ನಂಬಿಕೆ, ವಿಶ್ವಾಸ ಮತ್ತು ಪ್ರೇರಣೆ

WhatsApp Image 2021-12-14 at 6.13.04 PMಈ ಚಿತ್ರವನ್ನು ನೋಡುತ್ತಿದ್ದಂತೆಯೇ, ನಮ್ಮ ಮನಸ್ಸಿಗೆ ಹೊಳೆಯುವುದು,  ಅರೇ ಇದೇನಿದು? ಈ ಸಣಕಲ ದೇಹದ  ಮಾವುತನು  ಅಷ್ಟು  ದೊಡ್ಡ ಆನೆಯನ್ನು ಟ್ರಕ್ಕಿನೊಳಗೆ ದೂಡುತ್ತಿದ್ದಾನಾ? ಎಂದು  ಹುಬ್ಬನ್ನು ಹಾರಿಸತ್ತೇವೆ. ಆದರೆ ನಿಜ ಹೇಳಬೇಕೆಂದರೆ, ಅಲ್ಲಿ  ಮಾವುತನ ಕೈ ಆಸರೆ ಕೇವಲ ನಿಮಿತ್ತ ಮಾತ್ರವಾಗಿದ್ದು ಆನೆಯ ತನ್ನ ಬಲದಿಂದ ಟ್ರಕ್ಕನ್ನು ಹತ್ತುತ್ತಿರುತ್ತದೆ.  ಆನೆಗೆ ತನ್ನ ಸ್ವಸ್ವಾಮರ್ಥ್ಯದ ಮೇಲೆ ನಂಬಿಕೆ ಇರದ ಕಾರಣ, ಮಾವುತನ ಕೈ ತನ್ನ ಬೆನ್ನಿನ ಮೇಲೆಿ ಕೈ ಇಟ್ಟಿರುವ ತನ್ನ ಯಜಮಾನ ಸದಾ ಕಾಲವೂ ತನ್ನ ಸಹಾಯಕ್ಕೆ  ಇರುತ್ತಾನೆ ಎಂಬ ನಂಬಿಕೆ ಮತ್ತು ವಿಶ್ವಾಸ ಇಟ್ಟು ಕೊಳ್ಳುವುದರಿಂದ ಆನೆಯು ನಿರ್ಭಯವಾಗಿ ಟ್ರಕ್ಕನ್ನು ಹತ್ತಬಹುದು ಎಂದು ಭಾವಿಸಿ  ಸುಲಭವಾಗಿ ಟ್ರಕ್ಕನ್ನು ಹತ್ತುತ್ತದೆ.

jam1ತ್ರೇತಾಯುಗದಲ್ಲೂ ಹನುಮಂತ ಮತ್ತು ಜಾಂಬವಂತನ ನಡುವೆ ನಡೆದ ಇದೇ ರೀತಿಯ ಪ್ರಸಂಗವನ್ನೂ ಇಲ್ಲಿ ಸ್ಮರಿಸಬಹುದಾಗಿದೆ.  ವನವಾಸದಲ್ಲಿದ್ದ  ಸೀತೆಯನ್ನು ಮಾಯಾ ಜಿಂಕೆಯ ಮೋಹವೊಡ್ಡಿ,  ಮೋಸದಿಂದ ರಾವಣ ಕದ್ದೊಯ್ದಿರುತ್ತಾನೆ.  ಚಿನ್ನದ ಜಿಂಕೆಯ ಭೇಟೆಯಾದ ನಂತರ ಕಾಡಿನ ತಮ್ಮ ಮನೆಗೆ ಬಂದು ಮಡದಿ ಸೀತಾಮಾತೆ ಕಾಣದಿದ್ದಾಗ, ವೈದೇಹೀ ಏನಾದಳೂ? ಎಂದು ಪರಿತಪಿಸುತ್ತಾ ಆಕೆಯನ್ನು ಹುಡುಕುತ್ತಿರಲು ಅವರಿಗೆ ಕಿಷ್ಕಿಂದೆಯಲ್ಲಿ ಹನುಮಂತನ ಮತ್ತು ಸುಗ್ರೀವನ ಪರಿಚಯವಾಗಿ ನಂತರ ಜಟಾಯುವಿನ ಮೂಲಕ ಸೀತಾ ಮಾತೆಯನ್ನು ರಾವಣನು ಕದ್ದೊಯ್ದಿರುವ ವಿಷಯ ತಿಳಿದು ಸಮಸ್ಥ ಕಪಿ ಸೇನೆ ರಾಮೇಶ್ವರದ ಸಮುದರ ತಟದಲ್ಲಿ ನಿಂತು  ಸಾಗರದ ಮಧ್ಯದಲ್ಲಿರುವ ಲಂಕೆಗೆ ಹೇಗೆ ಹೋಗುವುದು ಎಂದು ಯೋಚಿಸುತ್ತಿರುವಾಗ, ಜಾಂಬವಂತನಿಗೆ ಥಟ್ ಎಂದು ಆಲೋಚನೆ ಹೊಳೆದು, ದೂರದಲ್ಲಿ ರಾಮನ ಧ್ಯಾನವನ್ನು ಮಾಡುತ್ತಿದ್ದ ಹನುಮಂತನಿಗೆ ಸಮುದ್ರೋಲಂಘನ ಮಾಡಿ ಸೀತಾಮಾತೆಯನ್ನು ಹುಡುಕಿಕೊಂಡು ಬರಲು ಸೂಚಿಸುತ್ತಾನೆ.

han2ತನ್ನ ಶಕ್ತಿ ಸಾಮರ್ಥ್ಯದ ಅರಿವಿಲ್ಲದಿದ್ದಂತಹ ಹನುಮಂತ ಈ ಕೆಲಸ ನನ್ನಿಂದಾಗದು ಎಂದು ಹೇಳಿದಾಗ ವಯೋವೃದ್ಧ ಜಾಂಬವಂತ ಹನುಮಂತನ ಶಕ್ತಿ ಸಾಮರ್ಥ್ಯವನ್ನು ಒಂದೊಂದಾಗಿ ವರ್ಣಿಸಿ ಹನುಮಂತನಿಗೆ ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಹುಟ್ಟುವಂತೆ ಮಾಡಿದ ನಂತರ ಬೃಹದಾಕಾರವಾಗಿ ಬೆಳೆದ ಅಂಜನೀ ಪುತ್ರ ಆಂಜನೇಯ ಸಮುದ್ರವನ್ನು ದಾಟಿ ಸೀತಾಮಾತೆಯನ್ನು ಹುಡುಕಿ ನಂತರ ಅರ್ಧ ಲಂಕೆಯನ್ನು ದಹನ ಮಾಡಿದ್ದು ಈಗ ಇತಿಹಾಸ.

ಈ ಎರಡೂ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ,  ಆನೆ ಮತ್ತು ಹನುಮಂತನಿಗೆ ಶಕ್ತಿ ಸಾಮರ್ಥ್ಯವಿದ್ದರೂ, ಅದರ ಅರಿವೇ ಇಲ್ಲದ ಕಾರಣ ಕಾರ್ಯವನ್ನು ಮಾಡಲು ಹಿಂಜರಿಯುತ್ತಿರುತ್ತಾರೆ. ಆನೆಯ  ಬೆನ್ನಿನ ಮೇಲೆ ಕೇವಲ ನಿಮಿತ್ತ ಮಾತ್ರಕ್ಕೆ ಕೈ ಇಟ್ಟ ಮಾವುತನು  ಹತ್ತು ಹತ್ತು ಎಂದು ಪ್ರೇರೇಪಿಸಿದರೆ, ಜಾಂಬವಂತನು ಹನುಮಂತನಿಗೆ ಆತನ ಶಕ್ತಿ ಸಾಮರ್ಥ್ಯದ ಅರಿವನ್ನು ಮೂಡಿಸಿ ಸರಳ ರೀತಿಯಲ್ಲಿ ಆದರೆ ಅಷ್ಟೇ ಸ್ಪೂರ್ತಿದಾಯಕವಾಗಿ  ಪ್ರೇರಣೆ ನೀಡಿದ ಕಾರಣ ಮುಂದೆಲ್ಲಾ ಕಾರ್ಯಗಳು ಸರಾಗವಾಗಿ ನಡೆಯುತ್ತದೆ.

accidentನಮ್ಮ ನಿಮ್ಮ  ನಡುವೆ ಅದೆಷ್ಟೋ ಈ ರೀತಿಯ ಜನರು ಇದ್ದಾರೆ. ಅವರಿಗೆ ತಮ್ಮ ಶಕ್ತಿ ಸಾಮರ್ಥ್ಯದ ಅರಿವಿಲ್ಲದೆ  ಅಥವಾ ತಮ್ಮನ್ನು ಬೆಂಬಲಿಸುವ ಇಲ್ಲವೇ ಪ್ರೇರೇಪಿಸುವವರು ಯಾರೂ ಇಲ್ಲ ಸುಮ್ಮನಾಗಿರುವವರೇ ಹೆಚ್ಚಿನ ಜನರು ಇರುತ್ತಾರೆ.  ಇದಕ್ಕೆ ಸಣ್ಣ ಉದಾಹರಣೆ ನೀಡಬೇಕೆಂದರೆ, ದಾರಿಯಲ್ಲಿ ಹೋಗುತ್ತಿರುವಾಗ ಅಚಾನಕ್ಕಾಗಿ  ಯಾರಿಗೋ ಅಪಘಾತವಾಗಿ ಜೀವನ್ಮರಣ ಹೋರಾಟದಲ್ಲಿ ಇದ್ದಲ್ಲಿ  ಅದನ್ನು ಗಮನಿಸಿದ ಕೆಲವರು ನಮಗೇಕೆ ಉಸಾಬರಿ ಎಂದು ಪಕ್ಕಕ್ಕೆ ತಿರುಗಿಕೊಂಡು ಹೋಗುವವರು ಕೆಲವರಾದರೆ, ಇನ್ನೂ  ಹಲವರು ಆ ಪ್ರದೇಶವನ್ನು ಸುತ್ತುವರೆದು ಅದನ್ನೇ ನೋಡುತ್ತಾ ಮಮ್ಮಲ ಮರುಗುವವರಾದರೇ, ಇನ್ನೂ ಕೆಲವರು ಕೂಡಲೇ ತಮ್ಮ ಮೋಬೈಲ್ ತೆಗೆದು ಆದರ ಚಿತ್ರೀಕರಣವನ್ನು ಮಾಡಿ  ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು  ಸಹಾಯವನ್ನು ಯಾಚಿಸುವುದೂ ಉಂಟು. ಆದರೆ ಅವರಲ್ಲೊಬ್ಬ ಹೃದಯವಂತ ಮನುಷ್ಯ ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮಾನವೀಯತೆಯ ದೃಷ್ಛಿಯಿಂದ ಕೂಡಲೇ ಗಾಯಾಳುವಿನ ಬಳಿ ಧಾವಿಸಿ ಅವರಿಗೆ ನೀರನ್ನು ಕುಡಿಸಲು ಮುಂದಾಗಿದ್ದೇ ತಡಾ, ಹತ್ತಾರು ಮಂದಿಯೂ ತಮ್ಮ ಸಹಾಯವನ್ನು ಮಾಡಲು ಮುಂದಾಗಿ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುವುದಲ್ಲದೇ ಸ್ಥಳೀಯ ಆರಕ್ಷಕರಿಗೆ ಕರೆ ಮಾಡಿ ವಿಷಯವನ್ನು ತಿಳಿಸಲು ಮುಂದಾಗುತ್ತಾರೆ.

acc2ಆ ಒಬ್ಬ ಹೃದಯವಂತ ಮನುಷ್ಯ ಸಹಾಯ ಹಸ್ತವನ್ನು ಚಾಚಲು ಮುಂದಾಗುವವರೆಗೂ ಉಳಿದವರೆಲ್ಲರೂ ಬೇರೆಯವರ ಸಹಾಯಕ್ಕೆ ನಿರೀಕ್ಷಿಸುತ್ತಿರುತ್ತಾರೆಯೇ ಹೊರತು, ತಾವೇ ಸಹಾಯ ಹಸ್ತವನ್ನು ಚಾಚಲು ಮುಂದಾಗಿರುವುದಲ್ಲ ಈ ರೀತಿಯಾಗಿ ಬಹುತೇಕರು ಯಾರಾದರೂ ಬೆಂಬಲಿಸಿದರೆ ಅಥವಾ ಪ್ರೇರೇಪಿಸಿದ್ದಲ್ಲಿ ಮಾತ್ರವೇ ಅವರಲ್ಲಿನ ಶಕ್ತಿ ಸಾಮರ್ಥ್ಯಗಳು ಜಾಗೃತವಾಗಿ ಕೆಲವವನ್ನು ಮುಂದುವರೆಸುತ್ತಾರೆ.

ಮುಂದೆ ಸ್ಪಷ್ಟ ಗುರಿ ಮತ್ತು ಹಿಂದೆ ದಿಟ್ಟ ಗುರುವಿದ್ದಲ್ಲಿ ಎಂತಹ ಕೆಲಸವನ್ನೂ ಸುಸೂತ್ರವಾಗಿ ಮಾಡಬಹುದು ಎನ್ನುವುದು ಸರ್ವೇ ಸಾಮಾನ್ಯವಾದರೂ, ಆದರೆ ಜೀವನದಲ್ಲಿ ಎಲ್ಲಾ ಸಮಯದಲ್ಲಿಯೂ ಎಲ್ಲರಿಗೂ ಈ ರೀತಿಯಾಗಿ ಪ್ರೇರಣೆ ನೀಡಬಲ್ಲವರು ಸಿಗುತ್ತಾರೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದ ಕಾರಣ, ನಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ನಮ್ಮಲ್ಲಿಯೇ  ಅರಿವು ಮೂಡಿಸಿ ಕೊಳ್ಳೋಣPractice makes man perfect ಎನ್ನುವ  ಆಂಗ್ಲ ಉಕ್ತಿಯಂತೆ,  ಅರಂಭದಲ್ಲಿ ಒಂದೆರಡು ಬಾರಿ ಸೋಲಾಗಬಹುದು. ಆಗ ಅದೇ ಸೋಲನ್ನೇ ನೆನೆಯುತ್ತಾ ಹತಾಶರಾಗದೇ, ಅದೇ ಸೋಲಿನ ಅನುಭವವನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸತತ ಪರಿಶ್ರಮದ ಮೂಲಕ ವಿಜಯವನ್ನು ಸಾಧಿಸಬಹುದಾಗಿದೆ.

ಅದೇ ರೀತಿ ನಮಗೂ ಸಹಾ ಯಾರಾದರೂ ಸಹಾಯ ಮಾಡಿದಲ್ಲಿ ನಾವು ಕೂಡ ಬಲಶಾಲಿಯಾಗಬಹುದು ಅಥವಾ ಇನ್ನೂ ಮೇಲಕ್ಕೆ ಏರಬಹುದಿತ್ತು ಎಂದು ಕೊರಗುವ ಮಂದಿ ಕಾಣಿಸಿದಲ್ಲಿ ಕೂಡಲೇ ಅಂತಹವರಿಗೆ ನಮ್ಮ ಅನುಭವಗಳನ್ನು ಹೇಳುವ ಮೂಲಕ ಅವರಲ್ಲಿನ ಸಾಮಥ್ಯವನ್ನು ಜಾಗೃತಗೊಳಿಸಿ ಅವರ ಸಂಕಷ್ಟದಿಂದ ಪಾರಾಗಿಸ ಬಹುದು.  ಸರಳ  ಪ್ರೀತಿ, ಸಕಾರಾತ್ಮಕ ಸ್ಪಂದನೆ ಮತ್ತು ಕೆಲವು ಪ್ರೇರಕ ಪದಗಳು ಮತ್ತೊಬ್ಬರ ಜೀವನವನ್ನು ಶಾಶ್ವತವಾಗಿ ಬದಲಾಯಿಸಬಹುದು ಎಂದಾದಲ್ಲಿ ಆ ರೀತಿಯಾಗಿ  ನಿಸ್ವಾರ್ಥತೆಯಿಂದ, ಉತ್ಸಾಹ ಮತ್ತು ಬೆಂಬಲ ಸೂಚಿಸುವ ಕೆಲಸವನ್ನು ನಾವೂ ನೀವೇ ಮಾವುತ, ಜಾಂಬವಂತರಂತೆ  ಹೃದಯ ಶ್ರೀಮಂತರೇಕಾಗಬಾರದು?

ಏನಂತೀರೀ?

ನಿಮ್ಮವನೇ ಉಮಾಸುತ

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಾಣಿಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ?

dasara2

ದಸರಾ ಎಂದು ನೆನಸಿಕೊಂಡಾಕ್ಷಣ ನಮ್ಮ ಕಣ್ಣ ಮುಂದೆ ಬರುವುದೇ ಆನೆಯ ಅಂಬಾರಿ. ಆನೆಗಳ ಹಿಂಡಿನ ಮಧ್ಯೆ ಬಲರಾಮನ ಮೇಲೆ ತಾಯಿ ಚಾಮುಂಡೇಶ್ವರಿ ತಾಯಿಯನ್ನು ಮೆರವಣಿಗೆ ಮಾಡುವುದನ್ನು ವೀಕ್ಷಿಸಲು ದೇಶ ವಿದೇಶಗಳಿಂದಳೂ ಲಕ್ಷಾಂತರ ಪ್ರವಾಸಿಗರು ಬರುವುದಲ್ಲದೇ ಆ ಹೆಮ್ಮೆಯ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇನ್ನು ಕೇರಳದ ಬಹುತೇಕ ಹಿಂದೂ ದೇವಾಲಯಗಳಲ್ಲಿಯೂ ಆನೆಗಳೇ ಪ್ರಮುಖ ಆಕರ್ಷಣೆ. ಅಲ್ಲಂತೂ ಹತ್ತಾರು ಆನೆಗಳನ್ನು ಚೆನ್ನಾಗಿ ಅಲಂಕರಿಸುವುದನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲವು. ದೇಶದಲ್ಲಿ ಎಲ್ಲಶ ಆಗಲೀ ಸ್ವಾಮೀ ಐಯ್ಯಪ್ಪನ ಮೆರವಣೆಗೆ ನಡೆಯುವುದೇ ಆನೆಯ ಮೇಲೆಯೆ.

ಇನ್ನು ನಾವು ಚಿಕ್ಕವರಿದ್ದಾಗ ನಮ್ಮ ಹಾಸನದ ಸುತ್ತಮುತ್ತಲಿನ ಊರುಗಳಿಗೆ ವರ್ಷಕ್ಕೊಮ್ಮೆ ಕುಂದೂರು ಮಠದವರು ಎತ್ತರೆತ್ತರದ ಡುಬ್ಬಗಳಿದ್ದ ಹತ್ತಾರು ಎತ್ತುಗಳು, ಕುದುರೆಗಳೊಂದಿಗೆ ಬಂದು ಕಪ್ಪವನ್ನು ಪಡೆದುಕೊಂಡು ಅವುಗಳ ಮೇಲೆ ಹೇರಿಕೊಂಡು ಹೊಗುತ್ತಿದ್ದದ್ದು ಇನ್ನೂ ಚೆನ್ನಾಗಿಯೇ ನೆನಪಿದೆ.

ಇನ್ನೂ ಅಮ್ಮನ ತವರೂರಾದ ಕೆಜಿಎಫ್ ನಲ್ಲಿದ್ದ ಬಹುತೇಕ ಸುಬ್ರಹ್ಮಣ್ಯನ ಮತ್ತು ಉದ್ದಂಡಮ್ಮನ ದೇವಸ್ಥಾನಗಳಲ್ಲಿ ಹತ್ತಾರು ನವಿಲುಗಳನ್ನು ಸಾಕುತ್ತಿದ್ದು ಚಿಕ್ಕ ಮಕ್ಕಳಾಗಿದ್ದ ನಮಗೆ ದೇವರ ಮೇಲಿನ ಭಕ್ತಿಗಿಂತಲೂ ಪ್ರಾಣಿ ಪಶು ಪಕ್ಷಿಗಳನ್ನು ನೋಡುವುದಕ್ಕೇ ಹೋಗುತ್ತಿದ್ದದ್ದು ಇನ್ನೂ ಹಚ್ಶ ಹಸಿರಾಗಿಯೇ ಇದೆ.

ele1

ಇನ್ನು ಧರ್ಮಸ್ಥಳ, ಉಡುಪಿ , ಕೊಲ್ಲೂರು, ಶೃಂಗೇರಿ ಮುಂತಾದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಆನೆಗಳನ್ನು ಸಾಕುವ ಪದ್ದತಿ ಅದೆಷ್ಟೋ ಕಾಲದಿಂದ ಅನೂಚಾನಾಗಿ ನಡೆದುಕೊಂಡು ಬರುತ್ತಿದ್ದು. ಈ ಪ್ರಾಣಿಗಳನ್ನು ಯಾವುದೇ ವಾಣಿಜ್ಯ ಆದಾಯಕ್ಕೆ ಬಳಸಿಕೊಳ್ಳದೇ, ಅತ್ಯಂತ ಜತನದಿಂದ ಕೇವಲ ದೇವಸ್ಥಾನದ ದೇವರ ಕೈಂಕರ್ಯಕ್ಕೆ ಮಾತ್ರವೇ ಬಳಸಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವಷ್ಟೇ.

durga2

ಅದೇ ರೀತಿ ಬೆಂಗಳೂರಿನ ವಿದ್ಯಾರಣ್ಯಪುರದ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ಪೂಜಾ ಕಾರ್ಯಕ್ಕೆ ಬಳಸಲು ಸುಮಾರು 10-12 ವರ್ಷಗಳ ಹಿಂದೆ ಆನೆಯ ಸಣ್ಣ ಮರಿಯೊಂದನ್ನು ತಂದು ಅದನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿ ಈಗ ದೊಡ್ದದಾಗಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ದೇವಾಲಯದ ಸದ್ದು ಗದ್ದಲದಿಂದ ಆನೆಗೆ ತೊಂದರೆಯಾಗದಿರಲೆಂದೂ ದೇವಾಲಯದಿಂದ ಸ್ವಲ್ಪ ದೂರದಲ್ಲಿಯೇ ಅದಕ್ಕೊಂದು ಸುಂದರವಾದ ಲಾಯವನ್ನು ಭಕ್ತಾದಿಯೊಬ್ಬರು ಕಟ್ಟಿಸಿಕೊಂಡಿದ್ದು ದೇವಸ್ಥಾನದ ಪೂಜೆಗ ಅನುಗುಣವಾಗಿ ಆನೆಯನ್ನು ಅದರ ಮಾವುತ ಕರೆದುಕೊಂಡು ಬಂದು ಹೊಗುತ್ತಿದ್ದದ್ದನ್ನು ಅನೇಕ ವರ್ಷಗಳಿಂದಲೂ ನೋಡುತ್ತಲೇ ಇದ್ದೇವೆ.

durga1

ನಮ್ಮ ಹಿಂದೂಗಳ ಅತಿ ದೊಡ್ಡ ಸಮಸ್ಯೆ ಎಂದರೆ ಒಗ್ಗಟ್ಟಿನ ಕೊರತೆ. ಇದೇ ಕಾರಣದಿಂದಾಗಿಯೇ, ಮೊಘಲರು, ಬ್ರಿಟೀಷರು ನಮ್ಮ ಮೇಲೆ ಸಾವಿರಾರು ವರ್ಷಗಳ ಕಾಲ ಧಾಳಿ ನಡೆಸಿದರೂ ಇನ್ನೂ ಬುದ್ದಿ ಕಲಿತುಕೊಂಡಿಲ್ಲ. ಯಾರದ್ದೋ ಮೇಲಿನ ತಮ್ಮ ವಯಕ್ತಿಯ ದ್ವೇಷಕ್ಕಾಗಿ ವರ್ಷದ 365 ದಿನಗಳ ಕಾಲವೂ ಒಂದಲ್ಲಾ ಒಂದು ಧಾರ್ಮಿಕ ಚಟುವಟಿಕೆಗಳಿಂದ ವಿದ್ಯಾರಣ್ಯಪುರದ ಎಲ್ಲಾ ಆಸ್ತಿಕ ಭಕ್ತರಿಗೆ ಮತ್ತು ಸುತ್ತಮುತ್ತಲಿನ ಎಲ್ಲಾ ಸಣ್ಣ ಪುಟ್ಟ ದೇವಾಲಯಗಳಿಗೆ ಆಭಯದಾಯಕವಾಗಿದ್ದ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಮೇಲೆ ಇಲ್ಲ ಸಲ್ಲದ ದೂರನ್ನು ಸಲ್ಲಿಸಿ, ಕಡೆಗೆ ಹಣಕಾಸಿನ ದುರ್ಬಳಕೆಯ ನೆಪದಿಂದ ಭಕ್ತರ ಸಹಕಾರದೊಂದಿಗೆ ಖಾಸಗಿಯಾಗಿದ್ದ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಮೂರ್ನಾಲ್ಕು ವರ್ಷಗಳ ಹಿಂದೆ ಸೇರುವಂತೆ ಮಾಡುವ ಮೂಲಕ ತಮ್ಮ ವಿಕೃತ ಮನೋಭಾವನೆಯಿಂದ ಮೆರೆದಿದ್ದರು. ದೇವಾಲಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದಾಗಿನಿಂದಲೂ ದೇವಸ್ಥಾನದ ಬಹುತೇಕ ಧಾರ್ಮಿಕ ಚಟುವಟಿಕೆಗಳು ನಿಂತು ಹೋಗಿ ಸರ್ಕಾರಕ್ಕೆ ಕೇವಲ ದೇವಸ್ಥಾನದ ಹುಂಡಿ ಹಣದ ಮೇಲೆ ಮಾತ್ರ ಕಣ್ಗಾವಲು ಹಾಕಿದ್ದು ವಿಪರ್ಯಾಸವಾಗಿತ್ತು

ಶತ್ರುವಿನ ಶತ್ರು ಮಿತ್ರ ಎನ್ನುವಂತೆ, ತಮ್ಮ ವಯಕ್ತಿಕ ದ್ವೇಷದಿಂದಾಗಿ ಕೆಲವು ಕಾಣದ ಕೈಗಳು ದುರ್ಗಾದೇವಿ ದೇವಸ್ಥಾನದ ಪೂಜಾಕೈಂಕರ್ಯಕ್ಕೆಂದು ಮುದ್ದಾಗಿ ಸಾಕಿಕೊಂಡಿದ್ದ ಆನೆಯ ಮೇಲೆ ತಗಾದೆಯನ್ನು ತೆಗೆದು ಅದು ನ್ಯಾಯಾಲದ ಅಂಗಳಕ್ಕೆ ಕಾಲಿಟ್ಟಿದ್ದು ಮುಖ್ಯ ನ್ಯಾ. ಎ.ಎಸ್.ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ನೆನ್ನೆ ಗುರುವಾರ ವಿಚಾರಣೆಯ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟಿನ ನ್ಯಾಯಾಧೀಶರು, ಆನೆಗಳು ಕಾಡಿನಲ್ಲಿ ಇರಬೇಕು ಹೊರತು ದೇವಸ್ಥಾನದಲ್ಲಿ ಅಲ್ಲ. ಪೂಜಾ ಕಾರ್ಯಕ್ರಮಕ್ಕೆ ಆನೆಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ ಆಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿರುವುದು ನಿಜಕ್ಕೂ ಅಚ್ಚರಿಯನ್ನು ಮೂಡಿಸಿದೆ.

ದೇವಾಲಯದ ಪರ ವಕೀಲರು ಈ ಮುಂಚೆ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನವು ಖಾಸಗಿ ದೇವಾಲಯವಾಗಿದ್ದು. ಅಲ್ಲಿನ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಆನೆಯೊಂದನ್ನು ಬಹಳ ವರ್ಷಗಳ ಹಿಂದೆ ತಂದು ಪೋಷಿಸಲಾಗುತ್ತಿತ್ತು. ಇದೀಗ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದ ಕಾರಣ ಆನೆಯೂ ಸರ್ಕಾರದ ವಶದಲ್ಲಿದೆ. ಅದನ್ನು ಸ್ಥಳಾಂತರಿಸದೇ ದೇವಸ್ಥಾನದಲ್ಲಿಯೇ ಇರಿಸಲು ಮುಜರಾಯಿ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇಗುಲಗಳಲ್ಲಲ್ಲ ಎಂದಿದೆ.

ಇದಕ್ಕೆ ಪೂರಕವಾಗಿ ಸರ್ಕಾರಿ ವಕೀಲರಾಗಿರುವ ಶ್ರೀ ವಿಜಯ್‌ ಕುಮರ್‌ ಪಾಟೀಲ್‌, ಆನೆಗೆ ಆರೋಗ್ಯ ಸಮಸ್ಯೆಯಿದೆ. ಚಿಕಿತ್ಸೆ ನೀಡುವ ಅಗತ್ಯ ಇರುವುದರಿಂದ ಅದನ್ನು ಮಾಲೂರಿನ ಅರಣ್ಯ ಇಲಾಖೆಯ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದನ್ನು ಪರಿಗಣಿಸಿದ ನ್ಯಾಯಪೀಠ, ಆನೆಗೆ ಸೂಕ್ತ ಚಿಕಿತ್ಸೆ ಕಲ್ಪಿಸಿ, ವೈದ್ಯಕೀಯ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ಸೆ.13ಕ್ಕೆ ವಿಚಾರಣೆ ಮುಂದೂಡಿದೆ.

ಆನೆ, ಹಸು, ಎತ್ತು, ಕುದುರೆ ಒಂಟೆ ಹೀಗೆ ಅಯಾಯಾ ಪ್ರದೇಶದಲ್ಲಿರುವ ಪ್ರಾಣಿಗಳನ್ನು ದೇವಸ್ಥಾನದಲ್ಲಿ ಸಾಕುತ್ತಾ ಅದನ್ನು ದೇವರ ಪೂಜಾ ಕಾರ್ಯಕ್ರಮಕ್ಕೆ ಬಳಸಿಕೊಳ್ಳುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿರುವುದನ್ನು ಈಗ ಏಕಾಏಕಿ ನಿಲ್ಲಿಸುವುದು ಮತ್ತು ಅದನ್ನು ಕ್ರೌರ್ಯ ಎನ್ನುವುದು ಎಷ್ಟು ಸರಿ?

ಹಾಗಾದರೆ, ಕಾಡುಗಳನ್ನು ಕಡಿದು ನಾಡಾಗಿ ಪರಿವರ್ತನೆ ಮಾಡಿರುವುದು, ಪ್ರಾಣಿಗಳನ್ನು ವಧೆ ಮಾಡಿ ಮಾಂಸಾಹಾರವನ್ನು ಸೇವಿಸುವುದೂ ಕ್ರೌರ್ಯವಲ್ಲವೇ? ಪ್ರಪಂಚಾದ್ಯಂತ ಇರುವ ಎಲ್ಲಾ ಮೃಗಾಲಯಗಳನ್ನು ಕ್ರೌರ್ಯ ಎಂದೇ ಮುಚ್ಚಿಸ ಬೇಕಲ್ಲವೇ? ಪ್ರಾಣಿ ವಧೆ ಮಾಡುವ ಕಸಾಯಿಖಾನೆ ಮತ್ತು ಮಾಂಸದ ಅಂಗಡಿಗಳಿಗೆ ಸರ್ಕರವೇ ಅನುಮತಿ ಕೊಟ್ಟಿಲ್ಲವೇ? ಮೊನ್ನೆ ತಾನೇ, ಕುರಿಗಳನ್ನು ಕಡಿದು ರಸ್ತೆ ರಸ್ತೆಗಳಲ್ಲಿ ರಕ್ತದ ಕೋಡಿ ಹರಿಸಿದ ಇತರೇ ಧರ್ಮಗಳ ಆಚರಣೆಗಳು ನ್ಯಾಯಾಲಯದ ಗಮನಕ್ಕೆ ಬರುವುದಿಲ್ಲವೇ? ಇದೇ ರೀತಿ ಕುಂಟು ನೆಪವೊಡ್ಡಿ ಒಂದೊಂದೇ ಆಚರಣೆಗಳನ್ನು ನಿಷೇಧಿಸುತ್ತಲೇ ಹೋದಲ್ಲಿ ನಮ್ಮ ಹಿಂದೂ ಸಂಪ್ರದಾಯ ಮತ್ತು ಸಂಸ್ಕಾರಗಳು ನಮ್ಮ ಮುಂದಿನ ಪೀಳಿಗೆಗೆ ತಿಳಿಯುವುದಾದರು ಹೇಗೇ? ನ್ಯಾಯಾಲಯದ ತೀರ್ಪು ನಿಕ್ಷಕ್ಷಪಾತ ಇರಬೇಕು ಎಂದು ತಕ್ಕಡಿ ಹಿಡಿದ ನ್ಯಾಯದೇವತೆಯ ಕಣ್ಣನ್ನು ಕಟ್ಟಲಾಗಿರುತ್ತದೆ ಆದರೆ ದುರಾದೃಷ್ಟವಾಷಾತ್ ನ್ಯಾಯಾಲಯದ ಇತ್ತೀಚಿನ ಬಹುತೇಕ ತೀರ್ಪುಗಳನ್ನು ಕೂಲಂಕುಶವಾಗಿ ಗಮನಿಸಿದಲ್ಲಿ, ಅದು ದೇಶದ ಬಹುಸಂಖ್ಯಾತರಾದ ಹಿಂದೂಗಳ ವಿರುದ್ಧವೇ ಅಗಿರುವುದು ನಿಜಕ್ಕೂ ದುಃಖಕರವೇ ಸರಿ.

ele4

ದಯವಿಟ್ಟು ಸಮಸ್ತ ಹಿಂದೂಗಳ ಪರವಾಗಿ ನಮ್ಮ ಘನವೆತ್ತ ನ್ಯಾಯಾಲಯದಲ್ಲಿ ನಮ್ಮ ಕೋರಿಕೆಯೆಂದರೆ ನಮ್ಮ ಪೂರ್ವಜರ ಜೀವನ ಶೈಲಿ, ಆಹಾರ, ಹಬ್ಬ ಹರಿದಿನಗಳು, ಆಚಾರ ವಿಚಾರಗಳ ಪದ್ದತಿಯ ಹಿಂದೆ ಖಂಡಿತವಾಗಿಯೂ ವೈಜ್ಞಾನಿಕವಾದ ಕಾರಣಗಳಿದ್ದು ಅವುಗಳಿಗೆ ಅನಗತ್ಯವಾಗಿ ನ್ಯಾಯಾಲಯದ ಮೂಲಕ ಕೊಕ್ಕೆ ಹಾಕದಿರಿ. ಈ ದೇವಾಲಯಗಳಲ್ಲಿ ಆ ಪ್ರಾಣಿಗಳನ್ನು ಹಿಂಸಿಸುತ್ತಿದ್ದಲ್ಲಿ ನಿಮ್ಮ ವಾದವನ್ನು ಒಪ್ಪಬಹುದು ಆದರೆ ಅಲ್ಲಿ ಅವುಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಇಂದಿಗೂ ಸಹಾ ಅದೆಷ್ಟೋ ದೇವಾಲಯಗಳಲ್ಲಿ ನಡೆಸುತ್ತಿರುವ ಗೋಶಾಲೆಗಳಿಂದಾಗಿಯೇ ಗೋವುಗಳ ಕಟುಕರ ಪಾಲಾಗದೇ ತಮ್ಮ ಕಡೆಯ ದಿನಗಳಲ್ಲಿ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಅದೇ ರೀತಿ ದೇಶಾದ್ಯಂತ ಇರುವ ಅದೆಷ್ಟೋ ದೇವಾಲಯಗಳ ದಾಸೋಹವೇ ಲಕ್ಷಾಂತರ ಜನರ ಪ್ರತಿನಿತ್ಯದ ಹಸಿವನ್ನು ನೀಗಿಸುತ್ತಿದೆ.

ele2

ಅದಕ್ಕೇ ಅಲ್ಲವೇ ಕೇಳಿದ್ದೂ ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋ‍ಚಿಸಿದಾಗ ನಿಜವು ಅರಿವುದು ಎಂಬ ಹಾವು ಮುಂಗುಸಿಯ ಜಾನಪದ ಕಥೆ ಸಾವಿರಾರು ವರ್ಷಗಳಿಂದಲೂ ಪ್ರಚಲಿತದಲ್ಲಿದೆ. ಕೇವಲ ವಕೀಲರು ನಡೆಸುವ ಪರ ವಿರೋಧದ ವಾದ ವಿವಾದಗಳಿಗೆ ಕಿವಿಗೊಟ್ಟು ನಿರ್ಧಾರವನ್ನು ತಳೆಯದೆ, ಸ್ವತಃ ನ್ಯಾಯಾಧೀಷರುಗಳೇ ಪ್ರತ್ಯಕ್ಷಿಸಿ ನೋಡಿದರು ಪ್ರಮಾಣಿಸಿ ನೋಡು ಎಂದು ದೇವಾಲಯಗಳಿಗೆ ಭೇಟಿ ಕೊಟ್ಟಾಗಲೇ ನಿಜಾಂಶ ತಿಳಿಯುವುದು.

ನಮಸ್ತ ಹಿಂದೂಗಳಲ್ಲಿ ಕೋರಿಕೆಯೇನೆಂದರೆ ದಯವಿಟ್ಟು ಹಿಂದೂ ಧಾರ್ಮಿಕ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುವಾಗ ಅದು ನನಗೆ ಸಂಬಂಧಿಸಿದ ವಿಷಯವಲ್ಲ ಎಂದು ಸುಮ್ಮನಾಗದೇ ದಯವಿಟ್ಟು ಅದರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಮತ್ತು ತಪ್ಪು ಎಂದು ಕಂಡು ಬಂದಲ್ಲಿ ಅದನ್ನು ಎತ್ತಿ ಹಿಡಿಯುವ ಮನೋಭಾವನೆ ಬೆಳಸಿಕೊಳ್ಳೋಣ. ಹಿಂದೂ ಜಾಗೃತನಾದಲ್ಲಿ ಮಾತ್ರವೇ ಈ ದೇಶ, ಈ ದೇಶದ ಸಂಸ್ಕಾರ, ಸಂಪತ್ತು ಎಲ್ಲವೂ ಉಳಿದೀತು ಇಲ್ಲದಿದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಧರ್ಮವೇ ಅಳಿದು ಹೋಗಿ ನಮ್ಮ ಹೆಣ್ಣು ಮಕ್ಕಳೂ ಮನೆಯಲ್ಲಿ ಮಸುಕು ಧರಿಸಿಕೊಂಡು ಕೂರಬೇಕಾದ ಪರಿಸ್ಥಿತಿ ಬಂದೊದಗುವುದರಲ್ಲಿ ಸಂದೇಹವೇ ಇಲ್ಲ.

ಧರ್ಮೋ ರಕ್ಷತಿ ರಕ್ಷಿತಃ. ಜಾಗೃತ ಹಿಂದು ದೇಶದ ನಿಜವಾದ ಬಂಧು.

ಏನಂತೀರೀ?
ನಿಮ್ಮವನೇ ಉಮಾಸುತ

ಅನಾನಸ್ ಆಸೆಪಟ್ಟು ಅವಸಾನವಾದ ಆನೆ (ಪ್ರಾಣಿಗಳೇ ಗುಣದಲಿ ಮೇಲು ಮಾನವ ಅದಕಿಂತ ಕೀಳು)

ಈ ರಾಜ್ಯದ ಜನ ಹೆಮ್ಮೆಯಿಂದ ತಮ್ಮ ತಾಯ್ನಾಡಿನ ಬಗ್ಗೆ ಹೇಳಿಕೊಳ್ಳುವುದು ನಮ್ಮದು ದೇವರ ನಾಡು ಎಂದು ಅದಕ್ಕೂ ಒಂದು ಹೆಜ್ಜೆ ಮುಂದೇ ಹೋಗಿ ನಮ್ಮದು ಅಕ್ಷರಸ್ಥರ ನಾಡು ಎಂದು. ಅಂತಹ ಅಕ್ಷರಸ್ಥ ದೇವರ ನಾಡಿನಲ್ಲಿ ಮನುಷ್ಯನ ದುರಾಸೆಯ ಫಲವಾಗಿ ತುಂಬು ಗರ್ಭಿಣಿ ಆನೆಯೊಂದು ಹತವಾಗಿರುವುದು ನಿಜಕ್ಕೂ ಅಮಾನವೀಯ ಮತ್ತು ಅಕ್ಷಮ್ಯ ಅಪರಾಧವೇ ಸರಿ. ಸಕಲ ಪ್ರಾಣಿ ಸಂಕುಲಗಳು ಕಾಡಿನಲ್ಲಿ ಸ್ವಚ್ಚಂದವಾಗಿ ವಿಹರಿಸಿಕೊಂಡು ತಮ್ಮ ಪಾಡಿಗೆ ತಾವು ಸುಖಃವಾಗಿದ್ದವು. ತನ್ನ ದುರಾಸೆಗಾಗಿ ಮನುಷ್ಯರು ಆ ಕಾಡುಗಳನ್ನು ನಾಶ ಮಾಡಿ ನಾಡನ್ನು ಕಟ್ಟಿ ಕೊಂಡ ಪರಿಣಾಮ ಕಾಡು ಪ್ರಾಣಿಗಳು ಅಕ್ಷರಶಃ ಅನಾಥವಾದವು ಎಂದರೂ ತಪ್ಪಾಗಲಾರದು. ತನ್ನ ದೈನಂದಿನ ಆಹಾರಕ್ಕಾಗಿ ಕಾಡಿನಲ್ಲಿ ಏನೂ ಸಿಗದಿದ್ದಾಗ ಅನಿವಾರ್ಯವಾಗಿ ನಾಡಿನತ್ತಲೇ ಬರುವಂತಹ ಪರಿಸ್ಥಿತಿಯನ್ನು ಮಾನವನೇ ನಿರ್ಮಿಸಿದ ಎಂದರೂ ತಪ್ಪಾಗಲಾರದು.

ಹೀಗೆ ಕಾಡು ಪ್ರಾಣಿಗಳು ತಾನು ಬೆಳೆದ ಬೆಳೆಗಳನ್ನು ಏಕಾ ಏಕಿ ನಾಶ ಮಾಡುವುದನ್ನು ಸಹಿಸದ ಮನುಷ್ಯ ಕಾಡು ಪ್ರಾಣಿಗಳಿಂದ ತನ್ನ ಬೆಳೆಗಳನ್ನು ರಕ್ಷಿಸಿಕೊಳ್ಳಲು ನಾನಾ ರೀತಿಯ ಕಸರತ್ತುಗಳನ್ನು ಮಾಡಲಾರಂಭಿಸಿದನು. ಕೆಲವರು ತಮ್ಮ ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಂಡರೆ ಇನ್ನೂ ತಾಂತ್ರಿಕವಾಗಿ ಮುಂದುವರೆದಂತಹ ಜನರು ತಮ್ಮ ಬೇಲಿಗಳಿಗೆ ಸಣ್ಣ ಪ್ರಮಾಣದ ವಿದ್ಯುತ್ ಪ್ರವಹಿಸುವಂತೆ ಮಾಡಿ ಬೇಲಿಯನ್ನು ಮುಟ್ಟಿದವರಿಗೆ ಸಣ್ಣದಾದ ವಿದ್ಯುತ್ ಶಾಕ್ ತಾಗಿ ಜಮೀನಿನ ಒಳಗಡೆ ಬಾರದಂತೆ ತಡೆದರಾದರೂ, ಕೆಲವೊಮ್ಮೆ ತಾಂತ್ರಿಕ ದೋಷದ ಪರಿಣಾಮವಾಗಿ ಭಾರಿ ಪ್ರಮಾಣದ ವಿದ್ಯುತ್ ಪ್ರವಹಿಸಿ ಪ್ರಾಣಹಾನಿಗಳಾದ ಉದಾಹರಣೆಯನ್ನು ನೆನಪಿಸುವಂತೆ ಕೆಲ ದಿನಗಳ ಹಿಂದೆ ಕೇರಳದ ಮಲಪ್ಪುರಂ ಬಳಿಯ ವೆಲ್ಲಿಯಾರ್ ನದಿಯ ತಟದಲ್ಲಿ ರುವ ಕಾಡಿನ ಪಕ್ಕದಲ್ಲಿರುವ ಗ್ರಾಮದಲ್ಲಿ ನಡೆದು ಆಹಾರವನ್ನು ಅರಸಿಕೊಂಡು ನಾಡಿಗೆ ಬಂದಿದ್ದ ತುಂಬು ಗರ್ಭಿಣಿ ಆನೆ, ಸ್ಪೋಟಕ ತುಂಬಿದ್ದ ಅನಾನಸ್ಸಿಗೆ ಆಸೆಪಟ್ಟು ಅವಸಾನವಾದ ಹೃದಯವಿದ್ರಾವಕ ಘಟನೆ ನಡೆದಿದೆ.

ele2ಅರಂಭದಲ್ಲಿ ಆಹಾರವನ್ನು ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದು ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ತಾನು ಗ್ರಾಮದ ಬೀದಿಯಲ್ಲಿ ನಡೆದು ಕೊಂಡು ಹೋಗುತ್ತಿರುವಾಗ ಕೆಲ ಕಿಡಿಗೇಡಿಗಳು ಆನೆಗೆ ಅನಾನಸ್ ಆಸೆಯನ್ನು ತೋರಿಸಿ, ಮಾತು ಬಾರದ ಮುಗ್ಧ ಆನೆ ಸೊಂಡಲಿನಿಂದ ಅನಾನಸ್ ತೆಗೆದುಕೊಂಡು ತನ್ನ ಬಾಯಿಯೊಳಗೆ ಇಟ್ಟಾಕ್ಷಣವೇ, ಕಿಡಿಗೇಡಿಗಳು ಆ ಅನಾನಸ್ ಹಣ್ಣಿನಲ್ಲಿ ರಹಸ್ಯವಾಗಿ ಇಟ್ಟಿದ್ದ ಪಟಾಕಿ ಡಂ ಎಂದು ಸ್ಪೋಟವಾಗಿ ಆನೆಯ ಬಾಯಿ ಛಿದ್ರವಾಗಿ ಬಾಯಿಯ ತುಂಬಾ ರಕ್ತಸ್ರಾವವಾಗಿವುದನ್ನು ನೋಡಿ ವಿಕೃತ ಆನಂದ ಪಟ್ಟಿದ್ದಾರೆ ಆ ಕಿಡಿಗೇಡಿಗಳು ಎಂದು ಹೇಳಾಲಾದರೂ, ನಂತರ ತಿಳಿದು ಬಂದ ವಿಷಯವೇನೆಂದರೆ, ಮೇ 27 ರಂದು ಪಾಲಕ್ಕಾಡ್-ಮಲಪ್ಪುರಂ ಜಿಲ್ಲೆಗಳ ಗಡಿಯಲ್ಲಿರುವ ಸೈಲೆಂಟ್ ವ್ಯಾಲೀ ನ್ಯಾಷನಲ್ ಪಾರ್ಕ್ ಪ್ರದೇಶದ ಗರ್ಭಿಣಿ ಆನೆಯೊಂದು ಆಹಾರವನ್ನರಸಿಕೊಂಡು ಗ್ರಾಮದ ತೋಟವೊಂದಕ್ಕೆ ನುಗ್ಗಿದೆ. ತೋಟಕ್ಕೆ ನುಗ್ಗುವ ಕಾಡಾನೆಗಳ ಹಾವಳಿಯನ್ನು ತಡೆಯುವ ಸಲುವಾಗಿ ಆ ತೋಟದ ಮಾಲಿಕರು ರಹಸ್ಯವಾಗಿ ಅನಾನಸ್ ಹಣ್ಣಿನಲ್ಲಿ ಸ್ಪೋಟಕಗಳನ್ನು ಹುದುಗಿಟ್ಟಿದ್ದರು. ಮನುಷ್ಯರ ಈ ಕುಕೃತ್ಯವನ್ನರಿಯದ ಮುಗ್ಧ ಆನೆ ನಿಜವಾದ ಹಣ್ಣೆಂದು ಭಾವಿಸಿ ಹಣ್ಣನ್ನು ತನ್ನ ಬಾಯೊಳಗಿಟ್ಟು ಕಚ್ಚಿದೊಡನೆಯೇ, ಹಣ್ಣಿನೊಳಗಿಟ್ಟಿದ್ದ ಸ್ಪೋಟಕ, ಸ್ಫೋಟಗೊಂಡು ಆನೆಯ ದವಡೆ ಮತ್ತು ನಾಲಿಗಳು ಛಿದ್ರ ಛಿದ್ರವಾಗಿದೆ. ಬಾಯಿಯಲ್ಲಾದ ನೋವನ್ನು ತಡೆಯಲಾರದೇ, ಘೀಳುಡುತ್ತಾ ಹಳ್ಳಿಯ ಸುತ್ತಲೂ ಓಡಾಡಿದೆಯಾದರೂ, ಅಂತಹ ನೋವಿನಲ್ಲೂ ಯಾರಿಗೂ ತೊಂದರೆ ನೀಡಿಲ್ಲ ಮತ್ತು ಯಾವುದೇ ಸಾರ್ವಜನಿಕ ಆಸ್ತಿಪಾಸ್ತಿಯನ್ನೂ ನಷ್ಟ ಮಾಡಲಿಲ್ಲ ಎಂಬುದು ಗಮನಿಸಬೇಕಾದಂತಹ ಅಂಶ.

elephantಒಂದು ಕಡೆ ಪಟಾಕಿಯ ಸ್ಪೋಟದಿಂದಾದ ಗಾಯದ ನೋವು ಇನ್ನೊಂದೆಡೆ ಏನನ್ನೂ ತಿನ್ನಲಾಗದೇ ಹಸಿವು, ಮತ್ತೊಂದೆಡೆ ಗಾಯದ ಮೇಲೆ ಕೂರುವ ನೊಣಗಳು ಮತ್ತು ಇತರ ಕೀಟಗಳ ಬಾಧೆಯನ್ನು ತಾಳಲಾರದೇ, ಕಡೆಗೆ ವೆಲ್ಲಿಯಾರ್ ನದಿಯಡೆಗೆ ಸಾಗಿ ನದಿಯ ಮಧ್ಯದಲ್ಲಿಯೇ ಏನನ್ನೂ ಸೇವಿಸದೇ ಎರಡು ಮೂರು ದಿನಗಳು ಅಲ್ಲಿಯೇ ನಿಂತು ಕಡೆಗೆ ಮೃತಪಟ್ಟಿದೆ. ಈ ವಿಷಯ ತಿಳಿದ ಅರಣ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಕೆಲವು ಪಳಗಿದ ಆನೆಗಳ ಮೂಲಕ ಗರ್ಭಿಣಿ ಆನೆಯನ್ನು ನದಿಯಿಂದ ಹೊರ ತರಲು ಭಾರೀ ಪ್ರಯತ್ನಿಸಿದರೂ ಫಲಕಾರಿಯಾಗದೇ, ಇನ್ನೂ ಭೂಮಿಯನ್ನೇ ಕಾಣದೇ ಗರ್ಭದಲ್ಲೇ ಇದ್ದ ಮರಿಯಾನೆಯ ಸಮೇತ ಆ ಹೆಣ್ಣು ಆನೆ ಮೃತಪಟ್ಟಿರುವುದು ನಿಜಕ್ಕೂ ಧಾರುಣ ಮತ್ತು ಮನುಷ್ಯನ ಕ್ರೌರ್ಯಕ್ಕೆ ಮೂಕ ಸಾಕ್ಷಿಯಾಗಿದೆ. ಅರಣ್ಯ ಇಲಾಖೆ ಆನೆಯ ಮೃತದೇಹವನ್ನು ಟ್ರಕ್ ನಲ್ಲಿ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ele4ಮಲಪ್ಪುರಂ ಜಿಲ್ಲೆಯ ಅರಣ್ಯ ಅಧಿಕಾರಿಯೊಬ್ಬರು ಈ ಭೀಕರ ಘಟನೆಯ ವಿವರಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳುವ ವರೆಗೂ ಈ ದುರಂತದ ಘಟನೆ ಬೆಳಕಿಗೆ ಬಂದಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಹೃದಯವಿದ್ರಾವಕ ಘಟನೆ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತು ಕೊಂಡ ಕೇರಳದ ಮುಖ್ಯಮಂತ್ರಿ ಯಥಾಪ್ರಕಾರ, ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬ ಹಳೆಯ ಹೇಳಿಕೆಯನ್ನು ನೀಡಿ ಸುಮ್ಮನಾಗಿದ್ದಾರೆ. ಕಾನೂನಾತ್ಮಕವಾಗಿ ಆ ತೋಟದ ಮಾಲಿಕರನ್ನು ಕೆಲವು ದಿನಗಳ ಕಾಲ ಬಂಧಿಸುವಂತೆ ನಾಟಕ ಮಾಡಿ ಜನ ಮಾನಸದಲ್ಲಿ ಈ ವಿಷಯ ಮರೆಯಾಗುತ್ತಿದ್ದಂತೆಯೇ ಆರೋಪಿಯನ್ನು ಬಿಟ್ಟು ಕಳುಹಿಸಿಕೊಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ

ಆನೆಯ ಸಾವಿಗೆ ಕಾರಣರಾದವರನ್ನು ಶಿಕ್ಷಿಸುವುದರಿಂದ ಮುಂದೆ ಈ ರೀತಿಯ ಪ್ರಕರಣಗಳು ನಡೆಯುವ ಸಾಧ್ಯತೆಗಳು ಕಡಿಮೆಯಾಗಬಹುದು ಎಂದು ನಂಬಲಾಗಿದೆಯಾದರೂ ಇಂತಹ ಮೂಕಪ್ರಾಣಿಗಳ ಸಾವುಗಳು ಬಯಲಿಗೆ ಬಾರದಂತಹ ಘಟನೆಗಳು ನೂರಾರಿವೆ. ಈಗಿರುವ ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ಅಪರಾಧಿಗಳು ಶಿಕ್ಷೆಯನ್ನು ಅನುಭವಿಸದೇ ಜಾರಿಕೊಳ್ಳುವ ಸಂಭವವೇ ಹೆಚ್ಚಾಗಿದೆ.

ನಮ್ಮ ದೇಶದಲ್ಲಿ ವನ್ಯಜೀವಿಯ ಕೊಂದ ಅಪರಾಧಕ್ಕೆ ಕೊಡುವ ಶಿಕ್ಷೆ ತೀರಾ ಸಣ್ಣದ್ದಾಗಿದ್ದು ದೀರ್ಘ ಜೈಲು ಶಿಕ್ಷೆಯನ್ನು ವಿಧಿಸುವುದಿಲ್ಲ. ಖುಲ್ಲಂ ಖುಲ್ಲಾಂಲ್ಲಾಗಿ ಸಲ್ಮಾನ್ ಖಾನ್ ನೇತೃತ್ವದಲ್ಲಿ ಜಿಂಕೆಯ ಭೇಟಿಯಾದ ಹಿಂದೀ ಚಿತ್ರರಂಗದ ನಟ ನಟಿಯರಿಗೆ ಕೊಟ್ಟ ತೀರ್ಪಿನಲ್ಲಿ ಅದು ಸಾಭೀತಾಗಿ ಅಪಹಾಸ್ಯವಾಗಿದ್ದು ಈಗ ಇತಿಹಾಸ.

ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ವನ್ಯಜೀವಿಯನ್ನು ಬೆದರಿಸುವಿಕೆ/ ಹತ್ಯೆಯ ಉದ್ದೇಶಗಳೊಂದಿಗೆ ತಳುಕು ಹಾಗಿಕೊಂಡಿರುವ ಕಾರಣ ಆರೋಪಿಗೆ ಕೇವಲ ಕಠಿಣ ಶಿಕ್ಷೆಯನ್ನಲ್ಲದೇ ಆತನ ಆಸ್ತಿ ಪಾಸ್ತಿಗಳನ್ನು ಸರ್ಕಾರ ಜಪ್ತು ಮಾಡಿಕೊಂಡು ಆತ ಮತ್ತವನ ಕುಟುಂಬ ಆ ಗರ್ಭಿಣಿ ಆನೆಯಂತೆ ಆಸ್ತಿ ಮತ್ತು ಅಸರೆ ಕಳೆದುಕೊಂಡು ಆಹಾರಕ್ಕಾಗಿ ಅಲೆದಾಡುವಂತಾದಾಗಲೇ ಆ ತಾಯಿ ಮತ್ತು ಹೊಟ್ಟೆಯಲ್ಲಿದ್ದ ಕಂದ ಅನುಭವಿಸಿದ ನೋವು ಅವರಿಗೆ ತಿಳಿದಂತಾಗುತ್ತದೆ.

ele6ಹಾಗಂತ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದೇನೂ ನನ್ನ ವಾದವಲ್ಲ. ಮುಗ್ಧ ಪ್ರಾಣಿಗಳ ಕೊಲೆಗಾರರಿಗೆ ಕಂಡಲ್ಲಿ ಗುಂಡು ಅಥವ ಮರಣ ದಂಡನೆ ಪರಿಹಾರವೂ ಅಲ್ಲವಾದರೂ, ಇಂದು ತಾಯಿ ಮತ್ತು ಹುಟ್ಟಲಿರುವ ಮಗುವನ್ನು ಈ ರೀತಿಯಾಗಿ ಅಮಾನುಷವಾಗಿ ಕೊಲ್ಲಲ್ಪಟ್ಟ ಇಂತಹ ಅಪರೂಪದ ಸಂದರ್ಭವನ್ನು ಬಳಸಿಕೊಂಡು  ಒಂದು ಕಠಿಣ ಕ್ರಮವನ್ನು ಜಾರಿಗೆ ತಂದು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗುವಂತೆ ಮಾಡಬೇಕು ಎನ್ನುವುದಷ್ಟೇ ನನ್ನ ಅಭಿಪ್ರಾಯವಾಗಿದೆ. ಅಂತಹ ಕಠಿಣ ಕ್ರಮವನ್ನು ಜರುಗಿಸುವ ಇಚ್ಚಾಶಕ್ತಿಹೊಂದಿರುವ ಅಧಿಕಾರ ವರ್ಗ ಮತ್ತು ರಾಜಕೀಯ ನಾಯಕರ ಅವಶ್ಯಕತೆ ಇದೆ. ಇಲ್ಲದಿದ್ದಲ್ಲಿ, ಇಡೀ ದೇಶಕ್ಕೇ ಕೂರೋನಾ ಹಬ್ಬಿಸಲು ಕಾರಣೀಭೂತರಾದ ಮತ್ತು ಕೂರೋನಾ ತಡೆಗಟ್ಟಲು ಶ್ರಮಿಸುತ್ತಿದ್ದ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆಗೈದ ಒಂದು ಕೋಮಿನವರನ್ನು ಕೆಲ ಮತಾಂಧ ಮತ್ತು ಭ್ರಷ್ಟ ರಾಜಕಾರಣಿಗಳ ಕೃಪಾಶೀರ್ವಾದದಿಂದಾಗಿ ಕಠಿಣ ರೀತಿಯಿಂದ ಶಿಕ್ಷಿಸಿದ ಇಂದು ಸಾವಿರಾರು ಜನರಿಗೆ ಕೂರೋನಾ ಸಾಂಕ್ರಾಮಿಕ ರೋಗ ಹರಡಿದ ರೀತಿ ಮುಂದೆಯೂ ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆಗಳಿವೆ. ಹಾಗಾಗಿ ಕಬ್ಬಿಣ ಕಾಯ್ದಾಗಲೇ ಬಗ್ಗಿಸಬೇಕು ಎನ್ನುವಂತೆ ಇಂತಹ ಅತ್ಯುತ್ತಮ ಅವಕಾಶವನ್ನು ಹಾಳು ಮಾಡಿಕೊಳ್ಳದೇ, ಸದುಪಯೋಗ ಪಡಿಸಿಕೊಂಡು ಕಠಿಣ ಕಾನೂನನ್ನು ತರುವ ಅವಶ್ಯಕತೆ ಇದೆ.

ಈ ಸಮಯದಲ್ಲಿ 70ರ ದಶಕದಲ್ಲಿ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ.ರಾಜಕುಮಾರ್ ಅವರು ಹಾಡಿದ ಯಾರೇ ಕೂಗಾಡಲಿ ಹಾಡಿನಲ್ಲಿ ಬರುವ ಒಂದು ಸಾಲು ಪ್ರಾಣಿಗಳೇ ಗುಣದಲಿ ಮೇಲು ಮಾನವ ಅದಕಿಂತ ಕೀಳು ಉಪಕಾರ ಮಾಡಲಾರ, ಬದುಕಿದರೆ ಸಹಿಸಲಾರ ಎಂಬುದು ಅಕ್ಷರಶಃ ನಿಜ ಎಂದು ಈ ಘಟನೆ ನೆನಪಿಗೆ ತರುತ್ತದೆ. ಈ ಮೂಕ ಪ್ರಾಣಿಗಳು ಮನುಷ್ಯರ ಧುರಳತೆಯನ್ನು ಅರಿಯದೆ ಅವರು ಏನು ಕೊಟ್ಟರೂ ಅನುಮಾನಿಸದೇ ತಿನ್ನಲು ಹೋದ ಪರಿಣಾಮವೇ ಈ ದುರ್ಘಟನೆ ಸಂಭವಿಸಿದೆ. ಮಾನವ ತನ್ನ ದುರಾಸೆಯಾಗಿ ಈಗಾಗಲೇ ಕಾಡು ಮತ್ತು ಕಾಡು ಪ್ರಾಣಿಗಳನ್ನು ನಾಶ ಮಾಡಿ ಪರಿಸರದಲ್ಲಿ ಮಾಡಿದ ಅಸಮಾನತೆಯಿಂದಾಗಿ ನಾನಾರೀತಿಯ ನೈಸರ್ಗಿಕ ಅವಘಡಗಳು ಸಂಭವಿಸುತ್ತಿರುವುದು ತಿಳಿದಿದ್ದರೂ ಮತ್ತೊಮ್ಮೆ ನಂಬಿದವರ ಕತ್ತು ಕುಯ್ಯುವುದು ಸಜ್ಜನರನ್ನ ಗೋಳುಹುಯ್ದುಕೊಳ್ಳುವುದನ್ನೇ ತನ್ನ ಹುಟ್ಟುಗುಣವನ್ನಾಗಿ ಮಾಡಿಕೊಂಡಿರುವ ಮಾನವ ಮತ್ತೊಮ್ಮೆ ತನ್ನ ದುಷ್ಟ ಬುದ್ಧಿಯಿಂದ ಅನಾನಾಸ್ ಆಸೆ ತೋರಿಸಿ ಆನೆಯ ಅವಸಾನಕ್ಕೆ ಕಾರಣವಾಗಿರುವುದು ಅಕ್ಷಮ್ಯ ಅಪರಾಧವಾಗಿದೆ 😥

ಏನಂತೀರೀ?

ಗಜ ಗಾಂಭೀರ್ಯ

ಆದೊಂದು ರಾಜನ ಅರಮನೆಯಲ್ಲಿ ಪಟ್ಟದಾನೆ ಮತ್ತು ಅರಮನೆಯಲ್ಲಿದ್ದ ನಾಯಿ ಎರಡೂ ಒಂದೇ ಸಮಯದಲ್ಲಿ ಗರ್ಭಿಣಿಯಾದವು. ಅದಾಗಿ ಮೂರು ತಿಂಗಳ ನಂತರ ಆ ನಾಯಿ ಆರು ನಾಯಿಮರಿಗಳಿಗೆ ಜನ್ಮ ನೀಡಿತು. ಮತ್ತೆ ಆರು ತಿಂಗಳ ನಂತರ ಅದೇ ನಾಯಿ ಪುನಃ ಗರ್ಭಿಣಿಯಾಗಿ ಆರು ಮರಿಗಳಿಗೆ ಜನ್ಮ ನೀಡಿ ಒಟ್ಟು ಒಂಬತ್ತು ತಿಂಗಳುಗಳೊಳಗೆ ಒಂದು ಡಜನ್ ನಾಯಿಮರಿಗಳಿಗೆ ಜನ್ಮ ನೀಡಿತು ಮತ್ತು ಅದರ ಹೆರಿಗೆಯ ಕಾರ್ಯ ಹಾಗೇ ಮುಂದುವರೆಯಿತು.

ele2ಆನೆ ಗರ್ಭಿಣಿಯಾಗಿ ಹದಿನೆಂಟು ತಿಂಗಳು ಕಳೆದರೂ ಪ್ರಸವವಾಗದಿದ್ದನ್ನು ನೋಡಿದ ನಾಯಿಗೆ ಅನುಮಾನ ಬಂದು, ಆನೆಯನ್ನು ಪ್ರಶ್ನಿಸುತ್ತಾ, ನೀವು ನಿಜವಾಗಿಯೂ ಗರ್ಭಿಣಿಯಾಗಿದ್ದೀರಿ ಎಂದು ನಿಮಗೆ ಖಚಿತವಾಗಿದೆಯೇ? ಏಕೆಂದರೇ ಹದಿನೆಂಟು ತಿಂಗಳ ಹಿಂದೆ ನಾವಿಬ್ಬರೂ ಒಟ್ಟಿಗೆ ಗರ್ಭಿಣಿಯಾದೆವು. ಈ ಸಮಯದಲ್ಲಿ ನಾನು ಡಜನ್ ಗಳಿಗೂ ಅಧಿಕ ಸಂಖ್ಯೆಯ ಮರಿಗಳಿಗೆ ಮೂರು ಬಾರಿ ಜನ್ಮ ನೀಡಿದ್ದೇನೆ ಮತ್ತು ಆ ಮರಿಗಳು ಈಗ ದೊಡ್ಡ ದೊಡ್ಡ ನಾಯಿಗಳಾಗಿ ಬೆಳೆದು ಬಿಟ್ಟಿವೆ. ಆದರೆ ನೀವಿನ್ನೂ ಗರ್ಭಿಣಿಯಾಗಿಯೇ ಇದ್ದೀರಿ. ಏನಾಗುತ್ತಿದೆ ಇಲ್ಲಿ? ಎಂದು ಕೇಳಿತು.

ele3ನಾಯಿಯ ಪ್ರಶ್ನೆಯಿಂದ ಒಂದು ಚೂರೂ ವಿಚಲಿತವಾಗದ ಆನೆ, ನಾನು ಹೊತ್ತಿರುವುದು ಆನೆ. ನಾಯಿಮರಿಗಳನ್ನಲ್ಲ. ಎಂದು ತಿಳಿಯಪಡಿಸುತ್ತೇನೆ. ಗಜಗರ್ಭದ ಪ್ರಸವ ಏನಿದ್ದರೂ ಸುಮಾರು ಎರಡು ವರ್ಷಗಳಾಗಿರುತ್ತವೆ ಮತ್ತು ಒಮ್ಮೆ ನಮ್ಮ ಮರಿ ನನ್ನ ಗರ್ಭದಿಂದ ಭೂಮಿಯ ಮೇಲೆ ಬೀಳುತ್ತಿದ್ದಂತೆಯೇ ಆ ಕ್ಷಣದಲ್ಲಿ ಅಲ್ಲಿ ಸಣ್ಣದಾಗಿ ಭೂಕಂಪನವಾಗುತ್ತದೆ. ಭೂದೇವಿಗೂ ಕೂಡಾ ನನ್ನ ಮರಿಯ ಆಗಮನದ ಅರಿವಾಗುತ್ತದೆ. ನನ್ನ ಮಗು ನೆಲಕ್ಕೆ ಬಡಿದಾಗ, ಭೂಮಿಯು ಅದನ್ನು ಅನುಭವಿಸುತ್ತದೆ. ಯಾವಾಗ ನನ್ನ ಮಗು ರಸ್ತೆ ದಾಟಲು ಆರಂಭಿಸುತ್ತದೆಯೋ, ಆಗ ಮಾನವರೂ ಸಹಾ ತಮ್ಮ ಕೆಲಸವನ್ನು ನಿಲ್ಲಿಸಿ ಪಕ್ಕಕ್ಕೆ ನಿಂತು ಮೆಚ್ಚುಗೆಯಿಂದ ನಾವು ಹೋಗುವುದನ್ನು ನೋಡುತ್ತಾರೆ. ಹಾಗಾಗಿ ನಾನು ಹೊತ್ತುಕೊಂಡಿರುವುದು ಇಡೀ ಜಗತ್ತನ್ನೇ ಗಮನವನ್ನು ಸೆಳೆಯುವ ಅದ್ಭುತವಾದ ಮತ್ತು ಆಷ್ಟೇ ಪ್ರಬಲವಾದ ಕಂದನನ್ನು ಎಂದು ಹೇಳಿ ನಾಯಿಯ ಬಾಯಿಯನ್ನು ಮುಚ್ಚಿಸಿತು.

ಇತರ ಅಲ್ಪ ಯಶಸ್ಸನ್ನೇ ಮಹಾ ಸಾಧನೆ ಎಂದುಕೊಂಡು ನಮ್ಮ ನಮ್ಮ ನಂಬಿಕೆಯನ್ನು ಕಳೆದುಕೊಳ್ಳಬಾರದು. ಅವರ ಕ್ಷಣಿಕ ಫಲಿತಾಂಶಗಳ ಬಗ್ಗೆ ಅಸೂಯೆ ಪಡಬಾರದು ಮತ್ತು ನಿರಾಶೆಯಾಗ ಬಾರದು.

ನನ್ನ ಸಮಯ ಬಂದೇ ಬರುತ್ತದೆ ಮತ್ತು ಆಗ ಇಡೀ ವಿಶ್ವವೇ ನಮ್ಮ ಕಡೆ ಗಮನ ಹರಿಸುತ್ತದೆ ಎಂಬುದನ್ನು ಸದಾಕಾಲಾವೂ ಮನಸ್ಸಿನಲ್ಲಿ ಇಟ್ಟು ಕೊಂಡು ಕಾರ್ಯನಿರತರಾಗಬೇಕು ಎಂಬುದು ಈ ಕಥೆಯ ಸಾರವಾಗಿದೆ

ಆನೆ ಅಂಬಾರಿ ಹೋಗ್ತಾ ಇದ್ರೇ ಜನ ಗೌರವದಿಂದ ನಿಂತು ಕೈ ಮುಗಿತಾರೆ. ಅದನ್ನು ನೋಡಿ ಬೊಗಳುವ ನಾಯಿಗಳಿಗೆ ಹಚ್ಚಾ ಎಂದು ಕಲ್ಲು ಒಗೀತಾರೆ. ಇದಕ್ಕೇ ಅಲ್ವೇ ಹೇಳೋದು ಗಜ ಗಾಂಭೀರ್ಯ ಎಂದು?

ಯಾಕೋ ಏನೂ? ಸ್ವಾರ್ಥಕ್ಕಾಗಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವರ್ಷದಲ್ಲಿ ಹತ್ತಾರು ದಿನಗಳ ಕಾಲ ಬಂದ್ ಕರೆ ನೀಡಿ ಅದನ್ನು ಬಲವಂತದಿಂದ ಜನರ ಮೇಲೇ ಹೇರಲು ಹೋಗುವವರ ಮಧ್ಯೆ , ದೇಶವಾಸಿಗಳ ಹಿತಕ್ಕಾಗಿ ಮತ್ತು ಅವರ ಆರೋಗ್ಯಕ್ಕಾಗಿ 14 ಗಂಟೆಗಳ ಕಾಲ ಜನತಾ ಕರ್ಫ್ಯೂಗೆ ಸಹಕರಿಸಲು ಸಾರ್ವಜನಿಕರನ್ನು ಕೇಳಿ ಕೊಂಡಲ್ಲಿ , ಜನರೇ ಸ್ವಪ್ರೇರಣೆಯಿಂದ ಕೇವಲ 14 ಗಂಟೆಗಳೇಕೆ 36 ಗಂಟೆ ಕಾಲ ಸಹಕರಿಸುತ್ತೇವೆ ಎಂದು ನಭೂತೋ ನಭವಿಷ್ಯತಿ ಮಾದರಿಯಲ್ಲಿ ಜನತಾ ಕರ್ಫ್ಫೂವನ್ನು ಅಭೂತ ಪೂರ್ವವಾಗಿ ಯಶಸ್ವಿಗೊಳಿಸಿದ ಸಮಯದಲ್ಲಿ ಎಂದೋ ಕೇಳಿದ ಆಥವಾ ಓದಿದ ಈ ಆನೆ ಮತ್ತು ನಾಯಿಯ ಕಥೆ ಈಗ ನೆನಪಿಗೆ ಬಂದಿತು.

ಈ ಕಥೆ ಓದಿದ ಮೇಲೆ ಆನೆ ಯಾರು ನಾಯಿ ಯಾರು? ಎಂಬುದನ್ನು ನಿಮ್ಮಗಳ ಅರಿವಿಗೇ ಬಿಟ್ಟಿದ್ದೇನೆ. ಅವರವರ ಭಾವಕ್ಕೆ ಅವರವರ ಭಕುತಿ.

Public_Ranga

ಏನಂತೀರೀ?