ನ್ಯಾಯಾಲಯಕ್ಕೆ ಹೋದರೆ ಅಲ್ಲಿ ವಕೀಲರು ಹೇಗೆ ವಾದ ಮಾಡುತ್ತಾರೆ ಎಂದು ನೋಡಿರುತ್ತೀರಿ. ಕೋರ್ಟ್‌ಗೆ ಹೋಗಿಲ್ಲವೆಂದರೆ, ಖಂಡಿತವಾಗಿಯೂ ಟಿ.ಎನ್. ಸೀತಾರಾಂ ಅವರ ಧಾರಾವಾಹಿಗಳಲ್ಲಾದರೂ ನೀವು ವಕೀಲರು ವಾದ ಮಾಡುವುದನ್ನು ನೋಡಿರುತ್ತೀರಿ. ಎಲ್ಲರೂ ವಿಚಾರಣೆ ಮುಗಿಯುವವರೆಗೂ ನಿಂತುಕೊಂಡೇ ತಮ್ಮ ವಾದವನ್ನು ನ್ಯಾಯಾಧೀಶರ ಮುಂದಿಡುತ್ತಾರೆ.
ನಿಜ ಜೀವನದಲ್ಲೂ ಸ್ವಲ್ಪ ಹೀಗೆ, ಕೋರ್ಟ್‌ನಲ್ಲಿ ಬೇರೆ ಪ್ರಕರಣ ನಡೆಯುತ್ತಿರುವಾಗಷ್ಟೇ ಕೂರಬಹುದು. ಇಲ್ಲವಾದರೆ ನಿಂತೇ ಇರಬೇಕು. ಕೆಲವೊಮ್ಮೆ ಇಂಥ ಪ್ರಕರಣಗಳಲ್ಲಿ ವಾದಗಳು ಹೇಗಿರುತ್ತದೆಂದರೆ, ನ್ಯಾಯಾಧೀಶರು ಶುರು ಮಾಡಿ ಎಂದು ಹೇಳುವುದೇ ತಡ, 2-3 ತಾಸು ಹೇಗೆ ಹೋಗುತ್ತದೆ ಎಂಬುದೇ ತಿಳಿಯುವುದಿಲ್ಲ. ಹಾಗೆ ಸಮಯ ಕಳೆದುಹೋಗಿರುತ್ತದೆ.
ಅಯೋಧ್ಯೆ ವಿಚಾರಣೆಯಲ್ಲೂ ಅಷ್ಟೇ, ತಾಸುಗಳೇ ಆಗುತ್ತಿತ್ತು. ಆದರೂ 92ರ ಯುವಕ ಪರಾಶರನ್ ಮಾತ್ರ ನಿಂತೇ ವಾದ ಮಾಡುತ್ತಿದ್ದರು. ಹೆಚ್ಚೆಂದರೆ ಆಗಾಗ ನೀರು ಕುಡಿಯುತ್ತಿದ್ದರಂತೆ. ಸೋಜಿಗ ಎಂದರೆ ನ್ಯಾಯಾಧೀಶರೆಲ್ಲ ಇವರಿಗಿಂತ ಸಣ್ಣ ವಯಸ್ಸಿನವರು, ವೃದ್ಧಾಪ್ಯಕ್ಕೆ ಕಾಲಿಡುತ್ತಿರುವವರು. ಹಾಗಾಗಿಯೇ ಏನೋ ಇವರ ಮೇಲೆ ಕರುಣೆ ಹಾಗೂ ಅಪಾರ ಪಾಂಡಿತ್ಯಕ್ಕೆ ಗೌರವಿಸುವಂತೆ ಭಾರತದ ಮುಖ್ಯ ನಾಯಮೂರ್ತಿ ಮಿಸ್ಟರ್ ಪರಾಶರನ್ ನೀವು ಕುಳಿತುಕೊಂಡೇ ವಾದ ಮಾಡಬಹುದಲ್ಲವೇ? ಎಂದು ಕೇಳಿದಾಗ, ಅದಕ್ಕೆ ಪರಾಶರನ್ ಅವರು ಮೈ ಲಾರ್ಡ್, ನೀವು ಸಹೃದಯಿಗಳು. ನನ್ನ ವಯಸ್ಸನ್ನು ನೋಡಿ ಕುಳಿತುಕೊಂಡು ವಾದ ಮಾಡಲು ಸೂಚಿಸಿದ್ದೀರಿ. ಆದರೆ ನಿಂತುಕೊಂಡೇ ವಾದ ಮಂಡಿಸುವುದು ಇಲ್ಲಿರುವ ಸಂಪ್ರದಾಯ ಹಾಗೂ ಪದ್ಧತಿ. ಹಾಗಾಗಿ ನಾನು ಇಲ್ಲಿನ ಸಂಪ್ರದಾಯಗಳನ್ನು ಗೌರವಿಸುತ್ತೇನೆ ಮತ್ತು ಎಷ್ಟೇ ಹೊತ್ತಾದರೂ ನಿಂತು ಕೊಂಡೇ ವಾದ ಮಂಡಿಸುತ್ತೇನೆ ಎಂದು ಹಸನ್ಮುಖಿಗಳಾಗಿ ಹೇಳುತ್ತಾರೆ. ಹಾಗೆ ಹೇಳುವಾಗ ಅವರ ಮನಸ್ಸಿನಲ್ಲಿ ತಾನು ಇಲ್ಲಿ ವಾದ ಮಾಡುತ್ತಿಲ್ಲ ಬದಲಾಗಿ ರಾಮ ಸೇವೆ ಮಾಡುತ್ತಿದ್ದೇನೆ ಎಂಬ ಭಾವ ಅವರದ್ದಾಗಿದೆ. ಇದೇ ಕೇಸಿನಲ್ಲಿ ಮುಸ್ಲಿಮರ ಪರ ವಾದ ಮಾಡುತ್ತಿದ್ದ ಮತ್ತು ಇವರಿಗಿಂತಲೂ ಬಹಳ ಚಿಕ್ಕ ವಯಸ್ಸಿನ ರಾಜೀವ್ ಧವನ್ ಅವರೂ ಸಹ, ತನಗೆ ನಿತ್ಯವೂ ಬಂದು ನಿಂತು ವಾದ ಮಾಡುವುದಕ್ಕಾಗುವುದಿಲ್ಲ, ಹಾಗಾಗಿ, ದಿನ ನಿತ್ಯದ ವಿಚಾರಣೆ ಬೇಡ ಎಂದು ಮನವಿ ಮಾಡಿದ್ದನ್ನು ಸುಪ್ರೀಂ ಅದನ್ನು ನಿರಾಕರಿಸಿತ್ತು ಎಂಬುದು ಇಲ್ಲಿ ಗಮನಾರ್ಹವಾದ ವಿಷಯವಾಗಿದೆ.
ಇಂತಹ ಪರಾಶರನ್ ಅವರು ತಮಿಳುನಾಡಿನ ಶ್ರೀರಂಗಂ ಜಿಲ್ಲೆಯ ವಕೀಲರಾದ ಶ್ರೀ ಕೇಶವ ಅಯ್ಯಂಗಾರ್ ಮತ್ತು ಶ್ರೀಮತಿ ರಂಗನಾಯಕಿ ದಂಪತಿಗಳಿಗೆ 9 ಅಕ್ಟೋಬರ್ 1927 ರಂದು ಜನಿಸಿದ ಪರಾಶರನ್ ಚಿಕ್ಕವಯಸ್ಸಿನಿಂದಲೂ ಆಟ ಪಾಠಗಳಲ್ಲಿ ಚುರುಕಾಗಿದ್ದು, ದೊಡ್ಡವರಾದಾಗ, ತಮ್ಮ ತಂದೆಯಂತೆಯೇ ವಕೀಲೀ ವೃತ್ತಿಯನ್ನೇ ಮಾಡಲು ಮುಂದಾಗಿ BL ಮಾಡುವಾಗಲೇ, ಶ್ರೀ ನ್ಯಾಯಮೂರ್ತಿ ಸಿ.ವಿ. ಕುಮಾರಸ್ವಾಮಿ ಶಾಸ್ತ್ರಿ ಸಂಸ್ಕೃತ ಪದಕ ಮತ್ತು ನ್ಯಾಯಮೂರ್ತಿ ಶ್ರೀ ವಿ. ಭಾಷ್ಯಂ ಅಯ್ಯಂಗಾರ್ ಹಿಂದೂ ಕಾನೂನಿನಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಲ್ಲದೇ, ಬಾರ್ ಕೌನ್ಸಿಲ್ ಪರೀಕ್ಷೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಶ್ರೀ ಕೆ.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಪದಕವನ್ನೂ ಗಳಿಸಿದಂತಹ ಬುದ್ಧಿವಂತರಾಗಿರುತ್ತಾರೆ.
ಆರಂಭದಲ್ಲಿ ತಮಿಳುನಾಡಿನಲ್ಲೇ ತಮ್ಮ ವಕೀಲೀ ವೃತ್ತಿಯನ್ನು ಆರಂಭಿಸಿ ಸುಮಾರು 1958ರ ಹೊತ್ತಿಗೆ ದೆಹಲಿಯ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದ್ದಲ್ಲದೇ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾಗಾಂಧಿಯವರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. 1976 ರಲ್ಲಿ ತುರ್ತುಪರಿಸ್ಥಿತಿಯ ಸಂಧರ್ಭದಲ್ಲಿ ತಮಿಳುನಾಡಿನ ಅಡ್ವೊಕೇಟ್ ಜನರಲ್ ಆಗಿದ್ದಲ್ಲದೇ ನಂತರ ಇಂದಿರಾ ಗಾಂಧಿಯವರ ಅಡಿಯಲ್ಲಿ ಭಾರತದ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು. ಇಂದಿರಾಗಾಂಧಿಯವರ ಅಕಾಲಿಕ ಮರಣಾನಂತರ, 1983ರಿಂದ 1989 ರ ರಾಜೀವ್ ಗಾಂಧಿಯವರ ಅಂತ್ಯದವರೆಗೂ ಭಾರತದ ಅಟಾರ್ನಿ ಜನರಲ್ ಆಗಿದ್ದರು. ಇವರ ದಕ್ಷ ಸೇವೆಗಾಗಿ 2003 ರಲ್ಲಿ ಪದ್ಮಭೂಷಣ ಮತ್ತು 2011 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಅಂದಿನ ಕಾಂಗ್ರೇಸ್ ಸರ್ಕಾರ ನೀಡಿತ್ತಲ್ಲದೇ, ಜೂನ್ 2012 ರಲ್ಲಿ, ಅವರು ಆರು ವರ್ಷಗಳ ಅವಧಿಗೆ ರಾಜ್ಯಸಭೆಯ ನಾಮ ನಿರ್ದೇಶನ ಸಾಂಸದರಾಗಿ ಆಯ್ಕೆಯಾಗಿದ್ದ ಹೆಗ್ಗಳಿಕೆ ಪರಾಶರನ್ ಅವರದ್ದು. 2014ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದು ಕೊಂಡೇ, ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸಮರ್ಥಿಸಿಕೊಂಡಿದ್ದರು.
ವೃತ್ತಿ ಮತ್ತು ಪ್ರವೃತ್ತಿಯನ್ನು ಚನ್ನಾಗಿ ಅರಿತಿರುವ ಪರಾಶರನ್ ಅವರು ಕೆಸರಿನಲ್ಲೇ ಹುಟ್ಟಿ ಬೆಳೆದರೂ ಕೊಂಚವೂ ಕೆಸರನ್ನು ಸೋಗಿಸಿಕೊಳ್ಳದ ಕಮಲದಂತೆ ಕಾಂಗ್ರೇಸ್ ಪಕ್ಷ ಮತ್ತು ಅಂದಿನ ಸರ್ಕಾರದ ಜೊತೆಗೆ ಉತ್ತಮ ಒಟನಾಟ ಹೊಂದಿದ್ದರೂ, ರಾಮ ವಿಷಯ ಬಂದಾಗ ಅವರ ನಿಲುವು ರಾಮನ ಪರವಾಗಿಯೇ ಇರುತ್ತಿತ್ತು ಎಂಬುದಕ್ಕೆ ರಾಮ ಸೇತುವೆ ಯೋಜನೆಯೇ ಉತ್ತಮ ಉದಾಹರಣೆ. ಈ ವಿಚಾರದಲ್ಲಿ ರಾಮನ ಅಸ್ಥಿತ್ವವನ್ನೇ ಪ್ರಶ್ನಿಸಿದ್ದ ಅಂದಿನ ಸರ್ಕಾರದ ಪರ ವಾದಿಸುವುದಕ್ಕೆ ಅವರನ್ನು ಕೇಳಿಕೊಂಡರೂ ಅದನ್ನು ಖಡಾಖಂಡಿತವಾಗಿ ನಿರಾಕರಿಸಿ ರಾಮನ ಪರವಾಗಿ ಸರ್ಕಾರದ ವಿರುದ್ಧವೇ ಹೋರಾಡಿ ರಾಮ ಕಾಲ್ಪನಿಕ ಅಲ್ಲಾ. ರಾಮನೇ ಆ ಸೇತುವೆಯನ್ನು ಕಪಿ ಸೈನ್ಯದ ಮೂಲಕ ಕಟ್ಟಿಸಿದ ಎಂಬುದನ್ನು ಸ್ಕಂದ ಪುರಾಣದ ಉದಾಹರಣೆಗಳೊಂದಿಗೆ ವಿವರಿಸಿ ಸರ್ಕಾರವನ್ನು ಮಣಿಸಿದಾಗ, ಸರ್ಕಾರದೊಂದಿಗೆ ಅಷ್ಟೊಂದು ಅನಿನಾಭಾವ ಸಂಬಂಧ ಹೊಂದಿರುವವರು ಹೀಗೇಕೆ ಮಾಡಿದಿರಿ? ಎಂದು ಪತ್ರಕರ್ತರು ಕೇಳಿದಾಗ, ಅಂದು ರಾಮ ಸೇತುವೆ ಕಟ್ಟಿದಾಗ ಅಳಿಲು ಮಾಡಿದ ಸೇವೆಯನ್ನೇ ಇಂದು ನಾನು ಅದೇ ರಾಮನಿಗಾಗಿ ಮಾಡಿದ್ದೇನೆ ಅದರಲ್ಲಿ ಯಾವ ಹೆಚ್ಚುಗಾರಿಕೆ ಇಲ್ಲಾ ಎಂದು ಉತ್ತರಿಸಿ ಪತ್ರಕರ್ತರ ಬಾಯಿ ಮುಚ್ಚಿಸಿದ್ದರು.
ಅದೇ ರೀತಿಯಲ್ಲಿ ಶಬರಿಮಲೆಯ ಸನ್ನಿಧಾನಕ್ಕೆ ಸ್ತ್ರೀಯರನ್ನು ಅನುವು ಮಾಡಿಕೊಡುವಾಗಲೂ ಅವರು ದೇವಾಲಯದ ಪರವಾಗಿಯೇ ನಿಂದು ಮಾಡಿದ ವಾದಗಳು ಎಷ್ಟು ಮೊನಚಾಗಿರುತ್ತಿದ್ದವೆಂದರೆ, ನ್ಯಾಯಮೂರ್ತಿಗಳು ಸಹಾ ಅಚ್ಚರಿಯಿಂದ ನೋಡುತ್ತಿದ್ದರಂತೆ. ಅದೊಮ್ಮೆ ವಾದ ಮಾಡುವ ಭರದಲ್ಲಿ, ಪ್ರಾರ್ಥನೆ ಮಾಡುವ ಮಾನಸಿಕ ಹಕ್ಕಿನ ವಿರುದ್ಧವಾಗಿ ತಪ್ಪು ಪ್ರಶ್ನೆಗಳನ್ನು ಕೇಳುತ್ತಿದ್ದೀರೇನು?’ ಎಂದು ಆರಂಭಿಸಿದ ಪರಾಶರನ್, ಯಾರಾದರೂ ಒಬ್ಬ ವ್ಯಕ್ತಿ ನನ್ನ ಬಳಿ ಬಂದು ನಾನು ಪ್ರಾರ್ಥನೆ ಮಾಡುವಾಗ ಸಿಗರೇಟ್ ಸೇದಬಹುದೇ? ಎಂದು ಕೇಳಿದರೆ, ಮುಲಾಜಿಲ್ಲದೇ ಆತನ ಕೆನ್ನೆಗೆ ಫಟೀರ್ ಎಂದು ಏಟು ಕೊಡಲು ನಾನು ಹಿಂಜರಿಯುವುದಿಲ್ಲ. ಆದರೆ ಅದೇ ವ್ಯಕ್ತಿ, ನಾನು ಸಿಗರೇಟ್ ಸೇದುವಾಗ ಪ್ರಾರ್ಥಿಸಲೇ? ಎಂದು ಕೇಳಿದರೆ ಖಂಡಿತವಾಗಿ ಮಾಡಬಹುದು ಎಂದು ಆತನನ್ನು ಅಭಿನಂದಿಸುತ್ತೇನೆ. ಹಾಗಾಗಿ ಯದ್ಭಾವಂ ತದ್ಭವತಿ ಎನ್ನುವಂತೆ ನಾವು ಕೇಳುವ ಸರಿಯಾದ ಪ್ರಶ್ನೆಗೆ ಅನುಗುಣವಾಗಿ ಉತ್ತರ ಸಿಗುತ್ತದೆ. ತಪ್ಪಾದ ಪ್ರಶ್ನೆಗೆ ತಪ್ಪು ಉತ್ತರವೇ ಸಿಗುತ್ತದೆ ಎಂದು ನ್ಯಾಯಮೂರ್ತಿಗಳಿಗೆ ಹೇಳಿದಾಗ ನ್ಯಾಯಾಧೀಶರೂ ತಲೆ ತೂಗಿಸಿದ್ದರಂತೆ.
ಅದೇ ಶಬರಿಮಲೆ ಕೇಸಿನಲ್ಲಿಸ್ವಾಮಿ ಅಯ್ಯಪ್ಪ ನೈಷ್ಠಿಕ ಬ್ರಹ್ಮಚರ್ಯವನ್ನು ಅನುಸರಿಸುತ್ತಿದ್ದ ಎಂಬುದನ್ನು ವಿಸ್ತೃತವಾಗಿ ತಿಳಿಸುವ ಸಲುವಾಗಿ ನೈಷ್ಠಿಕ ಬ್ರಹ್ಮಚರ್ಯ ಎಂದರೇನು ಎಂಬುದನ್ನು ಸುಂದರಾಕಾಂಡದ ಶ್ಲೋಕಗಳ ಮೂಲಕ ನ್ಯಾಯಾಲಯದಲ್ಲಿ ವಾದ ಮಾಡಿ ಧರ್ಮ ಶಾಸ್ತ್ರಗಳಲ್ಲಿ ತಮರಿಗಿರುವ ಜ್ಞಾನ ಅಪಾರವಾದದ್ದು ಎಂಬುದನ್ನು ಪರೋಕ್ಶವಾಗಿ ಪ್ರಚುರ ಪಡಿಸಿದ್ದರು. ಹಾಗಾಗಿಯೇ ಕಾನೂನು ವಲಯದಲ್ಲಿ ಇವರನ್ನು ಬಹಳ ಪ್ರೀತಿಯಿಂದ ಪಿತಾಮಹ ಎಂದೇ ಸಂಬೋಧಿಸುತ್ತಾರೆ.
ಪರಾಶರನ್ ಅವರಿಗೆ ತಮ್ಮ ವಕೀಲೀ ವೃತ್ತಿಯ ಬಗ್ಗೆ ಯಾವ ಪರಿಯಾದ ಅಭಿಮಾನ ಇತ್ತೆಂದರೆ ಅವರೇ ಅನೇಕ ಬಾರಿ ಹೇಳಿಕೊಂಡಂತೆ, ನಾನು ಎರೆಡೆರಡು ಮದುವೆಯಾಗಿ ಭಾರೀ ತಪ್ಪು ಮಾಡಿದ್ದೇನೆ. 1949ರಲ್ಲಿ ನಾನು ಸರೋಜಾಳ ಜತೆ ಮೊದಲ ಬಾರಿ ವಿವಾಹವಾದೆ. ನಂತರ ನಾನು ವಕೀಲನಾಗಿ ವೃತ್ತಿಯನ್ನು ಆರಂಭಿಸಿದ ಒಂದು ವರ್ಷದ ನಂತರ ಕಾನೂನು ಎಂಬುವವಳೊಂದಿಗೆ ಎರಡನೇ ವಿವಾಹವಾದೆ. ಎಲ್ಲರಿಗೂ ಎರಡನೇ ಹೆಂಡತಿಯ ಮೇಲೇ ಪ್ರೀತಿ ಜಾಸ್ತಿ ಎನ್ನುವಂತೆ, ನನಗೂ ನನ್ನ ಮೊದಲ ಹೆಂಡತಿಗಿಂತಲೂ ಕಾನೂನಿನ ಮೇಲೇ ಹೆಚ್ಚು ಪ್ರೀತಿ ಇದ್ದಿದ್ದಕ್ಕೇ ಮೊದಲಿನವಳಿಗಿಂತ ಎರಡನೇಯವಳ ಜೊತೆಯೇ ಹೆಚ್ಚು ಕಾಲ ಕಳೆಯುತ್ತಿದ್ದೆ ಎಂಬುದನ್ನು ಅವರ ಎಲ್ಲಾ ಸಹೋದ್ಯೋಗಿಗಳು ಒಪ್ಪಿಕೊಳ್ಳುತ್ತಾರೆ. ಮತ್ತು ಅತ್ಯಂತ ಗೌರವವನ್ನು ಸೂಚಿಸುತ್ತಾರೆ.
ಪರಾಶರನ್ ಅವರು ನಿಷ್ಠೆಯಿಂದ ಗಂಟೆ ಗಟ್ಟಲೆ ವೇದಾಧ್ಯಯನ ಮಾಡಿದವರು ಹಾಗಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ರಾಕ್ಷಸರು ಎಂದರೂ ತಪ್ಪಾಗದು. ಹಿಡಿದ ಕೆಲಸವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವವ ವರೆಗೂ ಊಟ ತಿಂಡಿಯ ಚಿಂತೆಯನ್ನೇ ಮರೆತು ನಿರಂತರವಾಗಿ 18 ಗಂಟೆಗಳ ಕಾಲ ಕೆಲಸ ಮಾಡುವಂತಹ ಕ್ಷಮತೆಯನ್ನು ಹೊಂದಿದ್ದಾರೆ. ಕಾನೂನಿನಲ್ಲಿ ಹೆಚ್ಚಾಗಿ ಸಂವಿಧಾನದ ಬಗ್ಗೆಯೇ ಹೆಚ್ಚಿನ ಅಧ್ಯಯನ ನಡೆಸಿರುವ ಕಾರಣ, ಅವರ ಪಾಂಡಿತ್ಯಕ್ಕೆ ಎಲ್ಲರೂ ತಲೆ ಬಾಗುತ್ತಾರೆ. ಹಾಗಾಗಿಯೇ ಇವರ ಬಗ್ಗೆಯೇ Law and Dharma: A tribute to the Pitamaha of the Indian Bar ಎಂಬ ಪುಸ್ತಕವನ್ನೂ ಬರೆದಿರುವುದು ಇವರ ಜ್ಞಾನಕ್ಕೆ ಹಿಡಿದ ಕನ್ನಡಿ.
ಹಿಂದೂ ಧರ್ಮ ಮತ್ತು ಶ್ರೀರಾಮನ ಬಗ್ಗೆ ಅವರಿಗಿದ್ದ ಅಪಾರವಾದ ಶ್ರದ್ದೆಯಿಂದಾಗಿ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯರಾಗಿರುವಾಗಲೇ, 2019 ರಲ್ಲಿ ಕೇಂದ್ರ ಸರ್ಕಾರವು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಲು ಕೇಳಿಕೊಂಡಾಗ ಅದನ್ನು ಸಂತೋಷದಿಂದ ಒಪ್ಪಿ ಕೊಂಡ ಪರಾಶರನ್ ಅಯೋಧ್ಯೆ ಭೂ ವಿವಾದದ ಪ್ರಕರಣದ ಪರವಾಗಿ ಯಶಸ್ವಿಯಾಗಿ ಹೋರಾಡಿದರು. ಪರಾಶರನ್ ಅವರಿಗೆ ರಾಮ ಮಂದಿರದ ಪರ ತುಡಿತ ಹೇಗಿತ್ತು ಎಂದರೆ, ಮುಸಲ್ಮಾನರ ಪರ ವಾದಿಸುತ್ತಿದ್ದ ವಕೀಲರಾದ ಶ್ರೀ ರಾಜೀವ್ ಧವನ್ ಅವರು ತನಗೆ ದಿನ ನಿತ್ಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಈ ವಾದವನ್ನು ತಿಂಗಳು ಬಿಟ್ಟು ತಿಂಗಳು ನಡೆಸಬೇಕೆಂದು ನ್ಯಾಯಾಧೀಶರನ್ನು ಕೋರಿಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ ಆ ವಕೀಲರಿಗೆ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣದೇ ಸುಮ್ಮನೇ ಮುಂದು ವರಿಸಿಕೊಂಡು ಸುಧೀರ್ಘವಾದ ಕಾಲ ಹರಣ ಮಾಡುವುದು ಅವರ ದುರುದ್ದೇಶವಾಗಿರುತ್ತದೆ. ಅದಾಗಲೇ ಐದು ಶತಮಾನಗಳು ಕಳೆದು ಹೋಗಿದೆ. ಹೀಗೆಯೇ ಇನ್ನು ಮುಂದೆಯೂ ಶತಮಾನಗಳವರೆಗೆ ಈ ಪ್ರಕರಣ ಸಾಗುತ್ತಿರಲಿ ಎಂಬುದು ಅವರ ಆಶಾವಾದವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಪರಾಶರನ್ ಅವರು, ಬ್ರದರ್, ನನಗೀಗ 92 ವರ್ಷ ನಾನು ಇನ್ನೆಷ್ಟು ವರ್ಷಗಳ ಕಾಲ ಬದುಕಿರುತ್ತೇನೋ ಕಾಣೇ, ನಾನು ಸಾಯುವ ಮುನ್ನ ನನ್ನ ಕಡೆಯ ಆಸೆ ಏನೆಂದರೆ, ಈ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗ ಬೇಕು ಮತ್ತು ಅಯೋಧ್ಯೆಯಲ್ಲಿ ಭವ್ಯವಾದ ಪ್ರಭು ಶ್ರೀರಾಮನ ಮಂದಿರವನ್ನುನೋಡುವಂತಾಗ ಬೇಕು ಎಂದಾಗಿದೆ. ಹಾಗಾಗಿ ನನ್ನ ಮೇಲೆ ನಿಮಗೆ ಗೌರವ ಇದ್ದಲ್ಲಿ ದಯವಿಟ್ತು ಸಹಕರಿಸಿ ಎಂದಾಗ ರಾಜೀವ್ ಧವನ್ ಸಹಾ ಮರು ಮಾತಾನಾಡದೇ ಒಪ್ಪಿಕೊಂಡಿದ್ದರಂತೆ.
ರಾಮನೇ ಸುಳ್ಳು ಎನ್ನುವ ಇಲ್ಲವೇ ರಾಮ ಲಂಪಟ ಎನ್ನುವ ಸ್ವಘೋಷಿತ ಬುದ್ದಿ ಜೀವಿ ಭಗವಾನನಂತವರು ಪ್ರತಿನಿತ್ಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತಹ ದೈನೇಸಿ ಸ್ಥಿತಿಯಲ್ಲಿ ಇರಬೇಕಾದರೆ, ಈ 97ರ ವೃದ್ಧರು ಚಿರಯೌವನಿಗರೂ ನಾಚುವಂತೆ ಇದ್ದಾರೆ ಅದು ಖಂಡಿತವಾಗಿ ಪ್ರಭುರಾಮನ ದಯೇ ಎಂದರೂ ತಪ್ಪಾಗದು. ತ್ರೇತಾಯುಗದಲ್ಲಿ ರಾಮನಿಗೆ ನಿಸ್ವಾರ್ಥದಿಂದ ಬೆಂಬಲವಾಗಿ ನಿಂತಿದ್ದು ಹನುಮಂತ. ಈ ಕಲಿಯುಗದಲ್ಲಿ ಅದೇ ಹನುಮಂತನೇ ಪರಾಶರನ್ ಅವರ ವೇಷದಲ್ಲಿ ಬಂದು ಪ್ರಭು ಶ್ರೀರಾಮನಿಗೆ ಭವ್ಯವಾದ ಮಂದಿರವನ್ನು ಕಟ್ಟಿಸುವಂತಾಗಲು ಸಹಕರಿಸಿದ್ದಾನೆ ಎಂದು ಜನರು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದೆನಿಸುತ್ತದೆ ಅಲ್ವೇ? ವಯಸ್ಸು 60+ ಆಗುತ್ತಿದ್ದಂತೆಯೇ ಸ್ವಂತ ಮಕ್ಕಳೇ ನೆನಪಿಲ್ಲದಿರುವಷ್ಟು ಮರೆವು ಬರುವಂತಹ ಇಂದಿನ ಕಾಲದಲ್ಲಿ ಪರಾಶರನ್ 97 ವರ್ಷವಾದರೂ ಯಾವೊಂದನ್ನೂ ಮರೆಯದೇ, ವೇದ ಶಾಸ್ತ್ರಗಳಲ್ಲಿರುವ ಶ್ಲೋಕವನ್ನೂ ನೆನೆದು ರಾಮ ಮಂದಿರಕ್ಕಾಗಿ ನ್ಯಾಯಾಲಯದಲ್ಲಿ ಗಂಟೆ ಗಟ್ಟಲೆಗಳ ಕಾಲ ನಿಂತುಕೊಂಡೇ ವಾದಿಸಿ ಗೆಲುವನ್ನು ತಂದುಕೊಟ್ಟಿದ್ದಾರೆ. ಈ 90+ಇಳೀವಯಸ್ಸಿನಲ್ಲಿಯೂ ರಾಮ ಮಂದಿರಕ್ಕಾಗಿ ಹಾತೊರೆಯುತ್ತಿರುವ ಶ್ರೀ ಲಾಲಕೃಷ್ಣ ಅಡ್ವಾಣಿ, ಶ್ರೀ ಮುರಳೀ ಮನೋಹರ ಜೋಷಿ ಮತ್ತು ಶ್ರೀ ಪರಾಶರನ್ ಅವರಂತಹವರು ಖಂಡಿತವಾಗಿಯೂ ಕಲಿಯುಗದ ಹನುಮಂತನ ವಿವಿಧ ರೂಪ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ಮಾತು ಹೊರಡುತ್ತಿಲ್ಲ. ಜೈ ಶ್ರೀ ರಾಮ್!