ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವಂತಹ ವಿಶಿಷ್ಟವಾದ ದೇಶ. ಇಲ್ಲಿ ಹಿಂದೂ, ಕ್ರೈಸ್ತ, ಮುಸ್ಲಿಂ, ಸಿಖ್, ಜೈನ, ಪಾರಸೀ ಹೀಗೆ ಸರ್ವಧರ್ಮಗಳ ಭಾವೈಕ್ಯತೆಗಳ ಸಂಗಮವಾಗಿದೆ. ದೇಶಾದ್ಯಂತ ಈ ಧರ್ಮಗಳ ನಾನಾ ಧಾರ್ಮಿಕ ಕ್ಷೇತ್ರಗಳಿದ್ದು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಅಲ್ಲಿಗೆ ಹೋಗಿ ತಮ್ಮ ಭವರೋಗಗಳನ್ನು ಕಳೆದುಕೊಳ್ಳುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಒಂದೇ ಪುಣ್ಯಕ್ಷೇತ್ರ ಹಲವು ಧರ್ಮಗಳಿಗೆ ಶ್ರದ್ಧಾಕೇಂದ್ರವಾಗಿದ್ದು ಎರಡೂ ಪಂಗಡದವರು ಅಲ್ಲಿಗೆ ಹೋಗುತ್ತಾರೆ. ನಾನಿಂದು ಸಿಖ್ಖರಿಗೂ ಮತ್ತು ಉಳಿದ ಹಿಂದೂಗಳಿಗೆ ಪವಿತ್ರವಾದಂತಹ ಮಣಿಕರಣ್ ಬಗ್ಗೆ ತಿಳಿದುಕೊಳ್ಳೋಣ.
ಸಿಖ್ಖರ ಮತ್ತು ಉಳಿದ ಹಿಂದೂಗಳ ಪವಿತ್ರ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಮಣಿಕರಣ್ ಇರುವುದು ಅತ್ಯಂತ ಶೀತ ಪ್ರದೇಶ ಎಂದೇ ಗುರುತಿಸಿಕೊಂಡಿರುವ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ. ಕುಲು ನಗರದಿಂದ 5೦ ಕಿಲೋಮೀಟರ್ ದೂರದ ಬೆಟ್ಟದ ಮೇಲಿರುವ ಪುಟ್ಟ ಪ್ರದೇಶವೇ ಮಣಿಕರಣ್. ಇಲ್ಲಿ ಸಿಖ್ಖರ ಪವಿತ್ರ ಮಂದಿರ ಗುರುದ್ವಾರದ ಜೊತೆ ಜೊತೆಗೇ ಹಿಂದೂಗಳ ಶಿವನ ಪವಿತ್ರ ಸಾನಿಧ್ಯವೂ ಒಟ್ಟೊಟ್ಟಿಗೆ ಇರುವುದು ವಿಶೇಷವಾಗಿದೆ. ಇವೆರಡೂ ಧಾರ್ಮಿಕ ಸಂಗತಿಗಳ ಹೊರತಾಗಿ, ಸುಮಾರು 1835 ಮೀಟರ್ ಎತ್ತರದ ಪರ್ವತದ ಪ್ರದೇಶವಾಗಿರುವ ಇಲ್ಲಿ ಬಿಸಿ ನೀರಿನ ಬುಗ್ಗೆಯ ಕುರಿತಂತೆ ಪ್ರಸಿದ್ಧವಾಗಿದೆ. ಇದು ಪಾರ್ವತಿ ನದಿಯ ಎಡದಂಡೆಯಾಗಿದ್ದು, ಉಳಿದೆಲ್ಲ ಕಡೆ ಶಾಂತವಾಗಿ ತಣ್ಣಗೆ ಹರಿಯುವ ನದಿ, ಕಣಿವೆಯ ಸುಮಾರು ಒಂದೂವರೆ ಕಿಲೋ ಮೀಟರ್ ದೂರದವರೆಗೆ ಅಲ್ಲಲ್ಲಿ ಬಿಸಿನೀರಿನ ಬುಗ್ಗೆ (hot springs) ಭೂಮಿ ಅಡಿಯಿಂದ ಇಲ್ಲಿ ಉಕ್ಕುತ್ತಿದ್ದು ಪ್ರತಿನಿತ್ಯವೂ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ
ಇಲ್ಲಿರುವ ಮೂರು ಬಿಸಿ ನೀರಿನ ಬುಗ್ಗೆಗಳಲ್ಲಿ ಒಂದು ಗುರುದ್ವಾರದೊಳಗೆ ಇದ್ದರೆ ಉಳಿದೆರಡು ಪ್ರದೇಶಗಳು ಅತಿಥಿಗೃಹವಾಗಿ ಮಾರ್ಪಟ್ಟು ಸ್ನಾನ ಗೃಹಗಳಾಗಿವೆ. ಇಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದ್ದು, ಗುಡಿ ಒಳಗಡೆಯೂ ಕೊಳ ನಿರ್ಮಿಸಿ ಅಲ್ಲಿಗೆ ತಣ್ಣನೆ ನೀರನ್ನೂ ಹರಿಯಬಿಟ್ಟು ನೀರು ಹದಾ ಮಾಡಿಸಿ ಭಕ್ತರಿಗೆ ಸ್ನಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗದ ಜೊತೆಗೆ ವಾಯು ದೋಷ ಮತ್ತು ಸಂಧಿವಾತ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಈ ಪರಿಸರದಲ್ಲಿ ಅಲ್ಲಿಯ ನೆಲವೆಲ್ಲವೂ ಬಿಸಿಯಾಗಿರುವ ಕಾರಣ ನಡೆದಾಡುವ ಎಲ್ಲಾ ಸ್ಥಳದಲ್ಲಿಯೂ ಮರದ ಹಲಗೆಯನ್ನು ಹಾಸಲಾಗಿದೆ.
ವೈಜ್ಞಾನಿಕವಾಗಿ ಹೇಳಬೇಕೆಂದರೆ ಈ ಬುಗ್ಗೆಗಳಲ್ಲಿನ ನೀರು ಗಂಧಕವನ್ನು ಹೊಂದಿರುವ ಕಾರಣ, ಇದು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನುಬಹುದಾದರೂ, ಜನರು ಧಾರ್ಮಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳನ್ನು ಹೊಂದಿದ್ದಾರೆ. ಈ ನೀರಿನಲ್ಲಿರುವ ರೇಡಿಯಮ್ ಅಂಶದಿಂದಾಗಿಯೇ ಬಿಸಿ ನೀರಿನ ಬುಗ್ಗೆಗಳು ಏಳುತ್ತಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದರೂ, ಇದಕ್ಕೆ ಪರ್ಯಾಯವಾಗಿ ಸಿಖ್ ಮತ್ತು ಹಿಂದೂಗಳ ಪೌರಾಣಿಕ ಕಥೆಗಳೂ ಇವೆ.
ಸಿಖ್ಖರ ಪ್ರಕಾರ
ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಅವರು 1574 ರಲ್ಲಿ ಮೂರನೆಯ ಉದಾಸಿಯ ಸಮಯದಲ್ಲಿ ಅವರ ಅನುಯಾಯಿ ಭಾಯಿ ಮರ್ದಾನಾ ಅವರೊಂದಿಗೆ ಇಲ್ಲಿಗೆ ಬರುತ್ತಾರೆ. ಅವರಿಗೆ ಹಸಿವಾದ ಕಾರಣ, ಗುರುನಾನಕ್ ಅವರು ಲಂಗರ್‌ಗೆ ಆಹಾರವನ್ನು ಸಂಗ್ರಹಿಸಲು ಮರ್ದಾನ ಅವರನ್ನು ಕಳುಹಿಸುತ್ತಾರೆ. ರೊಟ್ಟಿ ಮತ್ತು ಪಲ್ಯಗಳನ್ನು ತಯಾರಿಸಲು ಬೇಕಾದ ಪದಾರ್ಥಗಳನ್ನು ಜನರಿಂದ ದಾನ ಪಡೆದರಾದರೂ ರೊಟ್ಟಿಗೆ ಹಿಟ್ಟನ್ನು ಕಲೆಸಲು ನೀರು ಸಿಗದೆ ಆಹಾರವನ್ನು ಬೇಯಿಸಲು ಪರದಾಡುತ್ತಾರೆ.
ಆಗ ನಾನಕರು ಮರ್ದಾನರಿಗೆ ಅಲ್ಲಿರುವ ಒಂದು ದೊಡ್ಡ ಬಂಡೆಯನ್ನು ಜರುಗಿಸಲು ತಿಳಿಸುತ್ತಾರೆ. ಗುರುಗಳ ನಿರ್ದೇಶನದಂತೆ ಕಲ್ಲನ್ನು ಪಕ್ಕಕ್ಕೆ ಸರಿಸುತ್ತಲೇ ಅಲ್ಲೊಂದು ಬಿಸಿನೀರಿನ ಬುಗ್ಗೆ ಕಾಣಿಸಿಕೊಂಡು ಆ ಬುಗ್ಗೆಯಲ್ಲಿ ರೊಟ್ಟಿ ತೇಲುವುದನ್ನು ನೋಡುತ್ತಾರೆ. ಈ ರೊಟ್ಟಿಗಳು ತೇಲಿಕೊಂಡು ತಮ್ಮಲ್ಲಿಗೆ ಬಂದರೆ ಅವುಗಳಲ್ಲಿ ಒಂದನ್ನು ದೇವರ ಹೆಸರಿನಲ್ಲಿ ದಾನ ಮಾಡುವುದಾಗಿ ಪ್ರಾರ್ಥಿಸುತ್ತಾರೆ. ಆಶ್ಚರ್ಯವೆಂಬಂತೆ, ರೊಟ್ಟಿಗಳು ಅವರತ್ತ ತೇಲಿ ಬರುತ್ತದಲ್ಲದೇ, ತಿನ್ನಲು ಯೋಗ್ಯವಾಗಿರುವಂತೆ ರೊಟ್ಟಿ ಅಂದಿನಿಂದ ಆ ಕ್ಷೇತ್ರದಲ್ಲಿ ದೇವರ ಹೆಸರಿನಲ್ಲಿ ಏನನ್ನಾದರೂ ದಾನ ಮಾಡಿದರೆ ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯುತ್ತೇವೆ ಎಂಬ ನಂಬಿಕೆ ಇದೆ, ಈ ಗುರುದ್ವಾರದ ಕುರಿತಂತೆ ಜ್ಞಾನಿ ಗ್ಯಾನ್ ಸಿಖ್ ಅವರು ತಮ್ಮ ಹನ್ನೆರಡನೆಯ ಗುರು ಖಲ್ಸಾದಲ್ಲಿ ಉಲ್ಲೇಖಿಸಿರುವ ಕಾರಣ ಆವರ ಶಿಷ್ಯರಿಗೆ ಈ ಗುರುದ್ವಾರ ಅತ್ಯಂತ ಹೆಚ್ಚಿನ ಮಹತ್ವದ್ದಾಗಿದೆ.
ಇನ್ನು ಹಿಂದೂಗಳ ಪ್ರಕಾರ
ಮಣಿಕರಣ್, ಎಂಬ ಹೆಸರೇ ಸೂಚಿಸುವಂತೆ ರತ್ನ ಅಥವಾ ಮಣಿ ಎಂಬ ಅರ್ಥಬರುತ್ತದೆ. ಅದೊಮ್ಮೆ ಕೈಲಸ ಪರ್ವತದಿಂದ ವಿಹಾರಾರ್ಥವಾಗಿ ಶಿವ ಮತ್ತು ಪಾರ್ವತಿಯರು ಭೂಲೋಕಕ್ಕೆ ಬಂದಿದ್ದಾಗ ಈ ಸ್ಥಳದ ಸೌಂದರ್ಯದಿಂದ ಆಕರ್ಷಿತರಾಗಿ ಕೆಲ ಕಾಲ ಇಲ್ಲಿಯೇ ಇರಲು ನಿರ್ಧರಿಸುತ್ತಾರೆ. ಒಮ್ಮೆ ಪಾರ್ವತಿಯು ಇಲ್ಲಿಯ ನೀರಿನ ಚಿಲುಮೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಆಕೆಯ ಕಿವಿಯ ಮಣಿ ಚಿಲುಮೆಯಲ್ಲಿ ಬಿದ್ದು ಹೋಗುತ್ತದೆ. ಆ ಮಣಿಯನ್ನು ನೀರಿನಿಂದ ತೆಗೆಯುವಂತೆ ಪರಮೇಶ್ವರನು ತನ್ನ ಗಣಗಳಿಗೆ ಆದೇಶಿಸುತ್ತಾನೆ. ಅವರು ಎಷ್ಟೇ ಹುಡುಕಿದರೂ ಆ ಮಣಿ ಸಿಗದಿದ್ದಾಗ ಕೋಪಗೊಂಡ ಶಿವನು ತಾಂಡವ ನೃತ್ಯ ಮಾಡುತ್ತಾ, ತನ್ನ ಮೂರನೆಯ ಕಣ್ಣು ತೆಗೆದಾಗ ಅಲ್ಲಿ ಗುಡುಗು ಮಿಂಚು ಸಿಡಿಲುಗಳ ಅಬ್ಬರವಾಗಿ ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತದೆ.
ಇದರಿಂದ ಬೆಚ್ಚಿದ ದೇವತೆಗಳು ತಾಂಡವರೂಪಿ ಶಿವನನ್ನು ಶಾಂತಗೊಳಿಸಲು ನಾಗಶೇಷನನ್ನು ಕೋರಿಕೊಳ್ಳುತ್ತಾರೆ. ದೇವಾನು ದೇವತೆಗಳ ಕೋರಿಕೆಯ ಮೇರೆಗೆ ನಾಗಶೇಷನು ಪಾತಾಳದಿಂದ ಕುದಿಯುವ ನೀರಿನ ಗುಳ್ಳೆಗಳನ್ನು ಒಮ್ಮೆಲೆ ತೀವ್ರ ರಭಸದಿಂದ ಮೇಲಕ್ಕೆ ಚಿಮ್ಮಿಸುತ್ತಾನೆ. ಹೊಳೆಯುವ ಮಣಿಗಳನ್ನು ಕಂಡ ಶಿವಪಾರ್ವತಿಯರು ಪ್ರಸನ್ನಗೊಳ್ಳುತ್ತಾರೆ ಎಂಬುದು ಐಹಿತ್ಯ. ಬಿಸಿನೀರಿನ ಗುಳ್ಳೆಗಳು ಪಾರ್ವತಿಯ ರತ್ನವನ್ನು ಹೋಲುವ ರೀತಿಯಲ್ಲಿ ಚಿಮ್ಮಲಾರಂಭಿಸಿದ ಕಾರಣ ಈ ಸ್ಥಳಕ್ಕೆ ಮಣಿಕರಣ್ ಎಂಬ ಹೆಸರು ಬಂದಿತೆಂದು ನಂಬಿಕೆ ಇದೆ. 1905ರಲ್ಲಿ ಈ ಪ್ರದೇಶದಲ್ಲಿ ಭೂಕಂಪ ಆಗುವವರೆಗೂ ಮಣಿಯ ರೀತಿಯ ಬಿಸಿ ನೀರಿನ ಬುಗ್ಗೆಗಳು ಚಿಮ್ಮುತ್ತಲೇ ಇದ್ದವಂತೆ.
ಶಿವನ ಮಂದಿರದಕ್ಕೆ ಭೇಟಿ ನೀಡುವ ಭಕ್ತಾದಿಗಳು ಅದರ ಪಕ್ಕದಲ್ಲೇ ಇರುವ ಸಿಖ್ಖರ ಪವಿತ್ರ ಕ್ಷೇತ್ರವಾದ ಗುರುದ್ವಾರಕ್ಕೂ ಭೇಟಿ ನೀಡುವುದು ಇಲ್ಲಿರುವ ಭಾವೈಕ್ಯತೆಯ ಸಂಕೇತವಾಗಿದೆ. ಇಲ್ಲಿಗೆ ಯಾರು ಎಷ್ಟು ಹೊತ್ತಿಗೆ ಬಂದರೂ ಊಟ ಸಿದ್ಧವಾಗಿರುತ್ತದೆ. ಇಲ್ಲಿನ ಲಂಗರ್ ಗಾಗಿ ಅಕ್ಕಿ, ಬೇಳೆ ಮತ್ತು ಕಡಲೆಕಾಳನ್ನು ಶಿವನ ಸಾನಿಧ್ಯವಿರುವ ಪಕ್ಕದಲ್ಲಿ ಪ್ರಾಕೃತಿಕವಾಗಿ ಭೂಮಿ ಅಡಿಯಿಂದ ಉಕ್ಕಿ ಬರುವ ಬಿಸಿನೀರಿನಲ್ಲೇ ಬೇಯಿಸುವುದು ಇಲ್ಲಿನ ವೈಶಿಷ್ಟ್ಯ. ತಾಮ್ರದ ಹಂಡೆಗಳಲ್ಲಿ ತೊಳೆದ ಅಕ್ಕಿಯನ್ನು ಹಾಕಿ ಅದಕ್ಕೆ ಗೋಣೀ ಚೀಲವನ್ನು ಮುಚ್ಚಿ ಬಿಸಿನೀರಿನ ಕುಂಡದೊಳಗೆ ಸುಮಾರು 20 ನಿಮಿಷದೊಳಗೆ ಇಟ್ಟಲ್ಲಿ ಊಟಕ್ಕೆ ಅನ್ನ ಸಿದ್ಧವಾಗುತ್ತದೆ. ಇದೇ ರೀತಿಯಾಗಿಯೇ ತರಕಾರಿಗಳನ್ನೂ ಸಹಾ ಬೇಯಿಸಿಯೇ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತಾದಿಗಳು ಗುರುದ್ವಾರದಲ್ಲಿ ಲಂಗರ್ ರೂಪದ ಪ್ರಸಾದವನ್ನು ಸವಿದು ಪುನೀತರಾಗುತ್ತಾರೆ.
ಭಕ್ತಾಧಿಗಳೂ ಮತ್ತು ಪ್ರವಾಸಿಗರೂ ಸಹಾ ಪ್ರಸಾದ ರೂಪದಲ್ಲಿ ಅನ್ನ ಬೇಯಿಸುವ ವ್ಯವಸ್ಥೆ ಇಲ್ಲಿದ್ದು, ಬಟ್ಟೆಯಲ್ಲಿ ಸಣ್ಣ ಸಣ್ಣದಾಗಿ ಅಕ್ಕಿಯನ್ನು ಕಟ್ಟಿ ಇಟ್ಟಿರುತ್ತಾರೆ. ಅದಕ್ಕೆ 20 ರೂಗಳನ್ನು. ನೀಡಿ ಖರೀದಿಸಿ, ಅದಕ್ಕೆ ಹಗ್ಗ ಕಟ್ಟಿ ಈ ಬಿಸಿ ನೀರಿನ ಕುಂಡದದೊಳಗಡೆ ಇಳಿಸಿದ ಕೆಲವೇ ಕ್ಷಣಗಳಲ್ಲಿ ಅಕ್ಕಿ ಅನ್ನವಾಗಿ ಬೆಂದಿರುತ್ತದೆ. ಹೆಚ್ಚಿನವರು ಅದನ್ನು ಅಲ್ಲೇ ಪ್ರಸಾದ ರೂಪದಲ್ಲಿ ಸೇವಿಸಿದರೆ, ಇನ್ನೂ ಕೆಲವರು ಪ್ರಸಾದ ರೂಪದಲ್ಲಿ ತಮ್ಮ ತಮ್ಮ ಮನೆಗಳಿಗೂ ಕೊಂಡೊಯ್ಯುತ್ತಾರೆ.
ಹಿಮಾಚಲ ಪ್ರದೇಶದಲ್ಲಿ ಇರುವ ಈ ಮಣಿಕರಣ್ ಪಟ್ಟಣ ಸಮುದ್ರ ಮಟ್ಟದಿಂದ ಸುಮಾರು 1760 ಮೀಟರ್ ಎತ್ತರದಲ್ಲಿದ್ದರೂ ವರ್ಷವಿಡೀ ತಣ್ಣನೆಯ ಹವಾಮಾನದಿಂದ ಕೂಡಿದ್ದು ಸರಾಸರಿ ತಾಪಮಾನವು ಸುಮಾರು 10 ಡಿಗ್ರಿ ಇರುತ್ತದೆ. ಈ ಕಾರಣದಿಂದಾಗಿಯೇ ಬಹುತೇಕ ಪ್ರಸಾಸಿಗರು ಏಪ್ರಿಲ್ ರಿಂದ ಜೂನ್ ವರೆಗಿನ ಬೇಸಿಗೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಬಯಸುತ್ತಾರೆ. ಶ್ರದ್ದೇಯ ಭಕ್ತಾದಿಗಳಂತೂ ಚಳಿಗಾಲ, ಮಳೆಗಾಲ, ಶೀತ ಇದಾವುದನ್ನೂ ಲೆಖ್ಖಿಸದೇ ವರ್ಷವಿಡೀ ಇಲ್ಲಿಗೆ ಭೇಟಿಕೊಡುತ್ತಾರೆ.
ರೈಲಿನಲ್ಲಿ ಬರುವುದಾದರೆ, ಇಲ್ಲಿಂದ 300 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಪಠಾಣ್‌ಕೋಟ್‌ಗೆ ಬಂದು ಅಲ್ಲಿಂದ ಸ್ಥಳೀಯ ವಾಹನದ ವ್ಯವಸ್ಥೆ ಮಾಡಿಕೊಂದು ಸುಮಾರು 8 ಗಂಟೆ ಪ್ರಯಾಣ ಮಾಡಿದಲ್ಲಿ ಮಣಿಕರಣ್ ತಲುಪಬಹುದಾಗಿದೆ. ಬಸ್ಸಿನಲ್ಲಿ ಬರುವುದಾದರೆ, ಕುಲ್ಲು ಅಥವಾ ಮನಾಲಿಗೆ ತಲುಪಿ ಅಲ್ಲಿಂದ ಕ್ಯಾಬ್ ಮೂಲಕ ಮಣಿಕರಣ್ ತಲುಪ ಬಹುದಾಗಿದೆ. ವಿಮಾನದ ಮೂಲಕ ಭುಂಟಾರ್ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಬಸ್ಸಿನಲ್ಲಿ 90 ನಿಮಿಷಗಳ ಕಾಲ ಪ್ರಯಾಣಿಸಿ 35 ಪ್ರಯಾಣಿಸಿದರೆ, ಮಣಿಕರಣ್ ತಲುಪಬಹುದಾಗಿದೆ.
ಸಿಖ್ಖರ ಮತ್ತು ಇತರೇ ಹಿಂದೂಗಳ ಭಾವೈಕ್ಯತೆಗಳ ಸಂಗಮದೊಂದಿಗೆ, ಬಿಸಿ ನೀರಿನ ಬುಗ್ಗೆಗಳ ಪ್ರಾಕೃತಿಕ ವಿಸ್ಮಯದ ಅದ್ಭುತವಾದ್ ವೀಡಿಯೋ ಇದೋ ನಿಮಗಾಗಿ
ಹಿಂದೂ ಸಿಖ್ ಭಾವೈಕ್ಯತೆಗಳ ಸಂಗಮದೊಂದಿಗೆ ಬಿಸಿ ನೀರಿನ ಬುಗ್ಗೆಗಳ ಪ್ರಕೃತಿಯ ವಿಸ್ಮಯವನ್ನೂ ನೋಡುವ ಸಲುವಾಗಿ ಸಮಯ ಮಾಡಿ ಕೊಂಡು ಮಣಿಕರಣ್ ನೋಡಬಹುದಲ್ಲವೇ?
ಏನಂತೀರೀ?