಆರು ಉಪಚುನಾವಣೆಗಳ ಫಲಿತಾಂಶಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ಅಕ್ಟೋಬರ್ 9ರಂದು ನಡೆದ ಮತ ಎಣಿಕೆಯಲ್ಲಿ ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು, ತಮಿಳುನಾಡಿನ ಧಾರಾಪುರಂ ಮತ್ತು ಮಧುರಾಂತಕಂನಲ್ಲಿ ಟಿವಿಕೆ ಅಭ್ಯರ್ಥಿಗಳು  ಪುದುಚೇರಿಯ ತಟ್ಟಾಂಚಾವಡಿಯಲ್ಲಿ ಎಐಎನ್‌ಆರ್‌ಸಿ ಅಭ್ಯರ್ಥಿ ಅಶೋಕ್ ಆನಂದ್,  ಅಸ್ಸಾಂನ ನಾಗಾಂವ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮುನ್ನಡೆ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ಉಪಚುನಾವಣೆಗಳು ವಿಶೇಷ ರಾಜಕೀಯ ಮಹತ್ವ ಪಡೆದಿವೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮವನ್ನು ತೆರವುಗೊಳಿಸಿದ್ದರಿಂದ ಇಲ್ಲಿ ಉಪಚುನಾವಣೆ ನಡೆಯಿತು. ಈ ಉಪಚುನಾವಣೆಯಲ್ಲಿ ಬಿಜೆಪಿಯ ಹಸಿ ರಾಣಿ ರಥ್ ಮತ್ತು ಕಾಂಗ್ರೆಸ್‌ನ ಮಿಲನ್ ಪ್ರಧಾನ ನಡುವೆ ಪ್ರಮುಖ ಸ್ಪರ್ಧೆ ನಡೆಯಿತು. ಮತ ಎಣಿಕೆಯ ಪ್ರಾರಂಭಿಕ ಹಂತಗಳಿಂದಲೇ ಹಸಿ ರಾಣಿ ರಥ್ ಮುನ್ನಡೆ ಕಾಯ್ದುಕೊಳ್ಳುತ್ತಲೇ ಸಾಗಿ ಅಂತಿಮವಾಗಿ ವಿಜಯ ಸಾಧಿಸಿದ್ದಾರೆ

ರೇಜಿನಗರದಲ್ಲಿಯೂ ಬಿಜೆಪಿ ಅಭ್ಯರ್ಥಿ ಶಂಖರಾವ್ ಸರ್ಕಾರ್ ಗೆಲುವು  ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಅಬ್ದುಲ್ಲಾಹಿಲ್ ಕಾಫಿ ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದರು.  ಸುಮಾರು ಶೇ. 70ರಷ್ಟು ಮುಸ್ಲಿಂ ಮತದಾರರು ಇರುವ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 75,816 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಮಹತ್ವದ ರಾಜಕೀಯ ಮುನ್ನಡೆ ದಾಖಲಿಸುವ ಮೂಲಕ ಬಿಜೆಪಿ ಮುಸ್ಲಿಂ ವಿರೋಧಿ ಎನ್ನುವ ಆರೋಪವನ್ನೂ ಸುಳ್ಳು ಮಾಡಿದೆ ಎನ್ನುವುದೂ ಸಹಾ ಇಲ್ಲಿ ಗಮನಾರ್ಹವಾಗಿದೆ. ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಈ ಉಪಚುನಾವಣೆಗಳು ಒಂದು ರೀತಿಯ ಮೊದಲ ರಾಜಕೀಯ ಪರೀಕ್ಷೆಯಾಗಿದ್ದು ಅದರಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರ ಗೆಲುವು ಸಾಧಿಸಿದ್ದಾರೆ ಎಂದರೂ ತಪ್ಪಾಗದು

ತಮಿಳುನಾಡಿನಲ್ಲಿ ವಿಜಯ್ ಅವರ ಟಿವಿಕೆಗೆ ಮಹತ್ವದ ಪರೀಕ್ಷೆ

ತಮಿಳುನಾಡಿನ ರಾಜಕೀಯದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಿರುವ ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)ಗೆ ಧಾರಾಪುರಂ ಮತ್ತು ಮಧುರಾಂತಕಂ ಉಪಚುನಾವಣೆಗಳು ಅತ್ಯಂತ ಮಹತ್ವದ್ದಾಗಿತ್ತು. 2026ರ ಏಪ್ರಿಲ್ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿಗಳಾಗಿ ಗೆದ್ದಿದ್ದ ಪಿ. ಸತ್ಯಭಾಮಾ ಮತ್ತು ಕೆ. ಮರಗತಂ ಕುಮಾರವೇಲ್ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿವಿಕೆಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಈ ಉಪಚುನಾವಣೆಗಳು ನಡೆದವು.  ಅಂದರೆ, ಇದು ಕೇವಲ ಎರಡು ಕ್ಷೇತ್ರಗಳ ಚುನಾವಣೆ ಅಲ್ಲ.

ಮತದಾರರು ಪಕ್ಷ ಬದಲಿಸಿದ ಶಾಸಕರನ್ನು ಮತ್ತೆ ಗೆಲ್ಲಿಸುತ್ತಾರೆಯೇ?
ವಿಜಯ್ ಅವರ ಹೊಸ ರಾಜಕೀಯ ಶಕ್ತಿಗೆ ಜನರ ಬೆಂಬಲ ಎಷ್ಟಿದೆ?
ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಟಿವಿಕೆ ತನ್ನ ಮತಬ್ಯಾಂಕ್ ಉಳಿಸಿಕೊಂಡಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಚುನಾವಣೆಯಾಗಿತ್ತು.

ಪುದುಚೇರಿಯಲ್ಲಿ ಎಐಎನ್‌ಆರ್‌ಸಿಗೆ ಸ್ಪಷ್ಟ ಗೆಲುವು

ಪುದುಚೇರಿಯ ತಟ್ಟಾಂಚಾವಡಿ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ನೇತೃತ್ವದ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್‌ (AINRC) ಅಭ್ಯರ್ಥಿ ಅಶೋಕ್ ಆನಂದ್ ಸ್ಪಷ್ಟ ಗೆಲುವು ಸಾಧಿಸಿದ್ದಾರೆ. ಅವರು 13,358 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಇ. ವಿನಯಗಂ 4,876 ಮತಗಳನ್ನು ಪಡೆದರು. ಅಶೋಕ್ ಆನಂದ್ 8,482 ಮತಗಳ ಅಂತರದಿಂದ ಗೆದ್ದಿದ್ದಾರೆ. ಡಿಎಂಕೆಯ ಕೆ. ಸೇತುಸೆಲ್ವಂ 2,664 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.  ಇದು ಎನ್‌ಡಿಎ ಮೈತ್ರಿಕೂಟದ ಪಾಲಿಗೆ ಮತ್ತೊಂದು ಧನಾತ್ಮಕ ಫಲಿತಾಂಶವಾಗಿದೆ.

ನಾಗಾಂವ್ ಲೋಕಸಭಾ ಕ್ಷೇತ್ರದ ಫಲಿತಾಂಶವೂ ಕುತೂಹಲಕಾರಿ

ಅಸ್ಸಾಂನ ನಾಗಾಂವ್ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕೂಡ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಕಾಂಗ್ರೆಸ್ ಸಂಸದ ಪ್ರದ್ಯೂತ್ ಬೊರ್ಡೊಲೊಯ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಕ್ಷೇತ್ರ ತೆರವಾಗಿತ್ತು. ಬಿಜೆಪಿ ಪರ ಮಾಜಿ ಐಎಎಸ್ ಅಧಿಕಾರಿ ದೇವಾಶಿಶ್ ಶರ್ಮಾ, ಕಾಂಗ್ರೆಸ್ ಪರ ಮಾಜಿ ಶಾಸಕಿ ಸಿಬಾಮೋನಿ ಬೋರಾ ಮತ್ತು ಎಐಯುಡಿಎಫ್ ಪರ ಪಕ್ಷದ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಸೇರಿದಂತೆ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದರು.  ಹೀಗಾಗಿ ನಾಗಾಂವ್ ಫಲಿತಾಂಶವು ಕೇವಲ ಒಂದು ಲೋಕಸಭಾ ಕ್ಷೇತ್ರದ ಫಲಿತಾಂಶವಲ್ಲ; ಅಸ್ಸಾಂನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಎಐಯುಡಿಎಫ್ ನಡುವಿನ ರಾಜಕೀಯ ಸಮೀಕರಣದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿತ್ತು.

EVM & SIR ಕುರಿತಾಗಿ UPA  ಅವಧಿಯಲ್ಲಿ ಮಂತ್ರಿಗಳಾಗಿದ್ದ, ವೀರಪ್ಪ ಮೊಯ್ಲಿ ಮತ್ತು ಕಪಿಲ್ ಸಿಬಲ್ ಅವರ ಹೇಳಿಕೆಗಳು

 ಇವಿಎಂ ಟ್ಯಾಂಪರಿಂಗ್ ಕುರಿತು ವೀರಪ್ಪ ಮೊಯ್ಲಿ

ಯುಪಿಎ ಸರ್ಕಾರದ ಅಡಿಯಲ್ಲಿ ಕೇಂದ್ರ ಕಾನೂನು ಸಚಿವರಾಗಿ, ವೀರಪ್ಪ ಮೊಯ್ಲಿ ಸಂಸತ್ತಿನಲ್ಲಿ  ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂಗಳು) ಸಂಪೂರ್ಣವಾಗಿ ಟ್ಯಾಂಪರ್-ಪ್ರೂಫ್” ಎಂದು ದೃಢವಾಗಿ ಘೋಷಿಸಿದ್ದರು 

  • ಐಐಟಿ ಮದ್ರಾಸ್‌ನ ಮಾಜಿ ನಿರ್ದೇಶಕ ಪ್ರೊಫೆಸರ್ ಪಿ.ಬಿ. ರಾವ್ ನೇತೃತ್ವದ ತಾಂತ್ರಿಕ ತಜ್ಞರ ಸಮಿತಿಯ ಸಂಶೋಧನೆಗಳನ್ನು ಅವರು ಉಲ್ಲೇಖಿಸಿ, ಯಂತ್ರಗಳ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ ಮತ್ತು ಅವುಗಳನ್ನು ಕುಶಲತೆಯಿಂದ ನಿರ್ವಹಿಸಬಹುದೆಂದು ಯಾರೂ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

  • ಇವಿಎಂ ದುರ್ಬಳಕೆಗೆ ಸಂಬಂಧಿಸಿದ ಆರೋಪಗಳು ಆಧಾರರಹಿತವೆಂದು ಅವರು ಸಮರ್ಥಿಸಿಕೊಂಡರು, ಭಾರತೀಯ ಚುನಾವಣೆಗಳಲ್ಲಿ ಬಳಸುವ ತಂತ್ರಜ್ಞಾನವು ವೈಜ್ಞಾನಿಕವಾಗಿ ಸುರಕ್ಷಿತವಾಗಿದೆ ಎಂದು ಒತ್ತಿ ಹೇಳಿದರು. 

ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಕಪಿಲ್ ಸಿಬಲ್

2013 ರಲ್ಲಿ ಕೇಂದ್ರ ಕಾನೂನು ಸಚಿವರಾಗಿ , ಕಪಿಲ್ ಸಿಬಲ್ ರಾಜ್ಯಸಭೆಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಗಳ ನವೀಕರಣವನ್ನು ಸಮರ್ಥಿಸಿಕೊಂಡು ಭಾಷಣ ಮಾಡಿದ್ದರು 

  • ಅಳಿಸುವಿಕೆಗಳ ಕಾನೂನುಬದ್ಧತೆ:   ನಾಗರಿಕನು ಬೇರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳಾಂತರಗೊಂಡಾಗ, ನಕಲಿ ನಮೂದುಗಳು ಅಸ್ತಿತ್ವದಲ್ಲಿದ್ದಾಗ ಅಥವಾ ಒಬ್ಬ ವ್ಯಕ್ತಿಯು ನಿಧನರಾದಾಗ.  ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವುದು ನಿರ್ದಿಷ್ಟ, ಸಮಂಜಸ ಮಾನದಂಡಗಳ ಅಡಿಯಲ್ಲಿ ಕಾರ್ಯಗತಗೊಳಿಸಲಾದ ಪ್ರಮಾಣಿತ, ಕಾನೂನುಬದ್ಧ ಪ್ರಕ್ರಿಯೆಯಾಗಿದೆ ಎಂದು ಸಿಬಲ್ ವಿವರಿಸಿದರು:
  • ಕ್ರಿಯಾತ್ಮಕ ಪ್ರಕ್ರಿಯೆ: ಮತದಾರರ ಪಟ್ಟಿಯು ಶಾಶ್ವತವಾಗಿ ಸ್ಥಗಿತಗೊಳ್ಳುವ ಬದಲು ನಿಯಮಿತವಾಗಿ ನವೀಕರಿಸಲ್ಪಡುವ ಕ್ರಿಯಾತ್ಮಕ, ನಿರಂತರ ವ್ಯಾಯಾಮ ಎಂದು ಅವರು ಪ್ರತಿಪಾದಿಸಿದರು.
  • ಮತದಾರರಿಗೆ ಪರಿಹಾರಗಳು:  SIR ಸಮಯದಲ್ಲಿ ಯಾರ ಹೆಸರನ್ನಾದರೂ ತಪ್ಪಾಗಿ ಅಳಿಸಿದರೆ, ಆ ವ್ಯಕ್ತಿಯು ಔಪಚಾರಿಕ ಮರು-ಸೇರ್ಪಡೆಗಾಗಿ ಚುನಾವಣಾ ನೋಂದಣಿ ಅಧಿಕಾರಿಯನ್ನು ಸಂಪರ್ಕಿಸುವ ಹಕ್ಕನ್ನು ಉಳಿಸಿಕೊಳ್ಳುತ್ತಾನೆ. ಈ ವ್ಯವಸ್ಥೆಯು ಸರಿಯಾದ ಪರಿಶೀಲನೆ ಮತ್ತು ಸಮತೋಲನಗಳನ್ನು ಒದಗಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದರು 

ಹಾಗಾದರೆ ಓಟ್ ಚೋರಿ ಆರೋಪಗಳಿಗೆ ಜನರ ಉತ್ತರವೇನು?

UPA ಅವಧಿಯಲ್ಲಿ ಸರಿಯಾಗಿದ್ದ EVM ಯಂತ್ರಗಳು ಮತ್ತು SIR ಪ್ರಕ್ತಿಯೆ ಈಗ ಏಕಾಏಕಿ ಬದಲಾಗಿದೆ ಎಂದು ವಿರೋಧ ಪಕ್ಷಗಳು  ಇತ್ತೀಚಿನ ದಿನಗಳಲ್ಲಿ  ಓಟ್ ಚೋರಿ ಅಥವಾ ಮತ ಕಳ್ಳತನದ ಆರೋಪ ಮತ್ತು ಹೋರಾಟದ ನೆಪದಲ್ಲಿ ಬಾಂಗ್ಲಾ ಮತ್ತು ನೇಪಾಳದಂತೆ ಅರಾಜಕತೆ ಎಬ್ಬಿಸಲು ಪ್ರಯತ್ನಿಸುತ್ತಿದ್ದ ವಿರೋಧ ಪಕ್ಷಗಳಿಗೆ ಈ ಫಲಿತಾಂಶ ಭಾರೀ ಮುಖಭಂಗವನ್ನು ತಂದಿದೆ ಎಂದರೂ ಸುಳ್ಳಾಗದು. ಇವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದಲ್ಲಿ ಜನತೆಯೇ ಜರ್ನಾರ್ಧನ ಎನ್ನುವಂತೆ ಮತದಾರರು ನೀಡಿರುವ ಈ ಫಲಿತಾಂಶಕ್ಕೆ ತಲೆ ಬಾಗಿ  2026ರ ಅಕ್ಟೋಬರ್ 10 ರಂದು ಜಂತರ್ ಮಂತರ್ ನಲ್ಲಿ ನಡೆಸಲು ಮುಂದಾಗಿರುವ ಪ್ರತಿಭಟನೆಯನ್ನು ಥತ್ ತಕ್ಷಣದಿಂದಲೇ ನಿಲ್ಲಿಸಬೇಕು. ಅದೇ ರೀತಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮತ್ತವರ ಪಟಾಲಂ ದೆಹಲಿಯ ರಸ್ತೆ ರಸ್ತೆಗಳ ಮೇಲೆ ಬಿದ್ದು ಒದ್ದಾಡುವ ಪ್ರಹಸನಕ್ಕೆ ಬ್ರೇಕ್ ಹಾಕಬೇಕು

ಮತದಾರರ ಪಟ್ಟಿಯ Special Intensive Revision — SIR ಪ್ರಕ್ರಿಯೆಯನ್ನು ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ, SIR ಪ್ರಕ್ರಿಯೆಯ ಮರುಪರಿಶೀಲನೆ ಮತ್ತು ಚುನಾವಣಾ ವ್ಯವಸ್ಥೆಯ ಕುರಿತು ತನಿಖೆ ಸೇರಿದಂತೆ ಹಲವು ಬೇಡಿಕೆಗಳನ್ನು ವಿರೋಧ ಪಕ್ಷಗಳು ಮುಂದಿಟ್ಟಿವೆ.  ಇಲ್ಲಿ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ:

ಆರೋಪಕ್ಕೆ ಪುರಾವೆ ಏನು?

ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುವುದು ರಾಜಕೀಯವಾಗಿ ಸಾಧ್ಯ. ಆದರೆ ಇಂತಹ ಗಂಭೀರ ಆರೋಪಗಳಿಗೆ ದಾಖಲೆಗಳು, ನಿರ್ದಿಷ್ಟ ಪ್ರಕರಣಗಳು ಮತ್ತು ನ್ಯಾಯಾಂಗದ ಮುಂದೆ ನಿಲ್ಲಬಲ್ಲ ಸಾಕ್ಷ್ಯಗಳು ಇರಬೇಕಾಗುತ್ತದೆ. ಇದೇ ವಿಚಾರವನ್ನು ಇದೀಗ ಮಾಜಿ ನ್ಯಾಯಮೂರ್ತಿಗಳ ಗುಂಪೊಂದು ಪ್ರಶ್ನಿಸಿದೆ.

42 ಮಾಜಿ ನ್ಯಾಯಮೂರ್ತಿಗಳ ಬಹಿರಂಗ ಪತ್ರ

ಅಕ್ಟೋಬರ್ 7ರಂದು ದಿನಾಂಕ ಹೊಂದಿರುವ ಬಹಿರಂಗ ಪತ್ರದಲ್ಲಿ 42 ಮಂದಿ ಮಾಜಿ ನ್ಯಾಯಮೂರ್ತಿಗಳು ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಇತರ ಸಂವಿಧಾನಾತ್ಮಕ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ಅಭಿಯಾನದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.  ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಪಂಕಜ್ ಮಿತ್ತಲ್ ಸೇರಿದಂತೆ ಹಲವು ಮಾಜಿ ನ್ಯಾಯಮೂರ್ತಿಗಳು ಪತ್ರಕ್ಕೆ ಸಹಿ ಹಾಕಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಸೇರಿದಂತೆ ವಿವಿಧ ಹೈಕೋರ್ಟ್‌ಗಳ ಮಾಜಿ ನ್ಯಾಯಮೂರ್ತಿಗಳೂ ಸಹಿ ಹಾಕಿದ್ದಾರೆ.  ಅವರ ನಿಲುವಿನ ಕೇಂದ್ರಬಿಂದು ಬಹಳ ಸರಳವಾಗಿದೆ:

ಟೀಕೆ ಮಾಡುವುದು ಹಕ್ಕು. ಆದರೆ ಸಂಸ್ಥೆಗಳನ್ನು ಹೀನಾಯಗೊಳಿಸುವುದು ಹಕ್ಕಲ್ಲ.

ಮಾಜಿ ನ್ಯಾಯಮೂರ್ತಿಗಳ ಪ್ರಕಾರ, ಯಾವುದೇ ಪೂರಕ ಸಾಕ್ಷ್ಯಾಧಾರಗಳಿಲ್ಲದೆ ನಿರಂತರವಾಗಿ “ಮತ ಕಳ್ಳತನ”ದಂತಹ ಆರೋಪಗಳನ್ನು ಮಾಡುವುದು ಚುನಾವಣಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಕುಗ್ಗಿಸಬಹುದು.

ನಂಬಿಕೆಯೇ ಪ್ರಜಾಪ್ರಭುತ್ವದ ಕರೆನ್ಸಿ

ಮಾಜಿ ನ್ಯಾಯಮೂರ್ತಿಗಳ ಪತ್ರದಲ್ಲಿನ ಅತ್ಯಂತ ಗಮನಾರ್ಹ ಅಭಿಪ್ರಾಯವೆಂದರೆ

“Trust is the currency of democracy.”

ಅಂದರೆ, ನಂಬಿಕೆಯೇ ಪ್ರಜಾಪ್ರಭುತ್ವದ ಕರೆನ್ಸಿ. ಜನರಿಗೆ ಚುನಾವಣೆಯೇ ವಿಶ್ವಾಸಾರ್ಹವಲ್ಲ ಎಂದು ನಿರಂತರವಾಗಿ ಹೇಳುತ್ತಾ ಹೋದರೆ, ಚುನಾವಣೆಯ ಫಲಿತಾಂಶದ ಮೇಲಿನ ನಂಬಿಕೆ ಕುಸಿಯಬಹುದು. ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳದ ಮನೋಭಾವವು ಕ್ರಮೇಣ ಸಂಸ್ಥೆಗಳ ಮೇಲಿನ ನಂಬಿಕೆಯನ್ನೂ ದುರ್ಬಲಗೊಳಿಸಬಹುದು. ಆದರೆ ಇದರ ಮತ್ತೊಂದು ಮುಖವನ್ನೂ ಮರೆಯಬಾರದು. ಚುನಾವಣಾ ಆಯೋಗವೂ ಪ್ರಶ್ನಾತೀತ ಸಂಸ್ಥೆಯಲ್ಲ. ಅದರ ನಿರ್ಧಾರಗಳ ಬಗ್ಗೆ ರಾಜಕೀಯ ಪಕ್ಷಗಳು, ಮಾಧ್ಯಮಗಳು, ನಾಗರಿಕರು ಮತ್ತು ನ್ಯಾಯಾಲಯಗಳು ಪ್ರಶ್ನೆ ಕೇಳಬಹುದು. ಅಗತ್ಯವಿದ್ದರೆ ನ್ಯಾಯಾಂಗದ ಮೊರೆ ಹೋಗಬಹುದು. ಆದರೆ ಆ ಪ್ರಶ್ನೆಗಳಿಗೆ ದಾಖಲೆ, ಸಾಕ್ಷ್ಯ ಮತ್ತು ಕಾನೂನುಬದ್ಧ ಮಾರ್ಗ ಇರಬೇಕು.

SIR ಬಗ್ಗೆ ಮಾಜಿ ನ್ಯಾಯಮೂರ್ತಿಗಳ ನಿಲುವು

ಮಾಜಿ ನ್ಯಾಯಮೂರ್ತಿಗಳು Special Intensive Revision (SIR) ಪ್ರಕ್ರಿಯೆಯನ್ನು ಕಾನೂನುಬದ್ಧ ಪ್ರಕ್ರಿಯೆಯಾಗಿ ಸಮರ್ಥಿಸಿದ್ದಾರೆ. ಅವರ ಪ್ರಕಾರ, ಮತದಾರರ ಪಟ್ಟಿಯನ್ನು ಪರಿಶೀಲಿಸಿ ನಿಖರಗೊಳಿಸುವುದು ಚುನಾವಣೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.  ಇದರ ವಿರುದ್ಧ ರಾಜಕೀಯ ಪಕ್ಷಗಳಿಗೆ ಆಕ್ಷೇಪಗಳಿದ್ದರೆ ಅವುಗಳನ್ನು ಚುನಾವಣಾ ಆಯೋಗದ ಮುಂದೆ, ನ್ಯಾಯಾಲಯದ ಮುಂದೆ ಅಥವಾ ಸಂವಿಧಾನಬದ್ಧ ಮಾರ್ಗಗಳ ಮೂಲಕ ಮಂಡಿಸಬಹುದು. ಅದೇ ಪ್ರಜಾಪ್ರಭುತ್ವದ ಸೌಂದರ್ಯ.

ಉಪಚುನಾವಣೆಗಳು ನೀಡುವ ರಾಜಕೀಯ ಸಂದೇಶವೇನು?

ಈ ಆರು ಕ್ಷೇತ್ರಗಳ ಫಲಿತಾಂಶಗಳನ್ನು ದೇಶದ ಸಂಪೂರ್ಣ ರಾಜಕೀಯ ಚಿತ್ರಣದ ಅಂತಿಮ ಪ್ರತಿಬಿಂಬ ಎಂದು ಪರಿಗಣಿಸುವುದು ಸರಿಯಲ್ಲವಾದರೂ, ಉಪಚುನಾವಣೆ ಎಂದರೆ ಉಪಚುನಾವಣೆಯೇ. ಈ ಉಪಚುನಾವಣೆಯಲ್ಲಿ ಮತದಾನ ಮಾಡುವ ಮತದಾರ, ಖಂಡಿತವಾಗಿಯೂ ಸ್ಥಳೀಯ ಅಭ್ಯರ್ಥಿ, ಸ್ಥಳೀಯ ಸಮಸ್ಯೆ, ಪಕ್ಷಾಂತರ, ಸರ್ಕಾರದ ಜನಪ್ರಿಯತೆ, ಜಾತಿ-ಸಾಮಾಜಿಕ ಸಮೀಕರಣ ಮತ್ತು ಅಭ್ಯರ್ಥಿಯ ವೈಯಕ್ತಿಕ ಪ್ರಭಾವದ ಜೊತೆ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಆಗು ಹೋಗುಗಳಬಗ್ಗೆಯೂ ನೋಡಿಕೊಂಡೇ ತನ್ನ ನಿರ್ಧಾರವನ್ನು ಮತ ಪೆಟ್ಟಿಕೆಗಲ್ಲಿ ದಾಖಲಿಸಿರಬಹುದಾದ ಕಾರಣ ನಿಸ್ಸಂದೇಹವಾಗಿ ಇವೆಲ್ಲವೂ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ.

ಮತದಾರನ ತೀರ್ಪಿನಂತೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ತಮಿಳುನಾಡಿನಲ್ಲಿ ಹೊಸ ರಾಜಕೀಯ ಶಕ್ತಿಯಾದ ಟಿವಿಕೆ ತನ್ನ ಅಸ್ತಿತ್ವವನ್ನು ಸಾಭೀತು ಪಡಿಸಿದೆ. ಪುದುಚೇರಿಯಲ್ಲಿ ಆಡಳಿತಾರೂಢ ಎಐಎನ್‌ಆರ್‌ಸಿ ಸ್ಪಷ್ಟ ಗೆಲುವು ಸಾಧಿಸಿದೆ. ಅಸ್ಸಾಂನಲ್ಲಿ ಬಿಜೆಪಿ ತನ್ನ ಪ್ರಭಾವ ವಿಸ್ತರಿಸಿದೆ. ಇವೆಲ್ಲವೂ ದೇಶದ ರಾಜಕೀಯದಲ್ಲಿ ಒಂದೇ ಪಕ್ಷದ ಪರ ಅಥವಾ ವಿರುದ್ಧ ಇರುವ ಏಕಮುಖ ಅಲೆಗಿಂತ ವಿಭಿನ್ನ ರಾಜ್ಯಗಳಲ್ಲಿ ವಿಭಿನ್ನ ರಾಜಕೀಯ ಸಂದೇಶಗಳು ಹೊರಹೊಮ್ಮುತ್ತಿವೆ ಎಂಬುದನ್ನು ಸೂಚಿಸುತ್ತವೆ.

ಸೋಲು ಬಂದಾಗ ಪ್ರಜಾಪ್ರಭುತ್ವ ಸೋಲುವುದಿಲ್ಲ

ನಾವು ಗೆದ್ದರೆ ಪ್ರಜಾಪ್ರಭುತ್ವ ಗೆದ್ದಿತು. ನಾವು ಸೋತರೆ ಪ್ರಜಾಪ್ರಭುತ್ವ ಸೋತಿತು  ಎನ್ನುವ ಮನೋಭಾವ  ಹೊಂದಿರುವ   ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ  ಅದೇ ರೀತಿ, ನಮ್ಮ ಪರವಾದ ಫಲಿತಾಂಶ ಬಂದರೆ ಚುನಾವಣಾ ಆಯೋಗ ಪ್ರಾಮಾಣಿಕ. ವಿರುದ್ಧ ಬಂದರೆ ಚುನಾವಣಾ ಆಯೋಗ ದೋಷಿ ಎನ್ನುವ ವಾದವೂ ಜನರಲ್ಲಿ ವಿಶ್ವಾಸ ಮೂಡಿಸುವುದಿಲ್ಲ. ಪ್ರಜಾಪ್ರಭುತ್ವದ ನಿಜವಾದ ಪರೀಕ್ಷೆ ಎಂದರೆ, ನಮಗೆ ಅನುಕೂಲವಾದ ಫಲಿತಾಂಶ ಬಂದಾಗ ಮಾತ್ರವಲ್ಲ, ನಮಗೆ ವಿರುದ್ಧವಾದ ಫಲಿತಾಂಶ ಬಂದಾಗಲೂ ಅದನ್ನು ಕಾನೂನುಬದ್ಧವಾಗಿ ಸ್ವೀಕರಿಸುವ ಸಾಮರ್ಥ್ಯ. ಇದೇ ಸಂವಿಧಾನವನ್ನು ನಿಜವಾಗಿಯೂ ಗೌರವಿಸುವ ನಡೆ.

ಕೊನೆಯ ಮಾತು

ಈ ಉಪಚುನಾವಣೆಗಳ ಫಲಿತಾಂಶಗಳು ಕಾಂಗ್ರೆಸ್, ವಿರೋಧ ಪಕ್ಷಗಳು, ಟಿವಿಕೆ, ಬಿಜೆಪಿ ಅಥವಾ ಯಾವುದೇ ಒಂದು ಪಕ್ಷಕ್ಕೆ ಮಾತ್ರ ಪಾಠ ಕಲಿಸುವುದಿಲ್ಲ. ಅವು ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಸಂದೇಶ ನೀಡುತ್ತವೆ. ನಿಮ್ಮ  ರಾಜಕೀಯ ತೆವಲುಗಳಿಗಾಗಿ, 

ಮತದಾರರನ್ನು ಲಘುವಾಗಿ ಪರಿಗಣಿಸಬೇಡಿ.

ಜನರು ತಮ್ಮ ಮತದಿಂದ ಸರ್ಕಾರ ರಚಿಸುತ್ತಾರೆ. ಜನರು ತಮ್ಮ ಮತದಿಂದ ಸರ್ಕಾರ ಬದಲಿಸುತ್ತಾರೆ. ಜನರು ತಮ್ಮ ಮತದಿಂದ ಹೊಸ ಪಕ್ಷಕ್ಕೆ ಅವಕಾಶ ಕೊಡುತ್ತಾರೆ. ಮತ್ತು ಅಗತ್ಯವೆಂದು ಕಂಡರೆ ಹಳೆಯ ಪಕ್ಷವನ್ನೇ ಮತ್ತೆ ಮತ್ತೆ ಅಧಿಕಾರಕ್ಕೆ ತರುತ್ತಾರೆ. ಆದ್ದರಿಂದ ಮತದಾರರ ತೀರ್ಪನ್ನು ಗೌರವಿಸುವುದು ಪ್ರಜಾಪ್ರಭುತ್ವದ ಮೊದಲ ನಿಯಮ.

ಚುನಾವಣಾ ಪ್ರಕ್ರಿಯೆಯಲ್ಲಿ ನಿಜವಾದ ಅಕ್ರಮವಿದ್ದರೆ ಅದನ್ನು ಸಾಕ್ಷ್ಯಾಧಾರಗಳೊಂದಿಗೆ ಬಯಲಿಗೆಳೆಯಬೇಕು. ಚುನಾವಣಾ ಆಯೋಗ ತಪ್ಪು ಮಾಡಿದರೆ ನ್ಯಾಯಾಲಯದ ಮುಂದೆ ಪ್ರಶ್ನಿಸಬೇಕು. ಆದರೆ ಸಾಕ್ಷ್ಯವಿಲ್ಲದೆ ನಿರಂತರವಾಗಿ ಸಂಸ್ಥೆಗಳನ್ನೇ ಅಪನಂಬಿಕೆಗೆ ಗುರಿಪಡಿಸುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ರೀತಿ, ಅಧಿಕಾರದಲ್ಲಿರುವವರು ಕೂಡ ಟೀಕೆಯನ್ನು ದೇಶದ್ರೋಹ ಅಥವಾ ವಿರೋಧ ಎಂದು ಪರಿಗಣಿಸಬಾರದು.

ಸಂಸ್ಥೆಗಳನ್ನು ಪ್ರಶ್ನಿಸುವ ಹಕ್ಕು ಪ್ರಜೆಗಳಿಗಿದೆ, ಸಂಸ್ಥೆಗಳನ್ನು ರಕ್ಷಿಸುವ ಜವಾಬ್ದಾರಿ ಎಲ್ಲರಿಗೂ ಇದೆ.

ಅಂತಿಮವಾಗಿ

ಚುನಾವಣೆಯಲ್ಲಿ ಗೆಲ್ಲುವುದು ಒಂದು ಪಕ್ಷದ ಗೆಲುವು.
ಚುನಾವಣೆಯನ್ನು ವಿಶ್ವಾಸಾರ್ಹವಾಗಿ ನಡೆಸುವುದು ಪ್ರಜಾಪ್ರಭುತ್ವದ ಗೆಲುವು.
ಮತ್ತು ಜನರ ತೀರ್ಪನ್ನು ಗೌರವಿಸುವುದು ಭಾರತದ ಸಂವಿಧಾನದ ಗೆಲುವು.

ಈ ದೃಷ್ಟಿಯಿಂದ ನೋಡಿದರೆ, ಇತ್ತೀಚಿನ ಉಪಚುನಾವಣೆಗಳ ಫಲಿತಾಂಶಕ್ಕಿಂತಲೂ ದೊಡ್ಡ ಪ್ರಶ್ನೆ ಯಾರು ಗೆದ್ದರು? ಎಂಬುದಲ್ಲ.

ಜನರ ತೀರ್ಪನ್ನು ನಾವು ಎಷ್ಟು ಪ್ರಾಮಾಣಿಕವಾಗಿ ಗೌರವಿಸುತ್ತೇವೆ? ಎಂಬುದೇ ನಿಜವಾದ ಪ್ರಶ್ನೆ.ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply