ಶ್ರಾವಣ ಶನಿವಾರ ಪಡಿ ಬೇಡುವುದು

ಶ್ರಾವಣ ಮಾಸದ ಶನಿವಾರಗಳಂದು, ಶ್ರೀನಿವಾಸಾಯ ಮಂಗಳಂ, ರಂಗನಾಥಾಯ ಮಂಗಳಂ, ಶ್ರೀ ವೆಂಕಟೇಶಾಯ ಮಂಗಳಂ ಇಲ್ಲವೇ ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ ಎಂದು ಜೋರಾಗಿ ಭಗವಂತನ ಧ್ಯಾನ ಮಾಡುತ್ತಾ ಸಣ್ಣ ವಯಸ್ಸಿನ ವಟುಗಳಿಂದ ಹಿರಿಯವಯಸ್ಸಿನವರ ಆದಿಯಾಗಿ ನೆರೆಹೊರೆಯವರ ಮನೆಯಲ್ಲಿ ಪಡಿ ಬೇಡುವುದು ನಮ್ಮಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ.

ಹಾಗಾದರೆ ಪಡಿ ಬೇಡುವುದು ಎಂದರೆ ಏನು? ಅದಕ್ಕಿರುವ ಹಿನ್ನಲೆಯೇನು? ಶ್ರಾವಣ ಮಾಸದಲ್ಲಿಯೇ ಪಡಿಯನ್ನು ಏಕೆ ಬೇಡುತ್ತಾರೆ? ಪಡಿ ಬೇಡಿದ್ದನ್ನು ಏನು ಮಾಡುತ್ತಾರೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.

ಶ್ರಾವಣ ಶನಿವಾರ ವಟುಗಳು ಕೆಲವೊಮ್ಮೆ ದೊಡ್ಡವರೂ ಕೂಡಾ, ಶುಭ್ರವಸ್ತ್ರದಲ್ಲಿ ಹಣೆಗೆ ಮೂರು ಎಳೆ ಇಲ್ಲವೇ ಒಂದು ಎಳೆ ನಾಮವನ್ನು ಹಚ್ಚಿಕೊಂಡು ಕೈಯಲ್ಲಿ ಪಂಚಪಾತ್ರೆ ಇಲ್ಲವೇ ಸಣ್ಣ ಚೊಂಬು ಅದಕ್ಕೂ ನಾಮ ಬಳಿದು, ಕೆಲವೊಂದು ಬಾರಿ ಅದಕ್ಕೆ ಹೂವಿನ ಮಾಲೆಯನ್ನು ಸುತ್ತಿ ಕೊಂಡು ಅಕ್ಕ ಪಕ್ಕದ ಮನೆಯ ಹೊಸಿಲಲ್ಲಿ ನಿಂತು ಕೊಂಡು  ಇಲ್ಲವೇ  ದೇವರ ಮನೆಯ ಮುಂದೆ ನಿಂತು ಶ್ರೀನಿವಾಸಾಯ ಮಂಗಳಂ, ರಂಗನಾಥಾಯ ಮಂಗಳಂ, ಶ್ರೀ ವೆಂಕಟೇಶಾಯ ಮಂಗಳಂ ಇಲ್ಲವೇ ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ ಎಂದು ಜೋರಾಗಿ ಕೂಗಿದಾಗ,  ಆ ಮನೆಯ ಒಡತಿ ಒಳಗಿನಿಂದ ಹಿಡಿ ಅಕ್ಕಿಯನ್ನು ಮೂರು ಬಾರಿ ಹಾಕಿ ಅದರಿಂದ ಕೆಲ ಅಕ್ಕಿಕಾಳನ್ನು ತಾನು ತಂದ ಪಾತ್ರೆಗೆ ಹಾಕಿಕೊಳ್ಳುತ್ತಾರೆ. ಅಕ್ಕಿಯ ಜೊತೆ ಬೆಲ್ಲ ಮತ್ತು ಕೈಲಾದಷ್ಟು ದಕ್ಷಿಣೆ ಹಾಕಿ ಕಳುಹಿಸುತ್ತಾರೆ.  ಇಡೀ  ಶ್ರಾವಣ ಮಾಸದ  ಶನಿವಾರದಂದು  ವೆಂಕಟರಮಣ ಸ್ವಾಮಿ, ರಂಗನಾಥ ಸ್ವಾಮಿ ಇಲ್ಲವೇ ನರಸಿಂಹ ಸ್ವಾಮಿಯ  ಒಕ್ಕಲಿನವರು ಕನಿಷ್ಠ ಪಕ್ಷ ಐದು ಮನೆಯಲ್ಲಾದರೂ ಈ ರೀತಿಯಾಗಿ .

ಸಾಧಾರಣವಾಗಿ ಸಣ್ಣ ಮಕ್ಕಳು ಈ ರೀತಿಯಾಗಿ ಪಡಿ ಬೇಡಲು ಅತ್ತು ಕರೆದು ಗೋಳಾಡಿದರೆ, ಇನ್ನು ಸ್ವಲ್ಪ ದೊಡ್ಡ  ವಯಸ್ಸಿನ ಮಕ್ಕಳು  ಪಡಿ ಬೇಡುವುದಕ್ಕೆ ಸಂಕೋಚ ಪಡುವುದೂ ಉಂಟು. ಅದಕ್ಕಾಗಿ ಹೆಚ್ಚಿನ ಸಮಯದಲ್ಲಿ ಸಣ್ಣ ಮಕ್ಕಳ ಜೊತೆ ತಂದೆ ಇಲ್ಲವೇ ತಾಯಿಯರು ಪಡಿ ಬೇಡಲು ಬಂದರೆ, ದೊಡ್ಡ  ವಯಸ್ಸಿನ ಮಕ್ಕಳು  ತಂದೆ ತಾಯಿಯರ ಭಯಕ್ಕೋ ಇಲ್ಲವೋ,  ಗದುರುವಿಕೆಯಿಂದಲೋ, ಒಲ್ಲದ ಮನಸ್ಸಿನಿಂದಲೇ ಬಂದು ಪಡಿ ಬೇಡುವುದನ್ನು ಕಾಣಬಹುದಾಗಿದೆ.

ಈ ರೀತಿಯಾಗಿ ಪಡಿ ಬೇಡಿ ತಂದ ಅಕ್ಕಿ ಬೆಲ್ಲ ಮತ್ತು ಹಣವನ್ನು ಜೋಪಾನವಾಗಿ ಎತ್ತಿಟ್ಟು  ಕಡೆಯ ಶ್ರಾವಣ ಶನಿವಾರದಂದು ಆ ಅಕ್ಕಿ ಮತ್ತು ಬೆಲ್ಲದಿಂದ ಪಾಯಸ ಇಲ್ಲವೇ ಸಿಹಿ ಹುಗ್ಗಿ, ಬೆಲ್ಲದನ್ನೋ ಮಾಡಿ ತಮ್ಮ ಮನೆ ದೇವರಿಗೆ ನೈವೇದ್ಯ ಮಾಡಿ ಎಲ್ಲರೂ ಅದನ್ನು ಪ್ರಸಾದ ರೂಪದಲ್ಲಿ ಮನೆಯವರೆಲ್ಲರೂ ಸೇವಿಸುತ್ತಾರೆ ಮತ್ತು ಇನ್ನು ಕಾಣಿಕೆ ರೂಪದಲ್ಲಿ ಸಂಗ್ರಹಿಸಿದ್ದ ಹಣವನ್ನು ಮುಡಿ ಕಟ್ಟಿ ಎತ್ತಿಟ್ಟು ತಮ್ಮ ಮನೆದೇವರ ದರ್ಶನಕ್ಕೆ ಹೋದಾಗ ಆ ದೇವಾಲಯದ ಹುಂಡಿಯಲ್ಲಿ ಭಕ್ತಿಯಿಂದ ಹಾಕಿ ಪಾವನರಾಗುತ್ತಾರೆ.

ಪಡಿ ಬೇಡುವುದರ ಮಹತ್ವ

 • ಪ್ರಥಮವಾಗಿ ಪಡಿ ಬೇಡುವುದರಿಂದ ಮಕ್ಕಳಲ್ಲಿನ  ಸಂಕೋಚ ಸ್ವಭಾವ ನೀಗುತ್ತದೆ ಮತ್ತು  ಕಷ್ಟದ ಪರಿಸ್ಥಿಯಲ್ಲಿ ಮಧುಕರಿವೃತ್ತಿ  (ಭಿಕ್ಷೆ  ಬೇಡಿಯಾದರೂ) ಜೀವನ ನಡೆಸಬಹುದು ಎಂಬುದನ್ನು  ಕಲಿಸುತ್ತದೆ.
 • ಮಕ್ಕಳಿಗೆ ತಾವು ತಿನ್ನುವ ಅಕ್ಕಿಯ  ಸಂಪಾದಿಸುವುದರ ಮಹತ್ವ ಮತ್ತು ಮತ್ತೊಬ್ಬರ ಮನೆಯಲ್ಲಿ ಭಿಕ್ಷೆ ಬೇಡುವ ಮೂಲಕ  ತಗ್ಗಿ ಬಗ್ಗಿ ನಡೆಯವುದನ್ನೂ ಮತ್ತು  ಕೀಳರಿಮೆಯನ್ನು ಹೋಗಲಾಡಿಸುತ್ತದೆ.
 • ಇನ್ನೂ ಭಿಕ್ಷೇ ನೀಡುವವರಿಗೂ ತಮ್ಮಲ್ಲಿರುವ ದವಸ ಧಾನ್ಯಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವ ಮನೋಭಾವವನ್ನು ಬೆಳೆಸುತ್ತದೆ ಮತ್ತು ಮೂರು ಬಾರಿ ಅಕ್ಕಿಯನ್ನು ಹಾಗಿ ಕಡೆಯಲ್ಲಿ ನಾಲ್ಕು ಕಾಳು ಅಕ್ಕಿಯನ್ನು ಆ ಪಡಿ ಬೇಡಿದ ಪಾತ್ರೆಯಿಂದ ತನ್ನ ಪಾತ್ರೆಗೆ ಹಾಕಿಕೊಳ್ಳುವುದರ ಮೂಲಕ ತಮ್ಮ ಮನೆಯಲ್ಲಿ ಸದಾಕಾಲವೂ ಧನಧಾನ್ಯಗಳು  ಆಕ್ಷಯವಾಗಲೀ ಎಂಬುದರ ಸಂಕೇತವಾಗಿದೆ.
 • ಇನ್ನು  ತಮ್ಮ ಮನೆದೇವರಿಗೆ  ಪಡಿ ಬೇಡುವಾಗ ಸಂಗ್ರಹಿಸಿದ ಹಣವನ್ನು  ಸಮರ್ಪಿಸಲು ವರ್ಷಕ್ಕೊಮ್ಮೆಯಾದರೂ ಹೋಗಿ ಬರುವಂತಾಗಲೀ ಎನ್ನುವ ಭಾವನೆಯೂ ಇದೆ.
 • ಸಾಮಾನ್ಯವಾಗಿ ವೈಷ್ಣವರಿಗೆ (ವಿಷ್ಣುವಿನ ಆರಾಧಕರು) ಶ್ರಾವಣಮಾಸ ಮುಖ್ಯವಾದರೇ, ಶೈವರಿಗೆ (ಶಿವಾರಾಧಕರಿಗೆ) ಕಾರ್ತೀಕ ಮಾಸ ಪ್ರಾಮುಖ್ಯವಾಗುತ್ತದೆ. ಹೇಳಿಕೇಳಿ ತಿರುಪತಿ ತಿಮ್ಮಪ್ಪ ಸಾಲಗಾರ. ಕುಬೇರನಿಂದ ಪಡೆದ ಸಾಲವನ್ನು ತೀರಿಸಲು ಕಲಿಯುಗದ ಅಂತ್ಯದ ವರೆಗೂ ಗಡುವು ಪಡೆದುಕೊಂಡಿದ್ದಾನೆ. ಹಾಗಾಗಿ ವಿಷ್ಣುವಿನ ಆರಾಧಕರು ಈ ರೀತಿಯಾಗಿ ಶ್ರಾವಣ ಮಾಸದಲ್ಲಿ ಪಡಿ ಬೇಡಿ ತಂದು ತಿರುಪತಿ ತಿಮ್ಮಪ್ಪನ ಹುಂಡಿಗೆ ಸಮರ್ಪಿಸುವ ಮೂಲಕ ಆತನ ಸಂಪತ್ತನ್ನು ಹೆಚ್ಚಿಸುತ್ತಾರೆ ಎಂದೂ ಹೇಳಲಾಗುತ್ತದೆ.

ಹಿಂದೆ ಸುಮಾರು 8 ವರ್ಷಕ್ಕೆಲ್ಲಾ ಗಂಡು ಮಕ್ಕಳಿಗೆ ಉಪನಯನವನ್ನು ಮಾಡಿ ನಂತರ ವಿಧ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸುತ್ತಿದ್ದರು. ಶಿಕ್ಷಣಾರ್ಥಿಗಳು ಗುರುಕುಲದಲ್ಲಿ ಅಧ್ಯಯನ ಮಾಡುತ್ತಾ ಅಕ್ಕ ಪಕ್ಕದ ಊರಿನಿಂದ ಕೇವಲ ಭಿಕ್ಷೆಯಿಂದಲೇ ಜೀವನ ಸಾಗಿಸಬೇಕಾಗಿತ್ತು. ಅಂತಹ ವಿಧ್ಯಾರ್ಥಿಗಳಿಗೆ ಮತ್ತು ಗುರುಗಳಿಗೆ ಗೃಹಸ್ಥರು ಧಾರಾಳವಾಗಿ ಭಿಕ್ಷೆ ನೀಡಿ ಪೋಷಿಸುತ್ತಿದ್ದರು. ಹಾಗಾಗಿ ಗುರುಕುಲಕ್ಕೆ ಕಳುಹಿಸುವ ಮುಂಚೆಯೇ ಚಿಕ್ಕ ವಯಸ್ಸಿನಿಂದಲೇ ಮದುಕರ ವೃತ್ತಿಯ ಸಂಕೋಚನ್ನು ನೀಗಿಸಲು ಮನೆಯಲ್ಲಿಯೇ ಈ ರೀತಿಯಾಗಿ ತರಬೇತಿ ನೀಡುವುದರ ಸಲುವಾಗಿಯೇ ಇಂತಹ ಪದ್ದತ್ತಿ ರೂಢಿಯಲ್ಲಿ ಬಂದಿರಬೇಕು ಎಂದು ನಮ್ಮ ಹಿರಿಯರೊಬ್ಬರ ಅಭಿಪ್ರಾಯ.

ಇನ್ನೂ ಶ್ರಾವಣ ಮಾಸದಲ್ಲಿಯೇ ಪಡಿ ಏಕೆ ಬೇಡಬೇಕು? ಎಂಬ ಎಂಬ ಪ್ರಶ್ನೆ ಬಂದಿತೆಂದರೆ, ಹೇಳೀ ಕೇಳಿ ಶ್ರಾವಣ ಮಾಸ ಹಬ್ಬದ ಮಾಸ. ಈ ತಿಂಗಳಿನಲ್ಲಿ ದಾನ ಮಾಡಿದರೆ ಹೆಚ್ಚು ಪುಣ್ಯ ಬರುತ್ತದೆ ಎಂಬ ನಂಬಿಕೆ ಇರುವುದರಿಂದ ಮತ್ತು ಗುರುಕುಲದ ವಿದ್ಯಾರ್ಥಿಗಳೂ ಬೇಡಿ ತಂದ ದವಸ ಧಾನ್ಯಗಳಿಂದ ವಿಜೃಂಭಣೆಯಿಂದ ಹಬ್ಬಗಳನ್ನು ಆಚರಿಸಬಹುದ್ದಾದ್ದರಿಂದ ವರ್ಷಕ್ಕೊಮ್ಮೆ ಶ್ರಾವಣ ಮಾಸದ ಶನಿವಾರದಂದು ಈ ಪಡಿ ಬೇಡುವ ಅಭ್ಯಾಸ ಆರಂಭವಾಗಿರಬಹುದೆಂದು ನನ್ನ ವಯಕ್ತಿಕ ಅಭಿಪ್ರಾಯ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ನಮಗೆ ದಯಮಾಡಿ ತಿಳಿಸಬೇಕಾಗಿ ಸವಿನಯ ಪ್ರಾರ್ಥನೆ.

ಅನೇಕ ಬಾರಿ ಹೇಳಿದಂತೆ ನಮ್ಮ ಹಿರಿಯರು  ರೂಢಿಗೆ ತಂದ ಮತ್ತು ಆಚರಿಸುತ್ತಿದ್ದ ಎಲ್ಲಾ ಹಬ್ಬ ಹರಿದಿನಗಳ ಹಿಂದೆಯೂ ಅನೇಕ ಗೂಡಾರ್ಥಗಳಿರುತ್ತವೆ. ನಾವುಗಳು ಅದನ್ನು ಸರಿಯಾಗಿ ಅರ್ಥೈಸಿಕೊಂಡು ಹಬ್ಬ ಹರಿದಿನಗಳನ್ನು  ಆಚರಿಸಿದಾಗ ಮಾತ್ರವೇ ಅದಕ್ಕೆ ಸಾರ್ಥಕತೆ ದೊರಕಿದಂತಾಗುತ್ತದೆ ಇಲ್ಲವೇ ಅವೆಲ್ಲವೂ ಕಾಟಾಚಾರಗಳಾಗಿ ಹೋಗಿ ಮುಂದೆ ಕೆಲವು ವರ್ಷಗಳ ನಂತರ ಈ ಎಲ್ಲಾ ಆಚರಣೆಗಳೂ ನಿಂತು ಹೋದರೂ ಆಚ್ಚರಿಯೇನಿಲ್ಲ. ಆದರೆ ಆ ರೀತಿಯಾಗದಂತೆ ನಮ್ಮ ಸಂಪ್ರದಾಯ ಮತ್ತು ಸಂಸ್ಕಾರಗಳನ್ನು ಜತನದಿಂದ ಕಾಪಾಡಿಕೊಂಡು ಹೋಗುವ ಜವಾಬ್ಧಾರಿ ನಮ್ಮ ಮೇಲಿದೆ.

ಏನಂತೀರೀ?

padi

10 thoughts on “ಶ್ರಾವಣ ಶನಿವಾರ ಪಡಿ ಬೇಡುವುದು

 1. Very nice aptly described step by step. Really your words used in Kannada shows your debt of knowledge. We wish you good luck . Keep Going all the best.

  Liked by 1 person

 2. ಇದರ ಬಗ್ಗೆ ನಾನು ಅರ್ಥ ಮಾಡಿಕೊಂಡಿರುವುದು ಹೀಗೆ.
  ಹಿಂದೆ 8 ವರ್ಷಕ್ಕೆಲ್ಲಾ ಉಪನಯನವನ್ನು ಮಾಡಿ ನಂತರ ವಿಧ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸುತ್ತಿದ್ದರು. ಶಿಕ್ಷಣಾರ್ತಿಯಾಗಿದ್ದಾಗ ಕೇವಲ ಭಿಕ್ಷೆಯಿಂದ ಜೀವನ ಸಾಗಿಸಬೇಕಾಗಿತ್ತು. ಗ್ರುಹಸ್ಥರು ವಿಧ್ಯಾರ್ಥಿ ಮತ್ತು ಗುರುಗಳಿಗೆ ಧಾರಾಳವಾಗಿ ಭಿಕ್ಷೆ ನೀಡಿ ಪೋಷಿಸುತ್ತಿದ್ದರು. ಗುರುಕುಲಕ್ಕೆ ಕಳುಹಿಸುವ ಮುಂಚೆಯೇ ಚಿಕ್ಕ ವಯಸ್ಸಿನಿಂದಲೇ ಇದರ ಬಗ್ಗೆ ಮನೆಯಲ್ಲಿ ತರಬೇತಿ ನೀಡುತ್ತಿದರು. ವರ್ಷಕ್ಕೂಮ್ಮೆ ಶ್ರಾವಣ ಮಾಸದ ಶನಿವಾರದಂದು ಆರಂಭವಾದ ಈ ಅಭ್ಯಾಸ ವಿಧ್ಯಾರ್ಥಿಯಾದಾಗ ಪ್ರತಿ ದಿನವೂ ಭಿಕ್ಷೆ ಬೇಡಬೇಕಾಗಿತ್ತು. ಹಾಗಾಗಿ ಪಡಿ ಬೇಡುವ ಪದ್ದತಿ ಬಂದದ್ದು. ಆದರೆ ಈಗಿನ ಕಾಲದಲ್ಲಿ ಇದು ಅರ್ಥವಿಲ್ಲದ್ದು.

  Liked by 1 person

 3. ಆಚರಣೆಯ ಬಗ್ಗೆ ಚೆನ್ನಾಗಿದೆ ಬರೆದಿದ್ದೀರಿ. ಶ್ರಾವಣ ಶನಿವಾರವನ್ನು ಯಾಯಿವಾರ ಎಂದೂ ಸಂಬೋಧಿಸುತ್ತಿದ್ದರು. ಇದರಿಂದ ಊಂಛ ವೃತ್ತಿ ಯ ಬಗ್ಗೆ ಅರಿವು ಮೂಡಿಸುವುದಷ್ಟೇ ಅಲ್ಲದೆ ಅಂದಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಗಳಿಸಬೇಕು ಎಂಬ ಸಂದೇಶ ಇರುವುದು ಕಂಡುಬರುತ್ತದೆ. ಅತಿಯಾದ ಶೇಖರಣೆ ಸಲ್ಲ ಎಂಬುದು ದೊಡ್ಡ ಸಂದೇಶ.

  Liked by 1 person

 4. I remember that in our childhood we use to this pratha. Now it is very rarely people follow. But it very nice article. Thanks for writing this. God bless you all and pray for more good work of your end. Om namah Narayan.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s