ಮಾಹಿಮಾಪುರದ ಮಹಿಮಾರಂಗ

ಸಾಧಾರಣವಾಗಿ ಯಾರಾದರೂ, ಯಾವುದಾದರೂ ತೀರ್ಥಕ್ಷೇತ್ರ ಅಥವಾ ಪುಣ್ಯಕ್ಷೇತ್ರಕ್ಕೆ ಹೋಗಿ ಬಂದು ತೀರ್ಥಪ್ರಸಾದವನ್ನು ಕೊಟ್ಟು ಆ ಕ್ಷೇತ್ರದ ಮಹಿಮೆಯನ್ನು ವಿವರಿಸಿ ನೀವು ಆದಷ್ಟು ಶೀಘ್ರದಲ್ಲಿ ಖಂಡಿತವಾಗಿಯೂ ಹೋಗಿ ಬರಲೇ ಬೇಕು ಎಂದಾಗ. ಅಯ್ಯೋ ನೀವೇ ಪುಣ್ಯವಂತರು. ನಮಗೆಲ್ಲಿದೆ ಆ ಭಾಗ್ಯ. ಆ ಭಗವಂತ ನಮ್ಮನ್ನು ಯಾವಾಗ ಕರೆಸಿಕೊಳ್ಳೊತ್ತಾನೋ ಎಂದು ಹೇಳುವುದು ಸಹಜ ಪ್ರಕ್ರಿಯೆ. ಅದರಂತೆಯೇ, ಮೂರ್ನಲ್ಕು ವಾರಗಳ ಹಿಂದೆ ನಮ್ಮ ಸ್ನೇಹಿತನ ಮದುವೆಗೆ ಹೋಗುವ ನೆಲಮಂಗಲ ದಾಟಿ ದಾರಿಯಲ್ಲಿ ತಿಂಡಿಗೆ ನಿಲ್ಲಿಸಿದ್ದಾಗ ದೂರದಲ್ಲಿ ಬೆಟ್ಟದ ತುದಿಯಲ್ಲಿ ಸುಂದರ ದೇವಸ್ಥಾನ ಕಾಣಿಸುತ್ತು. ಕುತೂಹಲದಿಂದ ನಮ್ಮ ಮತ್ತೊಬ್ಬ ಸ್ನೇಹಿತರನ್ನು ವಿಚಾರಿಸಿದ್ದಾಗ ಆತ ಅದು ರಂಗನಾಥ ಸ್ವಾಮಿ ದೇವಸ್ಥಾನ. ಬಹಳ ಚಿಕ್ಕ ವಯಸ್ಸಿನಲ್ಲಿರುವಾಗ ಹೋಗಿದ್ದೆ. ತುಂಬಾ ಚೆನ್ನಾಗಿದೆ ಎಂದಿದ್ದರು. ಆಗ ಅದರ ಬಗ್ಗೆ ಅಷ್ಟೇನೂ ಗಮನ ಹರಿಸಿರಲಿಲ್ಲ. ಆದರೆ ಮೊನ್ನೆ ಸಂಜೆ ಕಛೇರಿಯಿಂದ ಮನೆಗೆ ಬರುತ್ತಿದ್ದಾಗ ವಾಹನ ದಟ್ಟಣೆಯಲ್ಲಿ ನಿಂತಿರುವಾಗ ನಮ್ಮ ಕಾರಿನ ಮುಂದೆ ನಿಂತಿದ್ದ ಲಾರಿಯ ಮೇಲೆ ಮಹಿಮಾರಂಗ ಎಂದು ಬರೆದಿದ್ದು ಕಣ್ಣಿಗೆ ಎದ್ದು ಕಾಣಿಸುತ್ತಿತ್ತು. ಕೆಲವಿಲ್ಲದ ಬಡಗಿ ಮಗಳ ಕು.. ಕೆತ್ತಿದನಂತೆ ಎನ್ನುವ ಗಾದೆ ಹಳೆಯದಾಗಿ ಹೋಗಿ, ಕೆಲಸವಿಲ್ಲದವರು ಮೊಬೈಲ್ ಮೇಲೆ ಕೈ ಆಡಿಸಿದನಂತೆ ಎನ್ನುವ ಹೊಸ ಗಾದೆಯಂತೆ ಕೂಡಲೇ ಮೊಬೈಲ್ನ ಗೂಗಲ್ ಮ್ಯಾಪಿನಲ್ಲಿ ಮಹಿಮಾರಂಗ ಎಲ್ಲಿದೆ ಎಂದು ನೋಡಿದೆ. ಅರೇ ಇಲ್ಲೇ ಬೆಂಗಳೂರಿನ ಪಕ್ಕದಲ್ಲೇ ಇರುವುದನ್ನು ನೋಡಿ ಇಂದು ಹೇಗೂ ಆಷಾಡ ಶನಿವಾರ ಆ ಮಹಿಮಾ ರಂಗನ ದರ್ಶನಕ್ಕೆಂದು ಕುಟುಂಬ ಸಮೇತ ಹೊರಟೆ ಬಿಟ್ಟೆವು.

ಬೆಂಗಳೂರಿನಿಂದ ಸುಮಾರು 50 ಕಿ.ಮೀ . ದೂರದಲ್ಲಿಯೇ ಜಾಲಹಳ್ಳಿ ಜಂಕ್ಷನ್ನಿಂದ ಸುಮಾರು 35 ಕಿ.ಮೀಟರ್ ದೂರದಲ್ಲಿ ನೆಲಮಂಗಲದ ಜಸ್ ಟೋಲ್ ದಾಟಿ ತುಮಕೂರಿನ ಕಡೆ ಸುಮಾರು ಹತ್ತು ಕಿಮೀ ದೂರ ಹೋಗಿ ಎಡಗಡೆಯಲ್ಲಿರುವ ಕಮಾನಿನ ಕಡೆ ತಿರುಗಿ ಸುಮಾರು 2 ಕಿಮೀ ದೂರ ಹೋದರೆ ಸಿಗುವುದೇ ಮಹಿಮಾಪುರ. ರಸ್ತೆಯ ಬದಿಯಲ್ಲಿಯೇ ಎಡಗಡೆ ವಿಶಾಲವಾದ ಆಲದ ಮರದಡಿಯಲ್ಲಿಯೇ ಹಲವಾರು ವಾಹನಗಳನ್ನು ನಿಲ್ಲಿಸುವಷ್ಟು ವಿಶಾಲವಾದ ಜಾಗದಲ್ಲಿ ನಮ್ಮ ಕಾರ್ ನಿಲ್ಲಿಸಿ ರಸ್ತೆ ದಾಟಿದರೆ ಅತ್ಯಂತ ಪುರಾತನ ಚಾರಿತ್ಯ ಹೊಂದಿರುವ ಸುಂದರ ನಯನ ಮನೋಹರ ದಟ್ಟವಾದ ಮರಗಳಿಂದ ಕೂಡಿರುವ ಮಹಿಮಾರಂಗನ ಬೆಟ್ಟ ದುತ್ತೆಂದು ಕಣ್ಣಿಗೆ ಕಾಣಿಸುತ್ತದೆ. ಸುಮಾರು ಹತ್ತು – ಹದಿನೈದು ಮೆಟ್ಟಿಲುಗಳನ್ನು ಹತ್ತಿದೊಡನೆಯೇ ಆಭಯ ಹಸ್ತ ಚಾಚಿ ನಿಂತಿರುವ ಸುಮಾರು ಆರರಿಂದ, ಎಂಟು ಅಡಿ ಎತ್ತರದ ಆಂಜನೇಯನ ಗುಡಿ ಎದುರಾಗುತ್ತದೆ. ದೇವಸ್ಥಾನ ಮುಜರಾಯಿ ಇಲಾಖೆಯ ಅಧೀನದಲ್ಲಿ ಬಂದರೂ, ಸ್ಥಳೀಯರು ಮತ್ತು ಹಲವಾರು ಭಕ್ತಾದಿಗಳ ನೆರವಿನಿಂದ ಹಳೆಯ ದೇವಸ್ಥಾನದ ಜಾಗದಲ್ಲಿ ಸುಂದರವಾಗಿ ಹೊಸದಾದ ದೇವಸ್ಥಾನವನ್ನು ಕಟ್ಟಿ ಗ್ರಾನೈಟ್ ಕಲ್ಲುಗಳನ್ನು ಹಾಸಿ ಅತ್ಯಂತ ಪ್ರಶಾಂತವಾದ ವಾತಾವರಣ ಮೂಡುವಂತಿದೆ. ಸ್ಥಳೀಯ ಅರ್ಚಕರಾದ ಶ್ರೀ ಕುಲಶೇಖರನ್ ಆಳ್ವಾರ್ ಅವರ ಕುಟುಂಬ ತಲಾ ತಲಾಂತರದಿಂದ ಭಗವಂತನ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ.

WhatsApp Image 2019-07-06 at 9.02.32 PM (3)

ಅಲ್ಲಿಂದ ಸುಮಾರು 333 ಮೆಟ್ಟಿಲುಗಳನ್ನು ಹತ್ತಿದರೆ ರಂಗನಾಥನ ಮಂದಿರ ತಲುಪುತ್ತೇವೆ. ಆರಂಭದಲ್ಲಿ ಸರಳವಾಗಿ ಹತ್ತಬಹುದಾದರೂ ಮೇಲೆ ಹತ್ತುತ್ತಾ ಹೊದಂತೆಲ್ಲಾ ಮೆಟ್ಟಿಲುಗಳ ಎತ್ತರ ಸ್ವಲ್ಪ ಹೆಚ್ಚಾಗಿ ಮತ್ತು ಕಡಿದಾಗಿ ಮತ್ತು ಅಲ್ಲಲ್ಲಿ ಸಣ್ಣ ಸಣ್ಣ ತಿರುವುಗಳು ಇರುವುದರಿಂದ ಹತ್ತುವುದಕ್ಕೆ ತುಸು ತ್ರಾಸವೆನಿಸುತ್ತದೆಯಾದರೂ ದೇವರ ನೆನೆಯುತ್ತಾ ಮೆಟ್ಟಿಲು ಹತ್ತುತ್ತಿದ್ದರೆ ಆಯಾಸವೇ ಗೊತ್ತಾಗುವುದಿಲ್ಲ. ಬಹುಷಃ ಇತ್ತೀಚೆಗೆ ಎಲ್ಲಾ ಮೆಟ್ಟಿಲುಗಳಿಗೂ ಸುದ್ದೇ ಕೆಮ್ಮಣ್ಣಿನ ರೀತಿ , ತಿಳಿ ಹಳದಿ ಮತ್ತು ಕೆಂಪು ಬಣ್ಣವನ್ನು ಬಳಿದು ಕಣ್ಣಿಗೆ ಅತ್ಯಂತ ಹಿತವಾಗಿ ಕಾಣುವಂತೆ ಮಾಡಿದ್ದಾರೆ. ಸುಮಾರು ಎರಡು ನೂರು ಮೆಟ್ಟಿಲು ಹತ್ತಿದ ನಂತರ ಆಯಾಸಗೊಂಡ ಮಗಳು, ನಾನು ಇಲ್ಲೇ ಕುಳಿತಿರುತ್ತೇನೆ. ನೀವುಗಳು ದೇವರ ದರ್ಶನ ಮಾಡಿಕೊಂಡು ಬನ್ನಿ ಎಂದಾಗ, ಹೇ.. ದೇವರಿಗೆ ಹಾಗೆಲ್ಲಾ ಹೇಳಬಾರದು. ಇಷ್ಟೇ ದೂರ ಬಂದಿದ್ದೇವೆ. ಇನ್ನು ಕೆಲವೇ ಕೆಲವು ಮಟ್ಟಿಲುಗಳನ್ನು ಹತ್ತಿದರೆ ದೇವಸ್ಥಾನ ಬಂದೇ ಬಿಡುತ್ತದೆ ಎಂದು ಪುಸಲಾಯಿಸಿದರೆ, ಅಯ್ಯೋ ಯಾಕಾದರೂ ಈ ದೇವಸ್ಥಾನಗಳನ್ನು ಬೆಟ್ಟದ ಮೇಲೆ ಕಟ್ಟುತ್ತಾರೋ ಎಂದು ಗೊಣಗುತ್ತಲೇ ಪುನಃ ಮೆಟ್ಟಿಲುಗಳನ್ನು ಹತ್ತಲು ಆರಂಭಿಸಿದಳು. ದೇವರ ದರ್ಶನ ಮತ್ತು ಸಾನಿಧ್ಯ ಯಾರಿಗೂ ಸುಲಭವಾಗಿ ಒಲಿಯುವುದಲ್ಲ. ನಾವು ಭಗವಂತನ ನೆನೆಯುತ್ತಲೇ , ನಮ್ಮ ಕಷ್ಟ ಕಾರ್ಪಣ್ಯಗಳನ್ನು ದಾಟಿ ಬಂದರೇನೇ ಮೇಲಿರುವ ಭಗವಂತನ ದರ್ಶನ ಆಗುತ್ತದೆ. ಅದರ ಸಂಕೇತವೇ ದೂರದ ಬೆಟ್ಟದ ಮೇಲಿರುವ ದೇವಸ್ಥಾನಗಳು ಎಂದು ನನಗೆ ತೋಚಿದಂತೆ ಹೇಳುತ್ತಾ ಇರುವಾಗಲೇ ಅತ್ಯಂತ ಪುರಾತನವಾದ ಇತಿಹಾಸ ಪ್ರಸಿದ್ದ ಮಹಿಮಾ ರಂಗನಾಥನ ದೇವಸ್ಥಾನಕ್ಕೆ ತಲುಪಿದ್ದೆವು.

mahima2

ಪುರಾತನವಾದ ಕಲ್ಲಿನ ದೇವಸ್ಥಾನ. ಅದಕ್ಕೊಪ್ಪುವ ರೀತಿಯ ಹಳೆಯಾದಾದ ಶಿಖರ. ದೇವಸ್ಥಾನಕ್ಕೆ ನಮ್ಮ ಎಡ ಭಾಗದಿಂದ ಪ್ರದಕ್ಷಿಣೆ ಹಾಕುತ್ತಾ ಮುಂದುವರಿದಂತೆಯೇ ದೇವಾಲಕಕ್ಕೆ ಅಂಟಿಕೊಂಡಂತೆಯೇ ಬೆಳೆದಿರುವ ಎಲಚೇಹಣ್ಣಿನ ಗಿಡ (ಸಂಕ್ರಾಂತಿ ಹಣ್ಣು) ಕಾಣ ಸಿಗುತ್ತದೆ. ಅದರ ಪಕ್ಕದಲ್ಲಿ ಇದ್ದ ಆಧುನಿಕ ರೀತಿಯ ನಲ್ಲಿಯಲ್ಲಿ ಕೈ ಕಾಲು ತೊಳೆದು ಕೊಂಡು ಪ್ರದಕ್ಷಿಣೆ ಪೂರ್ತಿ ಮುಗಿಸಿ ದೇವಸ್ಥಾನ ಒಳಗೆ ಕಾಲಿಡುತ್ತಿದ್ದಂತೆಯೇ ಉಪಾಸನೆ ಚಿತ್ರದ ಆರ್. ಎನ್. ಜಯಗೋಪಾಲ್ ರಚಿಸಿರುವ, ಬಿ. ಕೆ ಸುಮಿತ್ರರವರು ಹಾಡಿರುವ ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು.
ಟಣ್ ಡಣ್ ಟಣ್ ಡಣ್ ಎನ್ನುತ ಸೇವೆಗೆ ಎಲ್ಲರ ಕರೆದಿತ್ತು.
ಅದಕೇಳಿ ನಾ ಮೈಮರೆತೆ ಎನ್ನುವ ರೀತಿಯಲ್ಲಿಯೇ ರಂಗನಾಥನ ಗುಡಿಯಿಂದ ಢಣ್ ಢಣ್ ಢಣ್ ಢಣ್ ಎಂಬ ಘಂಟೆನಾದ ನಮ್ಮನ್ನು ಒಳಗೆ ಸ್ವಾಗತಿಸಿತು. ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ನಾಲ್ಕಾರು ಭಕ್ತಾದಿಗಳಿದ್ದರು. ದೇವಾಲಯದ ಅರ್ಚಕರು ಬನ್ನಿ ಬನ್ನಿ. ಎಲ್ಲಿಂದ ಬಂದ್ದೀದ್ದೀರಿ ಎಂದು ಹಸನ್ಮುಖರಾಗಿ ಕೇಳುತ್ತಿದ್ದಂತೆಯೇ ಮೆಟ್ಟಿಲು ಹತ್ತಿಬಂದಿದ್ದ ಎಲ್ಲಾ ಆಯಾಸವೆಲ್ಲವೂ ಮಾಯೆಯಾಗಿ ಹೋಯಿತು ಎಂದರೆ ಅತಿಶಯೋಕ್ತಿಯೇನಲ್ಲ. ಸುಮಾರು ನಾಲ್ಕೈದು ಅಡಿಗಳ ಎತ್ತರದ ನಿಂತಿರುವ ರಂಗನಾಥನವ ವಿಗ್ರಹಕ್ಕೆ ಅದಕ್ಕೆ ಒಪ್ಪುವಂತೆ ಹಿಂದೆ ಪ್ರಭಾವಳಿ. ಕೇಸರಿಯ ಪಂಚೆ ಮತ್ತು ಮುಖದ ಮೇಲೆ ತಿರುಪತಿ ವೆಂಕಟರಣನ ರೀತಿಯ ಕೆಂಪು ಮತ್ತು ಬಿಳಿಯ ನಾಮ ರಂಗನಾಥನಿಗೆ ಕಿರೀಟ, ಮಲ್ಲಿಗೆ, ಗುಲಾಬಿ ಮತ್ತು ತುಳಸೀ ಹಾರಗಳಿಂದ ಅತ್ಯಂತ ಸುಂದರವಾಗಿ ರಂಗನಾಥಸ್ವಾಮಿ ಕಂಗೊಳಿಸುತ್ತಿದ್ದರು. ದೇವರ ಬುಡದಲ್ಲಿ ಚಿಕ್ಕದಾದ ಮತ್ತೊಂದು ವಿಗ್ರಹವನ್ನು ನೋಡಿ ಕುತೂಹಲದಿಂದ ಅರ್ಚಕರಿಗೆ ದೇವಸ್ಥಾನದ ಇತಿಹಾಸವೇನು? ಅ ವಿಗ್ರಹದ ಮಹತ್ವವೇನು ಎಂದು ಕೇಳಿದಾಗ ಇದು ರಂಗನಾಥನ ದೇವಸ್ಥಾನವಾದರೂ ಶ್ರೀ ವಿಷ್ಣುವಿನ ವಾಹನ ಗರುಡ ತಪಸ್ಸು ಮಾಡಿ ಶಾಪ ವಿಮೋಚನೆಯಾದ ಸ್ಥಳ ಎಂದು ತಿಳಿಸಿದರು. ಗರುಡನ ತಾಯಿ ವಿನುತಳಿಗೆ ಮದುವೆಯಾದರೂ ಬಹಳಷ್ಟು ಕಾಲ ಮಕ್ಕಳಾಗದ ಕಾರಣ ಸೂರ್ಯ ದೇವರನ್ನು ಕುರಿತು ತಪ್ಪಸ್ಸು ಮಾಡಿ ಒಲಿಸಿಕೊಂಡು ವರದ ರೂಪದಲ್ಲಿ ಎರಡು ಮೊಟ್ಟೆಗಳನ್ನು ಪಡೆದು ಕೊಳ್ಳುತ್ತಾಳೆ. ಬಹಳಷ್ಟು ಜೋಪಾನದಿಂದ ಮೊಟ್ಟೆಗಳಿಗೆ ಶಾಖ ಕೊಟ್ಟರೂ ಅನೇಕ ದಿನಗಳಾದರೂ ಮೊಟ್ಟೆಯು ಹಾಗೇ ಇರುವುದನ್ನು ಕಂಡು ಅನುಮಾನವಾಗಿ ಮೊದಲ ಮೊಟ್ಟೆಯನ್ನು ಒಡೆದಾಗ, ಕಾಲಿಲ್ಲದ ಪ್ರಾಣಿ ಇರುತ್ತದೆ ಅದರಿಂದ ಬೇಸರಗೊಂಡು ಮತ್ತೊಮ್ಮೆ ಸೂರ್ಯ ದೇವರನ್ನು ಪ್ರಾರ್ಥಿಸಿದಾಗ, ಆ ಕಾಲಿಲ್ಲದ್ದನ್ನು ಅರುಣ ಎಂದು ಕರೆದು ಅದನ್ನು ತನ್ನ ಸಾರಥಿಯನ್ನಾಗಿ ಮಾಡಿಕೊಂಡ ಸೂರ್ಯ, ಗರುಡನ ತಾಯಿಗೆ ಸ್ವಲ್ಪ ದಿನಗಳವರೆಗೆ ತಾಳ್ಮೆಯಿಂದ ಕಾಯಲು ತಿಳಿಸುತ್ತಾನೆ. ಸೂರ್ಯದೇವರ ಆಣತಿಯಂತೆ ಸ್ವಲ್ಪ ದಿನ ಕಾಯುತ್ತಿರುವಾಗಲೇ, ಅದೊಂದು ದಿನ ಆ ಎರಡನೇ ಮೊಟ್ಟೆ ಅಚಾನಕ್ಕಾಗಿ ತನ್ನಿಂದತಾನೇ ಒಡೆದು ಕೊಂಡು ಗರುಡನ ರೂಪದಲ್ಲಿ ತಾಳಿ ಹುಟ್ಟಿದ ತಕ್ಷಣವೇ ಅಜಾನುಬಾಹುವಾಗಿ ಬೆಳೆಯುತ್ತಾ ಹೋಗಿ ಅಮ್ಮಾ ಹೊಟ್ಟೆ ಹಸಿಯುತ್ತಿದೆ. ತಿನ್ನಲು ಏನಾದರೂ ಕೊಡು ಎಂದು ಪೀಡಿಸ ತೊಡಗುತ್ತಾನೆ. ಗರುಡನ ಕಾಟ ತಾಳಲಾರದೆ, ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದ ಅವನ ತಂದೆಯಾದ ಕಶ್ಯಪ ಮುನಿಗಳ ಬಳಿ ಆಹಾರವನ್ನು ಕೇಳು ಎಂದು ಸೂಚಿಸಿದರ ಪರಿಣಾಮ ಗರುಡ ತನ್ನ ತಂದೆ ಬಳಿ ಹೋಗುತ್ತಾನೆ. ಅತ್ಯಂತ ಕಠಿಣ ತಪಸ್ಸಿನಲ್ಲಿದ್ದ ಕಶ್ಯಪ ಋಷಿಗಳು ಎಷ್ಟು ಹೊತ್ತಾದರೂ ಎಚ್ಚರವಾಗದಿದ್ದರಿಂದ ರೋಸೆತ್ತ ಗರುಡ ತನ್ನ ರೆಕ್ಕೆಗಳಿಂದ ಋಷಿಗಳ ಮೇಲೆ ದೈಹಿಕ ಹಲ್ಲೆ ಮಾಡಿ ಆವರ ತಪಸ್ಸನ್ನು ಭಂಗ ತರುತ್ತಾನೆ. ಅದರಿಂದ ಕೋಪಗೊಂಡ ಋಷಿಗಳು ನೀನು ರಾಕ್ಷಸರನ್ನು ಕೊಂದು ತಿನ್ನುವ ಮಾಂಸಾಹಾರಿಯಾಗು ಎಂದು ಶಾಪ ಕೊಡುತ್ತಾರೆ. ಅವರ ಶಾಪದ ಫಲವಾಗಿ ಗರುಡ ಅದೇ ಕ್ಷೇತ್ರದಲ್ಲಿದ ರಾಕ್ಷಸರನ್ನು ಕೊಂದು ತಿನ್ನುತ್ತ ಮಾಂಸ ಭಕ್ಷನಾಗಿರುತ್ತಾನೆ. ಅದರೆ ಅದೊಂದು ದಿನ ಗರುಡನಿಗೇ ಜ್ಞಾನೋದಯವಾಗಿ ತನ್ನ ತಪ್ಪಿನ ಅರಿವಾಗಿ ಅದರ ಪ್ರಾಯಶ್ಚಿತ್ತಕ್ಕಾಗಿ ಅ ಸ್ಥಳದಲ್ಲಿಯೇ ಎಲಚೇ ಹಣ್ಣಿನ ಮರದಡಿಯಲ್ಲಿ ಘನ ಘೋರ ತಪಸ್ಸನ್ನು ಮಾಡಲು ಅನುವಾಗಿ ಆವನ ತಪಸ್ಸಿಗೆ ಯಾರಿಂದಲೂ ಭಂಗವಾಗದಂತೆ ತಡೆಯಲು ವಾಯುಪುತ್ರ ಹನುಮಂತನನ್ನು ಕೋರಿಕೊಳ್ಳುತ್ತಾನೆ. ಗರುಡನ ಕೋರಿಕೆಯಂತೆ ಹನುಮಂತನ ತನ್ನ ಅಭಯ ಹಸ್ತ ನೀಡಿ ಗರುಡನ ತಪಸ್ಸಿ ಭಂಗವಾಗದಂತೆ ಬೆಟ್ಟದ ತಪ್ಪಲಿನಲ್ಲಿ ಕಾವಲು ನಿಲ್ಲುತ್ತಾನೆ. ಅನೇಕ ದಿನಗಳ ತಪ್ಪಸ್ಸಿನಿಂದ ಸಂತೃಪ್ತಗೊಂಡ ಶ್ರೀರಂಗನಾಥ ಬೆಲ್ಲದ ಅಚ್ಚಿನ ರೂಪದಲ್ಲಿ ಆ ಸ್ಥಳದಲ್ಲಿ ಉದ್ಭವವಾಗಿ ಗರುಡನ ಶಾಪ ವಿಮೋಚನೆ ಮಾಡಿ ಸದಾ ಕಾಲ ತನ್ನ ಬಳಿಯಲ್ಲಿಯೇ ತನ್ನ ವಾಹನವನ್ನಾಗಿ ಮಾಡಿಕೊಳ್ಳುತ್ತಾನೆ. ಅಂದು ಬೆಲ್ಲದ ಅಚ್ಚಿನ ರೂಪದಲ್ಲಿ ಅಲ್ಲಿ ಉದ್ಭವವಾಗಿದ್ದ ಜಾಗದಲ್ಲಿಯೇ ಇಂದು ರಂಗನಾಥನ ಗುಡಿಯಾಗಿದೆ ಮತ್ತು ಅಲ್ಲಿಯೇ ಪಕ್ಕದಲ್ಲಿ ಗರುಡನ ವಿಗ್ರಹವೂ ಸ್ಥಾಪಿಸಲ್ಪಟ್ಟಿದೆ. ಅದೇ ರೀತಿ ಗರುಡನ ತಪಸ್ಸಿಗೆ ರಕ್ಷಕನಾಗಿದ್ದ ಆಂಜನೇಯನ ಗುಡಿಯನ್ನೂ ಬೆಟ್ಟದ ತಪ್ಪಲಿನಲ್ಲಿ ಕಟ್ಟುತ್ತಾರೆ. ಇಂತಹ ಮಹಿಮಯುಳ್ಳ ಆ ಸ್ಥಳ ಇಂದು ಮಾಹಿಮಾಪುರ ಎಂಬ ಹೆಸರಿನಿಂದ ಪ್ರಖ್ಯಾತವಾಗಿ ಅಲ್ಲಿಯ ರಂಗನಾಥನಿಗೆ ಮಹಿಮಾರಂಗ ಎಂಬ ಹೆಸರಾಗಿದೆ ಎಂದು ಆ ದೇವಸ್ಥಾನದ ಇತಿಹಾಸ ಮತ್ತು ಸ್ಥಳ ಪುರಾಣವನ್ನು ನಮ್ಮ ಮುಂದೆ ಬಿಚ್ಚಿಟ್ಟರು ಅಲ್ಲಿಯ ಅರ್ಚಕರು ಶ್ರೀಯುತ ಶ್ಯಾಮ್ ಸುಂದರ್.

WhatsApp Image 2019-07-06 at 9.02.33 PM (1)

ನಮ್ಮ ಜೊತೆಯಲ್ಲಿಯೇ ಬಂದಿದ್ದ ಸ್ಥಳಿಯ ಭಕ್ತಾದಿಗಳೊಂದಿಗೆ ಸಾಂಗೋಪಾಂಗವಾಗಿ ನಮ್ಮೆಲ್ಲರ ಸಂಕಲ್ಪ ಸಮೇತ ಅರ್ಚನೆ, ಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗವಾಯಿತು. ಪ್ರತಿ ನಿತ್ಯ ಬೆಟ್ಟದ ಮೇಲಿನ ಮಹಿಮಾರಂಗನಿಗೆ ಮತ್ತು ಗರುಡ ಹಾಗೂ ಬೆಟ್ಟದ ತಪ್ಪಲಿನ ಆಂಜನೇಯನಿಗೆ ಬೆಳಿಗ್ಗೆ ಒಂಬ್ಬತ್ತಕ್ಕೆ ಸರ್ವಾಲಂಕಾರ ಸಮೇತ ಪೂಜೆಗಳು ನಡೆಯುತ್ತವೆ. ಶನಿವಾರ ಮತ್ತು ಭಾನುವಾರ ವಿಶೇಷವಾದ ಅಲಂಕಾರ ಜೊತೆಗೆ ಮಧ್ಯಾಹ್ನ ಎರಡರವರೆಗೂ ದೇವಸ್ಥಾನ ತೆಗೆದಿರುತ್ತದೆ. ಪ್ರತೀ ವರ್ಷ ಮಾಘ ಮಾಸದ ಹುಣ್ಣಿಮೆಯ ಮಖಾ ನಕ್ಷತ್ರದ ದಿನದಂದು ಅಲ್ಲಿ ಅತ್ಯಂತ ವಿಜೃಂಭಣೆಯಿಂದ ಬ್ರಹ್ಮ ರಥೋತ್ಸವ ನಡೆಯುತ್ತದೆ. ಸುತ್ತಮುತ್ತಲಿನ ಸಾವಿರಾರು ಭಕ್ತಾದಿಗಳಲ್ಲದೇ ದೇಶ ವಿದೇಶದಲ್ಲಿ ನೆಲೆಸಿರುವ ಅನೇಕ ಭಕ್ತರು ಅಲ್ಲಿಗೆ ಬಂದು ಮಹಿಮಾರಂಗನ ದರ್ಶನ ಪಡೆದು ಪುನೀತರಾಗುತ್ತಾರೆ. ಎಂದೂ ತಿಳಿಸಿದರು. ಈ ದೇವರ ತೀರ್ಥ ಪ್ರಸಾದ ಸ್ವೀಕರಿಸುವುದರಿಂದ ಭಕ್ತಾದಿಗಳ ಹಲವು ರೀತಿಯ ಚರ್ಮ ರೋಗಗಳು ವಾಸಿಯಾಗುವುದಲ್ಲದೇ ಭಕ್ತಿಯಿಂದ ಈ ದೇವರಲ್ಲಿ ಹರಸಿಕೊಂಡ ದಂಪತಿಗಳಿಗೆ ಅತೀ ಶೀಘ್ರದಲ್ಲಿಯೇ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿ ನಾವು ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಐದಾರು ದಂಪತಿಗಳು ದೇವಸ್ಥಾನದಲ್ಲಿ ನಮಗೆ ಕಾಣ ಸಿಕ್ಕರು.

ಬೆಟ್ಟ ಗುಡ್ಡ, ದಟ್ಟವಾದ ಮರದ ನೆರಳು ರಮಣೀಯ ದೃಶ್ಯ. ಇಷ್ಟೆಲ್ಲಾ ಇದ್ದ ಮೇಲೆ ಅದು ಪ್ರಣಯಿಗಳ ನೆಚ್ಚಿನ ತಾಣವೂ ಆಗುವುದರಿಂದ ಸುತ್ತಮುತ್ತಲಿನ ಕಾಲೇಜಿನ ಕೆಲವು ಪ್ರಣಯ ಪಕ್ಷಿಗಳು ಅಲ್ಲಿ ಕಂಡು ಬಂದರೆ ಅಚ್ಚರಿ ಪಡುವಂತಿರಲಿಲ್ಲ. ಬೆಂಗಳೂರಿನ ಸಮೀಪದಲ್ಲಿ ಈ ರೀತಿಯಾಗಿ ಅತ್ಯಂತ ರಮಣೀಯವಾದ ಮತ್ತು ಇತಿಹಾಸ ಪ್ರಸಿದ್ದವಾದ ಕ್ಷೇತ್ರವನ್ನು ಸಮಯ ಮಾಡಿಕೊಂಡು ಖಂಡಿತವಾಗಿಯೂ ತಪ್ಪದೇ ಒಮ್ಮೆ ನೋಡಲೇ ಬೇಕಾಗಿದೆ. ಮಹಿಮಾ ರಂಗನಾಥ ಸ್ವಾಮಿ ಲಾರಿಯ ಮೇಲಿನ ತನ್ನ ಮಹಿಮಾರಂಗನ ಹೆಸರಿನ ಮೂಲಕ ಆತನ ದರ್ಶನಕ್ಕೆ ನನಗೆ ಪ್ರೇರಣೆಯಾದರೆ, ನಿಮೆಗೆಲ್ಲಾ ಈ ಲೇಖನದ ಮೂಲಕ ಆ ಮಹಿಮಾರಂಗನ ದರ್ಶನದ ಪ್ರಾಪ್ತಿ ಅತೀ ಶೀಘ್ರದಲ್ಲಿ ಆಗಲಿ ಎಂದು ಅದೇ ಮಹಿಮಾರಂಗನಲ್ಲಿ ಕೇಳಿಕೊಳ್ಳೋಣ.

ಏನಂತೀರೀ

 

mahimaranga

6 thoughts on “ಮಾಹಿಮಾಪುರದ ಮಹಿಮಾರಂಗ

  1. ತುಂಬಾ ಚೆನ್ನಾಗಿದೆ ಅಂದ್ರೇ ಎಲಚಿ (ಸಂಕ್ರಾಂತಿ ಹಣ್ಣು) ಮರದ ಫೋಟೋ ತೆಗೆದು ಪ್ರಕಟಿಸಬೇಕಿತ್ತು.

    Liked by 1 person

  2. ಸೊಗಸಾದ ವಿವರಣೆ, ಒಂದು ಸಹಲ್ ಏರ್ಪಡಿಸಿ ಹೋಗಿ ಅಡುಗೆಮಾಡಿ ಭಗವಂತನಿಗೆಅರ್ಪಿಸಿ ಪ್ರಸಾದ ಸ್ವೀಕರಿಸಿ, ಪುಣ್ಯಪಡೆಯೋಣ .

    Like

  3. ಇದು ನಮ್ಮೂರು ನಮ್ಮ ಹೆಮ್ಮೆ… ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತೆ, ಇದನ್ನು ತೇರು ಹಬ್ಬ ಅಂಥ ನು ಕರೆಯುತ್ತೇವೆ. ಪ್ರತಿ ಫೆಬ್ರವರಿ ಯಲ್ಲಿ ಹುಣ್ಣಿಮೆ ದಿನದಂದೇ ಜಾತ್ರೆ ನಡೆಯುತ್ತೆ, ಹುಣ್ಣಿಮೆಯ ಮೊದಲ ಹಿಂದಿನ ಮೊದಲ ವಾರವೇ ದನಿನ ಜಾತ್ರೆ ಕೂಡುತ್ತೆ, ಇದಾದ ನಂತ್ರ ಹುಣ್ಣಿಮೆಯಲ್ಲಿ ಜೋರಾಗಿ ಹಬ್ಬ ನಡೆಯುತ್ತೆ..

    Like

Leave a reply to ಶ್ರೀಕಂಠ ಬಾಳಗಂಚಿ Cancel reply