ಕನ್ನಡದ ರಕ್ಷಣೆಯನ್ನು ಗುತ್ತಿಗೆ ನೀಡಿದ್ದೇವೆಯೇ?

raj3

ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸಂಭ್ರಮದಿಂದ ನಾಡಹಬ್ಬದ ದಸರವನ್ನು ಆಚರಿಸಿದ ನಂತರ ಎಲ್ಲರ ಚಿತ್ತ ಮುಂದಿನ ತಿಂಗಳ ನವೆಂಬರ್-1 ನೇ ತಾರೀಖಿನತ್ತ ಎಂದರೂ ಅತಿಶಯೋಕ್ತಿಯೇನಲ್ಲ. ಸ್ವಾತ್ರಂತ್ರ್ಯಾ ನಂತರ 1956 ರ ನವೆಂಬರ್-1 ರಂದು, ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ಮಾಡಲಾಯಿತು. ಆನಂತರ 1973 ನವೆಂಬರ್-1 ರಂದು ಮೈಸೂರು ರಾಜ್ಯವನ್ನು ಕನ್ನಡಿಗರು ಇರುವ ಕರುನಾಡು ಅರ್ಥಾತ್ ಕರ್ನಾಟಕ ಎಂದು ಹೆಸರಿಸಿದ ಸಂಭ್ರಮವೇ ನಾವೆಲ್ಲರೂ ಆಚರಿಸುವ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ. ದುರಾದೃಷ್ಟವಶಾತ್ 6 ಕೋಟಿ ಇರುವ ಕನ್ನಡಿಗರು ಈ ರಾಜ್ಯೋತ್ಸವವನ್ನು ಸಂಭ್ರಮಿಸುತ್ತಾರೋ ಇಲ್ಲವೋ ಆದರೇ ಖನ್ನಡ ಓರಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುವುದಿಲ್ಲ. ಎಲ್ಲೆಲ್ಲಿ ನೋಡಿದರೂ ಕನ್ನಡ ಬಾವುಟಗಳ ಭರಾಟೆ, ಉತ್ಸವಗಳು, ಮನೋರಂಜನಾ ಕಾರ್ಯಕ್ರಮಗಳು, ಒಂದೇ ಎರಡೇ ಅಬ್ಬಬ್ಬಾ ಹೇಳಲಾಗದು. ಕಲಾವಿದರು, ವಾದ್ಯಗೋಷ್ಟಿ ತಂಡಗಳು ಮಿಕ್ಕೆಲ್ಲಾ ಭಾಷೆಗಳು ಗೊತ್ತೇ ಇಲ್ಲವೇನೋ ಎನ್ನುವಂತೆ ಕೇವಲ ಕನ್ನಡ ಭಾಷೆಯನ್ನೂ ಮಾತ್ರವೇ ಆಡುವುದು ಮತ್ತು ಹಾಡುವುದನ್ನು ಕೇಳಲು ಆನಂದ. ನವೆಂಬರ್ 1 ರಂದು ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ (ಉಳಿದ 364 ದಿನ ಪರಭಾಷೆಗಳ ಚಿತ್ರಕ್ಕೇ ಮೀಸಲು) ಕಡ್ಡಾಯವಾಗಿ ಕನ್ನಡ ಚಲನ ಚಿತ್ರಗಳನ್ನು ಪ್ರದರ್ಶಿಸುವುದು ನೋಡಲು ಮಹದಾನಂದ. ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳಿನಿಂದ ಮುಂದಿನ ವರ್ಷ ಅಕ್ಟೋಬರ್ 31 ರ ವರೆಗೆ ಕನ್ನಡದ ಬಗ್ಗೆ ಕುಂಭಕರ್ಣ ನಿದ್ದೆಯ ಧೋರಣೆ. ಇಂಗ್ಲೀಷ್, ಕಂಗ್ಲೀಷ್, ಇಲ್ಲವೇ ಅನ್ಯ ಭಾಷೆಗಳದ್ದೇ ಪ್ರಾಭಲ್ಯ.

raj4

ಇದಕ್ಕಿಂತಲೂ ದುರಾದೃಷ್ಟವೆಂದರೆ, ಅ ಕಾರಕ್ಖೂ ಹಕಾರದ ಉಚ್ಚಾರ ಬಿಡಿ ಸರಿಯಾಗಿ ಶುದ್ಧವಾಗಿ ನಾಲ್ಕು ವಾಕ್ಯಗಳನ್ನೂ ವ್ಯಾಕರಣಬದ್ಧವಾಗಿ ಮಾತನಾಡಲು ಮತ್ತು ಬರೆಯಲು ಬಾರದವರೆಲ್ಲ ಕನ್ನಡಪರ ಸಂಘಟನೆಗಳ ಹೆಸರಿನಲ್ಲಿ ಕನ್ನಡದ ರಕ್ಷಣೆಯ ಗುತ್ತಿಗೆ ಪಡೆದವರಂತೆ, ಕನ್ನಡ ಮತ್ತು ಕನ್ನಡಿಗರು ಇವರಿಂದಲೇ ಉದ್ದಾರವಾಗುತ್ತಿರುವಂತೆ ನಡೆಸುವ ಆರ್ಭಟವನ್ನು ನೋಡಲಾಗದು. ಕನ್ನಡಕ್ಕಾಗಿಯೇ ತಮ್ಮ ತನು ಮನ ಧನವನ್ನೆಲ್ಲಾ ಅರ್ಪಿಸಿದ, ಕನ್ನಡದ ಕುಲಪುರೋಹಿತರೆಂದೇ ಪ್ರಖ್ಯಾತರಾಗಿರುವ ಕನ್ನಡ ಏಕೀಕರಣಕ್ಕೇ ತಮ್ಮ ಇಡೀ ಮೀಸಲಾಗಿರಿಸಿದ್ದ ಆಲೂರು ವೆಂಕಟರಾಯರು, ಪ್ರಥಮ ರಾಷ್ಟ್ರಕವಿ ಪಂಜೆ ಮಂಗೇಶರಾಯರು, ಕಯ್ಯಾರ ಕೀಯಣ್ಣ ರೈ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ, ಅನಕೃ, ಮ ರಾಮಮೂರ್ತಿಗಳು ಇವೆರಲ್ಲರ ನಿಸ್ವಾರ್ಥ ಹೋರಾಟ ಬಿಡಿ ಅಂತಹ ಮಹನೀಯರುಗಳು ಯಾರೂ ಎಂದು ಗೊತ್ತಿಲ್ಲದ ಬಹುತೇಕರು ಕೊರಳಲ್ಲಿ ನಾಯಿ ಚೈನ್ ತರಹ ಚಿನ್ನದ ಸರ, ಕೈಗೆ ಬೇಡಿಯಂತಹ ಬ್ರೇಸ್ ಲೆಟ್ ಹಾಕಿಕೊಂಡು ಹೆಗಲ ಮೇಲೊಂದು ಕೆಂಪು ಮತ್ತು ಹಳದಿ ಶಲ್ಯವನ್ನು ಹಾಕಿಕೊಂಡ ಪ್ಲೆಕ್ಸ್ ತಮ್ಮ ಬಡಾವಣೆಯಲ್ಲಿ ಹಾಕಿಸಿ ಬಿಟ್ಟಲ್ಲಿ ಅವರನ್ನೇ ಕನ್ನಡಪರ ಹೋರಾಟಗಾರೆಂದೇ ನಂಬಬೇಕಾದ ದೈನೇಸಿ ಪರಿಸ್ಥಿತಿಗೆ ಕನ್ನಡಿಗರು ತಲುಪಿರುವುದು ನಿಜಕ್ಕೂ ದುರ್ದೈವವೇ ಸರಿ.

ನಿಜ ಹೇಳಬೇಕೆಂದರೆ ಈ ಬಹುತೇಕ ಹೋರಾಟಗಾರರು ಬೆಂಗಳೂರಿನ ಸುತ್ತ ಮುತ್ತಲಿಂದ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಮೈ ಬಗ್ಗಿಸಿ ಕೆಲಸ ಮಾಡಲಾಗದೇ ಕನ್ನಡ ಹೋರಾಟದ ಹೆಸರಿನಲ್ಲಿ ಹಣ ಮಾಡಿಕೊಂಡು ಐಶಾರಾಮ್ಯದ ಜೀವನ ನಡೆಸುತ್ತಿರುವುದು ಸುಳ್ಳಲ್ಲ.

 • ಮಾತೆತ್ತಿದರೆ ಹೋರಾಟ, ಬಂದ್ ಆ ಲೆಖ್ಖ ಕೊಡಿ ಈ ಲೆಖ್ಖ ಕೊಡಿ ಎಂಬು ಬೊಬ್ಬಿರಿಯುವ ಈ ನಾಯಕರುಗಳು ಎಂದಾದರೂ ತಮ್ಮ ಆಸ್ತಿಯ ವಿವರಗಳನ್ನು ಸಾರ್ವಜನಿಕರ ಮುಂದೆ ಇಟ್ಟಿರುವುದನ್ನು ನೋಡಿದ್ದೇವೆಯೇ?
 • ಕನ್ನಡ ಹೆಸರಿನಲ್ಲಿ ಸಂಘವೊಂದನ್ನು ನೊಂದಾಯಿಸಿ ಅದಕ್ಕೊಂದು ಲೆಟರ್ ಹೆಡ್ ಮಾಡಿಸಿ ಕಾಲ ಕಾಲಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡಾಭಿವೃದ್ಧಿ ಪ್ರಾಧಿಕಾರದಲ್ಲಿ ಸರ್ಕಾರಿ ಹಣವನ್ನು ಕಬಳಿಸಿಸುವ ಲೆಖ್ಖವನ್ನು ಏನಾದರೂ ಕೊಟ್ಟಿದ್ದಾರಾ?
 • ಕನ್ನಡಪರ ಹೋರಾಟಕ್ಕೂ ರಾಜಕೀಯ ಪಕ್ಷಗಳು ಕರೆಗೊಡುವ ಬಂದ್ ಎತ್ತಲಿಂದೆತ್ತ ಸಂಬಂಧ? ಯಾರೋ ರಾಜಕೀಯ ನಾಯಕರು ಎಲ್ಲೋ ಕರೆ ನೀಡಿದ್ದಕ್ಕೆ ಕುರಿ, ಕೋಳಿ, ಹಂದಿ, ಎಮ್ಮೆ, ಮೇಕೆಯನ್ನು ರೈಲ್ವೇ ನಿಲ್ದಾಣದ ಮುಂದೆಯೋ ಇಲ್ಲವೇ ವಿಧಾನಸೌಧದ ಮುಂದೆ ಹಿಡಿದುಕೊಂಡು ವರ್ಷಕ್ಕೆ ಹೆಚ್ಚೂ ಕಡಿಮೆ ನಾಲ್ಕೈದು ಬಂದ್ ಮಾಡಿಸುವುದರಿಂದ ಕನ್ನಡ ಮತ್ತು ಕನ್ನಡಿಗರಿಗೆ ಏನು ಪ್ರಯೋಜನ?
 • ಸುಮ್ಮನೆ ನೊಂದಾಯಿತ ಕನ್ನಡಪರ ಸಂಘಟನೆಗಳ ಪಟ್ಟಿಯನು ಸಂಪೂರ್ಣವಾಗಿ ಓದಬೇಕಾದರೆ ಕನಿಷ್ಟ ಪಕ್ಷ ಎರಡು ಮೂರು ದಿನಗಳು ಬೇಕಾದೀತು. ಗಲ್ಲಿ ಗಲ್ಲಿಗೆ ಈ ಪರಿಯಾಗಿ ಕನ್ನಡ ಸಂಘಟನೆಗಳು ಇದ್ದರೂ ಕರ್ನಾಟಕದಲ್ಲೇ ಕನ್ನಡಿಗರು ಅಲ್ಪಸಂಖ್ಯಾತರಾಗಿರಬೇಕಾದ ಪರಿಸ್ಥಿತಿಗೆ ಈ ಕನ್ನಡ ಪರ ಸಂಘಟನೆಗಳ ನಿಲುವೇನು?
 • ಕನ್ನಡ ಕನ್ನಡ ಎಂದು ಬೊಬ್ಬಿರಿಯುವ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನೇಡತರ ಶಾಸಕರ ಸಂಖ್ಯೆಯೇ ಹೆಚ್ಚಾಗಿರುವುದು ಈ ಕನ್ನಡಪರ ಸಂಘಟನೆಗಳ ಕಣ್ಣಿಗೆ ಕಾಣುವುದಿಲ್ಲವೇ?
 • ನಮ್ಮ ರಾಜ್ಯದ ಗಡಿ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಯ ಹಲವಾರು ಕಡೆ, ಬೆಳಗಾಂ, ಬಳ್ಳಾರಿ, ರಾಯಚೂರು, ಅಷ್ಟೇಕೆ ನಮ್ಮ ಬೆಂಗಳೂರಿನಲ್ಲೂ ಕನ್ನಡ ಶಾಲೆಗಳು ಅಲ್ಲೋಂದು ಇಲ್ಲೋಂದು ಆಳಿದುಳಿದ ಪಳುವಳಿಕೆಯಂತೆ ಉಳಿದುಕೊಂಡಿರುವಾಗ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದ ಎಷ್ಟು ಶಾಲೆಗಳು ಇವೆ? ನಮ್ಮ ಮುಂದಿನ ಪೀಳಿಗೆಯ ಎಷ್ಟು ಮಕ್ಕಳು ಕನ್ನಡವನ್ನು ಕಲಿಯುತ್ತಿದ್ದಾರೆ? ಎಂಬುದರ ಲೆಖ್ಖವೇನಾದರು ಈ ಸಂಘಟನೆಗಳಿಗೆ ಅರಿವಿದೆಯೇ?
 • ಖನ್ನಡಾ, ಖನ್ನಡಾ ಎಂದು ಬಸ್ಸು, ರೈಲು ಮೆಟ್ರೋಗಳ ನಿಲ್ಡಾಣಗಳಲ್ಲಿ ಹೋರಾಡುವ ನಡೆಸಿ ಬಲವಂತದ ಮಾಘಸ್ನಾನ ಮಾಡಿಸುವ ಬದಲು ಈ ಸಂಘಟನೆಗಳಿಂದ ಅನ್ಯಭಾಷಿಕರಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸೊಗಡನ್ನು ಕಲಿಸುವಂತಹ ಯಾವುದಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಉದಾಹರಣೆಗಳನ್ನು ನೀಡಬಲ್ಲರೇ?

ಕನ್ನಡ ಪರ ಹೋರಾಟ ಏನು ಎಂಬುದನ್ನು ಇಂದಿನ ಹೋರಾಟಗಾರರು ಖಂಡಿತವಾಗಿಯೂ ಆಲೂರು ವೆಂಕಟರಾಯರು, ಗಳಗನಾಥರು, ಅನಕೃ, ಮ. ರಾಮಮೂರ್ತಿಗಳಂತಹ ಮಹನೀಯರಿಂದ ಕಲಿತುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಾವಶ್ಯಕವಾಗಿದೆ.

raj6

ನಮ್ಮ ಕನ್ನಡ ಭಾಷೆಯ ಅಳಿವು ಉಳಿವು ಮತ್ತು ರಕ್ಷಣೆಯನ್ನು ನಾವಯ ಯಾವುದೇ ಸಂಘಟನೆಗಳಿಗೆ ಗುತ್ತಿಗೆ ನೀಡಿಲ್ಲ.‌ಅದು ಇನ್ನೂ ನಮ್ಮ ಕೈಯ್ಯಲ್ಲಿಯೇ ಇದೆ ಎನ್ನುವುದನ್ನು ಕನ್ನಡಿಗರಾದ ನಾವುಗಳು‌ ಮೊದಲು ಅರಿಯಬೇಕಾಗಿದೆ. ಕನ್ನಡದ ಅಸ್ತಿತ್ವ ಅಸ್ಮಿತೆಗಳನ್ನು ಉಳಿಸುವ ಸಲುವಾಗಿ ನಮ್ಮ ಮನ ಮನೆಗಳಲ್ಲಿ ಇಂತಹ ಪ್ರಯತ್ನ ಮಾಡಬಹುದೇ?

 • ಮನೆಯೇ ಮೊದಲ ಪಾಠಶಾಲೆ ಹಾಗಾಗಿ ನಮ್ಮ ಮನೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸ ಬಹುದೇ?
 • ನಮ್ಮ ಮಕ್ಕಳಿಗೆ ಅಚ್ಚ ಕನ್ನಡದ ಹೆಸರಿಡಬಹುದೇ?
 • ನಮ್ಮ ಮಕ್ಕಳಿಗೆ ಮಮ್ಮಿ ಡ್ಯಾಡಿ, ಆಂಟಿ, ಅಂಕಲ್ ಅಂಥಾ ಹೇಳಿ ಕೊಡುವ ಬದಲು ಅಚ್ಚ ಕನ್ನಡದಲ್ಲಿ ಅಮ್ಮಾ, ಅಪ್ಪಾ, ಚಿಕ್ಕಪ್ಪಾ, ಚಿಕ್ಕಮ್ಮಾ, ಅತ್ತೆ-ಮಾವ, ಅಜ್ಜಿ-ಅಜ್ಜ ತಾತ-ಅಜ್ಜಿ ಎಂಬಂತಹ ಸಂಬಂಧ ಬೆಸೆಯುವ ಪದಗಳನ್ನೇ ಉಪಯೋಗಿಸಬಹುದೇ?
 • ಶಾಲೆಯಲ್ಲಿ ಯಾವುದೇ ಭಾಷೆಯ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದರೂ ನಮ್ಮ ಮಕ್ಕಳಿಗೆ ಮನೆಯಲ್ಲಿ ನಾವೇ ಸ್ಪುಟವಾಗಿ ಕನ್ನಡ ಓದಲು ಬರೆಯಲು ಕಲಿಸಲು ಪ್ರಯತ್ನಿಸ ಬಹುದೇ?
 • ಪ್ರತಿದಿನ ಇತರೇ ವೃತಪತ್ರಿಕೆಗಳೊಂದಿಗೆ ಕನ್ನಡ ಪತ್ರಿಕೆ ಮತ್ತು ವಾರಪತ್ರಿಕೆಗಳನ್ನು ತರಿಸಿ ನಮ್ಮ ಮಕ್ಕಳಿಗೆ ಓದಲು ಅನುವು ಮಾಡಿ ಕೊಡಬಹುದೇ?
 • ಕನ್ನಡ ಹಲವಾರು ಖ್ಯಾತ ಲೇಖಕರ ಪುಸ್ತಕಗಳನ್ನೇ ಖರೀದಿಸಿ ಎಲ್ಲಾ ಸಭೇ ಸಮಾರಂಭಗಳಲ್ಲಿ ಉಡುಗೊರೆಯಾಗಿ ಕೊಡುವ ಸತ್ಸಂಪ್ರದಾಯ ಬೆಳಸಿ ಕೊಳ್ಳಬಹುದೇ?
 • ಆದಷ್ಟೂ ಕನ್ನಡ ಚಲನಚಿತ್ರಗಳು ಮತ್ತು ಕನ್ನಡ ಛಾನಲ್ಗಳನ್ನೇ ನೋಡುವ ಅಭ್ಯಾಸ ಬೆಳೆಸಿ ಕೊಳ್ಳಬಹುದೇ?
 • ಹೋಟೆಲ್ಗಳಲ್ಲಿ ರೈಸ್, ಸಾಂಬರ್, ಪಿಕ್ಕಲ್ ಬದಲಾಗಿ ಅನ್ನ, ಹುಳಿ, ಉಪ್ಪಿನ ಕಾಯಿ, ಅಂಗಡಿಗಳಲ್ಲಿ ರೈಸ್, ದಾಲ್, ಆಯಿಲ್ ಬದಲಾಗಿ ಅಕ್ಕಿ, ಬೇಳೆ, ಎಣ್ಣೆ, ತರಕಾರಿ ಅಂಗಡಿಗಳಲ್ಲಿ, ಬೀನ್ಸ್, ಕ್ಯಾಪ್ಸಿಕಾಂ, ಚಿಲ್ಲಿ ಬದಲಾಗಿ ಹುರಳಿಕಾಯಿ, ದೊಣ್ಣೆಮೆಣಸಿಕಾಯಿ, ಮೆಣಸಿನಕಾಯಿ ಹಣ್ಣಿನ ಅಂಗಡಿಗಳಲ್ಲಿ ಆಪೆಲ್, ಆರೆಂಜ್, ಬನಾನ ಬದಲಾಗಿ, ಸೇಬು, ಕಿತ್ತಳೆ, ಬಾಳೇಹಣ್ಣುಗಳನ್ನು ಕೊಡಿ ಎಂದು ಕೇಳ ಬಹುದೇ?
 • ನೆರೆಹೊರೆಯವರ ಜೊತೆ ಮತ್ತು ಕಛೇರಿಗಳಲ್ಲಿ ಕನ್ನಡ ಗೊತ್ತಿರುವವರ ಬಳಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ಮಾತನಾಡ ಬಹುದೇ?
 • ಗಣೇಶೋತ್ಸವ, ಅಣ್ಣಮ್ಮ, ಊರ ಹಬ್ಬ, ನಾಡ ಹಬ್ಬಗಳ ರಾಜ್ಯೋತ್ಸವದ ಸಮಯದಲ್ಲಿ ಕನ್ನಡ ಕಲಾವಿದರಿಗೇ ಆದ್ಯತೆ ಕೊಟ್ಟು, ನಾಟಕ, ನೃತ್ಯ, ಸಂಗೀತ ವಾದ್ಯಗೋಷ್ಠಿಗಳು ಕನ್ನಡ ಭಾಷೆಯದ್ದೇ ಆಗಿರುವಂತೆ ನೋಡಿ ಕೊಳ್ಳಬಹುದೇ?
 • ನಮ್ಮ ಮನೆಯ ಮುಂದಿನ ಫಲಕ, ನಮ್ಮ ಅಂಗಡಿ, ಮುಗ್ಗಟ್ಟಿನ ಫಲಕಗಳು ಮತ್ತು ನಮ್ಮ ರಸ್ತೆಯ ನಾಮಫಲಕಗಳನ್ನು ಕನ್ನಡದಲ್ಲಿಯೇ ಬರೆಸುವಂತಾಗ ಬಹುದೇ?

raj5

ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ನಾವೇ ಸಾರಿ ಸಾರಿ ಎಲ್ಲರಿಗೂ ಒತ್ತಿ ಒತ್ತಿ ಹೇಳಬೇಕಾದಂತಹ ಕೆಟ್ಟ ಪರಿಸ್ಥಿತಿ ಬಂದೊದಗಿಬಿಟ್ಟಿರುವುದು ನಿಜಕ್ಕೂ ಶೋಚನೀಯವಾಗಿದೆ. ಇದಕ್ಕೆ ಬೇರೇ ಭಾಷೆಯವರ ದಬ್ಬಾಳಿಕೆ ಎನ್ನುವುದಕ್ಕಿಂತಲೂ ನಮ್ಮಲ್ಲಿಲ್ಲದ ಭಾಷಾಭಿಮಾನವೇ ಕಾರಣ ಎಂದರು ತಪ್ಪಾಗದು. ನಮ್ಮೆಲ್ಲರ ಕನ್ನಡ ಭಾಷಾಭಿಮಾನ ಕೇವಲ ಕನ್ನಡರಾಜ್ಯೋತ್ಸವದ ಸಂಧರ್ಭವಾದ ನವೆಂಬರ್ 1-30 ಅಥವಾ ಇನ್ನೂ ಒಂದೆರಡು ಹೆಚ್ಚಿನ ವಾರಗಳಿಗೆ ಮಾತ್ರವೇ ಸೀಮಿತಗೊಂಡು ಮಿಕ್ಕೆಲ್ಲಾ ದಿನಗಳು ಕುಂಬಕರ್ಣನಂತೆ ನಿದ್ರೆ ಹೋಗುವುದರಿಂದಲೇ ಕನ್ನಡದ ಹೆಸರಿನಲ್ಲಿ ತಮ್ಮ ಹೊಟ್ಟೆಹೊರೆದುಕೊಳ್ಳುವವರಿಗೆ ಸುಗ್ರಾಸ ಭೋಜನವನ್ನು ಒದಗಿಸುತ್ತಿದೇವೆ.

raj1

ನಿಜಕ್ಕೂ ಬೇಸರ ತರಿಸುವ ಸಂಗತಿಯೇನೆಂದರೆ, ಒಂದೆರಡು ಸಂಘಟನೆಗಳ ಹೊರತಾಗಿ ಬಹುತೇಕ ಕನ್ನಡಪರ ಸಂಘಗಳ ಹುಟ್ಟು ಆಯಾಯಾ ನಾಯಕರ ಹೊಟ್ಟೇ ಪಾಡಿಗಾಗಿಯೇ ಆಗಿರುತ್ತದೆ. ಈ ನಾಯಕರು ತಮ್ಮ ಅಸ್ಥಿತ್ವಕ್ಕಾಗಿ ಮತ್ತು ಅಗ್ಗದ ದಿಢೀರ್ ಪ್ರಚಾರಕ್ಕಾಗಿ ಕನ್ನಡದ ಹೆಸರಿನಲ್ಲಿ ಆಗ್ಗಿಂದ್ದಾಗ್ಗೆ ಮುಷ್ಕರಗಳನ್ನು ಮಾಡಿಸುತ್ತಾ, ಅನ್ಯಭಾಷಿಕರನ್ನು ಹೆದರಿಸಿ ಬೆದರಿಸುತ್ತಾ ರೋಲ್ ಕಾಲ್ ಮಾಡಿಕೊಳ್ಳುವುದೋ ಇಲ್ಲವೇ ಯಾವುದಾದರೂ ಸಂಧಾನ (settlement) ಮಾಡಿಸುವ ಮೂಲಕ ಹಣ ಮಾಡುವುದಕಷ್ಟೇ ಸೀಮಿತವಾಗಿದೆಯೇ ಹೊರತು ಇಂತಹ ಸಂಘಟನೆಗಳಿಂದ ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಒಂದು ನಯಾಪೈಸೆಯೂ ಲಾಭವಿಲ್ಲ ಎನ್ನುವುದು ಜಗಜ್ಜಾಹೀರಾತಾಗಿದೆ.

raj2

ಒಬ್ಬ ಸ್ವಾಭಿಮಾನಿ ಕನ್ನಡಿಗನಾಗಿ ಕನ್ನಡದ ಬಗ್ಗೆಯ ಕಳಕಳಿಯಿಂದಾಗಿ ನಿಮ್ಮೆಲ್ಲರ ಬಳಿ ಬಿಚ್ಚುಮನಸ್ಸಿನಿಂದ ತೋಡಿಕೊಂಡಿದ್ದೇನೆಯೇ ಹೊರತು ವಯಕ್ತಿಕವಾಗಿ ನನಗೆ ಯಾವುದೇ ಕನ್ನಡಪರ ಸಂಘಟನೆಗಳ ಸಂಪರ್ಕವೂ ಇಲ್ಲ ಮತ್ತು ಅವರ ವಿರುದ್ಧ ದ್ವೇಷವೂ ಇಲ್ಲ. ಕನ್ನಡ ಉಳಿಸುವಿಕೆಗೆ ನಾವುಗಳು ಸುಲಭವಾಗಿ ಹೇಗೆಲ್ಲಾ ತೊಡಗಿಕೊಳ್ಳಬಹುದೆಂದು ನನಗೆ ತೋಚಿದಂತೆ ವಿವರಿಸಿದ್ದೇನೆ. ನಾನು ತಿಳಿಸಿದ್ದಕ್ಕಿಂತಲೂ ಇನ್ನೂ ಅನೇಕ ರೀತಿಯಿಂದ, ನಿಮ್ಮ ನಿಮ್ಮಗಳ ಅಭಿಲಾಶೆಗಳಿಗೆ ಮತ್ತು ಆಸ್ಥೆಗೆ ತಕ್ಕಂತೆ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಾಮರ್ಥ ನಿಮ್ಮೆಲ್ಲರ ಬಳಿ ಇದ್ದೇ ಇದೆ. ಆದರೆ ಅದಕ್ಕೆ ಮನಸ್ಸು ಮಾಡಬೇಕಷ್ಟೇ.

ಒಗ್ಗಟ್ಟಿನಲ್ಲಿ ಬಲವಿದೆ, ಮನಸ್ಸಿದ್ದಲ್ಲಿ ಮಾರ್ಗವಿದೆ. ನವೆಂಬರ್ ಕನ್ನಡಿಗರಾಗುವುದಕ್ಕಿಂತಲೂ ವರ್ಷ ಪೂರ್ತಿ ಕನ್ನಡಿರಾಗುವ ಮೂಲಕವೇ ಕನ್ನಡವನ್ನು ಉಳಿಸಿ ಬೆಳಸಲು ಸಾಧ್ಯವಿದೆ.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಇಲ್ಲಿ‌ ಕನ್ನಡವೇ ನಿತ್ಯ. ಕನ್ನಡವೇ ಸತ್ಯ.

ಸಿರಿಗನ್ನಡಂ ಗೆಲ್ಗೆ. ಸವಿಗನ್ನಡಂ ಬಾಳ್ಗೆ

ಏನಂತೀರೀ?

ನಿಮ್ಮವನೇ ಉಮಾಸುತ

ರಂಗಕರ್ಮಿ ಆರ್. ಎಸ್. ರಾಜಾರಾಂ

raj2

ಅರೇ ಈ ರಾಜಾರಾಂ ಅಂದ್ರೇ ಯಾರು ಅಂತಾ ಗೊತ್ತಗ್ಲಿಲ್ವಾ? ಅದೇ ರೀ, ರಮೇಶ್ ಭಟ್ ಮತ್ತು ಕ್ರೇಜೀ ಕರ್ನಲ್ ಸೀರಿಯಲ್ಲಿನಲ್ಲಿ ರಮೇಶ್ ಭಟ್ ಜೊತೆ ಇರ್ತಾ ಇದ್ರಲ್ಲಾ ಗೊತ್ತಾಯ್ತಾ? ಅರೇ ಇನ್ನೂ ಗೊತ್ತಾಗ್ಲಿಲ್ವಾ ಅದೇ ರೀ ಗಾಳಿಪಟದ ಸಿನಿಮಾದಲ್ಲಿ ನಮ್ಮ ದೂದ್ ಪೇಡ ದಿಗಂತ್ ಆವರ ತಾತನ ಪಾತ್ರದಲ್ಲಿ ಅನಂತ್ ನಾಗ್ ಹಂದಿ ಹೊಡೆಯಲು ಪ್ರಚೋದಿಸಿದ್ರಲ್ಲಾ ಅವರೇ ಅಂದಕ್ಷಣಾ ಓ.. ಅವ್ರಾ.. ಆ ಬಿಳೀ ತಾತ ಗೊತ್ತು ಬಿಡಿ ಬಹಳ ಚೆನ್ನಾಗಿ ಅಭಿನಯಿಸ್ತಾರೆ. ಸಂಜೆ ಹೊತ್ತು ಮಲ್ಲೇಶ್ವರದ 15-18 ನೇ ಕ್ರಾಸಿನ ಕಡೆ ವಾಕಿಂಗ್ ಮಾಡ್ತಾ ಇರ್ತಾರೆ. ಅವರದ್ದು ಮತ್ತು ಭಾರ್ಗವೀ ನಾರಾಯಣ್ ಅವರ ಜೋಡಿ ಬಹಳಾನೇ ಪ್ರಸಿದ್ಧ ಅಲ್ವೇ? ಅಂತ ಆವ್ರೇ ಹೇಳುವಷ್ಶು ಪ್ರಖ್ಯಾತರು.

ನೋಡಿದಾಕ್ಷಣ ಅರೇ ಇವರು ಯಾರೋ ನಮ್ಮ ತಾತನ ತರಹಾನೇ ಇದ್ದಾರಲ್ಲಾ! ಎನ್ನುವಷ್ಟು ಅಪ್ಯಾಯಮಾನತೆ,‌ ಇಳೀ ವಯಸ್ಸಿನಲ್ಲಿಯೂ ತುಂಟತನ ತೋರುವ ತಾತ, ಹೀಗೆ ತಮ್ಮ ಸಹಜ ಅಭಿನಯದ‌ ಮೂಲಕ ರಂಗಭೂಮಿ, ಹಿರಿತೆರೆ, ಕಿರಿತೆರೆಯಲ್ಲಿ ಸುಮಾರು ಆರು ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ ರಂಗಕರ್ಮಿ ರಾಜಾರಾಂ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ.

rajam3

ಆರ್. ಎಸ್. ರಾಜಾರಾಂ ಅವರು ಮೂಲತಃ ಅಪ್ಪಟ ಬೆಂಗಳೂರಿನ ಮಲ್ಲೇಶ್ವರದವರು. ಅವರ ತಂದೆ ಶ್ರೀ ಜಿ.ಎಸ್‌. ರಘುನಾಥರಾವ್‌ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೆಲಸ ನಿಮಿತ್ತ ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ಗೆ ವರ್ಗವಣೆಯಾಗಿದ್ದಾಗ 1938ರ ಜುಲೈ 10ರಂದು ಶಾರದಾಬಾಯಿಯವರ ಗರ್ಭದಲ್ಲಿ ಜನಿಸಿದ ಕೆಲವೇ ತಿಂಗಳಲ್ಲಿ ಮತ್ತೆ ಮಲ್ಲೇಶ್ವರದ ಮನೆಗೆ ಹಿಂದಿರುಗುತ್ತಾರೆ ಮಲ್ಲೇಶ್ವರದ ಸರ್ಕರಿ ಶಾಲೆಯಲ್ಲಿಯೇ ತಮ್ಮ ಹತ್ತನೇ ತರಗತಿಯವರೆಗೂ ವಿದ್ಯಾಭ್ಯಾಸವನ್ನು ಮುಗಿಸಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪಿ.ಯೂ.ಸಿಯನ್ನು ಮುಗಿಸುವ ಜೊತೆ ಜೊತೆಯಲ್ಲಿಯೇ ಗೆಳೆಯರೊಡನೆ ಮನೆಯ ಹತ್ತಿರವೇ ಇದ್ದ ಟೈಪಿಂಗ್ ಇನಿಸ್ತಿಟ್ಯೂಟ್ ಒಂದಕ್ಕೆ ಸೇರಿ ತಮ್ಮ ಜ್ಯೂನಿಯರ್ ಮತ್ತು ಸೀನಿಯರ್ ಪರೀಕ್ಷೆ ಮುಗಿಸಿಕೊಳ್ಳುತ್ತಾರೆ. ನಂತರ ತಮ್ಮ ಪದವಿಗಾಗಿ ನರಸಿಂಹರಾಜಾ ಕಾಲೋನಿಯಲ್ಲಿರುವ ಆಚಾರ್ಯ ಪಾಠಶಾಲೆಯಲ್ಲಿ ಬಿ.ಎ ಪದವಿಗೆ ಸೇರಿದ ಸಮಯದಲ್ಲಿಯೇ ಯು.ಪಿ.ಎಸ್.ಸಿ ಮುಖೇನ ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧದಲ್ಲಿ ಬೆರಳಚ್ಚುಗಾರರಾಗಿ ಉದ್ಯೋಗಕ್ಕೆ ಸೇರಿ 37 ವರ್ಷಗಳ ಸುದೀರ್ಘವಾದ ಸೇವೆ ಸಲ್ಲಿಸಿ ಹಂತ ಹಂತವಾಗಿ ಭಢ್ತಿಯನ್ನು ಪಡೆದು ಕಡೆಗೆ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ ಹೊಂದಿದರು.

ಶಾಲಾ ದಿನಗಳಿಂದಲೇ ನಾಟಕ, ಏಕಪಾತ್ರಾಭಿನಯ, ವೇಷಭೂಷಣ ಸ್ಪರ್ಧೆಗಳಲ್ಲಿ ಭಾಗವಹಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಕಾರಣ ಸಹಜವಾಗಿ ಚಿಕ್ಕವಯಸ್ಸಿನಲ್ಲಿಯೇ ರಂಗಭೂಮಿಯತ್ತ ಆಕರ್ಷಿತರಾಗಿ ತಮ್ಮ ಮನೆಯ ಅಕ್ಕ ಪಕ್ಕದಲ್ಲೇ ಇದ್ದ ಸ್ನೇಹಿತರೊಂದಿಗೆ ರಸಿಕ ರಂಜನಿ ಕಲಾವಿದರು ಎಂಬ ತಂಡವನ್ನು ಸ್ಥಾಪಿಸಿಕೊಂಡು ಅಂದಿನ ಕಾಲದ ಪ್ರಸಿದ್ಧ ನಾಟಕಕಾರಾದ ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್‌, ಕೆ. ಗುಂಡಣ್ಣ ಮುಂತಾದವರ ನಾಟಕಗಳನ್ನು ಮಾಡುತ್ತಾರೆ. ತಮ್ಮ ಮನೆಗಳಿಂದ ತಂದಿದ್ದ ಪಂಚೆಗಳನ್ನೇ ಪರದಯನ್ನಾಗಿಸಿಕೊಂಡು ಹತ್ತು ಪೈಸಾ, ನಾಲ್ಕಾಣೆ ಎಂಟಾಣೆಯ ಪ್ರವೇಶ ದರದ ಟಿಕೆಟ್ ನೊಂದಿಗೆ ತಮ್ಮ ನಾಟಕಗಳನ್ನು ಅಲ್ಲಿಯೇ ಇದ್ದ ಸೇವಾ ಸದನದಲ್ಲಿ ಪ್ರದರ್ಶನ ಮಾಡುತ್ತಿರುತ್ತಾರೆ.

ಬಿಎ ಪದವಿ ಕಲಿಯಲೆಂದು ಸೇರಿದ್ದ ಆಚಾರ್ಯ ಪಾಠಶಾಲೆ ಅವರಲ್ಲಿದ್ದ ಕಲಾವಿದನಿಗೆ ಅತ್ಯತ್ತಮ ವೇದಿಕೆಯಾಗುವುದಲ್ಲದೇ ಅಲ್ಲಿಯೇ ಅವರಿಗೆ ಅನೇಕ ಹವ್ಯಾಸೀ ನಾಟಕ ತಂಡಗಳ ಪರಿಚಯವಾಗುತ್ತದೆ. ಬೆಳ್ಳಂ ಬೆಳಿಗ್ಗೆ ಚುಮು ಚುಮು ಚಳಿಯಲ್ಲಿ 6 ಗಂಟೆಗೆ ಮಲ್ಲೇಶ್ವರಂ ನಿಂದ ಸೈಕಲ್ಲಿನಲ್ಲಿ ಕಾಲೇಜಿಗೆ ಹೋಗಿ ಬೆಳಗಿನ ತರಗತಿಗಳನ್ನು ಮುಗಿಸಿಕೊಂಡು 10:30ಕ್ಕೆ ಅಲ್ಲಿಂದ ಹೊರಟು 11:00 ಕ್ಕೆ ಸರಿಯಾಗಿ ವಿಧಾನ ಸೌಧದಲ್ಲಿ ಕೆಲಸಕ್ಕೆ ಹಾಜರಾಗಿ ಸಂಜೆ 5:30ಕ್ಕೆ ಮೆಜೆಸ್ಟಿಕ್ ಭಾಗದಲ್ಲಿ ನಡೆಯುತ್ತಿದ್ದ ನಾಟಕಗಳ ತಾಲೀಮು ಮುಗಿಸಿಕೊಂಡು ಮತ್ತೆ ಮನೆಗೆ ಸೇರುವಷ್ಟರಲ್ಲಿ ಗಂಟೆ ಹತ್ತು ಇಲ್ಲವೇ ಹನ್ನೊಂದಾಗುತ್ತಿತ್ತು. ಅದೆಷ್ಟೋ ಬಾರಿ ಕೋಪಗೊಂಡ ಅವರ ತಂದೆ ಮನೆಯ ಮುಂದಿನ ಬಾಗಿಲನ್ನು ಹಾಕಿಕೊಂಡಾಗ, ಅವರ ಪ್ರೀತಿಯ ಅಜ್ಜಿ ಹಿತ್ತಲಿನ ಬಾಗಿಲಿನಿಂದ ಮೊಮ್ಮಗನನ್ನು ಮನೆಯೊಳಗೆ ಕರೆದುಕೊಂಡು ಅಷ್ಟು ತಡರಾತ್ರಿಯಲ್ಲಿಯೂ ಅನ್ನ ಕಲಸಿ ಹಾಕುವ ಮೂಲಕ ರಾಜಾರಾಂ ಅವರ ಕಲೆಗೆ ಪ್ರೋತ್ಸಾಹ ಕೊಟ್ಟಿದ್ದರು.

ನೋಡ ನೋಡುತ್ತಿದ್ದಂತೆಯೇ ರಾಜಾರಾಂ ಅವರು ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಹರಿಕಥಾ ವಿದ್ವಾಂಸರಾಗಿದ ಶ್ರೀ ಗುರುರಾಜಲು ನಾಯ್ಡು ರವರ ಜೈ ಭಾರತ್ ನಾಟಕ ಮಂಡಳಿಯೊಂದಿಗೆ ಸಂಪರ್ಕ ಪಡೆಯುವ ಮೂಲಕ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದವು ಇವರ ಕೆಲವು ಪ್ರಸಿದ್ಧ ನಾಟಕಗಳಾಗಿದ್ದವು.

ರಾಜಾರಾಂ 1964ರಲ್ಲಿ ತಮ್ಮ ಸಚಿವಾಲಯ ಉದ್ಯೋಗಿಗಳೊಡನೆ ಸೇರಿಕೊಂಡು ಸಚಿವಾಲಯ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿಕೊಂಡು ಅದರ ಮೂಲಕ ದೇಶಾದ್ಯಂತ ಅನೇಕ ನಾಟಕ ಸ್ಪರ್ಥೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪುಸ್ಕಾರಗಳಿಗೆ ಭಾಗಿಯಾದರೂ, ಇಲ್ಲಿ ಹೆಚ್ಚಿನ ನಾಟಕದ ಚಟುವಟಿಕೆಗಳು ನಡೆಯುತ್ತಿರಲಿಲ್ಲವಾದ್ದರಿಂದ, ವಿಧಾನ ಸೌಧದಲ್ಲೇ ಇದ್ದ ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅತಿಥಿ ಕಲಾವಿದರಾಗಿ ಪಾಲ್ಗೊಂಡು ಸರ್ವೇಜನಾಃ ಸುಖಿನೊ ಭವಂತು ಎಂಬ ನಾಟಕವಲ್ಲದೇ ಕುಟುಂಬ‌ ಕಲ್ಯಾಣ ಯೋಜನೆಯ ಅನೇಕ ನಾಟಕಗಳಲ್ಲಿ ಅಭಿನಯಿಸುತ್ತಾರೆ. ಇದೇ ಸಮಯದಲ್ಲಿಯೇ ಅಲ್ಲಿಗೆ ಅತಿಥಿ ಕಲಾವಿದರಾಗಿ ನಟಿಸುತ್ತಿದ್ದ ಸಿ. ಆರ್. ಸಿಂಹ, ಕಪ್ಪಣ್ಣ, ಲೋಕೇಶ್, ಗುಬ್ಬಿ ವೀರಣ್ಣನವ್ವರ ಮಗ ದೇವಾನಂದ್. ಮುಂದೆ ಹೆಸರಾಂತ ನಿರ್ಮಾಪಕರಾಗಿ ಖ್ಯಾತ ಗಳಿಸಿದ ಕೃಷ್ಣಂರಾಜು ಮತ್ತು ಶಂಕರ್ ರಾವ್ ಅವರುಗಳ ಪರಿಚಯವಾಗಿ ಇಂದಿಗೂ ಹವ್ಯಾಸಿ ರಂಗದಲ್ಲಿ ಪ್ರಖ್ಯಾತವಾಗಿರುವ ನಟರಂಗ ತಂಡವನ್ನು 1972ರಲ್ಲಿ ಸ್ಥಾಪನೆ ಮಾಡಿ ಅದರ ಮೂಲಕ ಎಚ್ಚೆಮನಾಯಕ, ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು.

rajram1

ಹೀಗೆ ಒಂದಾದ ಮೇಲೆ ಒಂದು ನಾಟಕಗಳಲ್ಲಿ ಆಭಿನಯಿಸುತ್ತಿರುವಾಗಲೇ ಸಿ. ಆರ್ ಸಿಂಹ ಅವರ ಮೂಲಕ ನಾಟಕಗಳಲ್ಲಿ ಸಂಗೀತ ಸಂಯೋಜನೆ ಮಾಡುತ್ತಿದ್ದ ಮತ್ತೊಬ್ಬ ದಿಗ್ಗಜ ಸಿ. ಅಶ್ವಥ್ ಅವರ ಪರಿಚಯವಾಗಿ ಮುಂದೆ ರಾಜಾರಾಂ ಮತ್ತು ಅಶ್ವಥ್ ಅವರ ಜೋಡಿ ಹಾಲು ಜೇನಿನಂತಾಗುತ್ತದೆ. ಹಾರ್ಮೋನಿಯಂ ಹಿಡಿದು ತಾರಕ ಸ್ವರದಲ್ಲಿ ಅಶ್ವಥ್ ಹಾಡಲು ಆರಂಭಿಸಿದರೆ ಅವರಿಗೆ ಡೋಲಕ್ ಮೂಲಕ ರಾಜಾರಾಂ ಸಾಥ್ ನೀಡುತ್ತಿದ್ದರು. ನಾಟಕಗಳಿಗಾಗಿ ರೈಲಿನಲ್ಲಿ ದೂರ ಪ್ರಯಾಣ ಮಾಡುತ್ತಿರುವಾಗ ಅನೇಕ ಸ್ಥಳಗಳಲ್ಲಿ ಕೆಲವು ಗಂಟೆಗಳ ಕಾಲ ರೈಲು ನಿಂತರೆ ಇವರಿಬ್ಬರೂ ರೈಲಿನಿಂದ ಇಳಿದು ಪ್ಲಾಟ್ಫಾರ್ಮಿನ ಮೇಲೆ ಕುಳಿತು ಹಾಡುತ್ತಿದ್ದರೆ ಸುತ್ತಲೂ ಇರುವವರಿಗೆ ರಸದೌತಣ ಎಂದು ಬೇರೆ ಹೇಳಬೇಕಿಲ್ಲ.

ಹೀಗೆ ನಾನಾ ನಾಟಕಗಳಲ್ಲಿ ಆಭಿನಯಿಸುತ್ತಿರುವಾಗಲೇ 1971ರಲ್ಲಿ ತಮ್ಮ ಬಾಲ್ಯಸ್ನೇಹಿತರೊಬ್ಬರ ಸಹಾಯದಿಂದ ಪಾಪಾ ಪುಣ್ಯ ಚಿತ್ರದಲ್ಲಿ ಪ್ರಪ್ತಥಮವಾಗಿ ಬಣ್ಣ ಹಚ್ಚುವ ಅವಕಾಶ ಲಭಿಸಿ, ಪಂಡರೀ ಬಾಯಿ ಮತ್ತು ಕಲ್ಯಾಣ್ ಕುಮಾರ್ ಅವರೊಂದಿಗೆ ಶ್ರೀ ಶೈಲದಲ್ಲಿ ಚಿತ್ರೀಕರಣದಲ್ಲಿ ಭಾಗಿಗಳಾಗುತ್ತಾರೆ. ನಂತರ 1972ರಲ್ಲಿಯೇ ಭಲೇ ಹುಚ್ಚಾ ಚಿತ್ರದಲ್ಲಿ ಜೋಕರ್ ಶ್ಯಾಮ್ , ಕೆಮಡಿಯನ್ ಗುಗ್ಗು ಅವರೊಟ್ಟಿಗೆ ನಟ ಸಾರ್ವಭೌಮ ರಾಜಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಲಭಿಸುತ್ತದೆ. ದುರಾದೃಷ್ಟವೆಂದರೆ ಅದೇ ಸಿನಿಮಾ ಅಣ್ಣಾವ್ರ ಜೊತೆ ಅಭಿನಯಿಸಿದ ಮೊದಲ ಮತ್ತು ಕಡೆಯ ಸಿನಿಮಾ ಆಗುತ್ತದೆ. ನಂತರ ಕನ್ನಡದ ಬಹುತೇಕ ಎಲ್ಲಾ ನಾಯಕ ನಟರೊಂದಿಗೆ ಅಭಿನಯಿಸಿದ ಹೆಗ್ಗಳಿಕೆ ರಾಜಾರಾಂ ಅವರದ್ದಾಗಿದೆ.

ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವಾಗಲಿಲ್ಲ. ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯನವರು ರಾಜಾರಾಂ ಅವರು ಬಾಲು ಮಹೇಂದ್ರ ಅವರ ನಿರ್ದೇಶನದಲ್ಲಿ ಕಮಲಹಾಸನ್ ಅವರೊಂದಿಗೆ ನಟಿಸಿದ ಚಿತ್ರವನ್ನು ನೋಡಿ ಪ್ರಥಮಬಾರಿಗೆ ತಮ್ಮ ಚಿತ್ರದಲ್ಲಿ ರಾಜಾರಾಂ ಅವರಿಗೊಂದು ಅವಕಾಶ ನೀಡುತ್ತಾರೆ. ಅಲ್ಲಿಂದ ಮುಂದೆ ಅವರಿಬ್ಬರದ್ದೂ ರಾಮ ಲಕ್ಷ್ಮಣ ಜೋಡಿಯಂತಾಗಿ ಅವರ ಪ್ರತಿಯೊಂದು ಚಿತ್ರದಲ್ಲಿಯೂ ಒಂದಲ್ಲಾ ಒಂದು ಪ್ರಮುಖ ಪಾತ್ರ ರಾಜಾರಾಂ ಅವರಿಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಅದೇ ಸಂಪ್ರದಾಯವನ್ನು ಸಿದ್ದಲಿಂಗಯ್ಯ ಅವರ ಶಿಷ್ಯ ಕೆ.ವಿ. ರಾಜು ಅವರು ಸಹಾ ಮುಂದುವರೆಸಿ ತಮ್ಮ ಬಹುತೇಕ ಚಿತ್ರಗಳಲ್ಲಿ ರಾಜಾರಾಂ ಅವರಿಗೆ ಅವಕಾಶ ಕೊಟ್ಟಿದ್ದರು.

raj4

1971 ರಿಂದ ಪಾಪ ಪುಣ್ಯದ ಮುಖಾಂತರ ಆರಂಭವಾಗಿ ಕೆಲವರ್ಷಗಳ ಹಿಂದೆ ಬಿಡುಗಡೆಯಾದ ಜೈಲಲಿತಾ ಸಿನಿಮಾ ಅವರ ಕೊನೆಯ ಸಿನಿಮಾವಾಗಿದ್ದು ಒಟ್ಟು 62 ಚಿತ್ರಗಳಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ಟರ ನಿರ್ದೇಶನದ, ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಅಭಿನಯಿಸಿದ್ದ ಗಾಳಿಪಟದಲ್ಲಿ ದೂಡ್ ಪೇಡಾ ದಿಂಗತ್ ತಾತಾನಾಗಿ ಅಭಿನಯಿಸಿದ್ದು ಮತ್ತು ಲೋಕೇಶ್ ಅವರ ನಿರ್ದೇಶನದ ಭುಜಂಗಯಯನ ದಶಾವತಾರ ಚಿತ್ರದ ಅವರಿಗೆ ಅತ್ಯಂತ ಖ್ಯಾತಿಯನ್ನು ತಂದುಕೊಟ್ಟಿತ್ತು.

ಕನ್ನಡಲ್ಲಿ ಖಾಸಗೀ ಛಾನೆಲ್ಗಳು ಆರಂಭವಾದ ಮೇಲಂತೂ ರಾಜಾರಾಂ ಅವರಿಗೆ ಭರಪೂರ ಕೆಲಸ ಸಿಕ್ಕಿತ್ತು. ರಮೇಶ್ ಭಟ್ ಮತ್ತು ಗಿರಿಜಾ ಲೋಕೇಶ್ ರೊಂದಿಗೆ ಅಭಿನಯಿಸಿದ ಕ್ರೇಜಿ ಕರ್ನಲ್ ಎಂಬ ಧಾರಾವಾಹಿಯಲ್ಲಿ ಅವರಿಬ್ಬರ ಸರಿಸಮನಾಗಿ ರಾಜಾರಾಂ ಅವರ ಪಾತ್ರಾಭಿನಯವೂ ಬಹಳ ಮೆಚ್ಚಿಗೆಗಳಿಸಿತ್ತಲ್ಲದೇ, ಸಿಹಿ ಕಹಿ ಚಂದ್ರು ಅವರ ಅನೇಕ ಧಾರವಾಹಿಗಳದೇ ಇನ್ನೂ ಹತ್ತು ಹಲವರು ನಿರ್ದೇಶಕರ ಜೊತೆ ನೂರಾರು ಸಂಚಿಕೆಗಳಲ್ಲಿ ತಮ್ಮ ಸಹಜ ಅಭಿನಯದ ಮುಖಾಂತರ ಕನ್ನಡಿಗರ ಹೃನ್ಮನಗಳನ್ನು ಗೆದ್ದಿದ್ದರು.

ತಮ್ಮ ಪಾತ್ರಗಳ ಮುಖಾಂತರ ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದರೂ ಬದುಕಿನಲ್ಲಿ ಬಹಳವಾಗಿ ನೊಂದಿದ್ದರು. ಆರ್ಥಿಕವಾಗಿ ಸಧೃಢರಾಗಿದ್ದದೂ ಅವರ ಇಬ್ಬರು ಮಕ್ಕಳು ಹುಟ್ಟು ಕುರುಡರಾಗಿದ್ದು ಅವರಿಗೆ ಬಹಳ ನೋವನ್ನುಂಟು ಮಾಡಿತ್ತು. ಇಬ್ಬರಿಗೂ ಉತ್ತಮವಾದ ಶಿಕ್ಷಣವನ್ನು ಕೊಡಿಸಿ ಹಿರಿಯ ಮಗ ತನ್ನದೇ ಆದ ಅಂಧ ಹೆಣ್ಣು ಮಕ್ಕಳ ಶಾಲೆಯನ್ನು ನಡೆಸುತ್ತಿದ್ದರೆ, ಇನ್ನು ಎರಡನೆಯ ಮಗ ಕಾರ್ಪರೇಷನ್ ಬ್ಯಾಂಕಿನಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಕಾಲ ಮೇಲೇ ತಾವು ನಿಂತು ಸಂಸಾರವನ್ನು ನಿಭಾಯಿಸುತ್ತಿದ್ದಾರೆ.

ರಾಜಾರಾಂ ಅವರಿಗೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಮಯೂರ ಕಲಾರಂಗ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳ ಗೌರವಗಳು ಸಂದಿವೆ.

ಇತ್ತೀಚಿನ ದಿನಗಳಲ್ಲಿ ಚಲನಚಿತ್ರ, ಧಾರವಾಹಿ ಮತ್ತು ನಾಟಕಗಳಿಂದ ಸ್ವಲ್ಪ ದೂರವಿದ್ದು ವಿಶ್ರಾಂತ ಜೀವನ ನಡೆಸುತ್ತಿದ್ದ ಹಿರಿಯ ರಂಗಕರ್ಮಿ ಆರ್‌.ಎಸ್‌.ರಾಜಾರಾಂ ಅವರು ಕೋವಿಡ್‌ ಸೋಂಕಿನಿಂದಾಗಿ ಏಪ್ರಿಲ್ 10, 2021ರಂದು ನಮ್ಮಲ್ಲರನ್ನೂ ಅಗಲಿದ್ದಾರೆ. ದೈಹಿಕವಾಗಿ ರಾಜಾರಾಂ ಅವರು ನಮ್ಮನ್ನಗಲಿದ್ದರೂ ಅವರ ತುಂಟಾಟಿಕೆಯ ಅಭಿನಯದ ಮೂಲಕ ಕನ್ನಡಿಗರ ಮನ ಮನೆಗಳಲ್ಲಿ ಶಾಶ್ವತವಾಗಿ ಮನೆಮಾಡಿದ್ದಾರೆ ಎಂದರೂ ಅತಿಶಯೋಕ್ತಿಯಾಗದು ಅಲ್ವೇ?

ಕೆಲವೊಮ್ಮೆ ಜನರು ಬದುಕಿರುವಾಗ ಅವರ ಬಗ್ಗೆ ಹೊಗಳುವುದಕ್ಕೆ ಕಂಜೂಸ್ ತನ‌‌ ತೋರಿಸುವವರೇ ಸತ್ತ ನಂತರ ವಾಚಾಮಗೋಚರವಾಗಿ ಹೋಗಳುವಾಗ,‌ ಅರೇ ಇದೇ ಮಾತುಗಳನ್ನು ಅವರು ಬದುಕಿದ್ದಾಗ ಮಾಡಿದ್ದರೆ ಇನ್ನೂ ಒಂದೆರಡು ದಿನ ಹೆಚ್ಚಿಗೆ ಬದುಕುತ್ತಿದ್ದರೇನೋ ಅನಿಸುತ್ತದೆ ಎನ್ನುವುದು ಸತ್ಯವಾದರೂ,‌ ಹೇಗಾದರೂ ಇರುತ್ತಾರಲ್ಲಾ, ಅವರನ್ನು ಹೊಗಳಿದರೆ ಎಲ್ಲಿ ಅಟ್ಟಕ್ಕೇರಿ ಕುಳಿತು ಬಿಡುತ್ತಾರೋ ಎನ್ನುವ ಸಂಶಯವೂ ಇರಬಹುದೇನೋ? ಇಲ್ಲವೇ ಅವರು ಇಷ್ಟು ಬೇಗ ಅಗಲುತ್ತಾರೆ ಎನ್ನುವ ಮನೋಭಾವವೂ ಮತ್ತೊಂದು ಕಾರಣ ಇರಬಹುದು.

ಹಾಗಾಗಿ ದಯವಿಟ್ಟು ಯಾರನ್ನಾದರೂ ಹೊಗಳ ಬೇಕು ಇಲ್ಲವೇ ಏನಾದರೂ ಕೊಡಬೇಕು ಎನಿಸಿದಲ್ಲಿ‌ ನಾಳೆಯ ಕೆಲಸವ ಇಂದೇ ಮಾಡು, ಇಂದಿನ ಕೆಲಸವ‌ ಇಂದೇ ಮಾಡು ಎಂದು ಥಟ್ ಅಂತ ಮಾಡಿಬಿಡಿ. ಯಾರಿಗೆ‌ ಗೊತ್ತು ನಾಳೆ ನಾವಿರ್ತಿವೋ ಇಲ್ಲಾ ಅವರು ಇರ್ತಾರೋ ಎಂದು.

ಏನಂತೀರೀ?

ನಿಮ್ಮವನೇ ಉಮಾಸುತ