ಅಸ್ಸಾಂನ ನಾಗಾಂವ್ ಜಿಲ್ಲೆಯ ಪುರಾಣಿಗುದಾಮ್ ಪ್ರದೇಶದಲ್ಲಿರುವ ಮಹಾಮೃತ್ಯುಂಜಯ ದೇವಾಲಯವು ತನ್ನ ಅಪರೂಪದ ವಾಸ್ತುಶಿಲ್ಪದಿಂದ ಭಾರತದ ಪ್ರಮುಖ ಶಿವಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸುಮಾರು 126 ಅಡಿ ಎತ್ತರದ ಬೃಹತ್ ಶಿವಲಿಂಗದ ಆಕಾರದಲ್ಲಿ ನಿರ್ಮಿಸಿರುವ ಈ ದೇವಾಲಯವನ್ನು ಕೇವಲ ಧಾರ್ಮಿಕ ಶ್ರದ್ಧೆಯ ಸಂಕೇತವಾಗಿ ಮಾತ್ರವಲ್ಲದೆ, ಆಧುನಿಕ ಇಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪದ ವಿಶಿಷ್ಟ ಪ್ರಯೋಗವಾಗಿಯೂ ನೋಡಬಹುದು. ದೇವಾಲಯದ ನಿರ್ಮಾಣದ ಹಿಂದಿರುವ ಆಚಾರ್ಯ ಭೃಗು ಗಿರಿ ಮಹಾರಾಜರ ಸಂಕಲ್ಪ, ಶುಕ್ರಾಚಾರ್ಯರಿಗೆ ಸಂಬಂಧಿಸಿದ ಸ್ಥಳೀಯ ನಂಬಿಕೆ, 108 ಯಜ್ಞಕುಂಡಗಳಲ್ಲಿ ನಡೆದ ಪ್ರಾಣಪ್ರತಿಷ್ಠಾ ಮಹೋತ್ಸವ ಹಾಗೂ 2021ರ ಭೂಕಂಪದ ಸಂದರ್ಭ ಇವೆಲ್ಲವೂ ಈ ಕ್ಷೇತ್ರದ ಬಗ್ಗೆ ಕುತೂಹಲ ಮೂಡಿಸುತ್ತವೆ.ಭಾರತದ ಈಶಾನ್ಯ ರಾಜ್ಯ ಅಸ್ಸಾಂ ತನ್ನ ನೈಸರ್ಗಿಕ ಸೌಂದರ್ಯ, ಬ್ರಹ್ಮಪುತ್ರ ನದಿ, ಚಹಾ ತೋಟಗಳು, ವನ್ಯಜೀವಿ ಸಂಪತ್ತು ಮತ್ತು ವೈವಿಧ್ಯಮಯ ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಇಂತಹ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿರುವ ಮಹಾಮೃತ್ಯುಂಜಯ ದೇವಾಲಯವು ತನ್ನ ವಿಶಿಷ್ಟ ವಾಸ್ತುಶಿಲ್ಪದಿಂದ ಭಕ್ತರು ಮತ್ತು ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಸಾಮಾನ್ಯವಾಗಿ ದೇವಾಲಯವೆಂದರೆ ಗರ್ಭಗುಡಿ, ಗೋಪುರ, ಮಂಟಪ ಮತ್ತು ಗರ್ಭಗುಡಿಯಲ್ಲಿರುವ ದೇವರ ಮೂರ್ತಿ ಅಥವಾ ಶಿವಲಿಂಗ ನಮ್ಮ ಕಣ್ಣಿಗೆ ಬರುತ್ತದೆ. ಆದರೆ ಇಲ್ಲಿ ಇಡೀ ದೇವಾಲಯದ ವಿನ್ಯಾಸವೇ ಬೃಹತ್ ಶಿವಲಿಂಗದ ರೂಪದಲ್ಲಿರುವುದು ವಿಶೇಷ. ಸುಮಾರು 126 ಅಡಿ (38.4 ಮೀಟರ್) ಎತ್ತರದ ಶಿವಲಿಂಗದ ಆಕಾರದ ಈ ಭವ್ಯ ರಚನೆ ವಿಶ್ವದ ಅತಿ ಎತ್ತರದ ಶಿವಲಿಂಗವೆಂದು ಪ್ರಸಿದ್ಧಿ ಪಡೆದಿದೆ. ಈ ಕಾರಣದಿಂದಲೇ ದೇಶದ ವಿವಿಧ ಭಾಗಗಳಿಂದ ಶಿವಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಮಹಾಮೃತ್ಯುಂಜಯ ಎಂದರೇನು?

ಮಹಾಮೃತ್ಯುಂಜಯ ಎಂಬ ಪದಕ್ಕೆ ಮರಣವನ್ನು ಜಯಿಸಿದವನು ಅಥವಾ ಮೃತ್ಯುವಿನ ಭಯದಿಂದ ಮುಕ್ತಿಗೊಳಿಸುವವನು ಎಂಬ ಅರ್ಥವಿದೆ. ಇದು ಭಗವಾನ್ ಶಿವನ ಒಂದು ಪ್ರಸಿದ್ಧ ನಾಮ. ಆರೋಗ್ಯ, ಆಯುಷ್ಯ, ಕ್ಷೇಮ ಮತ್ತು ಆಧ್ಯಾತ್ಮಿಕ ಮುಕ್ತಿಗಾಗಿ ಶಿವನನ್ನು ಆರಾಧಿಸುವಾಗ ಋಗ್ವೇದದ 7ನೇ ಮಂಡಲ, 59ನೇ ಸೂಕ್ತದ 12ನೇ ಮಂತ್ರವಾದ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಇದನ್ನು ತ್ರ್ಯಂಬಕ ಮಂತ್ರ ಎಂದೂ ಕರೆಯಲಾಗುತ್ತದೆ.
ಮಹಾಮೃತ್ಯುಂಜಯ ಮಂತ್ರ:
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ ।
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಽಮೃತಾತ್ ॥
ಈ ಮಂತ್ರದ ಸರಳ ಭಾವಾರ್ಥ ಹೀಗಿದೆ: ಮೂರು ಕಣ್ಣುಗಳನ್ನು ಹೊಂದಿರುವ, ಸಮಸ್ತ ಜೀವಿಗಳಿಗೆ ಪೋಷಣೆ ನೀಡುವ ಶಿವನನ್ನು ನಾವು ಆರಾಧಿಸುತ್ತೇವೆ. ಬಳ್ಳಿಯಿಂದ ಹಣ್ಣಾದ ಫಲವು ಸಹಜವಾಗಿ ಕಳಚಿಕೊಳ್ಳುವಂತೆ, ನಮ್ಮನ್ನು ಮೃತ್ಯುವಿನ ಬಂಧನದಿಂದ ಮುಕ್ತಗೊಳಿಸು; ಆದರೆ ಅಮೃತತ್ವದಿಂದ ನಮ್ಮನ್ನು ದೂರ ಮಾಡಬೇಡ ಎಂಬುದು ಈ ಮಂತ್ರದ ಪ್ರಾರ್ಥನೆ. ಮರಣಭಯದಿಂದ ಮುಕ್ತಿ, ಆರೋಗ್ಯ, ದೀರ್ಘಾಯುಷ್ಯ ಮತ್ತು ಮನಸ್ಸಿನ ನೆಮ್ಮದಿಗಾಗಿ ಈ ಮಂತ್ರವನ್ನು ಅನೇಕ ಭಕ್ತರು ಪಠಿಸುತ್ತಾರೆ.
ದೇವಾಲಯ ನಿರ್ಮಾಣದ ಹಿಂದಿರುವ ಸಂಕಲ್ಪ
ಮಹಾಮೃತ್ಯುಂಜಯ ದೇವಾಲಯದ ನಿರ್ಮಾಣದ ಸಂಕಲ್ಪವನ್ನು ಕೈಗೊಂಡವರು ಆಚಾರ್ಯ ಭೃಗು ಗಿರಿ ಮಹಾರಾಜರು. 2003ರಲ್ಲಿ ಅವರು ಈ ದೇವಾಲಯದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಲಭ್ಯವಿರುವ ವರದಿಗಳ ಪ್ರಕಾರ, ಆಚಾರ್ಯ ಭೃಗು ಗಿರಿ ಮಹಾರಾಜರು ಈ ಪ್ರದೇಶದಲ್ಲಿ ಧ್ಯಾನ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲಿ ಭವ್ಯ ಶಿವಕ್ಷೇತ್ರವೊಂದನ್ನು ನಿರ್ಮಿಸಬೇಕೆಂಬ ಸಂಕಲ್ಪವನ್ನು ಹೊಂದಿದರು. ಶಿವನ ಮಹಾಮೃತ್ಯುಂಜಯ ಸ್ವರೂಪವನ್ನು ಪ್ರತಿನಿಧಿಸುವ ಬೃಹತ್ ಶಿವಲಿಂಗದ ರೂಪದಲ್ಲಿಯೇ ದೇವಾಲಯವನ್ನು ನಿರ್ಮಿಸಬೇಕೆಂದು ನಿರ್ಧರಿಸಿದರು.
ಈ ಸ್ಥಳಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಥಳೀಯ ಧಾರ್ಮಿಕ ನಂಬಿಕೆಯೂ ಇದೆ. ಪುರಾಣಗಳಲ್ಲಿ ಅಸುರರ ಗುರು ಎಂದು ಪರಿಚಿತರಾಗಿರುವ ಶುಕ್ರಾಚಾರ್ಯರು ಇದೇ ಪ್ರದೇಶದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ ಯಜ್ಞವನ್ನು ನೆರವೇರಿಸಿದ್ದರು ಎಂಬ ಪ್ರತೀತಿ ಇದೆ. ಈ ನಂಬಿಕೆಯೇ ದೇವಾಲಯದ ಆಧ್ಯಾತ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಇದು ಸ್ಥಳೀಯ ಧಾರ್ಮಿಕ ಪರಂಪರೆಯಲ್ಲಿ ಉಳಿದುಬಂದಿರುವ ನಂಬಿಕೆಯಾಗಿದ್ದು, ದೃಢೀಕೃತ ಐತಿಹಾಸಿಕ ದಾಖಲೆಯೆಂದು ಪರಿಗಣಿಸಬಾರದು.
126 ಅಡಿ ಎತ್ತರದ ಶಿವಲಿಂಗ – ವಾಸ್ತುಶಿಲ್ಪದ ವೈಶಿಷ್ಟ್ಯ

ಈ ದೇವಾಲಯದ ಅತ್ಯಂತ ಪ್ರಮುಖ ಆಕರ್ಷಣೆಯೇ ಅದರ 126 ಅಡಿ ಎತ್ತರದ ಬೃಹತ್ ಶಿವಲಿಂಗದ ವಿನ್ಯಾಸ. ದೇವಾಲಯದ ಬೃಹತ್ ರಚನೆಯನ್ನೇ ಶಿವಲಿಂಗದ ಆಕಾರದಲ್ಲಿ ರೂಪಿಸಿರುವುದು ಇದರ ವಿಶೇಷತೆ. ಸಾಮಾನ್ಯ ಶಿವಲಿಂಗದ ರಚನೆಯಲ್ಲಿ ಕಂಡುಬರುವ ಪೀಠ, ಮಧ್ಯದ ಉಬ್ಬಿದ ಭಾಗ ಮತ್ತು ಮೇಲಕ್ಕೆ ಎದ್ದಿರುವ ಲಿಂಗಾಕಾರದ ರೂಪವನ್ನು ಇಲ್ಲಿ ಬೃಹತ್ ಪ್ರಮಾಣದಲ್ಲಿ ವಿನ್ಯಾಸಗೊಳಿಸಲಾಗಿದೆ. ದೂರದಿಂದಲೇ ಕಾಣಿಸುವ ಈ ರಚನೆ ದೇವಾಲಯದ ಭವ್ಯತೆಯನ್ನು ಸಾರುತ್ತದೆ.
ಈ ಬೃಹತ್ ನಿರ್ಮಾಣವು ಕೇವಲ ಧಾರ್ಮಿಕ ಕಲ್ಪನೆಯ ಫಲವಲ್ಲ. ಇಷ್ಟು ದೊಡ್ಡ ಪ್ರಮಾಣದ ರಚನೆಯನ್ನು ನಿರ್ಮಿಸಲು ವಾಸ್ತುಶಿಲ್ಪ, ತೂಕದ ಸಮತೋಲನ, ಅಡಿಪಾಯ, ನಿರ್ಮಾಣ ಸಾಮಗ್ರಿಗಳ ಆಯ್ಕೆ ಮತ್ತು ತಾಂತ್ರಿಕ ಯೋಜನೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ನಿರ್ಮಾಣದ ಆರಂಭಿಕ ಹಂತದಲ್ಲಿ ವಿವಿಧ ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರ್ಗಳು ವಿನ್ಯಾಸದ ಪ್ರಯತ್ನಗಳನ್ನು ನಡೆಸಿದ ನಂತರ ಅಂತಿಮ ಎಂಜಿನಿಯರಿಂಗ್ ಮತ್ತು ವಿನ್ಯಾಸ ಕಾರ್ಯವನ್ನು ಎರ್. ನಾರಾಯಣ ಶರ್ಮಾ ನಿರ್ವಹಿಸಿದರೆಂದು ಎನ್ನಲಾಗುತ್ತದೆ. ಇಷ್ಟು ಎತ್ತರದ ಭವ್ಯವಾದ ಮಂದಿರವನ್ನು ನಿರ್ಮಿಸುವಾಗ, ಕಟ್ಟಡದ ನಿರ್ಮಾಣ ವಸ್ತುಗಳನ್ನು ಸಾಗಿಸಲು ಆಧುನಿಕ ಕ್ರೇನ್ ಯಂತ್ರಗಳನ್ನು ಬಳಸದೇ ಎಲ್ಲವನ್ನೂ ದೇವಾಲಯ ನಿರ್ಮಿಸುವ ಕಾರ್ಮಿಕರೇ ನಿರ್ವಹಿಸಿರುವುದು ಅತ್ಯಂತ ಗಮನಾರ್ಹವಾದ ವಿಷಯವಾಗಿದೆ
126 ಅಡಿ ಎತ್ತರದ ಶಿವಲಿಂಗದ ಕಾರಣದಿಂದ ಈ ದೇವಾಲಯವನ್ನು ವಿಶ್ವದ ಅತಿ ಎತ್ತರದ ಶಿವಲಿಂಗವೆಂದು ಗುರುತಿಸಲಾಗಿದೆ. ಅಸ್ಸಾಂ ಸರ್ಕಾರದ ನಾಗಾಂವ್ ಜಿಲ್ಲಾ ಆಡಳಿತದ ಅಧಿಕೃತ ಪ್ರವಾಸಿ ತಾಣದ ಮಾಹಿತಿಯೂ ಈ ವೈಶಿಷ್ಟ್ಯವನ್ನು ದಾಖಲಿಸಿದೆ.

ಈ ದೇವಾಲಯದಲ್ಲಿ ಶ್ರೀ ಮಹಾಮೃತ್ಯುಂಜಯ ಸ್ವಾಮಿಯ ದರ್ಶನದ ಜೊತೆಗೆ ಇತರ ದೇವತಾ ಸನ್ನಿಧಿಗಳನ್ನೂ ಕಾಣಬಹುದು. ದೇವಾಲಯದ ಕೆಳ ಅಂತಸ್ತಿನಲ್ಲಿ ಶ್ರೀ ಗಣೇಶನ ಪುಟ್ಟ ಗುಡಿಯಿದ್ದು, ದೇವಾಲಯದ ನಿರ್ಮಾಣದ ಸಂಕಲ್ಪವನ್ನು ಕೈಗೊಂಡ ಆಚಾರ್ಯ ಭೃಗು ಗಿರಿ ಮಹಾರಾಜರ ಪ್ರತಿಮೆಯನ್ನೂ ಪ್ರತಿಷ್ಠಾಪಿಸಲಾಗಿದೆ. ಇನ್ನು ದೇವಾಲಯದ ಹೊರಭಾಗದಲ್ಲಿ ಚತುರ್ಭುಜ ಸ್ವರೂಪದ ಶ್ರೀ ಕಾಳೀಮಾತೆಯ ಪ್ರತ್ಯೇಕ ದೇವಾಲಯವಿದೆ. ಹೀಗೆ ಒಂದೇ ಆವರಣದಲ್ಲಿ ಶಿವ, ಗಣೇಶ, ಕಾಳೀಮಾತೆ ಹಾಗೂ ದೇವಾಲಯದ ನಿರ್ಮಾತೃಗಳ ಸಾನ್ನಿಧ್ಯವಿರುವುದು ಈ ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ.
ಪ್ರಾಣಪ್ರತಿಷ್ಠಾ ಮಹೋತ್ಸವ – 108 ಯಜ್ಞಕುಂಡಗಳಲ್ಲಿ ಪೂಜೆ
ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ 2021ರ ಫೆಬ್ರವರಿ ತಿಂಗಳಲ್ಲಿ ಭವ್ಯವಾದ ಪ್ರಾಣಪ್ರತಿಷ್ಠಾ ಮಹೋತ್ಸವವನ್ನು ಆಯೋಜಿಸಲಾಯಿತು. ಫೆಬ್ರವರಿ 22ರಿಂದ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ 25ರವರೆಗೆ ನಡೆದವು. ಈ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದು 108 ಯಜ್ಞಕುಂಡಗಳಲ್ಲಿ ನಡೆದ ಮಹಾಯಜ್ಞ. ವಿಶೇಷವಾಗಿ ಪ್ರಾಣಪ್ರತಿಷ್ಠಾ ಯಜ್ಞವನ್ನು ನೆರವೇರಿಸಲು ತಮಿಳುನಾಡಿನಿಂದ ಸುಮಾರು 250 ಪುರೋಹಿತರು ಆಗಮಿಸಿದ್ದರು. ವೈದಿಕ ಮಂತ್ರೋಚ್ಚಾರಣೆ, ಪೂಜೆ, ಹೋಮ ಮತ್ತು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಹೋತ್ಸವವನ್ನು ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆಬ್ರವರಿ 25, 2021ರಂದು ಭಾಗವಹಿಸಿ ದೇವಾಲಯದ ಪ್ರಾಣಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಂಡರು. ಅಂದಿನ ಅಸ್ಸಾಂ ಸರ್ಕಾರದ ಪ್ರಮುಖ ಸಚಿವರಾಗಿದ್ದ ಡಾ. ಹಿಮಂತ ಬಿಸ್ವ ಶರ್ಮಾ ಹಾಗೂ ಅಂದಿನ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರೂ ಈ ಧಾರ್ಮಿಕ ಕಾರ್ಯಕ್ರಮದ ಸಿದ್ಧತೆ ಮತ್ತು ಆಚರಣೆಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಫೆಬ್ರವರಿ 25ರಂದು ಪ್ರಾಣಪ್ರತಿಷ್ಠಾ ಮಹೋತ್ಸವದ ಪ್ರಮುಖ ವಿಧಿವಿಧಾನಗಳು ಪೂರ್ಣಗೊಂಡಿದ್ದು, ಫೆಬ್ರವರಿ 26, 2021ರಿಂದ ದೇವಾಲಯವನ್ನು ಸಾರ್ವಜನಿಕ ಭಕ್ತರ ದರ್ಶನಕ್ಕೆ ತೆರೆಯಲಾಯಿತು.
ದೇವಾಲಯದ ವೈಶಿಷ್ಟ್ಯಗಳು

ಸಾಮಾನ್ಯವಾಗಿ ಬಹುತೇಕ ಶಿವನ ದೇವಾಲಯಗಳಲ್ಲಿ ಶಿವಲಿಂಗದ ಮುಂಭಾಗದಲ್ಲಿ ಶಿವನ ವಾಹನವಾದ ನಂದಿ (ಬಸವ) ವಿಗ್ರಹವನ್ನು ಪ್ರತಿಷ್ಠಾಪಿಸಿರುವುದನ್ನು ಕಾಣಬಹುದು. ಆದರೆ ಮಹಾಮೃತ್ಯುಂಜಯ ದೇವಾಲಯದಲ್ಲಿ ಶ್ರೀ ಮಹಾಮೃತ್ಯುಂಜಯ ಸ್ವಾಮಿಯನ್ನು ಬಲಭಾಗದಲ್ಲಿ ಪ್ರತಿಷ್ಠಾಪಿಸಿರುವುದು ವಿಶೇಷವಾಗಿ ಗಮನ ಸೆಳೆಯುತ್ತದೆ. ದೇವಾಲಯದ ಈ ವಿಶಿಷ್ಟ ವಿನ್ಯಾಸವು ಇಲ್ಲಿಗೆ ಭೇಟಿ ನೀಡುವ ಭಕ್ತರಲ್ಲಿ ಕುತೂಹಲ ಮೂಡಿಸುತ್ತದೆ.
ಪ್ರಸ್ತುತ ಈ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಚಂದ್ರಪ್ರಸಾದ್ ಉಪಾಧ್ಯಾಯರು ಮೂಲತಃ ಅಸ್ಸಾಂನ ಉತ್ತರ ಲಖೀಂಪುರದವರು. ಇವರಿಗೂ ಕರ್ನಾಟಕಕ್ಕೂ ಒಂದು ವಿಶೇಷವಾದ ನಂಟಿದೆ. ತಮ್ಮ ವೇದಾಧ್ಯಯನವನ್ನು ದೆಹಲಿಯಲ್ಲಿ ಕರ್ನಾಟಕದ ಉಡುಪಿಯ ಸಮೀಪದ ಸಾಸ್ತಾನ ಮೂಲದ ಶ್ರೀ ಸತ್ಯನಾರಾಯಣ ಉಪಾಧ್ಯಾಯರ ಬಳಿ ಆರಂಭಿಸಿದ್ದರು. ನಂತರ ವೈಯಕ್ತಿಕ ಕಾರಣಗಳಿಂದಾಗಿ ಶ್ರೀ ಸತ್ಯನಾರಾಯಣ ಉಪಾಧ್ಯಾಯರು ತಮ್ಮ ಊರಾದ ಸಾಸ್ತಾನಕ್ಕೆ ಹಿಂದಿರುಗಿದಾಗ, ಚಂದ್ರಪ್ರಸಾದ್ ಅವರೂ ತಮ್ಮ ಗುರುಗಳೊಂದಿಗೆ ಸಾಸ್ತಾನಕ್ಕೆ ಬಂದು ಅಲ್ಲಿಯೇ ವೇದಾಧ್ಯಯನವನ್ನು ಮುಂದುವರಿಸಿದರು.
ಬಳಿಕ ದೆಹಲಿಯ ಶ್ರೀ ಕಾಮೇಶ್ವರಿ ಮಂದಿರದಲ್ಲಿ ಕೆಲಕಾಲ ಅರ್ಚಕರಾಗಿ ಸೇವೆ ಸಲ್ಲಿಸಿದ ಅವರು, 2022ರಿಂದ ಅಸ್ಸಾಂನ ಈ ಮಹಾಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ವೇದಾಧ್ಯಯನ ಮಾಡಿದ ಕಾರಣ ಅವರಿಗೆ ಕನ್ನಡ ಭಾಷೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ಅಷ್ಟೇ ಅಲ್ಲದೆ, ಅಲ್ಪಸ್ವಲ್ಪ ಕನ್ನಡದಲ್ಲಿಯೂ ಮಾತನಾಡಬಲ್ಲರು ಎಂಬುದು ಕರ್ನಾಟಕದಿಂದ ಬರುವ ಭಕ್ತರಿಗೆ ವಿಶೇಷ ಸಂತೋಷದ ಸಂಗತಿ.
ಇಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶ್ರೀ ಮಹಾಮೃತ್ಯುಂಜಯ ಸ್ವಾಮಿಗೆ ಅಭಿಷೇಕ ಸೇರಿದಂತೆ ಸಕಲ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆ. ವೇದಮಂತ್ರಗಳ ಉಚ್ಚಾರಣೆ, ಅಭಿಷೇಕ ಮತ್ತು ನಿತ್ಯಪೂಜೆಗಳ ಮೂಲಕ ದೇವಾಲಯದಲ್ಲಿ ಭಕ್ತಿಭಾವದ ವಾತಾವರಣ ನೆಲೆಸಿರುತ್ತದೆ. ಅಸ್ಸಾಂನ ನೆಲದಲ್ಲಿ ಕರ್ನಾಟಕದ ವೇದ ಪರಂಪರೆಯ ನಂಟನ್ನು ಬೆಸೆಯುತ್ತಿರುವ ಪ್ರಧಾನ ಅರ್ಚಕರ ಸೇವೆಯೂ ಈ ದೇವಾಲಯದ ಮತ್ತೊಂದು ವಿಶೇಷತೆಯಾಗಿದೆ.
2021ರ ಭೂಕಂಪ ಮತ್ತು ದೇವಾಲಯದ ಮೇಲ್ಭಾಗದಲ್ಲಿ ಕಾಣಿಸಿಕೊಂಡ ಬಿರುಕು
ಅಸ್ಸಾಂ ಮತ್ತು ಈಶಾನ್ಯ ಭಾರತದ ಭೌಗೋಳಿಕ ಪ್ರದೇಶವು ಭೂಕಂಪ ಸಂಭವಿಸುವ ಸಾಧ್ಯತೆ ಹೆಚ್ಚಿರುವ ವಲಯಗಳಲ್ಲಿದೆ. 2021ರ ಏಪ್ರಿಲ್ 28ರಂದು ಬೆಳಿಗ್ಗೆ ಅಸ್ಸಾಂನ ಸೋನಿತ್ಪುರ ಜಿಲ್ಲೆಯ ಸಮೀಪ ಭೂಕಂಪ ಸಂಭವಿಸಿತು. ಇದರ ಪರಿಣಾಮ ಈಶಾನ್ಯ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಯಿತು. ಆ ದಿನದ ಭೂಕಂಪದ ಬಗ್ಗೆ ಆರಂಭಿಕ ಮಾಧ್ಯಮ ವರದಿಗಳಲ್ಲಿ ರಿಕ್ಟರ್ ಮಾಪಕದಲ್ಲಿ 6.7 ತೀವ್ರತೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಧಿಕೃತ ದಾಖಲೆಗಳಲ್ಲಿ ಈ ಭೂಕಂಪದ ತೀವ್ರತೆಯನ್ನು 6.4 ಎಂದು ದಾಖಲಿಸಲಾಗಿದೆ.
ಈ ಭೂಕಂಪದ ಪರಿಣಾಮವಾಗಿ ನಾಗಾಂವ್ನ ಮಹಾಮೃತ್ಯುಂಜಯ ದೇವಾಲಯದ 126 ಅಡಿ ಎತ್ತರದ ರಚನೆಯ ಮೇಲ್ಭಾಗದಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿದ್ದಾಗಿ ಸಮಕಾಲೀನ ಸುದ್ದಿ ವರದಿಗಳು ತಿಳಿಸಿವೆ. ಇವು ಮೇಲ್ಭಾಗಕ್ಕೆ ಸೀಮಿತವಾದ ಹಾನಿಯಾಗಿದ್ದರೂ ಇಂದಿಗೂ ದೇವಾಲಯ ಬಹಳ ಸಧೃಢವಾಗಿದೆ.
ದೇವಾಲಯವನ್ನು ತಲುಪುವುದು ಹೇಗೆ?
ಮಹಾಮೃತ್ಯುಂಜಯ ದೇವಾಲಯವು ಅಸ್ಸಾಂ ರಾಜ್ಯದ ನಾಗಾಂವ್ ಜಿಲ್ಲೆಯ ವೆರವೆರಿ ಗೊಸಾಯಿಗಾಂವ್ (Ververi Gosaingaon) ಪ್ರದೇಶದಲ್ಲಿದೆ. ಇದು ಪುರಾಣಿಗುದಾಮ್ ಮತ್ತು ಬರ್ಹಾಂಪುರ ಸುತ್ತಮುತ್ತಲಿನ ಪ್ರದೇಶಕ್ಕೆ ಸೇರಿದೆ. ನಾಗಾಂವ್ ಪಟ್ಟಣದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯಕ್ಕೆ ಸ್ಥಳೀಯ ಟ್ಯಾಕ್ಸಿ ಅಥವಾ ಟೆಂಪೋ ಸೇವೆಗಳ ಮೂಲಕ ತಲುಪಬಹುದು.
ಗುವಾಹಟಿಯಿಂದ: ಅಸ್ಸಾಂನ ರಾಜಧಾನಿ ಗುವಾಹಟಿಯಿಂದ ನಾಗಾಂವ್ ಪಟ್ಟಣಕ್ಕೆ ರಸ್ತೆ ಮಾರ್ಗವಾಗಿ ಸುಮಾರು 120 ಕಿಲೋಮೀಟರ್ ದೂರವಿದೆ. ಗುವಾಹಟಿಯಿಂದ ಬಸ್, ಖಾಸಗಿ ವಾಹನ ಅಥವಾ ಟ್ಯಾಕ್ಸಿಯಲ್ಲಿ ನಾಗಾಂವ್ ತಲುಪಿ, ಅಲ್ಲಿಂದ ಸ್ಥಳೀಯ ಸಾರಿಗೆಯ ಮೂಲಕ ದೇವಾಲಯಕ್ಕೆ ಹೋಗಬಹುದು.
ರೈಲು ಮಾರ್ಗ: ಗುವಾಹಟಿ ಮತ್ತು ನಾಗಾಂವ್ ನಡುವೆ ರೈಲು ಸಂಪರ್ಕವಿದೆ. ನಾಗಾಂವ್ ಅಥವಾ ಸಮೀಪದ ರೈಲು ನಿಲ್ದಾಣದಲ್ಲಿ ಇಳಿದು ಸ್ಥಳೀಯ ವಾಹನದ ಮೂಲಕ ದೇವಾಲಯ ತಲುಪಬಹುದು.
ವಿಮಾನ ಮಾರ್ಗ: ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೋಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಮುಖ ವಿಮಾನ ಸಂಪರ್ಕ ಕೇಂದ್ರವಾಗಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ನಾಗಾಂವ್ ಕಡೆಗೆ ಪ್ರಯಾಣಿಸಬಹುದು.
ಭಕ್ತರನ್ನೂ ಪ್ರವಾಸಿಗರನ್ನೂ ಆಕರ್ಷಿಸುವ ಕ್ಷೇತ್ರ
ಮಹಾಮೃತ್ಯುಂಜಯ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಶಿವನ ದರ್ಶನದ ಜೊತೆಗೆ ಮಹಾಮೃತ್ಯುಂಜಯ ಮಂತ್ರದ ಮಹತ್ವವನ್ನು ಸ್ಮರಿಸುತ್ತಾರೆ. ದೇವಾಲಯದ ವಿಶಿಷ್ಟ ಆಕಾರ ಮತ್ತು ಎತ್ತರವು ಪ್ರವಾಸಿಗರಿಗೂ ವಿಶೇಷ ಆಕರ್ಷಣೆಯಾಗಿದೆ.
ಈ ದೇವಾಲಯದ ಸುತ್ತಲಿನ ವಿಶಾಲ ಆವರಣ, ಬೃಹತ್ ಶಿವಲಿಂಗದ ವಿನ್ಯಾಸ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಾಗಾಂವ್ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಹೊಸ ಗುರುತನ್ನು ತಂದಿವೆ. ಅಸ್ಸಾಂಗೆ ಭೇಟಿ ನೀಡುವವರು, ಸಾಧಾರಣವಾಗಿ ಗುಹವಾತಿಯಿಂದ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ನೋಡಲು ಹೋಗುವಾಗ/ಬರುವಾಗ ಪ್ರವಾಸಿಗರು ಮಾರ್ಗದ ಮಧ್ಯದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಮೃತ್ಯುಂಜಯ ಮತ್ತು ಆಚಾರ್ಯ ಭೃಗು ಗಿರಿ ಮಹಾರಾಜರ ಆಶೀರ್ವಾದವನ್ನು ಪಡೆಸುಕೊಳ್ಳುವುದು ವಿಶೇಷವಾಗಿದೆ.
ಹೊಸ ಕಾಲದ ಶಿವಕ್ಷೇತ್ರ – ಶ್ರದ್ಧೆ ಮತ್ತು ತಂತ್ರಜ್ಞಾನದ ಸಂಗಮ
ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಅನೇಕ ಶಿವಕ್ಷೇತ್ರಗಳಿವೆ. ಅವುಗಳ ಪೈಕಿ ಅಸ್ಸಾಂನ ಮಹಾಮೃತ್ಯುಂಜಯ ದೇವಾಲಯವು ಪ್ರಾಚೀನ ದೇವಾಲಯವಲ್ಲ. 2003ರಲ್ಲಿ ಸಂಕಲ್ಪಗೊಂಡು 2021ರಲ್ಲಿ ಭಕ್ತರಿಗೆ ಮುಕ್ತವಾದ ಆಧುನಿಕ ದೇವಾಲಯ. ಆದರೂ ಇದರ ವಾಸ್ತುಶಿಲ್ಪದ ವೈಶಿಷ್ಟ್ಯ, ಧಾರ್ಮಿಕ ಸಂಕಲ್ಪ ಮತ್ತು ಬೃಹತ್ ಪ್ರಮಾಣದ ನಿರ್ಮಾಣ ಇದಕ್ಕೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಿವೆ.
ಆಚಾರ್ಯ ಭೃಗು ಗಿರಿ ಮಹಾರಾಜರು ಕಂಡ ಕನಸನ್ನು ಸಾಕಾರಗೊಳಿಸಲು ಸುಮಾರು 18 ವರ್ಷಗಳ ಕಾಲ ನಡೆದ ಪ್ರಯತ್ನ, 126 ಅಡಿ ಎತ್ತರದ ಶಿವಲಿಂಗದ ನಿರ್ಮಾಣ, 108 ಯಜ್ಞಕುಂಡಗಳಲ್ಲಿ ನಡೆದ ಪ್ರಾಣಪ್ರತಿಷ್ಠೆ ಮತ್ತು ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಪುರೋಹಿತರ ಪಾಲ್ಗೊಳ್ಳುವಿಕೆ, ಇವೆಲ್ಲವೂ ಈ ದೇವಾಲಯದ ವಿಶೇಷತೆಯನ್ನು ಸಾರುತ್ತವೆ.
ಶಿವನ ಮಹಾಮೃತ್ಯುಂಜಯ ಸ್ವರೂಪವು ಕೇವಲ ಮೃತ್ಯುವಿನ ಭಯದಿಂದ ಮುಕ್ತಿಗೊಳಿಸುವ ಆರಾಧ್ಯ ದೈವ ಎಂಬ ನಂಬಿಕೆಗೆ ಮಾತ್ರ ಸೀಮಿತವಾಗಿಲ್ಲ; ಬದುಕಿನಲ್ಲಿ ಆರೋಗ್ಯ, ನೆಮ್ಮದಿ, ಧೈರ್ಯ ಮತ್ತು ಆಧ್ಯಾತ್ಮಿಕ ಭರವಸೆಯನ್ನು ನೀಡುವ ಸಂಕೇತವಾಗಿಯೂ ಭಕ್ತರು ಕಾಣುತ್ತಾರೆ. ಹೀಗಾಗಿ ಅಸ್ಸಾಂನ ನಾಗಾಂವ್ನಲ್ಲಿರುವ ಈ 126 ಅಡಿ ಎತ್ತರದ ಮಹಾಮೃತ್ಯುಂಜಯ ದೇವಾಲಯವು ಭಕ್ತಿ, ಸಂಕಲ್ಪ, ಆಧುನಿಕ ವಾಸ್ತುಶಿಲ್ಪ ಮತ್ತು ಈಶಾನ್ಯ ಭಾರತದ ಧಾರ್ಮಿಕ ಪ್ರವಾಸೋದ್ಯಮದ ಸಂಗಮವಾಗಿ ಗಮನ ಸೆಳೆಯುತ್ತಿದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಶ್ರೀಮಂತ