ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ

pej.jpegಮೊನ್ನೆ ಪೇಜಾವರ ಶ್ರೀಗಳು ವಿಧಿವಶರಾದಾಗ ಅವರ ಬಗ್ಗೆಯೇ ನಮ್ಮ ಸ್ನೇಹಿತರೆಲ್ಲಾ ಸೇರಿ ಅವರ ಸಾನಿಧ್ಯದ ನೆನಪನ್ನು ಮೆಲುಕು ಹಾಕುತ್ತಿದ್ದಾಗ ಶ್ರೀ ನಮ್ಮ ಜಾಲಹಳ್ಳಿಯ ವಿನಾಯಕ ಸೇವಾ ಮಂಡಳಿಯ ಗಣೇಶೋತ್ಸವಕ್ಕೆ ಬಂದದ್ದು ಅಲ್ಲಿ ನಮಗೆ ಮಾರ್ಗದರ್ಶನ ಮಾಡಿದ್ದರ ಕುರಿತು ಮಾತನಾಡುತ್ತಿದ್ದಾಗ, ಅದೇ ಸಮಯದಲ್ಲಿ ಆದಿಚುಂಚನಗಿರಿಯ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಗಳ ಕುರಿತಂತೆಯೂ ವಿಷಯ ಪ್ರಸ್ತಾಪವಾಗಿ ಅವರು ಜಾಲಹಳ್ಳಿಗೆ ಬಂದಿದ್ದಾಗ ನಡೆದ ಒಂದು ವಿಶಿಷ್ಟ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡದ್ದು ಸದ್ಯದ ಪರಿಸ್ಥಿತಿಗೆ ಪ್ರಸ್ತುತವಾಗಿರುವ ಕಾರಣ ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇನೆ.

balagaಸರಿ ಸುಮಾರು ನಲವತ್ತೈದು ವರ್ಷಗಳಿಂದ ಜಾಲಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಪ್ರತೀ ವರ್ಷವೂ ಗಣೇಶೋತ್ಸವ, ರಾಮನವಮಿ ಮತ್ತು ಶಿವರಾತ್ರಿ ಹಬ್ಬಗಳನ್ನು ಬಹಳ ಅದ್ದೂರಿಯಾಗಿ ಮತ್ತು ಅಷ್ಟೇ ಅರ್ಥಪೂರ್ಣವಾಗಿ ಯಾವುದೇ ರೀತಿಯ ಗೌಜ ಗದ್ದಲವಿಲ್ಲದೇ ಶಾಸ್ತ್ರೋಕ್ತವಾಗಿ ಆಚರಿಸಿಕೊಂಡು ಬರುತ್ತಿರುವುದು ಜಾಲಹಳ್ಳಿಯ ವಿನಾಯಕ ಸೇವಾ ಮಂಡಳಿಯ ಹೆಗ್ಗಳಿಕೆಯಾಗಿದೆ. ಗಣೇಶೋತ್ಸವದಂದು ನಾಡಿನ ಹಿರಿಯ ಗಣ್ಯರು ಮತ್ತು ಮಠಾಧೀಶರನ್ನು ಆಹ್ವಾನಿಸಿ ಅವರ ಹಿತವಚನಗಳನ್ನು ಮತ್ತು ಮಾರ್ಗದರ್ಶನವನ್ನು ನೆರೆದಿದ್ದ ಭಕ್ತಾದಿಗಳಿಗೆ ಮಾಡಿಸುವುದು ಅಲ್ಲಿ ನಡೆಸಿಕೊಂಡು ಬಂದಿರುವ ಸಂಪ್ರದಾಯ. ಅದೇ ರೀತಿಯಂತೆ ಕೆಲವು ವರ್ಷಗಳ ಹಿಂದೆ ಆದಿಚುಂಚನಗಿರಿಯ ಅಂದಿನ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಬಾಲಗಂಗಾಧರ ಸ್ವಾಮಿಗಳ ಆಶೀರ್ವಚನಕ್ಕಾಗಿ ಜಾಲಹಳ್ಳಿಗೆ ಕರೆದುಕೊಂಡು ಬಂದಿದ್ದರು. ಸಂಜೆಯ ಕಾರ್ಯಕ್ರಮಕ್ಕೆ ಮಧ್ಯಾಹ್ನವೇ ಬಂದಿದ್ದ ಕಾರಣ ಅವರರಿಗೆ ಅಲ್ಲಿಯೇ ಊರಿನ ಒಬ್ಬ ಸ್ಥಿತಿವಂತರ ಮನೆಯಲ್ಲಿ ಊಟ ವಿಶ್ರಾಂತಿಗಳ ವ್ಯವಸ್ಥೆಯನ್ನು ಮಾಡಲಾಗಿತ್ತು ಮತ್ತು ನಮ್ಮ ಸ್ನೇಹಿತರಿಗೆ ಅವರನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ಧಾರಿಯನ್ನು ವಹಿಸಲಾಗಿತ್ತು.

ಸ್ವಾಮಿಗಳು ಬಂದಾಗ ಪೂರ್ಣಕುಂಭ ಸ್ವಾಗತದ ಮೂಲಕ ಬರಮಾಡಿಕೊಂಡು ಅವರಿಗೆ ಊರಿನ ಹಿರಿಯರ ಮನೆಯಲ್ಲಿ ಪಾದಪೂಜೆ ನಡೆದ ನಂತರ ಊಟ ಮತ್ತು ವಿಶ್ರಾಂತಿಗೆ ಸ್ವಲ್ಪ ಸಮಯವಿದ್ದ ಕಾರಣ, ಸ್ವಾಮಿಗಳು ಲೋಕಾಭಿರಾಮವಾಗಿ ಬಂದವರನ್ನೆಲ್ಲಾ ಪರಿಚಯ ಮಾಡಿಸಲು ನಮ್ಮ ಸ್ನೇಹಿತರಿಗೆ ಸೂಚಿಸಿದರು. ಅದರಂತೆ ಅಲ್ಲಿ ನೆರೆದಿದ್ದ ಕಾರ್ಯಕರ್ತರು ಮತ್ತು ಭಕ್ತಾದಿಗಳನ್ನು ಪರಿಚಯಿಸಿದ ನಂತರ ಕಡೆಯದಾಗಿ ಆ ಮನೆಯ ಹಿರಿಯರನ್ನು ಪರಿಚಯಿಸಿದರು. ಎಂದಿನ ರೂಢಿಯಂತೆ ಮತ್ತು ನಮ್ಮ ಸಂಪ್ರದಾಯದಂತೆ ಮತ್ತೊಮ್ಮೆ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿದ ಆ ಮನೆಯ ಹಿರಿಯರು, ನಾವೂ ಕೂಡ ನಿಮ್ಮ ಮಠದ ಒಕ್ಕಲಿನವರೇ. ಬಹಳಷ್ಟು ಬಾರಿ ನಿಮ್ಮ ಆಶ್ರಮಕ್ಕೆ ಬಂದು ನಿಮ್ಮ ಆಶೀರ್ವಾದಗಳನ್ನು ಪಡೆದು ಪಾವನರಾಗಿದ್ದೇವೆ. ಇಂದು ಖುದ್ದಾಗಿ ನಮ್ಮ ಮನೆಗೇ ಬಂದು ನಮ್ಮ ಆತಿಥ್ಯ ಸ್ವೀಕರಿಸುತ್ತಿರುವುದು ನಮ್ಮ ಪೂರ್ವ ಜನ್ಮದ ಸುಕೃತ ಎಂದು ತಮ್ಮ ಅನಿಸಿಕೆಗಳನ್ನು ಸ್ವಾಮಿಗಳ ಮುಂದೆ ಹಂಚಿ ಕೊಂಡರು. ಸ್ವಾಮಿಗಳೂ ಅದನ್ನು ಮಂದಸ್ಮಿತರಾಗಿ ಆಲಿಸಿ, ಜೀವನಕ್ಕೆ ಏನು ಮಾಡಿಕೊಂಡಿರುವಿರೀ ಎಂದು ವಿಚಾರಿಸಿದರು. ಆದಕ್ಕೆ ಆ ಮನೆಯ ಹಿರಿಯರು, ನಮ್ಮ ಪೂರ್ವಜರು ಮಾಡಿದ ಆಸ್ತಿಗಳು ಇವೆ. ಕೆಲವು ಮನೆ ಮತ್ತು ಅಂಗಡಿ ಮುಗ್ಗಟ್ಟುಗಳಿಂದ ಬಾಡಿಗೆ ಬರುತ್ತದೆ ಮತ್ತು ನಮ್ಮದೇ ಒಂದು ಶಾಲೆಯೂ ಇದೆ ಎಂದರು. ಶಾಲೆ ಎಂದ ತಕ್ಷಣವೇ ಸ್ವಾಮಿಗಳ ಕಿವಿ ಚುರುಕಾಗಿ, ವಿದ್ಯಾದಾನ ಮಹಾದಾನ ಬಹಳ ಒಳ್ಳೆಯ ಕೆಲಸ ಮಾಡುತ್ತಿರುವಿರಿ. ಅಂದ ಹಾಗೆ ನಿಮ್ಮ ಶಾಲೆಯ ಹೆಸರೇನು? ಎಂದು ಪ್ರಶ್ನಿಸಿದಾಗ, ಆ ಮನೆಯ ಹಿರಿಯರು, ಸ್ವಾಮಿಗಳ ಹೊಗಳಿಕೆಯಿಂದ ಸಂತೃಷ್ಟರಾಗಿ, ಅಷ್ಟೇ ವಿನಮ್ರದಿಂದ ಹೆಸರಾಂತ ಕ್ರಿಶ್ಚಿಯನ್ ಸಂತೆಯೊಬ್ಬಳ ನೆನಪಿಸುವ ತಮ್ಮ ಶಾಲೆಯ ಹೆಸರನ್ನು ಹೇಳುತ್ತಿದ್ದಂತೆಯೇ, ಮಂದಸ್ಮಿತರಾಗಿದ್ದ ಸ್ವಾಮಿಗಳ ಮುಖ ಕಪ್ಪಿಟ್ಟಿತು. ಕೂಡಲೇ ನಮ್ಮ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ನಮ್ಮ ಸ್ನೇಹಿತರತ್ತ ತಿರುಗಿ, ನಮಗೆ ಬೇರೆಯ ಮನೆಯಲ್ಲಿ ವ್ಯವಸ್ಥೆ ಮಾಡಲು ಸಾಧ್ಯವೇ ನೋಡಿ ಎಂದು ಖಡಾಖಂಡಿತವಾಗಿ ಹೇಳಿದಾಗ ಎಲ್ಲರಿಗೂ ಒಂದು ಕ್ಷಣ ದಿಗ್ಭ್ರಮೆ. ಸ್ವಲ್ಪ ಕೋಪದಿಂದಲೇ ಮಾತು ಮುಂದುವರೆಸಿದ ಸ್ವಾಮಿಗಳು ಅಲ್ಲಾ ಸ್ವಾಮೀ, ನಮ್ಮ ಧರ್ಮದಲ್ಲಿ ಮೂವತ್ತು ಮೂರು ಕೋಟಿ ದೇವತೆಗಳು ಇದ್ದಾಗ ಅದರಲ್ಲಿ ಯಾವುದಾದರೂ ಒಂದು ಹೆಸರನ್ನು ಇಡುವ ಬದಲು ಅದ್ಯಾವುದೋ ಕ್ರೈಸ್ತ ಸನ್ಯಾಸಿನಿಯ ಹೆಸರನ್ನು ಇಟ್ಟಿರುವುದು ನಮಗೆ ಸ್ವಲ್ಪವೂ ಹಿಡಿಸಲಿಲ್ಲ ಎಂದು ನಿಷ್ಟೂರವಾಗಿಯೇ ಹೇಳಿದರು. ಸ್ವಾಮಿಗಳ ಕೋಪಕ್ಕೆ ಸ್ವಲ್ಪ ತತ್ತರಿಸಿದ ಆ ಮನೆಯ ಹಿರಿಯರು, ಇಲ್ಲಾ ಸ್ವಾಮಿಗಳೇ. ಶಾಲೆಗಳಿಗೆ ಮತ್ತು ಆಸ್ಪತ್ರೆಗಳಿಗೆ ಕ್ರಿಶ್ಚಿಯನ್ ಮೂಲದ ಹೆಸರನ್ನು ಇಡದಿದ್ದರೆ ಯಾರೂ ಬರುವುದಿಲ್ಲ. ಹಾಗಾಗಿ ಬಹುತೇಕ ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳ ಆಡಳಿತ ಮಂಡಳಿಯವರು ಹಿಂದೂಗಳೇ ಆಗಿದ್ದರೂ ವ್ಯಾವಹಾರಿಕ ಲಾಭಕ್ಕಾಗಿ ಕ್ರಿಶ್ವಿಯನ್ ಹೆಸರನ್ನು ಇಡುವುದು ನಡೆದುಕೊಂಡ ಬಂದ ಪದ್ದತಿಯಾಗಿದೆ. ಹಾಗಾಗಿ ನಮ್ಮನ್ನು ಅನ್ಯಥಾ ಭಾವಿಸದೇ, ದಯವಿಟ್ಟು ನಮ್ಮನ್ನು ಮನ್ನಿಸಬೇಕು ಎಂದು ಕೇಳಿಕೊಂಡರು. ತಮ್ಮ ವ್ಯಾವಹಾರಿಕ ಲಾಭಕ್ಕಾಗಿ ತಮ್ಮ ಧರ್ಮವನ್ನೇ ಅನುಸರಿಸದವರ ಮನೆಯಲ್ಲಿ ಆತಿಥ್ಯ ಪಡೆಯಲು ನಮ್ಮ ಮನಸ್ಸು ಒಪ್ಪುವುದಿಲ್ಲ ಎಂದು ಹೇಳಿದ ಸ್ವಾಮಿಗಳನ್ನು ಅಲ್ಲೇ ಮತ್ತೊಬ್ಬರ ಮನೆಯಲ್ಲಿ ಉಳಿದುಕೊಂಡು ಸಂಜೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ ಕಥೆಯನ್ನು ನಮ್ಮ ಸ್ನೇಹಿತರು ನಮ್ಮೊಂದಿಗೆ ಹಂಚಿಕೊಂಡರು.

ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವು ಅಲ್ಪಸಂಖ್ಯಾತ ಧರ್ಮವಾಗಿದ್ದು, ನಮ್ಮ ಒಟ್ತು ಜನಸಂಖ್ಯೆಯ 2.3% ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಭಾರತ ಪ್ರಪಂಚದ ಎರಡನೇ ಅತೀ ದೊಡ್ಡ ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಕಾರಣ, ಈ 2.3% ಎಂಬ ಅಂಕಿ ಅಂಶಗಳಿಂದಲೇ ಸರಿ ಸುಮಾರು 3,04,52,000 ಭಾರತೀಯರು ಕ್ರೈಸ್ತಮತವನ್ನು ಅನುಸರಿಸುತ್ತಾರೆ ಎನ್ನಬಹುದು. ಈ ಸಂಖ್ಯೆ ಕ್ರಿಶ್ಚಿಯನ್ ಧರ್ಮಾಧಾರಿತ ಯೂರೋಪಿನ ಸುಮಾರು ಇಪ್ಪತ್ತು-ಮೂವತ್ತು ರಾಷ್ಟ್ರಗಳ ಜನಸಂಖ್ಯೆಗೆ ಸರಿಸಮಾನವಾಗುತ್ತದೆ ಎಂದರೂ ತಪ್ಪಾಗಲಾರದು.

ಭಾರತಕ್ಕೆ ಕ್ರೈಸ್ತ ಮತವು ಸೇಂಟ್ ಕೇರಸ್ (ಭಾರತದಲ್ಲಿ ಮಾರ್ಥೋಮಾ ಎಂದು ಕರೆಯಲ್ಪಡುವ) ಆಧುನಿಕ ಕೇರಳದ ಪುರಾತನ ಬಂದರು ಮುಜೈರಿಸ್ (ಆಧುನಿಕ-ಕೊಡುಂಗಲ್ಲೂರ್)ನ ಮೂಲಕ ಪ್ರವೇಶವಾಯಿತು. ಹೀಗೆ ಬಂದವರನ್ನು ಅಲ್ಲಿನ ಸ್ಥಳೀಯರು ಆತ್ಮೀಯವಾಗಿಯೇ ಸ್ವಾಗತಿಸಿ ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಟ್ಟರು. ಹಾಗೆ ಬಂದವರೂ ಕೂಡಲೇ ಅಲ್ಲೊಂದು ಶಿಲುಬೆಯನ್ನು ನೆಟ್ಟು ಸ್ಥಳೀಯ ಭಾಷೆಯನ್ನು ಕಲಿತು ಅವರಿಗೆ ತಮ್ಮ ಕ್ರಿಶ್ಚಿಯನ್ ಧರ್ಮದ ಬಗ್ಗೆ ಬೋಧಿಸ ತೊಡಗಿದರೂ ಮತ್ತು ರೋಗಿಗಳನ್ನು ತಮ್ಮ ಔಷದೋಪಚಾರಗಳ ಮೂಲಕ ಗುಣಪಡಿಸತೊಡಗಿದರು. ಅಂದು ಹಿಂದೂ ಧರ್ಮದಲ್ಲಿದ್ದ ಜಾತಿ ಪದ್ದತಿ ಮತ್ತು ಅಸ್ಪೃಷ್ಯತೆಯನ್ನೇ ಎತ್ತಿ ತೋರಿಸುತ್ತಾ ನೀವೆಲ್ಲರೂ ದೇವರ ಮಕ್ಕಳು ನಿಮ್ಮ ಸೇವೆಗಾಗಿಯೇ ಯೇಸು ಪ್ರಭು ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆ ಎಂದು ಮರುಳು ಮಾಡುತ್ತಾ ಎಲ್ಲರ ಕೊರಳಿನಲ್ಲಿಯೂ ಶಿಲುಬೆಯ ಸರವನ್ನು ಏರಿಸಿ ಸದ್ದು ಗದ್ದಲವಿಲ್ಲದೇ ಸ್ಥಳೀಯರನ್ನು ಕ್ರೈಸ್ತ ಮತಕ್ಕೆ ಮತಾಂತರಗೊಳಿಸತೊಡಗಿದರು.

15 ಮತ್ತು 16 ನೇ ಶತಮಾನದಲ್ಲಿ, ಪೋರ್ಚುಗೀಸ್ ವಸಾಹತುಗಾರರು ಗೋವಾಕ್ಕೆ ಮತ್ತು ಕೇರಳದ ಹತ್ತಿರ ಬಂದು ನೆಲೆಸತೊಡಗಿದಾಗ ಈಗಾಗಲೇ ಅಲ್ಲಿ ಸ್ಥಾಪಿಸಲಾದ ಕ್ರಿಶ್ಚಿಯನ್ ವಸಾಹತು ಕಂಡು ಅವರು ಆಶ್ಚರ್ಯಚಕಿತರಾಗಿ ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯರು ಹೇಳಿದ್ದೂ ಹಾಲು ಅನ್ನ ಎನ್ನುವಂತೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿ ಆ ವಸಾಹತುಗಾರರು . ಹೆಚ್ಚಿನ ಸಂಖ್ಯೆಯಲ್ಲಿ ಯುರೋಪಿಯನ್ ಕ್ರಿಶ್ಚಿಯನ್ ಮಿಷನರಿಗಳನ್ನು ಭಾರತಕ್ಕೆ ಕರೆತಂದು ಇಲ್ಲಿನ ಜನರಲ್ಲಿ ಒಗ್ಗಟ್ಟಿಲ್ಲದ್ದನೇ ಬಂಡವಾಳ ಮಾಡಿಕೊಂಡು ದೇಶಾದ್ಯಂತ ತಮ್ಮ ಜಾಲವನ್ನು ವಿಸ್ತರಿಸಿಕೊಂಡು ನಾನಾ ರೀತಿಯ ಆಮಿಷಗಳನ್ನು ಜನರಿಗೆ ಒಡ್ಡುತ್ತಾ ಸ್ಥಳೀಯರನ್ನು ತಮ್ಮ ರೋಮನ್ ಕ್ಯಾಥೊಲಿಕ್ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುತ್ತಾ ಹೋದರು. ಅದರಲ್ಲೂ ಈಶಾನ್ಯ ರಾಜ್ಯಗಳ ಬುಡಕಟ್ಟಿನ ಜನರನ್ನು ಬಹಳ ಬೇಗ ಮರಳು ಮಾಡಿ ಅ ಭಾಗವನ್ನು ಬಹುಬೇಗ ಆಕ್ರಮಿಸುತ್ತಾ ಹೋದರು. ಆದಾದ ನಂತರ ಬಂದ ಈಸ್ಟ್ ಇಂಡಿಯಾ ಕಂಪನಿ ನಮ್ಮ ಆಚರಣೆಗಳು, ನಂಬಿಕೆಗಳು, ಶಿಕ್ಷಣ ಪದ್ದತಿ, ಗುಡಿಕೈಗಾರಿಕೆ, ಕೃಷಿ ಪದ್ದತಿ ಎಲ್ಲವನ್ನೂ ಛಿದ್ರ ಛಿದ್ರ ಮಾಡಿ ಸಂಪೂರ್ಣ ಪಾಶ್ಚಾತ್ಯೀಕರಣಗೊಳಿ ಅದಾಗಲೇ ಮೊಗಲರ ಧಾಳಿಯಿಂದ ತತ್ತರಿಸಿ ಹೋದರೂ ಇನ್ನೂ ಹಿಂದೂಸ್ಥಾನವಾಗಿಯೇ ಇದ್ದ ನಮ್ಮ ದೇಶದಲ್ಲಿ ಎಲ್ಲಾ ಕಡೆಯಲ್ಲೂ ಚರ್ಚುಗಳನ್ನು ಸ್ಥಾಪಿಸಿ, ನಾನಾರೀತಿಯ ಆಮಿಷವೊಡ್ಡಿ, ಬೈಬಲ್ ಹಂಚುತ್ತಾ ಜನರನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡುತ್ತಾ ಹಿಂದೂಸ್ಥಾನವನ್ನು ಜಾತ್ಯಾತೀತ ಭಾರತ ರಾಷ್ಟ್ರವನ್ನಾಗಿ ಪರಿವರ್ತಿಸಲು ಬಹುತೇಕ ಯಶಸ್ವಿಯಾಗಿ ಹೋದರು.

ಇಷ್ಟೆಲ್ಲಾ ವಿಚಾರಗಳನ್ನು ಓದಿದ ನಂತರ ನಿಮಗೆ ನಾನೇಕೆ ಈ ವಿಷಯವನ್ನು ಇಷ್ಟು ಕೂಲಂಕುಶವಾಗಿ ಪ್ರಸ್ತಾಪಿಸುತ್ತಿದ್ದೇನೆ ಎಂಬ ಅರ್ಥವಾಗುತ್ತಿದೆ ಎಂದು ಭಾವಿಸುತ್ತೇನೆ. ತನ್ನನ್ನು ತಾನು ಒಕ್ಕಲಿಗರ ಪ್ರಭಲ ನಾಯಕ, ಶ್ರೀ ಬಾಲಗಂಗಾಧರ ಸ್ವಾಮಿಗಳ ಪರಮ ಅನುಯಾಯಿ ಎಂದು ಹೇಳಿಕೊಳ್ಳುವ ರಾಜಕೀಯ ನಾಯಕರೊಬ್ಬರು ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟು ತಮ್ಮ ಪಕ್ಷದ ಅಧಿನಾಯಕಿ(ಕ್ರೈಸ್ತ ಧರ್ಮಿಣಿ) ಯನ್ನು ಸಂಪ್ರೀತ ಗೊಳಿಸಲು ಕನಕಪುರರದ ಹಾರೋಬೆಲೆಯ ಕಪಾಲೀಬೆಟ್ಟ ಎಂಬ ಸರ್ಕಾರಿ ಅಧಿಸಾಮ್ಯದ ಗೋಮಾಳದ ಪ್ರದೇಶವನ್ನು ಯಕಚ್ಚಿತ ಬೆಲೆಗೆ ಖರೀದಿಸಿ ಮೂರ್ತಿ ಪೂಜೆಯನ್ನು ವಿರೋಧಿಸುವ ಧರ್ಮಕ್ಕೆ ಸಂಸ್ಥಾಪಕನಾದ ಏಸು ವಿಶ್ವದಲ್ಲೇ ಅತೀ ಎತ್ತರದ ಏಸು ಕ್ರಿಸ್ತನ ಪ್ರತಿಮೆಯನ್ನು ಸ್ಥಾಪಿಸಲು ಹೊರಟಿರುವುದು ನಮ್ಮ ಧರ್ಮಕ್ಕೆ ಮಾರಕವಾಗಿದೆ.

ಆ ನಾಯಕರೇ ಹೇಳಿ ಕೊಳ್ಳುವ ಪ್ರಕಾರ ಹಾರೋಬೆಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ಶೇ 95ರಷ್ಟು ಕ್ರೈಸ್ತ ಮತದ ಅನುಯಾಯಿಗಳಿದ್ದು ಅವರಿಗಾಗಿಯೇ ಜಾತ್ಯಾತೀತದಲ್ಲಿ ನಂಬಿಕೆ ಇಟ್ಟು ಈ ಪ್ರತಿಮೆಯನ್ನು ನಿರ್ಮಾಣ ಮಾಡಲು ಸಹಾಯ ಮಾಡುತ್ತಿದ್ದೇನೆ ಎಂದು ಹೋದ ಬಂದ ಕಡೆಯಲ್ಲೆಲ್ಲಾ ಹೇಳಿ ಕೊಂಡು ತಿರುಗಾಡುತ್ತಿದ್ದಾರೆ. ಕೇವಲ ಚರ್ಚುಗಳನ್ನು ಕಟ್ಟಿಯೇ ಈಗಾಗಲೇ ಶೇ 95ರಷ್ಟು ಕ್ರೈಸ್ತ ಮತದ ಅನುಯಾಯಿಗಳನ್ನಾಗಿ ಪರಿವರ್ತಿಸಿರುವ ಜನಾ ಈ ರೀತಿಯಾಗಿ ಅತಿದೊಡ್ಡ ಪ್ರತಿಮೆ ನಿರ್ಮಾಣ ಮಾಡಿ ಇನ್ನೂ ಕೆಲವೇ ಕೆಲವು ವರ್ಷಗಳಲ್ಲಿ ಇಡೀ ಕನಕಪುರ ಕ್ಷೇತ್ರವನ್ನೇ ಕ್ರೈಸ್ತೀಕರಣ ಮಾಡಿಬಿಡಬಹುದು ಎನ್ನುವುದನ್ನು ಅವರ ಅಂಕಿ ಅಂಶಗಳೇ ಪುರಾವೆ ಒದಗಿಸುತ್ತವೆ. ಇಡೀ ಪ್ರಪಂಚದಲ್ಲಿ ಅತ್ಯಂತ ಪುರಾತನವಾದ ಧರ್ಮವೆಂದರೆ ಸನಾತನ ಹಿಂದೂ ಧರ್ಮ ನಮ್ಮ ಧರ್ಮಕ್ಕೆ ಇಡೀ ಪ್ರಪಂಚದಲ್ಲಿ ಇರುವುದು ಒಂದೇ ರಾಷ್ಟ್ರ ಅದು ನಮ್ಮ ಹಿಂದೂಸ್ಥಾನ. ಸದ್ಯಕ್ಕೆ ನಮ್ಮದೇಶದಲ್ಲಿ ಶೇ80 ರಷ್ಟು ಹಿಂದೂಗಳಿದ್ದೇವೆ. ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ ಎಂಬ ಆಧಾರದಲ್ಲಿ ಈ ರೀತಿಯಾಗಿ ನಮ್ಮವರೇ ನಮ್ಮ ಧರ್ಮವನ್ನು ಮರೆತು ಅನ್ಯಧರ್ಮೀಯರಿಗೆ ರತ್ನಗಂಬಳಿಯನ್ನು ಹಾಸಿಕೊಡುತ್ತಾ ಹೋದರೆ ಇನ್ನೂ ಕೆಲವೇ ಕೆಲವು ವರ್ಷಗಳಲ್ಲಿ ಆಮೀಷಗಳಿಂದಲೋ ಅಥವಾ ಬಲಾತ್ಕಾರದಿಂದಲೂ ಮತಂತಾರವಾಗುತ್ತಾ ನಮ್ಮ ದೇಶದಲ್ಲಿಯೇ ನಾವೇ ಅಲ್ಪಸಂಖ್ಯಾತರಾಗುವುದರಲ್ಲಿ ಸಂದೇಹವೇ ಇಲ್ಲ.

ಈ ರೀತಿಯಾಗಿ ಹೇಳುತ್ತಿದ್ದೇನೆ ಎಂಬ ಕಾರಣಕ್ಕೆ ನಾನು ಅನ್ಯಧರ್ಮೀಯರ ವಿರೋಧಿಯಲ್ಲ. ನಾನಾ ಕಾರಣಗಳಿಂದಾಗಿ ಈಗಾಗಲೇ ಧರ್ಮಪರಿವರ್ತಿತರಾಗಿರುವ ಎಲ್ಲಾ ಭಾರತೀಯರಿಗೂ ಇಲ್ಲಿ ವಾಸಿಸುವ ಹಕ್ಕಿದೆ ಮತ್ತು ಅವರ ನೆಚ್ಚಿನ ಧರ್ಮವನ್ನು ಆಚರಿಸಿಕೊಂಡು ಹೋಗುವುದಕ್ಕೆ ನಮ್ಮದೇನೂ ಅಭ್ಯಂತರವೂ ಇಲ್ಲಾ ಅಕ್ಷೇಪಣೆಯೂ ಇಲ್ಲ. ಏಕೆಂದರೆ ಇಡೀ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದಲ್ಲಿ ನಾವೆಂದೂ ಯಾರ ಮೇಲೂ ಧರ್ಮಾಧಾರಿತವಾಗಿ ಅತಿಕ್ರಮಣ ಮಾಡೇ ಇಲ್ಲ ಮತ್ತು ಬಲವಂತದಿಂದ ಯಾರನ್ನೂ ಮತಾಂತರ ಮಾಡಿದ ಉದಾಹರಣೆ ಇಲ್ಲವೇ ಇಲ್ಲ ಎನ್ನುವುದೇ ನಮ್ಮ ಹೆಮ್ಮೆಯ ವಿಷಯವಾಗಿದೆ. ಅನ್ಯಧರ್ಮೀಯರಿಗೆ ಪ್ರಪಂಚಾದ್ಯಂತ ನೂರಾರು ತಮ್ಮದೇ ಧರ್ಮಾಧಾರಿತ ದೇಶಗಳು ಇರುವಾಗ ನಮ್ಮ ಹಿಂದೂಸ್ಥಾನವನ್ನು ಈ ರೀತಿಯಾಗಿ ಆಮೀಷಗಳಿಂದ, ಬಲವಂತದಿಂದ ಮತ್ತು ನಮ್ಮಲ್ಲಿರುವ ಕೆಲ ಧರ್ಮದ್ರೋಹಿಗಳ ತೆವಲಿನಿಂದಾಗಿ ದೇಶದ ಐಕ್ಯತೆಯನ್ನು ಮತ್ತೊಮ್ಮೆ ಧರ್ಮಾಧಾರಿತವಾಗಿ ವಿಭಜಿಸಲು ಹೊರಟಿರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಸಂದರ್ಭ ಬಂದಿದೆ. ಚಿನ್ನದ ಸೂಜಿ ಎಂದು ಹೇಗೆ ಅದರಿಂದ ಕಣ್ಣನ್ನು ಚುಚ್ಚಿಕೊಳ್ಳುವುದಿಲ್ಲವೂ ಹಾಗೆಯೇ ಧರ್ಮ ಸಹಿಷ್ಣುತೆ ಮತ್ತು ಜಾತ್ಯಾತೀತತೆ ಎಂಬ ಹೆಸರಿನಲ್ಲಿ ನಮ್ಮ ಹಿಂದೂಸ್ಥಾನವನ್ನು ಛಿದ್ರಗೊಳಿಸಲು ಹೊರಟಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ಮಟ್ಟಹಾಕಲು ಎಲ್ಲರೂ ಒಗ್ಗೂಡುವ ಸಂದರ್ಭ ಬಂದಿದೆ. ಹಾಗಾಗಿ ಒಗ್ಗಟ್ಟಿನಲ್ಲಿ ಛಲವಿದೇ ಮತ್ತು ಬಲವಿದೆ ಎಂಬುದನ್ನು ತೋರಿಸೋಣ. ಹಿಂದೂಸ್ಥಾನದ ಐಕ್ಯತೆಯನ್ನು ಕಾಪಾಡೋಣ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s