ಬೇಬಿ ಶ್ಯಾಮಿಲಿ

ತೊಂಬತ್ತರ ದಶಕದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪರಿಚಿತವಾಗಿ, ಆಗಿನ ಕಾಲದ ಸ್ಟಾರ್ ನಟ-ನಟಿಯರಿಗೆ ಸಮನಾಗಿ ಬೆಳೆದು ಅವರಷ್ಟೇ ಇಲ್ಲವೇ ಅವರಿಗಿಂತಲೂ ಅಧಿಕ ಸಂಭಾವನೆ ಪಡೆಯುತ್ತಾ, ಆ ಸ್ಟಾರ್ ನಟ-ನಟಿಯರೂ ಈ ಪುಟ್ಟ ಹುಡುಗಿಯ ಕಾಲ್ ಶೀಟಿಗೆ ತಕ್ಕಂತೆ ತಮ್ಮ ಕಾಲ್ ಶೀಟ್ ಅನುಸರಿಸಿಕೊಳ್ಳುವಂತಹ ಸೆಲೆಬ್ರಿಟಿ ಬಾಲ ನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾಳೆ? ಏನು. ಮಾಡುತ್ತಿದ್ದಾಳೆ ಎಂಬ ಕುತೂಹಲಕಾರಿ ಸಂಗತಿ ಇದೋ ನಿಮಗಾಗಿ.

ಆಗ ತೊಂಬತ್ತರ ದಶಕ. ನಾನಾಗ ಕಾಲೇಜ್ ವಿದ್ಯಾರ್ಥಿ. ಮಣಿರತ್ನಂ ನಿರ್ದೇಶನ ಮತ್ತು ಇಳೆಯರಾಜ ಅವರ ಸಂಗೀತವನ್ನು ಇಷ್ಟ ಪಡುತ್ತಿದ್ದವ. ಈ ಡೆಡ್ಲೀ ಕಾಂಬಿನೇಷನ್ನಿನಲ್ಲಿ ಅಂಜಲಿ ಎಂಬ ಚಿತ್ರ ಬಿಡುಗಡೆಯಾಗಿದ್ದನ್ನು ಕೇಳಿ ನಾನು ಮತ್ತು ನಮ್ಮ ಗೆಳೆಯರೆಲ್ಲಾ ಪಲ್ಲವಿ ಸಿನಿಮಾ ಮಂದಿರದಲ್ಲಿ ನೋಡಲು ಹೋಗಿದ್ದೆವು. ಈಗ ಆ ಚಿತ್ರಮಂದಿರವನ್ನು ಒಡೆದು ಹಾಕಲಾಗಿದೆ ಆದರೂ ಪಲ್ಲವಿ ಟಾಕೀಸ್ ಸ್ಟಾಪ್ ಹೆಸರು ಮಾತ್ರ ಹಾಗೆಯೇ ಉಳಿದುಕೊಂಡು ಗತವೈಭವವನ್ನು ‌ನೆನೆಪಿಸುತ್ತಿದೆ.

ಚಿತ್ರಮಂದಿರದಲ್ಲಿ, ಆರಂಭದಲ್ಲಿ ಮಣಿರತ್ನಂ ಅವರ ಚಿತ್ರ ಕಥೆ ಒಂದು ಕಡೆಯಾದರೆ, ತಮ್ಮ ಐನೂರನೇ ಸಂಗೀತ ಚಿತ್ರನಿರ್ದೇಶನದ ಚಿತ್ರದಲ್ಲಿ ಇಳೆಯರಾಜ ಒಂದಕ್ಕಿಂತ ಒಂದು ಅತ್ಯಮೋಘವಾದ ಹಾಡುಗಳು ಮನಸೂರೆ ಗೊಳ್ಳುತ್ತಿದ್ದಂತೆಯೇ, ಧುತ್ತೆಂದು ಸುಮಾರು ಎರಡು ಅಥವಾ ಎರಡೂವರೇ ವರ್ಷದ ಪುಟ್ಟ ಹುಡುಗಿಯ ಆಗಮನವಾಗುತ್ತಿದ್ದಂತೆಯೇ, ಆಕೆಯ ಮೇಲೆ ನೆಟ್ಟ ನಮ್ಮ ಕಣ್ಣುಗಳನ್ನು ಬೆರೆಡೆಯಲ್ಲಿ ಸರಿಸಲೇ ಆಗಲಿಲ್ಲ. ಅದಾಗಲೇ ಪ್ರಬುದ್ಧ ನಟ ನಟಿಯಾಗಿ ಹೆಸರುವಾಸಿಯಾಗಿದ್ದ ರಘುವರನ್ ಮತ್ತು ರೇವತಿಯವರಿಗಿಂತಲೂ ಒಂದು ಕೈ ಅಧಿಕವಾಗಿ, ಒಬ್ಬ ಮಾನಸಿಕವಾಗಿ ಅಷ್ಟೇನೂ ಬುದ್ಧಿ ಬೆಳಯದಿದ್ದ ಹುಡುಗಿಯ ಪಾತ್ರದಲ್ಲಿ ಯಾವುದೇ ಸಂಭಾಷಣೆಯೇ ಇಲ್ಲದೇ ತನ್ನ ಮನೋಜ್ಞ ಅಭಿನಯದಿಂದ ತನ್ನ ಚೊಚ್ಚಲು ಚಿತ್ರದಲ್ಲೇ ಎಲ್ಲರ ಮನಸ್ಸೂರೆಗೊಂಡಿದ್ದಳು ಬೇಬಿ ಶ್ಯಾಮಿಲಿ. ಆ ಚಿತ್ರದ ಉತ್ತಮ ಬಾಲನಟಿಯಾಗಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಬಾಜಿಕೊಳ್ಳುವ ಮುಖಾಂತರ ದಿನ ಬೆಳಗಾಗುವುದರೊಳಗೆ ವಿಶ್ವ ವಿಖ್ಯಾತಳಾಗಿ ಹೋದಳು.

Screenshot 2020-07-18 at 11.18.17 PM

ಜುಲೈ 10, 1987 ರಂದು ಬಾಬು ಮತ್ತು ಆಲಿಸ್ ದಂಪತಿಗೆ ಚೆನ್ನೈನಲ್ಲಿ ಜನಿಸಿದ ಬೇಬಿ ಶ್ಯಾಮಿಲಿಗೆ ಚಿತ್ರರಂಗವೇನೂ ಹೊಸದೇನೂ ಆಗಿರಲಿಲ್ಲ. ಆಕೆಯ ತಂದೆಯೂ ಸಹ ಚಲನಚಿತ್ರ ನಟನಾಗುವ ಹಂಬಲದಿಂದ ಮದ್ರಾಸ್‌ಗೆ ವಲಸೆ ಬಂದು ಅದು ಸಾಧ್ಯವಾಗದೇ ಹೋದಾಗ, ತಮ್ಮ ಮಕ್ಕಳ ಮೂಲಕ ಅವರ ಮಹತ್ವಾಕಾಂಕ್ಷೆಯನ್ನು ಈಡೇರಿಕೊಂಡವರು. ಶ್ಯಾಮಿಲಿಯ ಅಕ್ಕ ಶಾಲಿನಿ ಅದಾಗಲೇ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರಾಂತ ಬಾಲನಟಿಯಾಗಿ ಪ್ರಖ್ಯಾತಳಾಗಿದ್ದಳು ಮತ್ತು ಮುಂದೆ ಆಕೆ ದೊಡ್ಡವಳಾಗಿ ನಟ ಅಜಿತ್ ಅವರನ್ನು ವರಿಸಿದ್ದಾಳೆ. ಇನ್ನು ಸಹೋದರ ರಿಚರ್ಡ್ ರಿಷಿ ಕೂಡ ಚಲನ ಚಿತ್ರ ನಟನೇ ಹೌದು. ಹೀಗೆ ನಟ ನಟಿಯರೇ ಅವರ ಕುಟುಂಬದಲಿದ್ದಾರೆ.

1990 ರ ಅಂಜಲಿ ಚಲನಚಿತ್ರದಲ್ಲಿ ಮಾನಸಿಕ ಸವಾಲಿನ ಮಗುವಿನ ಪಾತ್ರದಲ್ಲಿ ಸೈ ಎನಿಸಿಕೊಂಡು ಹತ್ತು ಹಲವಾರು ಪ್ರಶಸ್ತಿಗಳನ್ನು ಚಾಜಿಕೊಂಡನೆಯೇ ಆಕೆಗೆ ದಕ್ಷ್ಣಿಣ ಭಾರತದ ಅಷ್ಟೂ ಭಾಷೆಯ ಚಿತ್ರರಂಗದಲ್ಲಿ ಅವಕಾಶಗಳ ಮಹಾಪೂರವೇ ಹರಿಯತೊಡಗಿತು. ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ ಚಿತ್ರಗಳಲ್ಲಿ ಹೆಚ್ಚಿನ ಬೇಡಿಕೆಯುಳ್ಳ ಬಾಲ ನಟಿಯಾಗಿದ್ದಲ್ಲದೇ, ಆಕೆಯನ್ನು ಮನಸ್ಸಿನಲ್ಲಿಟ್ಟು ಕೊಂಡೇ ಅನೇಕ ಚಿತ್ರಕಥೆಗಳನ್ನು ಬರೆಯತೊಡಗಿದವು. ಜೆಸ್ಸಿಕಾ ಮೆಕ್ಕ್ಲೂರ್ ಆಧಾರಿತ ಭರತನ್ ಅವರ ಮಾಲೂಟ್ಟಿ ಎಂಬ ಮಲೆಯಾಳಿ ಚಿತ್ರದಲ್ಲಿ ಬೋರ್-ಬಾವಿಯೊಳಗೆ ಸಿಕ್ಕಿಬಿದ್ದ ಮಗುವಿನ ಆಕೆಯ ಅಭಿನಯಕ್ಕಾಗಿ ಆಕೆಗೆ ಕೇರಳ ರಾಜ್ಯದ ಅತ್ಯುತ್ತಮ ಬಾಲ ಕಲಾವಿದರಿಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿತು. ಕನ್ನಡದಲ್ಲಿ ವಿಷ್ಣುವರ್ಧನ್ ಮತ್ತು ಅನಂತ್ ನಾಗ್ ಕೊತೆಯಲ್ಲಿ ಅಭಿನಯಿಸಿದ ಮತ್ತೆ ಹಾಡಿತು ಕೋಗಿಲೆ ಚಿತ್ರದ ಅಭಿನಯಕ್ಕಾಗಿ ಶ್ಯಾಮಿಲಿಗೆ ಅತ್ಯುತ್ತಮ ಬಾಲ ಕಲಾವಿದರಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕಿತ್ತು.

kogile

ಕನ್ನಡದಲ್ಲಿ ಸುಪ್ರಸಿದ್ಧ ನಟರಾದ ವಿಷ್ಣುವರ್ಧನ್, ಅಂಬರೀಶ್, ಸೀತಾರಾ, ಶ್ರುತಿ, ಶ್ರೀನಾಥ್, ಗೀತಾ, ಮೇಘನಾ, ವಿನಯ ಪ್ರಸಾದ್, ಸುನಿಲ್, ಸತ್ಯಪ್ರಿಯಾ, ಭಾವ್ಯಾ, ಲಕ್ಷ್ಮಿ ಮತ್ತು ಅಭಿಜಿತ್ ಹೀಗೆ ಬಹುತೇಕ ಎಲ್ಲಾ ನಟ ನಟಿಯರೊಂದಿಗೆ ದಕ್ಷಾಯಿನಿ, ಕಾದಂಬರಿ, ಕರುಳಿನ ಕುಡಿ, ಭೈರವಿ ಚಿನ್ನಾ ನೀ ನಗುತಿರು, ಭುವನೇಶ್ವರಿ, ಮತ್ತೆ ಹಾಡಿತು ಕೋಗಿಲೆ, ಹೂವು ಹಣ್ಣು ಜಗದೇಶ್ವರಿ ಹೀಗೆ ಹತ್ತು ಹಲವಾರು ಚಿತ್ರಗಳು ಆಕೆಯ ಅಭಿನಯದಿಂದಲೇ ಯಶಸ್ವೀಯಾಯಿತು ಎಂದರೂ ಅತಿಶಯೋಕ್ತಿಯೇನಲ್ಲ.

ಶೃತಿ, ಆಭಿಜಿತ್ ಮತ್ತು ಶ್ಯಾಮಿಲಿ ಜೋಡಿಯ ಮಕ್ಕಳ ಭಕ್ತಿ ಪ್ರಧಾನ ಚಿತ್ರಗಳು ಗಲ್ಲಾ ಪೆಟ್ಟಿಗೆಯನ್ನು ಸೂರೆಗೊಂಡಿದ್ದವು. ಹಾಗಾಗಿ, ಬೇಬಿ ಶ್ಯಾಮಿಲಿ ಅವರ ಚಿತ್ರ ನಿರ್ಮಿಸಿದರೆ ಸಾಕು ಸಿನಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಮತ್ತು ಚಿತ್ರ ಹಿಟ್ ಆಗುತ್ತದೆ ಎಂಬುದು ಆಗಿನ ನಿರ್ಮಾಪಕರ ಲೆಕ್ಕಾಚಾರವಾಗಿತ್ತು. ಈ ಲೆಕ್ಕಾಚಾರ ಬಹುತೇಕ ಸತ್ಯವೂ ಆಗಿತ್ತು.

smaili2

ಈ ಹೊತ್ತಿಗಾಗಲೇ ಸ್ವಲ್ಪ ದೊಡ್ಡವಳಾಗಿ ಬೆಳೆದು ಬಾಲನಟಿಯ ಮುಗ್ಧತೆ ಮಾಯವಾಗಿದ್ದ ಕಾರಣ ಅವಕಾಶಗಳು ಕಡಿಮೆಯಾಗ ತೊಡಗಿದಾಗ ಚಿತ್ರರಂಗಕ್ಕೆ ತಾತ್ಕಾಲಿಕ ಬ್ರೇಕ್ ನೀಡಿ ತನ್ನ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದ ಶ್ಯಾಮಿಲಿ ತಮ್ಮ ಕಾಲೇಜಿಗೆ ಬರುವಷ್ಟರಲ್ಲಿ ಅತ್ಯಂತ ಸುಂದರವಾಗಿ ಕಾಣತೊಡಗಿದಾಗ ಮತ್ತೆ ಚಿತ್ರ ರಂಗ ಆಕೆಯನ್ನು ನಾಯಕಿಯನ್ನಾಗಿ ನೋಡ ತೊಡಗಿತು. ಚಿಕ್ಕ ವಯಸ್ಸಿನಲ್ಲಿಯೇ ಬಾಲ ನಟಿಯಾಗಿ ಅಷ್ಟೋಂದು ಪ್ರಸಿದ್ಧವಾಗಿದ್ದ ಈಕೆ ಹೀರೋಯಿನ್ ಆಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಾ, ದೊಡ್ಡ ನಟಿ ಆಗುತ್ತಾಳೆ ಎಂದೇ ಎಲ್ಲರೂ ಭಾವಿಸಿದ್ದರು. ಆಕೆ ತಮಿಳು ಚಿತ್ರವೊಂದರ ಮೂಲಕ ನಾಯಕಿಯಾಗಿ ತನ್ನ ಭವಿಷ್ಯವನ್ನು ಪರೀಕ್ಷಿಸಿದಳಾದರೂ, ಚಿತ್ರ ಫ್ಲಾಪ್ ಆಗುವ ಮೂಲಕ ಆಕೆಯ ಆಸೆಗೆ ತಣ್ಣೀರೆರೆಚಿತು. ನಂತರ ತೆಲುಗಿನ ಓಯೆ! ಎಂಬ ಚಿತ್ರದ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬೇಬಿ ಶ್ಯಾಮಿಲಿ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡ ಕಾರಣ ಮತ್ತೆ ಆಕೆ ಮತ್ತೊಂದು ವಿಶ್ರಾಂತಿ ಪಡೆಯುವಂತಾಯಿತು. ಈ ಸಮಯದಲ್ಲಿ ಆಕೆ 2010 ರಿಂದ 2015ರ ನಡುವೆ ಸಿಂಗಪುರದಲ್ಲಿ ಅಧ್ಯಯನ ಮಾಡಿ ಕೆಲಕಾಲ ಅಲ್ಲಿ ಕೆಲಸವನ್ನೂ ಮಾಡಿದ ನಂತರ ಮತ್ತೆ ಚೆನ್ನೈಗೆ ಹಿಂದಿರುಗಿ, ಕೆಲ ಸಿನಿಮಾಗಳಲ್ಲಿ ಅಭಿನಯಿಸಿದರೂ ಬಾಲ ನಟಿಯಾಗಿ ಪಡೆದ ಯಶಸ್ಸು ಕಾಣಲಿಲ್ಲ. ತೆಲುಗಿನಲ್ಲಿ ಓಯ್ ನಂತರ ಅಮ್ಮಮ್ಮಗಾರಿಲ್ಲು ಜೊತೆಗೆ ಒಂದು ತಮಿಳು ಹಾಗೂ ಮಲಯಾಳಂ ಚಿತ್ರದಲ್ಲಿ ಅಭಿನಯಿಸಿದರೂ, ಈ ಚಿತ್ರಗಳು ಯಾವಾಗ ತೆರೆಕಂಡು ರಿಲೀಸ್ ಆದವು ಎಂದೇ ತಿಳಿಯದಂತಾಯಿತು. ಹೀಗೆ ಮತ್ತೇ ಅವಕಾಶ ಸಿಕ್ಕರೆ ಸಾಕು ಎನ್ನುವಂಥದ್ದು ಪರಿಸ್ಥಿತಿ ತಲುಪಿರುವುದಂತೂ ಸುಳ್ಳಲ್ಲ.

ಕನ್ನಡದಲ್ಲಿ ಶಿವಣ್ಣನ ತಂಗಿ ಪಾತ್ರದಲ್ಲಿ ನಟಿಸುವಂತೆ ಶಾಮಿಲಿ ಅವಕಾಶ ಕೊಟ್ಟರೂ, ಡೇಟ್ಸ್ ಇಲ್ಲವೆಂಬ ನೆಪದಿಂದ ಒಪ್ಪಿಕೊಂಡಿರಲಿಲ್ಲವಂತೇ. ಅದೇ ರೀತಿ ಸುದೀಪ್ ಅಭಿನಯದ ಕೋಟಿಗೊಬ್ಬ2 ಚಿತ್ರದಲ್ಲಿಯೂ ಶ್ಯಾಮಿಲಿ ಅಭಿನಯಿಸಲಿದ್ದಾರೆ ಎಂಬ ಗಾಢವಾದ ವದಂತಿ ಇತ್ತಾದರೂ ಅದು ವದಂತಿಯಾಗಿಯೇ ಉಳಿದು ಹೋಯಿತು.

ಬಾಲ ನಟಿಯಾಗಿ ಒಂದು ಕಾಲದಲ್ಲಿ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಟಾಪ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿದ್ದ ನಟಿ ಇದ್ದಕ್ಕಿದ್ದಂತೆ ಈ ರೀತಿ ಆಗಲು ಕಾರಣವೇನು ಎಂದು ಹುಡುಕಲು ಹೊರಟಾಗ ಸಿಕ್ಕಿದ ಉತ್ತರವೇ ಆಕೆಯ ಉದ್ಧಟತನ ಮತ್ತು ಸ್ವಲ್ಪ ಅಹಂ. ಬಾಲನಟಿಯಾಗಿ ಗಳಿಸಿದ್ದ ಅದೇ ಯಶಸ್ಸು ಈಗ ನಾಯಕಿಯದಾಗಲೂ ಸಿಗುತ್ತದೆ ಎಂದು ಭಾವಿಸಿದ್ದದ್ದೇ ಆಕೆಯ ಪಾಲಿಗೆ ಮುಳುವಾಯಿತು. ಕಾಲಾಯ ತಸ್ಮೈ ನಮಃ ಎನ್ನುವಂತೆ ಹಿಂದಿನದ್ದೆಲ್ಲವನ್ನೂ ಮರೆತು ಈಗಿನ ಪರಿಸ್ಥಿತಿಗೆ ತನ್ನನ್ನು ತಾನು ಅಳವಡಿಸಿಕೊಳ್ಳಲು ಆಕೆ ಎಡವಿದ್ದಳು. ವಿದ್ಯೆ, ವಿನಯವನ್ನು ಕೊಡುವಂತಹ ಶಿಕ್ಷಣ ಮಾಯವಾಗಿ ಎಲ್ಲರೂ ತೋರಿಕೆಗೆ ಮತ್ತು ಹಾರಿಕೆಗಾಗಿ ವಿದ್ಯೆಯನ್ನು ಬಳಸಿಕೊಳ್ಳುತ್ತಿರುವುದು ಮತ್ತು ಹತ್ತಿದ ಮೇಲೆ ಏಣಿಯ ಹಂಗೇಕೆ ಎನ್ನುವ‌ ಧೋರಣೆಯ ಫಲವೇ ಇಂತಹ ಸೋಲಿಗೆ ಕಾರಣವಾಗುತ್ತದೆ ಎಂಬುವ ಎಚ್ಚರಿಕೆಯ ಗಂಟೆಯನ್ನು ಆಕೆಯ ಅನುಭವದಿಂದ ಕಲಿಯಬಹುದಾಗಿದೆ.

samili1

ಆಕೆಯ ಕೈಯಿಂದ ಹಲವಾರು ಚಿತ್ರಗಳ ಆಫರ್ ತಪ್ಪಿ ಹೋಗಲು ಆಕೆಯ ವರ್ತನೆ ಮತ್ತು ಭಯಂಕರ ಸಿಟ್ಟು ಕೂಡ ಒಂದು ಕಾರಣವಂತೆ. ಚಿತ್ರದ ಚಿತ್ರೀಕರಣಕ್ಕೆ ಸರಿಯಾದ ಸಮಯಕ್ಕೆ ಬಾರದ ಕಾರಣ ಬೇಸತ್ತ ನಿರ್ಮಾಪಕರು ಮತ್ತು ನಿರ್ದೇಶಕರು ಆಕೆಯ ಜೊತೆ ಚಿತ್ರ ಮಾಡಲು ಹಿಂದೇಟು ಹಾಕುತ್ತಿರುವುದು ಇದೀಗ ಹರಿದಾಡುತ್ತಿರುವ ಸುದ್ದಿ. ಒಟ್ಟಾರೆಯಾಗಿ ಶ್ಯಾಮಿಲಿ ಅವರು ತಮ್ಮ ನಡವಳಿಕೆಯಿಂದಾಗಿ ಹಲವಾರು ದೊಡ್ಡ ಮಟ್ಟದ ಚಿತ್ರಗಳ ಆಫರ್ ಕೈ ತಪ್ಪಿಸಿಕೊಂಡಿದ್ದಾರೆ ಎಂಬುದು ಸದ್ಯದ ಮಾತುಗಳು.

ಹೀಗೆ ಬಾಲ ನಟಿಯಾಗಿ ತನ್ನ ಮುಗ್ಧ ಅಭಿನಯ ಮತ್ತು ಮುದ್ದು ಮುದ್ದಾಗೊ ಮಾತನಾಡುತ್ತಾ ಎಲ್ಲರ ಮನಸ್ಸೆಳಿದಿದ್ದ ಬೇಬಿ ಶ್ಯಾಮಿಲಿಯನ್ನು ಈಗ ಬದಲಾದ ಕಾಲದಲ್ಲಿ ಮರತೇ ಹೋಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸ್ಟಾರ್ ಆಗಿ ಮಿಂಚಿದ್ದ ಬೇಬಿ ಶ್ಯಾಮಿಲಿ ಮತ್ತೆ ಸಿನಿಮಾ ಮಾಡಿದ್ದಾರೆ ಎಂದರೆ ಅದನ್ನು ನೋಡಲು ಚಿತ್ರಮಂದಿರದತ್ತ ಹೋಗುವವರು ಈಗ ಯಾರೂ ಇಲ್ಲವಾಗಿರುವ ಕಾರಣ ಈಗ ಶ್ಯಾಮಿಲಿ ಕೆಲವು ಬ್ರಾಂಡ್ ಗಳಿಗೆ ಮಾಡಲಿಂಗ್ ಮಾಡುತ್ತಾ ಮನೆಯಲ್ಲೇ ಪೇಂಟಿಂಗ್ ಮಾಡುತ್ತಾ ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಾ ಕಾಲ ಕಳೆಯುತ್ತಾ ಚಿತ್ರರಂಗದಲ್ಲಿನ ಅವಕಾಶಗಳಿಗೆ ಬಕ ಪಕ್ಷಿಯಂತೆ ಕಾಯುತ್ತಾ ಕುಳಿತಿರುವುದು ಸ್ವಯಂಕೃತಾಪರಾಧವೇ ಸರಿ. ಇನ್ನೂ ಕಾಲ ಮಿಂಚಿಲ್ಲ. ಆದ ತಪ್ಪನ್ನು ತಿದ್ದಿಕೊಂಡು ನಡವಳಿಯನ್ನು ಬದಲಿಸಿಕೊಂಡಲ್ಲಿ ಮತ್ತೆ ಆಕೆಯನ್ನು ತುಂಬು ಹೃದಯದಿಂದ ಪ್ರೇಕ್ಷಕರು ಸ್ವೀಕರಿಸುತ್ತಾರೆ.

ಏನಂತೀರೀ?

One thought on “ಬೇಬಿ ಶ್ಯಾಮಿಲಿ

  1. ನಾವೂ ಬೇಬಿ ಶಾಮಿಲಿಯ ಚಿತ್ರಗಳನ್ನು ನೋಡಿ ಸಂತೋಷ ಪಟ್ಟಿರುವವರೇ. ಉತ್ತಮ ನಟನೆಯನ್ನು ಬಾಲ ನಟಿಯಾಗಿ ನೋಡಿದ್ದೇನೆಯೇ ಹೊರತು ದೊಡ್ಡವಳಾದಮೇಲೆ ನೋಡಿಲ್ಲ. ಸುದೀಪ್ ಮುಂತಾದವರ ಸಿನಿಮಾಗಳಿಗೆ ಅವಕಾಶ ಸಿಕ್ಕಿದಾಗ ಡೇಟ್ ಇರದಿದ್ದರೂ ಸಮಯಾವಕಾಶ ಮಾಡಿಕೊಂಡು ನಟಿಸಲು ಪ್ರಯತ್ನ ಮಾಡಬೇಕಾಗಿತ್ತು ಅನ್ನಿಸುತ್ತದೆ. ಒಂದು ವೇಳೆ ದುರಹಂಕಾರದಿಂದ ತಪ್ಪಿಸಿಕೊಂಡಿದ್ದರೆ ಅದು ಅಕ್ಷಮ್ಯ. ಒಂದು ವೇಳೆ ನಿಜವಾಗಿಯೂ ಡೇಟ್ ಸಿಗದೆ ನಿರಾಕರಿಸಿದ್ದರೆ ಅದಕ್ಕೆ ಬೇರೆಯವರು ಕೋಪಿಸಿಕೊಳ್ಳುವುದು ಸರಯೆನಿಸುವುದಿಲ್ಲ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s